ಪ್ರಣಬ್ ಆರ್‌ಎಸ್‌ಎಸ್ ಭೇಟಿಯಿಂದ ನಿಜಕ್ಕೂ ಯಾರಿಗೆ ಪ್ರಯೋಜನ? ಉಳಿದ ಬಿಂಬವೇನು?

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಬಹುತ್ವ, ಸಹಿಷ್ಣುತೆ, ವೈವಿಧ್ಯತೆಯ ಆಶಯಗಳನ್ನೊಳಗೊಂಡ ಕಾಳಜಿಪೂರ್ಣ ಮಾತುಗಳನ್ನಾಡಿದ್ದಾರೆ. ಇದರಿಂದ ಪರಿವಾರದ ಮನಃಪರಿವರ್ತನೆ ಆದೀತಾ ಅಥವಾ ಸಂಘ ಪ್ರಣಬ್‌ ‘ಬಿಂಬ’ದ ಲಾಭವನ್ನಷ್ಟೇ ಪಡೆಯುತ್ತದೆಯೇ? 

ವಿವಾದ, ಆಕ್ಷೇಪಗಳ ಮಧ್ಯೆಯೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಗೆ ತೆರಳಿದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅತ್ಯಂತ ಜಾಣ್ಮೆಯ ಭಾಷಣ ಮಾಡಿದರು. ಅವರನ್ನು ಆಹ್ವಾನಿಸಿ, ಆಧರಿಸಿದ ಸಂಘ ಕೂಡ ಅಷ್ಟೇ ಜಾಣ್ಮೆಯಿಂದ ಪ್ರಣಬ್ ಭೇಟಿಯ ಲಾಭ ಪಡೆಯುವ ಸೂಚನೆ ನೀಡಿತು. ಆರ್‌ಎಸ್‌ಎಸ್ ಕಚೇರಿಗೆ ಪ್ರಣಬ್ ಭೇಟಿಯ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದ ಕಾಂಗ್ರೆಸ್, ಅವರು ಆಡಿದ ಮಾತು ಕೇಳಿದ ನಂತರ ಹಗುರ ಭಾವ ವ್ಯಕ್ತಪಡಿಸಿತು. ಟೀಕಾಸ್ತ್ರ ಪ್ರಯೋಗಿಸುತ್ತಿದ್ದವರೆಲ್ಲ ಅವರ ಮುತ್ಸದ್ಧಿತನದ ಬಗ್ಗೆ ತಾರೀಫು ಮಾಡಲಾರಂಭಿಸಿದರು. ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ವೈಯಕ್ತಿಕ ಸ್ನೇಹಕ್ಕೆ ಕಟ್ಟುಬಿದ್ದು ಆಹ್ವಾನವನ್ನು ಒಪ್ಪಿದ್ದ ಪ್ರಣಬ್ ನಡೆ-ನುಡಿಗಳ ಬಗ್ಗೆ ಕುತೂಹಲಿಯಾಗಿದ್ದ ಸಂಘ‌ ಕೂಡ, “ಸದ್ಯ, ಕಟು ಟೀಕೆ ಮೊಳಗಲಿಲ್ಲ,’’ ಎನ್ನುವ ನಿರಾಳ ಭಾವ ಅನುಭವಿಸಿತು.

