ಇಫ್ತಾರ್ ಆಯೋಜನೆ ಕುರಿತ ಪೇಜಾವರ ಶ್ರೀ ಗೊಂದಲ ಪ್ರಚಾರ ತಂತ್ರವೆಂಬುದು ನಿಜವೇ?

ವಿಶ್ವೇಶ ತೀರ್ಥ ಶ್ರೀಗಳು ಆಯೋಜಿಸಬೇಕೆಂದಿದ್ದ ಇಫ್ತಾರ್ ಕೂಟ ರದ್ದಾಗಿದೆ. ಮುಸ್ಲಿಮರ ನಿರಾಸಕ್ತಿ, ಪ್ರವಾಸದ ಕಾರಣವನ್ನು ಶ್ರೀಗಳು ಕೊಟ್ಟಿದ್ದಾರೆ. ಆದರೆ, ಹಿಂದೂಪರ ಸಂಘಟನೆಗಳ ಒತ್ತಡವೂ ಕಾರಣ ಎನ್ನಲಾಗಿದೆ. ಜೊತೆಗೇ, ಶ್ರೀಗಳು ಪ್ರಚಾರಕ್ಕಾಗಿ ಹೀಗೆ ಮಾಡಿದರೇ ಎಂಬ ಪ್ರಶ್ನೆಯೂ ಎದ್ದಿದೆ

ಉಡುಪಿಯ ಮುಸ್ಲಿಂ ಬಾಂಧವರಿಗೆ ರಂಜಾನ್ ಮಾಸದ ಅಂಗವಾಗಿ ಇಫ್ತಾರ್ ಕೂಟ ಆಯೋಜಿಸುವ ನಿರ್ಧಾರದಿಂದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಹಿಂದೆ ಸರಿದಿದ್ದಾರೆ. ವಿಗ್ರಹಾರಾಧನೆ ನಡೆಯುವ ಜಾಗದಲ್ಲಿ ಇಫ್ತಾರ್ ಕೂಟ ನಡೆಸಲು ಮುಸ್ಲಿಂ ಸಮುದಾಯ ಒಪ್ಪುತ್ತಿಲ್ಲ ಎಂಬ ಕಾರಣವನ್ನು ಪೇಜಾವರ ಶ್ರೀಗಳು ನೀಡಿದ್ದರಾದರೂ, ಕೆಲ ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಮುಸ್ಲಿಂ ಸಮುದಾಯವು ಇಫ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ತಿಳಿಸಿದಂತೆ ಈ ವರ್ಷ ಕೂಡ, “ಅದು ಪೇಜಾವರ ಶ್ರೀಗಳ ಮರ್ಜಿಗೆ ಬಿಟ್ಟ ವಿಚಾರ,” ಎಂದು ಹೇಳಿತ್ತು. ಈ ಮಧ್ಯೆ, ಸ್ವಾಮೀಜಿಯವರೇ ಮುಂದಾಗಿ ಇಫ್ತಾರ್ ಆಯೋಜಿಸುವುದಾಗಿ ಮೇ 30ರಂದು ಘೋಷಿಸಿದ್ದರು. ಜೂ.13ರಂದು ಔತಣಕೂಟ ಏರ್ಪಡಿಸುವುದಾಗಿ ದಿನಾಂಕವನ್ನೂ ಪ್ರಕಟಿಸಿದ್ದರು. ಅದಾದ ಬಳಿಕ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಶ್ರೀರಾಮಸೇನೆ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಸ್ವಾಮೀಜಿ ನಿರ್ಧಾರದ ವಿರುದ್ಧ ನಿಂತರು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, “ಟಿಪ್ಪು ಸುಲ್ತಾನನಿಂದ ರಕ್ಷಣೆಗೆ ಒಳಗಾದ ಶೃಂಗೇರಿ ದೇವಾಲಯದಲ್ಲಾಗಲೀ, ಮುಸ್ಲಿಂ ಸಮುದಾಯದ ಬಗ್ಗೆ ಒಲವುಳ್ಳ ಧರ್ಮಸ್ಥಳ ಕ್ಷೇತ್ರದಲ್ಲಾಗಲೀ ಇಫ್ತಾರ್ ಔತಣಕೂಟ ನಡೆಯುತ್ತಿಲ್ಲ. ಹೀಗಿರುವಾಗ ಪೇಜಾವರ ಶ್ರೀಗಳು ಮತ್ತೆ ಈ ನಿಲುವು ತಳೆದದ್ದೇಕೆ?” ಎಂದು ವಾದಿಸಿದ್ದರು. ಮಠದ ಅನುಯಾಯಿಗಳು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಕೆಲವರು, “ಪೇಜಾವರ ಶ್ರೀಗಳು ಹೇಳುವಂತೆ ಮಠಕ್ಕೆ ಅನೇಕ ಮುಸ್ಲಿಮರಿಂದ ದಾನರೂಪದಲ್ಲಿ ಅಪಾರ ಆಸ್ತಿ ಹರಿದುಬಂದಿದೆ. ಕಾರ್ಪೊರೇಷನ್ ಬ್ಯಾಂಕಿನ ಸಂಸ್ಥಾಪಕರಾದ ಹಾಜಿ ಅಬ್ದುಲ್ಲಾ ಅವರ ಕಾಲದಿಂದಲೂ ಮಠದೊಂದಿಗೆ ಮುಸ್ಲಿಂ ಸಮುದಾಯ ಉತ್ತಮ ಬಾಂಧವ್ಯ ಹೊಂದಿದೆ. ಅವರ ಪರ್ಯಾಯದ ಅವಧಿಯಲ್ಲೂ ಶ್ರೀಗಳು ಸಮುದಾಯದಿಂದ ವ್ಯಾಪಕ ನೆರವು ಪಡೆದಿದ್ದಾರೆ. ಹೀಗಿರುವಾಗ, ಇಫ್ತಾರ್ ಕೂಟ ಆಯೋಜಿಸುವುದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ,” ಎಂಬ ಅಭಿಪ್ರಾಯಕ್ಕೆ ಬಂದಿದ್ದರು.

