ಇಂದಿನ ಡೈಜೆಸ್ಟ್ | ನೀವು ಓದಲೇಬೇಕಾದ 10 ಪ್ರಮುಖ ಇತರ ಸುದ್ದಿಗಳು  

ನೀವು ತಪ್ಪಿಸಿಕೊಂಡಿರಬಹುದಾದ ಮತ್ತು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ  

‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಅಮಿತ್ ಶಾ

“ನಮ್ಮ ಪಕ್ಷದ ಘೋಷವಾಕ್ಯ ಕಾಂಗ್ರೆಸ್ ಮುಕ್ತ ಭಾರತ್ ಎನ್ನುವುದು ಕಾಂಗ್ರೆಸ್‌ನ ಕುಟುಂಬ ರಾಜಕಾರಣ ಸಂಸ್ಕೃತಿಯನ್ನು ಇಲ್ಲವಾಗಿಸುವುದೇ ಹೊರತು ಕಾಂಗ್ರೆಸ್ ಪಕ್ಷವನ್ನಲ್ಲ,” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. “ನನಗೆ ರಾಹುಲ್ ಗಾಂಧಿಯವರ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಪಕ್ಷದ ಪಾತ್ರ ಬಹುಮುಖ್ಯ,” ಎಂದು ಚತ್ತೀಸ್‌ಗಢದ ಬಿಜೆಪಿ ಸಮಾವೇಶದಲ್ಲಿ ಶಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ಆರೆಸ್ಸೆಸ್ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಹುನ್ನಾರ: ಯೆಚೂರಿ

ಕೇಂದ್ರ ಸರ್ಕಾರ ಅಧಿಕಾರಶಾಹಿ ವರ್ಗದ ಜಂಟಿ ಕಾರ್ಯದರ್ಶಿ ಮಟ್ಟದ ಕೆಲ ಉನ್ನತ ಸ್ಥಾನಗಳಿಗೆ ಖಾಸಗಿ ವಲಯದ ವ್ಯಕ್ತಿಗಳನ್ನು ನೇಮಿಸುವ ನೆಪದಲ್ಲಿ ಆರ್‌ಎಸ್‌ಎಸ್‌ ಮೂಲದವರನ್ನು ನೇಮಿಸುವ ಪ್ರಯತ್ನದಲ್ಲಿದೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕೆ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಜಾಹೀರಾತನ್ನು ಯೆಚೂರಿ ಖಂಡಿಸಿದ್ದಾರೆ.

ರೈತರ ಪ್ರತಿಭಟನೆಯು ವಿರೋಧಪಕ್ಷದ ರಾಜಕೀಯ ದಾಳ: ವಿಜಯ್ ರೂಪಾನಿ

ಗುಜರಾತಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳು ವಿರೋಧಪಕ್ಷದ ರಾಜಕೀಯ ನಾಟಕವಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಟೀಕಿಸಿದ್ದಾರೆ. “ನಮ್ಮ ಸರ್ಕಾರ ರೈತರ ಸಮಸ್ಯೆಗಳನ್ನು ಕೇಳಿ ಪರಿಹರಿಸುತ್ತ ಬಂದಿದೆ. ಕೇಂದ್ರ ಹಾಗೂ ಗುಜರಾತ್ ಸರ್ಕಾರ ರೈತರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುತ್ತ ಬಂದಿದೆ,” ಎಂದಿದ್ದಾರೆ. ಸುದ್ದಿವಾಹಿನಿಯೊಂದು ರಾಜಕೋಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೂಪಾನಿ ಹೀಗೆ ಹೇಳಿದ್ದಾರೆ.

ದೇಶದ ಮೊದಲ ಪೊಲೀಸ್ ಮ್ಯೂಸಿಯಂ ಆರಂಭಕ್ಕೆ ಚಿಂತನೆ

ದೆಹಲಿಯ ಲುಟಿನ್ಸ್‌ನಲ್ಲಿ ದೇಶದ ಮೊದಲ ಪೊಲೀಸ್ ಮ್ಯೂಸಿಯಂ ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಮ್ಯೂಸಿಯಂನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಪೊಲೀಸರ ಇತಿಹಾಸ, ಶಸ್ತ್ರ, ಸಮವಸ್ತ್ರ ಇತ್ಯಾದಿ ಕುರಿತಂತೆ ಮಾಹಿತಿ ಹಾಗೂ ವಸ್ತುಗಳ ಸಂಗ್ರಹಣೆ ಇಡಲಾಗುವುದು ಎಂದು ಹೇಳಲಾಗಿದೆ. ಅಕ್ಟೋಬರ್ ೨೧ರ ಪೊಲೀಸ್ ಸ್ಮರಣಾರ್ಥ ದಿನದಂದು ಕಟ್ಟಡದ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ರನ್ನು ಹೊಗಳಿದ ಟ್ರಂಪ್

ಸಿಂಗಾಪುರದಲ್ಲಿ ಜೂ.೧೨ರ ಮಾತುಕತೆಗೆಂದು ಒಂದಾಗಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್, ಪರಮಾಣು ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಈ ನಡುವೆ, ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾ ಅಧ್ಯಕ್ಷರನ್ನು ಹೊಗಳಿದ್ದು, “ಅವರು ಹೆಚ್ಚಿನ ಜನರಿಗೆ ಗೊತ್ತಿರದ ವ್ಯಕ್ತಿತ್ವ,” ಎಂದಿದ್ದಾರೆ.