ಇದೆಲ್ಲದರಿಂದಾದ ಪರಿಣಾಮವೇನು? ಅಪರೂಪಕ್ಕೆನ್ನುವಂತೆ ಆರ್‌ಎಸ್‌ಎಸ್ ಕೇಂದ್ರ ಕಚೇರಿಯು ಸುದ್ದಿಯ ಕೇಂದ್ರವಾಗಿತ್ತು. ಅಲ್ಲಿನ ವಾರ್ಷಿಕ ಕಾರ್ಯಕ್ರಮ ನೇರ ಪ್ರಸಾರ ಕಂಡಿತು. ಅದರಾಚೆಗೆ? ಪ್ರಣಬ್‌ ಅವರ ಬುದ್ದಿಮಾತು, ಅದರಲ್ಲಿ ಬಿಂಬಿತವಾದ ಬಹುತ್ವ ಮತ್ತು ಸಹಿಷ್ಣುತೆಯ ಆಶಯ ಎಷ್ಟರ ಮಟ್ಟಿಗೆ ಸಂಘದ ಹೊಸ ಕಾರ್ಯಕರ್ತರ ಕಿವಿ ಮತ್ತು ಮನಸುಗಳನ್ನು ಮುಟ್ಟಿದೆ ಎನ್ನುವುದರ ಮೇಲೆ ನಿರ್ಧರಿತವಾಗಬಹುದಾದರೂ, ಅದೆಲ್ಲ ದೂರದ ಮಾತು. ತಕ್ಷಣದ ವಿದ್ಯಮಾನಗಳನ್ನು ನೋಡಿದರೆ, ಭಾಷಣದ ಮುನ್ನಾದಿನ ಪ್ರಣಬ್‌ ಪುತ್ರಿ ಶರ್ಮಿಷ್ಠಾ ಮುಖರ್ಜಿ ವ್ಯಕ್ತಪಡಿಸಿದ್ದ, “ಅಲ್ಲಿ ನೀವು ಆಡುವ ಮಾತು ಮರೆತುಹೋಗಿ, ಬಿಂಬವಷ್ಟೇ ಉಳಿಯಬಹುದು,’’ ಎನ್ನುವ ಎಚ್ಚರಿಕೆಯ ಮಾತೇ ನಿಜವಾಗುವ ಸಾಧ್ಯತೆ ಕಾಣುತ್ತಿದೆ.

ದೇಶದ ಪ್ರಥಮ ಪ್ರಜೆಯಾಗಿ, ಕೇಂದ್ರದ ಸಚಿವರಾಗಿ ಪ್ರಣಬ್‌ ಈ ಮೊದಲು ನೂರಾರು ಭಾಷಣ ಮಾಡಿದ್ದಾರೆ. ವೈಯಕ್ತಿಕವಾಗಿ ತಮ್ಮದೇ ಆಚರಣೆ, ನಂಬಿಕೆಗಳನ್ನು ಹೊಂದಿದ್ದರೂ ಸಾರ್ವಜನಿಕ ಬದುಕಿನಲ್ಲಿ ಅವರು ಯಾವತ್ತೂ ಸಾಂವಿಧಾನಿಕ ಮೌಲ್ಯಗಳಿಗೆ, ಬಹುತ್ವದ ಆಶಯಕ್ಕೆ ಬದ್ಧರಾಗಿಯೇ ಇದ್ದಾರೆ, ಮಾತನಾಡಿದ್ದಾರೆ ಕೂಡ. ಗುರುವಾರ (ಜೂ.೭) ಐತಿಹಾಸಿಕ ಎನ್ನಬಹುದಾದ ನಾಗ್ಪುರ ಭಾಷಣದಲ್ಲೂ ಸಂವಿಧಾನ ಅಂಗೀಕರಿಸಿರುವ ಬಹುತ್ವದ ಆಶಯ, ಸಹಿಷ್ಣುತೆ, ವೈವಿಧ್ಯತೆಯ ಅಂಶಗಳು ಹಾಸುಹೊಕ್ಕಾಗಿದ್ದವು. “ಸಹಿಷ್ಣುತೆ ನಮ್ಮ ಶಕ್ತಿ. ಬಹುತ್ವವೇ ಬಲ. ವೈವಿಧ್ಯತೆಯನ್ನು ಸಂಭ್ರಮಿಸುತ್ತೇವೆ,’’ ಎಂದು ಸಾರಿದರು. ಯಾವುದೇ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದಂತೆಯೇ ಮುಖರ್ಜಿ ಇಲ್ಲಿಯೂ ಮಾತನಾಡಿದರು. ಆದರೆ, ಹಿಂದಿನ, ಇಂದಿನ ಭಾಷಣಗಳಲ್ಲಿ ಇದ್ದ ಒಂದೇ ಭಿನ್ನ ಅಂಶ, ಭಾಷಣ ಮಾಡಿದ ಸ್ಥಳ. ಜಾತ್ಯತೀತ ಮತ್ತು ಬಹುತ್ವದ ಆಶಯಗಳಿಗೆ ವಿರುದ್ಧ ನಿಲುವು ಹೊಂದಿರುವ, ಹಿಂದೂರಾಷ್ಟ್ರ ವಾದವನ್ನು ಪ್ರತಿಪಾದಿಸುವ ಅಗ್ರ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಯಲ್ಲಿ ಅವರಾಡಿದ ಅವೇ ಮಾತುಗಳು ತುಸು ಭಿನ್ನ ಅರ್ಥ ಹೊಮ್ಮಿಸಿದವು.

