ಟ್ರಂಪ್ ಸುಂಕ ನೀತಿ ಫಲಶೃತಿ; ಅಮೆರಿಕವನ್ನು ಪ್ರತ್ಯೇಕವಾಗಿಟ್ಟ ಜಿ7 ದೇಶಗಳು

ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಜಿ7 ರಾಷ್ಟ್ರಗಳು ಕೆನಡಾದ ಲಾ ಮಲ್ಬಾಯ್‌ನಲ್ಲಿ ಅಮೆರಿಕ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿ, ಜೊತೆಗಿದ್ದೂ ಪ್ರತ್ಯೇಕವಾಗಿಟ್ಟಿವೆ. ಟ್ರಂಪ್ ಸುಂಕ ನೀತಿಯಿಂದ ಜಿ7 ಗುಂಪಿನ ಒಗ್ಗಟ್ಟು ಮುರಿದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ

ರಾಷ್ಟ್ರದ ಸುರಕ್ಷತೆ ಹೆಸರಿನಲ್ಲಿ ಕಬ್ಬಿಣ ಮತ್ತು ಅಲ್ಯುಮಿನಿಯಂ ಮೇಲೆ ಆಮದು ಸುಂಕ ಹೇರುವ ಡೊನಾಲ್ಡ್ ಟ್ರಂಪ್ ನೀತಿಯ ವಿರುದ್ಧ ಅಸಮಾಧಾನಗೊಂಡಿರುವ ಮಿತ್ರರಾಷ್ಟ್ರಗಳು ಜಿ7 ಶೃಂಗಸಭೆಯಲ್ಲಿ ಅಮೆರಿಕವನ್ನು ಪ್ರತ್ಯೇಕವಾಗಿಯೇ ಇಟ್ಟಿವೆ.

ಇಡೀ ಸಮಾವೇಶದಲ್ಲಿ ಅಮೆರಿಕವು ಸುಂಕ ಹೇರುವ ನೀತಿಯೇ ಪ್ರಮುಖ ಚರ್ಚೆಯ ವಿಷಯವಾಗಿದೆ. ಆದರೆ, ಈ ವಿಚಾರದಲ್ಲಿ ಮಿತ್ರರಾಷ್ಟ್ರಗಳ ಅಭಿಪ್ರಾಯವನ್ನು ಸಮಾಧಾನದಿಂದ ಆಲಿಸಲು ಸಿದ್ಧರಿಲ್ಲದ ಟ್ರಂಪ್ ಅವರನ್ನು ಉಳಿದ ಆರು ರಾಷ್ಟ್ರಗಳ ನಾಯಕರು ಪ್ರತ್ಯೇಕವಾಗಿಯೇ ಇಟ್ಟರು. ಸಾಮಾನ್ಯವಾಗಿ ಆರ್ಥಿಕ ವಿಷಯಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಲು ವೇದಿಕೆಯಾಗುತ್ತಿದ್ದ ಜಿ7 ಶೃಂಗಸಭೆ ಈ ಭಾರಿ ಪ್ರತ್ಯೇಕತೆಗೆ ಹಾದಿ ಮಾಡಿಕೊಟ್ಟಿತು.

“ಇದು ಜಿ7 ಶೃಂಗಸಭೆಯಲ್ಲಿ ಜಿ6 ಪ್ಲಸ್ 1 ಶೃಂಗಸಭೆ,” ಎಂಬ ವ್ಯಂಗ್ಯದ ಮಾತುಗಳು ಕೆನಡಾದ ಕ್ಯೂಬೆಕ್‌ನ ರಿಸಾರ್ಟ್‌ಗಳ ನಗರ ಲಾ ಮಲ್ಬಾಯ್ ಬೀದಿಬೀದಿಗಳಲ್ಲಿ ಅನುರಣಿಸಿದವು. ಟ್ರಂಪ್ ಶೃಂಗಸಭೆಗೆ ಆಗಮಿಸುವ ಮುನ್ನವೇ ಒಗ್ಗಟ್ಟು ಮುರಿಯುವ ಇರಾದೆಯನ್ನು ಪ್ರದರ್ಶಿಸಿದ್ದರು. ಜಿ7 ಗುಂಪಿಗೆ ರಷ್ಯಾವನ್ನೂ ಸೇರಿಸಿಕೊಳ್ಳಬೇಕು ಎಂಬ ಅವರ ಮಾತಿಗೆ ಉಳಿದ ಮಿತ್ರರಾಷ್ಟ್ರಗಳು ಅಸಮ್ಮತಿ ವ್ಯಕ್ತಪಡಿಸಿವೆ.

