ಸಕ್ಕರೆಯು ಗ್ರಾಹಕರ ಪಾಲಿಗೆ ಕಹಿಯಾಗುವ ದಿನಗಳು ಸಮೀಪಿಸುತ್ತಿವೆಯೇ?

ಸಕ್ಕರೆ ಉದ್ಯಮದ ನೆರವಿಗೆ ಬಂದಿರುವ ಕೇಂದ್ರ ಸರ್ಕಾರ, ಸುಮಾರು ₹8,500 ಕೋಟಿ ಪರಿಹಾರ ಒದಗಿಸಿದೆ. ಭಾರತದಲ್ಲಿರುವ ಬೃಹತ್ ಸಕ್ಕರೆ ಉದ್ಯಮಕ್ಕೆ ಈ ಪರಿಹಾರ ಏನೇನೂ ಸಾಲದು. ಇದರಿಂದಾಗಿ ಈಗಾಗಲೇ ಉದ್ಯಮಕ್ಕೆ ಕಹಿಯಾಗಿರುವ ಸಕ್ಕರೆ ಬರುವ ದಿನಗಳಲ್ಲಿ ಗ್ರಾಹಕರಿಗೂ ಕಹಿ ಆಗಲಿದೆ!

ಸಂಕಷ್ಟದಲ್ಲಿರುವ ಸಕ್ಕರೆ ಉದ್ಯಮಕ್ಕೆ ನೆರವಾಗಲು ಕೇಂದ್ರ ಸರ್ಕಾರ 8,500 ಕೋಟಿ ರುಪಾಯಿ ನೆರವು ಘೋಷಿಸಿದೆ. ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು ನಿಗದಿ ಮಾಡಿದೆ. ಜೊತೆಗೆ ಸಕ್ಕರೆ ಉದ್ಯಮಗಳ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಸಕ್ಕರೆ ದರ ನಿಯಂತ್ರಣ (2018) ಆದೇಶವನ್ನು ಹೊರಡಿಸಿದೆ.

ಒಂದು ಕಡೆ ನೆರವು ನೀಡುತ್ತ, ಮತ್ತೊಂದು ಕಡೆ ನಿಯಂತ್ರಣ ಸಾಧಿಸುವ ಕೇಂದ್ರ ಸರ್ಕಾರದ ನಿಲವಿನ ಬಗ್ಗೆ ಇಡೀ ಸಕ್ಕರೆ ಉದ್ಯಮಕ್ಕೆ ಖುಷಿಯೇನೂ ಆಗಿಲ್ಲ. ಕೇಂದ್ರ ಸರ್ಕಾರ ಘೋಷಿಸಿರುವ 8,500 ಕೋಟಿ ರುಪಾಯಿ ನೆರವು ತೀರಾ ಅತ್ಯಲ್ಪ. ಹೀಗಾಗಿ ಸಮಾಧಾನವಿಲ್ಲ. ಇನ್ನು, ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಮಾರಾಟ ದರವು ಪ್ರತಿ ಕೆಜಿಗೆ 29 ರುಪಾಯಿ. ಇದು ಕೂಡ ಸಕ್ಕರೆ ಉದ್ಯಮಕ್ಕೆ ನಿರಾಶೆ ಮೂಡಿಸಿದೆ.

ಇಂಡಿಯನ್ ಷುಗರ್ ಮಿಲ್ಸ್ ಅಸೋಸಿಯೇಷನ್ (ಇಸ್ಮಾ) ಕನಿಷ್ಠ ಮಾರಾಟ ದರ 35 ರುಪಾಯಿ ನಿಗದಿ ಮಾಡಬೇಕೆಂದು ಬಯಸಿತ್ತು. ಈಗಾಗಲೇ 28 ರುಪಾಯಿಗೆ ಮಾರಾಟ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ 1 ರುಪಾಯಿ ಹೆಚ್ಚಳದಿಂದ ಏನೂ ಉಪಯೋಗವಾಗದು.

ಸರ್ಕಾರ ನಿಗದಿ ಮಾಡಿರುವ ಕನಿಷ್ಠ ದರವು ಕಾರ್ಖಾನೆಪೂರ್ವ ಮಾರಾಟ ದರ. ಅಂದರೆ, ಕಾರ್ಖಾನೆಯಿಂದ ಸಕ್ಕರೆ ಹೊರಬರುವ ಮುನ್ನ ನಿಗದಿಯಾಗುವ ದರ. ಈ ದರವೇ ಗ್ರಾಹಕರಿಗೂ ಲಭ್ಯವಾಗುತ್ತದೆ ಎಂದೇನೂ ಅಲ್ಲ. ಅಲ್ಲಿಂದ ಸಾಗಾಣಿಕೆ ಮತ್ತು ವಿತರಣಾ ವೆಚ್ಚ, ಮಾರಾಟಗಾರರ ಲಾಭಾಂಶ ಎಲ್ಲವೂ ಸೇರಿ ಗ್ರಾಹಕರಿಗೆ ತಲುಪುವ ವೇಳೆಗೆ 35 ರುಪಾಯಿ ದಾಟಿರುತ್ತದೆ.

