ಎಂ ಬಿ ಪಾಟೀಲರ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಎಷ್ಟು ವಾಸ್ತವ?

ಉ.ಕರ್ನಾಟಕದ ಕಾಂಗ್ರೆಸ್‌ ನಾಯಕ ಎಂ ಬಿ ಪಾಟೀಲ್‌ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಪರಮೇಶ್ವರ್ ಅವರು ಈಗಾಗಲೇ ಡಿಸಿಎಂ ಆಗಿದ್ದಾರೆ. ಡಿ ಕೆ ಶಿವಕುಮಾರ್‌ ಇದೇ ಬೇಡಿಕೆ ಇಟ್ಟು ಕೈಬಿಟ್ಟಿದ್ದಾರೆ. ಈ ವೇಳೆ ಅವರ ಬೇಡಿಕೆ ಎಷ್ಟು ಕಾರ್ಯಸಾಧು ಅಥವಾ ಅಲ್ಲ ಎಂಬುದಕ್ಕೆ ಇಲ್ಲಿವೆ ತಲಾ 5 ಕಾರಣ

ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲಿನ ಖಾಲಿ ಇರುವ ೬ ಸಚಿವ ಸ್ಥಾನ ಗಿಟ್ಟಿಸಲು ಹಲವು ಶಾಸಕರು ವಿಭಿನ್ನ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಬಿ ಪಾಟೀಲ್ ಅವರು ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿದರೆ ಮಾತ್ರ ಸಂಪುಟ ಸೇರುವ ಎಂಬ ಪ್ರಬಲ ಬೇಡಿಕೆ ಇಟ್ಟಿದ್ದಾರೆ. ಸಂಪುಟ ಸದಸ್ಯರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇರುವುದು ಖಾತ್ರಿಯಾದ ನಂತರ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಎಂ ಬಿ ಪಾಟೀಲ್‌, “ಇದೀಗ ಸಚಿವ ಸ್ಥಾನ ಬೇಡವೇ ಬೇಡ. ನಿರ್ಲಕ್ಷ್ಯ ಮಾಡಿ ಸಚಿವ ಸ್ಥಾನ ನೀಡಿದರೆ ಪಡೆಯುವ ಎರಡನೇ ದರ್ಜೆ ನಾಯಕ ನಾನಲ್ಲ. ಯಾವುದೇ ಸ್ಥಾನ ಬಯಸದೇ ಶಾಸಕನಾಗಿ ಮುಂದುವರಿಯುವೆ. ಪಕ್ಷ ತ್ಯಜಿಸುವುದಿಲ್ಲ,” ಎಂದಿದ್ದರು.

ಬಿಕ್ಕಟ್ಟು ಅರ್ಥ ಮಾಡಿಕೊಂಡು ಅಸಮಾಧಾನಗೊಂಡಿರುವ ಎಂ ಬಿ ಪಾಟೀಲ್‌ ಅವರನ್ನು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಉಮುಖ್ಯಮಂತ್ರಿ ಜಿ ಪರಮೇಶ್ವರ್‌, ಡಿ ಕೆ ಶಿವಕುಮಾರ್‌, ಕೃಷ್ಣ ಬೈರೇಗೌಡ ಮತ್ತಿತರರು ಸಮಾಧಾನಪಡಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೂ ಮುನ್ನ ಸಚಿವ ಸ್ಥಾನ ಕೈತಪ್ಪಿದ್ದರಿಂದ ಕುಪಿತರಾಗಿದ್ದ ಎಂ ಬಿ ಪಾಟೀಲ್‌ ಅವರು ಬುಧವಾರ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು. ಈಗ ತನ್ನ ತೆಕ್ಕೆಯಲ್ಲಿ ೨೦ ಶಾಸಕರಿದ್ದು, ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವ ಒತ್ತಡ ಹೇರುತ್ತಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್‌ ಹೈಕಮಾಂಡ್‌ ಭೇಟಿ ಮಾಡಿ, ಅಹವಾಲು ಸಲ್ಲಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನಿಂದ ಪರಮೇಶ್ವರ್‌ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ಎಂ ಬಿ ಪಾಟೀಲ್ ಅವರನ್ನು ತಣಿಸಲು ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲು ಮತ್ತು ಸೃಷ್ಟಿಸದೇ ಇರಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗದೇ ಇರಲು ಇಲ್ಲಿವೆ ತಲಾ ಐದು ಕಾರಣಗಳು.

