2019ರ ‘ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಮೋದಿಯವರಿಂದ ಮತ್ತಷ್ಟು ಮನರಂಜನೆ!

ತಮ್ಮ ಮೊದಲ ಅಧಿಕಾರಾವಧಿಯ ಕೊನೇ ಹಂತದಲ್ಲಿದ್ದಾರೆ ಪ್ರಧಾನಿ ಮೋದಿ. 2019ಕ್ಕೆ ಈ ಅವಧಿಯನ್ನು ಶತಗತಾಯ ನವೀಕರಣ ಮಾಡುವುದಕ್ಕೆ ಅವರು ಹತಾಶೆಯಿಂದ ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ‘ಟೆಲಿಗ್ರಾಫ್’ನಲ್ಲಿ ಪ್ರಕಟವಾದ, ಸಂಕರ್ಶನ್ ಠಾಕೂರ್ ಲೇಖನದ ಭಾವಾನುವಾದ ಇಲ್ಲಿದೆ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು 2019ರ ಲೋಕಸಭಾ ಚುನಾವಣೆಗಾಗಿನ ನರೇಂದ್ರ ಮೋದಿ ಅಭಿಯಾನಕ್ಕೆ ಈಗಾಗಲೇ ಚಾಲನೆ ಕೊಟ್ಟಿದ್ದಾರೆ ಎಂಬುದು ಸೂಕ್ಷ್ಮವಾಗಿ ಗಮನಿಸಿದವರಿಗೆ ಗೊತ್ತಿರುತ್ತದೆ. ಯಾರು ಗಮನಿಸಿಲ್ಲವೋ ಅವರಿಗಾಗಿ ಈ ವಿವರಗಳು. ಕಳೆದ ಮೇ 27 ಮೋದಿ ಅವಧಿಯ ಕೊನೆಯ ವರ್ಷದ ಮೊದಲ ದಿನ. ವಾಂಖೆಡೆ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ಶುರುವಾಗುತ್ತಿದ್ದಾಗ ಕ್ರೀಡಾಂಗಣದ ಉತ್ಸಾಹಭರಿತ ಮೂಲೆಯೊಂದರಲ್ಲಿ ಸ್ಮಿತ್ ಭಾರತದ ಸಾಂಪ್ರದಾಯಿಕ ಕುರ್ತಾ, ಪೈಜಾಮು ತೊಟ್ಟು ಕಂಗೊಳಿಸುತ್ತಿದ್ದರು. ಪಂದ್ಯಪೂರ್ವ ಚಟುವಟಿಕೆಗಳು ಕಾವೇರುತ್ತಿದ್ದಾಗಲೇ ದೊಡ್ಡ ಪ್ರಶ್ನೆಯೊಂದನ್ನು ಸ್ಮಿತ್‍ಗೆ ಕೇಳಲಾಯಿತು. ಈ ಬಾರಿ ಐಪಿಎಲ್ ಟ್ರೋಫಿಯನ್ನು ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆ ಅಲ್ಲ; ಬದಲಿಗೆ, ಫಿಟ್‍ನೆಸ್ ಕಾಪಾಡುವುದಕ್ಕಾಗಿ ಪ್ರಧಾನಮಂತ್ರಿಗಳು ತೆಗೆದುಕೊಂಡ ಕ್ರಮಗಳ ಅವರಿಗೆ ಏನೆನ್ನಿಸುತ್ತದೆ ಎಂಬ ಪ್ರಶ್ನೆ! ಕೂಡಲೇ ಸ್ಮಿತ್ ಮತ್ತು ಅವರನ್ನು ಸಂದರ್ಶಿಸುತ್ತಿದ್ದ ವ್ಯಕ್ತಿ, ಅವರು ನಿಂತಿದ್ದ ಹಸಿರು ವಾಂಖೆಡೆ ಎಲ್ಲವೂ ಸ್ವಲ್ಪ ಹೊತ್ತು ಪರದೆಯಿಂದ ಮರೆಯಾಗಿ, ಕೈಗಳನ್ನು ಮಡಚಿ ಪದ್ಮಾಸನದಲ್ಲಿ ಕುಳಿತಿದ್ದ ಮೋದಿ ಮತ್ತು "ಮೇರೆ ಪ್ಯಾರೆ ಭಾಯಿಯೋ, ಬೆಹ್ನೊ, ದೇಶ್‍ವಾಸಿಯೋ," ಮುಂತಾದವುಗಳು ಪ್ರತ್ಯಕ್ಷವಾದವು.

