ಪೇಜಾವರರು ಆಡಿದಾಗ ಆಗದ ವಿವಾದ ಆರ್ಚ್ ಬಿಷಪ್‌ ಹೇಳಿದಾಕ್ಷಣ ಆಗಿದ್ದೇಕೆ?

ಪೇಜಾವರರು ಮತ್ತು ಆರ್ಚ್ ಬಿಷಪ್‌ ಆಡಿದ “ಪ್ರಜಾತಂತ್ರ ಅಪಾಯದಲ್ಲಿದೆ,’’ ಎನ್ನುವ ಒಂದೇ ಮಾತು ಅಧಿಕಾರ ಕೇಂದ್ರದ ಕಿವಿಗೆ ಬೇರೆ-ಬೇರೆ ರೀತಿ ಕೇಳುತ್ತದೆಂಬುದೇ ವಿಪರ್ಯಾಸ. ವಿವಾದಕ್ಕಾಗಿ ವಿವಾದ ಸೃಷ್ಟಿಗೆ ಮುಂದಾದಾಗ ವಿವೇಚನೆ ಮಣ್ಣುಗೂಡುತ್ತದೆ ಎಂಬುದಕ್ಕೆ ಇದು ನಿದರ್ಶನ

ಕಳೆದ ವಾರ ಇಬ್ಬರು ಧಾರ್ಮಿಕ ಮುಖಂಡರು ವ್ಯಕ್ತಪಡಿಸಿದ ಅಭಿಪ್ರಾಯಗಳು ವಾದ-ವಿವಾದಕ್ಕೆ ಗ್ರಾಸವಾದವು. ಭಿನ್ನ ಧರ್ಮದ ಧಾರ್ಮಿಕ ಮುಖಂಡರ ಹೇಳಿಕೆಗೆ ಬಿಜೆಪಿ, ಸಂಘಪರಿವಾರ ಪ್ರತಿಕ್ರಿಯಿಸಿದ ರೀತಿ ಕೂಡ ಭಿನ್ನವಾಗಿತ್ತು. ಒಂದು ಸತ್ಯಕ್ಕೆ ಎರಡು ಬಗೆಯಲ್ಲಿ ಪ್ರತಿಕ್ರಿಯಿಸಿದ್ದು ಪಕ್ಷ, ಸಂಘಟನೆಯ ಇಬ್ಬಂದಿ ನಿಲುವಿಗೆ ನಿದರ್ಶನದಂತೆಯೂ ತೋರಿತು. ಈ ಹೇಳಿಕೆ ನೀಡಿದವರಲ್ಲಿ ಒಬ್ಬರು ಗೋವಾ-ದಮನ್ ಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಫಿಲಿಪ್‌ ನೆರಿ ಫೆರ್ರಾರೋ; ಮತ್ತೊಬ್ಬರು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು. “ದೇಶದ ಪ್ರಜಾತಂತ್ರ ಅಪಾಯದಲ್ಲಿದೆ,’’ ಎನ್ನುವುದು ಇಬ್ಬರ ಮಾತಿನಲ್ಲಿದ್ದ ಸಮಾನ ಅಂಶ. ತಮ್ಮ ಹೇಳಿಕೆಯಲ್ಲಿ ನಿರ್ದಿಷ್ಟ ವ್ಯಕ್ತಿ, ಪಕ್ಷವನ್ನು ನೇರ ಗುರಿಮಾಡಿದ್ದು ಪೇಜಾವರ ಶ್ರೀಗಳು. ವಿಪರ್ಯಾಸ ಎಂದರೆ, ಪರಿವಾರದ ಜನರಿಂದ ಮಾತಿನ ದಂಡನೆಗೆ ವಿಪರೀತ ಗುರಿಯಾಗಿದ್ದು ಆರ್ಚ್ ಬಿಷಪ್.

ಅಷ್ಟಕ್ಕೂ, ಗೋವಾ ಆರ್ಚ್ ಬಿಷಪ್ ಸಾರ್ವಜನಿಕವಾಗಿ ಮಾತನಾಡಿದ್ದೇನಲ್ಲ. ತಮ್ಮ ಧರ್ಮ ಪ್ರಾಂತ್ಯದ ಸಮುದಾಯದ ಜನರಿಗೆ ೧೫ ಪುಟಗಳ ‘ಪಾಸ್ಟೊರಲ್‌ ಪತ್ರ’ವನ್ನು ಬರೆದಿದ್ದರಷ್ಟೆ. ಅದರಲ್ಲವರು ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ಕೆಲವನ್ನಷ್ಟೇ ಆಯ್ದು ವಿವಾದ ಸೃಷ್ಟಿಗೆ ಬಳಸಿಕೊಳ್ಳಲಾಗಿದೆ. ಧರ್ಮ ಪ್ರಾಂತ್ಯದ ಅಂತರ್ಜಾಲದಲ್ಲಿ ಪ್ರಕಟಿತ ಪತ್ರದಲ್ಲಿನ ಕೆಲವು ಅಂಶಗಳು ಹೀಗಿವೆ:

  • ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳಾದವರು ಹುಸಿ ಭರವಸೆ ಮೂಲಕ ಜನರ ತಲೆಯಲ್ಲಿ ಗೊಂದಲ ಸೃಷ್ಟಿಸುತ್ತಾರೆ. ಜನ ಕೂಡ ತಮ್ಮ ಅಮೂಲ್ಯ ಮತಗಳನ್ನು ಸ್ವಾರ್ಥಕ್ಕಾಗಿ, ಸಣ್ಣ ಲಾಭಕ್ಕಾಗಿ ಮಾರಾಟ ಮಾಡುತ್ತಾರೆ. ಇದರಿಂದಾಗಿ ನಮ್ಮ ಸಂವಿಧಾನ ಅಪಾಯದಲ್ಲಿದೆ. ಜನ ಅಭದ್ರತೆಯಲ್ಲಿ ಬದುಕುವಂಥ ಸ್ಥಿತಿ ನಿರ್ಮಾಣವಾಗಿದೆ.
  • ಇತ್ತೀಚಿನ ದಿನಮಾನಗಳಲ್ಲಿ ದೇಶದಲ್ಲಿ ಹೊಸ ಪ್ರವೃತ್ತಿ ತಲೆ ಎತ್ತುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನಾವು ಏನನ್ನು ತಿನ್ನುತ್ತೇವೆ, ಏನನ್ನು ತೊಡುತ್ತೇವೆ, ಹೇಗೆ ಬದುಕುತ್ತಿದ್ದೇವೆ, ಯಾವುದನ್ನು ಆರಾಧಿಸುತ್ತೇವೆ ಅದೆಲ್ಲವೂ ಏಕರೂಪವಾಗಿರಬೇಕೆಂದು ಅದು ಬಯಸುತ್ತದೆ. ಇದೊಂದು ರೀತಿಯ ಏಕ ಸಾಂಸ್ಕೃತಿಕತೆ. ಅದನ್ನು ಹೇರುವ ಪ್ರಯತ್ನ ನಡೆಯುತ್ತಿದೆ.
  • ಅಭಿವೃದ್ಧಿಯ ಹೆಸರಿನಲ್ಲಿ ಏನನ್ನೇ ಮಾಡಿದರೂ ಅದರ ಸಂತ್ರಸ್ತರು ಬಡವರೇ ಆಗಿರುತ್ತಾರೆ. ಜನರನ್ನು ಅವರ ನೆಲೆಗಳಿಂದ, ಮನೆಗಳಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಮಾನವ ಹಕ್ಕುಗಳು ಆಕ್ರಮಣಕ್ಕೆ ಒಳಗಾಗಿವೆ. ಪ್ರಜಾಪ್ರಭುತ್ವ ಅಪಾಯದಲ್ಲಿರುವಂತೆ ತೋರುತ್ತಿದೆ. ಅನೇಕ ಅಲ್ಪಸಂಖ್ಯಾತರು ತಮ್ಮ ಸುರಕ್ಷತೆ ಕುರಿತು ಆತಂಕಿತರಾಗಿದ್ದಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಮ್ಮ ದೇಶದಲ್ಲಿ ಕಾನೂನಿಗೆ ಗೌರವ ನೀಡುವವರ ಪ್ರಮಾಣ ಕುಸಿಯುತ್ತಿರುವುದು ಕಾಣುತ್ತಿದೆ.
  • ಇಂಥ ಸನ್ನಿವೇಶದಲ್ಲಿ, ವಿಶೇಷವಾಗಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವುದರಿಂದ ನಮ್ಮ ಸಂವಿಧಾನವನ್ನು ಉತ್ತಮಗೊಳಿಸಲು ಮತ್ತು ರಕ್ಷಿಸಲು ನಾವು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಕಷ್ಟಪಟ್ಟು ದುಡಿಯಬೇಕು.

ಮೇಲಿನ ಅಂಶಗಳಲ್ಲಿ ವಿವಾದ ಆಗುವಂಥದ್ದೇನಿದೆ ಎನ್ನುವುದು ಸಹಜ ಪ್ರಶ್ನೆ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಅನೇಕ ಸಂದರ್ಭಗಳಲ್ಲಿ, ಹಲವು ನೆಲೆಯಲ್ಲಿ ಇಂಥದೇ ಸಂಗತಿಗಳ ಕುರಿತು ಗಹನ ಚರ್ಚೆಗಳಾಗಿವೆ. ದಲಿತರು, ಶೋಷಿತರು, ಅಲ್ಪಸಂಖ್ಯಾತ ಸಮುದಾಯಗಳ ಜನರ ಆಹಾರ, ನಂಬಿಕೆ, ಬದುಕು, ಆಚರಣೆಗಳನ್ನು ಕೇಂದ್ರೀಕರಿಸಿ ಉದ್ದೇಶಿತ ದಾಳಿಗಳು ನಡೆದಾಗಲೆಲ್ಲ, “ಸಂವಿಧಾನದ ಆಶಯಗಳು ಆಪತ್ತಿನಲ್ಲಿವೆ,’’ ಎನ್ನುವ ಆತಂಕ ದೇಶವ್ಯಾಪಿ ವ್ಯಕ್ತವಾಗಿದೆ. ಗೋವಾದ ಆರ್ಚ್ ಬಿಷಪ್‌ ಕೂಡ ತಮ್ಮ 'ಫಾಸ್ಟೊರಲ್ ಪತ್ರ'ದಲ್ಲಿ ಅದನ್ನೇ ವ್ಯಕ್ತ ಮಾಡಿದ್ದಾರೆ. “ಏಕ ಸಾಂಸ್ಕೃತಿಕತೆ ತಾಂಡವವಾಡುವುದನ್ನು ತಪ್ಪಿಸಲು ಕ್ಯಾಥೋಲಿಕ್‌ ಜನರು ರಾಜಕಾರಣದಲ್ಲಿ ಸಕ್ರೀಯ ಪಾತ್ರ ವಹಿಸಬೇಕು. ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು. ಈ ಮೂಲಕ, ದೇಶದ ಪ್ರಜಾಸತ್ತೆಯನ್ನು ಮತ್ತಷ್ಟು ಬಲಪಡಿಸಬೇಕು. ಸಾಮಾಜಿಕ ನ್ಯಾಯದ ಪರ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು,’’ ಎಂದು ಆಶಿಸಿದ್ದಾರೆ. ಅವರ ಪತ್ರದಲ್ಲಿ ದೇಶ, ಸಂವಿಧಾನ, ಪ್ರಜಾಸತ್ತೆಯ ಕುರಿತ ಕಳಕಳಿ ವ್ಯಕ್ತವಾಗಿದೆಯೇ ಹೊರತು ಯಾವುದೇ ಪಕ್ಷ, ವ್ಯಕ್ತಿಯ ಹೆಸರು ನೇರ ಪ್ರಕಟವಾಗಿಲ್ಲ. ಧಾರ್ಮಿಕ ಹಿತಾಸಕ್ತಿಯ ಸಂಗತಿಗಳೂ ನುಸುಳಿಲ್ಲ.

