ಗಾಂಧಿಯನ್ನೇ ನಂಬಿಸಿ ವಂಚಿಸಿದ ಆರೆಸ್ಸೆಸ್ ಈಗ ಪ್ರಣಬ್‌ಗೆ ವಂಚಿಸದಿರುವುದೇ?

‘ಆರ್‌ಎಸ್‌ಎಸ್‌ ಮುಸ್ಲಿಮರ ವಿರುದ್ಧವಿಲ್ಲ’ ಎಂಬ ಭರವಸೆ ಮೇಲೆ ಗಾಂಧಿ ಅಂದು ಸಮಾವೇಶಕ್ಕೆ ಹೋಗಿಬಂದಿದ್ದರು. ಆದರೆ, ಕೆಲ ದಿನದಲ್ಲಿ ಮುಸ್ಲಿಮರ ಮೇಲೆ ಹಿಂಸಾಚಾರ ನಡೆಯಿತು, ಗಾಂಧಿಯ ಸದ್ದನ್ನೇ ಅಡಗಿಸಲಾಯಿತು! ಈ ಕುರಿತು ‘ಸ್ಕ್ರಾಲ್’ ಪ್ರಕಟಿಸಿದ ಲೇಖನದ ಭಾವಾನುವಾದ ಇಲ್ಲಿದೆ

ಅದು ೧೯೪೭ರ ಸೆಪ್ಟೆಂಬರ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಗೋಳ್ವಾಲ್ಕರ್, ದೇಶ ವಿಭಜನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಗಲಭೆಯ ಸಂದರ್ಭದಲ್ಲಿ, ತಮ್ಮ ಸಂಘಟನೆ ಯಾವುದೇ ಕೋಮು ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಮಹಾತ್ಮ ಗಾಂಧಿಗೆ ಹೇಳಿದ್ದರು. ಅಲ್ಲದೆ, ಆರ್‌ಎಸ್‌ಎಸ್‌ ಕೇವಲ ಹಿಂದುತ್ವದ ರಕ್ಷಣೆಗೆ ಇರುವ ಸಂಸ್ಥೆಯೇ ವಿನಾ ಮುಸ್ಲಿಮರನ್ನು ಕೊಲ್ಲಲು ಇರುವುದಲ್ಲ ಎಂದೂ ಸ್ಪಷ್ಟಪಡಿಸಿದ್ದರು. ಈ ವಾಗ್ದಾನದ ಮೇಲೆಯೇ ಗಾಂಧಿ, ಕೆಲವೇ ದಿನಗಳಲ್ಲಿ ದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಆದರೆ, ಅದಾಗಿ ಕೇವಲ ಮೂರು ತಿಂಗಳಲ್ಲೇ ಗೋಳ್ವಾಲ್ಕರ್ ಸಂಪೂರ್ಣ ಭಿನ್ನರಾಗ ಹಾಡತೊಡಗಿದ್ದರು. ಆ ವರ್ಷದ ಡಿ.೮ರಂದು ದೆಹಲಿಯಲ್ಲಿ ಆರ್‌ಎಸ್ಎಸ್ ಶಿಬಿರವೊಂದರಲ್ಲಿ ಮಾತನಾಡುತ್ತ ಅವರು, “ಭಾರತದಲ್ಲಿ ಒಬ್ಬನೇ ಒಬ್ಬ ಮುಸ್ಲಿಮನೂ ಇರಲು ಆರ್‌ಎಸ್‌ಎಸ್‌ ಬಿಡುವುದಿಲ್ಲ. ಗಾಂಧಿ ಕೂಡ ಇನ್ನು ಆರ್‌ಎಸ್‌ಎಸ್‌ ಸಂಘಟನೆಯನ್ನು ದಾರಿ ತಪ್ಪಿಸಲಾಗದು. ಅಂತಹವನ್ನು ಸದ್ದಡಗಿಸುವ ಎಲ್ಲ ದಾರಿಗಳೂ ಆರ್‌ಎಸ್‌ಎಸ್‌ಗೆ ಚೆನ್ನಾಗಿ ಗೊತ್ತು,” ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಜೂ.೭ರಂದು ನಾಗ್ಪುರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಬಹುಶಃ ಈ ಘಟನೆಯನ್ನು ತಪ್ಪದೆ ನೆನಪಿಸಿಕೊಳ್ಳಬೇಕಿದೆ. ಆರ್‌ಎಸ್‌ಎಸ್‌ ಮತ್ತು ಕೋಮುವಾದದ ಕುರಿತು ಸಾಕಷ್ಟು ಬರೆದಿರುವ ಇತಿಹಾಸಕಾರ ದಿಲೀಪ್ ಸಿಮಿಯೋನ್ ಪ್ರಕಾರ, “ರಾಜಕೀಯದಲ್ಲಿ ಎಲ್ಲ ಬಗೆಯ ಜನರೊಂದಿಗೆ ಸಂವಾದಿಸುವುದು ಒಳ್ಳೆಯದೇ. ಆದರೆ, ಅಂತಹ ಬೇರೆ-ಬೇರೆ ನಂಬಿಕೆಯ, ಸಿದ್ಧಾಂತದ ವ್ಯಕ್ತಿ ಮತ್ತು ರಾಜಕೀಯ ವಲಯಗಳು ಜೊತೆಜೊತೆಗೇ ಸಾಗಲು ಮುಖ್ಯವಾಗಿ ಮುಕ್ತ ಮನಸ್ಸು ಬೇಕಾಗುತ್ತದೆ. ಹಾಗೇ, ಸತ್ಯದ ಮಾತು ಮತ್ತು ಆಗಿರುವ ತಪ್ಪುಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಮನಸ್ಸೂ ಇರಬೇಕು.”