ಕರಾವಳಿ ಭಾಗದಲ್ಲಿ ಕೋಮುದ್ವೇಷ ತಣಿಸುವ ನಿಟ್ಟಿನಲ್ಲಿ ಕೂಡ ಇಂತಹ ಸಾಮರಸ್ಯದ ಕಾರ್ಯಕ್ರಮಗಳು ಅಗತ್ಯ ಎಂಬುದು ಕೆಲ ಪ್ರಗತಿಪರರ ನಿರ್ಧಾರವಾಗಿತ್ತು. ಆದರೆ, "ಕೇವಲ ಔತಣಕೂಟ ನಡೆಸಿದರೆ ಸಾಲದು; ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನಡೆಯುತ್ತಿರುವ ಹಲ್ಲೆ, ಹತ್ಯೆ ಇತ್ಯಾದಿ ಅಮಾನುಷ ದಾಳಿಗಳನ್ನು ತಡೆಯಲು ಪೇಜಾವರ ಶ್ರೀಗಳಂತಹ ಹಿರಿಯರು ಶ್ರಮಿಸಬೇಕು,” ಎಂಬ ಮಾತುಗಳೂ ಕೇಳಿಬಂದಿದ್ದವು.

ಆದರೆ, ಇದ್ದಕ್ಕಿದ್ದಂತೆ ಸ್ವಾಮೀಜಿಯವರು ಔತಣಕೂಟ ಏರ್ಪಡಿಸುವ ವಿಚಾರವಾಗಿ ಮೌನ ತಳೆದದ್ದು ಕುತೂಹಲ ಕೆರಳಿಸಿತ್ತು. ಈ ಮಧ್ಯೆ, ಯಾತ್ರೆ ಕೈಗೊಂಡಿದ್ದ ಸ್ವಾಮೀಜಿಯವರನ್ನು ಸಂಪರ್ಕಿಸಿದ ಮುಸ್ಲಿಂ ಸಮುದಾಯದ ಕೆಲ ಮುಖಂಡರಿಗೆ, ಈ ಬಾರಿ ಔತಣಕೂಟ ಆಯೋಜಿಸುತ್ತಿಲ್ಲ ಎಂದು ಸ್ವಾಮೀಜಿಗಳು ಸ್ಪಷ್ಟಪಡಿಸಿದರು. ಅಲ್ಲದೆ, ಕಳೆದ ಶನಿವಾರ ತುಮಕೂರಿನಲ್ಲಿ ಆಯೋಜಿಸಿದ್ದ ಮಾಧ್ವ ಬ್ರಾಹ್ಮಣ ಸಮ್ಮೇಳನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, “ಮುಸ್ಲಿಂ ಸಮುದಾಯದ ನಿರಾಸಕ್ತಿಯ ಕಾರಣ ಇಫ್ತಾರ್ ಆಯೋಜಿಸುತ್ತಿಲ್ಲ. ಅಲ್ಲದೆ, ತಾವು ಪ್ರವಾಸ ಕೈಗೊಂಡಿರುವುದರಿಂದ ಔತಣಕೂಟ ಏರ್ಪಡಿಸುವುದು ಸಾಧ್ಯವಿಲ್ಲ,” ಎಂದು ಹೇಳಿಕೆ ನೀಡಿದ್ದರು.