ಚಿಲ್ಲರೆ ಸಕ್ಕರೆ ಮಾರಾಟ ದರ ಸರಾಸರಿ 35 ರುಪಾಯಿ ಇದೆ. ಆದರೆ, ಬ್ರಾಂಡೆಂಡ್ ಪ್ಯಾಕೇಜ್ಡ್ ಸಕ್ಕರೆ ದರ 40ರಿಂದ 55 ರುಪಾಯಿವರೆಗೆ ಇದೆ. ಸಕ್ಕರೆ ಚಿಲ್ಲರೆ ಮಾರಾಟ ಸಂಘಟಿತ ವಲಯಕ್ಕಿಂತ ಅಸಂಘಟಿತ ವಲಯದಲ್ಲಿ ಮಾರಾಟ ದೊಡ್ಡ ಪ್ರಮಾಣದಲ್ಲಿದೆ. ಬ್ರಾಂಡೆಡ್ ಪ್ಯಾಕೇಜ್ಡ್ ಸಕ್ಕರೆ ಪ್ರಮಾಣ ಅತ್ಯಲ್ಪ. ಈಗ ಕಾರ್ಖಾನೆಪೂರ್ವ ಕನಿಷ್ಠ 29 ರುಪಾಯಿಗೆ ಕನಿಷ್ಠ ಮಿತಿ ಹೇರಿರುವುದರಿಂದ ಚಿಲ್ಲರೆ ಮಾರಾಟ ದರವೂ ಕೊಂಚ ಏರಲಿದೆ.

ಸರ್ಕಾರದ ಸಕ್ಕರೆ ಉದ್ಯಮಕ್ಕೆ ನೀಡಿರುವ 8,500 ಕೋಟಿ ರುಪಾಯಿ ಪೈಕಿ 4,500 ಕೋಟಿ ರುಪಾಯಿ ಸುಲಭ ಸಾಲವಾಗಿದೆ. ಈ ಸಾಲವನ್ನು ಬಳಸಿಕೊಂಡು ಕಾರ್ಖಾನೆಗಳು ರೈತರ ಬಾಕಿ ಪಾವತಿಸಬೇಕಿದೆ. ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರ ಬಾಕಿ 22,000 ಕೋಟಿ ರುಪಾಯಿ ಇದೆ.

ಕೇಂದ್ರ ಸರ್ಕಾರವೇ 3 ದಶಲಕ್ಷ ಟನ್ ಸಕ್ಕರೆಯನ್ನು ಕಾರ್ಖಾನೆಗಳಿಂದ ನೇರ ಖರೀದಿ ಮಾಡಲಿದೆ. ಖರೀದಿ ಮಾಡಿದ ಮೊತ್ತವನ್ನು ಕಾರ್ಖಾನೆಗಳಿಗೆ ಪಾವತಿಸದೆ ನೇರವಾಗಿ ರೈತರ ಬಾಕಿ ಚುಕ್ತಾ ಮಾಡಲು ಬಳಸಲಿದೆ. ರೈತರ ಬಾಕಿಗೆ ಹೋಲಿಸಿದರೆ ಕೇಂದ್ರ ಸರ್ಕಾರದ ನೆರವಿನಿಂದ ಶೇ.40ರಷ್ಟು ಬಾಕಿ ಚುಕ್ತಾ ಆಗಬಹುದು. ಆದರೆ, ಉಳಿದ ಮೊತ್ತಕ್ಕೆ ರೈತರು ಎಲ್ಲಿಗೆ ಹೋಗಬೇಕು?

ಕಳೆದ ವರ್ಷಎಲ್ಲ ಸಕ್ಕರೆ ಕಾರ್ಖಾನೆಗಳ ನಿವ್ವಳ ಲಾಭ 2,000 ಕೋಟಿಯಷ್ಟಿತ್ತು. ಆದರೆ, 2017-18ರಲ್ಲಿ ಎಲ್ಲ ಸಕ್ಕರೆ ಕಾರ್ಖಾನೆಗಳ ಒಟ್ಟು ನಷ್ಟ 1,600 ಕೋಟಿ ರುಪಾಯಿಗಳಾಗಿದೆ. ಹೀಗಾಗಿ, ಉಳಿದ ಬಾಕಿ ಪಾವತಿಗೆ ಕಾರ್ಖಾನೆಗಳು ತಮ್ಮ ದಾಸ್ತಾನು ಮಾರಾಟ ಮಾಡಬೇಕು. ಪ್ರಸಕ್ತ ಸಕ್ಕರೆ ವರ್ಷದಲ್ಲಿ 31.5 ದಶಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಕ್ಕರೆ ಉತ್ಪಾದನೆ 4.1 ದಶಲಕ್ಷ ಟನ್ ಹೆಚ್ಚಿದೆ. ಹೀಗಾಗಿ, ಸಕ್ಕರೆ ದರ ಕುಸಿದಿದೆ. ಮತ್ತಷ್ಟು ಸಕ್ಕರೆಯನ್ನು ಮಾರುಕಟ್ಟೆಗೆ ಬಿಟ್ಟರೆ ದರ ಮತ್ತಷ್ಟು ಕುಸಿಯಬಹುದು.