ಪ್ರಣಬ್‌ ಅವರ ನಾಗ್ಪುರ ಭೇಟಿಯ ಹಿನ್ನೆಲೆಯಲ್ಲಿ ಸಿಮಿಯೋನ್ ಕೆಲವು ಪ್ರಮುಖ ಪ್ರಶ್ನೆಗಳನ್ನು ಅವರ ಮುಂದಿಟ್ಟಿದ್ದಾರೆ. “ಆರ್‌ಎಸ್‌ಎಸ್‌ ಪರಿವಾರ ಎಂದಾದರೂ ಗಾಂಧಿಯ ಬಗೆಗಿನ ತಮ್ಮ ಅಸೀಮ ದ್ವೇಷದ ಬಗ್ಗೆ ಸತ್ಯವನ್ನು ಹೇಳಿದೆಯಾ? ಗಾಂಧಿಯ ಕೊಲೆಗಡುಕನ ಬಗೆಗಿನ ತಮ್ಮ ಅಭಿಮಾನ ಮತ್ತು ಅಕ್ಕರೆಯನ್ನು ಎಂದಾದರೂ ಬಹಿರಂಗವಾಗಿ ಒಪ್ಪಿಕೊಂಡಿದೆಯಾ? ಭಾರತೀಯ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರ ಕುರಿತ ಅದರ ನಿರಂತರ ಹಗೆತನವನ್ನೂ, ದ್ವೇಷವನ್ನೂ ಕೈಬಿಟ್ಟಿರುವುದಾಗಿ ಹೇಳಿದೆಯಾ?” ಎಂಬ ಪ್ರಶ್ನೆಗಳನ್ನು ಸಿಮಿಯೋನ್ ಮಾಜಿ ರಾಷ್ಟ್ರಪತಿಗಳ ಮುಂದಿಟ್ಟಿದ್ದಾರೆ.

ಅದಕ್ಕೆ ಬದಲಾಗಿ, ಎರಡು ನಾಲಿಗೆಯ ಮಾತು ಎಂಬುದು ಆರ್‌ಎಸ್‌ಎಸ್‌ನ ಹೆಗ್ಗುರುತಾಗಿಬಿಟ್ಟಿದೆ. ಅದರ ನಾಯಕರು ಏಕಕಾಲಕ್ಕೆ ತಮ್ಮ ಉಗ್ರ ಹಿಂದುತ್ವ ಸಿದ್ಧಾಂತವನ್ನು ಬಲವಂತದಿಂದ ಜನರ ಮೇಲೆ ಹೇರುತ್ತಿರುವ ಹೊತ್ತಿಗೇ, ಆಗಾಗ ಉಗ್ರ ಹಿಂದುತ್ವದ ವರಸೆಯಿಂದ ಅಂತರ ಕಾಯ್ದುಕೊಳ್ಳುವುದನ್ನೂ ಬಲ್ಲರು. ೧೯೪೭ರಲ್ಲಿ ಗಾಂಧಿಯೊಂದಿಗಿನ ಅದರ ನಂಟು ಕೂಡ ಇಂತಹದ್ದೇ ಒಂದು ಎರಡು ನಾಲಿಗೆಯ ತಂತ್ರಗಾರಿಕೆಯ ಭಾಗವೇ ಆಗಿತ್ತು ಎಂಬುದು ಗುಟ್ಟೇನೂ ಅಲ್ಲ.

