ಮೋದಿ ಸರ್ಕಾರದ ಬಗ್ಗೆ ಜನರಿಗೆ ತೃಪ್ತಿ ಇಲ್ಲ; ಆರ್‌ಬಿಐ ಸಾಕ್ಷಾತ್ ಸಮೀಕ್ಷೆ!

ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷದ ಆಡಳಿತದ ಬಗ್ಗೆ ಜನಸಾಮಾನ್ಯರಿಗೆ ಸಮಾಧಾನ, ತೃಪ್ತಿ ಇಲ್ಲ; ಹೀಗಂತ ನಾವು ಹೇಳುತ್ತಿಲ್ಲ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ನಿಲುವಿಗೆ ಹೆಸರಾದ ಆರ್‌ಬಿಐ ಹೇಳುತ್ತಿದೆ. ಆರ್‌ಬಿಐ ಗ್ರಾಹಕ ವಿಶ್ವಾಸ ಸಮೀಕ್ಷೆಯಲ್ಲಿ ಮೋದಿ ಬಗ್ಗೆ ಜನರ ನಿರಾಶೆ ವ್ಯಕ್ತವಾಗಿದೆ!

ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕು ವರ್ಷದ ಆಡಳಿತ ಬಗ್ಗೆ ಹಲವು ಮಾಧ್ಯಮಗಳು ವಿವಿಧ ರೀತಿಯ ಸಮೀಕ್ಷಾಧಾರಿತ ವರದಿ ಪ್ರಕಟಿಸಿವೆ. ಸಂಘ ಪರಿವಾರ ಪ್ರಣೀತ ಆರ್ಥಿಕತೆಯನ್ನು ಒಪ್ಪುವ ಮಾಧ್ಯಮ ಸಂಸ್ಥೆಗಳು, ಮೋದಿ ಸರ್ಕಾರದ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದೂ, ಜನರು ಅತ್ಯಂತ ಸಂತೃಪ್ತರಾಗಿದ್ದಾರೆಂದು ವರದಿ ಮಾಡಿವೆ. ಈ ವರದಿಗಳನ್ನು ಸಮರ್ಥಿಸಿಕೊಳ್ಳಲು ತಾವು ನಡೆಸಿದ ಸಮೀಕ್ಷೆಯನ್ನು ಮುಂದಿಡುತ್ತಿವೆ.

ಸಂಘ ಪರಿವಾರ ಸಿದ್ಧಾಂತ ವಿರೋಧಿಸುವ ಮಾಧ್ಯಮ ಸಂಸ್ಥೆಗಳು ಮೋದಿ ಸರ್ಕಾರ ವಿಫಲವಾಗಿದೆ ಎಂದಿವೆ. ಆರ್ಥಿಕತೆ ಕುಸಿತ, ಹಣದುಬ್ಬರ ಹೆಚ್ಚಳ, ಬೆಲೆ ಏರಿಕೆ, ವಿಶ್ವಾಸದ ಕೊರತೆ ಮತ್ತಿತರ ಅಂಶಗಳನ್ನು ವೈಫಲ್ಯಗಳನ್ನು ಎತ್ತಿ ಹಿಡಿದಿವೆ.

ಮೋದಿ ಪರ ಮತ್ತು ಮೋದಿ ವಿರೋಧಿ ಮಾಧ್ಯಮಗಳು ನಡೆಸುವ ಸಮೀಕ್ಷೆಗಳ ವಿಶ್ವಾಸಾರ್ಹತೆ ಯಾವಾಗಲೂ ಪ್ರಶ್ನಾರ್ಹ. ಆದರೆ, ಮೋದಿ ಸರ್ಕಾರದ ಬಗ್ಗೆ ಪರ ಅಥವಾ ವಿರೋಧಿ ನಿಲವು ಇಲ್ಲದ ನಿಷ್ಪಕ್ಷಪಾತ ಸಮೀಕ್ಷೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕ ವಿಶ್ವಾಸ ಸಮೀಕ್ಷೆ. ಆರ್‌ಬಿಐ ಬೆಂಗಳೂರು, ನವದೆಹಲಿ, ಚೆನ್ನೈ, ಕೊಲ್ಕತ್ತಾ ಮತ್ತು ಹೈದರಾಬಾದ್, ಮುಂಬೈ ಈ ಆರು ಮಹಾನಗರಗಳಲ್ಲಿ ಮೇ ತಿಂಗಳ ಅವಧಿಯಲ್ಲಿ ಈ ಸಮೀಕ್ಷೆ ನಡೆಸಿದೆ.

