ಗ್ರಾಮಬಂಧಿ ಹೋರಾಟ ಮರೆತ ರಾಜ್ಯ ರೈತರು ಅಪೂರ್ವ ಅವಕಾಶ ಕೈಚೆಲ್ಲಿದರೇ?

ರಾಜ್ಯದಲ್ಲಿ ಸಾಲ ಮನ್ನಾ ಹೊರತುಪಡಿಸಿ ರೈತರಿಗೆ ಇತರ ಬೇಡಿಕೆಗಳೇ ಇಲ್ಲವೇ? ಕೃಷಿ ಬೆಲೆ ಆಯೋಗದ ವರದಿ ಅನುಷ್ಠಾನ, ಮಾರುಕಟ್ಟೆ ವ್ಯವಸ್ಥೆ, ಭೂಮಿ ಹಕ್ಕು, ಕೃಷಿಕಾರ್ಮಿಕರ ಅಳಲು, ಹೀಗೆ ಸಾಲು-ಸಾಲು ಬಿಕ್ಕಟ್ಟುಗಳಿದ್ದರೂ ಗ್ರಾಮಬಂಧಿ ಹೋರಾಟದಿಂದ ರೈತ ಸಂಘಟನೆಗಳು ದೂರ ಉಳಿದಿದ್ದೇಕೆ?

ಮಧ್ಯಪ್ರದೇಶದ ಮಂಡಸೂರಿನಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಅಲ್ಲಿನ ಪೊಲೀಸರು ಹಾರಿಸಿದ ಹಾರಿಸಿದ ಗುಂಡಿಗೆ ಆರು ಮಂದಿ ಅನ್ನದಾತರು ಬಲಿಯಾಗಿ ಜೂನ್ ೬ಕ್ಕೆ ವರ್ಷ ಕಳೆಯಿತು. ಮಂಡಸೂರಿನ ಹುತಾತ್ಮ ರೈತರ ಸಾವಿನೊಂದಿಗೆ ತೀವ್ರಗೊಂಡ ರೈತ ಚಳವಳಿ ಮಧ್ಯಪ್ರದೇಶದೊಂದಿಗೆ ಮಹಾರಾಷ್ಟ್ರ, ರಾಜಸ್ಥಾನ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ, ಗುಜರಾತ್‌ಗಳಿಗೂ ವ್ಯಾಪಿಸಿದ್ದು, ಕಳೆದ ಒಂದು ವರ್ಷದಿಂದ ಆ ಮಧ್ಯ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ರೈತ ಹೋರಾಟ, ಚಳವಳಿಗಳು ನಿರಂತರವಾಗಿವೆ.

ಕೆಲವು ತಿಂಗಳ ಹಿಂದೆ ನಾಸಿಕ್‌ನಿಂದ ಮುಂಬೈವರೆಗೆ ಸುಮಾರು ೨೦೦ ಕಿಮೀ ಪಾದಯಾತ್ರೆ ನಡೆಸಿದ ಲಕ್ಷಾಂತರ ರೈತರು, ಇಡೀ ಮುಂಬೈ ಮಹಾನಗರವನ್ನು ಬೆಚ್ಚಿಬೇಳಿಸಿದ್ದರು. ರೈತರ ಆ ಐತಿಹಾಸಿಕ ಹೋರಾಟದ ಬಳಿಕ ಇದೀಗ ಮತ್ತೊಮ್ಮೆ ರೈತ ಸಮೂಹ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜೂ.೧ರಿಂದ ಆರಂಭಿಸಿರುವ ‘ಗ್ರಾಮ್‌ ಬಂಧಿ’ ಚಳವಳಿ ಇದೀಗ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಹತ್ತು ದಿನಗಳ ಹೋರಾಟ, ಇನ್ನೇನು ಎರಡು ದಿನದಲ್ಲಿ ಮುಕ್ತಾಯ ಕಾಣಲಿದೆ. ಗ್ರಾಮಗಳಿಂದ ನಗರಕ್ಕೆ ಸರಬರಾಜಾಗುವ ಹಾಲು, ತಾಜಾ ತರಕಾರಿ, ಹಣ್ಣು-ಹಂಪಲುಗಳನ್ನು ಸಂಪೂರ್ಣ ತಡೆ ಹಿಡಿಯುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡುವುದು ಈ ಗ್ರಾಮಬಂಧಿ ಹೋರಾಟದ ಉದ್ದೇಶ.