ಎಂ ಬಿ ಪಾಟೀಲ್‌ ಡಿಸಿಎಂ ಆಗಬಹುದು ಎನ್ನಲು ಇಲ್ಲಿವೆ ೫ ಕಾರಣ

  1. ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿರುವ ಮಲ್ಲನಗೌಡ ಬಸವಗೌಡ ಪಾಟೀಲ್‌ ಅಲಿಯಾಸ್‌ ಎಂ ಬಿ ಪಾಟೀಲ್ ಅವರು ಪಕ್ಷದ ನಿಷ್ಠಾವಂತರಾಗಿದ್ದಾರೆ. ನಾಲ್ಕು ಬಾರಿ ಶಾಸಕ ಮತ್ತು ಒಮ್ಮೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ೫೩ ವರ್ಷದ ಪಾಟೀಲ್‌ ಅವರು ಪಕ್ಷದಲ್ಲಿ ಚಟುವಟಿಕೆಯಿಂದ ಇದ್ದಾರೆ
  2. ಸಿದ್ದರಾಮಯ್ಯ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಎಂ ಬಿ ಪಾಟೀಲ್‌, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು ವೈಯಕ್ತಿಕವಾಗಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಸಮಾಜದ ಒಂದು ವರ್ಗದಿಂದ ಪ್ರಬಲ ವಿರೋಧ ವ್ಯಕ್ತವಾದರೂ ಹಿಂದೆ ಸರಿಯದ ಪಾಟೀಲ್‌, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಲ್ಪಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಈ ಪ್ರಯತ್ನ ದೀರ್ಘಾವಧಿಯಲ್ಲಿ ಕಾಂಗ್ರೆಸ್‌ಗೆ ಅನುಕೂಲಕಾರಿಯಾಗಬಹುದು.
  3. ಹಿಂದಿನ ಸರ್ಕಾರದಲ್ಲಿ ಐದು ವರ್ಷಗಳು ನೀರಾವರಿ ಸಚಿವರಾಗಿದ್ದ ಎಂ ಬಿ ಪಾಟೀಲ್‌ ಅವರು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಆಲಮಟ್ಟಿ ಜಲಾಶಯದ ಎತ್ತರವನ್ನು ಪ್ರಸಕ್ತ ೫೧೯.೬ ರಿಂದ ೫೨೪.೨೬ ಮೀಟರ್‌ಗೆ ಹೆಚ್ಚಿಸುವ ಸಂಬಂಧ ಟ್ರಿಬ್ಯುನಲ್‌ ಆದೇಶ ನೀಡುವಂತೆ ಮಾಡುವಲ್ಲಿ ಎಂ ಬಿ ಪಾಟೀಲ್ ಶ್ರಮ ಸಾಕಷ್ಟಿದೆ. ಕಾವೇರಿ ನದಿ ನೀರು ಹಂಚಿಕೆ ಕಾನೂನು ಪ್ರಕ್ರಿಯೆಯಲ್ಲಿ ಎಂ ಬಿ ಪಾಟೀಲ್ ವಿಶೇಷ ಆಸ್ಥೆ ವಹಿಸುತ್ತಿದ್ದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.
  4. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕನಾಗಿ ಎಂ ಬಿ ಪಾಟೀಲ್‌ ಗುರುತಿಸಿಕೊಂಡಿದ್ದಾರೆ. ಬಿಜೆಪಿಗೆ ಪ್ರತಿಸ್ಪರ್ಧಿಯಾದ ಲಿಂಗಾಯತ ನಾಯಕ ಕಾಂಗ್ರೆಸ್‌ನಲ್ಲಿ ಇಲ್ಲಿ ಎನ್ನುವ ಸಂದರ್ಭದಲ್ಲಿ ಪಾಟೀಲ್‌ ಆ ಸ್ಥಾನ ಅಲಂಕರಿಸಿದ್ದಾರೆ. ರಾಜ್ಯದಲ್ಲಿ ಲಿಂಗಾಯತ ರಾಜಕಾರಣ ಒರಳು ಹಾದಿಯಲ್ಲಿರುವ ಸಂದರ್ಭದಲ್ಲಿ ಎಂ ಬಿ ಪಾಟೀಲ್‌ ಪ್ರಬಲ ನಾಯಕನಾಗಿ ಒಡಮೂಡಿದ್ದು, ಸಮುದಾಯದಲ್ಲಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
  5. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳು ದಕ್ಷಿಣ ಕರ್ನಾಟಕಕ್ಕೆ ಒಲಿದಿವೆ ಎನ್ನುವ ಚರ್ಚೆ ಚಾಲ್ತಿಯಲ್ಲಿದ್ದು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಸರಿದೂಗಿಸಲು ಎಂ ಬಿ ಪಾಟೀಲ್‌ ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ಅಚ್ಚರಿಯಿಲ್ಲ.
ಇದನ್ನೂ ಓದಿ : ಎಂ ಬಿ ಪಾಟೀಲ್ ಮನದ ಮಾತು| ಎಲ್ಲರನ್ನೂ ಒಳಗೊಳ್ಳುವುದೇ ಲಿಂಗಾಯತ ಧರ್ಮ

