ಎಂಬಿಪಿಯಿಂದ ಡಿಸಿಎಂ ಸ್ಥಾನಕ್ಕೆ ಪಟ್ಟು; ಬಂಡಾಯ ಶಮನಕ್ಕೆ ನಾಯಕರ ಸಾಹಸ

ಸಚಿವ ಸ್ಥಾನದಿಂದ ವಂಚಿತರಾಗಿರುವ ಎಂ ಬಿ ಪಾಟೀಲ್‌, ಅತೃಪ್ತ ಶಾಸಕರನ್ನು ಸೇರಿಸಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಯಾರ ಮನವೊಲಿಕೆಗೂ ಜಗ್ಗದ ಅವರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್‌ ಬುಲಾವ್‌ ನೀಡಿದೆ ಎನ್ನಲಾಗಿದೆ. ಇತ್ತ, ಸಿದ್ದರಾಮಯ್ಯ ಅವರನ್ನು ಸಂಧಾನದ ಕಣಕ್ಕೆ ಇಳಿಸಲಾಗಿದೆ

ಸಮ್ಮಿಶ್ರ ಸರ್ಕಾರದಲ್ಲಿ ಸಚುವ ಸ್ಥಾನ ಸಿಗದೆ ಬಂಡಾಯವೆದ್ದಿರುವ ಕಾಂಗ್ರೆಸ್‌ನ‌ ಅತೃಪ್ತ ನಾಯಕರು ನೇರ ಮತ್ತು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ವಿರುದ್ಧ ತಿರುಗಿಬಿದ್ದಿರುವ ನಾಯಕರ ಮನವೊಲಿಸುವ ಪ್ರಯತ್ನವನ್ನು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಮಾಡಿ ಹಿನ್ನಡೆ ಅನುಭವಿಸಿದ್ದಾರೆ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಎಂ ಬಿ ಪಾಟೀಲ್‌ ಮನೆಗೆ ತೆರಳಿ ಮಾತನಾಡುವ ಯತ್ನ ಮಾಡಿದರು. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌, ಚುನಾವಣೆಯಲ್ಲಿ ಗೆದ್ದ ನಂತರ ಬಾದಾಮಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಲು ಕ್ಷೇತ್ರ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿಗೆ ಮರಳಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದೆ. ಹೈಕಮಾಂಡ್‌ ಸೂಚನೆಯಂತೆ ಸಿದ್ದರಾಮಯ್ಯ ಅವರು ಎರಡೇ ದಿನಕ್ಕೆ ಪ್ರವಾಸ ಮೊಟಕುಗಳಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಇತ್ತ, ಎರಡನೇ ದಿನವೂ ಎಂ ಬಿ ಪಾಟೀಲ್‌ ಹಾಗೂ ಎಚ್‌ ಕೆ ಪಾಟೀಲ್‌ ಅವರ ಮನೆಯಲ್ಲಿ ಸರಣಿ ಸಭೆಗಳು ನಡೆದಿವೆ. ಎಂ ಬಿ ಪಾಟೀಲ್‌ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ವಿವಿಧ ರೀತಿಯಲ್ಲಿ ಒತ್ತಡ ಹೇರುವ ಪ್ರಯತ್ನ ಮುಂದುವರಿಸಿದ್ದಾರೆ. ಬಂಡಾಯ ಶಾಸಕರು ಬಲಪ್ರದರ್ಶನ ಮಾಡುವ ಮೂಲಕ ಸರ್ಕಾರ ಉರುಳಿಸುವ ಆತಂಕ ಸೃಷ್ಟಿಸಿದ್ದಾರೆ. ಇಡೀ ದಿನ ಬೆಂಗಳೂರಿನ ಸದಾಶಿವನಗರದಲ್ಲಿರುವ ಎಂ ಬಿ ಪಾಟೀಲ್‌ ಹಾಗೂ ಕ್ರಿಸೆಂಟ್ ರಸ್ತೆಯಲ್ಲಿರುವ ಎಚ್‌ ಕೆ ಪಾಟೀಲ್‌ ಅವರ ಮನೆಗಳು ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದವು. ಹೈಕಮಾಂಡ್‌ ಸೂಚನೆ ಮೇರೆಗೆ ಎಂ ಬಿ ಪಾಟೀಲ್‌ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಶುಕ್ರವಾರ ನಡೆದ ಪ್ರಮುಖ ಬೆಳವಣಿಗೆಗಳು ಇಂತಿವೆ.