ಕೆನಡಾದ ನಿಲುವು ಅತ್ಯಂತ ಸ್ಪಷ್ಟ. ರಷ್ಯಾದ ಈಗಿನ ನಡೆಯೊಂದಿಗೆ ಅದನ್ನು ಯಾವುದೇ ಕಾರಣಕ್ಕೂ ಜಿ7 ಗುಂಪಿನೊಳಕ್ಕೆ ತರುವುದು ಸಾಧ್ಯವೇ ಇಲ್ಲ ಎಂದು ಕೆನಡಾ ವಿದೇಶಾಂಗ ಸಚಿವೆ ಕ್ರಿಶ್ಟಿಯಾ ಫ್ರೀಲ್ಯಾಂಡ್ ಹೇಳಿದ್ದಾರೆ.

ಕ್ರಿಶ್ಟಿಯಾ ಫ್ರೀಲ್ಯಾಂಡ್ ಅವರ ದನಿಯು, ಉಕ್ರೇನ್ ವಿಷಯದಲ್ಲಿ ರಷ್ಯಾ ಗಣನೀಯವಾಗಿ ಪ್ರಗತಿ ಸಾಧಿಸುವವರೆಗೂ ಆ ದೇಶವನ್ನು ಜಿ7 ಗುಂಪಿಗೆ ಮರುಪ್ರವೇಶಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂಬ ಜರ್ಮನ್ ಚಾನ್ಸಲರ್ ಎಂಜೆಲಾ ಮಾರ್ಕೆಲ್ ಅವರ ದನಿಯನ್ನು ಪ್ರತಿದ್ವನಿಸಿದೆ. ಇಟಲಿ ನೂತನ ಪ್ರಧಾನಿ ಗ್ಯುಸೆಪ್ ಕೊಂಟ್ ಟ್ರಂಪ್ ಸಲಹೆಯನ್ನು ಸ್ವಾಗತಿಸಿದ್ದಾರೆ. ರಷ್ಯಾವೂ ಜಿ8 ಸಮೂಹಕ್ಕೆ ಮರುಪ್ರವೇಶ ಮಾಡಬೇಕು, ಎಲ್ಲರ ಹಿತಾಸಕ್ತಿಗಾಗಿ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ, ಖುದ್ದು ರಷ್ಯಾ ಜಿ8 ಸಮೂಹಕ್ಕೆ ಸೇರುವ ಬಗ್ಗೆ ತನ್ನ ಆಸಕ್ತಿಯನ್ನೇನೂ ತೋರಿಸಿಲ್ಲ. ಕ್ಲೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್, ಜಿ7 ಹೊರತುಪಡಿಸಿ ಇತರ ಕಾರ್ಯತಂತ್ರಗಳತ್ತ ಗಮನ ಹರಿಸಲಿದೆ ಎಂದು ಹೇಳಿದ್ದಾರೆ. 2014ರಲ್ಲಿ ಉಕ್ರೇನಿನ ಕ್ರೆಮಿಯಾ ಸ್ವಾಧೀನಪಡಿಸಿಕೊಂಡ ನಂತರ ರಷ್ಯಾವನ್ನು ಜಿ8 ರಾಷ್ಟ್ರಗಳ ಗುಂಪಿನಿಂದ ಹೊರಹಾಕಲಾಗಿತ್ತು. ಅಂದಿನಿಂದ ಜಿ7 ಆಗಿ ಬದಲಾಯಿತು.