ಇದನ್ನೂ ಓದಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೆನ್ಸಾರ್‌ಶಿಪ್‌ ಏಕೆ ಬೇಕು?: ಎಂ ಎಸ್ ಸತ್ಯು

ಆದರೂ, “ದೇಶದ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ,’’ ಎನ್ನುವ ಅವರ ಒಂದು ಮಾತನ್ನಷ್ಟೇ ದೊಡ್ಡದು ಮಾಡಿ, ಅದಕ್ಕೂ ‘ವ್ಯಾಟಿಕನ್‌ ಸಿಟಿ’ಗೂ ತಳಕು ಹಾಕಿ ವಿವಾದವನ್ನಾಗಿ ಬೆಳೆಸುವ ಪ್ರಯತ್ನ ನಡೆಯಿತು. ದೆಹಲಿಯ ಆರ್ಚ್ ಬಿಷಪ್ ಅನಿಲ್‌ ಕೌಂಟೊ ಅವರು, “ಭಾರತದಲ್ಲಿ ಪ್ರಕ್ಷುಬ್ಧ ರಾಜಕೀಯ ವಾತಾವರಣವಿದೆ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಗೆ ಗಂಡಾಂತರ ಒದಗಿದೆ,’’ ಎಂದು ಹೇಳಿಕೆ ನೀಡಿದ ಎರಡು ವಾರಗಳಲ್ಲೇ ಗೋವಾ ಆರ್ಚ್ ಬಿಷಪ್‌ ಅವರ ‘ಪಾಸ್ಟೊರಲ್‌ ಪತ್ರ’ ಚರ್ಚೆಗೆ ಬಂದಿದ್ದಕ್ಕೆ ಹಲವು ಅರ್ಥಗಳನ್ನು ಕಲ್ಪಿಸಲಾಯಿತು. ‘ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಅಭಿಯಾನ’ವನ್ನು ಮತ್ತೆ ಆರಂಭಿಸಲು ವೇದಿಕೆ ಸಿದ್ಧವಾಗುತ್ತಿದೆ ಎಂದು ಕೆಲವರು ಟೀಕಿಸಿದರು. “ಭಾರತದ ವ್ಯವಹಾರಗಳಲ್ಲಿ ವ್ಯಾಟಿಕನ್‌ ಸಿಟಿ ಹಸ್ತಕ್ಷೇಪ ಮಾಡುತ್ತಿದೆ,’’ ಎಂದು ಕೆಲವರು ಛೇಡಿಸಿದರು. “ಮತಾಂತರ ಮತ್ತಿತರ ಚಟುವಟಿಕೆಗೆ ವಿದೇಶಿ ಎನ್‌ಜಿಒಗಳು ಮತ್ತು ವ್ಯಾಟಿಕನ್‌ ಸಿಟಿಯಿಂದ ಹರಿದುಬರುತ್ತಿದ್ದ ಸಂಪನ್ಮೂಲಕ್ಕೆ ಮೋದಿ ಸರ್ಕಾರ ಕಡಿವಾಣ ಹಾಕಿದ್ದರಿಂದ ಸಿಟ್ಟಿಗೆದ್ದಿರುವ ಪಾದ್ರಿಗಳು ಇಂಥ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಪಿತೂರಿ ಕೆಲಸ ಮಾಡುತ್ತಿದೆ,’’ ಎಂದು ಮೋದಿ ಸರ್ಕಾರದ ಪರ ವಾದಿಗಳು ಆಕ್ಷೇಪಿಸಿದರು. “ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಕ್ರೈಸ್ತ ಧರ್ಮಗುರುಗಳು ಕಾಂಗ್ರೆಸ್ ಪರ ಪ್ರಚಾರ ಆರಂಭಿಸಿರುವುದಕ್ಕೆ ನಿದರ್ಶನವಿದು,’’ ಎಂದು ಕೆಲವರು ಶಂಕಿಸಿದರು.ಈ ಹಿಂದೆ ವಿಹಿಂಪ ಅಧ್ಯಕ್ಷರಾಗಿದ್ದ ಕೇರಳ ಬಿಜೆಪಿ ಅಧ್ಯಕ್ಷ ಕುಮ್ಮಾನಮ್ ರಾಜಶೇಖರನ್‌ ಅವರನ್ನು ಮಿಜೋರಾಂ ರಾಜ್ಯಪಾಲರನ್ನಾಗಿ ನೇಮಿಸಿದ್ದನ್ನು ಖಂಡಿಸಿ ಕೆಲ ಕ್ರಿಶ್ಚಿಯನ್‌ ಗುಂಪುಗಳು ಪ್ರತಿಭಟನೆ ನಡೆಸಿದ್ದಕ್ಕೂ, ಆರ್ಚ್ ಬಿಷಪ್‌ ಹೇಳಿಕೆಗೂ ನಂಟು ಬೆಸೆಯುವ ಪ್ರಯತ್ನವೂ ನಡೆಯಿತು.

“ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಮೊದಲು ದೆಹಲಿಯ ಆರ್ಚ್ ಬಿಷಪ್, ನಂತರ ಗೋವಾ ಆರ್ಚ್ ಬಿಷಪ್ ಹೇಳಿದರು. ಮೋದಿ ಸರ್ಕಾರವನ್ನು ಟೀಕಿಸುವಂತೆ ಅವರಿಗೆ ವ್ಯಾಟಿಕನ್‌ನಿಂದ ಕಠಿಣ ಸೂಚನೆ ಬಂದಂತೆ ಕಾಣುತ್ತಿದೆ. ಅಂತಿಮವಾಗಿ ಅವರೆಲ್ಲ ತಮ್ಮನ್ನು ತಾವು ಬಹಿರಂಗಪಡಿಸಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಅಪಖ್ಯಾತಿ ಅಂಟಿಸಲು, ಅಸ್ಥಿರತೆಯ ಭ್ರಮೆ ಮೂಡಿಸಲು ಅನಾರೋಗ್ಯಕರ ಉದಾರವಾದಿಗಳು ನಡೆಸುತ್ತಿರುವ ಪಿತೂರಿಯ ಭಾಗವಿದು,’’ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದರು. ಮತ್ತೊಬ್ಬ ಸಂಸದ ಪ್ರತಾಪ ಸಿಂಹ, “ನಮ್ಮ ಸಂವಿಧಾನ ಅಪಾಯದಲ್ಲಿದೆ ಎಂದು ಆರ್ಚ್ ಬಿಷಪ್‌ ಹೇಳಿದ್ದಾರೆ. ದಯವಿಟ್ಟು ತಪ್ಪು ತಿಳಿಯಬೇಡಿ. ಅದರರ್ಥ, ಮತಾಂತರದ ಸಂಖ್ಯಾ ಆಟದಲ್ಲಿ ನಂಬಿಕೆ ಇರಿಸಿರುವ ‘ವ್ಯಾಟಿಕನ್‌ ಸಂವಿಧಾನ’ವು ಮೋದಿಜಿ ಆಡಳಿತದಲ್ಲಿ ಅಪಾಯದಲ್ಲಿದೆ ಎಂದರ್ಥ,’’ ಎಂದು ಹಂಗಿಸಿದರು. ಇಂಡಿಯಾ ಪಾಲಿಸಿ ಫೌಂಡೇಶನ್‌ನ ರಾಕೇಶ್ ಸಿನ್ಹಾ, “ಭಾರತ ಸರ್ಕಾರವನ್ನು ಖಂಡಿಸುವ ಮಾರ್ಗವನ್ನು ಬಿಷಪ್‌ಗಳು ಯಾಕೆ ತುಳಿಯುತ್ತಿದ್ದಾರೆ? ಬದಲಾಗುತ್ತಿರುವ ಭಾರತದ ಜನಸಂಖ್ಯೆ ಮತ್ತು ಜನರ ಪರಿಸ್ಥಿತಿ ಮತ್ತು ಪ್ರಜಾಪ್ರಭುತ್ವದ (ಡೆಮೋಗ್ರಫಿ ಮತ್ತು ಡೆಮಾಕ್ರಸಿ) ವಿರುದ್ಧ ಅವರು ಮಾತನಾಡುವ ಬದಲು ತಮ್ಮ ಚರ್ಚುಗಳ ಪೂಜಾರಿಗಳ ಮಧ್ಯೆ ಇರುವ ಭ್ರಷ್ಟಾಚಾರ, ವ್ಯಕ್ತಿತ್ವಗಳ ಅವನತಿ ತಡೆಯುವತ್ತ ಗಮನ ಹರಿಸಲಿ,’’ ಎಂದು ಸಲಹೆ ನೀಡಿದರು. “ಮತ್ತೊಬ್ಬ ಆರ್ಚ್ ಬಿಷಪ್‌ ಪ್ರವಚನ ಪೀಠ ತೊರೆದು ಬಿಜೆಪಿ ವಿರೋಧಿ ಪಾಳಯಕ್ಕೆ ಹಾರಿದ್ದಾರೆ. ಹಿಂದೂ ಧಾರ್ಮಿಕ ವ್ಯಕ್ತಿಗಳು ರಾಜಕೀಯ ಹೇಳಿಕೆ ನೀಡಿದರೆ ಅದು ಕೋಮು ರಾಜಕೀಯವಾದರೆ, ಗೋವಾ ಆರ್ಚ್ ಬಿಷಪ್‌ ‘ಸಂವಿಧಾನ ಅಪಾಯದಲ್ಲಿದೆ’ ಎಂದರೆ ಏನರ್ಥ?’’ಎನ್ನುವುದು ಸಂಘಪರಿವಾರ ಮುಖವಾಣಿ ‘ಆರ್ಗನೈಸರ್‌’ನ ಮಾಜಿ ಸಂಪಾದಕ ಶೇಷಾದ್ರಿ ಚಾರಿ ಅವರ ಟ್ವೀಟ್ ಪ್ರಶ್ನೆ.

