ಭಾರತದ ಮೇಲೆ ಅಮೆರಿಕ ಸುಂಕ ಹೇರಿದರೆ ಯಾರಿಗೆ ನಷ್ಟ, ಯಾರಿಗೆ ಲಾಭ?

ಜಿ7 ಶೃಂಗಸಭೆಯಲ್ಲಿ ಭಾರತದ ಮೇಲೆ ಸುಂಕ ಹೇರುವ ಬಗ್ಗೆ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ್ದಾರೆ. ಭಾರತವು ಅಮೆರಿಕದ ಸರಕುಗಳ ಮೇಲೆ ಶೇ.100ರಷ್ಟು ಸುಂಕ ಹೇರುತ್ತಿದೆ ಎಂಬುದು ಟ್ರಂಪ್ ತಕರಾರು. ಈ ತಕರಾರಿನಿಂದ ಭಾರತದಲ್ಲಿ ಐಷಾರಾಮಿ ಬೈಕುಗಳ ದರ ಇಳಿಯಬಹುದಷ್ಟೇ!

ಅಮೆರಿಕ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಮೇಲೆ ಅಸಮಾಧಾನ ಇದೆ. ಅದು ವ್ಯವಹಾರಿಕ ಅಸಮಾಧಾನ. ಭಾರತದ ಬಹುತೇಕ ಸರಕುಗಳನ್ನು ಅಮೆರಿಕ ಸುಂಕ ಹೇರದೆ ಸ್ವೀಕರಿಸದರೆ, ಭಾರತ ಮಾತ್ರ ಅಮೆರಿಕದ ಕೆಲವು ಸರಕುಗಳ ಮೇಲೆ ಶೇ.100ರಷ್ಟು ಸುಂಕ ಹೇರುತ್ತಿದೆ ಎಂದು ಟ್ರಂಪ್ ತಕರಾರು ತೆಗೆದಿದ್ದಾರೆ. ಅಷ್ಟಕ್ಕೂ ಟ್ರಂಪ್ ಪ್ರಕಾರ, ಭಾರತ ಐಷಾರಾಮಿ ಬೈಕ್ ಹರ್ಲಿ ಡೆವಿಡ್ಸನ್ ಮೇಲೆ ಭಾರಿ ಸುಂಕ ಹೇರುತ್ತಿದೆಯಂತೆ! ಈ ಸುಂಕ ಹೇರಿಕೆ ಮುಂದುವರಿಸಿದರೆ ಭಾರತದಿಂದ ಆಮದಾಗುವ ಬೈಕುಗಳ ಮೇಲೂ ನಾವು ಸುಂಕ ಹೇರುತ್ತೇವೆ ಎಂಬ ಬೆದರಿಕೆಯನ್ನು ಟ್ರಂಪ್ ಹಾಕಿದ್ದಾರೆ. ಟ್ರಂಪ್ ಅವರ ಈ ಬೆದರಿಕೆ ಜಿ7 ಶೃಂಗಸಭೆಯಿಂದ ಹೊರಬಿದ್ದಿರುವುದರಿಂದ ಹೆಚ್ಚಿನ ಮಹತ್ವ ಬಂದಿದೆ.

ಜಿ7 ಶೃಂಗಸಭೆ ಏಳು ಶ್ರೀಮಂತ ರಾಷ್ಟ್ರಗಳ ಪೈಕಿ ಅಮೆರಿಕವನ್ನು ಪ್ರತ್ಯೇಕಗೊಳಿಸುವ ವೇದಿಕೆಯಾಗಿ ಪರಿವರ್ತನೆಯಾಯಿತೋ ಅಥವಾ ಪ್ರತ್ಯೇಕವಾಗಲು ಆ ವೇದಿಕೆಯನ್ನು ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸಿಕೊಂಡರೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಆದರೆ, ಜಿ7 ಶೃಂಗಸಭೆಯು ಅಮೆರಿಕ ತನ್ನ ಮಿತ್ರರಾಷ್ಟ್ರಗಳೊಂದಿಗೆ ಹಿಂದಿನ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸಿಲ್ಲ. ವ್ಯವಹಾರಿಕತೆಗೆ ಹೆಚ್ಚಿನ ಒತ್ತು ನೀಡಿದ ಟ್ರಂಪ್ ಕೆಲವು ಔಪಚಾರಿಕ ಶಿಷ್ಟಾಚಾರಗಳನ್ನು ಬದಿಗೊತ್ತಿ ಬೆದರಿಕೆ ಸ್ವರೂಪದ ಮಾತುಗಳನ್ನಾಡಿದ್ದಾರೆ. ಈ ಹಂತದಲ್ಲಿ ಅವರು ಭಾರತದ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. “ಭಾರತವು ಅಮೆರಿಕ ಸರಕುಗಳ ಮೇಲೆ ಭಾರಿ ಸುಂಕ ಹೇರುತ್ತಿದೆ. ನಾವು ಮಾತ್ರ ಯಾವುದೇ ಸುಂಕ ಹೇರುತ್ತಿಲ್ಲ,” ಎಂದು ವ್ಯಂಗ್ಯವಾಗಿಯೂ ಮತ್ತು ಬೆದರಿಕೆ ಹಾಕುವ ರೀತಿಯೂ ಹೇಳಿದ್ದಾರೆ.