ಆದರೆ, ಮುಸ್ಲಿಂ ಸಮುದಾಯದ ನಿರಾಸಕ್ತಿ ಎಂಬ ವಿಚಾರ ಇದಕ್ಕೆ ಕಾರಣವಲ್ಲ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಏಕೆಂದರೆ, ಮಠದಿಂದ ಮೂರು ಕಿಮೀ ದೂರದ ಗೋವಿಂದರಾಜ ಕಲ್ಯಾಣ ಮಂಟಪದಲ್ಲಿ ಔತಣಕೂಟ ನಡೆಸಲು ಎರಡೂ ಕಡೆಯವರಿಂದ ಒಮ್ಮತ ಏರ್ಪಟ್ಟಿತ್ತು. ಬದಲಿಗೆ, ಕೆಲ ಹಿಂದೂಪರ ಸಂಘಟನೆಗಳು ಹೇರುತ್ತಿರುವ ಒತ್ತಡದಿಂದಾಗಿ ಸ್ವಾಮೀಜಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಯಾವ-ಯಾವ ಸಂಘಟನೆಗಳು ಒತ್ತಡ ಹೇರಿವೆ ಎಂಬುದನ್ನು ಸ್ವಾಮೀಜಿ ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಾರೆ ಎಂದೂ ತಿಳಿದುಬಂದಿದೆ.

ಪ್ರವಾಸ ಮತ್ತು ನಿರಾಸಕ್ತಿಯ ನೆಪವೊಡ್ಡಿ ಇಫ್ತಾರ್ ಕೂಟವನ್ನೇನೋ ಸ್ವಾಮೀಜಿ ರದ್ದುಪಡಿಸಿದ್ದಾರೆ. ಆದರೆ, “ಇಡೀ ಇಫ್ತಾರ್ ಆಯೋಜನೆ ಕೇವಲ ಪ್ರಚಾರದ ತಂತ್ರವಾಗಿತ್ತು. ಕಳೆದ ಬಾರಿ ಇಫ್ತಾರ್ ವಿರುದ್ಧ ಬಾರಿ ವಿವಾದ ಉಂಟಾಗಿತ್ತು. ಹೀಗಾಗಿ ಸ್ವಾಮೀಜಿಯವರಿಗೆ ಸ್ವತಃ ಔತಣಕೂಟ ಏರ್ಪಡಿಸಲು ಒಲವು ಇರಲಿಲ್ಲ. ಈ ಬಾರಿಯೂ ಪ್ರಚಾರದ ಸಲುವಾಗಿ ಈ ಇಫ್ತಾರ್ ನಿರ್ಧಾರ ಕೈಗೊಂಡರು. ವಿವಾದಪ್ರಿಯರಾದ ಸ್ವಾಮೀಜಿಯವರಿಗೆ ನಿರ್ಧಾರ ಕೈಗೊಳ್ಳುವುದು, ಅದನ್ನು ಬದಲಿಸುವುದು ಹೊಸತೇನೂ ಅಲ್ಲ,” ಎಂಬ ಮಾತುಗಳು ಕೇಳಿಬರುತ್ತಿವೆ.