ಇದನ್ನೂ ಓದಿ : ಎಂ ಬಿ ಪಾಟೀಲರ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಎಷ್ಟು ವಾಸ್ತವ?
  • ಎಂ ಬಿ ಪಾಟೀಲ್‌ ಜೊತೆ ಸಚಿವರಾದ ಆರ್‌ ವಿ ದೇಶಪಾಂಡೆ ಹಾಗೂ ಡಿ ಕೆ ಶಿವಕುಮಾರ್‌ ಮಾತುಕತೆ. ಮೂರು ದಿನಗಳ ಅಂತರದಲ್ಲಿ ಡಿ ಕೆ ಶಿವಕುಮಾರ್‌ ಎರಡನೇ ಬಾರಿಗೆ ಎಂ ಬಿ ಪಾಟೀಲ್‌ ಮನೆಗೆ ತೆರಳಿ ಮನವೊಲಿಸುವ ಯತ್ನ.
  • ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರಿಂದ ಎಂ ಬಿ ಪಾಟೀಲ್‌ ಮನವೊಲಿಕೆ ಯತ್ನ. ನಂತರ ಎಚ್‌ ಕೆ ಪಾಟೀಲ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಪರಮೇಶ್ವರ್‌.
  • ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಂದ ಸತೀಶ್ ಜಾರಕಿಹೊಳಿ ಭೇಟಿ, ಮಾತುಕತೆ.
  • ಎಂ ಬಿ ಪಾಟೀಲ್‌ ಮನೆಗೆ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಭೇಟಿ, ಚರ್ಚೆ.
  • ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂ ಬಿ ಪಾಟೀಲ್‌ ನೇತೃತ್ವದಲ್ಲಿ ಅತೃಪ್ತ ಶಾಸಕರ ಸಭೆ. ಸತೀಶ ಜಾರಕಿಹೊಳಿ, ಎಂಟಿಬಿ ನಾಗರಾಜ್‌, ರಘುಮೂರ್ತಿ, ರೋಷನ್‌ ಬೇಗ್, ಸಂಗಮೇಶ್‌, ತುಕಾರಾಂ, ಬಿ ನಾಗೇಂದ್ರ, ವಿ ಮುನಿಯಪ್ಪ, ಎನ್‌ ಎ ಹ್ಯಾರಿಸ್‌, ಸುಧಾಕರ್‌, ಬಿ ಸಿ ಪಾಟೀಲ್‌, ಈಶ್ವರ್‌ ಖಂಡ್ರೆ, ಸಿ ಎಸ್‌ ಶಿವಳ್ಳಿ, ಟಿ ಪಿ ಪರಮೇಶ್ವರ ನಾಯ್ಕ್‌, ಭೀಮಾ ನಾಯ್ಕ್‌, ಎಚ್‌ ಎಂ ರೇವಣ್ಣ ಸಭೆಯಲ್ಲಿ ಭಾಗಿ. ಮಾಜಿ ಸಚಿವ ಎಚ್‌ ಸಿ ಮಹದೇವಪ್ಪ, ಎಂಟಿಬಿ ನಾಗರಾಜ್‌ ಅವರಿಂದ ಎಂ ಬಿ ಪಾಟೀಲ್ ಪ್ರತ್ಯೇಕ ಭೇಟಿ ಮತ್ತು ಚರ್ಚೆ.
ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ಅಯ್ಯಪ್ಪನ ಸನ್ನಿಧಾನದಲ್ಲಿ ಹಿಂಸಾಚಾರ; ಮಹಿಳೆಯರ ಪ್ರವೇಶಕ್ಕೆ ಅಡ್ಡಿ
ಲೈಂಗಿಕ ಶೋಷಣೆ ಆರೋಪ; ಕೊನೆಗೂ ರಾಜೀನಾಮೆ ಕೊಟ್ಟ ಕೇಂದ್ರ ಸಚಿವ ಎಂ ಜೆ ಅಕ್ಬರ್‌
Editor’s Pick More