ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆ; ಶೇಕಡ 55ರಷ್ಟು ಮತದಾನ

ಬಿಜೆಪಿ ಅಭ್ಯರ್ಥಿ ನಿಧನದಿಂದ ಮುಂಡೂಲ್ಪಟ್ಟಿದ್ದ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಚುನಾವಣೆ ನಡೆದಿದ್ದು, ಶೇಕಡ 55ರಷ್ಟು ಮತದಾನವಾಗಿದೆ. ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು, ರವಿಕೃಷ್ಣಾ ರೆಡ್ಡಿ ಸೇರಿದಂತೆ ೧೯ ಮಂದಿ ಸ್ಪರ್ಧೆ ಮಾಡಿದ್ದರು

ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ ಎನ್‌ ವಿಜಯಕುಮಾರ್‌ ಅವರ ನಿಧನದಿಂದ ಮುಂದೂಡಲ್ಪಟ್ಟಿದ್ದ ಬೆಂಗಳೂರಿನ ಜಯನಗರ ವಿಧಾನ ಸಭಾ ಕ್ಷೇತ್ರಕ್ಕೆ ಸೋಮವಾರ ಚುನಾವಣೆ ನಡೆದಿದ್ದು, ಶೇ. ೫೫ರಷ್ಟು ಮತದಾನವಾಗಿದೆ. ೨೦೧೩ರ ಚುನಾವಣೆಯಲ್ಲಿ ಜಯನಗರದಲ್ಲಿ ಶೇ.೫೫.೯೩ರಷ್ಟಾಗಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಮತದಾನದಲ್ಲಿ ಕೊಂಚ ಇಳಿಕೆಯಾಗಿದೆ. ಜೂನ್‌ ೧೩ರಂದು ಮತ ಎಣಿಕೆ ನಡೆಯಲಿದೆ. ಅನುಕಂಪದ ಲಾಭ ಪಡೆಯುವ ಉದ್ದೇಶದಿಂದ ಬಿಜೆಪಿಯು ಬಿ ಎನ್‌ ಪ್ರಹ್ಲಾದ ಬಾಬು ಕಣ್ಣಕ್ಕಿಳಿಸಿದೆ. ಸಹೋದರ ವಿಜಯಕುಮಾರ್‌ ಅವರ ಗೆಲುವನ್ನು ವಿಸ್ತರಿಸಲು ಪ್ರಹ್ಲಾದ್‌ ಕಾತರರಾಗಿದ್ದಾರೆ. ಕ್ಷೇತ್ರ ಪುನರ್ವಿಂಗಡೆಯ ನಂತರ ಜಯನಗರ ಕ್ಷೇತ್ರಕ್ಕೆ ನಡೆದ ೨೦೦೮ ಮತ್ತು ೨೦೧೩ರ ವಿಧಾನಸಭಾ ಚುನಾವಣೆಗಳಲ್ಲಿ ವಿಜಯಕುಮಾರ್‌ ಗೆಲುವು ಸಾಧಿಸಿದ್ದರು. ಬಿಜೆಪಿಯ ಹ್ಯಾಟ್ರಿಕ್‌ ಕನಸು ಭಗ್ನಗೊಳಿಸುವ ಉದ್ದೇಶದಿಂದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಸ್ಪರ್ಧೆಯೊಡ್ಡಿರುವ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಸೇರಿದಂತೆ ೧೯ ಮಂದಿ ಕಣದಲ್ಲಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಸಂಖ್ಯಾಬಲದಲ್ಲಿ ಮತ್ತಷ್ಟು ಸದೃಢಗೊಳಿಸಲು ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲ್ಲುವುದು ಅನಿವಾರ್ಯ. ಇದೇ ಕಾರಣಕ್ಕೆ ಜೆಡಿಎಸ್‌ ತನ್ನ ಅಭ್ಯರ್ಥಿಯಾದ ಕಾಳೇಗೌಡ ಅವರನ್ನು ಕಣದಿಂದ ಹಿಂದೆ ಸರಿಸಿದೆ. ನೌಹೀರಾ ಶೇಖ್‌ ಸ್ಥಾಪಿತ ಮಹಿಳಾ ಸಬಲೀಕರಣ ಪಕ್ಷದ (ಎಂಇಪಿ) ಸೈಯದ್ ಜಬೀ ಹಿಂದೆ ಸರಿದಿರುವುದು ಕಾಂಗ್ರೆಸ್‌ ಪಾಲಿಗೆ ಆಶಾದಾಯಕ ಬೆಳವಣಿಗೆ. ಮತ್ತೊಂದು ಕಡೆ ಪ್ರಹ್ಲಾದ್‌ಗೆ ಟಿಕೆಟ್‌ ನೀಡುವ ಬದಲು ತಮಗೆ ನೀಡಬೇಕಿತ್ತು ಎಂದು ಬಿಜೆಪಿಯ ಕೆಲವು ಕಾರ್ಪೊರೇಟರ್‌ಗಳು ಅಸಮಾಧಾನಗೊಂಡಿದ್ದರು. ಕೆಲವರು ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಗುಪ್ತವಾಗಿ ಸಹಕರಿಸಿರುವುದು ಸಾಧ್ಯತೆಯು ಬಿಜೆಪಿಯನ್ನು ಆತಂಕಗೊಳ್ಳುವಂತೆ ಮಾಡಿದೆ.