ಸಿಮಿಯೋನ್ ಅವರ ಕೃತಿ ‘ಮಹಾತ್ಮ ಗಾಂಧಿ: ದಿ ಲಾಸ್ಟ್ ಫೇಸ್’ನಲ್ಲಿ ಗಾಂಧಿಯ ಕಾರ್ಯದರ್ಶಿ ಪ್ಯಾರೆಲಾಲ್‌ ಅವರು, ಗೋಳ್ವಾಲ್ಕರ್ ಹಾಗೂ ಗಾಂಧಿ ಭೇಟಿಯ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ೧೯೪೭ರ ಸೆ.೧೨ರಂದು ನಡೆದ ಆ ಭೇಟಿಯ ಕುರಿತು ಬರೆಯುತ್ತ, “ದೇಶದ ಇತರ ಕಡೆಗಳಂತೆ ದೆಹಲಿ ನಗರದಲ್ಲೂ ಸಂಭವಿಸಿದ ಹಿಂಸೆ ಮತ್ತು ಕೊಲೆಗಳ ಹಿಂದೆ ಆರ್‌ಎಸ್ಎಸ್‌ ಕೈವಾಡವಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಗುಟ್ಟಿನ ಸಂಗತಿಯಾಗಿತ್ತು. ಆದರೆ, ಗೋಳ್ವಾಲ್ಕರ್ ಹಾಗೂ ಅವರ ಸಹವರ್ತಿಗಳು ಈ ವಿಷಯವನ್ನು ಅಲ್ಲಗಳೆಯುತ್ತಿದ್ದರು. ‘ನಮ್ಮ ಸಂಘಟನೆ ಹಿಂದೂಗಳ ರಕ್ಷಣೆಗಾಗಿ ಇದೆಯೇ ವಿನಾ ಮುಸ್ಲಿಮರ ಹತ್ಯೆಗಾಗಿ ಅಲ್ಲ. ಅದು ಯಾರ ವಿರುದ್ಧವೂ ಇಲ್ಲ. ಶಾಂತಿಗಾಗಿ ಬದ್ಧ ಸಂಘಟನೆ' ಎನ್ನುವ ಮೂಲಕ ಹಸೀ ಸುಳ್ಳುಗಳನ್ನು ಬಿತ್ತಲಾಗಿತ್ತು.”

ಆರ್‌ಎಸ್‌ಎಸ್‌ ನಾಯಕರ ಅಂತಹ ಹೇಳಿಕೆಗಳ ಹಿನ್ನೆಲೆಯಲ್ಲಿ, “ನಿಜವಾಗಿಯೂ ನಿಮ್ಮ ಮಾತುಗಳಲ್ಲಿ ಸತ್ಯಾಂಶವಿದ್ದರೆ, ಆರ್‌ಎಸ್‌ಎಸ್‌ ಸಂಘಟನೆ ತನ್ನ ವಿರುದ್ಧದ ಆರೋಪಗಳನ್ನು ಅಲ್ಲಗಳೆದು ಮತ್ತು ದೇಶಾದ್ಯಂತ ನಡೆಯುತ್ತಿರುವ ಮುಸ್ಲಿಮರ ಕೊಲೆ-ಸುಲಿಗೆಗಳನ್ನು ಖಂಡಿಸಿ ಬಹಿರಂಗ ಹೇಳಿಕೆ ನೀಡಲಿ,” ಎಂದು ಗಾಂಧಿ ಸವಾಲು ಹಾಕಿದರು. ಅದಕ್ಕೆ ಪ್ರತಿಯಾಗಿ ಗೋಳ್ವಾಲ್ಕರ್ ಮತ್ತು ಅವರ ಸಹವರ್ತಿಗಳು, ತಮ್ಮ ಪರವಾಗಿ ಗಾಂಧಿಯೇ ಆ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು. ಆಗ ಗಾಂಧಿ, “ಒಂದು ವೇಳೆ ನೀವು ನಿಮ್ಮ ಸಂಘಟನೆಯ ಕುರಿತು ಹೇಳಿಕೊಳ್ಳುತ್ತಿರುವುದು ಸತ್ಯವೇ ಆಗಿದ್ದರೆ, ನಾನು ಖಂಡಿತ ನಿಮ್ಮ ಪರವಾಗಿ ದೇಶದ ಜನತೆಗೆ ಸ್ಪಷ್ಟನೆ ನೀಡಬಲ್ಲೆ. ಆದರೆ, ಅಂತಹ ಸ್ಪಷ್ಟನೆ ಜನರಿಗೆ ನಿಮ್ಮ ಬಾಯಿಂದಲೇ ಬಂದರೆ ಒಳ್ಳೆಯದಲ್ಲವೇ?” ಎಂದು ಮರುಸವಾಲು ಹಾಕಿದ್ದರು ಎಂದು ಪ್ಯಾರೇಲಾಲ್ ಬರಹವನ್ನು ಸಿಮಿಯೋನ್ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಅದೇ ಹೊತ್ತಿಗೆ, ಗಾಂಧಿಯವರ ಪಕ್ಷದ ವ್ಯಕ್ತಿಯೊಬ್ಬರು ವಾಹಾದಲ್ಲಿನ (ಈಗಿನ ಪಾಕಿಸ್ತಾನದ ಪ್ರದೇಶ) ನಿರಾಶ್ರಿತರ ಶಿಬಿರದಲ್ಲಿ ಆರ್‌ಎಸ್‌ಎಸ್‌ ಮಾಡಿದ ಸೇವೆಗಾಗಿ ಆ ಸಂಘಟನೆಯನ್ನು ಹಾಡಿಹೊಗಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಗಾಂಧಿ, “ಹಿಟ್ಲರ್ ಕಾಲದ ನಾಝಿಗಳು ಮತ್ತು ಮುಸಲೋನಿ ಕಾಲದ ಫ್ಯಾಸಿಸ್ಟರು ಕೂಡ ಅಂತಹ ಸೇವೆಯನ್ನೇ ಮಾಡಿದ್ದರು ಎಂಬುದನ್ನು ಮರೆಯಬೇಡಿ,” ಎಂದು ಎಚ್ಚರಿಸಿದ್ದರು. ಆರ್‌ಎಸ್‌ಎಸ್‌ ಅನ್ನು “ಸರ್ವಾಧಿಕಾರಿ ಮನೋಧರ್ಮದ ಒಂದು ಕೋಮುವಾದಿ ಸಂಘಟನೆ,” ಎಂದು ಗಾಂಧಿ ಬಣ್ಣಿಸಿದ್ದರು ಎಂದು ಪ್ಯಾರೇಲಾಲ್‌ ಹೇಳಿದ್ದಾರೆ.

