ಭೀಮ್ ಆರ್ಮಿ ಮುಖ್ಯಸ್ಥ ಆಜಾದ್, ಯೋಗಿ ಸರ್ಕಾರದ ಕೆಂಗಣ್ಣಿಗೆ ಸಿಲುಕಿರುವುದೇಕೆ?

ಉತ್ತರ ಪ್ರದೇಶದಲ್ಲಿ ಸಂಚಲನ ಮೂಡಿಸಿದ್ದ ಭೀಮ್ ಆರ್ಮಿ ಸಂಸ್ಥಾಪಕ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಜೈಲು ಸೇರಿ ಒಂದು ವರ್ಷ ಸಂದಿದೆ. ಅವರ ಬಿಡುಗಡೆಗೆ ಆಗ್ರಹಿಸಿ ಉ.ಪ್ರದೇಶದಲ್ಲಿ ಇತ್ತೀಚೆಗೆ ತೀವ್ರ ಪ್ರತಿಭಟನೆ ನಡೆದಿದೆ. ಅಷ್ಟಕ್ಕೂ ಆಜಾದ್ ಯೋಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದೇಕೆ?

ಉತ್ತರ ಪ್ರದೇಶದಲ್ಲಿ ಸಂಚಲನ ಮೂಡಿಸಿದ್ದ ಭೀಮ್ ಆರ್ಮಿ ಸಂಸ್ಥಾಪಕ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಜೈಲು ಸೇರಿ ಒಂದು ವರ್ಷ ಸಂದಿದೆ. ಅವರ ಬಿಡುಗಡೆಗೆ ಆಗ್ರಹಿಸಿ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ತೀವ್ರವಾದ ಪ್ರತಿಭಟನೆ ನಡೆದು, ಕೆಲವೆಡೆ ಭೀಮ್ ಆರ್ಮಿ ಕಾರ್ಯಕರ್ತರು ರೈಲು ತಡೆದು ಪ್ರತಿಭಟಿಸಿದ್ದಾರೆ. ಕರ್ನಾಟಕದಲ್ಲೂ ಈ ಸಂಘಟನೆ ಹರಡಿದ್ದು, ಬೀದರ್‌ನಲ್ಲಿ ಭೀಮ್ ಆರ್ಮಿ ಕಾರ್ಯಕರ್ತರು ಆಜಾದ್ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ನಡೆದ ಹಿಂಸಾತ್ಮಕ ಜಾತಿ ಗಲಭೆ ಹಿಂದೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕೈವಾಡ ಇದೆ ಎಂಬ ಆರೋಪದ ಮೇಲೆ ೨೦೧೭ರ ಜೂನ್ ೮ರಂದು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಹಿಮಾಚಲ ಪ್ರದೇಶದ ಡಾಲ್‌ಹೌಸಿಯಲ್ಲಿ ಅವರನ್ನು ಬಂದಿಸಿದ್ದರು.

ಅಲಹಾಬಾದ್ ಹೈಕೋರ್ಟ್ ನವೆಂಬರ್ ತಿಂಗಳಿನಲ್ಲಿ ಆಜಾದ್ ಅವರಿಗೆ ಜಾಮೀನು ನೀಡಿತ್ತು. ಆದರೆ, ಉತ್ತರ ಪ್ರದೇಶ ಸರ್ಕಾರ ಕೂಡಲೇ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಮತ್ತೆ ಬಂಧಿಸಿತು. ಅಂದಿನಿಂದ ಆಜಾದ್ ಬಿಡುಗಡೆಗೆ ಆಗ್ರಹಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಲೇ ಇವೆ. ಆಜಾದ್ ತಾಯಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಕೂಡ ನಡೆದಿವೆ. ಒಂದು ವರ್ಷ ಕಳೆದರೂ ಆಜಾದ್ ಬಿಡುಗಡೆ ಆಗದಿರುವ ಹಿಂದೆ ಅಲ್ಲಿಯ ಮೇಲ್ವರ್ಗವಾದ ಠಾಕೂರ್ ಸಮುದಾಯ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೇಡಿನ ರಾಜಕಾರಣ ಇದೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಬಂಧಿಸಲ್ಪಟ್ಟ ಆರೋಪಿಗಳಿಗೆ ಮೂರು ತಿಂಗಳ ನಂತರ ಜಾಮೀನು ನೀಡಲು ಅವಕಾಶ ಇದೆ. ಆದರೆ, ಅವರ ಬಿಡುಗಡೆಗೆ ಯೋಗಿ ಸರ್ಕಾರ ಹಲವಾರು ತಕರಾರು ಮುಂದಿಡುತ್ತ ಜೈಲಿನಲ್ಲೇ ಇರುವಂತೆ ನೋಡಿಕೊಂಡಿದೆ. ಸರ್ಕಾರದ ಈ ನಡೆಯನ್ನು ಹೈಕೋರ್ಟ್ ಕೂಡ ವಿರೋಧಿಸಿದ್ದು, ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದಿದೆ.