ಸಮೀಕ್ಷೆಗೆ ಒಳಪಟ್ಟವರ ಪೈಕಿ ಶೇ.48ರಷ್ಟು ಮಂದಿ ದೇಶದ ಸಾಮಾನ್ಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಶೇ.31.9ರಷ್ಟು ಮಂದಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದಿದ್ದಾರೆ. ಇದರರ್ಥ, ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎನ್ನುವವರು ಮತ್ತು ಹದಗೆಟ್ಟಿದೆ ಎನ್ನುವವರ ನಡುವಿನ ಅಂತರ ಶೇ.16.1. ಅಂದರೆ, ನಿವ್ವಳ ವ್ಯತಿರಿಕ್ತ ಅಭಿಪ್ರಾಯ ಶೇ.-16.1ರಷ್ಟಿದೆ. ನಾಲ್ಕು ವರ್ಷಗಳ ಹಿಂದೆ ಅಂದರೆ, 2014ರ ಜೂನ್ ತಿಂಗಳಲ್ಲಿ ನಿವ್ವಳ ಅಭಿಪ್ರಾಯವು ಶೇ.-14.4 ರಷ್ಟಿತ್ತು. ಅಂದರೆ, ಆಗ ಇದ್ದ ಪರಿಸ್ಥಿತಿಗಿಂತ ಮೋದಿ ನಾಲ್ಕು ವರ್ಷಗಳ ಆಡಳಿತದಲ್ಲಿ ಪರಿಸ್ಥಿತಿ ಹೆಚ್ಚು ಹದಗೆಟ್ಟಿದೆ.

ಗ್ರಾಹಕ ವಿಶ್ವಾಸ ಸಮೀಕ್ಷೆಯಲ್ಲಿ ಮುಂದಿನ ಒಂದು ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆಯೇ ಎಂಬ ಬಗ್ಗೆಯೂ ಅಭಿಪ್ರಾಯ ಪಡೆಯಲಾಗಿದೆ. ಮೇ 2018ರ ಸಮೀಕ್ಷೆ ಪ್ರಕಾರ, ಶೇ.49.5ರಷ್ಟು ಮಂದಿ ಸುಧಾರಿಸಲಿದೆ ಎಂದರೆ, ಶೇ.27.8ರಷ್ಟು ಮಂದಿ ಮತ್ತಷ್ಟು ಹದಗೆಡಲಿದೆ ಎಂದಿದ್ದಾರೆ. 2014ರ ಜೂನ್ ಸಮೀಕ್ಷೆಯಲ್ಲಿ 56.7ರಷ್ಟು ಮಂದಿ ಆರ್ಥಿಕತೆಯು ಸುಧಾರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಶೇ.17.6ರಷ್ಟು ಮಂದಿ ಮತ್ತಷ್ಟು ಹದಗೆಡಲಿದೆ ಎಂದಿದ್ದರು. ಇದರರ್ಥ, ಆರ್ಥಿಕತೆ ಸುಧಾರಿಸುವ ಬಗ್ಗೆ ಜನರ ವಿಶ್ವಾಸ ಅತ್ಯಂತ ಕುಸಿದಿದೆ.

ಚುನಾವಣೆಗೆ ಮುನ್ನ ಮೋದಿ, ವರ್ಷಕ್ಕೆ 2 ಕೋಟಿ ಉದ್ಯೋಗ ಒದಗಿಸುವ ಭರವಸೆ ನೀಡಿದ್ದರು. ಆದರೆ, ದೇಶದಲ್ಲಿ ನಿರುದ್ಯೋಗ ಪ್ರಮಾಣ ಮೋದಿ ಅವರ ಅವಧಿಯಲ್ಲಿ ಹೆಚ್ಚಿದೆ. ಈ ನಡುವೆ, ಇಪಿಎಫ್ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು 60 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂಬ ಸಮೀಕ್ಷಾ ವರದಿಯನ್ನು ಸರ್ಕಾರ ಹೆಮ್ಮೆಯಿಂದ ಹೇಳಿಕೊಂಡಿತ್ತು. ಆದರೆ, ವಾಸ್ತವಿಕವಾಗಿ ಆ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಿಲ್ಲ ಎಂಬ ಅಂಶವನ್ನು ಮಾಧ್ಯಮಗಳು ಪ್ರಕಟಿಸಿದ್ದವು.

