ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮೇಲೆ ಸ್ವಹಿತಾಸಕ್ತಿ ರಾಜಕಾರಣದ ಕರಿನೆರಳು

ಚುನಾವಣೆಗೂ ಮುನ್ನ ಸ್ವತಂತ್ರ ಲಿಂಗಾಯತ ಧರ್ಮ ಹೋರಾಟವನ್ನು ಹುಟ್ಟುಹಾಕಿದ್ದ ರಾಜಕೀಯ ಮುಖಂಡರು ಈಗ ಅದರಿಂದ ದೂರ ಉಳಿದಿದ್ದಾರೆ. ಹಾಗಾಗಿ, ಚುನಾವಣೆ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ಲಿಂಗಾಯತ ಹೋರಾಟ ಕೈಗೆತ್ತಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಹಿಂದೆ ಮಾಡಿದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸು ಕಳಿಸುವ ಸಾಧ್ಯತೆ ಇದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಧರ್ಮ ರಾಜಕಾರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಚಾರವಾಗಿ ವೀರಶೈವ ಮುಖಂಡರು ಸಂತಸ ವ್ಯಕ್ತಪಡಿಸಿದರೆ, ಲಿಂಗಾಯತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಆದರೆ, ವಾಸ್ತವವಾಗಿ ಆ ಪ್ರಸ್ತಾಪ ಸರ್ಕಾರಕ್ಕೆ ವಾಪಸು ಬಂದಿಲ್ಲವೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ‘ದಿ ಸ್ಟೇಟ್‌’ ಜೊತೆ ಮಾತನಾಡಿದ ಲಿಂಗಾಯತ ಹೋರಾಟ ಮುಂಚೂಣಿಯಲ್ಲಿರುವ ಎಸ್‌ ಎಂ ಜಾಮದಾರ್‌, ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. “ನಾವು ನಮ್ಮ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ವೀರಶೈವರು ಲಿಂಗಾಯತ ಧರ್ಮದ ಭಾಗವೆಂದು ಒಪ್ಪಿಕೊಂಡು ನಮ್ಮ ಹೋರಾಟಕ್ಕೆ ಕೈಜೋಡಿಸಲಿ,” ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ, ಜೆಡಿಎಸ್‌ ನಾಯಕ ಬಸವರಾಜ್‌ ಹೊರಟ್ಟಿ ಅವರು, “ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಒಂದು ವೇಳೆ, ಕೇಂದ್ರವು ಶಿಫಾರಸನ್ನು ವಾಪಸು ಕಳಿಸುವ ನಿರ್ಧಾರ ತೆಗೆದುಕೊಂಡಿದ್ದರೆ, ಅದಕ್ಕೆ ನಮ್ಮ ವಿರೋಧವಿದೆ. ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕಿತ್ತು, ಇಲ್ಲವೇ ತಿರಸ್ಕರಿಸಬೇಕಿತ್ತು. ಇವೆರಡನ್ನು ಮಾಡದೆ ತನ್ನ ಜವಾಬ್ದಾರಿಯಿಂದ ಕೇಂದ್ರ ನುಣುಚಿಕೊಳ್ಳುವ ಪ್ರಯತ್ನ ಮಾಡಿದೆ. ನಾವು ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೂ ಸಿದ್ದರಿದ್ದೇವೆ. ಈ ಬಗ್ಗೆ ಲಿಂಗಾಯತ ಹೋರಾಟ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿ, “ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಅಧಿಕೃತ ಮಾಹಿತಿ ಬಂದಿದ್ದು ನನಗೆ ತಿಳಿದಿಲ್ಲ. ಒಂದು ವೇಳೆ, ಬಂದಿದ್ದರೆ ಅದನ್ನು ನಾವು ಸ್ವಾಗತಿಸುತ್ತೇವೆ,” ಎಂದಿದ್ದಾರೆ.

ಲಿಂಗಾಯತ ಚಳವಳಿಯನ್ನು ಮುನ್ನೆಡೆಸಿದ್ದ ಕಾಂಗ್ರೆಸ್‌ ನಾಯಕ ಎಂ ಬಿ ಪಾಟೀಲ್‌, “ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ವಾಪಸು ಕಳಿಸಿದ ವಿಚಾರ ನನಗೆ ಗೊತ್ತಿಲ್ಲ. ಲಿಂಗಾಯತ ಹೋರಾಟದ ಬಗೆಗಿನ ಎಲ್ಲ ನಿರ್ಧಾರಗಳನ್ನು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಜಾಮದಾರ್‌ ಅವರು ಮಾಡಲಿದ್ದಾರೆ,” ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ ನಾಯಕರಾದ ಶರಣ ಪ್ರಕಾಶ ಪಾಟೀಲ್‌ ಹಾಗೂ ವಿನಯ್ ಕುಲಕರ್ಣಿ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಲಿಂಗಾಯತ ಚಳವಳಿಯು ರಾಷ್ಟ್ರದ ಗಮನ ಸೆಳೆಯುವಲ್ಲಿ ಕಾಂಗ್ರೆಸ್ಸಿನ‌ ಲಿಂಗಾಯತ ಮುಖಂಡರ ಪಾತ್ರ ಹಿರಿದಾಗಿತ್ತು. ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ಕಾಂಗ್ರೆಸ್‌ನ ವೀರಶೈವ ಹಾಗೂ ಲಿಂಗಾಯತ ಬಣದ ನಡುವೆ ಅಸಮಾಧಾನ ಸ್ಫೋಟಗೊಂಡಿತ್ತು. ಕಾಂಗ್ರೆಸ್‌ನ ವೀರಶೈವ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಸ್‌ ಎಸ್‌ ಮಲ್ಲಿಕಾರ್ಜುನ, ಭೀಮಣ್ಣ ಖಂಡ್ರೆ ಹಾಗೂ ಈಶ್ವರ ಖಂಡ್ರೆ ಅವರು ತಮ್ಮದೇ ಪಕ್ಷದ ಎಂ ಬಿ ಪಾಟೀಲ್‌, ಬಸವರಾಜ ರಾಯರೆಡ್ಡಿ, ವಿನಯ್‌ ಕುಲಕರ್ಣಿ ಹಾಗೂ ಶರಣ ಪ್ರಕಾಶ ಪಾಟೀಲರ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದರು.