ಅಮೆರಿಕ ಜಗತ್ತಿಗೇ ದೊಡ್ಡಣ್ಣ ಇರಬಹುದು. ಆದರೆ, ಕಳೆದ ಮೂರೂವರೆ ದಶಕಗಳ ಇತಿಹಾಸದಲ್ಲಿ ಭಾರತ ಎಂದೂ ಅಮೆರಿಕದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಂಡಿಲ್ಲ. ಅಂದರೆ, ಭಾರತ-ಅಮೆರಿಕ ವ್ಯಾಪಾರ ವಹಿವಾಟಿನಲ್ಲಿ ಪ್ರತಿವರ್ಷವೂ ಭಾರತವೇ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣ ಕಡಿಮೆ. ಅಂದರೆ, ಭಾರತದೊಂದಿಗೆ ಅಮೆರಿಕವು ವ್ಯಾಪಾರ ಕೊರತೆಯನ್ನು (ಟ್ರೇಡ್ ಡಿಫಿಸಿಟ್) ಎದುರಿಸುತ್ತಿದೆ.

ಈ ಕೊರತೆ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೊ(ಯುಎಸ್ಎಸ್ಬಿ) ಅಂಕಿ-ಅಂಶಗಳ ಪ್ರಕಾರ, 2018ರ ಏಪ್ರಿಲ್‌ನಲ್ಲಿ ಅಮೆರಿಕದ ವ್ಯಾಪಾರ ಕೊರತೆಯು 2,383.3 ಮಿಲಿಯನ್ ಡಾಲರ್‌ಗಳಷ್ಟಿದೆ. ಪ್ರಸಕ್ತ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಮೆರಿಕದ ವ್ಯಾಪಾರ ಕೊರತೆಯು 7,711 ದಶಲಕ್ಷ ಡಾಲರ್‌ನಷ್ಟಿದೆ. ವಿಸ್ತೃತವಾಗಿ ಹೇಳಬೇಕೆಂದರೆ, ಮೊದಲ ನಾಲ್ಕು ತಿಂಗಳಲ್ಲಿ ಅಮೆರಿಕವು ಭಾರತದಿಂದ 17,558.7 ಮಿಲಿಯನ್ ಡಾಲರ್‌ನಷ್ಟು ಆಮದು ಮಾಡಿಕೊಂಡಿದ್ದರೆ, ಅಮೆರಿಕವು ಭಾರತಕ್ಕೆ ರಫ್ತು ಮಾಡಿರುವ ಪ್ರಮಾಣವು 9,847.8 ದಶಲಕ್ಷ ಡಾಲರ್. ಅಂದರೆ, ಭಾರತವೇ 7,711 ಮಿಲಿಯನ್ ಡಾಲರುಗಳಷ್ಟು ಸರಕುಗಳನ್ನು ಅಮೆರಿಕಕ್ಕೆ ಒದಗಿಸಿದೆ.