ಆದರೆ, ಎಂಟು ದಿನಗಳ ಬಳಿಕವೂ, ಐದಕ್ಕೂ ಹೆಚ್ಚು ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಆಯಾ ರಾಜ್ಯ ಸರ್ಕಾರಗಳಾಗಲೀ, ಕೇಂದ್ರ ಸರ್ಕಾರವಾಗಲೀ ಯಾವ ಸ್ಪಂದನೆಯನ್ನೂ ನೀಡಿಲ್ಲ. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್‌ ಮತ್ತು ಹರ್ಯಾಣಗಳಲ್ಲಿ ರೈತ ಹೋರಾಟದ ಪರಿಣಾಮದಿಂದಾಗಿ ನಗರಗಳಲ್ಲಿ ಹಣ್ಣು-ತರಕಾರಿಗಳ ಬೆಲೆ ಗಗನಕ್ಕೇರಿದೆ. ಹಾಲು ಕೂಡ ದುಬಾರಿಯಾಗಿದೆ. ಆದರೆ, ಪಂಜಾಬ್‌ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಈ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ರಾಜ್ಯ ಸರ್ಕಾರಗಳಾಗಲೀ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಾಗಲೀ ರೈತರ ಬೇಡಿಕೆಗಳಿಗೆ ಕನಿಷ್ಟ ಸ್ಪಂದನೆಯನ್ನೂ ನೀಡಿಲ್ಲ.

ಈ ನಡುವೆ, ರೈತ ಸಂಘಟನೆಗಳ ನಡುವಿನ ಒಡಕಿನ ಕಾರಣದಿಂದಲೂ ಕೆಲವು ರಾಜ್ಯಗಳಲ್ಲಿ ಗ್ರಾಮಬಂಧಿ ಚಳವಳಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಆದರೆ, ಇವತ್ತಿನ ಕೃಷಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮತ್ತು ರೈತರಿಗೆ ಕನಿಷ್ಠ ಆದಾಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನಡೆದ ದೇಶದ ಪ್ರಮುಖ ರಾಜ್ಯಗಳಲ್ಲಿ ನಡೆದ ಈ ಹೋರಾಟದಲ್ಲಿ ರೈತ ಹೋರಾಟದ ಮೂಲಕ ಒಂದು ಕಾಲದಲ್ಲಿ ಇಡೀ ದೇಶದ ಗಮನ ಸೆಳೆದ ಕರ್ನಾಟಕದ ರೈತರು ಯಾಕೆ ಭಾಗಿಯಾಗಿಲ್ಲ? ರೈತ ಚಳವಳಿಯ ತವರು ನೆಲದಲ್ಲಿ ಯಾಕೆ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಮಹತ್ವದ ಒಂದು ದೇಶವ್ಯಾಪಿ ರೈತ ಚಳವಳಿಗೆ ಯಾವ ಸ್ಪಂದನೆಯೂ ಸಿಕ್ಕಿಲ್ಲ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿವೆ.