ಈ ಹಿನ್ನೆಲೆಯಲ್ಲಿ, ಸಕ್ಕರೆ ಕಾರ್ಖಾನೆಗಳು 29 ರುಪಾಯಿಗಿಂತ ಕಡಿಮೆ ದರಕ್ಕೆ ಮಾರಾಟ ಮಾಡಬಾರದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಒಂದು ವೇಳೆ, ಕನಿಷ್ಠ ಮಾರಾಟ ದರವನ್ನು 32 ರುಪಾಯಿಗೆ ಏರಿಸಿದ್ದರೆ ಏರಿಕೆ ಪ್ರಮಾಣ ಶೇ.10ರಷ್ಟಾಗುತ್ತಿತ್ತು. ಈ ಮೊತ್ತಕ್ಕೆ ಸಾಗಾಣಿಕೆ, ವಿತರಣೆ, ಮಾರಾಟಗಾರರ ಲಾಭ ಸೇರಿ ಶೇ.15ರಷ್ಟು ದರ ಹೆಚ್ಚಿ, ಮುಕ್ತ ಮಾರುಕಟ್ಟೆಯಲ್ಲಿ ದರ ಏರಿಕೆ ಆಗುತ್ತಿತ್ತು. ಹಬ್ಬದ ಸೀಸನ್ನಿನಲ್ಲಿ ಸಕ್ಕರೆ ಬೇಡಿಕೆ ಹೆಚ್ಚುತ್ತದೆ. ಹಾಗೆಯೇ, ದರವೂ ಏರುತ್ತದೆ. ಆದರೆ, ಏಕಾಏಕಿ ಸಕ್ಕರೆ ದರ ಏರುವುದು ಕೇಂದ್ರ ಸರ್ಕಾರಕ್ಕೆ ಬೇಕಿಲ್ಲ. ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಕ್ಕರೆ ಬೆಲೆ ಸ್ಥಿರವಾಗಿರುವುದು ಬೇಕಿದೆ.

ಇದನ್ನೂ ಓದಿ : ಸಕ್ಕರೆ ಉದ್ಯಮ ರಕ್ಷಿಸಲು ರಫ್ತು ಸುಂಕ ರದ್ದು ಮಾಡಲಿದೆಯೇ ಕೇಂದ್ರ ಸರ್ಕಾರ?

ಈರುಳ್ಳಿ, ಬೇಳೆ, ಆಲೂಗೆಡ್ಡೆ, ಸಕ್ಕರೆಯಂತಹ ನಿತ್ಯೋಪಯೋಗಿ ಗ್ರಾಹಕ ವಸ್ತುಗಳ ದರ ಏರಿದಾಗ ಸರ್ಕಾರಗಳೇ ಉರುಳಿದ ಉದಾಹರಣೆಗಳಿವೆ. ಈರುಳ್ಳಿ ದರ ಏರಿದ್ದರಿಂದ ಬಿಜೆಪಿ ದೆಹಲಿ ರಾಜ್ಯದ ಅಧಿಕಾರ ಕಳೆದುಕೊಂಡಿದ್ದನ್ನು ಆ ಪಕ್ಷ ಮರೆತಿಲ್ಲ.

ಕಾರ್ಖಾನೆ ಪೂರ್ವ ಕನಿಷ್ಠ ದರ ನಿಗದಿ ಮಾಡಿರುವುದರಿಂದ ಮಾರುಕಟ್ಟೆಯಲ್ಲಿ ಚಿಲ್ಲರೆ ದರ ಏರಲಿದೆ. ಸಕ್ಕರೆ ದರ ನಿಯಂತ್ರಣ ಆದೇಶದ ಮೂಲಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಬೇಕಾದ ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಅಧಿಕಾರ ಪಡೆದುಕೊಂಡಿದೆ. ಕಾಳದಂಧೆಕೋಕರು ಸಕ್ಕರೆ ಬೆಲೆ ನಿಯಂತ್ರಿಸುವುದನ್ನು ತಡೆಗಟ್ಟಲು ಇದು ನೆರವಾಗಬಹುದು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಚಿಲ್ಲರೆ ದರ ನಿಯಂತ್ರಿಸುವುದು ಕಷ್ಟವಾಗುತ್ತದೆ. ಇದುವರೆಗೂ ಸುಮಾರು 30-35 ರುಪಾಯಿ ಆಜುಬಾಜಿನಲ್ಲಿ ಸಕ್ಕರೆ ಖರೀದಿಸುತ್ತಿದ್ದ ಗ್ರಾಹಕರು ಕನಿಷ್ಠ ಶೇ.5ರಷ್ಟು ಹೆಚ್ಚು ಪಾವತಿ ಮಾಡಬೇಕಾಗಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More