ಯೊ ಯೊ ಟೆಸ್ಟ್‌ನಲ್ಲಿ ಶಮಿ-ಸ್ಯಾಮ್ಸನ್ ನಪಾಸು

ಬಿಸಿಸಿಐ ಕಡ್ಡಾಯಗೊಳಿಸಿರುವ ಯೊ-ಯೊ ಟೆಸ್ಟ್‌ನಲ್ಲಿ (ಆಟಗಾರರ ದೈಹಿಕ ಸಾಮರ್ಥ್ಯ ಪರೀಕ್ಷೆ) ಅನುತ್ತೀರ್ಣವಾಗಿರುವ ಭಾರತ ತಂಡದ ಮಧ್ಯಮ ವೇಗಿ ಮೊಹಮದ್ ಶಮಿ ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಿಂದ ವಂಚಿತವಾಗಿದ್ದಾರೆ. ಇದೇ ಗುರುವಾರದಿಂದ (ಜೂನ್ ೧೪) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಐತಿಹಾಸಿಕ ಟೆಸ್ಟ್ ಪಂದ್ಯ ಜರುಗಲಿದೆ. ಇತ್ತೀಚೆಗಷ್ಟೇ ಮುಕ್ತಾಯ ಕಂಡ ಹನ್ನೊಂದನೇ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯಾವಳಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ನಾಲ್ಕು ಪಂದ್ಯಗಳನ್ನಷ್ಟೇ ಆಗಿದ ಶಮಿ, ಮೂರು ವಿಕೆಟ್ ಗಳಿಸಿದ್ದರು. ಇದೇ ವೇಳೆ, ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಎ ತಂಡದ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ರಾಜಸ್ಥಾನ ರಾಯಲ್ಸ್‌ ಆಟಗಾರ ಸಂಜು ಸ್ಯಾಮ್ಸನ್ ಕೂಡ ಯೊ-ಯೊ ಟೆಸ್ಟ್‌ನಲ್ಲಿ ಅನುತ್ತೀರ್ಣವಾಗಿದ್ದು, ಅವರು ಕೂಡ ಇಂಗ್ಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದಾರೆ.

ಬಿಎಸ್‌ಪಿ, ಎಸ್ಪಿ ಮೈತ್ರಿ ಹೀಗೇ ಮುಂದುವರಿಯುತ್ತದೆ: ಅಖಿಲೇಶ್

ಬಿಜೆಪಿ ಸೋಲಿಸಲು ಬಿಎಸ್‌ಪಿ ಹಾಗೂ ಎಸ್‌ಪಿ ಪಕ್ಷಗಳ ಮೈತ್ರಿ ಮುಂದುವರಿಯುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಉತ್ತರ ಪ್ರದೇಶದ ಮಣಿಪುರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “೨೦೧೯ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ನಾವು ಗೆಲ್ಲುತ್ತೇವೆ, ಬಿಜೆಪಿ ಸೋಲಲುತ್ತದೆ,” ಎಂದಿದ್ದಾರೆ.

ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್

ತನ್ನ ಸಂಬಂಧಿ ಮೆಹುಲ್ ಚೊಕ್ಸಿ ಜೊತೆ ಸೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,700 ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಹಾರಿರುವ ವಜ್ರ ವ್ಯಾಪಾರಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಸಿಬಿಐ ಇಂಟರ್‌ಪೋಲ್‌ಗೆ ಮನವಿ ಮಾಡಿದೆ. ನೀರವ್ ಮೋದಿ ಯುನೈಟೆಡ್ ಕಿಂಗ್ಡಮ್‌ಗೆ ಹಾರಿದ್ದು, ಅಲ್ಲಿ ರಾಜಕೀಯ ಆಶ್ರಯ ಬೇಡಿದ್ದಾನೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿದ ಬೆನ್ನಲ್ಲೇ ಸಿಬಿಐ ಇಂಟರ್‌ಪೋಲ್‌ಗೆ ಕೋರಿಕೆ ಸಲ್ಲಿಸಿದೆ. ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದರೆ, ಸದಸ್ಯ ರಾಷ್ಟ್ರಗಳೆಲ್ಲವೂ ಸೂಚಿತ ಅಪರಾಧಿಯನ್ನು ಬಂಧಿಸಲು ಮತ್ತು ಹಸ್ತಾಂತರ ಮಾಡಲು ನೆರವು ನೀಡುತ್ತವೆ. ಈಗ ಇಂಟರ್‌ ಪೋಲ್ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದರೆ, ಆತ ದೇಶದಿಂದ ದೇಶಕ್ಕೆ ಹಾರಾಡುವುದನ್ನು ತಡೆಯಬಹುದಾಗಿದ್ದು, ಆತನನ್ನು ಬಂಧಿಸಿ ದೇಶಕ್ಕೆ ಕರೆತರಲು ಸುಲಭವಾಗುತ್ತದೆ.

