ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು  

ನೀವು ನೋಡಲಿರುವ ಇಂದಿನ ಪ್ರಮುಖ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಸುದ್ದಿಗಳ ಸಂಕ್ಷಿಪ್ತ ನೋಟ  

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ

ವಿಧಾನ ಪರಿಷತ್‌ ಪದವೀಧರ ಕ್ಷೇತ್ರದ ಮೂರು ಮತ್ತು ಶಿಕ್ಷಕರ ಕ್ಷೇತ್ರದ ಮೂರು ಸ್ಥಾನಗಳಿಗೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂ.12ರಂದು ಮತಎಣಿಕೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಲ್ಲದೆ, ಪಕ್ಷೇತರರಾಗಿ ಹೈಕ ಹೋರಾಟಗಾರ ರಜಾಕ್ ಉಸ್ತಾದ್, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಮತ್ತಿತರರು ಸ್ಪರ್ಧಾ ಕಣದಲ್ಲಿದ್ದಾರೆ.

ದುನಿಯಾ ವಿಜಯ್ ನಿರೀಕ್ಷಣಾ ಜಾಮೀನು ತೀರ್ಪು

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಟ ದುನಿಯಾ ವಿಜಯ್ ಹಾಗೂ ನಿರ್ಮಾಪಕ ಸುಂದರ್‌ಗೌಡ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ. ನಗರದ 65ನೇ ಸೆಷನ್ಸ್ ಕೋರ್ಟ್‌ನಲ್ಲಿ ಅಂತಿಮ ತೀರ್ಪು ಪ್ರಕಟವಾಗಲಿದೆ. ‘ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂದರ್ ಪಿ ಗೌಡ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಪರಿಣಾಮ, ರಾಮನಗರದ ಜೆಎಂಎಫ್‌ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ, ಸುಂದರ್‌ ಗೌಡ ಅವರನ್ನು ವಶಕ್ಕೆ ಪಡೆಯಲು ಬಂದಿದ್ದ ಪೊಲೀಸರಿಗೆ ದುನಿಯಾ ವಿಜಯ್ ತಡೆಯೊಡ್ಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಫೈನಲ್‌ಗಾಗಿ ನಡಾಲ್-ಪೊಟ್ರೊ ಪೈಪೋಟಿ

ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಶುಕ್ರವಾರ (ಜೂನ್ ೮) ನಡೆಯಲಿದ್ದು, ಫೈನಲ್‌ಗಾಗಿ ಪೈಪೋಟಿ ನಡೆಯಲಿದೆ. ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ೧೧ನೇ ಪ್ರಶಸ್ತಿಗಾಗಿ ಸೆಣಸುತ್ತಿರುವ ವಿಶ್ವದ ನಂ.೧ ಆಟಗಾರ ನಡಾಲ್, ಅರ್ಜೆಂಟೀನಾ ಆಟಗಾರ ಪೊಟ್ರೊ ಎದುರು ಪ್ರಬಲ ಪ್ರತಿರೋಧ ಎದುರಿಸುವ ಸಂಭವವಿದೆ. ಸಂಜೆ ೪.೩೦ರಿಂದಲೇ ಶುರುವಾಗಲಿರುವ ಇಂದಿನ ಫ್ರೆಂಚ್ ಸೆಮಿಫೈನಲ್‌ ಪಂದ್ಯಗಳಲ್ಲಿ ನಡಾಲ್-ಪೊಟ್ರೊ ಪಂದ್ಯವೇ ಪ್ರಧಾನ ಆಕರ್ಷಣೆಯಾಗಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಆಸ್ಟ್ರಿಯಾದ ಡಾಮಿನಿಕ್ ಥೀಮ್ ಮತ್ತು ಇಟಲಿಯ ಮಾರ್ಕೊ ಸೆಚಿನ್ಯಾಟೊ ನಡುವಣದ ಪಂದ್ಯವೂ ಮಹತ್ವಪೂರ್ಣವಾಗಿದೆ.

ಇಂದಿನಿಂದ ₹29ಕ್ಕಿಂತ ಕಡಿಮೆ ದರಕ್ಕೆ ಸಕ್ಕರೆ ಮಾರುವಂತಿಲ್ಲ!