ಈ ದೃಶ್ಯಾವಳಿಯ ತುಣುಕು ಮುಗಿದ ತಕ್ಷಣ ಸ್ಮಿತ್ ಪರದೆಯ ಮೇಲೆ ಮತ್ತೆ ಪ್ರತ್ಯಕ್ಷರಾದಾಗ ಅವರು ಅಮೋಘ, ಅದ್ಭುತ, ಸ್ಫೂರ್ತಿದಾಯಕ ಇತ್ಯಾದಿ ಪದಪುಂಜಗಳನ್ನು ಬಳಸಿ ಮೋದಿಯವರನ್ನು ಹಾಡಿ ಹೊಗಳುತ್ತಿದ್ದರು. ಪ್ರಧಾನಮಂತ್ರಿ ಮತ್ತು ಅವರ ಫಿಟ್ನೆಸ್ ವೀಡಿಯೋ ತುಣಕು ಆವತ್ತು ಸಂಜೆ ಪರದೆಯ ಮೇಲೆ ಹಲವು ಬಾರಿ ಪ್ರತ್ಯಕ್ಷವಾಯಿತು. ಹಲವು ಕ್ರಿಕೆಟ್ ತಾರೆಯರೂ ಬಂದು ಹುಸಿ ಹೊಗಳಿಕೆಯನ್ನು ಪ್ರದರ್ಶಿಸಿ ಈ ವಂಚಕ ಪ್ರಚಾರಕ್ಕೆ ತಮ್ಮದೇ ಕೊಡುಗೆಯನ್ನೂ ಕೊಟ್ಟುಹೋದರು. ಐಪಿಎಲ್ 2018ರ ಮುಕ್ತಾಯವು ವಾಸ್ತವದಲ್ಲಿ 2019ರ ‘ಇಂಡಿಯನ್ ಪ್ರೀಮಿಯರ್ ಲೀಗ್‍’ಗೆ ಮೋದಿಯವರು ಇಟ್ಟ ಆರಂಭಿಕ ಮುಖಾಮುಖಿ ನಡೆಯಾಗಿತ್ತು.

ಮೋದಿ ಬಗ್ಗೆ ನೀವೇನಾದರೂ ಹೇಳಿ; ಅವರಿಗೆ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮಜ್ಞಾನ ಮತ್ತು ಅವಕಾಶವನ್ನು ಮುಗಿಬಿದ್ದು ಬಾಚಿಕೊಳ್ಳುವುದಕ್ಕೆ ಒಬ್ಬ ಅವಕಾಶವಾದಿಗಿರುವ ಲಜ್ಜಾಹೀನತೆ ಎರಡೂ ಇದೆ. ಫೋಟೋ-ಅವಕಾಶವನ್ನು ಬಳಸಿಕೊಳ್ಳುವಲ್ಲಿ ಅವರು ಎಷ್ಟು ನಿಸ್ಸೀಮರು ಎಂದರೆ, ಕ್ಯಾಮೆರಾವನ್ನು ತನ್ನ ವಿವಿಧ ಭಂಗಿಗಳನ್ನು ಕರ್ತವ್ಯನಿಷ್ಠೆಯಿಂದ ಸೆರೆಹಿಡಿಯುವ ಸೇವಕನ ಮಟ್ಟಕ್ಕೆ ಇಳಿಸಿಬಿಟ್ಟಿದ್ದಾರೆ. ಮುಖ್ಯ ವ್ಯಕ್ತಿಗಳ ಫೋಟೋ ಚೌಕಟ್ಟಿನಲ್ಲಿ ಸಾಮಾನ್ಯವಾಗಿ ಅವರ ಸುತ್ತ ಇರುವ ನಿಕಟ ಭದ್ರತಾ ಪಡೆಯವರಾದರೂ ಕಾಣಿಸುತ್ತಾರೆ. ಆದರೆ, ಮೋದಿಯವರ ಫೋಟೋ ಚೌಕಟ್ಟಿನಲ್ಲಿ ಅವರೂ ಕಾಣದ ಹಾಗೆ, ತಾವೊಬ್ಬರೇ ಏಕಾಂಗಿಯಾಗಿ ಫೋಸು ನೀಡುತ್ತಿರುವುದು ಮಾತ್ರ ಬರುವಂತೆ ನೋಡಿಕೊಳ್ಳುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಅವರ ವಿವಿಐಪಿ ಅತಿಥಿಗಳಿಗೆ ಭಾರತದ ಪ್ರಧಾನಮಂತ್ರಿ ಏಕೆ ದಿಢೀರನೆ ಏಕಪಾತ್ರಾಭಿನಯ ಮಾಡುತ್ತಿದ್ದಾರೆ ಎಂಬ ಆಶ್ಚರ್ಯ ಉಂಟಾಗಿರಲಿಕ್ಕೂ ಸಾಕು. ನಾನೊಬ್ಬ ಮಹಾಪುರುಷನೆಂದು ತೋರ್ಪಡಿಸಿಕೊಳ್ಳುವುದಕ್ಕೆ ನೆರವಾಗುವ ಫೋಟೋಗಳು ಬರುವಂತೆ ಅವರು ಬಹಳ ಜಾಣ್ಮೆಯಿಂದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಶಾಂತಿನಿಕೇತನದಲ್ಲಿ ಅವರ ಉಗ್ರ ಅಭಿಮಾನಿಯೊಬ್ಬ ಪ್ರಧಾನಮಂತ್ರಿಗಳ ಭದ್ರತಾ ಕವಚವನ್ನು ಮುರಿದು ಒಳನುಗ್ಗಿ ಮೋದಿಯವರ ಕಾಲಿಗೆರಗಿ ನಮಸ್ಕರಿಸಿದ್ದು ಇದಕ್ಕೊಂದು ಉದಾಹರಣೆ. ನಿಜ ಹೇಳಬೇಕೆಂದರೆ, ಮೋದಿಯವರ ಹಿಂದೆಯೇ ಯಾವ ಗಡಿಬಿಡಿಯೂ ಇಲ್ಲದಂತೆ ಆರಾಮಾಗಿ ನಿಂತುಕೊಂಡಿದ್ದ ಅವರ ವಿಶೇಷ ಭದ್ರತಾ ದಳದ ಸದಸ್ಯರ ಹಾವಭಾವ, ನಿರಾತಂಕಗಳನ್ನು ನೋಡಿದರೆ, ಭದ್ರತಾ ಕವಚವನ್ನು ಆತ ಮುರಿದು ಬಂದಿದ್ದ ಎನ್ನಿಸುವುದಿಲ್ಲ. ಫೋಟೋಗಾಗಿ ಆ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತಷ್ಟೆ.

ಐಪಿಎಲ್ ಪಂದ್ಯಾವಳಿಗಳ ಫೈನಲ್ ಪಂದ್ಯದಲ್ಲಿ ನರೇಂದ್ರ ಮೋದಿಯವರನ್ನು ಉತ್ಸಾಹಪೂರ್ಣವಾಗಿ ಒಳತುರುಕಿದ್ದು ಆಕಸ್ಮಿಕವೇನಲ್ಲ. ಅದು ಉದ್ದೇಶಪೂರ್ವಕ ಪ್ರಯತ್ನದ ಭಾಗ, ಯೋಜಿತ ನಡೆ. ಐಪಿಎಲ್‍ನ ಅಂತಿಮ ಹಣಾಹಣಿಯ ಪಂದ್ಯಕ್ಕಿಂತ ಹೆಚ್ಚೂಕಮ್ಮಿ ಒಂದು ವಾರದ ಮುಂಚೆ, ಕೇಂದ್ರ ಸರ್ಕಾರದ ಮಂತ್ರಿಯೊಬ್ಬರು ವ್ಯಾಯಾಮ ಮಾಡುತ್ತಿರುವ ವೀಡಿಯೋ ತುಣುಕುಗಳನ್ನು ಟ್ವಿಟರ್ ಜಾಲತಾಣದಲ್ಲಿ ಹಾಕಿ ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಟ್ಯಾಗ್ ಮಾಡಿ ಫಿಟ್‍ನೆಸ್ ಸವಾಲು ಒಡ್ಡಿದ್ದರು. ಕೊಹ್ಲಿ ತಮ್ಮ ಉಕ್ಕಿನ ಕೈಕವಚ ಎತ್ತಿಕೊಂಡು ಯಾವುದೇ ಪ್ರಚೋದನೆ ಇಲ್ಲದೆ ಮಾಡುತ್ತಿದ್ದಾರೇನೋ ಎಂಬಂತೆ ತಾವೂ ವ್ಯಾಯಾಮ ಮಾಡಿ ಅದನ್ನು ರೆಕಾರ್ಡ್ ಮಾಡಿ ಆ ವಿಡಿಯೋವನ್ನು ಪ್ರಧಾನಮಂತ್ರಿಗಳಿಗೆ ಧೈರ್ಯದಿಂದ ಟ್ಯಾಗ್ ಮಾಡಿ ಹಾಕಿದರು. ಹಾಸ್ಯಾಸ್ಪದ ಎಂದರೆ, ಕುತ್ತಿಗೆ ನೋವಿನಿಂದ ಇಂಗ್ಲೆಂಡಿನಲ್ಲಿ ಅಭ್ಯಾಸ ಪಂದ್ಯ ಆಡುವುದಕ್ಕೆ ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿಯಲ್ಲಿದ್ದಾಗಲೇ ಕೊಹ್ಲಿ ಇದನ್ನು ಮಾಡಿದ್ದು! ಪ್ರಧಾನಮಂತ್ರಿಗಳೂ ಬಹಳ ಹುರುಪಿನಿಂದ ಉಕ್ಕಿನ ಕೈಕವಚ ಎತ್ತಿಕೊಂಡು ವ್ಯಾಯಾಮ ಮಾಡಿದರು. ಅವರ ಅನೇಕ ಸಚಿವ ಸಹೋದ್ಯೋಗಿಗಳೂ ಪ್ರಧಾನಮಂತ್ರಿಗಳನ್ನು ಅನುಕರಿಸಿ ಟ್ವಿಟರ್‌ನ ವಿಡೀಯೋ ತುಣಕುಗಳಲ್ಲಿ ಕರಗಿಸಬಹುದಾದ ಕೊಬ್ಬನ್ನು ಕರಗಿಸಿಕೊಂಡರು. ಕ್ಷಣಾರ್ಧದಲ್ಲಿ ಈ ಎಲ್ಲ ವಿಡಿಯೋ ತುಣುಕುಗಳನ್ನು ಸಂಕಲನದ ಕೋಣೆಗೆ ಕಳುಹಿಸಲಾಯಿತು. ಎಲ್ಲ ವಿಡಿಯೋ ತುಣುಕುಗಳನ್ನು ಕತ್ತರಿಸಿ, ಜೋಡಿಸಿ ಮೋದಿ ಪ್ರೇರಿತ ಆಕರ್ಷಕ ಸಂಕಲಿತ ವಿಡಿಯೋ ತುಣುಕೊಂದು ಸಿದ್ಧವಾಗಿ ಹೊರಬಂತು. ಇದೆಲ್ಲವೂ ನಡೆದದ್ದು ಐಪಿಎಲ್ ಪಂದ್ಯಾವಳಿಗಳ ಅಂತಿಮ ಹಣಾಹಣಿ ಪ್ರಾರಂಭವಾಗುವ ರಾತ್ರಿಗಿಂತ ಮುಂಚೆ.

ಮೋದಿ ಭಾರತ ಕಂಡ ಅತಿದೊಡ್ಡ, ಆಡಂಭರ ಪ್ರಚಾರದ ಗೀಳಿರುವ ಮನುಷ್ಯ. ಅವರ ಈ ಗೀಳು ಇಷ್ಟಕ್ಕೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಅದನ್ನವರು ಇನ್ನು ಮುಂದೆಯೂ ಮಾಡುತ್ತಲೇ ಹೋಗುತ್ತಾರೆ ಎಂಬುದನ್ನು ಖಂಡಿತ ಊಹಿಸಬಹುದು. ಅವರೀಗ ತಮ್ಮ ಮೊದಲನೇ ಅಧಿಕಾರಾವಧಿಯ ಕೊನೆಯ ಹಂತದಲ್ಲಿದ್ದಾರೆ. ಮುಂದಿನ ಬೇಸಿಗೆಯಲ್ಲಿ ಈ ಅವಧಿಯನ್ನು ಶತಗತಾಯ ಮತ್ತೆ ನವೀಕರಣ ಮಾಡುವುದಕ್ಕೆ ಅವರು ಹತಾಶೆಯಿಂದ ಪ್ರಯತ್ನಿಸುತ್ತಿದ್ದಾರೆ. ನೀವು ಇಲ್ಲಿತನಕ ನೋಡಿರದ ನರೇಂದ್ರ ಮೋದಿಯವರ ಇನ್ನೂ ಅನೇಕ ಪ್ರಹಸನಗಳು ಬರಲಿರುವ ದಿನಗಳಲ್ಲಿ ನಿಮಗಾಗಿ ಕಾದಿವೆ.