ಈಗ ಆರ್‌ಬಿಐ ನಡೆಸಿರುವ ಗ್ರಾಹಕರ ವಿಶ್ವಾಸ ಸಮೀಕ್ಷೆಯು ನಾಲ್ಕು ವರ್ಷಗಳಲ್ಲಿನ ಮೋದಿ ಸರ್ಕಾರದ ಅವಧಿಯಲ್ಲಿ ಉದ್ಯೋಗ ನಿರೀಕ್ಷೆಯು ಅತ್ಯಂತ ಹದಗೆಟ್ಟಿದೆ ಎಂಬುದು ದೃಢಪಟ್ಟಿದೆ. ಅದರರ್ಥ, ಉದ್ಯೋಗ ಒದಗಿಸುವ ಬಗ್ಗೆ ಜನರಿಗೆ ಇದ್ದ ನಿರೀಕ್ಷೆಯನ್ನು ಮೋದಿ ಸರ್ಕಾರ ತಲುಪಿಲ್ಲ. 2014ರಲ್ಲಿ ಶೇ.30.2ರಷ್ಟು ಮಂದಿ ಮಾತ್ರ ಉದ್ಯೋಗ ಪರಿಸ್ಥಿತಿ ಹದಗೆಟ್ಟಿದೆ ಎಂದಿದ್ದರೆ, 2018ರ ಮೇ ಸಮೀಕ್ಷೆಯಲ್ಲಿ ಶೇ.44.1ರಷ್ಟು ಮಂದಿ ಹದಗೆಟ್ಟಿದೆ ಎಂದಿದ್ದಾರೆ. ಉತ್ತಮವಾಗಿದೆ ಎಂದವರ ಸಂಖ್ಯೆ ಕೇವಲ ಶೇ.31.5ರಷ್ಟು ಮಾತ್ರ.

ದೇಶದ ಜನರ ಆದಾಯ ಹೆಚ್ಚಳ ಕುರಿತಂತೆ ಬಗ್ಗೆ ಆರ್‌ಬಿಐ ಸಮೀಕ್ಷೆಯಲ್ಲಿ ಕೂಡ ಜನರ ನಿರೀಕ್ಷೆಗಳು ಕುಸಿಯುತ್ತಿರುವುದು ಸ್ಪಷ್ಟವಾಗಿದೆ. ಹಿಂದಿನ ಒಂದು ವರ್ಷದಲ್ಲಿ ನಿಮ್ಮ ಆದಾಯ ಹೆಚ್ಚಿದೆಯೇ ಅಥವಾ ಇಳಿದಿದೆಯೇ ಮತ್ತು ಮುಂದಿನ ವರ್ಷದಲ್ಲಿ ಏರಲಿದೆಯೇ ಅಥವಾ ಇಳಿಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವರ ಪೈಕಿ ಶೇ.50.8ರಷ್ಟು ಮಂದಿ ಮುಂದಿನ ವರ್ಷ ಆದಾಯ ಹೆಚ್ಚಬಹುದು ಎಂದಿದ್ದಾರೆ. ಆದರೆ, 2014ರಲ್ಲಿ ಮುಂದಿನ ವರ್ಷ ಆದಾಯ ಹೆಚ್ಚಬಹುದು ಎಂದವರ ಪ್ರಮಾಣ ಶೇ.63.9ರಷ್ಟಿತ್ತು. ಇದರರ್ಥ, ನಾಲ್ಕು ವರ್ಷಗಳ ಅವಧಿಯಲ್ಲಿ ಗಣನೀಯವಾಗಿ ಜನರ ವಿಶ್ವಾಸ ಕುಸಿದಿದೆ. ಅಂದರೆ, ಮೋದಿ ಸರ್ಕಾರ ನಿರೀಕ್ಷೆ ಮೂಡಿಸುವ ಬದಲಿಗೆ ನಿರಾಶೆ ಮೂಡಿಸಿದೆ.