ಆದಾಗ್ಯೂ ಗಾಂಧಿ, ಸೆ.೧೬ರಂದು ದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್‌ ಸಮಾವೇಶದಲ್ಲಿ ಭಾಗವಹಿಸಲು ನಿರ್ಧರಿಸಿದರು. ಏಕೆಂದರೆ, “ಪ್ರತಿಯೊಬ್ಬರಿಗೂ ತಮ್ಮ ಒಳ್ಳೆತನವನ್ನು ತೋರಿಸಲು ಒಂದು ಅವಕಾಶ ನೀಡಬೇಕು,” ಎಂದು ಅವರು ನಂಬಿದ್ದರು.

ಮುಖವಾಡ ಬದಲಾಯಿಸುವಲ್ಲಿ ಪರಿಣಿತ

ಸಮಾವೇಶದಲ್ಲಿ ಗೋಳ್ವಾಲ್ಕರ್ ಅವರು ಗಾಂಧಿಯನ್ನು ಹಾಡಿಹೊಗಳಿದ್ದರು. “ಹಿಂದುತ್ವ ಸೃಷ್ಟಿಸಿದ ಮಹಾನ್ ವ್ಯಕ್ತಿ,” ಎಂದು ಸ್ತುತಿಸಿದ್ದರು. ಆದರೆ, ಅದಕ್ಕೆ ಪ್ರತಿಯಾಗಿ ತಮ್ಮ ಭಾಷಣದಲ್ಲಿ ಗಾಂಧಿ, “ನಾನೊಬ್ಬ ಹಿಂದೂ ಎನ್ನಲು ನನಗೆ ಹೆಮ್ಮೆ ಇದೆ. ಆದರೆ, ನನ್ನ ಹಿಂದುತ್ವ ಇನ್ನೊಬ್ಬರ ಬಗ್ಗೆ ಅಸಹನೆಯನ್ನಾಗಲೀ, ಪ್ರತ್ಯೇಕತಾ ಭಾವನೆಯನ್ನಾಗಲೀ ಹೊಂದಿಲ್ಲ,” ಎನ್ನುವ ಮೂಲಕ ಆರ್‌ಎಸ್‌ಎಸ್‌ ನಾಯಕನಿಗೆ ತಿರುಗೇಟು ನೀಡಿದ್ದರು. “ಒಂದು ವೇಳೆ ಹಿಂದೂಗಳು, ಭಾರತದಲ್ಲಿ ಹಿಂದೂಯೇತರರಿಗೆ ಜಾಗವಿಲ್ಲ, ಅದರಲ್ಲೂ ಮುಸ್ಲಿಮರಿಗೆ ಯಾವುದೇ ಸಮಾನ ಮತ್ತು ಗೌರವಾನ್ವಿತ ಅವಕಾಶವೇ ಇಲ್ಲ ಎಂದುಕೊಂಡರೆ; ಅವರು ಒಂದು ವೇಳೆ ಭಾರತದಲ್ಲಿ ಬದುಕಬೇಕು ಎಂದರೆ ಎರಡನೇ ದರ್ಜೆಯ ನಾಗರಿಕರಾಗಿ, ಹಿಂದೂಗಳಿಗಿಂತ ಕೆಳದರ್ಜೆಯ ಜೀವನ ನಡೆಸಬೇಕು ಎಂದುಕೊಂಡರೆ; ಅಥವಾ ಪಾಕಿಸ್ತಾನದಲ್ಲಿ ಹಿಂದೂಗಳು ಮುಸ್ಲಿಮರಿಗಿಂತ ಕೀಳಾಗಿ ಬದುಕಬೇಕು ಎಂದು ಮುಸ್ಲಿಮರು ಅಂದುಕೊಂಡರೆ; ಅದು ಹಿಂದೂ ಧರ್ಮಕ್ಕೂ, ಮುಸ್ಲಿಂ ಧರ್ಮಕ್ಕೂ ಗ್ರಹಣ ಬಡಿದಂತೆಯೇ ಸರಿ,” ಎಂದು ಗಾಂಧಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದರು.