2017ರಲ್ಲಿ ಅಮೆರಿಕವು ಭಾರತಕ್ಕೆ 25,688.9 ಮಿಲಿಯನ್ ಡಾಲರಿನಷ್ಟು ಸರಕುಗಳನ್ನು ರಫ್ತು ಮಾಡಿದ್ದರೆ, ಇದೇ ಅವಧಿಯಲ್ಲಿ ಅಮೆರಿಕವು ಭಾರತದಿಂದ 48,602.8 ಮಿಲಿಯನ್ ಡಾಲರಿನಷ್ಟು ಆಮದು ಮಾಡಿಕೊಂಡಿದೆ. ಅಂದರೆ, 2017 ಇಡೀ ವರ್ಷದಲ್ಲಿ ಭಾರತದೊಂದಿಗಿನ ಅಮೆರಿಕದ ವ್ಯಾಪಾರ ಕೊರತೆಯು 22,914.1 ಮಿಲಿಯನ್ ಡಾಲರ್‌ಗಳಷ್ಟಾಗಿದೆ. ಅಂದರೆ, ಹೆಚ್ಚೂಕಮ್ಮಿ ಶೇ.47ರಷ್ಟು ವ್ಯಾಪಾರ ಕೊರತೆ ಎದುರಿಸುತ್ತಿದೆ. 2016ರಲ್ಲಿ 21635.7 ಮಿಲಿಯನ್ ಡಾಲರ್ ರಫ್ತು ಮಾಡಿ, 46,027.8 ಮಿಲಿಯನ್ ಡಾಲರ್ ಆಮದು ಮಾಡಿಕೊಂಡಿತ್ತು. ಅಂದರೆ, ವ್ಯಾಪಾರ ಕೊರತೆಯುು 24,392.1 ಮಿಲಿಯನ್ ಡಾಲರ್‌ಗಳಷ್ಟಿತ್ತು.

ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೊದಲ್ಲಿ 1985ರಿಂದ ಭಾರತ-ಅಮೆರಿಕ ವ್ಯಾಪಾರ ವಹಿವಾಟಿನ ಅಂಕಿ-ಅಂಶಗಳಿವೆ. ಬ್ಯೂರೋ ಮಾಹಿತಿ ಪ್ರಕಾರ, 1985ರಲ್ಲಿ ಅಮೆರಿಕ ಭಾರತದೊಂದಿಗಿನ ವ್ಯಾಪಾರ ಕೊರತೆ 652.8 ಮಿಲಿಯನ್ ಡಾಲರುಗಳಷ್ಟಿತ್ತು. 1990ರಲ್ಲಿ ವ್ಯಾಪಾರ ಕೊರತೆ 710.6 ಮಿಲಿಯನ್ ಡಾಲರಿಗೆ ಏರಿತ್ತು. 2000ರಲ್ಲಿ ವ್ಯಾಪಾರ ಕೊರತೆಯು 7,019.3 ಮಿಲಿಯನ್ ಡಾಲರಿಗೆ ಏರಿತ್ತು. ಅಂದರೆ, ಹತ್ತು ವರ್ಷದಲ್ಲಿನ ವ್ಯಾಪಾರ ಕೊರತೆ ಪ್ರಮಾಣವೂ ಹತ್ತು ಪಟ್ಟು ಹೆಚ್ಚಿತ್ತು. 2010ರಲ್ಲಿ 10,284.1 ಮಿಲಿಯನ್ ಡಾಲರಿಗೆ ಏರಿತ್ತು. 2015ರಲ್ಲಿ 23,329.7 ಮಿಲಿಯನ್ ಡಾಲರ್ ಗೆ ಏರಿತು. ಅಂದರೆ, ಐದೇ ವರ್ಷದಲ್ಲಿ 12 ಪಟ್ಟು ಏರಿತ್ತು, ನಂತರದಲ್ಲಿ ಏರುತ್ತಲೇ ಇದೆ. ಪ್ರಸಕ್ತ ವರ್ಷ 25,000 ಮಿಲಿಯನ್ ಡಾಲರ್ ದಾಟುವ ಸಾಧ್ಯತೆ ಇದೆ ಎಂದು ಭಾರತದ ಅಂದಾಜು.

