ಟ್ರಾಲ್‌ಗೆ ತಲ್ಲಣಿಸಿ ಕ್ಷಮೆ ಕೇಳಿದ ಪ್ರಿಯಾಂಕ ಚೋಪ್ರಾ; ಅಸಲಿಗೆ ಆಗಿದ್ದೇನು?

“ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯೊಬ್ಬಳ ಮಗಳಾಗಿ ನನ್ನ ದೇಶಭಕ್ತಿಯ ಬಗ್ಗೆ ಪ್ರಶ್ನಿಸುವ ಹಕ್ಕು ನಿಮಗಿಲ್ಲ,” ಎಂದು ಮಾಧ್ಯಮಗಳಿಗೆ ಹೇಳುವ ದಿಟ್ಟತನವನ್ನು ತೋರದ ಪ್ರಿಯಾಂಕ ಚೋಪ್ರಾ, ಟ್ರಾಲ್‌ ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದು ಕ್ಷಮೆ ಯಾಚಿಸಿರುವುದು ವಿಪರ್ಯಾಸ

ದೇಶಭಕ್ತಿ ಎನ್ನುವುದು ಪ್ರತೀ ಭಾರತೀಯರ ಕಣಕಣದಲ್ಲೂ ವ್ಯಕ್ತವಾಗಬೇಕು ಎನ್ನುವ ರಾಷ್ಟ್ರೀಯವಾದ; ಹಿಂದು ಧರ್ಮ ಎನ್ನುವುದು ಯಾವುದೇ ಅಪವಾದಗಳಿಗೂ ಹೊರತಾಗಿರುವಷ್ಟು ಪವಿತ್ರವಾಗಿರುತ್ತದೆ ಎನ್ನುವ ಭ್ರಮೆ; ಭಾರತೀಯರು ಯಾವುದೇ ಅಪರಾಧವನ್ನೂ ಮಾಡುವುದಿಲ್ಲ ಎನ್ನುವಷ್ಟು ಸ್ವಚ್ಛಾರಿತ್ರರು ಎನ್ನುವ ಪೊಳ್ಳು ವಿಶ್ವಾಸ... ಈ ಮೂರೂ ಉಪಮೆಗಳನ್ನು ಭಾರತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದೊಳಗೆ ಮತ್ತು ವಿಶ್ವದ ಮುಂದೆ ಖಡಾಖಂಡಿತವಾಗಿ ಇಡುತ್ತಿದ್ದಾರೆ. ಈ ಉಗ್ರ ರಾಷ್ಟ್ರೀಯವಾದಿ ಮತ್ತು ಹಿಂದುತ್ವದ ಕಲ್ಪನೆಯ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಣ್ಣ ಹುಳುವಿನಂತೆ ಹೊಸಕಿ ಹಾಕಲಾಗುತ್ತದೆ. ಬಲಪಂಥೀಯರ ಭಾರತ ಎನ್ನುವ ಒಂದು ‘ರಾಮರಾಜ್ಯ’ದಲ್ಲಿ ಕೇವಲ ಒಂದು ಜನಾಂಗದವರು ಮಾತ್ರ ದೇಶದ್ರೋಹಿಗಳು, ಭಯೋತ್ಪಾದನೆ, ಉಗ್ರವಾದ, ಅಪರಾಧದಂತಹ ಕುಕೃತ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು ಭಾರತದ ಬಹುಸಂಖ್ಯಾತರು ಸಚ್ಛಾರಿತ್ರ್ಯ ಹೊಂದಿದವರು, ದೇಶಭಕ್ತರು ಮತ್ತು ಅಮಾಯಕರಾಗಿರುತ್ತಾರೆ. ಇಂತಹ ಒಂದು ಕಲ್ಪನೆ ಇತ್ತೀಚೆಗಿನ ವರ್ಷಗಳಲ್ಲಿ ‘ಮೋದಿತ್ವ’ ಅಥವಾ ‘ಹಿಂದುತ್ವ’ ಭಾರತಕ್ಕೆ ಕೊಟ್ಟ ಕೊಡುಗೆ. ಈ ಸತ್ಯವನ್ನೇ ನಂಬಿದವರು ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿ ಇದೇ ಕಲ್ಪನೆಯನ್ನು ನಿತ್ಯವೂ ಹರಿಯಬಿಡುತ್ತಲೇ ಇರುವಾಗ ಪ್ರತಿಭಾವಂತ ನಟಿ ಪ್ರಿಯಾಂಕಾ ಚೋಪ್ರಾ ಟ್ವಿಟರ್‌ನಲ್ಲಿ ಟ್ರೋಲ್‌ಗಳ ದಾಳಿಗೆ ಗುರಿಯಾಗಿರುವುದು ಅಚ್ಚರಿಯ ವಿಷಯವೇನಲ್ಲ.