ಆ ಹಿನ್ನೆಲೆಯಲ್ಲಿ ನೋಡಿದರೆ, ಗ್ರಾಮಬಂಧಿ ಚಳವಳಿಯ ಹಿಂದೆ ಇರುವುದು ಯಾವುದೋ ಒಂದೆರಡು ರೈತ ಸಂಘಟನೆಗಳೇನೂ ಅಲ್ಲ. ಸಿಪಿಐ(ಎಂ)ನ ಸಹಸಂಘಟನೆ ಅಖಿಲ ಭಾರತೀಯ ಕಿಸಾನ್ ಸಭಾದ ನೇತೃತ್ವದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಂಚಾಲನಾ ಸಮಿತಿ (ಎಐಕೆಸಿಸಿ) ನೇತೃತ್ವದಲ್ಲಿ ಈ ಗ್ರಾಮಬಂಧಿ ಹೋರಾಟ ನಡೆಯುತ್ತಿದೆ. ಎಂ ಎಸ್‌ ಸ್ವಾಮಿನಾಥನ್ ಸಮಿತಿ ವರದಿ ಜಾರಿ, ಕೃಷಿ ಸಾಲ ಸಂಪೂರ್ಣ ಮನ್ಣಾ, ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಬಾಕಿ ಮನ್ನಾ, ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆ ನಿಗದಿ, ಬುಡಕಟ್ಟು ಮತ್ತು ಇತರೆ ಅರಣ್ಯವಾಸಿಗಳ ಕಾಯ್ದೆ-೨೦೦೬ರ ಪರಿಣಾಮಕಾರಿ ಜಾರಿ ಹಾಗೂ ಕೃಷಿಕರು ಮತ್ತು ಕೃಷಿ ಕೂಲಿಗಳಿಗೆ ಮಾಸಿಕ ಕನಿಷ್ಠ ಪಿಂಚಣಿಗೆ ಆಗ್ರಹಿಸಿ ಈ ಹೋರಾಟ ನಡೆಸಲಾಗುತ್ತಿದೆ.

ಈ ಎಲ್ಲ ಬೇಡಿಕೆಗಳು ಕರ್ನಾಟಕದ ರೈತರವೂ ಹೌದು. ದಶಕಗಳಿಂದ ಬಹುತೇಕ ಇದೇ ಬೇಡಿಕೆಗಳನ್ನು (ಪಂಪ್‌ಸೆಟ್‌ ವಿದ್ಯುತ್‌ ಬಾಕಿ ಮನ್ಣಾ ಹೊರತುಪಡಿಸಿ) ಮುಂದಿಟ್ಟುಕೊಂಡು ಇಲ್ಲಿನ ವಿವಿಧ ರೈತ ಸಂಘಟನೆಗಳು, ರಾಜ್ಯ ರೈತ ಸಂಘದ ವಿವಿಧ ಬಣಗಳು ಹೋರಾಟಗಳನ್ನು ನಡೆಸುತ್ತಲೇ ಬಂದಿವೆ. 1980ರ ದಶಕದಲ್ಲಿ ಗ್ರಾಮಬಂಧಿಯ ಮೂಲಕ ಸಂಪೂರ್ಣ ಕೃಷಿ ಉತ್ಪನ್ನಗಳನ್ನು ನಗರಕ್ಕೆ ಹೋಗದಂತೆ ತಡೆದು ರಾಜ್ಯ ರೈತ ಸಂಘ, ಮೂರು ದಿನಗಳ ಕಾಲ ರಾಜ್ಯದ ನಗರಜೀವನವನ್ನು ಅಲ್ಲೋಲಕಲ್ಲೋಲ ಮಾಡಿತ್ತು. ಇದೀಗ ರಾಷ್ಟ್ರಮಟ್ಟದಲ್ಲಿ ಅಂಥದ್ದೊಂದು ಸಂಘಟಿತ ಹೋರಾಟ ನಡೆಯುತ್ತಿರುವಾಗ ರಾಜ್ಯದ ರೈತ ಸಂಘಟನೆಗಳು ಮೌನಕ್ಕೆ ಜಾರಿರುವುದರ ಹಿಂದಿನ ಕಾರಣವೇನು? ಎಂಬುದು ಸರಳ ಉತ್ತರವಿರದ ಪ್ರಶ್ನೆಯಾಗಿದೆ.

