ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದಿನ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಏಳನೇ ಏಷ್ಯಾಕಪ್‌ಗೆ ಭಾರತ ಅಣಿ

ವನಿತೆಯರ ಟಿ೨೦ ಏಷ್ಯಾಕಪ್ ಪಂದ್ಯಾವಳಿಯ ಫೈನಲ್‌ ಇಂದು ನಡೆಯಲಿದ್ದು, ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ೭ನೇ ಏಷ್ಯಾಕಪ್ ಗೆಲ್ಲುವ ತವಕದಿಂದ ಕೂಡಿದೆ. ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಪ್ರಶಸ್ತಿ ಸುತ್ತಿನ ಸೆಣಸಿನಲ್ಲಿ ಭಾರತ ವನಿತಾ ತಂಡ ಕಾದಾಡಲಿದೆ. ಅಂದಹಾಗೆ, ಗುಂಪು ಹಂತದಲ್ಲಿ ಇದೇ ಬಾಂಗ್ಲಾದೇಶ ವಿರುದ್ಧ ಸೋತಿರುವ ಭಾರತದ ಪಾಲಿಗೆ ಇದು ರೀ-ಮ್ಯಾಚ್ ಆಗಿದೆ. ಕೌಲಾಲಂಪುರದ ಕಿನಾರಾ ಅಕಾಡೆಮಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರು ಬಾರಿಯ ಚಾಂಪಿಯನ್ ಭಾರತಕ್ಕೆ ಬಾಂಗ್ಲಾದೇಶದ ಸವಾಲು ಎದುರಾಗಿದೆ. ಮಿಥಾಲಿ ರಾಜ್, ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ ಅಮೋಘ ಫಾರ್ಮ್‌ನಲ್ಲಿದ್ದು, ಆಲ್ರೌಂಡ್ ಆಟದೊಂದಿಗೆ ಬಾಂಗ್ಲಾ ವನಿತಾ ತಂಡವನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದೆ ಭಾರತ.

೧೧ನೇ ಪ್ಯಾರಿಸ್ ಪ್ರಶಸ್ತಿ ಕನವರಿಕೆಯಲ್ಲಿ ನಡಾಲ್

ಗಟ್ಟಿ ಅಂಕಣದ ಅಪಾಯಕಾರಿ ಆಟಗಾರರಲ್ಲಿ ಒಬ್ಬರಾಗಿರುವ ನವ ಪ್ರತಿಭೆ ಆಸ್ಟ್ರಿಯಾದ ಡಾಮಿನಿಕ್ ಥೀಮ್ ಭೀತಿಯ ನಡುವೆಯೂ ಕ್ಲೇ ಕೋರ್ಟ್ ಕಿಂಗ್ ರಾಫೇಲ್ ನಡಾಲ್ ೧೧ನೇ ಪ್ಯಾರಿಸ್ ಪ್ರಸಸ್ತಿಗಾಗಿ ಕನವರಿಸುತ್ತಿದ್ದಾರೆ. ಪ್ರಶಸ್ತಿ ಸುತ್ತಿನ ಹಣಾಹಣಿಗೂ ಮುನ್ನಾದಿನವಾದ ಶನಿವಾರ (ಜೂ.೯) ಕಠಿಣ ಅಭ್ಯಾಸ ನಡೆಸಿದ ನಡಾಲ್, ಫೈನಲ್‌ಗೆ ಸಜ್ಜಾಗಿದ್ದಾರೆ. ೨೪ರ ಹರೆಯದ ಡಾಮಿನಿಕ್, ಪಂದ್ಯಾವಳಿಯಾದ್ಯಂತ ಆಕ್ರಮಣಕಾರಿ ಆಟವಾಡಿದ್ದು, ನಡಾಲ್ ವಿರುದ್ಧ ಮತ್ತೊಮ್ಮೆ ಜಯಭೇರಿ ಬಾರಿಸಿ ವೃತ್ತಿಬದುಕಿನ ಚೊಚ್ಚಲ ಗ್ರಾಂಡ್‌ಸ್ಲಾಮ್ ಗೆಲ್ಲುವ ಕನಸಿನಲ್ಲಿದ್ದಾರೆ. ಅಂದಹಾಗೆ, ಡಾಮಿನಿಕ್ ವಿರುದ್ಧದ ಮುಖಾಮುಖಿಯಲ್ಲಿ ೬-೩ ಮುನ್ನಡೆ ಸಾಧಿಸಿರುವ ನಡಾಲ್‌, ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಸರಿಸುಮಾರು ಸಂಜೆ ೬.೩೦ರಿಂದ ಪಂದ್ಯ ಶುರುವಾಗಲಿದೆ.