ರಾಷ್ಟ್ರ, ರಾಷ್ಟ್ರೀಯತೆ, ದೇಶಭಕ್ತಿಯ ಬಗ್ಗೆ ಮಾತನಾಡಲು ಬಯಸಿದ್ದೇನೆ ಎಂದರು. ಗುಪ್ತ, ಮೌರ್ಯ ಸಾಮ್ರಾಜ್ಯ, ಮುಸ್ಲಿಂ ದಾಳಿಕೋರರು, ಬ್ರಿಟಿಷ್ ಆಡಳಿತ ಸಂದರ್ಭಗಳನ್ನು ಒಳಗೊಂಡು ಭಾರತದ ಇತಿಹಾಸದ ತ್ವರಿತ ಅವಲೋಕನ ನಡೆಸಿದರು. ಗಾಂಧೀಜಿ, ನೆಹರೂ ಮತ್ತಿತರರನ್ನು ಉಲ್ಲೇಖಿಸಿ, ಸಂಘದ ಸ್ವಯಂಸೇವಕರಿಗೆ ಇಂಥವರು ಮಾದರಿಗಳಾಗಲಿ ಎಂದು ಬಯಸಿದರು. ಆರ್‌ಎಸ್‌ಎಸ್‌‌ ಹಿಂದೂರಾಷ್ಟ್ರ ನಿರ್ಮಾಣದ ನಂಬಿಕೆಗೆ ವಿರುದ್ಧವಾದ ಬಹುಮುಖಿ, ಜಾತ್ಯತೀತ ಭಾರತದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಈ ಇಬ್ಬರು ನಾಯಕರ ಹೆಸರನ್ನು ಅದೇ ಸಂಘದ‌‌ ಹೃದಯ ಸ್ಥಾನದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದು ಗಮನಾರ್ಹ. ಮಾತ್ರವಲ್ಲ, ಮೂರು ವರ್ಷದ ತರಬೇತಿ ಮುಗಿಸಿ ಹೊರಟುನಿಂತ ಕಾರ್ಯಕರ್ತರನ್ನುದ್ದೇಶಿಸಿ ಪ್ರಣಬ್ ಪರಿಣಾಮಕಾರಿ ಉಪದೇಶ ಮಾಡಿದರು. “ಭಾರತ ರಾಷ್ಟ್ರೀಯತೆ ಒಂದು ಭಾಷೆ, ಒಂದು ಧರ್ಮ, ಒಂದು ಅಸ್ತಿತ್ವವಷ್ಟೇ ಅಲ್ಲ. ಇದೆಲ್ಲವನ್ನು ಒಳಗೊಂಡ ಸಂಸ್ಕೃತಿ. ನೀವು ಉತ್ತಮ ತರಬೇತಿ ಪಡೆದ ಶಿಸ್ತಿನ ಯುವಕರು. ದಯವಿಟ್ಟು ಶಾಂತಿ, ಸಾಮರಸ್ಯ, ಸೌಹಾರ್ದತೆ, ಸಂತೋಷವನ್ನು ಬಯಸಿ. ನಮ್ಮ ತಾಯ್ನಾಡು ಅದನ್ನು ಬಯಸುತ್ತದೆ,’’ ಎಂದು ಕರೆ ನೀಡಿದರು.