ಬಿಷಪ್ ವಿರುದ್ಧದ‌ ಇಂಥ ಹೇಳಿಕೆ ಸಮರಕ್ಕೆ ಚಾಲನೆ ಕೊಟ್ಟವರು ಸ್ವತ ಕೇಂದ್ರ ಗೃಹ ಸಚಿವ ರಾಜ್‌ ನಾಥ್ ಸಿಂಗ್‌. ದೆಹಲಿಯ ಆರ್ಚ್ ಬಿಷಪ್‌ ಹೇಳಿಕೆ ನೀಡುತ್ತಿದ್ದಂತೆ ಸಿಂಗ್ ಕಟುವಾಗಿ ಪ್ರತಿಕ್ರಿಯಿಸಿದ್ದು ಉಳಿದ ಪರಿವಾರಕ್ಕೆ ಪ್ರೇರಣೆ ತುಂಬಿತು. “ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಅಲ್ಪಸಂಖ್ಯಾತರು ಹೆಚ್ಚು ಸುರಕ್ಷಿತವಾಗಿದ್ದಾರೆ. ಪ್ರಜಾತಂತ್ರ, ಸಂವಿಧಾನ ರಕ್ಷಣೆಯೆಡೆಗೆ ನಮ್ಮ ಸರ್ಕಾರದ ಆದ್ಯ ಗಮನ ಇದ್ದೇ ಇದೆ. ಈ ವಿಷಯದಲ್ಲಿ ನಮಗೆ ಯಾರ ಸಲಹೆಯೂ ಬೇಕಿಲ್ಲ,’’ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವೀ ಹರಿಹಾಯ್ದರು. “ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಎಲ್ಲರನ್ನೂ ಆಶೀರ್ವದಿಸಬೇಕು. ಧಾರ್ಮಿಕ ಸಂಸ್ಥೆ- ರಾಜಕೀಯದ ನಡುವೆ ಅಂತರ ಕಾಪಾಡಿಕೊಳ್ಳಬೇಕು. ಅದು ಬಿಟ್ಟು ಬಿಷಪ್‌ ಸಂವಿಧಾನ ಅಪಾಯದಲ್ಲಿದೆ ಎನ್ನುವಂಥ ‘ರಾಜಕೀಯ ಮನವಿ’ ಮಾಡಿದ್ದು ಹೊಸದೊಂದು ಅಪಾಯಕಾರಿ ಪ್ರವೃತಿಗೆ ಕಾರಣವಾಗಲಿದೆ,’’ ಎಂದು ಉಪದೇಶಿಸಿದವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್‌ ಯಾದವ್‌ . “ಭಾರತವು ದೇವತಾವಾದಿ ದೇಶವಲ್ಲ. ಧರ್ಮದ ಆಧಾರದ ಮೇಲೆ ಬೇಧ ಮಾಡುವುದಿಲ್ಲ. ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಅತ್ಯಂತ ಉದಾರ ಸಂವಿಧಾನದಡಿ ಆಡಳಿತ ನಡೆಯುತ್ತಿದೆ. ಆರ್ಚ್ ಬಿಷಪ್‌ ಗಳು ತಮ್ಮ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆಂದರೆ ಅದು ಇಲ್ಲಿರುವ ವಾಕ್ ಸ್ವಾತಂತ್ರ್ಯಕ್ಕೆ ಸಾಕ್ಷಿ,’’ ಎಂದೂ ಅವರು ಪ್ರತಿಪಾದಿಸಿದರು. “ಬಿಷಪಪ್‌ಗಳಂತೆ ಉಳಿದೆಲ್ಲ ಧರ್ಮಗಳ ಮುಖಂಡರು ರಾಜಕೀಯ ಹೇಳಿಕೆ ನೀಡಲಾರಂಭಿಸಿದರೆ ದೇಶದ ಕತೆ ಏನು?’’ ಎನ್ನುವುದು ಮತ್ತೊಬ್ಬರ ಆತಂಕ.

ವಾಗ್ದಾಳಿಯ ವೈಖರಿ, ಅದರಲ್ಲಡಗಿರುವ ಕುಹಕ, ಬಳಸಿದ ಭಾಷೆ ಮತ್ತು ತಂತ್ರಗಾರಿಕೆ ಗಮನಿಸಿದರೆ ವ್ಯವಸ್ಥಿತ ಪ್ರಹಾರದ ಹಿಂದಿರುವ ಮನಸ್ಥಿತಿ ತನ್ನಿಂತಾನೇ ಅನಾವರಣಗೊಳ್ಳುತ್ತದೆ. “ಬಿಷಪ್‌ಗಳು‌ ಭಾರತಕ್ಕೆ ಸಂಬಂಧಿಸಿ ಯಾವುದೇ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸಲು ಅರ್ಹರಲ್ಲ,’’ ಎನ್ನುವ ಸಂದೇಶ ರವಾನಿಸಿದಂತಿದೆ. ಇದೇ ಹೊತ್ತಿನಲ್ಲಿ ನಡೆದ ಪೇಜಾವರ ಶ್ರೀಗಳ ಹೇಳಿಕೆ, ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಗಮನಿಸಿ. “ವಿದೇಶಗಳಲ್ಲಿರುವ ಕಪ್ಪುಹಣವನ್ನು ತರುತ್ತೇವೆ, ಗಂಗಾನದಿ ಶುದ್ಧೀಕರಿಸುತ್ತೇವೆ ಎನ್ನುವ ವಾಗ್ದಾನಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಡೇರಿಸಿಲ್ಲ. ನಿರೀಕ್ಷೆಗೆ ತಕ್ಕಂತೆ ಈ ಸರ್ಕಾರ ಕೆಲಸ ಮಾಡಿಲ್ಲ,’’ ಎಂದು ಬಿಜೆಪಿ ಪಕ್ಷ ಮತ್ತು ಪ್ರಧಾನಿ ಹೆಸರು ಹೇಳಿಯೇ ಅವರು ಪ್ರಹಾರ ನಡೆಸಿದರು. “ವಿರೋಧ ಪಕ್ಷಗಳೆಲ್ಲ ಒಂದಾಗುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು,’’ ಎಂದೂ ಊಹಿಸಿದರು. “ದೇಶದಲ್ಲಿ ಎಲ್ಲ ಪಕ್ಷಗಳು ವಿಕೃತಿ ಮೆರೆಯುತ್ತಿರುವುದರಿಂದ ಪ್ರಜಾಪ್ರಭುತ್ವ ಆತಂಕದಲ್ಲಿದೆ,’’ ಎಂದೂ ಆತಂಕ ವ್ಯಕ್ತಪಡಿಸಿದರು. ಅವರ ನಿಲುವಿಗೆ ಬಿಜೆಪಿಯಿಂದ ಬಂದ ಒಂದೆರಡು ಪ್ರತಿಕ್ರಿಯೆಗಳು ಹೀಗಿದ್ದವು:

ಶೋಭಾ ಕರಂದ್ಲಾಜೆ: “ಪೇಜಾವರರು ಸನ್ಯಾಸಿಗಳು. ವಯಸ್ಸಾಗಿದೆ. ಮಾಧ್ಯಮಗಳನ್ನು ಗಮನಿಸಿರದ ಕಾರಣ ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಅವರಲ್ಲಿ ಅರಿವಿನ ಕೊರತೆ ಇದ್ದಂತಿದೆ. ನಮ್ಮ ನಾಯಕರು ಅವರ ಬಳಿ ತೆರಳಿ ಸರ್ಕಾರದ ಸಾಧನೆಗಳ ವಿವರವನ್ನು ನೀಡುತ್ತಾರೆ.’’