ಇದನ್ನೂ ಓದಿ : ಬಿಜೆಪಿ-ಕಾಂಗ್ರೆಸ್‌-ರವಿ ಜಿದ್ದಾಜಿದ್ದಿಯಲ್ಲಿ ‘ಜಯ’ನಗರ ಯಾರ ಪಾಲಿಗೆ?

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್‌ ಅವರು ಜಯನಗರ ಕ್ಷೇತ್ರದ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಪ್ರಚಾರ ನಡೆಸಿದ್ದರು. ಬಿಜೆಪಿ ನಾಯಕ ಆರ್‌ ಅಶೋಕ್‌ ಅವರೂ ಈ ಕ್ಷೇತ್ರ ಗೆದ್ದು, ಬಿಜೆಪಿಯ ಸಂಖ್ಯಾಬಲವನ್ನು ೧೦೫ಕ್ಕೆ ಹೆಚ್ಚಿಸಲು ಶ್ರಮಿಸಿದ್ದಾರೆ. ಅನಂತ ಕುಮಾರ್‌ ಅವರ ಪತ್ನಿ ತೇಜಸ್ವಿನಿ, ನಟಿ ಹಾಗೂ ರಾಜಕಾರಣಿಗಳಾದ ತಾರಾ ಅನುರಾಧ, ಮಾಳವಿಕಾ ಅವಿನಾಶ್‌ ಅವರು ಮತ ಯಾಚಿಸುವ ಮೂಲಕ ಪ್ರಚಾರದ ರಂಗು ಹೆಚ್ಚಿಸಿದ್ದರು. ಆರ್‌ಎಸ್‌ಎಸ್‌ ಕಾರ್ಯಕರ್ತರು ಮನೆಮನೆಗೆ ತೆರಳಿ ಮತ ಯಾಚನೆ ಮಾಡಿದ್ದಾರೆ.

೨೨೪ ಬಲದ ವಿಧಾನಸಭೆಯಲ್ಲಿ ಸದ್ಯ ಬಿಜೆಪಿ ೧೦೪, ಕಾಂಗ್ರೆಸ್‌ ೭೮, ಜೆಡಿಎಸ್‌ ೩೭, ಕೆಪಿಜೆಪಿಯಿಂದ ಆರ್‌ ಶಂಕರ್, ಪಕ್ಷೇತರವಾಗಿ ಮುಳಬಾಗಿಲು ಕ್ಷೇತ್ರದಿಂದ ನಾಗೇಶ್‌ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಜಯಿಸಿದ್ದು, ರಾಮನಗರದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಜಮಖಂಡಿಯ ಕಾಂಗ್ರೆಸ್‌ ಶಾಸಕ ಸಿದ್ದು ನ್ಯಾಮಗೌಡ ಅವರು ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಜಮಖಂಡಿ ಮತ್ತು ರಾಮನಗರದಲ್ಲಿ ಉಪಚುನಾವಣೆ ನಡೆಯಬೇಕಿದೆ.

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More