ಬಡ್ತಿ ಮೀಸಲಾತಿ; ವೇತನ, ನಿವೃತ್ತಿ ವೇತನ ಮರುನಿಗದಿಗೆ ಸರ್ಕಾರದ ಮಾರ್ಗಸೂಚಿ

ಪರಿಶಿಷ್ಟ ವರ್ಗದ ನೌಕರರ ಬಡ್ತಿ ಮೀಸಲಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸುವತ್ತ ರಾಜ್ಯ ಸರ್ಕಾರ ಬಿರುಸಿನ ಹೆಜ್ಜೆಗಳನ್ನಿಟ್ಟಿದೆ. ಈಗಾಗಲೇ ಮುಂಬಡ್ತಿ-ಹಿಂಬಡ್ತಿಗೊಳ್ಳಬೇಕಾದವರ ಪಟ್ಟಿ ತಯಾರಿಸಿರುವ ಇಲಾಖೆಗಳಿಗೆ ರಾಜ್ಯ ಸರ್ಕಾರ ಮತ್ತೊಂದು ಸುತ್ತೋಲೆ ಹೊರಡಿಸಿದೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಬಡ್ತಿ ಮೀಸಲಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನ ಪಾಲಿಸಲು ರಾಜ್ಯ ಸರ್ಕಾರ ನಡೆಸಿರುವ ಕಸರತ್ತು ಇನ್ನೂ ಪೂರ್ಣಗೊಂಡಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಗಡುವಿನೊಳಗೆ ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಮುಂಬಡ್ತಿಯಿಂದ ಅವಕಾಶ ವಂಚಿತರಾಗಿದ್ದ ಸಾಮಾನ್ಯ ವರ್ಗದ ನೌಕರರು ಮತ್ತು ನಿವೃತ್ತಿ ನೌಕರರ ಬೆನ್ನಿಗೆ ನಿಂತಿದೆ.

ಸೇವಾ ಜೇಷ್ಠತೆ ಅರ್ಹತೆ ಪಡೆಯುವ ಸಾಮಾನ್ಯ ವರ್ಗದ ನೌಕರರು ಮುಂಬಡ್ತಿ ಹೊಂದಲು ಅರ್ಹತೆ ಪಡೆದ ದಿನಾಂಕದಿಂದಲೇ ವೇತನ, ನಿವೃತ್ತಿ ವೇತನವನ್ನೂ ಮರುನಿಗದಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇಲಾಖೆಗಳು ತಯಾರಿಸಿರುವ ಪರಿಷ್ಕೃತಾ ಜೇಷ್ಠತಾ ಪಟ್ಟಿಗಳನ್ವಯ ಬಡ್ತಿಯ ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ಸಾಮಾನ್ಯ ವರ್ಗದ ನೌಕರರಿಗೆ ವೇತನ ಮತ್ತು ನಿವೃತ್ತಿ ವೇತನ ಪುನರ್‌ ನಿಗದಿಪಡಿಸಲು ಮಾರ್ಗಸೂಚಿ ರೂಪಿಸಿದೆ. ಅರ್ಹತೆ ಪಡೆಯುವ ದಿನಾಂಕದಿಂದ ಗಳಿಸಬಹುದಾದ ವೇತನವನ್ನು ಕಾಲ್ಪನಿಕವಾಗಿ ನಿಗದಿಗೊಳಿಸಲಿದೆ. ಆದರೆ, ಯಾವುದೇ ಬಾಕಿ ಹಣ (ಅರಿಯರ್ಸ್) ನೀಡುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಮುಂಬಡ್ತಿ ಮೀಸಲಾತಿ; ಶೇಕಡ ೧೮ರ ನೀತಿಯನ್ನೂ ಪಾಲಿಸದ ಇಲಾಖೆಗಳು

ಅಲ್ಲದೆ, ಬಡ್ತಿ ಮೀಸಲಾತಿ ಅಡಿಯಲ್ಲಿ ಮುಂಬಡ್ತಿ ಪಡೆದಿರುವ ಪರಿಶಿಷ್ಟ ವರ್ಗದ ನೌಕರರು ಫೆ.೯,೨೦೧೭ರ ಮುನ್ನ ಅಥವಾ ಆ ನಂತರ ನಿವೃತ್ತಗೊಂಡಿರುವವರಿಗೆ ವೇತನ ಮರು ನಿಗದಿ ಸೌಲಭ್ಯ ಅನ್ವಯವಾಗುವುದಿಲ್ಲ. ಹಾಗೆಯೇ, ನಿವೃತ್ತಿಗೊಂಡಿರುವ ಈ ವರ್ಗದ ನೌಕರರಿಗೆ ನಿವೃತ್ತಿ ವೇತನ ಸೇರಿದಂತೆ ಹಣಕಾಸು ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಈ ಸಂಬಂಧ ಜೂನ್ ೮, ೨೦೧೮ರಂದು ಸುತ್ತೋಲೆ ಹೊರಡಿಸಿದೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಮೇಲುಸ್ತುವಾರಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದ ಬಳಿಕ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನಗಳ ಪ್ರಕಾರ ಇಲಾಖೆಗಳು ಈಗಾಗಲೇ ಜೇಷ್ಠತಾ ಪಟ್ಟಿಯನ್ನು ಪರಿಷ್ಕೃತಗೊಳಿಸಿವೆ. ಜೇಷ್ಠತಾ ಪಟ್ಟಿಯ ಅನುಸಾರ ಮುಂಬಡ್ತಿ ಮತ್ತು ಹಿಂಬಡ್ತಿ ಆದೇಶಗಳೂ ಹೊರಬಿದ್ದಿವೆ. ಪರಿಶಿಷ್ಟ ನೌಕರರನ್ನು ಹಿಂಬಡ್ತಿಗೊಳಿಸಿದ ನಂತರ ಬಡ್ತಿಗೆ ಅರ್ಹತೆ ಪಡೆಯಲಿರುವ ಸಾಮಾನ್ಯ ವರ್ಗದ ನೌಕರರಿಗೆ ಅರ್ಹತೆ ಪಡೆದ ದಿನಾಂಕದಿಂದಲೇ ವೇತನವನ್ನು ಮರು ನಿಗದಿಗೊಳಿಸಲಿದೆ.