ಎಂಬಿಪಿ ಡಿಎಸಿಎಂ ಆಗುವುದು ಅಸಾಧ್ಯ ಎಂಬುದಕ್ಕೆ ಇಂತಿವೆ ೫ ಕಾರಣ

  1. ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ಪ್ರತಿಪಾದಿಸುವ ವರ್ಗವೊಂದು ಎಂ ಬಿ ಪಾಟೀಲ್‌ ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ಅದಕ್ಕೆ ಅಸಮಾಧಾನ ವ್ಯಕ್ತಪಡಿಸಬಹುದು. ಇದರಿಂದ ಪಕ್ಷಕ್ಕೆ ಮುಜುಗರವಾಗಬಹುದು.
  2. ಈಗಾಗಲೇ ಎಂ ಬಿ ಪಾಟೀಲ್ ಅವರಿಗೆ ನೀರಾವರಿ ಸಚಿವ ಸ್ಥಾನದ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಸೀಮಿತ ಸಚಿವ ಸ್ಥಾನಗಳನ್ನು ಅವಕಾಶ ವಂಚಿತರಿಗೆ ಕಲ್ಪಿಸುವ ಉದ್ದೇಶದಿಂದ ಪಾಟೀಲರಿಗೆ ಸಚಿವ ಸ್ಥಾನ ನೀಡದಿರಬಹುದು
  3. ಯುವ ನಾಯಕನಾದ ಪಾಟೀಲರಿಗೆ ಮುಂದಿನ ದಿನಗಳಲ್ಲಿ ರಾಜ್ಯ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜವಾಬ್ದಾರಿ ನೀಡುವ ಉದ್ದೇಶದಿಂದ ಈಗ ಅವರಿಗೆ ಸಚಿವ ಸ್ಥಾನ ನೀಡದೇ ಇರಬಹುದು.
  4. ದಲಿತ ಸಮುದಾಯದ ಜಿ ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಲಾಗಿದೆ. ಡಿ ಕೆ ಶಿವಕುಮಾರ್‌ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಈಗ ಪಕ್ಷದ ಸಂಘಟನೆಗೆ ಅವಕಾಶ ಕಲ್ಪಿಸಬಹುದೇ ಹೊರತು, ಸರ್ಕಾರದಲ್ಲಿ ಅವಕಾಶ ನೀಡುವ ಸಾಧ್ಯತೆ ಕ್ಷೀಣ.
  5. ಎಂ ಬಿ ಪಾಟೀಲ್‌ಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿದ್ದೇ ಆದರೆ ಜೆಡಿಎಸ್‌ ಬೇರೆಯ ರೀತಿಯಲ್ಲಿ ಒತ್ತಡ ನೀತಿ ಅನುಸರಿಸುವ ಸಾಧ್ಯತೆ ಇರುವುದರಿಂದ ಈ ತೀರ್ಮಾನಕ್ಕೆ ಕಾಂಗ್ರೆಸ್‌ ಮುಂದಾಗುವ ಸಾಧ್ಯತೆ ಕ್ಷೀಣ. ಅಷ್ಟಾಗಿಯೂ ಎಂ ಬಿ ಪಾಟೀಲ್‌ ಅವರನ್ನು ಡಿಸಿಎಂ ಮಾಡಿದರೆ ನಿಗಮ ಮತ್ತು ಮಂಡಳಿಗಳನ್ನು ಹೆಚ್ಚಾಗಿ ತಮಗೆ ಬಿಟ್ಟುಕೊಡುವಂತೆ ಜೆಡಿಎಸ್‌ ಒತ್ತಡ ಹೇರಬಹುದು. ಈಗಾಗಲೇ ೨/೩ರಷ್ಟು ನಿಗಮ ಮತ್ತು ಮಂಡಳಿಗಳು ಕಾಂಗ್ರೆಸ್‌ಗೆ, ೧/೩ರಷ್ಟು ಜೆಡಿಎಸ್‌ಗೆ ಒಂದು ತೀರ್ಮಾನವಾಗಿದೆ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More