ಅಮೆರಿಕದಲ್ಲಿ ಜನಪ್ರಿಯವಾಗಿರುವ ‘ಕ್ವಾಂಟಿಕೋ’ ಧಾರಾವಾಹಿಯ ಮೂರನೇ ಸೀಸನ್‌ನಲ್ಲಿ ಉಗ್ರವಾದಿಗಳು ಪ್ರಯತ್ನಿಸಿದ ಭಯೋತ್ಪಾದನೆ ದಾಳಿಯೊಂದನ್ನು ತಡೆಯುವ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಾರೆ. “ಉಗ್ರವಾದಿಯೊಬ್ಬನ ಬಳಿ ರುದ್ರಾಕ್ಷಿ ಮಾಲೆ ಇರುವುದು ಕಂಡ ಪ್ರಿಯಾಂಕಾ, “ಸಂಪೂರ್ಣ ಭಯೋತ್ಪಾದನಾ ದಾಳಿಯ ಹಿಂದೆ ಭಾರತೀಯ ರಾಷ್ಟ್ರೀಯವಾದಿಗಳು ಇದ್ದಾರೆ. ಪಾಕಿಸ್ತಾನವನ್ನು ಕೆಟ್ಟ ವರ್ಚಸ್ಸಿನಲ್ಲಿ ತೋರಿಸಲು ಹಿಂದೂ ರಾಷ್ಟ್ರೀಯವಾದಿಗಳು ಈ ಕೃತ್ಯ ಮಾಡಿದ್ದಾರೆ,” ಎಂದು ದಾಳಿಯ ರಹಸ್ಯವನ್ನು ಭೇದಿಸುತ್ತಾರೆ. ವಾಸ್ತವದಲ್ಲಿ ಇದೊಂದು ಟಿವಿ ಧಾರಾವಾಹಿಯ ಕ್ಷುಲ್ಲಕ ದೃಶ್ಯ ಎಂದು ಒಮ್ಮೆ ನೋಡಿ ಮರೆತುಬಿಡಬೇಕಾದ ವಿಚಾರ.

ಆದರೆ, ರಾಷ್ಟ್ರೀಯವಾದದ ವೈಭವೀಕರಣದಲ್ಲಿ ಇದು ಕ್ಷುಲ್ಲಕ ವಿಚಾರವಾಗುವುದಿಲ್ಲ; ಬದಲಿಗೆ, ರಾಷ್ಟ್ರದ್ರೋಹದ ಕೆಲಸವಾಗುತ್ತದೆ. ದೇಶಭಕ್ತಿಯನ್ನು ಮತ್ತೊಂದು ದೇಶಕ್ಕೆ ಮಾರಿದ ಹಾಗಾಗುತ್ತದೆ. ಆ ಮತ್ತೊಂದು ದೇಶ ಪಾಕಿಸ್ತಾನವಾದಾಗ ಪರಿಸ್ಥಿತಿ ಇನ್ನೂ ಬರ್ಬರವಾಗುತ್ತದೆ. ಪ್ರಿಯಾಂಕಾ ಚೋಪ್ರಾ ವಿಚಾರದಲ್ಲಿಯೂ ಆಗಿದ್ದು ಇದೇ. ಸಾಮಾಜಿಕ ತಾಣಗಳ ಟ್ರೋಲ್‌ಗಳ ಜೊತೆಗೆ ಮಾಧ್ಯಮಗಳೂ ಪ್ರಿಯಾಂಕಾರನ್ನು ಟ್ರೋಲ್ ಮಾಡಿದವು. “ಪ್ರಿಯಾಂಕಾ ಚೋಪ್ರಾ ಅವರನ್ನು ಜನಪ್ರಿಯ ಬಾಲಿವುಡ್ ತಾರೆಯಾಗಿ ಬೆಳೆಸಿದ್ದೇ ಭಾರತ. ಹೀಗಾಗಿ ಭಾರತದ ಬಗ್ಗೆ ಅವಹೇಳನ ಮಾಡುವಂತಹ ದೃಶ್ಯಗಳಲ್ಲಿ ನಟಿಸುವ ಹಕ್ಕು