ಕೀನ್ಯಾ ಸವಾಲಿಗೆ ಸಜ್ಜಾದ ಛೆಟ್ರಿ ಪಡೆ

ಭಾರತೀಯ ಫುಟ್ಬಾಲ್‌ನಲ್ಲಿ ಮತ್ತೊಂದು ಅವಿಸ್ಮರಣೀಯ ಘಟನೆಗೆ ಭಾನುವಾರ (ಜೂ.೧೦) ಸಾಕ್ಷಿಯಾಗಲಿದೆ. ಮುಂಬೈ ಫುಟ್ಬಾಲ್ ಅರೇನಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಇಂಟರ್‌ಕಾಂಟಿನೆಂಟಲ್ ಕಪ್‌ಗಾಗಿ ಸುನೀಲ್ ಛೆಟ್ರಿ ಪಡೆ ಕೀನ್ಯಾ ವಿರುದ್ಧ ಸೆಣಸಲಿದೆ. ಒಂದರ ಹಿಂದೊಂದರಂತೆ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಗುರಿ ಹೊತ್ತಿದ್ದ ಆತಿಥೇಯ ಭಾರತವನ್ನು ನ್ಯೂಜಿಲೆಂಡ್ ಮಣಿಸಿ, ಛೆಟ್ರಿ ಪಡೆಯ ಆತ್ಮವಿಶ್ವಾಸವನ್ನು ಕೆಣಕಿತ್ತು. ಈ ಸೋಲಿನಿಂದ ಹೊರಬಂದಿರುವ ಭಾರತ ಫುಟ್ಬಾಲ್ ತಂಡ, ಕೀನ್ಯಾವನ್ನು ಮತ್ತೊಮ್ಮೆ ಮಣಿಸುವ ವಿಶ್ವಾಸದಲ್ಲಿದೆ. ಲೀಗ್ ಹಂತದಲ್ಲಿ ಇದೇ ಕೀನ್ಯಾವನ್ನು ಭಾರತ ೩-೦ ಗೋಲುಗಳಿಂದ ಸೋಲಿಸಿತ್ತು. ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ಎಎಫ್‌ಸಿ ಏಷ್ಯಾಕಪ್‌ ಗೆಲ್ಲಲು ಈಗಿನಿಂದಲೇ ತಯಾರಿ ನಡೆಸುತ್ತಿರುವ ಛೆಟ್ರಿ ಪಡೆ, ಈ ಪಂದ್ಯಾವಳಿಯನ್ನು ತಾಲೀಮಿನಂತೆ ಭಾವಿಸಿದೆ. ಪಂದ್ಯ ರಾತ್ರಿ ೮.೦೦ರಿಂದ ಶುರುವಾಗಲಿದ್ದು, ಸ್ಟಾರ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಿದೆ.

ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಫಲಿತಾಂಶ

ರಾಷ್ಟ್ರೀಯ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ (ಜೆಇಇ) 2018ರ ಫಲಿತಾಂಶ ಇಂದು ಪ್ರಕಟವಾಗಲಿದೆ. ಅಭ್ಯರ್ಥಿಗಳ ಅಂಕ, ರಾಷ್ಟ್ರಮಟ್ಟದಲ್ಲಿ ಪಡೆದ ರ‍್ಯಾಂಕ್‌ ವಿವರ jeeadv.nic.in ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More