ರಾಜಸ್ಥಾನದಲ್ಲಿ ಮದ್ಯದ ಮೇಲೆ ಶೇ.೧೦ರಷ್ಟು ಗೋ ಸೆಸ್ ವಿಧಿಸಲಿದೆ ರಾಜೇ ಸರ್ಕಾರ

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ವಿಧಿಸಲು ಉದ್ದೇಶಿಸಿರುವ ಗೋ ಸೆಸ್ ರಾಜಸ್ಥಾನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಕೆಲವರುಸ್ವಾಗತಿಸಿದ್ದರೆ, ಮತ್ತಷ್ಟು ಮಂದಿ ಜನರ ಮೇಲೆ ಎಳೆದ ಬರೆ ಎಂದು ಟೀಕಿಸುತ್ತಿದ್ದಾರೆ. ಗೋ ಸುಂಕದಿಂದ ಯಾರಿಗೆ ಎಂತಹ ಉಪಯೋಗ? ಇಲ್ಲಿದೆ ವರದಿ

ಮದ್ಯಪ್ರಿಯರಿಗೆ ಕಹಿಯಾದ ಆದರೆ ಗೋವುಗಳ ಆರೋಗ್ಯಕ್ಕೆ ಸಿಹಿಯಾದ ಸುದ್ದಿಯೊಂದು ರಾಜಸ್ಥಾನದಿಂದ ಬಂದಿದೆ. ಅಲ್ಲಿನ ಬಿಜೆಪಿ ಸರ್ಕಾರ ಗೋವುಗಳಿಗೆ ರಕ್ಷಣೆ ಮತ್ತು ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಮದ್ಯದ ಮೇಲೆ ಶೇ 10ರಷ್ಟು ಗೋ ಸೆಸ್ ವಿಧಿಸಲು ಆಓಚಿಸುತ್ತಿದೆ. ಈಗಾಗಲೇ ಮದ್ಯದ ಮೇಲೆ ಶೇ ೧೦ ರಷ್ಟು ಬೇರೆ ತೆರಿಗೆ ವಿಧಿಸಿದೆ, ಹೆಚ್ಚುವರಿಯಾಗಿ ಶೇ ೧೦ ರಷ್ಟು ಗೋ ಸೆಸ್ ವಿಧಿಸಿದರೆ ಮದ್ಯದ ಮೇಲಿನ ಸೆಸ್ ಶೇಕಡಾ ೨೦ಕ್ಕೆ ಏರಲಿದೆ.

ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಹಣಕಾಸು ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಇಡೀ ದೇಶದಲ್ಲಿ ಪ್ರತ್ಯೇಕ ಗೋಪಾಲನಾ ಇಲಾಖೆ ಹೊಂದಿರುವ ಏಕೈಕ ರಾಜ್ಯ ಎನಿಸಿರುವ ರಾಜಸ್ತಾನದಲ್ಲಿ ಇದೇ ಮಾದರಿಯ ಸುಂಕವನ್ನು ಆಸ್ತಿ ಮಾರಾಟ, ಭೋಗ್ಯ ವಹಿವಾಟು, ಬಾಡಿಗೆ ಕರಾರಿನ ಮೇಲೆ ಈಗಾಗಲೇ ವಿಧಿಸಲಾಗುತ್ತಿದೆ.

2,562 ಅಧಿಕೃತ ಗೋಶಾಲೆಗಳಲ್ಲಿ 9.7ಲಕ್ಷದಷ್ಟು ಗೋವುಗಳನ್ನು ಸಲಹುತ್ತಿರುವ ಸರ್ಕಾರಕ್ಕೆ ಕಳೆದ ವರ್ಷ ಸ್ಟಾಂಪ್ ಡ್ಯೂಟಿ ಮೇಲೆ ವಿಧಿಸಿದ ಸರ್ಚಾರ್ಜ್ ನಿಂದ ರು 237 ಕೋಟಿ ಆದಾಯ ಗಳಿಸಿತ್ತು. ಆದರೆ ವಾಸ್ತವದಲ್ಲಿ ವಾರ್ಷಿಕ 490 ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿತ್ತು. ಇದನ್ನು ಸರಿತೂಗಿಸಲು ಶೇ 10ರಷ್ಟು ಹೆಚ್ಚುವರಿ ಸರ್ಚಾರ್ಜ್ ಅನ್ನು ಗೋ ಸೆಸ್ ಹೆಸರಿನಲ್ಲಿ ಸಂಗ್ರಹಿಸಲು ಸರ್ಕಾರ ಯೋಚಿಸುತ್ತಿದೆ. “ಸೆಸ್ ವಿಧಿಸುವುದು ಅನಿವಾರ್ಯ,” ಎಂದು ಬಜೆಟ್ ಭಾಷಣದ ವೇಳೆ ಮುಖ್ಯಮಂತ್ರಿ ವಸುಂಧರಾ ರಾಜೇ ಅಭಿಪ್ರಾಯಪಟ್ಟಿದ್ದರು. ಈ ಮೊದಲೇ ವಿಧಿಸಿದ್ದ ಶೇ 10ರಷ್ಟು ಸರ್ಚಾರ್ಜ್ ಜೊತೆಗೆ ಇದೂ ಕೂಡ ಸೇರಿಕೊಂಡಿರುವುದರಿಂದ ಒಟ್ಟು ಶೇ 20ರಷ್ಟು ತೆರಿಗೆಯನ್ನು ಭರಿಸಬೇಕಾದ ಸ್ಥಿತಿ ಇದೆ. ಪ್ರಸ್ತುತ ಆಸ್ತಿ ನೋಂದಣಿಯ ಶೇ 11ರಷ್ಟು ಪಾಲನ್ನು ಗೋ ಇಲಾಖೆ ಪಡೆದುಕೊಳ್ಳುತ್ತಿದೆ. ಗೋ ಸೆಸ್ ವಿಧಿಸುತ್ತಿರುವ ಎರಡನೇ ರಾಜ್ಯ ರಾಜಸ್ತಾನ. ಈ ಮೊದಲು ಪಂಜಾಬ್ ಆಟೊಮೊಬೈಲ್ ಸಲಕರಣೆಗಳ ಖರೀದಿ, ವಿದ್ಯುತ್ ಬಳಕೆ ಮೇಲೆ ಗೋ ಸೆಸ್ ವಿಧಿಸಿ ಸುದ್ದಿಯಲ್ಲಿತ್ತು.

