ಅಧಿಕಾರ ದುರುಪಯೋಗ; ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು

ಐಟಿಐಗಳಲ್ಲಿ ನೇರವಾಗಿ ಮುಂಬಡ್ತಿ ಪಡೆದಿರುವ ಪ್ರಾಂಶುಪಾಲರನ್ನು ಹಿಂಬಡ್ತಿಗೊಳಿಸುವ ಪ್ರಕರಣ ಭ್ರಷ್ಟಾಚಾರ ನಿಗ್ರಹ ದಳ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ವಿರುದ್ದ ಅಧಿಕಾರ ದುರುಪಯೋಗದಡಿ ಎಸಿಬಿಗೆ ದೂರು ದಾಖಲಾಗಿದೆ

ಅಧಿಕಾರ ದುರುಪಯೋಗ ಆರೋಪದಡಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ವಿರುದ್ಧ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದೂರು ದಾಖಲಾಗಿದೆ. ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳ (ಐಟಿಐ) ಕಿರಿಯ ತರಬೇತಿ ಅಧಿಕಾರಿಗಳ ಪೈಕಿ ಬಿಇ ಪದವಿ ಆಧರಿಸಿ ಮುಂಬಡ್ತಿ ಹೊಂದಿರುವ ಪ್ರಾಂಶುಪಾಲರುಗಳ (ಗ್ರೇಡ್ ೧ ಮತ್ತು ೨) ‘ಹಿಂಬಡ್ತಿ’ಗೊಳಿಸುವ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶ ಪಾಲನೆಗೆ ಮುಖ್ಯ ಕಾರ್ಯದರ್ಶಿಗಳು ತಡೆ ಹಿಡಿದಿದ್ದಾರೆ ಎಂದು ಎಸಿಬಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಉದ್ಯೋಗ ತರಬೇತಿ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರ ಕಾರ್ಯನಿರ್ವಹಣೆಯಲ್ಲಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಹಸ್ತಕ್ಷೇಪ ನಡೆಸಿದ್ದಾರೆ ಎಂಬ ಆರೋಪ ಕುರಿತು ‘ದಿ ಸ್ಟೇಟ್‌’ ವಿಸ್ತೃತ ವರದಿ ಮಾಡಿತ್ತು. ಈ ವರದಿ ಆಧರಿಸಿ ಉದ್ಯೋಗ ತರಬೇತಿ ಇಲಾಖೆಯ ಮಾಜಿ ನೌಕರ ಶಂಕರ್‌ದೇವೇಗೌಡ ಎಂಬುವರು ಎಸಿಬಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇವೆಯಲ್ಲಿರುವಾಗಲೇ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಾಗಿದೆ.

ದೂರು ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ದೂರು ಆಧರಿಸಿ ಪ್ರಾಥಮಿಕ ವಿಚಾರಣೆ ನಡೆಸುವ ಮೊದಲು ‘ಪೂರ್ವಾನುಮತಿ’ಯನ್ನು ಯಾರಿಂದ ಪಡೆಯಬೇಕು ಎಂಬ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ. ಈ ಪ್ರಕರಣದಲ್ಲಿ ‘ಹಿಂಬಡ್ತಿ’ಗೊಳಿಸುವಂತೆ ಸುಪ್ರೀಂ ಕೋರ್ಟ್‌ ೬ ವರ್ಷಗಳ (೨೦೧೨) ಹಿಂದೆಯೇ ಮಧ್ಯಂತರ ಆದೇಶ ನೀಡಿತ್ತು. “ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಲ್ಲಿ ಸೂಚಿಸಿರುವಂತೆ ಕ್ರಮ ವಹಿಸಿ,” ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ಆದರೆ, ಈಗಿನ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು, "ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಬರುವವರೆಗೂ ಯಾವುದೇ ಕ್ರಮ ವಹಿಸಬೇಡಿ,” ಎಂದು ತಡೆಹಿಡಿಯುವ ಮೂಲಕ ಹಸ್ತಕ್ಷೇಪ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