ಪರಿ‍ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರಿಗೆ ನೀಡಿದ್ದ ಬಡ್ತಿಯಿಂದಾಗಿ ಸಾಮಾನ್ಯ ವರ್ಗದ ನೌಕರರು ಬಡ್ತಿಯಿಂದ ವಂಚಿತರಾಗಿದ್ದರು. ಈ ಕ್ರಮವನ್ನು ಬಿ ಕೆ ಪವಿತ್ರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮೀಸಲಾತಿಯ ಪ್ರಕಾರ ನೀಡಲಾಗುವ ಅತ್ಯಲ್ಪ ಅವಧಿಯಲ್ಲಿ ಬಡ್ತಿಯಲ್ಲಿ ಅಭ್ಯರ್ಥಿಗಳು 45ನೇ ವಯಸ್ಸಿಗೆ 3ನೇ ಹಂತವನ್ನು ಮತ್ತು ಎರಡು- ಮೂರು ವರ್ಷಗಳ ನಂತರ ನಾಲ್ಕು, ಐದು ಹಾಗೂ 6ನೇ ಹಂತ ತಲುಪುತ್ತಾರೆ.

ಸಾಮಾನ್ಯ ವರ್ಗದ ಮೂಲಕ  ಬಡ್ತಿ ಹೊಂದಿದವರು 56ನೇ ವಯಸ್ಸಿಗೆ 3ನೇ ಹಂತ ತಲುಪಿದರೆ, 4ನೇ ಹಂತ ತಲುಪುವ ಮೊದಲೇ ಸೇವೆಯಿಂದ ನಿವೃತ್ತರಾಗುತ್ತಾರೆ. ಮೀಸಲು ಅಭ್ಯರ್ಥಿಗಳ ಪ್ರಾತಿನಿಧ್ಯ ಶೇ 36ರಿಂದ ಶೇ 100 ರ ತನಕ ಏರುತ್ತದೆ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ನಿವೇದಿಸಿಕೊಂಡಿದ್ದರು. ಈ ಕುರಿತಾದ ಸುದೀರ್ಘ ವಿಚಾರಣೆಗಳ ನಂತರ, ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಪರಿಷ್ಕೃತ ಜೇಷ್ಠತಾ ಪಟ್ಟಿ ತಯಾರಿಸಲು ಸೂಚಿಸಿತ್ತು.

ಬಡ್ತಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಮ ಪ್ರಮಾಣದ ಪ್ರಾತಿನಿಧ್ಯ ಇಲ್ಲವೆಂಬ ಕಾರಣದಿಂದ ಸೇವೆಯಲ್ಲಿ ಕಿರಿಯರಾಗಿದ್ದರೂ ಸಾಂದರ್ಭಿಕ ಹಿರಿತನ ನೀಡಿ ಇತರ ವರ್ಗಗಳ ನೌಕರರಿಗೆ ಬಡ್ತಿಯನ್ನು ನಿರಾಕರಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು.

ಮೀಸಲಾತಿ ಅಡಿ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ಸಾಂದರ್ಭಿಕ ಹಿರಿತನ ನೀಡುವ ಅವಕಾಶವನ್ನು ಕಲ್ಪಿಸಲೆಂದು ಹಾಗೂ 1978ರ ಏಪ್ರಿಲ್ 27ರಿಂದ ನೀಡಲಾಗಿರುವ ಸಾಂದರ್ಭಿಕ ಸೇವಾ ಹಿರಿತನವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಸರ್ಕಾರಿ ನೌಕರರ ಮೀಸಲಾತಿ ಆಧರಿತ ಬಡ್ತಿ ನೌಕರರ ಜ್ಯೇಷ್ಠತೆ ನಿರ್ಣಯ ಕಾಯ್ದೆ– 2002’ ರೂಪಿಸಿತ್ತು.

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More