“ಔತಣಕೂಟ ಆಯೋಜಿಸುವುದು ಅಥವಾ ಆಯೋಜಿಸದಿರುವುದು ಸ್ವಾಮೀಜಿಯವರಿಗೆ ಬಿಟ್ಟ ವಿಚಾರವಾಗಿತ್ತು. ಸುಖಾಸುಮ್ಮನೆ ಈಗ ಮುಸ್ಲಿಂ ಸಮುದಾಯಕ್ಕೆ ಆಸಕ್ತಿ ಇರಲಿಲ್ಲ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಆ ಸಮುದಾಯದವರು ಇಫ್ತಾರ್ ಆಯೋಜಿಸುವಂತೆ ಸ್ವಾಮೀಜಿಗಳನ್ನು ಬೇಡಿಕೊಂಡಿರಲಿಲ್ಲ. ಬದಲಿಗೆ, ಸ್ವಾಮೀಜಿಯವರೇ ಈ ಬಾರಿಯೂ ಔತಣಕೂಟ ಏರ್ಪಡಿಸುವ ನಿರ್ಧಾರ ಪ್ರಕಟಿಸಿದ್ದರು. ತಮ್ಮ ಮೇಲೆ ಅಪವಾದ ಬಾರದಂತೆ, ಮುಸ್ಲಿಮರ ನಿರಾಸಕ್ತಿ ಕಾರಣ ಎಂದು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ,” ಎಂಬ ಟೀಕೆಗಳೂ ವ್ಯಕ್ತವಾಗುತ್ತಿವೆ.

ಇದನ್ನೂ ಓದಿ : ಉಡುಪಿ ಪೇಜಾವರ ಶ್ರೀಗಳ ಇಫ್ತಾರ್ ಔತಣಕೂಟ ನಡೆಯುವುದು ಅನುಮಾನ?

ಮತ್ತೊಂದೆಡೆ, “ಕಳೆದ ಬಾರಿ ಇಫ್ತಾರ್ ಆಯೋಜಿಸಿದ್ದ ಸ್ವಾಮೀಜಿ, ಈಗ ಅದರಿಂದ ಹಿಂದೆ ಸರಿದು ಸಮತೋಲನ ಕಾಯ್ದುಕೊಳ್ಳುವ ಯತ್ನ ಮಾಡಿದ್ದಾರೆ. ಈ ವರ್ಷ ನಡೆಯದ ಪ್ರಕ್ರಿಯೆ ಮುಂದಿನ ವರ್ಷ ನಡೆಯಲೂಬಹುದು,” ಎಂಬುದು ಕೆಲವರ ಲೆಕ್ಕಾಚಾರ. ಮತ್ತೆ ಕೆಲವರು ಇಡೀ ವಿವಾದದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡದಿರಲು ತೀರ್ಮಾನಿಸಿದ್ದಾರೆ.

ಇನ್ನು, “ಇಫ್ತಾರ್ ಆಯೋಜನೆಯಿಂದ ಸ್ವಾಮೀಜಿಗಳು ಹಿಂದೆ ಸರಿದಿರುವುದು ಮುಸ್ಲಿಂ ಸಮುದಾಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಮಠದೊಂದಿಗೆ ನಮ್ಮ ಬಾಂಧವ್ಯ ಮುಂದುವರಿಯಲಿದೆ,” ಎಂದು ಮುಸ್ಲಿಂ ಸಮುದಾಯದ ಪ್ರತಿನಿಧಿ ಅನ್ಸಾರ್ ಅಹಮದ್ ‘ದಿ ಸ್ಟೇಟ್’ಗೆ ತಿಳಿಸಿದರು.

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More