ತಾನು ವ್ಯಾಪಾರ ಕೊರತೆ ಎದುರಿಸುತ್ತಿರುವ ದೇಶದ ಮೇಲೆ ಅಮೆರಿಕ ಬೆದರಿಕೆ ಹಾಕಿದರೆ ಅದರಿಂದ ಅಮೆರಿಕಕ್ಕೇ ನಷ್ಟ. ಈಗ ಭಾರತದ ವಿರುದ್ಧ ಬೆದರಿಕೆ ಹಾಕಿರುವ ಅಮೆರಿಕ, ಏಕಾಏಕಿ ಸುಂಕ ಹೇರಲು ಸಾಧ್ಯವಿಲ್ಲ. ಈಗ ವಿವಾದಕ್ಕೆ ಗುರಿಯಾಗಿರುವ ಕಬ್ಬಿಣ ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಅಮೆರಿಕ ಹೇರುತ್ತಿರುವ ಶೇ.25 ಮತ್ತು ಶೇ.10ರಷ್ಟು ಸುಂಕದಿಂದ ಭಾರತದ ಮೇಲೆ ಅಂತಹ ಭಾರಿ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಅಮೆರಿಕಕ್ಕೆ ರಫ್ತಾಗುತ್ತಿರುವ ಜಾಗತಿಕ ಕಬ್ಬಿಣ ಮತ್ತು ಅಲ್ಯುಮಿನಿಯಂ ಪ್ರಮಾಣಕ್ಕೆ ಹೋಲಿಸಿದರೆ ಭಾರತದ ಪಾಲು ಕೇವಲ ಶೇ.2ರಷ್ಟು ಮಾತ್ರ. ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತವು ನಿರ್ಮಾಣ ವಲಯದಲ್ಲಿ ಭಾರಿ ಹೂಡಿಕೆ ಮಾಡುತ್ತಿರುವುದರಿಂದ ಅಮೆರಿಕಕ್ಕೆ ರಫ್ತಾಗುತ್ತಿರುವ ಕಬ್ಬಿಣ ಮತ್ತು ಅಲ್ಯುಮಿನಿಯಂ ಸ್ಥಗಿತಗೊಂಡರೂ ಅದನ್ನು ದೇಶೀಯವಾಗಿ ಬಳಕೆ ಮಾಡಿಕೊಳ್ಳಬಹುದು. ದೇಶೀಯವಾಗಿ ಈ ಲೋಹಗಳ ವಾರ್ಷಿಕ ಬೇಡಿಕೆ ಶೇ.6ಕ್ಕಿಂತಲೂ ಹೆಚ್ಚುತ್ತಿದೆ.

ಇದನ್ನೂ ಓದಿ : ಟ್ರಂಪ್ ಸುಂಕ ನೀತಿ ಫಲಶೃತಿ; ಅಮೆರಿಕವನ್ನು ಪ್ರತ್ಯೇಕವಾಗಿಟ್ಟ ಜಿ7 ದೇಶಗಳು

ಅಷ್ಟಕ್ಕೂ ಟ್ರಂಪ್ ಪ್ರಸ್ತಾಪಿಸಿರುವ ಹರ್ಲಿ ಡೆವಿಡ್ಸನ್ ಬೈಕ್ ಬೆಲೆ ಕಡಿಮೆ ಆಗಬಹುದು ಅಷ್ಟೇ. ಇದರಿಂದ ಭಾರತೀಯ ಐಷಾರಾಮಿ ಬೈಕ್‌ಪ್ರಿಯರಿಗಷ್ಟೇ ಅನುಕೂಲ. ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ವಿದೇಶಗಳಲ್ಲೇ ಸಂಪೂರ್ಣ ತಯಾರಾದ ಬೈಕುಗಳಿಗೆ ವಿಧಿಸುತ್ತಿದ್ದ ಸುಂಕವನ್ನು ಶೇ.50ಕ್ಕೆ ತಗ್ಗಿಸಿದೆ. ಈ ಹಿಂದೆ 800 ಸಿಸಿ ಮೇಲ್ಪಟ್ಟ ಬೈಕುಗಳಿಗೆ ಶೇ.75ರಷ್ಟು ಮತ್ತು 800 ಸಿಸಿ ಮತ್ತು ಅದಕ್ಕಿಂತ ಕೆಲಪಟ್ಟ ಬೈಕುಗಳಿಗೆ ಶೇ.60ರಷ್ಟು ಸುಂಕ ವಿಧಿಸಲಾಗುತ್ತಿತ್ತು.

ಒಟ್ಟಾರೆ, ಸಾರಾಂಶ ಏನೆಂದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದ ಕ್ಯೂಬೆಕ್ ನಗರದಲ್ಲಿ ಗುಡುಗಿದರೆ, ಭಾರತದಲ್ಲಿ ಐಷಾರಾಮಿ ಬೈಕುಗಳ ದರ ತಗ್ಗುತ್ತದೆ!

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More