ಇಂದಿನ ಡೈಜೆಸ್ಟ್ | ನೀವು ಓದಲೇಬೇಕಾದ 10 ಪ್ರಮುಖ ಇತರ ಸುದ್ದಿಗಳು

ನೀವು ತಪ್ಪಿಸಿಕೊಂಡಿರಬಹುದಾದ ಮತ್ತು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಚೀನಾದ ಕಿಂಗ್ಡಾವೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಎರಡನೇ ದಿನವಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪರಸ್ಪರ ಹಸ್ತಲಾಘವ ಮಾಡಿಕೊಂಡರು. ಬಳಿಕ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಅಲ್ಲದೆ, ಶಾಂತಿ ಸ್ಥಾಪನೆಗಾಗಿ ಆಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್ ಘಾನಿ ದೃಢ ನಿರ್ಧಾರ ಕೈಗೊಳ್ಳಬೇಕಿದೆ ಎಂದರು. 2017ರಲ್ಲಿ ಭಾರತ ಹಾಗೂ ಪಾಕಿಸ್ತಾನವನ್ನು ಸದಸ್ಯ ರಾಷ್ಟ್ರವನ್ನಾಗಿ ಮಾಡಿದ ಬಳಿಕ ನಡೆಯುತ್ತಿರುವ ಮೊದಲ ಶೃಂಗಸಭೆ ಇದಾಗಿದೆ.

ಅತೃಪ್ತರನ್ನು ಸಮಾಧಾನಪಡಿಸುವ ಕೆಲಸ ಮಾಡುತ್ತಿದ್ದೇನೆ: ಸಿದ್ದರಾಮಯ್ಯ

ಸಚಿವ ಸ್ಥಾನದ ವಿಚಾರದಲ್ಲಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತದ ಕುರಿತಂತೆ ಹೈಕಮಾಂಡ್ ಜೊತೆ ಚರ್ಚಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಿನ್ನ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ದೂರವಾಣಿ ಮೂಲಕವೇ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ,” ಎಂದು ಹೇಳಿದರು.

ಪ್ರತ್ಯೇಕ ಧರ್ಮದ ಚಿಂತನೆ ಹಿಂದೆ ಸ್ವಾರ್ಥ: ಶೆಟ್ಟರ್

ವೀರಶೈವ ಹಾಗೂ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕು ಎಂಬ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿರುವುದನ್ನು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. “ಕಾಂಗ್ರೆಸ್ ಅಧಿಕಾರದ ಆಸೆಗಾಗಿ ಈ ರೀತಿ ಮಾಡಿತ್ತು. ಈ ಚಿಂತನೆ ಹಿಂದೆ ಕಾಂಗ್ರೆಸ್‌ ಸರ್ಕಾರದ ಸ್ವಾರ್ಥವಿದೆ. ವೀರಶೈವ-ಲಿಂಗಾಯತರ ಮೇಲೆ ನಿಜವಾದ ಕಾಳಜಿ ಇದ್ದರೆ ಅಂದು ಹೋರಾಟ ಮಾಡಿದವರೆಲ್ಲ ಈಗ ಹೋರಾಟ ಮಾಡಲಿ,” ಎಂದು ಶೆಟ್ಟರ್ ಸವಾಲು ಹಾಕಿದ್ದಾರೆ.

ಕ್ಷಮೆ ಯಾಚಿಸಿದ ಪ್ರಿಯಾಂಕ ಚೋಪ್ರಾ

ಅಮೆರಿಕದ ಜನಪ್ರಿಯ ಟಿವಿ ಸರಣಿ ಕ್ವಾಂಟಿಕೋದ ಸಂಚಿಕೆಯೊಂದರಲ್ಲಿ ಭಾರತೀಯರು ಉಗ್ರರು ಎಂದು ಬಿಂಬಿತವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಲೇ ನಟಿ ಪ್ರಿಯಾಂಕಾ ಚೋಪ್ರಾ ಭಾರತೀಯರಲ್ಲಿ ಕ್ಷಮೆ ಯಾಚಿಸಿದ್ದಾರೆ. “ನಾನು ತುಂಬಾ ದುಃಖಿತಳಾಗಿದ್ದೇನೆ. ನನ್ನ ಉದ್ದೇಶ ಎಂದಿಗೂ ಅದಾಗಿಲ್ಲ. ನಾನು ಹೆಮ್ಮೆಯ ಭಾರತೀಯಳಾಗಿದ್ದೇನೆ,” ಎಂದು ಟ್ವೀಟ್‌ ಮಾಡಿದ್ದಾರೆ.

