ಜಿಗ್ನೇಶ್‌ಗೆ ರವಿ ಪೂಜಾರಿ ಬೆದರಿಕೆ; ಭೂಗತ ಪಾತಕಿಯ ಲೆಕ್ಕಾಚಾರ ಏನಿರಬಹುದು?

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ವಿದ್ಯಾರ್ಥಿ ನಾಯಕ ಉಮರ್ ಖಾಲೀದ್, ಭೂಗತ ಪಾತಕಿ ರವಿ ಪೂಜಾರಿಯಿಂದ ಜೀವಬೆದರಿಕೆ ಎದುರಿಸುತ್ತಿದ್ದಾರೆ. ಭೂಗತ ಪಾತಕಿಗಳು ಪ್ರಗತಿಪರ ಹೋರಾಟಗಾರರಿಗೆ, ವಿದ್ಯಾರ್ಥಿ ಮುಖಂಡರಿಗೆ ಬೆದರಿಕೆ ಒಡ್ಡುವುದರಿಂದ ಸಿಗುವ ಲಾಭವೇನು?

ಗುಜರಾತಿನ ವಡಗಾಂವ್ ಕ್ಷೇತ್ರದ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಮತ್ತು ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಉಮರ್ ಖಲೀದ್ ಅವರಿಗೆ ಬೆದರಿಕೆ ಒಡ್ಡುವ ಮೂಲಕ ಭೂಗತ ಪಾತಕಿ ರವಿ ಪೂಜಾರಿ ಮತ್ತೆ ಸುದ್ದಿಯಲ್ಲಿದ್ದಾನೆ. ಈ ಬಗ್ಗೆ ಜಿಗ್ನೇಶ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಸತತ ಮೂರು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಶುಕ್ರವಾರ ಆತಂಕ ವ್ಯಕ್ತಪಡಿಸಿದ್ದಾರೆ.

“ದಿನ 3, ರವಿ ಪೂಜಾರಿಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಇಂದು ಮತ್ತೆ ನನ್ನ ಸ್ವಂತ ಫೋನ್ ನಂಬರ್‌ಗೆ ಬೆದರಿಕೆ ಕರೆ ಬಂದಿದ್ದು, ಆಸ್ಟ್ರೇಲಿಯಾದಿಂದ ರವಿ ಪೂಜಾರಿ ಮಾತನಾಡುತ್ತಿರುವುದು ಎಂದು ವ್ಯಕ್ತಿಯೊಬ್ಬ ಪರಿಚಯಿಸಿಕೊಂಡ. ಅಲ್ಲದೆ, ಲಿಖಿತ ಸಂದೇಶ ಕೂಡ ರವಾನಿಸಿದ್ದು, ಪ್ರಚೋದನಾತ್ಮಕ ಭಾಷಣ ನಿಲ್ಲಿಸಿ ಇಲ್ಲವೇ ನಿಮ್ಮನ್ನು ಗುಂಡಿಟ್ಟು ಕೊಲ್ಲಲಾಗುವುದು. ಉಮರ್ ಖಾಲೀದ್ ಕೂಡ ಪಟ್ಟಿಯಲ್ಲಿದ್ದಾರೆ,” ಎಂದು ಉಲ್ಲೇಖಿಸಿರುವುದಾಗಿ ಜಿಗ್ನೇಶ್ ಟ್ವೀಟ್ ಮಾಡಿದ್ದಾರೆ.

ಜೂನ್ 6ರಿಂದಲೇ ಮೇವಾನಿ ಅವರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ಈ ಹಿಂದೆ, ಜಿಗ್ನೇಶ್ ಉಪಯೋಗಿಸುತ್ತಿದ್ದ ದೂರವಾಣಿಯನ್ನು ಅವರ ಆಪ್ತ ಕೌಶಿಕ್ ಪಾರ್ಮಾರ್ ಬಳಸುತ್ತಿದ್ದರು. ಆ ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿ ಬೆದರಿಕೆಯೊಡ್ಡಿದ್ದ. ಅಂದೇ ಪಾರ್ಮಾರ್ ದೂರು ನೀಡಿದ್ದರು. ಆ ದೂರಿಗೆ ಹೊಸ ಬೆದರಿಕೆ ವಿವರಗಳನ್ನು ಸೇರಿಸಿಕೊಳ್ಳಲಾಗಿದೆ ಎಂದಿರುವ ಬನಸ್ಕಾಂತ ಜಿಲ್ಲೆಯ ಪೊಲೀಸರು, ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಎನ್‌ಡಿಟಿವಿಗೆ ಮಾಹಿತಿ ನೀಡಿದ್ದಾರೆ.

