ಉಡುಪಿ ಪೇಜಾವರ ಶ್ರೀಗಳ ಇಫ್ತಾರ್ ಔತಣಕೂಟ ನಡೆಯುವುದು ಅನುಮಾನ?

ಇಫ್ತಾರ್‌ ಔತಣಕೂಟ ಏರ್ಪಡಿಸುವ ಸಂಬಂಧ ಪೇಜಾವರ ಶ್ರೀಗಳು ಇದ್ದಕ್ಕಿದ್ದಂತೆ ಮೌನ ತಳೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪೇಜಾವರ ಶ್ರೀಗಳು ಇಫ್ತಾರ್ ಆಯೋಜಿಸುವ ನಿರ್ಧಾರ ಕೈಬಿಡಬೇಕು ಎಂದು ಹಿಂದೂ ಸಂಘಟನೆಗಳು ಒತ್ತಡ ಹೇರುತ್ತಿರುವುದೇ ಅವರ ಮೌನಕ್ಕೆ ಕಾರಣ ಎನ್ನಲಾಗುತ್ತಿದೆ

ಕಳೆದ ವರ್ಷದಂತೆ ಈ ವರ್ಷವೂ ಉಡುಪಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಇಫ್ತಾರ್ ಔತಣಕೂಟ ಏರ್ಪಡಿಸಬೇಕು ಎಂಬ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಇಚ್ಛೆ ಈಡೇರುವುದು ಅನುಮಾನ ಎಂಬ ವಾತಾವರಣ ನಿರ್ಮಾಣವಾಗಿದೆ.

ಈ ಬಾರಿಯ ಇಫ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿತ್ತು. ಒಂದೆಡೆ, ವಿಗ್ರಹಾರಾಧನೆ ಸ್ಥಳದಲ್ಲಿ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸುವುದು ಬೇಡ ಎಂದು ಮುಸ್ಲಿಂ ಮುಖಂಡರು ನಿರ್ಧರಿಸಿದ್ದರು. ಮತ್ತೊಂದೆಡೆ, ಮಠದ ಆವರಣದಲ್ಲಿ ಇಫ್ತಾರ್ ಕೂಟ ಆಯೋಜಿಸಲು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಶ್ರೀರಾಮಸೇನೆ ಈ ಬಾರಿಯೂ ಔತಣಕೂಟ ಏರ್ಪಡಿಸದಂತೆ ಬಹಿರಂಗ ಹೇಳಿಕೆ ನೀಡಿತ್ತು.

ಇದೆಲ್ಲದರ ಮಧ್ಯೆ, ಮಠದಿಂದ ಮೂರು ಕಿಮೀ ದೂರದಲ್ಲಿರುವ ಗೋವಿಂದರಾಜ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಸಲು ಮಠ ಹಾಗೂ ಮುಸ್ಲಿಂ ಮುಖಂಡರು ನಿರ್ಧರಿಸಿದ್ದರು.

ಆದರೆ, ಔತಣಕೂಟ ಏರ್ಪಡಿಸುವ ಸಂಬಂಧ ಪೇಜಾವರ ಶ್ರೀಗಳು ಇದ್ದಕ್ಕಿದ್ದಂತೆ ಮೌನ ತಳೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸುವ ನಿರ್ಧಾರ ಕೈಬಿಡಬೇಕು ಎಂದು ಹಿಂದೂ ಸಂಘಟನೆಗಳು ಒತ್ತಡ ಹೇರುತ್ತಿರುವುದೇ ಅವರ ಮೌನಕ್ಕೆ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ : ಪೇಜಾವರ ಶ್ರೀಗಳ ಇಫ್ತಾರ್ ವಿವಾದವನ್ನು ಅರ್ಥ ಮಾಡಿಕೊಳ್ಳಬೇಕಾದ ತುರ್ತು

“ಇಫ್ತಾರ್ ಎಂದಿನಂತೆ ನಡೆಯಲಿದೆ. ಅನುಮಾನ ಬೇಡ. ಸ್ವಾಮೀಜಿಯವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಉಡುಪಿಗೆ ಬಂದ ಕೂಡಲೇ ಇಫ್ತಾರ್ ಆಯೋಜಿಸುವ ಸಂಬಂಧ ನಿರ್ಧಾರಕ್ಕೆ ಬರಲಿದ್ದಾರೆ. ಬೆಂಗಳೂರಿನಲ್ಲಿರುವ ಅವರು ಬಂದ ನಂತರ ಈ ಕುರಿತಂತೆ ಹೇಳಿಕೆ ನೀಡಲಿದ್ದಾರೆ,” ಎಂದಿವೆ ಕೆಲವು ಮೂಲಗಳು.

ಈ ಬಗ್ಗೆ 'ದಿ ಸ್ಟೇಟ್'ಗೆ ಪ್ರತಿಕ್ರಿಯೆ ನೀಡಿದ ಉಡುಪಿ ಮುಸ್ಲಿಂ ಸಮುದಾಯದ ಮುಖಂಡ ಅನ್ಸಾರ್ ಅಹಮದ್, "ಸದ್ಯಕ್ಕೆ ಅನಿಶ್ಚಿತತೆ ಇರುವುದು ನಿಜ. ಸ್ವಾಮೀಜಿಯವರನ್ನು ಸಂಪರ್ಕಿಸಿದ ಬಳಿಕ ತೀರ್ಮಾನಕ್ಕೆ ಬರಲಾಗುವುದು. ಇಫ್ತಾರ್ ಕೂಟ ನಡೆಯಲಿ, ಬಿಡಲಿ ಮಠದೊಂದಿಗೆ, ಸ್ವಾಮೀಜಿಯವರೊಂದಿಗೆ ಎಂದಿನ ಬಾಂಧವ್ಯ ಮುಂದುವರಿಯಲಿದೆ," ಎಂದು ತಿಳಿಸಿದ್ದಾರೆ. ಮೇ ೧೬ರಿಂದ ಆರಂಭವಾಗಿರುವ ರಂಜಾನ್ ಮಾಸ ಇದೇ ತಿಂಗಳ ೧೪ಕ್ಕೆ ಕೊನೆಗೊಳ್ಳಲಿದೆ.

ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ
ಅಯ್ಯಪ್ಪನ ಸನ್ನಿಧಾನದಲ್ಲಿ ಹಿಂಸಾಚಾರ; ಮಹಿಳೆಯರ ಪ್ರವೇಶಕ್ಕೆ ಅಡ್ಡಿ
ಲೈಂಗಿಕ ಶೋಷಣೆ ಆರೋಪ; ಕೊನೆಗೂ ರಾಜೀನಾಮೆ ಕೊಟ್ಟ ಕೇಂದ್ರ ಸಚಿವ ಎಂ ಜೆ ಅಕ್ಬರ್‌
Editor’s Pick More