ಟ್ವಿಟರ್ ಸ್ಟೇಟ್ | ಡಾ.ಕಫೀಲ್ ಸೋದರನ ಮೇಲೆ ಗುಂಡಿನ ದಾಳಿ; ಕಾವೇರಿದ ಚರ್ಚೆ

ಗೋರಖ್‌ಪುರ ಆಸ್ಪತ್ರೆಯಲ್ಲಿ ಮಕ್ಕಳ ಮರಣದ ಆರೋಪ ಹಿನ್ನೆಲೆಯಲ್ಲಿ ಜೈಲುಪಾಲಾಗಿದ್ದ ವೈದ್ಯ ಕಫೀಲ್ ಖಾನ್ ಅವರ ಸಹೋದರನ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಗೂಂಡಾರಾಜ್ ಮನೆಮಾಡಿದೆ ಎನ್ನುವ ಆತಂಕ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗಿದೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾಗಿರುವ ಗೋರಖ್‌ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಹಲವು ಮಕ್ಕಳು ಮೃತಪಟ್ಟ ದಾರುಣ ಘಟನೆ ಜರುಗಿತ್ತು. ನಂತರ, ಆಸ್ಪತ್ರೆಯ ವೈದ್ಯ ಕಫೀಲ್ ಖಾನ್ ಅವರ ಮೇಲೆ ಆರೋಪ ಹೊರಿಸಿದ ಸರ್ಕಾರ ಅವರನ್ನು ಜೈಲಿಗೆ ತಳ್ಳಿತ್ತು. ಕಫೀಲ್ ಖಾನ್ ಅವರು ಮಕ್ಕಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಆದರೆ, ಸರ್ಕಾರ ಆಮ್ಲಜನಕದ ಕೊರತೆಯಾಗಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ಜೈಲಿನಿಂದ ಹೊರಬಂದ ಮೇಲೆ ಕಫೀಲ್ ಖಾನ್ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಜೀವಬೆದರಿಕೆ ಇದೆ ಎಂದು ಹೇಳಿದ್ದರು. ಇದೀಗ ಅವರ ಸಹೋದರ ಖಾಶಿಫ್ ಜಮೀಲ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಫೀಲ್ ಖಾನ್, “ದೇವರೇ ಕಾಪಾಡಲಿ. ನಾನು ಬಗ್ಗುವುದಿಲ್ಲ,” ಎಂದು ಬರೆದು ವಿಡಿಯೋ ಹಾಕಿದ್ದಾರೆ.

ವಿಡಿಯೋದಲ್ಲಿ ಅವರು ತಮ್ಮ ಸಹೋದರರಿಗೆ ಗುಂಡು ಹೇಗೆ ತಗಲಿತು ಎನ್ನುವ ವಿವರ ನೀಡಿದ್ದಾರೆ. “ಸಹೋದರನಿಗೆ ಮಾಡಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಅವರು ಐಸಿಯುನಲ್ಲಿದ್ದಾರೆ. ಅವರನ್ನು ಕೊಲ್ಲಲೆಂದೇ ಗುಂಡಿಕ್ಕಲಾಗಿದೆ. ಯಾರು ಗುಂಡು ಹಾರಿಸಿದ್ದಾರೆ ಎಂದು ತಿಳಿದಿಲ್ಲ. ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಳಿದುಕೊಂಡಿರುವ ಗೋರಖನಾಥ ದೇವಾಲಯದಿಂದ ೫೦೦ ಮೀಟರ್‌ಗಳ ಅಂತರದಲ್ಲಿ ಈ ಕೃತ್ಯ ನಡೆದಿದೆ,” ಎನ್ನುವ ವಿವರಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಕಫೀಲ್ ಖಾನ್ ಅವರ ಸಹೋದರನನ್ನು ಗುಂಡಿಕ್ಕಿ ಕೊಲ್ಲುವ ಯತ್ನ ನಡೆದಿರುವ ಬಗ್ಗೆ ಆಘಾತ ವ್ಯಕ್ತಪಡಿಸಿ ಹಲವು ಟ್ವೀಟಿಗರು ತಕ್ಷಣವೇ ಟ್ವೀಟ್ ಮಾಡಿದ್ದು, “ಇದೊಂದು ಕ್ರೂರ ಕೃತ್ಯ,” ಎಂದು ಹಲವರು ವಿಷಾದಪಟ್ಟಿದ್ದಾರೆ. “ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಗೂಂಡಾರಾಜ್ ಅಧಿಕಾರದಲ್ಲಿದೆ,” ಎಂದು ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಟ್ವೀಟ್ ಮಾಡಿದ್ದಾರೆ. “ಯೋಗಿ ಆದಿತ್ಯನಾಥ್ ಸರ್ಕಾರ ಗೋರಖ್‌ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಸರಬರಾಜು ಮಾಡದೆ ನೂರಾರು ಮಕ್ಕಳ ಸಾವಿಗೆ ಕಾರಣವಾಗುತ್ತದೆ. ನಂತರ ಕಫೀಲ್ ಖಾನ್ ಅವರನ್ನು ಬಲಿಯ ಕುರಿಯಾಗಿಸಿ ಬಂಧಿಸುತ್ತದೆ. ಕಫೀಲ್ ಖಾನ್ ಜೈಲಿನಿಂದ ಹೊರಬಂದಾಗ ತಮಗೆ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಇದೀಗ ಅವರ ಸಹೋದರನನ್ನು ಗುಂಡಿಕ್ಕಿ ಕೊಲ್ಲುವ ಯತ್ನ ನಡೆದಿದೆ. ಇದು ಯೋಗಿ ಆದಿತ್ಯನಾಥ್ ಅವರ ಗೂಂಡಾರಾಜ್,” ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಕಫೀಲ್ ಖಾನ್ ಅವರು ಗುಂಡೇಟಿನಿಂದ ಗಾಯಗೊಂಡಿದ್ದ ಸಹೋದರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಉತ್ತರ ಪ್ರದೇಶ ಪೊಲೀಸರು ಕುಟುಂಬದ ಜೊತೆಗೆ ಸರಿಯಾಗಿ ನಡೆದುಕೊಂಡಿಲ್ಲ ಎನ್ನುವುದನ್ನು ತೋರಿಸುವ ವಿಡಿಯೋಗಳೂ ಟ್ವಿಟರ್‌ನಲ್ಲಿವೆ. ಬ್ಲಾಗರ್ ರವಿ ನಾಯರ್ ಅವರು ಟ್ವೀಟ್ ಮಾಡಿ, “ನಿನ್ನೆ ಕಫೀಲ್ ಖಾನ್ ತಮ್ಮ ಸಹೋದರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಉತ್ತರ ಪ್ರದೇಶ ಪೊಲೀಸರು ಹೀಗೆ ವ್ಯವಹರಿಸಿದ್ದಾರೆ,” ಎಂದು ವಿಡಿಯೋ ಹಾಕಿದ್ದಾರೆ. ಗೋರಖ್‌ಪುರ ನಿವಾಸಿ ಅಬ್ದುಲ್ ರಹಮಾನ್ ಎಂಬುವರು, ಕಫೀಲ್ ಖಾನ್ ಅವರು ಮಾತನಾಡಿರುವ ವಿಡಿಯೋ ಟ್ವೀಟ್ ಮಾಡಿದ್ದಾರೆ. ಪತ್ರಕರ್ತ ಶಿವಂ ವಿಜ್ ಅವರು ಟ್ವೀಟ್ ಮಾಡಿ, “ಕಫೀಲ್ ಖಾನ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿರುವ ಕಾರಣದಿಂದ ಇಂತಹ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. “ಕಫೀಲ್ ಖಾನ್ ಮತ್ತು ಅವರ ಕುಟುಂಬ ಮಾಡಿರುವ ಒಂದೇ ಒಂದು ಅಪರಾಧವೆಂದರೆ ಮುಸ್ಲಿಂ ಜನಾಂಗದಲ್ಲಿ ಹುಟ್ಟಿರುವುದು. ಜೊತೆಯಲ್ಲಿ ಅವರು ಉತ್ತಮ ಕೆಲಸ ಮಾಡಲು ಪ್ರಯತ್ನಿಸಿದರು. ಪ್ರಧಾನಿ ಮೋದಿ ಅವರ ಭಾರತ ಮತ್ತು ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಉತ್ತಮ ವ್ಯಕ್ತಿಯಾಗಿರುವುದು ಅಥವಾ ಕೆಟ್ಟ ವ್ಯಕ್ತಿಯಾಗಿರುವುದು ಎರಡೂ ಅಪರಾಧ. ಮುಸ್ಲಿಮರು ತೆರೆಮರೆಯಲ್ಲಿರುವುದನ್ನೇ ಅವರು ಬಯಸುತ್ತಾರೆ,” ಎಂದು ಶಿವಂ ವಿಜ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಗೋರಖ್‌ಪುರ ಲೋಕಸಭಾ ಉಪ ಚುನಾವಣೆ; ಸಿಎಂ ಆದಿತ್ಯನಾಥಗೆ ಮುಖಭಂಗ

ಕಫೀಲ್ ಖಾನ್ ಸಹೋದರನ ಹತ್ಯೆ ಪ್ರಯತ್ನ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಮೋದಿ ಹತ್ಯೆ ಸಂಚು ವಿಚಾರವೂ ಚರ್ಚೆಗೆ ಒಳಗಾಗಿದೆ. “ಮಾಧ್ಯಮದಲ್ಲಿ ದೊಡ್ಡ ಸುದ್ದಿಯೊಂದು ಪ್ರಚಲಿತದಲ್ಲಿರುವಾಗ ಬಿಜೆಪಿ ಸರ್ಕಾರಗಳು ಯಾವ ಸುದ್ದಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ ಎನ್ನುವುದನ್ನು ಹುಡುಕಿ. ಮುಖ್ಯವಾಹಿನಿ ಮಾಧ್ಯಮಗಳು ಮೋದಿ ಹತ್ಯೆ ಸಂಚಿನ ಬಗ್ಗೆ ಸುದ್ದಿ ಮೇಲೆ ಸುದ್ದಿ ಪ್ರಸಾರ ಮಾಡುತ್ತಿದ್ದರೆ ಗುಂಡೇಟು ತಿಂದವರು ಯಾರು? ಕಫೀಲ್ ಖಾನ್ ಅವರ ಸಹೋದರ! ಅವರು ಬೇಗನೇ ಗುಣಮುಖರಾಗಲಿ. ಯಾರಿಗೆ ಬೆದರಿಕೆ ಇದೆ ಎನ್ನುವುದನ್ನು ನೀವೇ ನೋಡಿ,” ಎಂದು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಟ್ವೀಟ್ ಮಾಡಿದ್ದಾರೆ. ಪತ್ರಕರ್ತೆ ಸಂಜುಕ್ತಾ ಬಸು ಟ್ವೀಟ್ ಮಾಡಿ, “ಮೋದಿ ಅವರ ಹತ್ಯೆ ಸಂಚು ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದರೂ ಅವರು ಸುರಕ್ಷಿತರಾಗಿದ್ದಾರೆ. ಆದರೆ ಗೋರಖ್ಪುರ ಆಸ್ಪತ್ರೆಯ ಹೀರೋ ಕಫೀಲ್ ಖಾನ್ ಅವರ ಸಹೋದರ ಕಾಶಿಫ್ ಜಮೀಲ್ ಅವರ ಮೇಲೆ ಹತ್ಯೆ ಯತ್ನ ನಡೆದು ಆಸ್ಪತ್ರೆಯಲ್ಲಿದ್ದಾರೆ. ಈ ನಡುವೆ 'ಅವರು ನಮ್ಮನ್ನು ಕೊಲ್ಲುವ ಪ್ರಯತ್ನ ಮಾಡುತ್ತಾರೆ ಎಂದು ನಾನು ಸದಾ ಹೇಳುತ್ತಾ ಬಂದಿದ್ದೇನೆ' ಎಂದು ಕಫೀಲ್ ಹೇಳಿದ್ದಾರೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಬೆಂಬಲಿಗರು ಕಫೀಲ್ ಸಹೋದರನ ಹತ್ಯೆ ಯತ್ನದ ಹಿಂದೆ ಭೂ ಅವ್ಯವಹಾರದ ಹಿನ್ನೆಲೆಯಿದೆ ಎಂದು ಹೇಳುತ್ತಿದ್ದಾರೆ. ವಕೀಲ ಪ್ರಶಾಂತ್ ಪಿ ಉಮ್ರಾವೋ ಟ್ವೀಟ್ ಮಾಡಿ, “ಕಫೀಲ್ ಖಾನ್ ಅವರು ಗೋರಖ್‌ಪುರದ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಬಿಆರ್‌ಡಿ ಆಸ್ಪತ್ರೆಯಿಂದ ಕದ್ದ ಆರೋಪಿ. ಅವರ ಸಹೋದರ ಮಾಫಿಯಾ ಜೊತೆಗೆ ಸಂಬಂಧವಿಟ್ಟುಕೊಂಡಿರುವ ಕಾರಣ ಗುಂಡು ಹೊಡೆಸಿಕೊಂಡಿದ್ದಾರೆ,” ಎಂದು ಹೇಳಿದ್ದಾರೆ. ಅಲ್ಲದೆ, “ಕಫೀಲ್ ಸಹೋದರ ಭೂಮಿಗೆ ಸಂಬಂಧಿಸಿ ವ್ಯಾಜ್ಯದಲ್ಲಿ ಗುಂಡೇಟು ತಿಂದಿದ್ದಾರೆ,” ಎಂದೂ ಅವರು ವಾದಿಸಿದ್ದಾರೆ. ಬಿಜೆಪಿ ಪರ ಮಾಧ್ಯಮ ಸಂಸ್ಥೆ ‘ಸ್ವರಾಜ್’ನ ಪತ್ರಕರ್ತೆಯಾಗಿರುವ ಸ್ವಾತಿ ಗೋಯೆಲ್ ಶರ್ಮಾ ಅವರೂ ಇದೇ ವಾದವನ್ನು ಮುಂದಿಟ್ಟಿದ್ದಾರೆ. “ಮುಖ್ಯವಾಹಿನಿಯ ಪತ್ರಕರ್ತರು ವಿಷಯವನ್ನು ಬೇರೆ ರೀತಿ ವ್ಯಾಖ್ಯಾನಿಸುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಕಫೀಲ್ ಸಹೋದರ ಖಾಸಿಫ್ ಜಮೀಲ್ ಅವರು ಧೀರ್ಘಾವಧಿಯಿಂದ ಭೂ ವ್ಯಾಜ್ಯವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ೨೦೧೪ರಲ್ಲೂ ಇದೇ ವಿಚಾರದಲ್ಲಿ ಗೂಂಡಾಗಳು ಅವರ ಮನೆಗೆ ಬಂದು ಬೆದರಿಸಿದ್ದು ವರದಿಯಾಗಿದೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆದರೆ ಕಾಂಗ್ರೆಸ್, ಆಪ್ ಮತ್ತು ಇತರ ಪ್ರಗತಿಪರ ರಾಜಕೀಯ ಪಕ್ಷಗಳ ಮುಖಂಡರು ಕಫೀಲ್ ಸಹೋದರನ ಹತ್ಯೆಯತ್ನದ ಹಿಂದೆ ಕುಟುಂಬವನ್ನು ಬೆದರಿಸುವ ತಂತ್ರವಿದೆ ಎಂದೇ ವಾದಿಸುತ್ತಿದ್ದಾರೆ. ಉತ್ತರ ಪ್ರದೇಶದ ಗೂಂಡಾ ರಾಜ್‌ಗೆ ಇದು ಉದಾಹರಣೆ ಎಂದೂ ಹಲವರು ಹೇಳಿದ್ದಾರೆ. “ನವಭಾರತದಲ್ಲಿ ಅಮಾಯಕರನ್ನು ಜೈಲಿಗೆ ತಳ್ಳುವ ಜೊತೆಗೆ ಅವರ ರಕ್ತದ ಹಿಂದೆ ಬೀಳುವುದನ್ನೂ ನೋಡಬೇಕಾಗಿದೆ,” ಎಂದು ಆಪ್ ಕಾರ್ಯಕರ್ತೆ ಪ್ರೀತಿ ಶರ್ಮಾ ಮೆನನ್ ಬಹಳ ಬೇಸರದಿಂದ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿರುವ ಸೂಚನೆ ಈ ಪ್ರಕರಣ,” ಎಂದು ವ್ಯಾಖ್ಯಾನಿಸಿ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More