ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಸುದ್ದಿಗಳು

ನೀವು ತಪ್ಪಿಸಿಕೊಂಡಿರಬಹುದಾದ ಮತ್ತು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ   

ಒತ್ತಡ ಸಾಲ ತ್ವರಿತ ವಿಲೇವಾರಿಗೆ ಸಮಿತಿ ರಚನೆ

ಒತ್ತಡದಲ್ಲಿರುವ ಸಾಲಗಳ ತ್ವರಿತ ವಿಲೇವಾರಿಗೆ ಮಾರ್ಗೋಪಾಯಗಳನ್ನು ಸೂಚಿಸಲು ಕೇಂದ್ರ ಸರ್ಕಾರ ಬ್ಯಾಂಕರುಗಳ ಸಮತಿಯೊಂದನ್ನು ರಚಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುನಿಲ್ ಮೆಹ್ತಾ ನೂತನ ಸಮಿತಿ ಅಧ್ಯಕ್ಷರಾಗಿದ್ದಾರೆ. ಒತ್ತಡದಲ್ಲಿರುವ ಸಾಲಗಳನ್ನು ವಿಲೇವಾರಿ ಮಾಡಲು ಆಸ್ತಿ ಪುನರ್ನಿರ್ಮಾಣ ಕಂಪನಿ ರಚಿಸಬೇಕೇ ಅಥವಾ ಆಸ್ತಿ ನಿರ್ವಹಣಾ ಕಂಪನಿ ರಚಿಸಬೇಕೆ ಎಂಬುದನ್ನು ಸುನಿಲ್ ಮೆಹ್ತಾ ಸಮಿತಿ ಶಿಫಾರಸು ಮಾಡಲಿದೆ. ವಿವಿಧ ಬ್ಯಾಂಕುಗಳ ಪ್ರತಿನಿಧಿಗಳನ್ನೊಂಡ ಸಮಿತಿಯು ಇಂತಹದೊಂದು ಕಂಪನಿ ಅಗತ್ಯ ಎಂದು ತಿಳಿಸಿದರೆ ರಚಿಸಲಾಗುತ್ತದೆ ಎಂದು ಶುಕ್ರವಾರ ಹಂಗಾಮಿ ವಿತ್ತ ಸಚಿವ ಪಿಯುಶ್ ಗೋಯಲ್ ತಿಳಿಸಿದ್ದಾರೆ. ವಿವಿಧ ಬ್ಯಾಂಕುಗಳ ಮುಖ್ಯಸ್ಥರ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದರು. 2017ರ ಆರ್ಥಿಕ ಸಮೀಕ್ಷೆಯಲ್ಲಿ ಪಬ್ಲಿಕ್ ಸೆಕ್ಟರ್ ಅಸೆಟ್ ರಿಹ್ಯಾಬಿಲೆಷನ್ ಏಜೆನ್ಸಿ (ಪಾರಾ) ರಚಿಸಲು ಶಿಫಾರಸು ಮಾಡಲಾಗಿತ್ತು. ಒತ್ತಡದಲ್ಲಿರುವ ಸಾಲವನ್ನು ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ನಿಂದ ಹೊರಗಿಡುವ ಪ್ರಸ್ತಾಪ ಬಹಳ ದಿನಗಳದ್ದು. ಅದನ್ನು ಪರಿಣಾಮಕಾರಿಯಾಗಿ ಮಾಡಲು ಕಂಪನಿ ರಚನೆಗೆ ಮುಂದಾಗಿದೆ.