ಏನಿದು ಸಂಘಟನೆ? ಯಾರಿದು ಆಜಾದ್?

ಭೀಮ್ ಆರ್ಮಿ ಎಂದೇ ಖ್ಯಾತಿ ಪಡೆದಿರುವ ಈ ಸಂಘಟನೆ ದಲಿತರಿಗಾಗುವ ಅನ್ಯಾಯ ತಡೆಗಟ್ಟುವ ಉದ್ದೇಶದೊಂದಿಗೆ ೨೦೧೪ರಲ್ಲಿ ಸ್ಥಾಪನೆಯಾಯಿತು. ಚಂದ್ರಶೇಖರ್ ಆಜಾದ್ ಈ ಸಂಘಟನೆಯ ಸಂಸ್ಥಾಪಕ. ವಿನಯ್ ರತನ್ ಸಿಂಗ್ ಎಂಬುವರು ಈ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ. ಅಂಬೇಡ್ಕರ್ ಸೇರಿದಂತೆ ದಲಿತ ನಾಯಕರ ಇತಿಹಾಸ, ಸಾಧನೆ ಹೋರಾಟದ ಬಗ್ಗೆ ದಲಿತ ಮಕ್ಕಳಿಗೆ ವಿಶೇಷವಾಗಿ ಶಿಕ್ಷಣ ನೀಡುತ್ತ ಈ ಸಂಘಟನೆ ಮುನ್ನೆಲೆಗೆ ಬಂದಿದೆ. ಭೀಮ್ ಆರ್ಮಿ ಆರಂಭಿಸಿರುವ ಶಾಲೆಗಳು ಈಗ ಉತ್ತರಪ್ರದೇಶದಲ್ಲಿ ಮನ್ನಣೆ ಪಡೆಯುತ್ತಿವೆ.

ಆಜಾದ್ ಬಂಧನದ ಹಿನ್ನೆಲೆ

ಸಹರಾನ್ಪುರ ಜಿಲ್ಲೆಯ ಶಬ್ಬೀರ್ಪುರದಲ್ಲಿ ಜಾಟವ ದಲಿತ ಸಮುದಾಯ ಭೀಮ್ ಆರ್ಮಿ ನೇತೃತ್ವದಲ್ಲಿ ೨೦೧೭ರ ಏಪ್ರಿಲ್‌ನಲ್ಲಿ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಮುಂದಾಯಿತು. ಅಂಬೇಡ್ಕರ್ ಪ್ರತಿಮೆ ಬೆರಳು ಅಲ್ಲಿಯ ಮೇಲ್ವರ್ಗವಾದ ಠಾಕೂರ್ ಸಮುದಾಯ ನೆಲೆಸಿದ್ದ ಕಡೆಗೇ ಇದ್ದದ್ದು ಆ ಸಮುದಾಯದ ಪ್ರತಿರೋಧಕ್ಕೆ ಕಾರಣವಾಯಿತು. ಪ್ರತಿಮೆಗಾಗಿ ಭೀಮ್ ಆರ್ಮಿ ಆಡಳಿತಾತ್ಮಕವಾಗಿ ಯಾವುದೇ ಪರವಾನಗಿ ತಗೆದುಕೊಂಡಿಲ್ಲ ಎಂದು ತಗಾದೆ ತೆಗೆದ ಠಾಕೂರ್ ಸಮುದಾಯ, ಭೀಮ್ ಆರ್ಮಿಯ ಮೆರವಣಿಗೆಗೆ ಅಡ್ಡಿಪಡಿಸಿತು. ಇದು ಸಂಘರ್ಷಕ್ಕೆ ಕಾರಣವಾಯಿತು.