ಆಕೆಗಿಲ್ಲ,” ಎನ್ನುವ ವಾದವನ್ನು ಮಾಧ್ಯಮಗಳು ಮುಂದಿಟ್ಟಾಗ ಅಸಹಾಯಕರಾಗಿ ಪ್ರಿಯಾಂಕ ಚೋಪ್ರಾ ಕ್ಷಮೆ ಯಾಚಿಸಿದರು. “ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯೊಬ್ಬಳ ಮಗಳಾಗಿ ನನ್ನ ದೇಶಭಕ್ತಿಯ ಬಗ್ಗೆ ಪ್ರಶ್ನಿಸುವ ಹಕ್ಕು ನಿಮಗಿಲ್ಲ,” ಎಂದು ಭಾರತೀಯ ಮಾಧ್ಯಮಗಳಿಗೆ ಹೇಳುವ ದಿಟ್ಟತನವನ್ನು ಅವರು ತೋರಲಿಲ್ಲ. ಬದಲಾಗಿ, “ಭಾರತೀಯರ ಸಂವೇದನೆಗಳಿಗೆ ಧಕ್ಕೆ ಉಂಟಾಗಿರುವುದು ಬೇಸರವಾಗಿದೆ,” ಎಂದಿದ್ದಾರೆ.

ನಿಜವೇ? ಪ್ರಿಯಾಂಕಾ ಚೋಪ್ರಾರನ್ನು ನಾವು-ನೀವು ಬಾಲಿವುಡ್‌ನಲ್ಲಿ ಜನಪ್ರಿಯ ತಾರೆಯಾಗಿಸಿದ್ದೇವೆಯೇ? ಪ್ರಿಯಾಂಕಾ ಚೋಪ್ರಾರಿಗೆ ನಟನೆ ಬಾರದೆ ಇದ್ದಲ್ಲಿ, ಕೆಟ್ಟ ಸಿನಿಮಾಗಳಲ್ಲಿ ಅವರು ನಟಿಸಿದ್ದರೂ ನಾವು ಆಕೆಯ ಸಿನಿಮಾಗಳನ್ನು ನೋಡುತ್ತಿದ್ದೆವೇ? ಇಲ್ಲ. ಪ್ರಿಯಾಂಕಾ ತಮ್ಮ ಸ್ವಯಂ ಪ್ರತಿಭೆಯಿಂದ ಬೆಳೆದವರು. ಅತ್ಯುತ್ತಮ ನಟನೆ ಮತ್ತು ಬುದ್ಧಿವಂತಿಕೆಯಿಂದ ಪಾತ್ರಗಳನ್ನು ಆರಿಸಿದ್ದು ಪ್ರಿಯಾಂಕಾ. ಹಾಲಿವುಡ್‌ನಲ್ಲಿ ಗುರುತಿಸಿಕೊಳ್ಳಲು ಇಂಗ್ಲಿಷ್ ಪಾಪ್ ಹಾಡು ಹಾಡಿದ ಪ್ರತಿಭೆಯೂ ಪ್ರಿಯಾಂಕಾರದು. ನಂತರ ತಮ್ಮ ಪ್ರತಿಭೆಯಿಂದಲೇ ಹಾಲಿವುಡ್ ಟಿವಿ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ ಗುರುತಿಸಿಕೊಂಡರು. ಹೀಗೆ ಪ್ರಿಯಾಂಕಾಳ ಸಾಧನೆಯನ್ನು ನಮ್ಮ ಕೃಪೆ ಎಂದು ಆಕೆಯ ಮೇಲೆ ಹೇರಿ, ಯಾವುದೋ ಕ್ಷುಲ್ಲಕ ದೃಶ್ಯಕ್ಕಾಗಿ ಆಕೆಯನ್ನು ದೋಷಿಯಾಗಿಸುವುದೇ ನಮ್ಮ ದೇಶಭಕ್ತಿಯೇ?