ಆದರೂ, ಕೆಲವು ರೈತ ನಾಯಕ ಪ್ರಕಾರ, ರಾಜ್ಯದಲ್ಲಿ ಇದೀಗ ತಾನೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿದೆ. ಅಲ್ಲದೆ, ಸ್ವತಃ ಮುಖ್ಯಮಂತ್ರಿಗಳೇ ಸಾಲ ಮನ್ನಾದ ಭರವಸೆ ನೀಡಿದ್ದಾರೆ. ರೈತರ ಬೆಳೆಗೆ ವೈಜ್ಞಾನಿಕ ದರ ನಿಗದಿಯ ಭರವಸೆಯನ್ನೂ ನೀಡಿದ್ದಾರೆ. ಹಾಗಿರುವಾಗ, ಅಖಿಲ ಭಾರತ ಮಟ್ಟದಲ್ಲಿ ನೀಡಿರುವ ಗ್ರಾಮ ಬಂಧಿಗೆ ಓಗೊಟ್ಟು ದಿಢೀರ್ ಚಳವಳಿ ನಡೆಸಿದರೆ, ಸರ್ಕಾರದ ಭರವಸೆಯ ಮಾತನ್ನು ಮೀರಿ ಹೋದಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಸದ್ಯ ಕಾದುನೋಡಲು ರೈತ ಸಂಘಟನೆಗಳು ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ರಾಜ್ಯ ನೂತನ ಸರ್ಕಾರ ಎಷ್ಟರಮಟ್ಟಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತದೆ ಎಂಬುದರ ಮೇಲೆ ಇಂತಹ ತೀವ್ರ ಹೋರಾಟಗಳನ್ನು ನಿರ್ಧರಿಸಲಾಗುವುದು.

ಸಿಪಿಐಎಂ ಮುಖಂಡ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ಟಿ ಎಲ್ ಕೃಷ್ಣೇಗೌಡ ಅವರು ‘ದಿ ಸ್ಟೇಟ್’‌ನೊಂದಿಗೆ ಮಾತನಾಡಿ, “ಇದೊಂದು ಸಾಮೂಹಿಕ ರೈತ ಚಳವಳಿ. ಹಲವು ರೈತ ಸಂಘಟನೆಗಳ ಒಕ್ಕೂಟವಾದ ಎಐಕೆಸಿಸಿ ನೇತೃತ್ವದಲ್ಲಿ ಗ್ರಾಮಬಂಧಿ ಹೋರಾಟವನ್ನು ನಿರ್ಧರಿಸಲಾಗಿದ್ದು, ರಾಜ್ಯದಲ್ಲಿಯೂ ಮುಂದಿನ ದಿನಗಳಲ್ಲಿ ಈ ಹೋರಾಟಕ್ಕೆ ಚಾಲನೆ ನೀಡಲು ಜೂ.೬ರಂದು ಮಂಡಸೂರು ಹುತಾತ್ಮ ರೈತರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ತೀರ್ಮಾನಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಸಮಯ ಕೊಡುವ ಉದ್ದೇಶದಿಂದ ಈಗ ಈ ಹೋರಾಟದಲ್ಲಿ ಕೈಜೋಡಿಸಲಾಗಿಲ್ಲ,” ಎಂದು ಸ್ಪಷ್ಟನೆ ನೀಡಿದರು.

ಅಲ್ಲದೆ, ರಾಜ್ಯ ರೈತ ಸಂಘದ ಹಿರಿಯ ಮುಖಂಡ ಕೆ ಟಿ ಗಂಗಾಧರ್ ಅವರು ಮಾತನಾಡಿ, “ಕೃಷಿ ಸಾಲ ಮನ್ನಾ ವಿಷಯದಲ್ಲಿ ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರವೇ ಕೇಂದ್ರಕ್ಕೆ ವರದಿ ನೀಡಿದೆ. ಆ ವರದಿಯ ಪ್ರಕಾರವೇ ಕೇಂದ್ರ ಸರ್ಕಾರವೇ ಅನುದಾನ ಬಿಡುಗಡೆ ಮಾಡಿತ್ತು. ಹಾಗಿದ್ದರೆ, ಸರ್ಕಾರವೇ ಬರಗಾಲವಿದೆ, ರೈತರು ಸಂಕಷ್ಟದಲ್ಲಿದ್ದಾರೆ ಎಂಬುದನ್ನು ಒಪ್ಪಿಕೊಂಡಂತಾಯಿತು. ಹಾಗಿದ್ದರೂ ಸಾಲ ಮನ್ನಾಕ್ಕೆ ಏಕೆ ಮೀನಾಮೇಷ? ಆ ಹಿನ್ನೆಲೆಯಲ್ಲಿ ನಾವು ರೈತರು ಕಾಯುತ್ತಿದ್ದೇವೆ. ಮುಖ್ಯಮಂತ್ರಿಗಳ ನಿರ್ಧಾರದ ಬಳಿಕ ನಾವು ರಾಜ್ಯದಲ್ಲಿ ಯಾವ ಮಟ್ಟಿಗಿನ ಹೋರಾಟ ನಡೆಸುತ್ತೇವೆ ಎಂಬುದನ್ನು ಕಾದುನೋಡಿ,” ಎಂದು ರೈತ ಸಂಘಟನೆಗಳ ನಿರ್ಧಾರಕ್ಕೆ ಕಾರಣ ನೀಡಿದರು.