೨೦೧೭ರ ಮೇ ತಿಂಗಳಿನಲ್ಲಿ ಠಾಕೂರ್ ಸಮುದಾಯ ತಮ್ಮ ಸಮುದಾಯದ ಮಧ್ಯಯುಗೀನ ದೊರೆ ಮಾಹಾರಾಣಾ ಪ್ರತಾಪ್ ಜನ್ಮದಿನ ನೆನಪಿನಲ್ಲಿ ಮೆರವಣಿಗೆ ಆಯೋಜಿಸಿತ್ತು. ಆ ಮೆರವಣಿಗೆ ಶಬ್ಬೀರ್ಪುದರ ದಲಿತ ಕಾಲೋನಿ ಪ್ರವೇಶಿಸುತ್ತಲೇ ದಲಿತರೂ ಅವರ ಮೆರವಣಿಗೆಗೆ ಅಡ್ಡಿಪಡಿಸಿ, ಆಡಳಿತಾತ್ಮಕವಾಗಿ ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂಬ ಕಾರಣವನ್ನು ಮುಂದಿಟ್ಟರು. ಈ ವೇಳೆ, ಎರಡೂ ಸಮುದಾಯಗಳು ಜಗಳಕ್ಕೆ ನಿಂತು ಕಲ್ಲು ತೂರಾಟ ನಡೆಯಿತು. ಠಾಕೂರ್ ಸಮುದಾಯದ ಕೆಲವರು ದಲಿತ ಮನೆಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮೆರೆದರು. ಇದು ವಿಕೋಪಕ್ಕೆ ಹೋಗಿ, ಹಿಂಸಾಚಾರದಲ್ಲಿ ಠಾಕೂರ್ ಸಮುದಾಯದ ಯುವಕನೊಬ್ಬ ಮೃತಪಟ್ಟ. ಎರಡೂ ಸಮುದಾಯದ ಹಲವಾರು ಜನರಿಗೆ ಗಂಭೀರ ಗಾಯಗಳಾದವು. ಹಿಂಸೆ ಅಷ್ಟಕ್ಕೇ ನಿಲ್ಲುವ ಸೂಚನೆಗಳು ಕಾಣದಿದ್ದಾಗ ದಲಿತರೇ ಸಾಮೂಹಿಕವಾಗಿ ಆ ಹಳ್ಳಿಯನ್ನು ತೊರೆದರು. ಪೊಲೀಸರು ಗಲಭೆ ಕುರಿತು ತನಿಖೆ ಕೈಗೊಂಡು, ಆ ಜಾತಿ ಗಲಭೆಗೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕಾರಣ ಎಂದು ಆರೋಪಿಸಿ ಅವರನ್ನು ೨೦೧೭ರ ಜೂನ್ ೮ರಂದು ಬಂಧಿಸಿದರು.