ಟಿವಿ ಅಥವಾ ಸಿನಿಮಾದ ಒಂದು ದೃಶ್ಯವೆಂದರೆ ಅದು ನಿರ್ದೇಶಕ, ಬರಹಗಾರನ ಕಲ್ಪನೆಯ ಕೂಸು. ಪ್ರತೀ ಬಾರಿ ಹೊಸತನ್ನು ಹುಡುಕುವ ಕಲಾವಿದರು, “ಹಿಂದೂ ರಾಷ್ಟ್ರವಾದಿಗಳು ಪಾಕಿಸ್ತಾನಿ ಭಯೋತ್ಪಾದಕರ ಸೋಗಿನಲ್ಲಿ ಉಗ್ರ ಕೃತ್ಯಗಳನ್ನು ಮಾಡುತ್ತಿದ್ದಾರೆ,” ಎನ್ನುವುದು ಅಮೆರಿಕದ ಬರಹಗಾರರು ಅಥವಾ ನಿರ್ದೇಶಕರ ಮಟ್ಟಿಗೆ ಹೊಸತನದ ಚಿತ್ರಕತೆ. ಇಲ್ಲಿ ಅವರು ರಾಷ್ಟ್ರೀಯತೆ ಅಥವಾ ಒಂದು ರಾಷ್ಟ್ರದ ವರ್ಚಸ್ಸನ್ನು ಕೀಳುಮಟ್ಟಕ್ಕೆ ಇಳಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಸದಾ ಪಾಕಿಸ್ತಾನವನ್ನೇ ಭಯೋತ್ಪಾದನೆಗೆ ದೂಷಿಸುವ ಸ್ಟೀರಿಯೋಟೈಪ್ ಕತೆಯ ಬದಲಾಗಿ ಹೊಸತನವನ್ನು ಕೊಡಲು ಪ್ರಯತ್ನಿಸಿದ್ದರು. ಇದೊಂದು ಕಲ್ಪನೆ. ಅಷ್ಟಕ್ಕೂ ‘ಕ್ವಾಂಟಿಕೋ’ ಧಾರಾವಾಹಿಯಲ್ಲಿ ಹೇಳಿದ ತಕ್ಷಣ ಭಾರತೀಯರೆಲ್ಲರೂ ಭಯೋತ್ಪಾದಕರಾಗುವುದಿಲ್ಲ.