ಇದನ್ನೂ ಓದಿ : ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲ ೭೧,೬೫೦ ಕೋಟಿ ರುಪಾಯಿ!

ಮತ್ತೆ ಕೆಲವರ ಪ್ರಕಾರ, ನಗರ ಮತ್ತು ಗ್ರಾಮೀಣ ಜನತೆಯ ನಡುವೆ ಕಂದಕ ಸೃಷ್ಟಿಸುವ, ನಗರ ಜನರನ್ನು ರೈತ ಸಮುದಾಯದ ವಿರುದ್ಧ ಕೆರಳಿಸುವ ಗ್ರಾಮಬಂಧಿಯಂತಹ ಹೋರಾಟ ತಾತ್ವಿಕವಾಗಿ ಸರಿಯಾದ ಕ್ರಮವಲ್ಲ. ಶಾಂತಿಯುತ ಮತ್ತು ಪ್ರಜಾಸತ್ಮಾತ್ಮಕ ರೀತಿಯ ಹೋರಾಟದ ಮೂಲಕವೇ ರೈತರು ಈವರೆಗೆ ತಮ್ಮ ಚಳವಳಿಯನ್ನು ರಾಜ್ಯದಲ್ಲಿ ಕಟ್ಟಿಬೆಳೆಸಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಚಳವಳಿಯಿಂದ ದೂರ ಉಳಿಯಲು ಕೆಲವು ರೈತ ಸಂಘಟನೆಗಳು ಪ್ರಜ್ಞಾಪೂರ್ವಕವಾಗೇ ನಿರ್ಧರಿಸಿವೆ.

ರಾಷ್ಟ್ರಮಟ್ಟದಲ್ಲಿ ಕೂಡ ಜೈ ಕಿಸಾನ್ ಆಂದೋಲನ ಸೇರಿದಂತೆ ಎಐಕೆಎಸ್‌ಸಿಸಿ ಒಕ್ಕೂಟದಲ್ಲಿ ಇರುವ ಹಲವು ಸಂಘಟನೆಗಳು ಗ್ರಾಮ ಬಂಧಿ ಹೋರಾಟದಿಂದ ದೂರ ಉಳಿದಿವೆ. ಆ ಕಾರಣದಿಂದಾಗಿಯೇ ಆರಂಭದಲ್ಲಿ ಸಂಘಟನೆಯ ನಾಯಕರು ಹೇಳಿದಂತೆ, ದೇಶದ ೨೦ ರಾಜ್ಯಗಳ ಬದಲಿಗೆ ಇದೀಗ ಕೇವಲ ೪-೫ ರಾಜ್ಯಗಳಲ್ಲಿ ಮಾತ್ರ ಗ್ರಾಮಬಂಧಿ ಚಳವಳಿ ಭಾಗಶಃ ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂಬ ಮಾತುಗಳೂ ರೈತ ಸಂಘಟನೆಗಳಿಂದ ಕೇಳಿಬಂದಿದೆ.