ರೆಪೊ ದರ ಏರಿಸಿದ ಆರ್‌ಬಿಐ ನಿಲುವನ್ನು ಸ್ವಾಗತಿಸಿದ ಐಎಂಎಫ್

ಬುಧವಾರ (ಜೂ ೬) ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇ.0.25ರಷ್ಟು ಏರಿಸಿದೆ. ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ರೆಪೊ ದರ ಏರಿಸಲಾಗಿದೆ. ರಿವರ್ಸ್ ರೆಪೊ ದರವನ್ನು ಶೇ.0.25ರಷ್ಟು ಏರಿಸಲಾಗಿದೆ. ರೆಪೊ ದರ ಶೇ.6.25ಕ್ಕೆ, ರಿವರ್ಸ್ ರೆಪೊ ದರ ಶೇ.6ಕ್ಕೆ ಏರಿದೆ. ಆರ್‌ಬಿಐನ ಈ ಕ್ರಮವನ್ನು ವಿಶ್ವಸಂಸ್ಥೆಯ ವಿಶ್ವ ಹಣಕಾಸು ನಿಧಿ ವಕ್ತಾರ ಗೆರ್ರಿ ರೈಸ್ ಸ್ವಾಗತಿಸಿದ್ದಾರೆ.

ಮೋದಿ ಜನಪ್ರಿಯತೆ ಕುಗ್ಗಿದಾಗೆಲ್ಲ ಮೋದಿ ಹತ್ಯೆ ಸುದ್ದಿ ತೇಲಿಬಿಡಲಾಗುತ್ತದೆ: ಕಾಂಗ್ರೆಸ್

ಮೋದಿ ಹತ್ಯೆ ಕುರಿತಂತೆ ಸಂಚಿನ ಸುದ್ದಿಗಳು ಏಳುತ್ತಿವೆ. ಪುಣೆಯ ಪೊಲೀಸರು ಈ ಕುರಿತು ಸಂಚೊದನ್ನು ಹೊರಗೆಳದಿದ್ದಾರೆ. ಈ ಹಿಂದಿನ ರಾಜೀವ ಗಾಂಧಿ ಹತ್ಯೆಗೆ ಮೋದಿ ಹತ್ಯೆ ಸಂಚನ್ನು ಹೋಲಿಸಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಸಂಸದ ಸಂಜಯ್ ನಿಪುರಮ್ ಮಾತನಾಡಿ, ವದಂತಿಗಳ ಕುರಿತಾಗಿ ಟೀಕೆ ಮಾಡಿದ್ದಾರೆ. ಯಾವಾಗ ಮೋದಿ ಜನಪ್ರಿಯತೆ ಕುಗ್ಗಲು ಶುರು ಆಗುತ್ತದೋ ಆಗ ಮೋದಿ ಹತ್ಯೆ ಕುರಿತಾದ ಸುದ್ದಿಗಳನ್ನು ನಡೆಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹೊತ್ತಿನಲ್ಲಿ ಎದ್ದಿರುವ ಸುದ್ದಿಗಳು ಎಷ್ಟು ಸತ್ಯ ಎಂದು ಕೂಡ ಪ್ರಶ್ನಿಸಿದ್ದಾರೆ.

ಫೈನಲ್‌ಗೆ ದಾಂಗುಡಿ ಇಟ್ಟ ಡಾಮಿನಿಕ್ ಥೀಮ್

ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಜಯದ ಓಟ ಮುಂದುವರೆಸಿರುವ ಆಸ್ಟ್ರೇಲಿಯಾ ಆಟಗಾರ ಡಾಮಿನಿಕ್ ಥೀಮ್ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಶುಕ್ರವಾರ (ಜೂನ್ ೮) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಏಳನೇ ಶ್ರೇಯಾಂಕಿತ ಡಾಮಿನಿಕ್, ಇಟಲಿ ಆಟಗಾರ ಮಾರ್ಕೊ ಸೆಚಿನಾಟೊ ವಿರುದ್ಧ ೭-೫, ೭-೬ (೧೨/೧೦) ಮತ್ತು ೬-೧ ನೇರ ಸೆಟ್‌ಗಳ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೆ ಕಾಲಿಟ್ಟರು. ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ಮಾಜಿ ನಂ ೧ ಆಟಗಾರ ನೊವಾಕ್ ಜೊಕೊವಿಚ್ ವಿರುದ್ಧ ಗೆಲುವು ಸಾಧಿಸಿದ್ದ ಡಾಮಿನಿಕ್, ಸೆಮಿಫೈನಲ್‌ನಲ್ಲೂ ವಿಜೃಂಭಿಸಿದರು. ಇದೀಗ ಭಾನುವಾರ (ಜೂನ್ ೧೦) ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸ್ಪೇನ್‌ನ ರಾಫೇಲ್ ನಡಾಲ್ ಇಲ್ಲವೇ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಥೀಮ್ ಸೆಣಸಲಿದ್ದಾರೆ.