ಆದರೆ, ಭಾರತೀಯರ ಹೈಪರ್ ರಾಷ್ಟ್ರೀಯವಾದದ ಮುಂದೆ ಎಲ್ಲರೂ ತಲೆ ತಗ್ಗಿಸಲೇಬೇಕು. ಸಾಮಾಜಿಕ ತಾಣಗಳು ಮಾತ್ರವಲ್ಲದೆ ಮುಖ್ಯವಾಹಿನಿ ಮಾಧ್ಯಮಗಳೂ ಇಂತಹುದೇ ರಾಷ್ಟ್ರೀಯವಾದ ಪ್ರದರ್ಶಿಸಿ ಧಾರಾವಾಹಿಯ ಜೊತೆಜೊತೆಗೆ ಪ್ರಿಯಾಂಕಾ ಚೋಪ್ರಾರನ್ನೂ ದೂಷಿಸಿದರು. ಪ್ರಿಯಾಂಕಾ ‘ಭಾರತಕ್ಕೆ ಅವಹೇಳನ ಮಾಡಿದ್ದಾರೆ’ ಎನ್ನುವ ಆರೋಪ ಹೊರಿಸಲಾಯಿತು. ಆ ದೃಶ್ಯದಲ್ಲಿ ಪಾಕಿಸ್ತಾನವನ್ನು ಸಮರ್ಥಿಸಿಕೊಂಡು ನಟಿಸಿದ ಪ್ರಿಯಾಂಕಾ ಚೋಪ್ರಾ ದೇಶದ್ರೋಹಿಯಾದರು! ಪಾಕಿಸ್ತಾನ ಪ್ರೊಪಗಾಂಡವನ್ನು ಮುಂದಿಡುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೇ ಎಂದೂ ಪ್ರಶ್ನಿಸಲಾಯಿತು. ಧಾರಾವಾಹಿ ಪ್ರಸಾರ ಮಾಡಿದ ವಾಹಿನಿ ಬೇಷರತ್ ಆಗಿ ಕ್ಷಮೆ ಯಾಚಿಸಿತು. ಕ್ವಾಂಟಿಕೋ ಧಾರಾವಾಹಿಯನ್ನು ಆರಂಭದಿಂದಲೇ ನೋಡುತ್ತ ಬಂದಲ್ಲಿ, ಎಲ್ಲ ರೀತಿಯ ಜನಾಂಗದವರನ್ನೂ ಉತ್ತಮರು ಮತ್ತು ಕೆಟ್ಟವರು ಎಂದು ತೋರಿಸಲಾಗಿದೆ. ಹೀಗಿರುವಾಗ, ಭಾರತೀಯರ ಬಗ್ಗೆ ಒಂದು ನೆಗೆಟಿವ್ ವಿಚಾರವೂ ಪ್ರಸ್ತಾಪವಾಗಬಾರದು ಎನ್ನುವ ಒತ್ತಡವನ್ನು ಹೇರುವ ಮನಸ್ಥಿತಿ ನಿಜಕ್ಕೂ ದುರದೃಷ್ಟಕರ.

ಜಾಗತಿಕವಾಗಿ ಸಾವಿರಾರು ಕಾಲ್ಪನಿಕ ಕತೆಗಳು ಧಾರಾವಾಹಿ, ಸಿನಿಮಾ, ಸಣ್ಣಚಿತ್ರಗಳಾಗಿ ಪ್ರದರ್ಶನವಾಗುತ್ತವೆ. ಈ ಕಲಾ ಪ್ರಕಾರಗಳಲ್ಲಿ ನೂರಾರು ವಿಷಯಗಳನ್ನು ಚರ್ಚಿಸಲಾಗುತ್ತದೆ. ಹಿಂದೂ ರಾಷ್ಟ್ರೀಯವಾದ ಮತ್ತು ಪಿತೂರಿಗಳ ಬಗ್ಗೆ ಮುಖ್ಯವಾಹಿನಿಯಲ್ಲಿ ಚರ್ಚೆ ಬಹಳಷ್ಟು ವಾಸ್ತವದ ಪ್ರಕರಣಗಳಲ್ಲಿ ನಡೆದಿದೆ. ಹಿಂದೂ ಭಯೋತ್ಪಾದನೆ ಎನ್ನುವುದು ಭಾರತೀಯ ಮುಖ್ಯವಾಹಿನಿಯಲ್ಲಿ ಚರ್ಚೆಯಾಗಿರುವ ವಿಷಯವೇ ವಿನಾ, ಅದು ಯಾರದೋ ಕಲ್ಪನೆಯ ಕೂಸಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಬದ್ಧ ದ್ವೇಷವೂ ಜಾಗತಿಕವಾಗಿ ಬಹಳಷ್ಟು ಚರ್ಚೆಯಾಗಿದೆ. ಹೀಗಿರುವಾಗ, ಅಮೆರಿಕನ್ ಟಿವಿ ಧಾರಾವಾಹಿಯ ಕತೆ ಬರೆಯುವವರಿಗೆ ಇದು ಹೊಸತನದ ಪ್ಲಾಟ್ (ಕಥಾ ನಿರೂಪಣೆ) ಎಂದು ಅನಿಸಿರುವುದು ಸಹಜ.