ಮೋದಿಯವರ ಮಾರ್ಕೆಟಿಂಗ್ ಅಲೆಗಳು ಈಗಾಗಲೇ ಅಪ್ಪಳಿಸಲಾರಂಭಿಸಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿಯೊಂದು ಸರ್ಕಾರಿ ಕ್ಯಾಲೆಂಡರ್ ಪುಟದಲ್ಲಿ, ಪ್ರತಿಯೊಂದು ಸರ್ಕಾರಿ ಕರಪತ್ರ ಅಥವಾ ಮಾಹಿತಿ ಕೈಪಿಡಿಯಲ್ಲಿ ಮೋದಿಯವರು ತಮ್ಮನ್ನು ಮಹಾಪುರುಷನಂತೆ ಚಿತ್ರಿಸಿಕೊಂಡು ಬಂದಿದ್ದಾರೆ. ಅಷ್ಟೇ ಏಕೆ, ಕೆಲವು ಸಂದರ್ಭಗಳಲ್ಲಿ ಮಹಾತ್ಮ ಗಾಂಧಿಯವರನ್ನೂ ಅಳಿಸಿ ಅವರ ಸ್ಥಾನದಲ್ಲಿ ತಾವು ಕುಳಿತುಕೊಳ್ಳುವ ಪ್ರಯತ್ನಗಳೂ ನಡೆದಿವೆ. ಪ್ರತಿ ಎರಡನೆಯ ಬೃಹತ್ ಜಾಹಿರಾತು ಫಲಕದ ಮೇಲೆ ಮೋದಿಯವರ ಭಾವಚಿತ್ರವಿರುತ್ತದೆ. ಪ್ರತಿ ಎರಡನೆಯ ಎಫ್‍ಎಂ ರೇಡಿಯೋ ಚಾನೆಲ್‍ನಲ್ಲಿ ಮೋದಿಯವರ ಗುಣಗಾನ ನಡೆಯುತ್ತಿರುತ್ತದೆ. ಮನೆ, ರಸ್ತೆ, ವಿದ್ಯುತ್, ಶಾಲೆ, ಊಟ, ಕಾರ್ಖಾನೆ, ಆಸ್ಪತ್ರೆ, ಬಸ್, ಸಾಲ, ವಿಮೆ, ಗ್ಯಾಸ್, ಟ್ರಾಕ್ಟರ್, ನೀರು- ಎಲ್ಲವನ್ನೂ ಮೋದಿಯೇ ಕೊಟ್ಟಿದ್ದಾರೆಂಬಂತೆ ಅತಿರೇಕದಲ್ಲಿ ಹೊಗಳಲಾಗುತ್ತಿದೆ. "ಎಲ್ಲವನ್ನೂ ಮೋದಿಯೇ ಕೊಟ್ಟಿದ್ದಾರೆ... ತಮ್ಮ ಜೇಬಿನಿಂದ," ಎಂಬಂತಿರುತ್ತದೆ ಈ ಹೊಗಳಿಕೆಯ ದನಿ.