ರಷ್ಯಾ ಜೊತೆಗೆ ಕೈಜೋಡಿಸುವ ಮಾತನಾಡುವ ಅಮೆರಿಕದ ನಿಲುವನ್ನು ವಿರೋಧಿಸುವಂತೆಯೇ ಅಮೆರಿಕವು ಇರಾನ್ ದೇಶದ ಕುರಿತಂತೆ ಕೈಗೊಂಡ ನಿಲುವನ್ನು ಮಿತ್ರರಾಷ್ಟ್ರಗಳು ವಿರೋಧಿಸಿವೆ. ಹೀಗಾಗಿ, ಜಿ7 ಶೃಂಗಸಭೆಯು ಜಿ6 ಪ್ಲಸ್ 1 ಶೃಂಗಸಭೆ ಎಂದು ವ್ಯಂಗ್ಯವಾಗಿ ಹೇಳಲಾಗುತ್ತಿದೆ. ಈ ವ್ಯಂಗ್ಯವು ಅಮೆರಿಕವನ್ನು ಮಿತ್ರರಾಷ್ಟ್ರಗಳು ಪ್ರತ್ಯೇಕಗೊಳಿಸಿರುವುರ ಸಂಕೇತವೆಂಬಂತಿದೆ.

ಜಿ7 ಶೃಂಗಸಭೆ ಆರಂಭವಾಗುವ ಒಂದು ವಾರ ಮುನ್ನವೇ ಟ್ರಂಪ್ ಆಡಳಿತವು ಕೆನಡಾ, ಮೆಕ್ಸಿಕೊ ಮತ್ತು ಯೂರೋಪ್ ದೇಶಗಳಿಂದ ಆಮದಾಗುವ ಕಬ್ಬಿಣ ಮತ್ತು ಅಲ್ಯುಮಿನಿಯಂ ಮೇಲೆ ಮತ್ತಷ್ಟು ಸುಂಕ ಹೇರುವುದಾಗಿ ಹೇಳಿತ್ತು. ಕೆಲವು ರಾಷ್ಟ್ರಗಳ ಅಮೆರಿಕ ಹೇರುವ ಸುಂಕಕ್ಕೆ ಪ್ರತಿಯಾಗಿ ಆ ದೇಶದ ಸರಕುಗಳ ಮೇಲೆ ಸುಂಕ ಹೇರುವುದಾಗಿ ಹೇಳಿವೆ. ಶೃಂಗಸಭೆಗೆ ಆಗಮಿಸುವ ಮುನ್ನ ಟ್ರಂಪ್ ಅವರು ಜಿ7 ದೇಶಗಳ ನ್ಯಾಯಸಮ್ಮತವಲ್ಲದ ವ್ಯಾಪಾರ ವಹಿವಾಟು ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ : ಸುಂಕ ಹೇರಿದ ಅಮೆರಿಕ ವಿರುದ್ಧದ ಸಂಘರ್ಷಕ್ಕೆ ವೇದಿಕೆಯಾದ ಜಿ7 ಶೃಂಗಸಭೆ

ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಅವರು, “ಅಮೆರಿಕ ಅಧ್ಯಕ್ಷರಿಗೆ ತಾವು ಪ್ರತ್ಯೇಕವಾಗುವುದರ ಬಗ್ಗೆ ಏನೂ ಅನಿಸದೆ ಇರಬಹುದು. ಅದರೆ, ನಾವು 6 ರಾಷ್ಟ್ರಗಳು ಅಗತ್ಯ ಬಿದ್ದರೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ,” ಎಂದು ಟ್ವಿಟ್ ಮಾಡಿದ್ದರು.

ಇಷ್ಟೆಲ್ಲದರ ನಡುವೆಯೂ ಶೃಂಗಸಭೆಯು ಅತ್ಯಂತ ಸೌಹಾರ್ದಯುತವಾಗಿ ಮತ್ತು ಫಲಪ್ರದವಾಗಿ ಮುಂದುವರಿದಿದೆ ಎಂದು ರಾಯಭಾರಿಗಳು ಹೇಳಿಕೊಂಡಿದ್ದಾರೆ. ಎಷ್ಟೆಲ್ಲ ಭಿನ್ನಾಭಿಪ್ರಾಯಗಳ ನಡುವೆಯೂ ಏಳೂ ರಾಷ್ಟ್ರಗಳ ನಾಯಕರು ಕ್ಯಾಮೆರಾಗಳ ಮುಂದೆ ಮುಗುಳ್ನಗೆ ಚೆಲ್ಲಿದ್ದಾರೆ, ಭೌತಿಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More