೭೧ ವರ್ಷಗಳ ಹಿಂದೆ ಗಾಂಧಿ ಆಡಿದ್ದ ಈ ಮಾತುಗಳನ್ನು ಇಂದು ಮುಖರ್ಜಿಯವರು ಮುಂದುವರಿಸಬಲ್ಲರೇ?

ಆ ಭಾಷಣದಲ್ಲಿ ಗಾಂಧಿ, ತಾವು, ಗೋಳ್ವಾಲ್ಕರ್ ಹಾಗೂ ಅವರ ಸಹವರ್ತಿಗಳ ನಡುವಿನ ಮಾತುಕತೆಯ ಬಗ್ಗೆಯೂ ಪ್ರಸ್ತಾಪಿಸಿದ್ದರು. ಪ್ಯಾರೇಲಾಲ್ ಪ್ರಕಾರ, “ಇಸ್ಲಾಮಿನ ವಿರುದ್ಧದ ದ್ವೇಷವೇ ತಮ್ಮ ತತ್ವವಲ್ಲ ಎಂದು ಅವರ (ಆರ್‌ಎಸ್‌ಎಸ್‌ ನಾಯಕರ) ಭರವಸೆ ಕೇಳಿ ನನಗೆ ಖುಷಿಯಾಯಿತು,” ಎಂದು ಗಾಂಧಿ ಅಂದು ಹೇಳಿದ್ದರು.

ಅಂದು ಗೋಳ್ವಾಲ್ಕರ್ ಗಾಂಧಿಗೆ ನೀಡಿದ್ದ ಆ ಭರವಸೆಯನ್ನು ಇಂದು ಭಾಗವತ್ ಇನ್ನಷ್ಟು ದೃಢವಾಗಿ ಹೇಳಬಲ್ಲರೇ?

೧೯೪೭ರಲ್ಲಿ ಗಾಂಧಿಯನ್ನು ತಮ್ಮ ಸಮಾವೇಶಕ್ಕೆ ಆಹ್ವಾನಿಸಲು ಆರ್‌ಎಸ್‌ಎಸ್ ಯಾವ ಕಾರಣಗಳನ್ನು ಹೊಂದಿತ್ತೋ, ಅದೇ ಕಾರಣಗಳಿಗಾಗಿಯೇ ಇಂದು ಪ್ರಣಬ್‌ ಮುಖರ್ಜಿ ಅವರನ್ನು ಆಹ್ವಾನಿಸಲಾಗಿದೆ ಎಂಬುದು ಸಿಮಿಯೋನ್ ವಿಶ್ಲೇಷಣೆ. “ಮುಖವಾಡಗಳ ಮೂಲಕ ತನ್ನನ್ನು ತಾನು ಮರೆಮಾಚಿಕೊಳ್ಳುವುದರಲ್ಲಿ ಆರ್‌ಎಸ್‌ಎಸ್‌ ಸಿದ್ಧಹಸ್ತ,” ಎನ್ನುವ ಅವರು, “ತನ್ನ ವಿರುದ್ಧದ ಜನಾಭಿಪ್ರಾಯದ ವಾಸನೆ ಹಿಡಿದಿರುವ ಅದು, ಈಗ ಮುಖರ್ಜಿ ಅವರತ್ತ ಒಲವು ತೋರುತ್ತಿದೆ. ಆ ಮೂಲಕ ಜನರನ್ನು ಗೆಲ್ಲುವ ಒಂದು ಯತ್ನ ಇದು. ಸಂಘ ಯಾವಾಗಲೂ ಸತ್ಯವನ್ನು ಜಾಣ್ಮೆಯಿಂದ ಮರೆಮಾಚುತ್ತದೆ. ರಾಜಕಾರಣವನ್ನು ಮೋಸದಿಂದ ಮರೆಮಾಚುತ್ತದೆ ಮತ್ತು ನಿಜಧರ್ಮವನ್ನು ದೇಶಭಕ್ತಿಯ ಮೂಲಕ ಮರೆಮಾಚುತ್ತದೆ. ಒಂದು ಕಡೆ ನಕ್ಸಲ್ ಹಿಂಸೆಯನ್ನು ವಿರೋಧಿಸುವ ಅದು, ತನ್ನದೇ ಸಹಸಂಘಟನೆಗಳ ಹಿಂಸೆಯನ್ನು ಸಂಭ್ರಮಿಸುತ್ತದೆ,” ಎಂದು ವಿಶ್ಲೇಷಿಸಿದ್ದಾರೆ.