ಅದೆಲ್ಲ ಸರಿ. ಆದರೆ, ಭಾರತದ ಇತಿಹಾಸವನ್ನು ಅವಲೋಕಿಸುವಾಗ, ರಾಷ್ಟ್ರೀಯತೆಯನ್ನು ವಿಮರ್ಶೆಗೆ ಒಡ್ಡುವಾಗ ಪ್ರಣಬ್‌ ಆರ್‌ಎಸ್‌ಎಸ್‌ ಬಗ್ಗೆ ಉಲ್ಲೇಖಿಸಲಿಲ್ಲ. “ಕೋಮುವಾದಿ ಸಂಘಟನೆ. ಭಾರತದ ಧ್ರುವೀಕರಣ ಮತ್ತು ಅಲ್ಪಸಂಖ್ಯಾತರನ್ನು ಅಂಚಿನಲ್ಲಿಡುವುದು ಅದರ ಗುರಿ. ಜಾತ್ಯತೀತ ಭಾರತದ ಕಲ್ಪನೆಯನ್ನದು ಒಪ್ಪದು. ಹಿಂದೂರಾಷ್ಟ್ರ ರಚನೆಯೇ ಅದರ ಆದ್ಯ ಗುರಿ,’’ ಮುಂತಾದ ಸಂಘದ ಕುರಿತ ಆಕ್ಷೇಪಗಳನ್ನವರು ಪ್ರಸ್ತಾಪಿಸಲಿಲ್ಲ. ಹಿಂದೆ ಸಚಿವರಾಗಿದ್ದಾಗ ಈ ಸಂಘಟನೆ ಬಗ್ಗೆ ಕಟುಮಾತುಗಳಲ್ಲಿ ಟೀಕಾ ಪ್ರಹಾರ ನಡೆಸಿದ್ದ ಪ್ರಣಬ್‌ ಅವರಲ್ಲಿ ಈಗ ಅದೇ ಸಂಘದ ಬಗ್ಗೆ ನಿರ್ದಿಷ್ಟ ಟೀಕೆ, ಆಕ್ಷೇಪಗಳು ಇರಲಿಲ್ಲ. ಮೆಚ್ಚುಗೆಯ ಮಾತುಗಳೂ ವ್ಯಕ್ತವಾಗಲಿಲ್ಲ. ಒಂದು ಧರ್ಮ ಆಧಾರಿತವಾಗಿ ಯಾವುದೇ ರಾಷ್ಟ್ರ ನಿರ್ಮಾಣವಾದರೆ ಆಗುವ ಅಪಾಯವನ್ನು ನೆರೆಯ ಪಾಕಿಸ್ತಾನದ ಉದಾಹರಣೆ ಮೂಲಕ ಹೇಳಿ, ಸಂಘದ ಹಿಂದೂರಾಷ್ಟ್ರ ನಿರ್ಮಾಣ ಕಲ್ಪನೆಯಲ್ಲಿರುವ ಅಪಾಯ ಮತ್ತು ಮಿತಿಗಳನ್ನು ಎತ್ತಿ ತೋರಿಸುವ ಪ್ರಯತ್ನಕ್ಕೂ ಮುಂದಾಗಲಿಲ್ಲ. ಭಾಷಣಕ್ಕೆ ಆಹ್ವಾನಿಸಿದ ಸಂಘಟನೆಯ ವಿರುದ್ಧ ಮುಗಿಬೀಳುವುದು ಸಭಾಸೌಜನ್ಯವಲ್ಲ ಎಂದು ಭಾವಿಸಿದಂತಿದ್ದ ಪ್ರಣಬ್‌, ಸಂಘದ ಸಂಸ್ಥಾಪಕರನ್ನು ‘ಭಾರತದ ಶ್ರೇಷ್ಠ ಪುತ್ರ’ ಎಂದು ಕರೆದು ಪರಿವಾರದಲ್ಲಿ ಖುಷಿ ಮೂಡಿಸಿದರು.