ಸಕ್ಕರೆಗೆ ಮಾರಾಟ ದರ ನಿಗದಿ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ಕಾರ್ಖಾನೆಪೂರ್ವ ಸಕ್ಕರೆ ದರ ಕನಿಷ್ಟ 29 ರುಪಾಯಿ ಇರಬೇಕು. ಇದಕ್ಕಿಂತ ಕಡಮೆ ದರಕ್ಕೆ ಯಾವುದೇ ಕಾರ್ಖಾನೆಯು ಸಕ್ಕರೆ ಮಾರಾಟ ಮಾಡುವಂತಿಲ್ಲ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಈ ನಿರ್ಧಾರಕ್ಕೆ ಅನುಮೋದನೆ ನೀಡಿದೆ. ಆಹಾರ ಸಚಿವಾಲಯವು ಪ್ರತ್ಯೇಕವಾಗಿ ಸಕ್ಕರೆ ದರ (ನಿಯಂತ್ರಣ) ಆದೇಶ 2018 ಹೊರಡಿಸಿದೆ. ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸುವ, ದಾಖಲೆ ಪರಿಶೀಲಿಸುವ, ಜಪ್ತಿ ಮಾಡುವ ಅಧಿಕಾರ ಸಚಿವಾಲಯಕ್ಕೆ ಇರುತ್ತದೆ. ಸಕ್ಕರೆ ಕನಿಷ್ಠ ದರವನ್ನು ಸಕ್ಕರೆ ಉತ್ಪಾದನಾ ವೆಚ್ಚ ಆಧರಿಸಿ ನಿಗದಿ ಮಾಡಲಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ ಸಕ್ಕರೆ ಚಿಲ್ಲರೆ ಮಾರಾಟ ದರ ಹೆಚ್ಚಾಗಲಿದೆ.

ಬೆಂಗಳೂರಿನಲ್ಲಿ ಕನ್ನಡ-ಬೆಂಗಾಲಿ ಸಿನಿಮೋತ್ಸವ

ಕನ್ನಡ ಮತ್ತು ಬಂಗಾಳಿ ಸಿನಿ ರಸಿಕರ ನಡುವೆ ಸಾಂಸ್ಕೃತಿಕ ಬಾಂಧವ್ಯ ಬೆಳೆಸಲು ಬೆಂಗಳೂರು ಕನ್ನಡ-ಬೆಂಗಾಲಿ ಎರಡನೇ ಸಿನಿಮೋತ್ಸವ ಜೂನ್ 8ರಿಂದ ಆರಂಭವಾಗಲಿದೆ. ಜೂನ್ 8, 9 ಮತ್ತು 10ರಂದು ಮೂರು ದಿನಗಳ ಕಾಲ ನಡೆಯಲಿರುವ ಸಿನಿಮೋತ್ಸವ, ಕನ್ನಡ ಮತ್ತು ಬೆಂಗಾಲಿ ಸಿನಿಪ್ರೇಕ್ಷಕರಿಗೆ ವೇದಿಕೆಯಾಗಲಿದೆ. ಒಟ್ಟು 16 ಸಿನಿಮಾಗಳು ಪ್ರದರ್ಶನವಾಗಲಿದ್ದು, ಇದರಲ್ಲಿ ಕನ್ನಡದ ‘ರಾಜಕುಮಾರ’, ‘ಒಂದು ಮೊಟ್ಟೆಯ ಕತೆ’, ‘ಹೆಬ್ಬೆಟ್ಟು ರಾಮಕ್ಕ’ ಮತ್ತು ‘ಕೂರ್ಮಾವತಾರ’ ಸಿನಿಮಾಗಳು ನೋಡಲು ಸಿಗಲಿವೆ.

ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ಅಯ್ಯಪ್ಪನ ಸನ್ನಿಧಾನದಲ್ಲಿ ಹಿಂಸಾಚಾರ; ಮಹಿಳೆಯರ ಪ್ರವೇಶಕ್ಕೆ ಅಡ್ಡಿ
ಲೈಂಗಿಕ ಶೋಷಣೆ ಆರೋಪ; ಕೊನೆಗೂ ರಾಜೀನಾಮೆ ಕೊಟ್ಟ ಕೇಂದ್ರ ಸಚಿವ ಎಂ ಜೆ ಅಕ್ಬರ್‌
Editor’s Pick More