ಪ್ರಧಾನಮಂತ್ರಿಯೊಬ್ಬರನ್ನು ಈ ಪರಿಯಾಗಿ ಉತ್ತೇಜಿಸಿ ಮೇಲೇರಿಸುವುದಕ್ಕೆ, ಅವರ ಸಾಹಸಗಾಥೆಗಳ ಹುಡಿಯೆಬ್ಬಿಸುವುದಕ್ಕೆ ಇಷ್ಟೊಂದು ವ್ಯವಸ್ಥಿತವಾದ ಮಾರ್ಕೆಟಿಂಗ್ ಯಂತ್ರಾಂಗವನ್ನು ಭಾರತದ ಚರಿತ್ರೆಯಲ್ಲಿ ಯಾವೊಬ್ಬ ಪ್ರಧಾನಮಂತ್ರಿಯೂ ಹೊಂದಿರಲಿಲ್ಲ. ಇದು ಮೋದಿಯವರಿಗಿಂತ ಹಿಂದೆಯೂ ಅಸ್ತಿತ್ವದಲ್ಲಿದ್ದ ಹಾಗೂ ಈಗ ಮೋದಿವರು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಭರ್ಜರಿಯಾಗಿ ಬಳಸಿಕೊಳ್ಳುತ್ತಿರುವ ಸರ್ಕಾರಿ ಪ್ರಚಾರ ವ್ಯವಸ್ಥೆಗಳು ಮಾತ್ರವಲ್ಲ; ಮೋದಿಯವರು ಅತಿಯಾಗಿ ಅವಲಂಬಿಸಿರುವ ಮಾಹಿತಿ ಮತ್ತು ಪ್ರಸಾರ ವ್ಯವಸ್ಥೆ ಮಾತ್ರವಲ್ಲ. ಸರ್ಕಾರದಲ್ಲಿರುವ ಪ್ರತಿಯೊಬ್ಬ ಮಂತ್ರಿ, ಅವರ ಪ್ರತಿಯೊಂದು ಇಲಾಖೆ, ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ, ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಕೃಪಕಟಾಕ್ಷದಲ್ಲಿರುವ ಪ್ರತಿಯೊಂದು ಸಾಮಾಜಿಕ ಜಾಲತಾಣ ವ್ಯವಸ್ಥೆ, ಅವರು ಕೆಲಸ ಮಾಡಿಸುತ್ತಿರುವ ಪ್ರತಿಯೊಂದು ಸಾರ್ವಜನಿಕ ಸಂಪರ್ಕ ಸಂಸ್ಥೆ, ಅವರ ಋಣದಲ್ಲಿರುವ ಅನೇಕ ಸುದ್ದಿವಾಹಿನಿಗಳ ಪ್ರತಿಯೊಂದು ಕ್ಯಾಮೆರಾ... ಎಲ್ಲವೂ ತಮ್ಮ ಗುಣಗಾನದಲ್ಲಿ ತಲ್ಲೀನವಾಗಿರುವ ಹಾಗೆ ಮೋದಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ತಮ್ಮನ್ನು ತಾವೇ ಶ್ಲಾಘಿಸಿಕೊಳ್ಳುವುದಕ್ಕೆ, ತಮ್ಮ ಸಾಧನೆಗಳ ಬಗ್ಗೆ ಅತಿಯಾಗಿ ಕೊಚ್ಚಿಕೊಳ್ಳುವುದಕ್ಕೆ ಹಿಂಜರಿಯದ ವ್ಯಕ್ತಿಗಳ ಗುಂಪಿಗೆ ಮೋದಿಯವರು ಸೇರುತ್ತಾರೆ. ಇತ್ತೀಚಿನ ಆಗ್ನೇಯ ಏಷಿಯಾ ಪ್ರವಾಸದ ಸಮಯದಲ್ಲಿ ಮಾಡಿದ ಹಾಗೆ ತಮ್ಮ ಗುಣಗಾನ ಮಾಡಿಕೊಳ್ಳುವ ಅವಕಾಶ ತಮಗೇ ಸಿಕ್ಕರಂತೂ ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಭರ್ಜರಿಯಾಗಿ ಬೆನ್ನು ತಟ್ಟಿಕೊಳ್ಳುತ್ತಾರೆ. ತಮ್ಮದೇ ದೇಶದೊಳಗಿದ್ದರಂತೂ ಹೊಗಳುಭಟರನ್ನು ಯಾವಾಗಲೂ ಜೊತೆಗಿಟ್ಟುಕೊಂಡೇ ತಿರುಗುತ್ತಾರೆ. ಮೋದಿಯವರಾಗಲೀ ಅಥವಾ ಅವರ ಆಪ್ತ ಸಂಪರ್ಕಾಧಿಕಾರಿಗಳಾಗಲೀ ಪರವಾನಗಿ ನೀಡದ ಮೋದಿಯ ವಿಡಿಯೋ ತುಣುಕುಗಳು ಪ್ರಸಾರವಾಗಿದ್ದು ಹೆಚ್ಚೂಕಮ್ಮಿ ಇಲ್ಲವೇ ಇಲ್ಲ! ಅವರು ಅಧಿಕಾರಕ್ಕೇರುವ ಮೊದಲಿನಿಂದಲೂ ಕಾಪಾಡಿಕೊಂಡು ಬಂದಿರುವ ಪ್ರಚಾರ ವೈಖರಿ ಅದು. ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‍ನ ಸಭಾಂಗಣದಲ್ಲಿ ಬೃಹತ್ ಅಧಿಕಾರರೂಢರಿಗೆ ಸವಾಲೊಡ್ಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡಿದಾಗಿನಿಂದಲೂ ನೀವಿದನ್ನು ಗಮನಿಸಿರಬಹುದು. ಕ್ಯಾಮೆರಾಗಳು ಎಲ್ಲಿರಬೇಕು, ಯಾವ ಕೋನದಿಂದ ತಮ್ಮನ್ನು ಸೆರೆಹಿಡಿಯಬೇಕು ಎಂಬುದೆಲ್ಲವೂ ಅವರ ನಿಯಂತ್ರಣದಲ್ಲೇ ಇರುತ್ತದೆ. ಕ್ಯಾಮೆರಾದೊಳಗೆ ಮೂಡುವ ದೃಶ್ಯಗಳನ್ನು ಮಾತ್ರ ನೀವು ಬೇಕಾದಂತೆ ಪ್ರಸಾರ ಮಾಡಿಕೊಳ್ಳಬಹುದು. ತಮ್ಮ ಪಕ್ಷ ಸೋತಾಗಲೂ ಕೂಡ ಮೋದಿಯವರು ಅತಿ ಹೆಚ್ಚು ಜನಾಕರ್ಷಣೆ ಪಡೆದ ನಾಯಕನಾಗಿ ಹೊರಹೊಮ್ಮಿದ್ದು, ಮುಂದಿನ ಸಾಲಿನಲ್ಲಿ ಕುಳಿತ ಉಗ್ರಾಭಿಮಾನಿಗಳು ಮೋದಿಯ ಹೆಸರು ಹೇಳಿ ಅರಚಾಡುತ್ತಿದ್ದುದು ಇದೇ ಕಾರಣಕ್ಕೆ.

ಇದನ್ನೂ ಓದಿ : ಮೋದಿ ಸರ್ಕಾರದ ಬಗ್ಗೆ ಜನರಿಗೆ ತೃಪ್ತಿ ಇಲ್ಲ; ಆರ್‌ಬಿಐ ಸಾಕ್ಷಾತ್ ಸಮೀಕ್ಷೆ!

ಮುಂಬರುವ ವರ್ಷದಲ್ಲಿ ನೀವು ಇಂತಹ ಹೆಚ್ಚೆಚ್ಚು ಘಟನಾವಳಿಗಳನ್ನು ನೋಡಲಿದ್ದೀರಿ. ಏನೇನೆಲ್ಲ ನಡೆಯಬಹುದು ಎಂಬುದನ್ನು ನೀವು ಅತಿ ಚಾಣಾಕ್ಷತೆಯಿಂದ ಈಗಲೇ ಊಹಿಸಬಹುದು. ಅದನ್ನು ಊಹಿಸುವುದಕ್ಕೆ ನಿಮಗೆ ಅತಿ ಚಾಣಾಕ್ಷತೆ ಏಕೆ ಬೇಕೆಂದರೆ, ಮೋದಿಯವರು ನಿರೀಕ್ಷೆಯಂತೆ ಕೆಲಸ ಮಾಡಿಲ್ಲ. ಅವರು ಕೊಟ್ಟ ಆಶ್ವಾಸನೆ ಮತ್ತು ಮಾಡಿದ ಕೆಲಸಗಳ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಗಿದೆ. ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಅವರು ನೀಡಿದ ಭರವಸೆಗಳು ತಲೆಕೆಳಗಾಗಿ ನೆಲಕ್ಕಪ್ಪಳಿಸಿವೆ. ಬೆಲೆಗಳು ನಿರಂತರವಾಗಿ ಗಗನಮುಖಿಯಾಗಿವೆ. ನೋಟು ಅಮಾನ್ಯ ಮತ್ತು ಅದಕ್ಕೆ ಸಂಬಂಧಿಸಿದ ಇತರ ಬೆಳವಣಿಗೆಗಳು, ವಸೂಲಾಗದ ಸಾಲದ ಮೊತ್ತದಲ್ಲಿ (ಎನ್‍ಪಿಎ) ಗಣನೀಯ ಏರಿಕೆ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯೊಳಗಿನ ಭ್ರಷ್ಟ ಅಧಿಕಾರಿಗಳ ದೆಸೆಯಿಂದ ನಡೆಯುತ್ತಿರುವ ದೊಡ್ಡ-ದೊಡ್ಡ ವಂಚನೆಗಳು ಮುಂತಾದವುಗಳ ಪರಿಣಾಮದಿಂದಾಗಿ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಆಮದು ಪ್ರಮಾಣ, ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಆಮದು ಪ್ರಮಾಣ ನೆಗೆತದೋಪಾದಿಯಲ್ಲಿ ಏರುತ್ತಿದೆ. ಒಟ್ಟು ರಾಷ್ಟ್ರೀಯ ಉತ್ಫನ್ನದ (ಜಿಡಿಪಿ) ಶೇಕಡವಾರು ಲೆಕ್ಕದಲ್ಲಿ ರಫ್ತು ಪ್ರಮಾಣ 2014ರಲ್ಲಿ ಶೇ.17ರಷ್ಟಿದ್ದದ್ದು ಈಗ ಶೇ.12ಕ್ಕೆ ಕುಸಿದಿದೆ. ಮೇಕ್ ಇನ್ ಇಂಡಿಯಾ ಘೋಷಣೆ ಕೂಗುವುದನ್ನು ಪ್ರಧಾನಮಂತ್ರಿಗಳು ನಿಲ್ಲಿಸಿಯೇಬಿಟ್ಟಿದ್ದಾರೆ. ಕೃಷಿರಂಗದ ಗೋಳಾಟವಂತೂ ಮುಗಿಲು ಮುಟ್ಟಿದೆ. ಇತ್ತೀಚಿನ ಚುನಾವಣಾ ಭಾಷಣಗಳಲ್ಲಿ ಸ್ವಲ್ಪ ಸಮಾಧಾನಕರ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಇನ್ನೂ ಮಾಡಬೇಕಾದುದು ಬೆಟ್ಟದಷ್ಟಿದೆ, ಅದನ್ನೂ ಮಾಡಲಾಗುತ್ತದೆ. ಈಗಾಗಲೇ ಮೋದಿ ಸರ್ಕಾರ 4,343.26 ಕೋಟಿ ರೂಪಾಯಿ ಹಣವನ್ನು ರಾಜಕೀಯ ಜಾಹಿರಾತುಗಳಿಗೆ ಸುರಿದಿದೆ. ಭಾರತದ ಚರಿತ್ರೆಯಲ್ಲಿ ಜನರ ಜೇಬಿನಿಂದ ಕಿತ್ತುಕೊಂಡ ಇಷ್ಟು ದೊಡ್ಡ ಪ್ರಮಾಣದ ಸಾರ್ವಜನಿಕ ಹಣವನ್ನು ರಾಜಕೀಯ ಲಾಭಕ್ಕಾಗಿ ಖರ್ಚು ಮಾಡಿದ್ದು ಇದೇ ಮೊದಲು. ಅವರ ಮೊದಲ ಅಧಿಕಾರಾವಧಿ ಮುಗಿಯುಷ್ಟರ ಹೊತ್ತಿಗೆ ಈ ಮೊತ್ತ ಇನ್ನೂ ಎಷ್ಟಕ್ಕೆ ಏರುತ್ತದೆಯೋ ಗೊತ್ತಿಲ್ಲ. ವಿನಮ್ರವಾಗಿ ಮತ್ತು ನ್ಯಾಯಬದ್ಧವಾಗಿ ಒಂದು ಪ್ರಶ್ನೆಯನ್ನಂತೂ ಕೇಳಬಹುದು: ಅದಕ್ಕೆಲ್ಲ ಯಾರು ದುಡ್ಡು ಕೊಡುತ್ತಿದ್ದಾರೆ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More