ಇದರ ಬೆನ್ನಿಗೇ, ಖಾಲೀದ್ ಅವರು ದೆಹಲಿ ಪೊಲೀಸರಿಗೆ ದೂರು ನೀಡಿರುವುದು ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದಿದ್ದಾರೆ. ಖಾಲೀದ್ ಅವರಿಗೆ ಪೂಜಾರಿಯಿಂದ ಫೆ.16ರಂದು ಕೂಡ ಬೆದರಿಕೆ ಕರೆ ಬಂದಿತ್ತು.

ರವಿ ಪೂಜಾರಿ ಕರ್ನಾಟಕದ ಕರಾವಳಿ ಮೂಲದವನು. ವಿಧಾನಸಭೆ ಚುನಾವಣೆ ಸಮಯದಲ್ಲಿ ಜಿಗ್ನೇಶ್ ಮೇವಾನಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ‘ದಿ ಸ್ಟೇಟ್’ ಶನಿವಾರ ಸಂಪರ್ಕಿಸಿದಾಗ, “ಈ ಬಗ್ಗೆ ತಮಗೆ ಸದ್ಯ ಯಾವುದೇ ಮಾಹಿತಿ ಇಲ್ಲ,” ಎಂದಿದ್ದಾರೆ.

ಇದನ್ನೂ ಓದಿ : ವಿಶ್ವಸಂಸ್ಥೆ ಎಚ್ಚರಿಕೆ ನಂತರವೂ ಪತ್ರಕರ್ತರ ಬೆಂಬಿಡದ ಬೆದರಿಕೆ ಕರೆಗಳು!

ಕರಾವಳಿಯ ಭೂಗತಲೋಕವನ್ನು ಹತ್ತಿರದಿಂದ ಗಮನಿಸಿರುವ ಮಂಗಳೂರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳುವ ಪ್ರಕಾರ, “ಕೆಲವು ಭೂಗತ ಪಾತಕಿಗಳು ಪ್ರಗತಿಪರ ಹೋರಾಟ ನಡೆಸುವ ವ್ಯಕ್ತಿಗಳಿಗೆ ಬೆದರಿಕೆ ಹಾಕುವ ಮೂಲಕ ಇದ್ದಕ್ಕಿದ್ದಂತೆ ಆಡಳಿತಾರೂಢ ಸರ್ಕಾರದ ಕೃಪಾಕಟಾಕ್ಷಕ್ಕೆ ಪಾತ್ರರಾಗಿಬಿಡಬಹುದು ಎಂದು ಅಂದಾಜಿಸಿದಂತಿದೆ. ಆ ಮೂಲಕ ಶರಣಾಗತಿಯ ಪ್ರಕ್ರಿಯೆ ಸುಲಭ ಮಾಡಿಕೊಳ್ಳಬಹುದು ಎಂದು ಅವರು ಎಣಿಸಿರುವ ಹಾಗಿದೆ. ಕರಾವಳಿ ಭಾಗದ ಭೂಗತ ದೊರೆಗಳು ಈ ಹಿಂದೆಯೂ ಇಂತಹ ತಂತ್ರಗಳನ್ನು ಅನುಸರಿಸಿ ಆಡಳಿತಾರೂಢರ ಕರುಣೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದರು,” ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರವಿ ಪೂಜಾರಿ ರಾಜಕಾರಣಿಗಳಿಗೆ ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ತನ್ವೀರ್ ಸೇಠ್, ಸಿ ಎಸ್ ಸುರೇಶ್ ಬಾಬು, ಡಿ ಕೆ ಸುರೇಶ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತಿತರರಿಗೆ ಕರೆ ಮಾಡಿ ಬೆದರಿಸಿದ್ದ. ಛೋಟಾ ರಾಜನ್ ಗ್ಯಾಂಗಿನೊಂದಿಗೆ ಗುರುತಿಸಿಕೊಂಡಿರುವ ರವಿ ಪೂಜಾರಿ, ದಾವೂದ್ ಇಬ್ರಾಹಿಂ ಗುಂಪಿನಿಂದ 2000ನೇ ಇಸವಿಯಲ್ಲಿ ಬೇರ್ಪಟ್ಟಿದ್ದ. ಮುಂಬೈನ ಬಿಲ್ಡರ್‌ಗಳಾದ ಓಂಪ್ರಕಾಶ್ ಕುಕ್ರೇಜಾ, ಸುರೇಶ್ ವಾಧ್ವಾ ಹತ್ಯೆಯಲ್ಲಿ ಈತನ ಸಹಚರರ ಪ್ರಮುಖ ಪಾತ್ರವಿತ್ತು. ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಿರ್ದೇಶಕ ಕರಣ್ ಜೋಹರ್, ನಿರ್ಮಾಪಕ ರಾಕೇಶ್ ರೋಷನ್ ಮತ್ತಿತರರನ್ನು ಈ ಹಿಂದೆ ಬೆದರಿಸಿದ್ದ.

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More