ಫೆಡರರ್ ಗ್ರಾಂಡ್‌ಸ್ಲಾಮ್ ಸಾಧನೆ ಹಿಂದೆ ಬಿದ್ದಿಲ್ಲ: ನಡಾಲ್

೨೦ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಅವರ ಸಾಧನೆಯನ್ನು ಸರಿಗಟ್ಟಲಾಗಲೀ, ಇಲ್ಲವೇ ಅವರ ದಾಖಲೆಯನ್ನು ಮುರಿಯಲಾಗಲೀ ತಾನು ಅವರೊಂದಿಗೆ ಪೈಪೋಟಿಗೆ ಬಿದ್ದಿಲ್ಲ ಎಂದು ರಾಫೆಲ್ ನಡಾಲ್ ಸೋಮವಾರ (ಜೂನ್ ೧೧) ಸ್ಪಷ್ಟಪಡಿಸಿದ್ದಾರೆ. ದಿನದ ಹಿಂದಷ್ಟೇ ರೊಲ್ಯಾಂಡ್ ಗ್ಯಾರೋಸ್‌ ಫೈನಲ್‌ನಲ್ಲಿ ಆಸ್ಟ್ರಿಯಾ ಆಟಗಾರ ಡಾಮಿನಿಕ್ ಥೀಮ್ ವಿರುದ್ಧ ೬-೪, ೬-೩, ೬-೨ ಮೂರು ನೇರ ಸೆಟ್‌ಗಳಲ್ಲಿ ಗೆಲುವು ಪಡೆದು ವೃತ್ತಿಬದುಕಿನ ೧೭ನೇ ಗ್ರಾಂಡ್‌ಸ್ಲಾಮ್ ಗೆದ್ದ ನಡಾಲ್, ಮೂರು ಗ್ರಾಂಡ್‌ಸ್ಲಾಮ್‌ಗಳಿಂದ ಫೆಡರರ್‌ಗಿಂತ ಹಿಂದಿದ್ದಾರೆ. "ಯಾರೋ ಒಬ್ಬರು ನಿಮಗಿಂತಲೂ ಹೆಚ್ಚು ಶ್ರೀಮಂತರಾಗಿದ್ದರೆ, ಇಲ್ಲವೇ ನಿಮಗಿಂತಲೂ ದೊಡ್ಡದಾದ ಮನೆ ಹೊಂದಿದ್ದರೆ, ನಿಮಗಿಂತಲೂ ಹೆಚ್ಚು ಗ್ರಾಂಡ್‌ಸ್ಲಾಮ್ ಗೆದ್ದಿದ್ದಾರೆ ಎಂತಲೋ ಹತಾಶೆಯಿಂದ ಕೂಡಿರಲು ಸಾಧ್ಯವಿಲ್ಲ. ಇಲ್ಲವೇ ಇಂಥದ್ದೊಂದು ಭಾವನೆಯಿಟ್ಟುಕೊಂಡು ಜೀವಿಸುವುದೂ ತಪ್ಪು,'' ಎಂದು ನಡಾಲ್ ತಮ್ಮ ಮತ್ತು ಫೆಡರರ್ ವೃತ್ತಿಬದುಕಿನ ಪೈಪೋಟಿಯ ಬಗೆಗೆ ಉದ್ಭವವಾಗಿರುವ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

೪೦೦ಕ್ಕೂ ಹೆಚ್ಚು ಕೇರಳ ಪೊಲೀಸ್‌ ಸಿಬ್ಬಂದಿ ಮೇಲೆ ಕ್ರಿಮಿನಲ್ ಕೇಸ್

ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗದ ವರದಿ ಪ್ರಕಾರ, ಡಿಜಿಪಿ ಲೋಕ್‌ನಾಥ್ ಬಹೇರಾ ಹೇಳುವಂತೆ ೩೮೭ಕ್ಕೂ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೆಲವರು ಶಿಕ್ಷೆಯನ್ನು ಪೂರ್ಣಗೊಳಿಸಿ ಪುನಃ ಪೊಲೀಸ್ ಸೇವೆಗೆ ಹಿಂತಿರುಗಿದ್ದಾರೆ. ಆದರೆ, ಪೊಲೀಸ್ ಆಕ್ಟ್ ಪ್ರಕಾರ ಅವರೆಲ್ಲರೂ ಅಮಾನತು ಹೊಂದಬೇಕಿತ್ತು ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More