ನಂತರದಲ್ಲಿ, ಠಾಕೂರ್ ಸಮುದಾಯದ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದಮೇಲೆ ಅಲ್ಲಿ ರಾಜಕೀಯ ಅಧಿಕಾರವು ಮೇಲ್ಜಾತಿಗಳ ಕೈಗೆ ಮರಳಿದಂತಾಗಿದೆ. ಇದರಿಂದ ಉತ್ತೇಜಿತರಾಗಿರುವ ಠಾಕೂರ್ ಮತ್ತಿತರ ಮೇಲ್ಜಾತಿಗಳು ಸಹಜವಾಗಿಯೇ ತಮ್ಮ ಅಧಿಕಾರವನ್ನು ಪುನರ್ ಸ್ಥಾಪಿಸಲು ಮುಂದಾಗಿದ್ದಾರೆ. ಈ ಕಾರಣಕ್ಕಾಗಿಯೇ ಆಜಾದ್ ಬಂಧನ ಆಗಿದೆ ಎನ್ನಲಾಗುತ್ತಿದೆ.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಭೀಮ್ ಆರ್ಮಿಯೊಂದಿಗೆ ಮೊದಲಿನಿಂದಲೂ ಅಂತರ ಕಾಯ್ದುಕೊಂಡೇ ಬಂದಿವೆ. ಆದರೆ, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಈ ಪಕ್ಷಗಳು ಭೀಮ್ ಆರ್ಮಿಯನ್ನು ಒಳಗೊಂಡಿವೆ. ಈಗ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಆಜಾದ್ ಪ್ರಕರಣ ಕುತೂಹಲ ಸೃಷ್ಟಿಸಿದೆ.

ಇದನ್ನೂ ಓದಿ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಘೇರಾವ್ ಯತ್ನ

ಆಜಾದ್ ಅವರೊಂದಿಗೆ ಜೈಲುವಾಸ ಅನುಭವಿಸಿ ವಾರದ ಹಿಂದಷ್ಟೇ ಬಿಡುಗಡೆ ಆಗಿರುವ ಭೀಮ್ ಆರ್ಮಿ ಹೋರಾಟಗಾರ ವಿನಯ್ ರತನ್ ಸಿಂಗ್ ಅವರು, ಆಜಾದ್ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಸಿಎಂ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, “ದಲಿತರ ಮೇಲೆ ನಡೆಯುವ ಹಲ್ಲೆಗಳನ್ನು ಉತ್ತರ ಪ್ರದೇಶ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಈ ಕಾರಣಕ್ಕಾಗಿಯೇ ಆಜಾದ್ ಅವರ ಬಿಡುಗಡೆ ಆಗುತ್ತಿಲ್ಲ. ನಮ್ಮ ಮುಂದಿರುವ ದಾರಿ ಬಿಜೆಪಿಯನ್ನು ಸೋಲಿಸುವುದು. ಹೀಗಾಗಿ, ಕೈರಾನ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ಭೀಮ್ ಆರ್ಮಿ ನಿರ್ಣಾಯಕ ಪಾತ್ರ ವಹಿಸಿದೆ. ಬಿಜೆಪಿ ವಿರುದ್ಧ ಮತದಾರರನ್ನು ಒಟ್ಟುಗೂಡಿಸಿ ನಮ್ಮ ಸದಸ್ಯರು ಹಳ್ಳಿ-ಹಳ್ಳಿ ಸುತ್ತಾಡಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ದೂರವಿಡಲು ನಮ್ಮ ಸಂಘಟನೆ ದೇಶಾದ್ಯಂತ ಶ್ರಮಿಸಲಿದೆ. ಜಾತಿ ತಾರತಮ್ಯ ಮತ್ತು ದುಷ್ಕೃತ್ಯಗಳ ವಿರುದ್ಧ ಭೀಮ್ ಆರ್ಮಿ ಸದಾ ಹೋರಾಡಲಿದೆ,” ಎಂದಿದ್ದಾರೆ.

ಆಮ್ನೆಸ್ಟಿ ಸಂಘಟನೆ ಕೂಡ ಆಜಾದ್ ಬಂಧನವನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದು, “ಚಂದ್ರಶೇಖರ್ ವಿಷಯದಲ್ಲಿ ಆದಿತ್ಯನಾಥ್ ಸರ್ಕಾರ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಬಳಸಿರುವುದು ನ್ಯಾಯಸಮ್ಮತವಲ್ಲ,” ಎಂದು ಯೋಗಿ ಸರ್ಕಾರವನ್ನು ಟೀಕಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More