ರಾಹುಲ್ ವಿಚಾರಣೆ ಮೂಲಕ ಮತ್ತೆ ಮುನ್ನೆಲೆಗೆ ಬರಲಿದೆ ಗಾಂಧಿ ಹತ್ಯೆ ವಿಚಾರ

ಗಾಂಧಿ ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಪಾತ್ರವಿದೆ ಎಂಬರ್ಥದಲ್ಲಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮೇಲಿನ ಮಾನನಷ್ಟ ಮೊಕದ್ದಮೆ ವಿಚಾರಣೆ ಆರಂಭವಾಗಿದೆ. ಆರೆಸ್ಸೆಸ್ ಹೂಡಿರುವ ಮೊಕದ್ದಮೆಯಲ್ಲಿ ಅವರು ವಿಚಾರಣೆ ಎದುರಿಸಲು ಮುಂದಾಗಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ

ಆರ್‌ಎಸ್‌ಎಸ್‌ ತಮ್ಮ ಮೇಲೆ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ತಾವು ನಿರ್ದೋಷಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂದಿಯವರು ಕೋರ್ಟ್‌ ಮುಂದೆ ಹೇಳಿಕೆ ನೀಡಿದ್ದು, ಪ್ರಕಣದ ವಿಚಾರಣೆಗೆ ಸಮ್ಮತಿಸಿದ್ದಾರೆ.

೨೦೧೪ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಹಾರಾಷ್ಟ್ರದ ಭಿವಂಡಿಯಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಗಾಂಧಿಯವರು, ಗಾಂಧಿ ಹತ್ಯೆಯ ಸಂಚಿನಲ್ಲಿ ಆರ್‌ಎಸ್‌ಎಸ್‌ ಪಾಲ್ಗೊಂಡಿತ್ತು ಎನ್ನುವ ಅರ್ಥದ ಮಾತುಗಳನ್ನಾಡಿದ್ದರು. ರಾಹುಲ್‌ ಮಾತುಗಳನ್ನು ಆಕ್ಷೇಪಿಸಿ ಆರ್‌ಎಸ್‌ಎಸ್‌ ಮುಖಂಡರಾದ ರಾಜೇಶ್‌ ಕುಂಟೆ ಎನ್ನುವವರು, “ರಾಹುಲ್‌ ಮಾತುಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿಷ್ಠೆಗೆ ಧಕ್ಕೆಯುಂಟಾಗಿದೆ,” ಎಂದು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೬ರಲ್ಲಿ ರಾಹುಲ್‌ ಅವರು ಜಾಮೀನು ಪಡೆದಿದ್ದರು.