“ಸುಪ್ರೀಂ ಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶಾನುಸಾರ ಇಲಾಖೆಯ ಕಾರ್ಯದರ್ಶಿ ಹಿಂಬಡ್ತಿಗೊಳಿಸಲು ಕ್ರಮ ವಹಿಸಿ ಆದೇಶಿಸಿದ ನಂತರ ಮುಖ್ಯ ಕಾರ್ಯದರ್ಶಿಗಳು ಆ ಆದೇಶವನ್ನು ತಡೆಹಿಡಿಯಿರಿ ಎಂದು ಆದೇಶಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಅವಕಾಶವಿದೆಯೇ? ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ಕ್ರಮ ವಹಿಸಿ ಎಂದು ಆದೇಶಿಸಿದ್ದರೂ ಮುಖ್ಯ ಕಾರ್ಯದರ್ಶಿಗಳು ಉಲ್ಲಂಘಿಸಿದ್ದಾರೆ,” ಎಂದು ದೂರುದಾರ ಶಂಕರ್‌ದೇವೇಗೌಡ ಅವರು ವಿವರಿಸಿದ್ದಾರೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಪಾಲನೆಗೆ ಮುಖ್ಯ ಕಾರ್ಯದರ್ಶಿ ತಡೆ?

ರಾಜ್ಯ ಉದ್ಯೋಗ ಮತ್ತು ತರಬೇತಿ ಇಲಾಖೆಯ ಎಂಜಿನಿಯರಿಂಗ್‌ ಪದವೀಧರರ ಕ್ಷೇಮಾಭಿವೃದ್ಧಿ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. “ಸರ್ವೋಚ್ಚ ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೂ ಕ್ರಮ ಕೈಗೊಳ್ಳಬಾರದು,” ಎಂದು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ಅವರು, "ಅಂತಿಮ ತೀರ್ಪು ಬರುವವರೆಗೂ ಯಾವುದೇ ಕ್ರಮ ವಹಿಸದಿರಿ," ಎಂದು ಇಲಾಖೆಯ ಕಾರ್ಯದರ್ಶಿಗೆ ಏಪ್ರಿಲ್ ೨೧, ೨೦೧೮ರಂದು ಸೂಚಿಸಿದ್ದರು.

ಇದೇ ಪ್ರಕರಣದಲ್ಲಿ ಹಿಂದಿನ ಅಡ್ವೋಕೇಟ್‌ ಜನರಲ್ ರವಿವರ್ಮ ಕುಮಾರ್‌ ಅವರು, "ಬಿಇ ಪದವಿ ಹೊಂದಿದ ತರಬೇತಿ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶ ರಕ್ಷಣೆ ನೀಡಿದೆ. ಬೇರೆ ಪರಿಹಾರ ಬೇಕೆಂದಾದಲ್ಲಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಬಹುದು," ಎಂದು ಆಡಳಿತ ಇಲಾಖೆಗೆ ಸಲಹೆ ನೀಡಿದ್ದರು. ಆದರೂ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ಪಾಲನೆ ಸಂಬಂಧ ಫೆ.೨೭, ೨೦೧೮ರಂದು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. “ಈ ವಿಷಯದ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರು ಈಗಾಗಲೇ ಅಭಿಪ್ರಾಯ ನೀಡಿರುವ ಕಾರಣ ಕಾನೂನು ಇಲಾಖೆ ಪದೇಪದೇ ಇದೇ ವಿಷಯವಾಗಿ ಅಭಿಪ್ರಾಯ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆಡಳಿತ ಇಲಾಖೆ ಕೇಳಿರುವ ಪ್ರಶ್ನೆಯಲ್ಲಿ ಯಾವುದೇ ಕಾನೂನಿನ ಅಂಶ ಇರುವುದು ಕಂಡುಬರುವುದಿಲ್ಲ. ಆದ್ದರಿಂದ ಅಡ್ವೊಕೇಟ್‌ ಜನರಲ್‌ ನೀಡಿರುವ ಅಭಿಪ್ರಾಯದ ಪ್ರಕಾರ ಸೂಕ್ತ ಆಡಳಿತಾತ್ಮಕ ಕ್ರಮವನ್ನು ಜರುಗಿಸುವುದು ಸರಿಯಾದ ಕ್ರಮ,” ಎಂದು ಕಾನೂನು ಇಲಾಖೆ ಅಭಿಪ್ರಾಯ ನೀಡಿದೆ ಎಂದು ಎಸಿಬಿ ಗಮನಕ್ಕೆ ತಂದಿದ್ದಾರೆ.