ಶೀಘ್ರದಲ್ಲೇ ವಿಜಯ್ ಮಲ್ಯ ಗಡಿಪಾರು

ಭಾರತೀಯ ಬ್ಯಾಂಕ್ ಗಳಿಂದ 9,000 ಕೋಟಿ ರುಪಾಯಿ ಸಾಲ ಮಾಡಿ, ಲಂಡನ್‌ಗೆ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಶೀಘ್ರದಲ್ಲೇ ಗಡಿಪಾರು ಮಾಡಿಸಿಕೊಳ್ಳಲಾಗುವುದು ಎಂದು ವಿದೇಶಿ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಕ್ತಾರ ರವೀಶ್ ಕುಮಾರ್, “ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿಸಿಕೊಳ್ಳುವ ಪ್ರಯತ್ನ ಸಾಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲೇ ಬ್ರಿಟನ್ ಸರ್ಕಾರಕ್ಕೆ ಈ ಕುರಿತಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿತ್ತು. ಈ ಕುರಿತಂತೆ ವಿಚಾರಣೆ ಕೈಗೊಂಡಿರುವ ನ್ಯಾಯಾಲಯ, ಶೀಘ್ರದಲ್ಲೇ ತೀರ್ಪು ಪ್ರಕಟಿಸಲಿದೆ,” ಎಂದಿದ್ದಾರೆ.

ಶಸ್ತ್ರ ಬಳಕೆಗೆ ಉಪಯೋಗವಾಗುವಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಭಿವೃದ್ಧಿಪಡಿಸುವುದಿಲ್ಲ: ಪಿಚೈ

ಗೂಗಲ್ ಕಂಪನಿಯು ಶಸ್ತ್ರ ಬಳಕೆಗೆ ಸಹಾಯವಾಗುವಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಸಂಸ್ಥೆಯ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. “ಯುದ್ಧಕ್ಕೆ ಸಹಾಯವಾಗುವಂತೆ ನಾವು ವ್ಯವಹಾರ ಮಾಡುವುದಿಲ್ಲ, ಸೇನೆಗೆ ಹಾಗೂ ಸರ್ಕಾರಗಳಿಗೆ ಸಹಾಯವಾಗುವಂತೆ ಶಸ್ತ್ರಗಳ ಬಳಕೆ ಮಾಹಿತಿಯನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಅಭಿವೃದ್ಧಿ ಪಡಿಸುತ್ತೇವೆ,” ಎಂದು ತಮ್ಮ ಬ್ಲಾಗ್‌ನಲ್ಲಿ ಪಿಚೈ ಬರೆದುಕೊಂಡಿದ್ದಾರೆ.