ಪ್ರಕರಣದ ವಿಚಾರಣೆಗೆಂದು ಭಿವಂಡಿ ನ್ಯಾಯಾಲಯಕ್ಕೆ ಆಗಮಿಸಿ ಕಟಕಟೆಯಲ್ಲಿ ನಿಂತ ರಾಹುಲ್‌ ಅವರನ್ನು ನ್ಯಾಯಾಧೀಶರಾದ ಅಲ್‌ ಶೇಖ್‌ ಅವರು, “ಭಿವಂಡಿಯಲ್ಲಿ ಮಾರ್ಚ್‌ ೬, ೨೦೧೪ರಂದು ಆಯೋಜಿಸಿದ್ದ ಸಮಾವೇಶವೊಂದರಲ್ಲಿ ನೀವು ಸಂಘದ ಪ್ರತಿಷ್ಠೆಗೆ ಧಕ್ಕೆ ತಂದಿದ್ದಿರಿ. ನೀವು ಮಾಡಿದ ಭಾಷಣವು ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ವರದಿಯಾಗುವ ಮೂಲಕ ಅರ್ಜಿದಾರರು ಮತ್ತವರ ಸಂಘಟನೆಗೆ ಮಾನಹಾನಿ ಉಂಟುಮಾಡಿತ್ತು. ಆ ಮೂಲಕ, ನೀವು ಭಾರತೀಯ ದಂಡಸಂಹಿತೆಯ ೪೯೯ ಮತ್ತು ೫೦೦ನೇ ಸೆಕ್ಷನ್‌ ಅಡಿಯಲ್ಲಿ ಅಪರಾಧ ಎಸಗಿರುತ್ತೀರಿ. ಈ ಪ್ರಕರಣದಲ್ಲಿ ನೀವು ದೋಷಿ ಎಂದು ಒಪ್ಪಿಕೊಳ್ಳುತ್ತೀರಾ?” ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ರಾಹುಲ್‌ ಗಾಂಧಿಯವರು, “ನಾನು ನಿರ್ದೋಷಿ” ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಈ ಮೊದಲು ೨೦೧೬ರಲ್ಲಿ ರಾಹುಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಮೇಲಿರುವ ಮೊಕದ್ದಮೆಯನ್ನು ವಜಾ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ನಂತರ ಮನಸ್ಸು ಬದಲಿಸಿ, ಪ್ರಕರಣದಲ್ಲಿ ವಿಚಾರಣೆಗೊಳಗಾಗಲು ತಾವು ಸಿದ್ಧ ಎಂದು ತಿಳಿಸಿ ಅರ್ಜಿಯನ್ನು ಹಿಂಪಡೆದಿದ್ದರು. ಪ್ರಕರಣದ ಸಂಬಂಧ ಆರ್‌ಎಸ್‌ಎಸ್‌ ಕೂಡ‌, “ಒಂದು ವೇಳೆ ರಾಹುಲ್‌ ಅವರು ಸಾರ್ವಜನಿಕವಾಗಿ ಮಹಾತ್ಮ ಗಾಂಧಿಯವರ ಹತ್ಯೆಗೆ ಸಂಘ ಕಾರಣವಲ್ಲವೆಂದು ಹೇಳಿದರೆ ಅವರ ವಿರುದ್ಧ ಮೊಕದ್ದಮೆಯನ್ನು ಕೈಬಿಡಲಾಗುವುದು,” ಎಂದು ಕೋರ್ಟ್‌ಗೆ ತಿಳಿಸಿತ್ತು. ಇದಕ್ಕೆ ಒಪ್ಪದ ರಾಹುಲ್‌, “ತಮ್ಮ ಆಯ್ಕೆ ಅದಲ್ಲ,” ಎಂದು ಹೇಳುವ ಮೂಲಕ ವಿಚಾರಣೆ ಎದುರಿಸಲು ಮುಂದಾದರು. “ನಾನು ಹೇಳಿದ ಪ್ರತಿಯೊಂದು ಪದಕ್ಕೂ ಹೊಣೆಗಾರನಾಗಿರುತ್ತೇನೆ. ನನ್ನ ಮಾತನ್ನು ಹಿಂಪಡೆಯುವುದಿಲ್ಲ. ವಿಚಾರಣೆಯನ್ನು ಎದುರಿಸಲು ನಾನು ಸಿದ್ಧ,” ಎಂದಿದ್ದರು. ಆನಂತರದ ದಿನಗಳಲ್ಲಿ ರಾಹುಲ್‌ ಅವರು ಆರ್‌ಎಸ್‌ಎಸ್‌ ಅನ್ನು ವಿವಿಧ ಸಂದರ್ಭಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು | ೧೩ | ಸಂಚುಕೋರರ ಆಮಂತ್ರಣದಲ್ಲಿ ಗೋಡ್ಸೆ ದೇಶಭಕ್ತ!

ಮುಂದಿನ ದಿನಗಳಲ್ಲಿ ಪ್ರಕರಣದ ವಿಚಾರಣೆಯ ವೇಳೆ ರಾಹುಲ್‌ ಅವರು ಆರ್ಎಸ್‌ಎಸ್‌ನ ವಿರುದ್ಧ ಮಾಡಿರುವ ಆರೋಪವನ್ನು ಹೇಗೆ ಸಮರ್ಥಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲದ ವಿಷಯವಾಗಿದೆ. ವಿಚಾರಣೆಗೆ ಒಳಗಾಗುವ ಮೂಲಕ ರಾಹುಲ್‌ ಅವರು ಗಾಂಧಿ ಹತ್ಯೆಯ ಕುರಿತ ವಿಷಯವನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ತಂದಿದ್ದಾರೆ.

ನ್ಯಾಯಾಲಯಕ್ಕೆ ಹಾಜರಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್‌, “ಪ್ರಧಾನಿ ಮೋದಿಯವರು ಬೆಲೆ ಏರಿಕೆಯ ಬಗ್ಗೆಯಾಗಲಿ, ಹಣದುಬ್ಬರದ ಬಗ್ಗೆಯಾಗಲಿ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ಆದರೆ, ನನ್ನ ವಿರುದ್ಧ ಮಾತ್ರ ಪದೇಪದೇ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ನನ್ನ ಹೋರಾಟವು ತಾತ್ವಿಕವಾಗಿದ್ದು, ನಾನು ಇದೆಲ್ಲದರ ವಿರುದ್ಧ ಹೋರಾಡಲಿದ್ದೇನೆ, ಗೆಲ್ಲಲಿದ್ದೇನೆ,” ಎಂದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More