೧೯೪೭ರಲ್ಲಿಯೂ ಆರ್‌ಎಸ್‌ಎಸ್ ಬಹಳ ವಂಚನೆ ಮತ್ತು ಕುತಂತ್ರದ ಮೂಲಕವೇ ಗಾಂಧಿಯನ್ನು ತಮ್ಮ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನಿಸಿತ್ತು. ಒಂದು ಕಡೆ ತಮ್ಮ ಸಂಘಟನೆಯ ಬಗ್ಗೆ ಗಾಂಧಿ ಎತ್ತಿದ ಅನುಮಾನಗಳನ್ನು ಅಲ್ಲಗಳೆಯುತ್ತ, ಅವರನ್ನು ನಂಬಿಸುವ ಯತ್ನ ಮಾಡುತ್ತಲೇ, ಗೋಳ್ವಾಲ್ಕರ್ ಮತ್ತೊಂದು ಪಿತೂರಿಯ ಕಾರ್ಯತಂತ್ರವನ್ನು ಜಾರಿಗೊಳಿಸುತ್ತಿದ್ದರು. ಆ ಪಿತೂರಿಯ ಕಾರ್ಯತಂತ್ರವನ್ನು ಇತಿಹಾಸಕಾರ ರಾಮಚಂದ್ರ ಗುಹಾ ಅವರು ‘ಔಟ್‌ಲುಕ್’ ನಿಯತಕಾಲಿಕೆಗೆ ಬರೆದ ತಮ್ಮ ಲೇಖನವೊಂದರಲ್ಲಿ ಮೊದಲು ಬಹಿರಂಗಪಡಿಸಿದರು. ನಂತರ ಪತ್ರಕರ್ತ ಭರತ್ ಭೂಷಣ್ ಕೂಡ ‘ಕ್ಯಾಚ್‌ನ್ಯೂಸ್‌’ ವೆಬ್‌ಸೈಟಿನಲ್ಲಿ ಆ ಬಗ್ಗೆ ಬರೆದರು. ದೆಹಲಿ ಪೊಲೀಸರ ಕ್ರಿಮಿನಲ್ ಅಪರಾಧ ತನಿಖೆ ವಿಭಾಗದಲ್ಲಿಯೂ ಆ ಬಗ್ಗೆ ಮಾಹಿತಿ ಇದ್ದು, ಆ ಮಾಹಿತಿಯ ಆಧಾರದ ಮೇಲೆಯೇ ಆ ವರದಿಗಳನ್ನು ಮಾಡಲಾಗಿತ್ತು.

ಗಾಂಧಿಯ ಸದ್ದಡಗಿಸಬಹುದು

ದೆಹಲಿಯ ಆರ್‌ಎಸ್‌ಎಸ್‌ ಸಭೆಯ ಬಗ್ಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಲಖನೌ ಸಿಐಡಿ ಎಸ್ಪಿ ಜಿ ಬಿ ವಿಗ್ಗಿನ್ಸ್‌ ಅವರು ಅಲ್ಲಿನ ದೆಹಲಿ ಸಿಐಡಿಗೆ ಮಹತ್ವದ ಸುಳಿವು ನೀಡಿದ್ದರು. ಮಥುರಾದ ಸಿಐಡಿ ವರದಿಯ ಆಧಾರದ ಮೇಲೆ ವಿಗ್ಗಿನ್ಸ್‌ ಆ ಮಹತ್ವದ ಮಾಹಿತಿ ಪಡೆದಿದ್ದರು. ಮಥುರಾದಲ್ಲಿ ೧೯೪೭ರ ಡಿ.೧ರಂದು ೫೦ ಮಂದಿ ಆರ್‌ಎಸ್‌ಎಸ್‌ ನಾಯಕರು ಅಲ್ಲಿನ ಅಂತು ಲಾಲ್‌ ವೈಶ್ ಎಂಬುವರ ಗೋವರ್ಧನ್ ಪ್ರದೇಶದ ಮನೆಯಲ್ಲಿ ಸಭೆ ಸೇರಿದ್ದರು. ಆ ಸಭೆಯಲ್ಲಿ ಅವರಿಗೆ, “೧೯೪೭ರ ಡಿ.೮ರಂದು ದೇಶದ ಉದ್ದಗಲದ ಕಾರ್ಯಕರ್ತರು ದೆಹಲಿಯಲ್ಲಿ ಸಮಾವೇಶಗೊಳ್ಳಲಿದ್ದಾರೆ. ಆ ಕುರಿತ ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತಿದೆ,” ಎಂದು ಮಾಹಿತಿ ನೀಡಲಾಗಿತ್ತು.