ಕೆ ಎಸ್ ಈಶ್ವರಪ್ಪ: “ಅವಕಾಶ ಸಿಕ್ಕರೆ ನಾನೇ ಪೇಜಾವರರನ್ನು ಗಂಗಾ ನದಿ ತಟಕ್ಕೆ ಕರೆದೊಯ್ದು, ಅಲ್ಲಿ ಆಗಿರುವ ಶುದ್ಧೀಕರಣ ಕಾರ್ಯವನ್ನು ತೋರಿಸುತ್ತೇನೆ.’’

ಮೋದಿ ನೇತೃತ್ವದ ಕೇಂದ್ರ ಸರ್ಕಾರದ 'ರಾಜ ಗುರು'ವಿನಂತಿರುವ ಪೇಜಾವರರ ಟೀಕೆ-ಟಿಪ್ಪಣಿಯು ಪಕ್ಷವನ್ನು ಮುಜುಗರಕ್ಕೆ ಈಡುಮಾಡಿದ್ದು ಸುಳ್ಳಲ್ಲ. ಆರ್ಚ್ ಬಿಷಪ್‌ಗಳ ಹೇಳಿಕೆ ಮತ್ತು ಪತ್ರದಲ್ಲಿರುವ ಅಂಶಗಳಿಗಿಂತ ಪೇಜಾವರರ ಮಾತು ನೇರ, ಕಠಿಣವಾಗಿದ್ದವು. ಆದರೆ, ಬಿಷಪ್‌ಗೆ ಸಂಬಂಧಿಸಿ ವ್ಯಕ್ತವಾದ ವಕ್ರಾತಿವಕ್ರ ಪ್ರತಿಕ್ರಿಯೆಗಳಿಗೆ ಹೋಲಿಸಿದರೆ, ಪೇಜಾವರರ ಕುರಿತ ಪ್ರತಿಕ್ರಿಯೆ ಸಹನೀಯವಾಗಿವೆ. ಬಿಜೆಪಿ ಮಂದಿ ಪೇಜಾವರರನ್ನು ‘ವಿದೇಶಿಯ ಪಿತೂರಿ’ ಅಥವಾ ‘ರಾಜಕೀಯ ಷಡ್ಯಂತ್ರದ ಭಾಗ’ವನ್ನಾಗಿ ಮಾಡಲು ಬಯಸಲಿಲ್ಲ. “ಅವರ ಬಳಿ ಹೋಗಿ ಸಾಧನೆಯನ್ನು ವಿವರಿಸುತ್ತೇವೆ,’’ ಎಂದು ತಾಳ್ಮೆ ಪ್ರದರ್ಶಿಸಿದವರು, ಅದೇ ತಾಳ್ಮೆ, ಸಹನೆ, ವಿನಯವನ್ನು ಆರ್ಚ್ ಬಿಷಪ್‌ಗಳ ವಿಷಯದಲ್ಲಿ ಪ್ರದರ್ಶಿಸಲಿಲ್ಲ. “ಜನ ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ,’’ ಎಂದು ಬಿಷಪ್‌ ಹೇಳಿದ್ದಾರೆಂದರೆ, ಅಲ್ಪಸಂಖ್ಯಾತ ಸಮುದಾಯದ ಜೊತೆ ನಿರಂತರ ಸಂವಹನ ನಡೆಸುವ, ಒಡನಾಡುವ ಅವರ ಅನುಭವದ ಮಾತೇ ಆಗಿರುತ್ತದೆನ್ನುವುದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ರಾಜಕೀಯ ವ್ಯವಸ್ಥೆ ಅಸೂಕ್ಷ್ಮ ಮತ್ತು ಅಸಹಿಷ್ಣು ಆಗಿರುವುದನ್ನು ಈ ವಿದ್ಯಮಾನ ಮತ್ತೊಮ್ಮೆ ಎತ್ತಿ ತೋರಿಸಿತು.