ಲಿಂಗಾಯತ ಹೋರಾಟದ ಮುಂಚೂಣಿ ಮೂವರು ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ವಿನಯ್‌ ಕುಲಕುರ್ಣಿ ಹಾಗೂ ಶರಣ ಪ್ರಕಾಶ ಪಾಟೀಲ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡರು. ಈ ಮೂಲಕ ಪ್ರತ್ಯೇಕ ಲಿಂಗಾಯತ ಹೋರಾಟವು ಕಾಂಗ್ರೆಸ್‌ಗೆ ನಷ್ಟ ಉಂಟುಮಾಡಿತು ಎಂಬ ರಾಜಕೀಯ ವಿಶ್ಲೇಷಣೆ ಹಾಗೂ ವಿಮರ್ಶೆಗಳು ಕೇಳಿಬಂದವು. ಆದರೆ, ಲಿಂಗಾಯತ ಪ್ರಬಲ್ಯವಿರುವ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಲಾಭವಾಗಿದೆ ಎಂಬುದು ಈ ಹಿಂದಿನ ಚುನಾವಣೆಗಳ ಅಂಕಿ-ಸಂಖ್ಯೆಗಳನ್ನು ಇಟ್ಟುಕೊಂಡು ನೋಡಿದಾಗ ತಿಳಿದುಬರುತ್ತದೆ. ಈ ಬಾರಿಯ ಚುನಾವಣಾ ಫಲಿತಾಂಶ ಹೊರಬಂದ ಬೆನ್ನಲ್ಲೇ ‘ದಿ ಸ್ಟೇಟ್‌’ ಇದರ ಬಗ್ಗೆ ವರದಿ ಮಾಡಿತ್ತು. ಇದನ್ನು ಪುಷ್ಟೀಕರಿಸಿ ಜಾಗತಿಕ ಲಿಂಗಾಯತ ಮಹಾಸಭಾ ಕೂಡ ಜಾಹಿರಾತನ್ನು ಪ್ರಕಟಿಸಿತ್ತು.

ಇದನ್ನೂ ಓದಿ : ‘ದಿ ಸ್ಟೇಟ್’ ವರದಿಯನ್ನು ಪುಷ್ಟೀಕರಿಸಿದ ಜಾಗತಿಕ ಲಿಂಗಾಯತ ಮಹಾಸಭಾ ಜಾಹಿರಾತು

ಈ ಮಧ್ಯೆ, ವಿಧಾನಸಭಾ ಚುನಾವಣೆ ಪೂರ್ವದಲ್ಲಿ ವೀರಶೈವ ಮುಖಂಡರ ಆಕ್ರೋಶಕ್ಕೆ ಗುರಿಯಾಗಿದ್ದ ಎಂ ಬಿ ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ವೀರಶೈವ ಲಿಂಗಾಯತ ಮಹಾಸಭಾ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಒತ್ತಾಯಿಸಿತು. ಹೊಸ ಸರ್ಕಾರದಲ್ಲಿ ವೀರಶೈವ-ಲಿಂಗಾಯತರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲವಾದ್ದರಿಂದ ಎಂ ಬಿ ಪಾಟೀಲ್‌ ಹಾಗೂ ಶಾಮನೂರು ಶಿವಶಂಕರಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ವೀರಶೈವ ಮಹಾಸಭಾ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಬೇಡಿಕೆ ಇಟ್ಟಿತು.

ಚುನಾವಣೆಯ ನಂತರ ನಡೆದ ಈ ಬೆಳವಣಿಗೆಗಳು ಹಲವು ಚರ್ಚೆಗಳಿಗೆ ನಾಂದಿ ಹಾಡಿವೆ. ಚುನಾವಣೆಗೂ ಮುನ್ನ ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟವನ್ನು ಹುಟ್ಟುಹಾಕಿದ್ದ ರಾಜಕೀಯ ಮುಖಂಡರು ಈಗ ಅದರಿಂದ ದೂರ ಉಳಿದಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ರಾಜಕೀಯ ಸ್ವಾರ್ಥ, ಸ್ವಹಿತಾಸಕ್ತಿ ಹಾಗೂ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ನಾಯಕರು ಲಿಂಗಾಯತ ಹೋರಾಟವನ್ನು ಕೈಗೆತ್ತಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ.

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More