ಆದರೆ, ಪೊಳ್ಳು ರಾಷ್ಟ್ರೀಯವಾದ ಮತ್ತು ಹಿಂದುತ್ವದ ಕಲ್ಪನೆಗೆ ಕಲಾವಿದರ ಸೃಜನಶೀಲತೆಯನ್ನು ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆ ಇರುವುದಿಲ್ಲ. ಭಯೋತ್ಪಾದನೆಗೂ ಭಾರತಕ್ಕೂ ನಂಟಿಲ್ಲ. ಹಿಂದೂ ಧರ್ಮಕ್ಕೂ ಭಯೋತ್ಪಾದನೆಯೂ ನಂಟಿಲ್ಲ ಎನ್ನುವ ಪೊಳ್ಳು ಭರವಸೆಯಲ್ಲಿಯೇ ಜೀವನ ಸಾಗಿಸುವವರೇ ‘ಕ್ವಾಂಟಿಕೋ’ ದೃಶ್ಯಗಳ ಬಗ್ಗೆ ಅಬ್ಬರದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಲೇಖಕರಿಗೆ ಹೊಸತನ ಮತ್ತು ಹೊಸ ವಿಷಯಗಳನ್ನು ಮುಂದಿಡುವುದು ಸೃಜನಶೀಲತೆಯ ಅಂಗ. ಪ್ರತಿ ಬಾರಿ ಸುಳ್ಳು ಸುದ್ದಿಗಳು ಮತ್ತು ಭ್ರಮೆಗಳನ್ನೇ ಸಿನಿಮಾಗಳ ವಸ್ತುವಾಗಿಸುವ ಬದಲಾಗಿ ಕೆಲವು ಕಠಿಣ ಸತ್ಯಗಳನ್ನು ಮುಂದಿಡಲು ಬಯಸಿರುವುದರಲ್ಲಿ ತಪ್ಪಿಲ್ಲ. ಆದರೆ, ರಾಷ್ಟ್ರೀಯವಾದದ ಕಬಂಧ ಬಾಹುಗಳು ಇಂತಹ ಸೃಜನಶೀಲತೆಯನ್ನು ಒಪ್ಪಿಕೊಳ್ಳುವುದಿಲ್ಲ. ತಾವು ನೆಲೆಸಿರುವ ಭ್ರಮಾದೀನ ಜಗತ್ತಿನಲ್ಲಿ ‘ರಾಷ್ಟ್ರಭಕ್ತಿ’ ಮತ್ತು ‘ಪವಿತ್ರ ಧರ್ಮ’ದ ಕಲ್ಪನೆಗೆ ಭಂಗ ತರುವ ಬದಲಾವಣೆಗಳನ್ನು ಜನರು ವಿರೋಧಿಸುತ್ತಾರೆ.