ಇದನ್ನೂ ಓದಿ : ಗೋವು, ಪಕ್ಷಿಗಳ ನೀರಿನ ದಾಹ ಇಂಗಿಸುವ ಆಧುನಿಕ ನೀರ್‌ ಸಾಬ್‌!

ಇದೆಲ್ಲದರ ನಡುವೆ ಚರ್ಚೆಯೊಂದು ಚಾಲ್ತಿಯಲ್ಲಿದೆ. ‘ಎತ್ತಿಗೆ ಜ್ವರ ಬಂದರೆ ಜನರಿಗೆ ಬರೆ ಎಳೆದರು’ ಎಂಬಂತೆ ರಾಜಸ್ಥಾನ ವರ್ತಿಸಿದೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ. “ಮದ್ಯದ ಬದಲು ಗೋ ಮೂತ್ರವನ್ನು ಕುಡಿಯುವಂತೆ ರಾಜಸ್ತಾನ ಸರ್ಕಾರ ಪ್ರೇರೇಪಿಸುತ್ತಿದೆ,” “ಗೋ ಆರಾಧಕರು ಮತ್ತು ಗೋಮಾಂಸ ಸೇವಿಸುವವರ ನಡುವೆ ಕಂದರ ಉಂಟು ಮಾಡುವ ರಾಜಕೀಯ ಗಿಮಿಕ್ ಇದು”, “ಗೋ ಸೆಸ್ ಮಾತ್ರವೇ ಏಕೆ ಸ್ವಚ್ಛ ಭಾರತ್ ಸೆಸ್, ಮೇಕ್ ಇನ್ ಇಂಡಿಯಾ ಸೆಸ್ ಕೂಡ ಅಳವಡಿಸಬಹುದು” “ಗೋ ಮಾತೆ ಮಾತ್ರ ತಮ್ಮ ರಾಜ್ಯವನ್ನು ಅಭಿವೃದ್ಧಿ ಪಡಿಸಬಹುದು ಎಂದು ಅಲ್ಲಿನ ಜನತೆ ಭಾವಿಸಿದಂತಿದೆ ಹಾಗಾಗಿ ಈ ಸೆಸ್” ಎಂಬಿತ್ಯಾದಿ ಮಾತುಗಳು ಟ್ವಿಟರ್ ನಲ್ಲಿ ಪ್ರಕಟಗೊಂಡಿವೆ.

ಪಂಜಾಬ್ ಸರ್ಕಾರ 2016ರಲ್ಲಿ ಗೋಸೆಸ್ ವಿಧಿಸಿದಾಗಲೂ ಪರ ವಿರೋಧದ ಚರ್ಚೆಗಳು ನಡೆದಿದ್ದವು. ಭಾರತೀಯ ಕಿಸಾನ್ ಸಂಘ, ಬಿಜೆಪಿ ಬೆಂಬಲಿಗರು ಸೇರಿದಂತೆ ಅನೇಕರು ಪಂಜಾಬ್ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಸಂಸದ ಧರ್ಮವೀರ ಗಾಂಧಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, “ವಿದ್ಯುತ್ ದರದ ಮೇಲೆ ಹೇರಲಾಗಿದ್ದ 500 ಕೋಟಿ ರುಪಾಯಿಗಳಷ್ಟು ಶಿಕ್ಷಣ ಸೆಸ್ ದುರ್ಬಳಕೆಯಾಗಿದೆ. ಪಂಜಾಬ್ ಜನತೆ ಈಗಾಗಲೇ ಅನೇಕ ತೆರಿಗೆಗಳಿಂದ ನಲುಗಿದ್ದಾರೆ. ಪಂಜಾಬ್ ಅತಿ ಹೆಚ್ಚು ತೆರಿಗೆ ವಿಧಿಸುತ್ತಿರುವ ರಾಜ್ಯ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More