ಆದರೆ, ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರು ಸುಪ್ರೀಂ ಕೋರ್ಟ್‌ನ ‌ಮಧ್ಯಂತರ ಆದೇಶ ಮತ್ತು ಕಾನೂನು ಇಲಾಖೆಯ ಅಭಿಪ್ರಾಯದ ಪ್ರಕಾರ, ೪೧ ಮಂದಿ ಪ್ರಾಂಶುಪಾಲರುಗಳನ್ನು (ಗ್ರೇಡ್‌ ೨) ಹಿಂಬಡ್ತಿಗೊಳಿಸಲು ಈಗಾಗಲೇ ಕ್ರಮ ವಹಿಸಿದ್ದಾರೆ ಎಂದು ವಿವರಿಸಿದ್ದಾರೆ.

ಪ್ರಕರಣದ ವಿವರ: ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಗಸ್ಟ್ ೨೩, ೧೯೮೫ರ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಪ್ರಾಂಶುಪಾಲರು ದರ್ಜೆ-೨ ಹುದ್ದೆಗಳನ್ನು ಶೇ.೫೦ರಷ್ಟು ನೇರ ಮತ್ತು ಶೇ.೫೦ರಷ್ಟನ್ನು ಫೀಡರ್ ಕೇಡರ್ ಆದ ತರಬೇತಿ ಅಧಿಕಾರಿ ವೃಂದದಿಂದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದಾದ ನಂತರ ಮೇ ೧೩, ೧೯೯೮ರಂದು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸರ್ಕಾರ ಮಾರ್ಪಡಿಸಿತ್ತು. ಅದರಂತೆ, ಪ್ರಾಂಶುಪಾಲರು ದರ್ಜೆ ೨ ಹುದ್ದೆಗೆ ನೇರ ನೇಮಕಾತಿ ಅಡಿಯಲ್ಲಿ ೩೩ ೧/೩ನೇ ಭಾಗ, ತರಬೇತಿ ಅಧಿಕಾರಿಗಳ ಹುದ್ದೆಯಿಂದ ೩೩ ೧/೩ ನೇ ಭಾಗ ಹಾಗೂ ಇಲಾಖೆಯಲ್ಲಿ ಬೋಧಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ತರಬೇತಿ ಅಧಿಕಾರಿ/ಕಿರಿಯ ತರಬೇತಿ ಅಧಿಕಾರಿ/ಸಹಾಯಕ ತರಬೇತಿ ಅಧಿಕಾರಿ ಹುದ್ದೆಯಲ್ಲಿ ಬಿ ಇ ಪದವಿ ಪಡೆದ ಸಿಬ್ಬಂದಿಗೆ ಹುದ್ದೆ ವರ್ಗಾವಣೆ ಆಧಾರದ ಮೇಲೆ ಭರ್ತಿ ಮಾಡಲು ನಿಯಮ ರೂಪಿಸಿತ್ತು

ಆಗಸ್ಟ್ ೨೯, ೨೦೦೦ರಲ್ಲಿ ೧೮ ಮಂದಿ ಅಧಿಕಾರಿಗಳಿಗೆ ಪ್ರಾಂಶುಪಾಲರು ದರ್ಜೆ ೨ ಹುದ್ದೆಗೆ ‘ಹುದ್ದೆ ವರ್ಗಾವಣೆ ಆಧಾರದ ಮೇಲೆ’ ಬಡ್ತಿ ನೀಡಲಾಗಿತ್ತು. ಹಾಗೆಯೇ, ೧೨ ಮಂದಿ ಅಧಿಕಾರಿಗಳಿಗೆ ಏಪ್ರಿಲ್ ೪, ೨೦೦೩ರಲ್ಲಿ, ೧೫ ಮಂದಿ ಅಧಿಕಾರಿಗಳಿಗೆ ಡಿಸೆಂಬರ್ ೨೨, ೨೦೦೬ರಲ್ಲಿ, ೧೭ ಮಂದಿ ಅಧಿಕಾರಿಗಳಿಗೆ ಪ್ರಾಂಶುಪಾಲರು ದರ್ಜೆ ೨ ಹುದ್ದೆಗೆ ಮುಂಬಡ್ತಿ ನೀಡಲಾಗಿತ್ತು. ಫೆ.೨೦, ೨೦೦೮ರಂದು ‘ಹುದ್ದೆ ವರ್ಗಾವಣೆ ಆಧಾರದ ಮೇಲೆ’ ಒಟ್ಟು ೨೪ ಮಂದಿ ಅಧಿಕಾರಿಗಳಿಗೆ ಪ್ರಾಂಶುಪಾಲರು ದರ್ಜೆ ೧ ಹುದ್ದೆಗೆ ನೇರವಾಗಿ ಮುಂಬಡ್ತಿ ನೀಡಲಾಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More