ಮೋದಿ ಅಧಿಕಾರದ ಅವಧಿಯಲ್ಲಿ ಹಣದುಬ್ಬರ ಪರಿಸ್ಥಿತಿ ಸುಧಾರಿಸಿದೆ ಎಂದು ಬಹುತೇಕ ಜನರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸುಧಾರಿಸುತ್ತದೆ ಎಂಬುವವರ ಪ್ರಮಾಣ 2014ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಗಣನೀಯವಾಗಿ ಕುಸಿದ ಪರಿಣಾಮ ಹಣದುಬ್ಬರ ಬಹುತೇಕ ನಿಯಂತ್ರಣದಲ್ಲಿತ್ತು. ಒಂದು ಹಂತದಲ್ಲಿ ಹಣದುಬ್ಬರವು ನೇತ್ಯಾತ್ಮಕ ವಲಯಕ್ಕೆ (ನೆಗೆಟಿವ್ ಜೋನ್) ಜಿಗಿದಿತ್ತು. ಈಗ ತೈಲ ದರ ಏರುಹಾದಿಯಲ್ಲಿ ಇರುವುದರಿಂದ ವಾಸ್ತವಿಕ ಸವಾಲು ಮೋದಿ ಸರ್ಕಾರಕ್ಕೆ ಎದುರಾಗಲಿದೆ. ಆದರೂ ಹಣದುಬ್ಬರದ ಬಗ್ಗೆ ಜನರಲ್ಲಿ ಕೊಂಚ ಸಮಾಧಾನ ಇದೆ.

ಇದನ್ನೂ ಓದಿ : ನಾಲ್ಕು ವರ್ಷಗಳ ಮೋದಿ ಸರ್ಕಾರದ ಆಡಳಿತದಲ್ಲಿ ಮರೀಚಿಕೆಯಾದ ‘ಅಚ್ಛೇ ದಿನಗಳು’

ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿರುವ ಗ್ರಾಹಕರ ವಿಶ್ವಾಸ ಸಮೀಕ್ಷೆಯು ಮುಂದಿನ ವರ್ಷ ಮತ್ತೆ ಚುನಾವಣೆ ಎದುರಿಸಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆ ಆಗಿದೆ. ಚುನಾವಣೆಯ ಮುಂಚೆ ಇದ್ದ ಮೋದಿ ವರ್ಚಸ್ಸು, ಚುನಾವಣೆಯಾಗಿ ಪ್ರಧಾನಿಯಾದ ನಂತರದ ಮೋದಿ ವರ್ಚಸ್ಸಿನ ನಡುವೆ ಅಂತರ ಹೆಚ್ಚುತ್ತಿದೆ. ಮೋದಿ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಚುನಾವಣೆಯಿಂದ ಚುನಾವಣೆಗೆ ಮೋದಿ ಗೆಲುವಿನ ಪ್ರಮಾಣ ತಗ್ಗುತ್ತಿದೆ.

ಗುಜರಾತಿನಲ್ಲಿ ಅತ್ಯಂತ ಹೀನಾಯ ಗೆಲುವು ಸಾಧಿಸಿದ ಬಿಜೆಪಿ, ಕರ್ನಾಟಕದಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಿದೆ. ಹಿಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ 110 ಸ್ಥಾನ ಗೆದ್ದಿದ್ದ ಬಿಜೆಪಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಕೇವಲ 104 ಸ್ಥಾನ ಪಡೆದಿದೆ. ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿರುವ ಗ್ರಾಹಕರ ವಿಶ್ವಾಸ ಸಮೀಕ್ಷೆಯ ಪ್ರಾತಿನಿಧಿಕ ರಾಜಕೀಯ ಅಭಿಪ್ರಾಯದಂತಿದೆ. ಅಂದರೆ, ನಿಷ್ಪಕ್ಷಪಾತವಾಗಿ ಆರ್‌ಬಿಐ ನಡೆಸಿರುವ ಸಮೀಕ್ಷೆಯನ್ನು ಸಾಕ್ಷಾತ್ಕರಿಸುವಂತೆ ಕರ್ನಾಟಕದ ಜನತೆ ಮತಗಳ ಮೂಲಕ ತಮ್ಮ ತೀರ್ಪು ನೀಡಿದ್ದಾರೆ. ಮುಂದಿನ ವರ್ಷ ಚುನಾವಣೆ ಎದುರಿಸುತ್ತಿರುವ ಮೋದಿ ಅವರು ಕರ್ನಾಟಕ ಫಲಿತಾಂಶ ಮತ್ತು ಆರ್‌ಬಿಐ ಸಮೀಕ್ಷೆಯಿಂದ ಕಲಿಯುವುದು ಸಾಕಷ್ಟಿದೆ!

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More