‘ಸೇವಕ್’ ಎಂಬ ಮಾಹಿತಿದಾರ ನೀಡಿದ ಮಾಹಿತಿಯ ಆಧಾರದ ಮೇಲೆ ಸಿಐಡಿ ಇನ್ಸ್‌ಪೆಕ್ಟರ್ ಕರ್ತಾರ್ ಸಿಂಗ್ ಒಂದು ವರದಿಯನ್ನು ಸಲ್ಲಿಸಿ, ೧೯೪೭ರ ಡಿ.೮ರಂದು ಗೋಳ್ವಾಲ್ಕರ್ ಅವರು ರೋಹಟಕ್ ರಸ್ತೆಯ ಶಿಬಿರದಲ್ಲಿ ೨,೫೦೦ ಮಂದಿ ಆರ್‌ಎಸ್‌ಎಸ್ ಸ್ವಯಂಸೇವಕರ ಸಭೆ ನಡೆಸಿದರು. ಕವಾಯತು ಬಳಿಕ ಅವರು, ಸ್ವಯಂಸೇವಕರಿಗೆ ಆರ್‌ಎಸ್‌ಎಸ್‌ನ ತತ್ವ-ಸಿದ್ಧಾಂತದ ಕುರಿತು ಹೇಳಿದರು. “ಶಿವಾಜಿಯ ಮಾದರಿಯಲ್ಲೇ ಗೊರಿಲ್ಲಾ ಸಮರಕ್ಕೂ ಸಜ್ಜಾಗಿ,” ಎಂದೂ ಅವರು ಕರೆ ನೀಡಿದರು ಎಂದು ಸಿಐಡಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ : ಕೊನೆಗೆ ನಿಮ್ಮ ಭಾಷಣದ ಬಿಂಬ ಮಾತ್ರ ಉಳಿಯಲಿದೆ; ಪ್ರಣಬ್‌ಗೆ ಮಗಳ ಎಚ್ಚರಿಕೆ

“ಪಾಕಿಸ್ತಾನವನ್ನು ಮುಗಿಸುವವರೆಗೆ ಸಂಘ ವಿರಮಿಸುವುದಿಲ್ಲ,” ಎಂದು ಹೇಳಿದ ಗೋಳ್ವಾಲ್ಕರ್, “ನಮ್ಮ ಈ ಗುರಿಗೆ ಯಾರೇ ಅಡ್ಡಬಂದರೂ ನಾವು ಅವರನ್ನು ಮುಗಿಸಲಿದ್ದೇವೆ. ಅದು ನೆಹರು ಸರ್ಕಾರವಿರಬಹುದು ಅಥವಾ ಇನ್ನಾವುದೇ ಸರ್ಕಾರವಿರಬಹುದು,” ಎಂದು ಅಂದಿನ ಸಭೆಯಲ್ಲಿ ಘೋಷಿಸಿದ್ದರು. “ಸಂಘ ತನ್ನ ಗುರಿ ಸಾಧನೆಯಲ್ಲಿ ಒಂದೇ ಬಾರಿಗೆ ಜಯಗಳಿಸದೆ ಇರಬಹುದು. ಆದರೆ, ನಿರಂತರವಾಗಿ ಆ ಪ್ರಯತ್ನ ಸಾಗುತ್ತಿರಬೇಕು,” ಎಂದು ಕಾರ್ಯಕರ್ತರಿಗೆ ಕರೆ ನೀಡಲಾಯಿತು ಎಂದು ಸಿಐಡಿ ವರದಿ ಹೇಳಿದೆ.

ಅದೇ ಸಭೆಯಲ್ಲಿಯೇ ಗೋಳ್ವಾಲ್ಕರ್, ಆರ್‌ಎಸ್‌ಎಸ್‌ ಇಸ್ಲಾಮಿನ ವಿರುದ್ಧ ಇಲ್ಲ ಎಂಬ ಗಾಂಧಿಗೆ ನೀಡಿದ್ದ ತಮ್ಮ ಮಾತನ್ನು ತಿರುವುಮುರುವು ಮಾಡಿದ್ದರು. “ಭೂಮಿ ಮೇಲಿನ ಯಾವ ಶಕ್ತಿಯೂ ಅವರನ್ನು (ಮುಸ್ಲಿಮರು) ಹಿಂದೂಸ್ತಾನದಲ್ಲಿ ಉಳಿಯುವಂತೆ ಮಾಡಲಾರದು. ಅವರು ಈ ದೇಶವನ್ನು ತೊರೆಯಲೇಬೇಕು,” ಎಂದು ಗೋಳ್ವಾಲ್ಕರ್‌ ಅಂದು ಹೇಳಿರುವುದಾಗಿ ಸಿಐಡಿ ಇನ್ಸ್‌ಪೆಕ್ಟರ್ ಸಿಂಗ್ ವರದಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಬಳಿಕ ಅವರು, ಗಾಂಧಿಯ ಮೇಲೆ ನೇರ ವಾಗ್ದಾಳಿ ಮಾಡಿದರು. “ಮಹಾತ್ಮ ಗಾಂಧಿ ಚುನಾವಣೆಯ ವೇಳೆ ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತದ ಲಾಭಕ್ಕಾಗಿ ಮುಸ್ಲಿಮರನ್ನು ಭಾರತದಲ್ಲಿ ಇರಿಸಿಕೊಳ್ಳಲು ಇಚ್ಛಿಸಿದ್ದಾರೆ. ಅದರೆ, ಅಷ್ಟರಲ್ಲಾಗಲೇ (ಚುನಾವಣೆ ವೇಳೆಗೆ) ಭಾರತದಲ್ಲಿ ಒಬ್ಬನೇ ಒಬ್ಬ ಮುಸ್ಲಿಮನೂ ಬದುಕಿರಲಾರ. ಒಂದು ವೇಳೆ ಅವರು ಇಲ್ಲಿಯೇ ಉಳಿಯುವಂತೆ ನೋಡಿಕೊಂಡರೆ, ಆಗ ಆಗುವ ಎಲ್ಲಕ್ಕೂ ಸರ್ಕಾರವೇ ಹೊಣೆ ವಿನಾ ಹಿಂದೂ ಸಮುದಾಯವಲ್ಲ,” ಎಂದು ಗೋಳ್ವಾಲ್ಕರ್ ಹೇಳಿದ್ದಾಗಿ ಸಿಐಡಿ ವರದಿ ಹೇಳಿದೆ.