ಬಿಷಪ್‌ ಪತ್ರಕ್ಕೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಬಿಜೆಪಿ ನಾಯಕರೊಬ್ಬರು, “ಧರ್ಮ ಪೀಠಗಳಿಂದ ರಾಜಕೀಯ ಮಾತು ತರವಲ್ಲ,’’ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. “ಉಳಿದ ಧರ್ಮ ಪೀಠದ ಮುಖ್ಯಸ್ಥರೂ ಬಿಷಪ್‌ಗಳಂತೆ ಮಾತನಾಡಿದರೆ ಕತೆಯೇನು,’’ ಎಂದು ಆತಂಕಿಸಿದ್ದಾರೆ. ಆದರೆ, ನಮ್ಮ ಸುತ್ತಮುತ್ತ ಅದೆಷ್ಟೋ ಧರ್ಮ ಪೀಠಾಧ್ಯಕ್ಷರು, ಸಾಧು-ಸಂತರು ನೇರ ಅಥವಾ ಪರೋಕ್ಷ ರಾಜಕೀಯ ಮಾಡಿದ್ದಕ್ಕೆ, 'ಅಸಾಂವಿಧಾನಿಕ' ಎನ್ನುವಂಥ ಹೇಳಿಕೆ ನೀಡಿದ್ದಕ್ಕೆ, ನಾಲಿಗೆಯ ಕಿಡಿ ಮೂಲಕವೇ ಸಾಮಾಜಿಕ ಸಾಮರಸ್ಯವನ್ನು ಕದಡಿದ್ದಕ್ಕೆ ಅನೇಕ ಉದಾಹರಣೆಗಳಿವೆ. ಇಂಥದೇ ಧರ್ಮ ಸಂಸ್ಥೆಯ ನೇತೃತ್ವ ವಹಿಸಿದ್ದ ಸಂತನ (ಯೋಗಿ ಆಧಿತ್ಯನಾಥ್) ಕೈಗೆ ಉತ್ತರ ಪ್ರದೇಶ ರಾಜ್ಯದ ಚುಕ್ಕಾಣಿಯನ್ನೇ ಬಿಜೆಪಿ ನೀಡಿದೆ. ಬಳಿಕ ದೇಶದ ಹಲವು ಧಾರ್ಮಿಕ ಮುಖಂಡರ ರಾಜಕೀಯ ವಾಂಛೆ ಕೆರಳಿರುವುದನ್ನು, ಅವರು ರಾಜಕೀಯ ಪಕ್ಷಗಳನ್ನು ನೇರ ಅಥವಾ ಪರೋಕ್ಷ ಬೆಂಬಲಿಸುವ ಮೇಲಾಟಕ್ಕೆ ಇಳಿದಿದ್ದನ್ನು ಕಂಡಿದ್ದೇವೆ. ಧಾರ್ಮಿಕ ಮುಖವಾಡ ತೊಟ್ಟು ಹಲವು ಬಗೆಯ ವ್ಯವಹಾರ ನಡೆಸುವ ‘ವ್ಯಾಪಾರಿ ಸನ್ಯಾಸಿ’ಗಳು ರಾಜಕೀಯ ಪ್ರಭಾವ ಬೀರಿದ್ದು ಕಳೆದ ಚುನಾವಣೆಗಳಲ್ಲಿ ಹೆಚ್ಚೇ ವ್ಯಕ್ತವಾಗಿದೆ. ದೇಶವು ಆಧರಿಸುವ ಸರ್ವೋತ್ಕೃಷ್ಟ ಸಂವಿಧಾನಕ್ಕೆ ಬದಲಾಗಿ 'ಆರಾಧನಾ ಸಂವಿಧಾನ'ವೊಂದು ವ್ಯಾಪಿಸುತ್ತಿರುವುದು ದೇಶದ ಪ್ರಜಾತಂತ್ರಕ್ಕೆ ಗಂಡಾಂತರಕಾರಿ ಎನ್ನುವ ಆತಂಕ ಮತ್ತೆ ಮತ್ತೆ ವ್ಯಕ್ತವಾಗಿದೆ.

“ರಾಜಕೀಯದಲ್ಲಿ ಧರ್ಮ ಪ್ರಜ್ಞೆ ಇರಬೇಕು. ಆದರೆ, ರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸುವುದು, ಮೆರೆಸುವುದು ತಪ್ಪು,’’ ಎನ್ನುವುದು ಯಾವತ್ತೂ ಘನವಾದ ಆಶಯ. ಅದಕ್ಕೆ ತದ್ವಿರುದ್ಧವಾಗಿ ಜಾತಿ, ಧರ್ಮ-ರಾಜಕಾರಣದ ಉತ್ಪತ್ತಿಯಿಂದ ಎಲ್ಲ ರಾಜಕೀಯ ಪಕ್ಷಗಳೂ ಲಾಭ ಮೊಗೆದುಕೊಳ್ಳುತ್ತಿವೆ. ಈ ವಿಷಯದಲ್ಲಿ ಗರಿಷ್ಠ ಲಾಭ ಪಡೆಯುವ ಬಿಜೆಪಿಯ ಮಂದಿ, ಅಲ್ಪಸಂಖ್ಯಾತ ಸಮುದಾಯದ ಆರ್ಚ್ ಬಿಷಪ್‌ಗಳು ತಮಗನ್ನಿಸಿದ್ದನ್ನು ಹೇಳಿದರೆ, ಸಮುದಾಯದ ಜನರಲ್ಲಿ ರಾಜಕೀಯ ಅರಿವು, ಪ್ರಜ್ಞೆ ಮೂಡಿಸಲು ಮುಂದಾದರೆ, ಅದಕ್ಕೇಕೆ ಈ ಪರಿ ಉರಿದುಬೀಳಬೇಕು? ‘ವ್ಯಾಟಿಕನ್‌ ಸಿಟಿ’ ಸಂಬಂಧ ಕಲ್ಪಿಸುವುದರ ಹಿಂದಿನ ಉದ್ದೇಶವೇನು? ಅಷ್ಟಕ್ಕೂ ಬಿಷಪ್‌ಗಳೇನು ವ್ಯಾಟಿಕನ್‌ ಸಿಟಿ ಜನರೇ? ಆರಾಧಿಸುವ ಧರ್ಮ ಭಿನ್ನವಾದರೂ ಅವರು ಈ ದೇಶದ ಪ್ರಜೆಗಳೇ ತಾನೇ? ಬಹುಸಂಸ್ಕೃತಿ, ಬಹುಧರ್ಮ, ಬಹುಜಾತಿ ಸಹಿತ ಬಹುತ್ವದ ಆಶಯವನ್ನು ಉಸಿರಾಡುವ ದೇಶದಲ್ಲಿ ಕ್ರಿಶ್ಚಿಯಾನಿಟಿ‌ ಕೂಡ ಒಂದು ಸಮುದಾಯ ಆರಾಧಿಸುವ ಧರ್ಮ. ಅದನ್ನು ಆರಾಧಿಸುವವರು ಈ ದೇಶದ ಪ್ರಜೆಗಳೇ ಆಗಿದ್ದಾರೆ. ಮತದಾನದ ಹಕ್ಕು ಸಹಿತ ಎಲ್ಲ ಸಂವಿದಾನಬದ್ಧ ಹಕ್ಕುಗಳನ್ನು ಹೊಂದಿದವರು. ಪ್ರತಿ ಚುನಾವಣೆಯಲ್ಲಿ ಮತ ಹಕ್ಕನ್ನು ಚಲಾಯಿಸುವವರು. ಈ ದೇಶ ಸಾಗುತ್ತಿರುವ ದಿಕ್ಕು ದೆಸೆಯಲ್ಲಿ ಅವರಿಗೆ ಲೋಪ ಕಂಡರೆ, ಆತಂಕ ಎದುರಾದರೆ ಅದನ್ನು ವ್ಯಕ್ತ ಮಾಡುವ ಸ್ವಾತಂತ್ರ್ಯ ಅವರಿಗೆ ಇದ್ದೇ ಇದೆ. ವಾಸ್ತವ, ಸತ್ಯ ಕೆಲವರ ಪಾಲಿಗೆ ಯಾವತ್ತೂ ಅಪ್ರಿಯವೇ ಆಗಿರಬಹುದು. ಆದರೂ, ಅದರ ಹಿಂದಿನ ಆತಂಕ ಅರ್ಥೈಸಿಕೊಳ್ಳದೆ, ತಮ್ಮದೇ ಸತ್ಯ ಎನ್ನುವ ಕುತರ್ಕ ಮಂಡಿಸಿ, ವಾಸ್ತವ ಮರೆಮಾಚಲೆತ್ನಿಸುವುದು ದೇಶದ ಹಿತಕ್ಕೆ ಒಳ್ಳೆಯದಲ್ಲ.