ಒಟ್ಟಾರೆ, ಭಾರಿ ನಿರೀಕ್ಷೆ ಹುಟ್ಟಿಸಿದ್ದ, ಮಹಾರಾಷ್ಟ್ರ ರೈತರ ಮಹಾಪಾದಯಾತ್ರೆಯಂತಹ ಭಾರಿ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದ್ದ ಗ್ರಾಮ ಬಂಧಿ ಚಳವಳಿ ರೈತ ಸಂಘಟನೆಗಳ ನಡುವಿನ ತಾತ್ವಿಕ ಭಿನ್ನಾಭಿಪ್ರಾಯ, ವಿವಿಧ ರಾಜ್ಯಗಳ ಸ್ಥಳೀಯ ರಾಜಕೀಯ ಪರಿಸ್ಥಿತಿ ಮುಂತಾದ ಕಾರಣಗಳಿಂದಾಗಿ ಸದ್ಯಕ್ಕೆ ನಿರೀಕ್ಷಿತ ಫಲ ಕೊಟ್ಟಿಲ್ಲ. ಪ್ರಮುಖವಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ಕಡೆ ಸಿಪಿಐಎಂನಂತ ಎಡಪಕ್ಷಗಳ ರೈತ ಸಂಘಟನೆಗಳು ಹೋರಾಟವನ್ನು ಮುಂದುವರಿಸಿದ್ದು, ಆ ಪಕ್ಷಗಳ ರೈತ ಘಟಕಗಳು ಹೊಂದಿರುವ ವ್ಯಾಪಕ ನೆಲೆಯ ಹಿನ್ನೆಲೆಯಲ್ಲಿ ಚಳವಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ, ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರೈತ ಸಂಘಟನೆಯ ಪರಿಸ್ಥಿತಿ ಬೇರೆಯೇ ಇದೆ. ಈ ಅಂಶ ಕೂಡ ಚಳವಳಿ ವ್ಯಾಪಕ ಪರಿಣಾಮ ಬೀರುವಲ್ಲಿ ವಿಫಲವಾಗಲು ಒಂದು ಕಾರಣ.

ರೈತ ಸಾಲ ಮನ್ನಾದಂತಹ ಕೆಲವು ರೈತರಿಗೆ ಅನುಕೂಲವಾಗುವ ಕ್ರಮಗಳ ಹೊರತಾಗಿ ಹೊಸ ಸರ್ಕಾರ, ತಕ್ಷಣಕ್ಕೆ ಗಮನ ಹರಿಸಬೇಕಾದ ಹಲವು ರೈತ ಸಂಬಂಧಿ ವಿಷಯಗಳಿವೆ. ಆ ಪೈಕಿ ಮುಖ್ಯವಾದುದು ಹಿಂದಿನ ಸರ್ಕಾರದ ಅವಧಿಯಲ್ಲಿ ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಅವರ ನೇತೃತ್ವದ ಕೃಷಿ ಬೆಲೆ ಆಯೋಗ ನೀಡಿರುವ ವರದಿಯ ಅನುಷ್ಠಾನ. ಆ ಮೂಲಕ, ಕೃಷಿಕರ ಬೆಲೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಅಲ್ಲದೆ, ನೀರಾವರಿ, ಪೋಡಿ, ಇನಾಂ, ಬಗರ್‌ಹುಕುಂ, ಅರಣ್ಯಹಕ್ಕು ಕಾಯ್ದೆಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಿ, ಆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕೃಷಿ ಪರಿಕರ ಸೇರಿದಂತೆ ಕೃಷಿ ಸಂಬಂಧಿತ ಸಬ್ಸಿಡಿ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವ ಮೂಲಕ ಉದ್ಯಮಿ-ವ್ಯಾಪಾರಿಗಳ ಬದಲು ರೈತರ ಹಿತ ಕಾಯಬೇಕಿದೆ. ಆದರೆ, ಇಷ್ಟೆಲ್ಲ ವಿಷಯಗಳಿದ್ದರೂ ರೈತ ಸಂಘಟನೆಗಳು ಇಂತಹ ತಳಮಟ್ಟದ ನೈಜ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ ಗಟ್ಟಿ ಹೋರಾಟ ಕಟ್ಟುವ ಅವಕಾಶವನ್ನು ಇದೀಗ ಕೈಚೆಲ್ಲಿವೆ ಅನಿಸುವುದಿಲ್ಲವೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More