ಈ ಮಾತುಗಳ ಮೂಲಕ ಗೋಳ್ವಾಲ್ಕರ್ ಗಾಂಧಿಯನ್ನೂ ಸೇರಿದಂತೆ ಯಾರನ್ನೂ ಬಿಡದ ಭವಿಷ್ಯದ ಹಿಂಸಾಚಾರದ ಬಗ್ಗೆ ಎಚ್ಚರಿಕೆ ನೀಡಿದ್ದರು. ವರದಿಯ ಪ್ರಕಾರ, “ಗಾಂಧಿ ಆರ್‌ಎಸ್‌ಎಸ್‌ ಅನ್ನು ಇನ್ನು ಮಂದೆಯೂ ದಾರಿ ತಪ್ಪಿಸಲಾಗದು. ಅಂತಹ ಮಂದಿಯನ್ನು ಸದ್ದಡಗಿಸುವ ದಾರಿಗಳು ನಮಗೆ ಗೊತ್ತಿವೆ. ಆದರೆ, ಹಿಂದೂಗಳ ವಿರುದ್ಧ ಹಗೆ ಸಾಧಿಸಬಾರದು ಎಂಬುದು ನಮ್ಮ ಪರಂಪರೆ. ಒಂದು ವೇಳೆ ತೀರಾ ಅನಿವಾರ್ಯವೆಂದಾದರೆ ನಾವು ಆ ಪರಂಪರೆಯನ್ನೂ ಮುರಿಯಬೇಕಾದೀತು,” ಎಂದು ಗೋಳ್ವಾಲ್ಕರ್‌ ಹೇಳಿದ್ದರು.

ಗೋಳ್ವಾಲ್ಕರ್ ಈ ಮಾತುಗಳನ್ನು ಆಡಿದ ಕೇವಲ ಎರಡು ತಿಂಗಳ ಒಳಗೇ ಗಾಂಧಿಯ ಹತ್ಯೆ ನಡೆಯಿತು.

ಆರ್‌ಎಸ್‌ಎಸ್‌ನ ಈ‌ ಹಿನ್ನೆಲೆಯಲ್ಲಿ, “ಮೋಸದ, ವಂಚನೆ, ಪಿತೂರಿಯ ಜನರೊಂದಿಗೆ ನೈಜ ಸಂವಾದ ಸಾಧ್ಯವಾಗದು,” ಎಂಬ ಸಿಮಿಯೋನ್ ಅವರ ಎಚ್ಚರಿಕೆಯ ಮಾತು ಸಕಾಲಿಕ. “ಭಾರತೀಯ ರಾಜಕಾರಣದ ಕುರಿತು ಎಲ್ಲ ರೀತಿಯಲ್ಲೂ ನಾವು ಗಂಭೀರ ಸಂವಾದ ನಡೆಸೋಣ. ಮುಸ್ಲಿಂ ಕೋಮುವಾದವೂ ಸೇರಿದಂತೆ ಎಲ್ಲ ಬಗೆಯ ಕೋಮುವಾದದ ಬಗ್ಗೆ, ಮಾವೋವಾದಿಗಳ ಹಿಂಸಾಚಾರವೂ ಸೇರಿದಂತೆ ಎಲ್ಲ ಬಗೆಯ ಹಿಂಸಾಚಾರದ ಬಗ್ಗೆಯೂ ಮುಕ್ತವಾಗಿ ಮಾತನಾಡೋಣ. ಆದರೆ, ಅಂತಹ ಸಂವಾದಕ್ಕೆ ತೀರಾ ಅಗತ್ಯವಿರುವುದು ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು. ಸಂಘ ನಿಜವಾಗಿಯೂ ಅಂತಹ ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸಿನೊಂದಿಗೆ ಸಂವಾದಕ್ಕೆ ಸಿದ್ಧವಿದೆಯೇ?” ಎಂಬ ಸಿಮಿಯೋನ್ ಪ್ರಶ್ನೆ ನೈಜ ಇತಿಹಾಸ ಗೊತ್ತಿರುವ ಎಲ್ಲರದ್ದೂ ಹೌದು.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More