ಗೃಹ ಸಚಿವ ರಾಜನಾಥ್‌ ಸಿಂಗ್‌ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ದೆಹಲಿ ಆರ್ಚ್ ಬಿಷಪ್‌ ಅನಿಲ್‌, “ನನ್ನ ಹೇಳಿಕೆ ಆರ್‌ಎಸ್‌ಎಸ್‌ ಅಥವಾ ಬಿಜೆಪಿ ಕುರಿತದ್ದು ಅಲ್ಲ,’’ ಎಂದು ಸ್ಪಷ್ಟನೆ ನೀಡಿದರು. ಗೋವಾ ಆರ್ಚ್ ಬಿಷಪ್‌ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪಣಜಿಯ ಪಾದ್ರಿಯೊಬ್ಬರು, “ಆರ್ಚ್ ಬಿಷಪ್‌ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಏನನ್ನೂ ಹೇಳಿಲ್ಲ. ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಬಿಷಪ್‌ ತಮ್ಮ ಪಾಸ್ಟೊರಲ್‌ ಪತ್ರದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆದರೂ ಕೆಲವು ರಾಜಕಾರಣಿಗಳು ಯಾಕೆ ಮುಗಿಬೀಳುತ್ತಿದ್ದಾರೆ?,’’ ಎಂದು ಪ್ರಶ್ನಿಸಿದ್ದಾರೆ. “ಬಿಷಪ್ ಅವರ ಒಂದೆರಡು ಹೇಳಿಕೆಗಳನ್ನಷ್ಟೆ ಬಳಸಿಕೊಂಡು ವಿವಾದ ಸೃಷ್ಟಿಸಲಾಗಿದೆ. ಆ ಪತ್ರಕ್ಕೆ ಸಂಬಂಧಿಸಿ ನಾವು ಮುಂದೆ ಯಾವುದೇ ಪ್ರತಿಕ್ರಿಯೆ ಮತ್ತು ವಿವರಣೆ ನೀಡುವುದಿಲ್ಲ. ಅಗತ್ಯವಿದ್ದವರು ಅಂತರ್ಜಾಲದಲ್ಲಿ ಆ ಪತ್ರವನ್ನು ಓದಬಹುದು ಮತ್ತು ಅವರು ಏನು ಹೇಳಿದ್ದಾರೆ, ಯಾವ ಸನ್ನಿವೇಶದ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಬಹುದು,’’ ಎನ್ನುವುದು ಆರ್ಚ್ ಬಿಷಪ್ ಕಾರ್ಯದರ್ಶಿ ಜೋಕ್ವಿಮ್ ಲೋಯೊಲಾ ಪೆರೇರಾ ಅವರ ಸ್ಪಷ್ಟನೆ. ಆದರೆ, ಬಿಜೆಪಿಗರಿಗೆ ಆ ಸತ್ಯ ಅಪಥ್ಯ. ಪೇಜಾವರರು ಮತ್ತು ಆರ್ಚ್ ಬಿಷಪ್‌ಗಳು ಆಡಿದ “ಪ್ರಜಾತಂತ್ರ ಅಪಾಯದಲ್ಲಿದೆ,’’ ಎನ್ನುವ ಒಂದೇ ಮಾತು ಅಧಿಕಾರದ ಕೇಂದ್ರದ ಕಿವಿಗೆ ಬೇರೆ-ಬೇರೆ ರೀತಿ ಕೇಳುತ್ತದೆನ್ನುವುದೇ ವ್ಯವಸ್ಥೆಯ ವಿಪರ್ಯಾಸ. ವಿವಾದಕ್ಕಾಗಿ ವಿವಾದವನ್ನು ಸೃಷ್ಟಿಸಲು ಮುಂದಾದಾಗ ವಿವೇಚನಾ ಶಕ್ತಿ ಮಣ್ಣುಗೂಡಿರುತ್ತದೆ. ಆರ್ಚ್ ಬಿಷಪ್‌ ಪತ್ರದ‌ ವಿಷಯದಲ್ಲಿ ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೂದಲನ್ನು ಸೀಳಿ ವಿವಾದ ಅರಸುವ ಪ್ರಯತ್ನ ಮಾಡಿದಂತಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More