ಗಡಿ ನುಸುಳುವ ಉಗ್ರರ ಯತ್ನ ವಿಫಲಗೊಳಿಸಿದ ಭಾರತೀಯ ಯೋಧರು

ಭಾರತದಲ್ಲಿ ವಿದ್ವಂಸ ಕೃತ್ಯಕ್ಕೆ ಸಂಚು ರೂಪಿಸಿ, ಜಮ್ಮು-ಕಾಶ್ಮೀರ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಆರು ಮಂದಿ ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ. ಕುಪ್ವಾರ ಕೆರಾನ್ ಸೆಕ್ಟರ್‌ನಲ್ಲಿ ಪಾಕ್ ಉಗ್ರರು ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದು, ಇದೀಗ ಗಡಿಭಾಗದಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ ಎಂದು ಭದ್ರತಾಧಿಕಾರಿಗಳು ತಿಳಿಸಿದ್ದಾರೆ.

ಜೂನ್‌ ೧೪ರಂದು ಸಮನ್ವಯ ಸಮಿತಿ ಸಭೆ

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಜೂನ್‌ ೧೪ರಂದು ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಹೇಳಿದರು. ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಅವರು ಮಾತನಾಡಿದರು. ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟ, ಭಿನ್ನಮತ ಚಟುವಟಿಕೆಗಳು, ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಉಪಚುನಾವಣೆ ಹಾಗೂ ೨೦೧೯ರ ಲೋಕಸಭಾ ಚುನಾವಣೆಗೆ ಸಿದ್ಧತೆಯ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಶಾಂಘೈನಲ್ಲಿ ಪಾಕ್‌ ಅಧ್ಯಕ್ಷ ಮಮ್ನೂನ್-ಮೋದಿ ಮುಖಾಮುಖಿ

ಚೀನಾದ ಶಾಂಘೈ ಸಹಕಾರ ಸಂಘಟನೆಯ ೧೮ನೇ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್ ಹುಸೇನ್‌ ಅವರಿಗೆ ಹಸ್ತಲಾಘವ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು. ಭಯೋತ್ಪಾದನೆ, ಪ್ರತ್ಯೇಕತಾವಾದ, ತೀವ್ರವಾದಗಳಿಗೆ ಕಡಿವಾಣ ಹಾಕಿ, ವಾಣಿಜ್ಯ, ಅರೋಗ್ಯ, ಕೃಷಿ, ಪ್ರಾದೇಶಿಕ ಸಂಪರ್ಕ, ಪರಿಸರ ಸಂರಕ್ಷಣೆ, ವಿಕೋಪ ನಿರ್ವಹಣೆ ಹಾಗೂ ಸದಸ್ಯ ರಾಷ್ಟ್ರಗಳ ಮಧ್ಯೆ ಸಂಬಂಧ ವೃದ್ಧಿಸುವುದು ಈ ಸಂಘಟನೆಯ ಕಾರ್ಯಸೂಚಿಯಾಗಿದೆ.

ಅಮೆರಿಕದಿಂದಲೂ ಐಸಿಐಸಿಐ ಪ್ರಕರಣ ತನಿಖೆ ಸಂಭವ

ಐಸಿಐಸಿಐ ಬ್ಯಾಂಕ್‌ ಹಗರಣದಲ್ಲಿ ಆರೋಪಿಯಾಗಿರುವ ಬ್ಯಾಂಕ್‌ ಮುಖ್ಯಸ್ಥೆ ಚಂದಾ ಕೊಚ್ಚಾರ್‌ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಈಗಾಗಲೇ ಭಾರತದ ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಅಮೆರಿಕದ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಎಸ್‌ಇಸಿ ತನಿಖೆ ಮುಂದಾಗಿದೆ.

ಅಮೆರಿಕದ ಷೇರು ಮಾರುಕಟ್ಟೆಯಲ್ಲೂ ಐಸಿಐಸಿಐ ಬ್ಯಾಂಕ್‌ ನಮೂದಾಗಿದೆ. ಇದಕ್ಕೆ ಪೂರಕವಾಗಿ ಸೆಬಿಯ ನೆರವು ಕೋರುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ ಮತ್ತು ಚಂದಾ ಕೊಚ್ಚಾರ್‌ ಅವರಿಗೆ ಈಗಾಗಲೇ ಸೆಬಿ ಷೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.