ಇದನ್ನೂ ಓದಿ : ದುರ್ಬಲವಾದ ಪ್ರಜಾತಂತ್ರ; ಹೊಸ ರೂಪದಲ್ಲಿ ತಲೆ ಎತ್ತಿದ ರಾಷ್ಟ್ರೀಯವಾದ, ಸರ್ವಾಧಿಕಾರ

ಕಟುಸತ್ಯಗಳನ್ನು ಮರೆಮಾಚಿ, ಕೇವಲ ಅರ್ಧಸತ್ಯಗಳನ್ನು ಮಾತ್ರ ನಂಬುವ ಮನಸ್ಥಿತಿ ಇತ್ತೀಚೆಗೆ ಜಾಗತಿಕವಾಗಿ ಕಂಡುಬಂದಿರುವ ಹೊಸ ಬೆಳವಣಿಗೆಯಾಗಿದೆ. ಅಮೆರಿಕದ ರಾಷ್ಟ್ರೀಯವಾದವೇ ಇರಬಹುದು ಅಥವಾ ಯುರೋಪ್‌ನ ಇತರ ದೇಶಗಳಲ್ಲಿ ನಾವು ಇತ್ತೀಚೆಗಿನ ದಿನಗಳಲ್ಲಿ ಕಂಡಿರುವ ಬಹುಸಂಖ್ಯಾತ ರಾಷ್ಟ್ರೀಯವಾದವೇ ಇರಬಹುದು, ಇಂತಹ ಭ್ರಮಾದೀನ ಸತ್ಯಗಳನ್ನೇ ನಂಬಿ ಪೊರೆಯುವ ಜನರು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂತಹ ಭ್ರಮೆಗಳೇ ಪ್ರಿಯಾಂಕಾ ಚೋಪ್ರಾ ಅವರ ಪ್ರಗತಿಯನ್ನು ತಮ್ಮದೆಂದು ಹೇಳಿಕೊಂಡು ‘ರಾಷ್ಟ್ರೀಯವಾದ’ದ ಹೆಸರಿನಲ್ಲಿ ಅಸೂಯೆಯನ್ನು ಪ್ರಕಟಿಸುತ್ತವೆ. ಪ್ರಿಯಾಂಕಾಳ ಪ್ರಗತಿಯನ್ನು ತಮ್ಮ ಕೊಡುಗೆ ಎಂದು ವಿಶ್ಲೇಷಿಸಿ, ಆಕೆಯ ಮೇಲೆ ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ದೇಶ ಅಥವಾ ರಾಷ್ಟ್ರಭಕ್ತಿಯನ್ನು ಮುಂದಿಟ್ಟುಕೊಂಡು ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯ ತಪ್ಪೆಂದು ಸಾಬೀತು ಮಾಡುತ್ತಾರೆ. ಸ್ನೇಹದ, ಸೌಹಾರ್ದದ ಮತ್ತು ಸಾಮರಸ್ಯದ ಪ್ರತೀಕವಾಗಿರಬೇಕಾದ ರಾಷ್ಟ್ರೀಯವಾದ ಅಥವಾ ಧರ್ಮದ ಕಲ್ಪನೆಗಳು ಇಂತಹ ವೈಭವೀಕೃತ ರೂಪದಲ್ಲಿಯೇ ಹಿಂಸಾಚಾರದ ಸ್ವರೂಪವಾಗಿ ಬದಲಾಗುತ್ತವೆ. ಹಿಂಸೆ ಎಂದ ತಕ್ಷಣ ರಕ್ತಸಿಕ್ತ ಫಲಿತಾಂಶವೇ ಆಗಬೇಕೆಂದೇನಿಲ್ಲ, ಮಾಧ್ಯಮ ಮತ್ತು ಸಾಮಾಜಿಕ ತಾಣಗಳಲ್ಲಿ ಒಬ್ಬ ನಟಿಯನ್ನು ಸುಖಾಸುಮ್ಮನೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತಿನ ಛಾಟಿಯೇಟುಗಳನ್ನು ಆಕೆಯತ್ತ ಬೀಸುವುದೂ ಹಿಂಸೆಯೇ.

ಬಲಪಂಥೀಯ ಮೌಢ್ಯ ಹಾಗೂ ಪೊಳ್ಳು ರಾಷ್ಟ್ರೀಯವಾದದ ಕಲ್ಪನೆ ದೇಶಗಳನ್ನು ಆಳುತ್ತಿರುವಾಗ ಪ್ರತೀ ಹಂತದಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆಯಾಗುತ್ತಲೇ ಇರುತ್ತದೆ. ಧರ್ಮ ಮತ್ತು ರಾಷ್ಟ್ರ ಎನ್ನುವ ಎರಡು ಕಲ್ಪನೆಗಳ ಸುತ್ತ ರಾಜಕೀಯ ಉದ್ದೇಶಗಳಿಗಾಗಿ ಹರಡಿರುವ ಭ್ರಮಾದೀನ ಚೌಕಟ್ಟು ‘ಸ್ವಾತಂತ್ರ್ಯ’ವನ್ನು ಸದಾ ಕಟ್ಟಿಹಾಕುತ್ತಲೇ ಸಾಗುತ್ತವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More