ಆರ್‌ಎಸ್‌ಎಸ್ ಅಸ್ತಿತ್ವ ಮತ್ತು ಕಾರ್ಯನಿರ್ವಹಣೆಯ ವಿಷಯದಲ್ಲಿ ಅನೇಕ ಆಕ್ಷೇಪಗಳಿರುವಂತೆ ಅನೇಕ ವೈರುಧ್ಯ, ರಹಸ್ಯಗಳೂ ಇವೆ. “ಗಾಂಧೀಜಿ ಕೂಡ ಸಂಘಕ್ಕೆ ಬಂದಿದ್ದರು,’’ ಎಂದು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಸಂಘ, ಅದೇ ಗಾಂಧೀಜಿ ಹತ್ಯೆಯ ಕಳಂಕ ಎದುರಿಸುತ್ತಿದೆ. ಆದರೆ, ತನ್ನ ಮೇಲಿನ ಟೀಕೆ ಟಿಪ್ಪಣಿಗಳ ಬಗ್ಗೆ ಅದು ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. “ಆರ್‌ಎಸ್‌ಎಸ್ ರಾಜಕೀಯ ಸಂಘಟನೆ ಅಲ್ಲ, ಸಾಮಾಜಿಕ ಸಂಘಟನೆ,’’ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತದೆ. “ರಾಜಕೀಯದಿಂದ ದೂರ,’’ ಎಂದು ಹೇಳಿಕೊಂಡರೂ ಎಲ್ಲೋ ಕುಳಿತು ದೇಶದ ರಾಜಕೀಯದ ಸೂತ್ರ ಹಿಡಿದು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಚತುರತನ ಮೆರೆಯುತ್ತದೆ. “ನಿರ್ದಿಷ್ಟ ಜನ, ಸಮುದಾಯಗಳನ್ನು ತನ್ನ ‘ರಾಷ್ಟ್ರ’ದ ಕಲ್ಪನೆಯಲ್ಲಿ ಇಲ್ಲದಂತೆ ಮಾಡಲು ಸದಾ ಸಕ್ರಿಯವಾಗಿರುತ್ತದೆ,’’ ಎನ್ನುವುದು ಅನೇಕರ ಕಟು ಆಕ್ಷೇಪ. ಬಹುಶಃ ಇದೆಲ್ಲದರಿಂದ ರಾಜಕೀಯ ಮತ್ತು ಸಂಘಟನಾತ್ಮಕವಾಗಿ ಹೊಡೆತ ಬೀಳುತ್ತಿದೆ ಎನ್ನಿಸುತ್ತೆ. ಈ ಕಾರಣಕ್ಕೇ, “ಸಂಘ ಎಲ್ಲರನ್ನೂ ಒಳಗೊಳ್ಳುತ್ತದೆ,’’ “ನಮಗೆ ಯಾರೂ ಹೊರಗಿನವರಲ್ಲ,’’ “ಎಲ್ಲರೊಂದಿಗೆ ಸಂವಾದಿಸಲು ಸಿದ್ಧ,’’ ಎಂದು ಬಿಂಬಿಸಿಕೊಳ್ಳಲು ಪರಿವಾರ ಪ್ರಯತ್ನಿಸುತ್ತಿದೆ.