ನಾರ್ವೆ ಚೆಸ್‌ನಲ್ಲಿ ಆನಂದ್‌ಗೆ ಜಂಟಿ ಎರಡನೇ ಸ್ಥಾನ

ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಚದುರಂಗ ಪ್ರವೀಣ ವಿಶ್ವನಾಥನ್ ಆನಂದ್ ಎರಡನೇ ಸ್ಥಾನ ಗಳಿಸಿದರು. ಶುಕ್ರವಾರ (ಜೂನ್ ೮) ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್, ರಷ್ಯನ್ ಆಟಗಾರ ಸರ್ಗೆ ಕರ್ಜಾಕಿನ್ ವಿರುದ್ಧ ಗೆಲುವು ಸಾಧಿಸಿದರು. ಮೊದಲ ಆರು ಸುತ್ತಿನ ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದ ಆನಂದ್, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶ ಕಂಡರು. ಆದರೆ, ಇಂದಿನ ಪಂದ್ಯಕ್ಕೂ ಮುಂಚೆ ನಡೆದ ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೊ ಕರೂನಾ ವಿರುದ್ಧದ ಸೋಲು ಅವರ ಪ್ರಶಸ್ತಿ ಆಸೆಗೆ ಪೆಟ್ಟು ನೀಡಿತು. ಅಂತಿಮ ಸುತ್ತಿನ ಪಂದ್ಯ ಮುಗಿದಾಗ ಕರೂನಾ (೫ ಪಾಯಿಂಟ್ಸ್) ಮೊದಲ ಸ್ಥಾನ ಪಡೆದರೆ, ಅಮೆರಿಕದ ಹಿಕಾರು ನಕಮುರಾ, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ಆನಂದ್ ತಲಾ ೪.೫ ಪಾಯಿಂಟ್ಸ್‌ಗಳೊಂದಿಗೆ ಜಂಟಿ ಎರಡನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು

ಆನ್‌ಲೈನ್‌ನಲ್ಲಿ ಟ್ರ್ಯಾಕ್‌ ಮಾಡುವವರನ್ನು ಬ್ಲಾಕ್‌ ಮಾಡುತ್ತಿದೆ ಆಪಲ್‌

ಮಾಹಿತಿ ಸೋರಿಕೆ, ಮಾಹಿತಿಯ ಖಾಸಗಿತನ ಕುರಿತು ಗಂಭೀರ ಚರ್ಚೆಗಳು, ಫೇಸ್‌ಬುಕ್‌ನಿಂದ ಭಾರಿ ಪ್ರಮಾಣದ ಮಾಹಿತಿ ಸೋರಿಕೆಯಾದ ಹಿನ್ನೆಲೆಯಲ್ಲಿ ಅನೇಕ ಸಂಸ್ಥೆಗಳು ಫೇಸ್‌ಬುಕ್‌ ಅನ್ನು ದೂರವಿಡುವುದಕ್ಕೆ ನಿರ್ಧರಿಸಿವೆ. ಈ ಪಟ್ಟಿಯಲ್ಲಿ ಮೊದಲು ಗಮನ ಸೆಳೆದಿರುವುದು ಆಪಲ್‌. ಫೇಸ್‌ಬುಕ್‌ ಮತ್ತು ಇತರ ಯಾವುದೇ ಕಂಪನಿಗಳು ತಮ್ಮ ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಬಳಕೆದಾರರ ಮೇಲೆ ಕಣ್ಣಿಡುವ ಪ್ರಯತ್ನ ಮಾಡುತ್ತಿದ್ದರೆ, ಅಂಥವನ್ನು ಬ್ಲಾಕ್‌ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಮ್ಯಾಕ್‌ ಮತ್ತು ಐಓಎಸ್‌ ಅಂದರೆ, ಐಫೋನ್‌ ಮತ್ತು ಮ್ಯಾಕ್‌ ಕಂಪ್ಯೂಟರ್‌ಗಳಲ್ಲಿರುವ ಬ್ರೌಸರ್‌ಗಳನ್ನು ಬಳಕೆದಾರರ ಯಾವುದೇ ಡಿಜಿಟಲ್‌ ಫೂಟ್‌ಪ್ರಿಂಟ್‌ ಇಲ್ಲದಂತೆ ನೋಡಿಕೊಳ್ಳುತ್ತದೆ. ನಾವು ಬ್ರೌಸರ್‌ ಮೂಲಕ ಯಾವುದೇ ಮಾಹಿತಿ ಹುಡುಕಿದರೂ ಅದು ಕುಕೀಸ್‌ ರೂಪದಲ್ಲಿ ಬ್ರೌಸರ್‌ನಲ್ಲಿರುತ್ತದೆ. ಅದನ್ನು ಗುರುತಿಸುವ ಕಂಪನಿಗಳು ಅದರ ಮೂಲಕ ಮಾಹಿತಿಯನ್ನು ಕದಿಯುತ್ತದೆ. ಆಪಲ್‌ ಇದನ್ನು ಬ್ಲಾಕ್‌ ಮಾಡಲು ಯೋಚಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More