ತೆಲುಗು ಬಿಗ್‌ಬಾಸ್‌-೨ ಇಂದಿನಿಂದ ಆರಂಭ

ಬಹುನಿರೀಕ್ಷಿತ ತೆಲುಗು ಬಿಗ್‌ ಬಾಸ್‌ ಷೋ ಇಂದು (ಜೂನ್‌ ೧೦) ತೆರೆಯ ಮೇಲೆ ಮೂಡಿಬರಲಿದೆ. ಜಿಇಸಿ ಸ್ಟಾರ್‌ ಮಾ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ನ್ಯಾಚುರಲ್ ಸ್ಟಾರ್‌ ನಾನಿ ಕಾರ್ಯಕ್ರಮ ನಿರೂಪಕರಾಗಿದ್ದಾರೆ.

೧೦೦ ದಿನಗಳ ಕಾರ್ಯಕ್ರಮದಲ್ಲಿ ೧೬ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸಮಾಜದ ವಿವಿಧ ಸ್ತರಗಳಲ್ಲಿ ಗುರುತಿಸಿಕೊಂಡಿರುವವರು ಬಿಗ್‌ಬಾಸ್‌ ಮನೆಗೆ ಪ್ರವೇಶಿಸಿಲಿದ್ದಾರೆ. ಮೊದಲ ಷೋ ನಂತರ ಸ್ಪರ್ಧಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗುತ್ತದೆ ಎನ್ನಲಾಗಿದೆ.

ಭಾರತಕ್ಕೆ ವರವಾದ ಆಂಡರ್ಸನ್!

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಭುಜದ ನೋವಿನಿಂದಾಗಿ ಮಂದಿನ ಆರು ವಾರಗಳ ಕಾಲ ಕ್ರಿಕೆಟ್ ಮೈದಾನದಿಂದ ಹಿಂದೆ ಸರಿದಿದ್ದಾರೆ. ಇಂಗ್ಲೆಂಡ್ ಹಾಗೂ ಭಾರತ ನಡುವಣದ ಐದು ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ ೧ರಿಂದ ಎಡ್ಜ್‌ಬ್ಯಾಸ್ಟನ್‌ನಲ್ಲಿ ಶುರುವಾಗಲಿದ್ದು, ಜೇಮ್ಸ್ ಆಂಡರ್ಸನ್ ಗಾಯಾಳುವಾಗಿರುವುದು ಭಾರತಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ. ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿಗೆ ಜೇಮ್ಸ್ ಆಂಡರ್ಸನ್ ಪ್ರಬಲ ಸವಾಲಾಗಿ ಪರಿಣಮಿಸುತ್ತಾರೆ ಎಂದೇ ಈ ಬಾರಿಯ ಇಂಡೋ-ಆಂಗ್ಲೋ ಕ್ರಿಕೆಟ್ ಸರಣಿಯನ್ನು ವ್ಯಾಖ್ಯಾನಿಸಲಾಗಿತ್ತು. ಇದೇ ವೇಳೆ ಜೇಮ್ಸ್ ಗಾಯಗೊಂಡಿರುವುದು ಇಂಗ್ಲೆಂಡ್ ಪಾಳೆಯದಲ್ಲಿ ಚಿಂತೆ ಎಬ್ಬಿಸಿದೆ. "ಭಾರತ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ನಾವು ಆಡಬೇಕಿದೆ. ಇದೇ ವೇಳೆ ಜೇಮ್ಸ್ ಗಾಯಗೊಂಡಿರುವುದು ನಮ್ಮ ಬೌಲರ್‌ಗಳಿಗೆ ಪ್ರಬಲ ಸವಾಲೊಡ್ಡಿದೆ,'' ಎಂದು ಇಂಗ್ಲೆಂಡ್ ತಂಡದ ಕೋಚ್ ಟ್ರೆವೊರ್ ಬೇಲಿಸ್ ತಿಳಿಸಿದ್ದಾರೆ.

ದಲಿತರ ಮೇಲಿನ ಬಹುತೇಕ ದೌರ್ಜನ್ಯಗಳಿಗೆ ಕ್ಷುಲ್ಲಕ ಕಾರಣಗಳೇ ನೆಪ!
ವಿದೇಶಗಳಲ್ಲಿ ಮಿಂಚಿದರೆ ದೇಶದ ಜನಸಾಮಾನ್ಯರ ಅಸಮಾಧಾನ ತಗ್ಗುವುದೇ? | ಭಾಗ 2
ರೈತರು ನೆಮ್ಮದಿಯಿಂದ ಇರಬೇಕಾದರೆ ಸಂಸತ್‌ನಲ್ಲಿ ಈ 7 ವಿಷಯ ಚರ್ಚೆಯಾಗಲಿ
Editor’s Pick More