ಪ್ರಣಬ್ ಅವರಿಗಿಂತ ಮೊದಲು ಮಾತನಾಡಿದ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್ ಮಾತಿನಲ್ಲದು ವ್ಯಕ್ತವಾಯಿತು. “ಆರ್‌ಎಸ್‌ಎಸ್ ಕೇವಲ ಹಿಂದೂಗಳಿಗಾಗಿ ಅಲ್ಲ, ಎಲ್ಲ ಜನರಿಗಾಗಿ ಕೆಲಸ ಮಾಡಬೇಕು,’’ ಎಂದವರು ಆಶಿಸಿದರು. ಆದರೆ, ಅವರ ಮಾತಿನಲ್ಲಿ ‘ಏಕರೂಪ’ ರಾಷ್ಟ್ರೀಯತೆ, ಭಾರತವನ್ನು ಜಾಗತಿಕ ‘ವಿಶ್ವಗುರು’ವನ್ನಾಗಿಸುವ ಕಲ್ಪನೆ ಎದ್ದುಕಂಡಿತು. ಹಿಂದುತ್ವದ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಹಗೆತನ, ಹಿಂಸಾಚಾರದ ಬಗ್ಗೆ ಅವರು ಚಕಾರ ಎತ್ತಲಿಲ್ಲ .ಇಂಥ ಕಾರಣಗಳಿಗಾಗಿಯೇ ಇವತ್ತಿಗೂ ಕೆಲವು ರಾಜಕೀಯ ಪಕ್ಷ ಮತ್ತು ಸಂಘಟನೆಗಳ ದೃಷ್ಟಿಯಲ್ಲಿ ಆರ್‌ಎಸ್‌ಎಸ್ ರಾಜಕೀಯ ಅಸ್ಪೃಶ್ಯವಾಗಿ ಉಳಿದಿದೆ. ಹಾಗೆಂದೇ, ಜೀವನಪರ್ಯಂತ ಕಾಂಗ್ರೆಸ್‌ನಲ್ಲಿದ್ದು, ಎಲ್ಲ ಸ್ಥಾನಮಾನ ಪಡೆದ ಪ್ರಣಬ್‌ ಬದುಕಿನ ಸಂಧ್ಯಾಕಾಲದಲ್ಲಿ ವಿರುದ್ಧ ಸಿದ್ಧಾಂತದ ಸಂಘಟನೆ ವೇದಿಕೆಯಲ್ಲಿ ವಿರಾಜಿಸಿದ್ದು ಅನೇಕರ ಕಣ್ಣಿಗೆ ವಿಪರ್ಯಾಸದಂತೆ ಕಂಡಿತು. “ಅಲ್ಲಿಯಾದರೂ, ಸಂಘದ ನಡವಳಿಕೆ ಕುರಿತು ನೇರ, ನಿರ್ದಿಷ್ಟವಾಗಿ ಮಾತನಾಡಿ, ಕಿವಿ ಹಿಂಡಬೇಕಿತ್ತು. ಆ ಅವಕಾಶವನ್ನವರು ಕೈಚೆಲ್ಲಿದರು,’’ ಎನ್ನುವ ಟೀಕೆಯೂ ವ್ಯಕ್ತವಾಯಿತು.

ಅದೇನಿದ್ದರೂ, ಭಿನ್ನ ಸಿದ್ಧಾಂತ, ಸಂಘಟನೆಗಳ ಜನರ ಮಧ್ಯೆ ಸಂವಾದ ಸಾಧ್ಯವಾಗಬೇಕು ಎನ್ನುವ ಆಶಯ ಒಳ್ಳೆಯದೇ. ಮಾತು ಕೃತಿಗೆ ಇಳಿದರೆ, ಕ್ರಿಯೆಗೆ ಪ್ರತಿಕ್ರಿಯೆ ವ್ಯಕ್ತವಾದರಷ್ಟೇ ಆರೋಗ್ಯಪೂರ್ಣ ಸಂವಾದ ಸಾಧ್ಯ. ಆದರೆ, ಇಲ್ಲಿ ಅಂಥ ಯಾವುದೇ ಸಾಧ್ಯತೆ ಗೋಚರಿಸಲಿಲ್ಲ. ಪ್ರಣಬ್ ಮಂಡಿಸಿದ ಬಹುತ್ವದ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಶಯಕ್ಕೆ ಸಂಘ ಸ್ಪಂದಿಸುವುದೇ ಆದರೆ, ಹಿಂದೂ ರಾಷ್ಟ್ರ ಕಲ್ಪನೆಗೆ ಮೊದಲು ತಿಲಾಂಜಲಿ ನೀಡಬೇಕು. ಅಲ್ಪಸಂಖ್ಯಾತರನ್ನು ದ್ವೇಷಿಸುವುದನ್ನು, ಆಹಾರ, ಆಚರಣೆ, ಉಡುಗೆ, ತೊಡುಗೆ ವಿಷಯದಲ್ಲಿ ದ್ವೇಷ ಕಾರುವುದನ್ನು ನಿಲ್ಲಿಸಬೇಕು, ವೈವಿಧ್ಯವನ್ನು, ಬಹುತ್ವದ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು. ಮಂದಿರ, ಮಸೀದಿ ಮೇಲಾಟಕ್ಕೆ ಮಂಗಳ ಹಾಡಬೇಕು. ಭಿನ್ನ ಧರ್ಮ, ಸಿದ್ಧಾಂತದ ಜನರ ಜೊತೆ ಆಜನ್ಮ ವೈರ ಸಾಧಿಸದೆ, ಗುಣಾತ್ಮಕವಾಗಿ ಸಂವಾದಿಸಲು ಪ್ರಾಮಾಣಿಕ ಮತ್ತು ಮುಕ್ತ ಮನಸ್ಸು ಹೊಂದಬೇಕು. ದೇಶ ಗೌರವಿಸುವ ಸಂವಿಧಾನ ಮತ್ತು ಅದು ಸಾರುವ ಮೌಲ್ಯಗಳ ಬಗ್ಗೆ ನಾಲಿಗೆ ಹರಿಬಿಡುವವರನ್ನು ಅಧಿಕಾರ ಸ್ಥಾನಗಳಿಂದ ಕಿತ್ತೊಗೆಯಬೇಕು... ಇತ್ಯಾದಿ. ಪ್ರಣಬ್‌ ಅವರ ಒಂದು ಭಾಷಣ ಇಷ್ಟೆಲ್ಲ ಮನಃಪರಿವರ್ತನೆ ಮಾಡಬಹುದೆಂದು ನಿರೀಕ್ಷಿಸುವುದು ಆತುರಗೇಡಿತನವಾದೀತು. ಭವಿಷ್ಯದಲ್ಲಾದರೂ ಇದೆಲ್ಲ ಸಾಧ್ಯವೇ? ಹೊಂಚು-ಸಂಚುಗಳ ಇತಿಹಾಸವನ್ನು ಅವಲೋಕಿಸಿದರೆ ಅಂಥ ಭರವಸೆಯೂ ಮೂಡದು.

ಹಾಗಿದ್ದರೆ, ಪ್ರಣಬ್‌ ಸಂಘದ ಭೇಟಿಯ ಪರಿಣಾಮ ಏನು? ಪ್ರಯೋಜನ ಯಾರಿಗೆ? ಶರ್ಮಿಷ್ಠಾ ಮುಖರ್ಜಿ ಮೊದಲೇ ಅನುಮಾನಿಸಿದಂತೆ, “ಅವರ ಮಾತು ಕ್ರಮೇಣ ಮರೆತುಹೋಗಬಹುದು. ನಕಲಿ ಹೇಳಿಕೆಗಳ ಜೊತೆ ಅವರ ಮಾತನ್ನು ಸೇರಿಸಿ ಪ್ರಸಾರ ಮಾಡಬಹುದು.’’ ಇಂಥ ಕೆಲವು ನಕಲಿ ಯತ್ನಗಳು ಆಗಲೇ ಶುರುವಾಗಿವೆ ಕೂಡ. ಅಷ್ಟು ಮಾತ್ರವಲ್ಲ, ‘ಕಾಂಗ್ರೆಸ್ ಕಟ್ಟಾಳು’ ಪ್ರಣಬ್‌ ಸಂಘಕ್ಕೆ ಬಂದುಹೋಗಿದ್ದರ ‘ಬಿಂಬ’ ಪರಿವಾರದ ಪಾಲಿಗೆ ಶಾಶ್ವತ ಸಂಭ್ರಮವಾಗಬಹುದು. ಮುಂದಿನ ಚುನಾವಣೆಗಳಲ್ಲಿ ಪರಿವಾರ ಮತ್ತು ಪಕ್ಷದ ಪಾಲಿನ ರಾಜಕೀಯ ಶಕ್ತಿಯೂ ಆಗಬಹುದು. ಈಗಾಗಲೇ ಆ ಬಿಂಬವನ್ನು ಹೊತ್ತು ನಡೆದಿರುವ ಸಂಘದ ಹೊಸ ಮತ್ತು ಹಳೆಯ ಕಾರ್ಯಕರ್ತರು, ಸಂಘದ ಕುರಿತಂತಿರುವ ‘ರಾಜಕೀಯ ಅಸ್ಪೃಶ್ಯ’ ಕಳಂಕವನ್ನು ತೊಳೆದು, ಬಹು ಜನಮನದಲ್ಲಿ ವಿಶ್ವಾಸಾರ್ಹತೆ ವೃದ್ಧಿಯ ಪ್ರಯತ್ನಕ್ಕೆ ಬಳಸಿಕೊಳ್ಳಬಹುದು; “ಗಾಂಧಿ ಬಂದು ಹೋಗಿದ್ದರು,’’ ಎನ್ನುವ ಸಂಗತಿಯನ್ನು ಈಗಲೂ ಮತ್ತೆ ಮತ್ತೆ ಬಳಸಿಕೊಂಡಂತೆ. “ರಾಜಕೀಯ ಅಸ್ಪೃಶ್ಯತೆ ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ ಪ್ರಣಬ್‌ ಉತ್ತಮ ಆರಂಭ ನೀಡಿದ್ದಾರೆ,’’ ಎಂಬ ಪರಿವಾರ ಮುಖಂಡರ ಮಾತುಗಳಲ್ಲದು ವ್ಯಕ್ತವಾಗಿದೆ.

ಇದನ್ನೂ ಓದಿ : ಆರೆಸ್ಸೆಸ್ ಕೇಂದ್ರ ಕಚೇರಿಗೆ ಪ್ರಣವ್ ಸಂಭಾವ್ಯ ಭೇಟಿ ಕುರಿತ ಎರಡು ಬಿಸಿ ಚರ್ಚೆ

ಆದರೆ, ಆರ್‌ಎಸ್‌ಎಸ್ ವಿಶ್ವಾಸಾರ್ಹತೆ ಮೂಡಿಸಬೇಕಾದುದು ಚಾಣಾಕ್ಷ ಬಿಂಬಗಳ ಮೂಲಕ ಅಲ್ಲ. ಭಾರತದ ಬಹುತ್ವವನ್ನು, ಧಾರ್ಮಿಕ ಸಹಿಷ್ಣುತೆಯನ್ನು ಒಳಗೊಳ್ಳುವ ಪ್ರಾಮಾಣಿಕ ಕ್ರಿಯೆಯ ಮೂಲಕ ಅದಾಗಬೇಕು. ಅದನ್ನು ಸಂಘ ಅರಿಯಬೇಕು. ಅದಕ್ಕಾಗಿ ತನ್ನ ಮನಸ್ಸು, ಹೃದಯಗಳನ್ನದು ಇನ್ನಷ್ಟು ವಿಶಾಲಗೊಳಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಪ್ರಣಬ್‌ ಭೇಟಿಗೆ, ಅವರಾಡಿದ ಮಾತುಗಳಿಗೆ ನಿಜ ಅರ್ಥ ಪ್ರಾಪ್ತಿಯಾಗಬಹುದು, ಆರೋಗ್ಯಕರ ಸಂವಾದ ಬೆಳೆಯಬಹುದು.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More