ಶೇ.5 ಸಮೀಪಿಸಿದ ಮೇ ತಿಂಗಳ ಹಣದುಬ್ಬರ; ಕೈಗಾರಿಕಾ ಉತ್ಪನ್ನ ಚೇತರಿಕೆ

ಭಾರತದ ಆರ್ಥಿಕತೆಗೆ ಒಂದು ಸಿಹಿ ಸುದ್ದಿ ಮತ್ತು ಕಹಿ ಸುದ್ದಿ ಎರಡನ್ನೂ ಕೇಂದ್ರೀಯ ಸಾಂಖ್ಯಿಕ ಕಚೇರಿ ನೀಡಿದೆ. ಕೈಗಾರಿಕಾ ಉತ್ಪಾದನೆ ಪ್ರಮಾಣ ಹೆಚ್ಚಿರುವುದು ಸಿಹಿ ಸುದ್ದಿಯಾದರೆ, ಹಣದುಬ್ಬರ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೇರಿರುವುದು ಕಹಿ ಸುದ್ಧಿ. ಹಣದುಬ್ಬರ ಆರ್‌ಬಿಐ ಮಿತಿಯ ಗುರಿಯನ್ನು ದಾಟಿದೆ

ಚಿಲ್ಲರೆದರ ಹಣದುಬ್ಬರ ಮೇ ತಿಂಗಳಲ್ಲಿ ಶೇ.4.87ಕ್ಕೆ ಏರಿದೆ. ಇದು ಕಳೆದ ನಾಲ್ಕು ತಿಂಗಳಲ್ಲೇ ಗರಿಷ್ಠ ಹಣದುಬ್ಬರ. ಕಳೆದ ತಿಂಗಳು ಶೇ.4.58ರಷ್ಟಿದ್ದ ಹಣದುಬ್ಬರವು ಮೇ ತಿಂಗಳಲ್ಲಿ 0.29ರಷ್ಟು ಹೆಚ್ಚಳವಾಗಿದೆ. ಮಂಗಳವಾರ ಕೇಂದ್ರ ಸರ್ಕಾರ ಹಣದುಬ್ಬರ ಕುರಿತಾದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಹಣದುಬ್ಬರ ಏರಿಕೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಮತ್ತು ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತವೇ ಕಾರಣ ಎಂದು ತಿಳಿಸಿದೆ.

ಏಪ್ರಿಲ್ ತಿಂಗಳ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.4.9ಕ್ಕೆ ಏರಿದೆ. ಮಾರ್ಚ್ ತಿಂಗಳಲ್ಲಿ ಶೇ.4.4 ರಷ್ಟಿತ್ತು. ಏಪ್ರಿಲ್ ತಿಂಗಳಲ್ಲಿ ಶೇ.0.5ರಷ್ಟು ಹೆಚ್ಚಿದೆ. ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಇದು ಸಕಾರಾತ್ಮಕ ಬೆಳವಣಿಗೆ. ರಾಯ್ಟರ್ ಮೇ ತಿಂಗಳ ಚಿಲ್ಲರೆದರ ಹಣದುಬ್ಬರದ ಬಗ್ಗೆ 30 ಅರ್ಥಶಾಸ್ತ್ರಜ್ಞರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಬಹುತೇಕ ಮಂದಿ ಶೇ.4.83ರಷ್ಟಿರುತ್ತದೆ ಎಂದು ತಿಳಿಸಿದ್ದರು.

ಮಾರ್ಚ್ ತಿಂಗಳಲ್ಲಿ ಶೇ.4.28ರಷ್ಟಿದ್ದ ಚಿಲ್ಲರೆದರ ಹಣದುಬ್ಬರವು ಏಪ್ರಿಲ್‌ನಲ್ಲಿ ಕೊಂಚ ಏರುಹಾದಿಯಲ್ಲಿ ಸಾಗಿ ಶೇ.4.58ರಷ್ಟು ದಾಖಲಾಗಿತ್ತು. ಫೆಬ್ರವರಿಯಲ್ಲಿ ಶೇ.4.44ರಷ್ಟಿತ್ತು. ಜನವರಿಯಲ್ಲಿ ಶೇ.5.07ಕ್ಕೇರಿತ್ತು.

ದರ ಏರಿಕೆ ಒತ್ತಡದ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಹಣದುಬ್ಬರ ಮಿತಿಯ ಗುರಿಯನ್ನು ಹಿಗ್ಗಿಸಿತ್ತು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.4.7ರಷ್ಟಾಗುತ್ತದೆಂದು ಅಂದಾಜಿಸಿದೆ. ಮುಂದಿನ ವಿತ್ತೀಯ ವರ್ಷದಲ್ಲಿ ಹಣದುಬ್ಬರ ಶೇ.4.4ರಷ್ಟಿರುತ್ತದೆ ಎಂಬ ಅಂದಾಜು ಆರ್‌ಬಿಐನದಾಗಿದೆ.

ನಾಲ್ಕೂವರೆ ವರ್ಷಗಳ ನಂತರ ಇದೇ ಮೊದಲ ಬಾರಿಗೆ ರೆಪೊದರವನ್ನು ಶೇ.0.25ರಷ್ಟು ಹೆಚ್ಚಿಸಿದೆ. ಪ್ರಸ್ತುತ ರೆಪೊದರ ಶೇ.6.25ರಷ್ಟಾಗಿದೆ. ಬರುವ ದಿನಗಳಲ್ಲಿ ದರ ಏರಿಕೆಯಿಂದಾಗಿ ಹಣದುಬ್ಬರ ಹೆಚ್ಚಳವಾಗುವುದನ್ನು ನಿಯಂತ್ರಿಸಲು ಬಡ್ಡಿದರ ಏರಿಸಿದೆ. ಸದ್ಯಕ್ಕೆ ತಟಸ್ಥ ಬಡ್ಡಿದರ ನೀತಿಯನ್ನು ಆರ್ಬಿಐ ಅಳವಡಿಸಿಕೊಂಡಿದೆ. ತಟಸ್ಥ ನೀತಿ ಎಂದರೆ ಬರುವ ದಿನಗಳಲ್ಲಿ ಬೆಲೆ ಏರಿಕೆ, ಹಣದುಬ್ಬರ ಮತ್ತು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಡ್ಡಿದರ ಏರಿಸಲೂ ಬಹುದು ಅಥವಾ ಇಳಿಸಲೂ ಬಹುದಾಗಿರುತ್ತದೆ.

ಇದನ್ನೂ ಓದಿ : ಡಿಸೆಂಬರ್ ತಿಂಗಳ ಹಣದುಬ್ಬರ ಶೇ.5.2ಕ್ಕೆ ಏರಿಕೆ, ಐಐಪಿ ಶೇ.8.4ಕ್ಕೆ ಜಿಗಿತ

ಕೇಂದ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಉತ್ಪಾದನಾ ವಲಯವು ಶೇ.5.2ರಷ್ಟು ಹೆಚ್ಚಳವಾಗಿದ್ದರೆ, ವಿದ್ಯುತ್ ಉತ್ಪಾದನೆಯು ಶೇ.2.1ರಷ್ಟಕ್ಕೆ ಕುಗ್ಗಿದ್ದು ಒಟ್ಟಾರೆ ಕೈಗಾರಿಕಾ ಉತ್ಪನ್ನ ಸೂಚ್ಯಂಕ ಮತ್ತಷ್ಟು ಏರುವುದನ್ನು ತಗ್ಗಿಸಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ಅರ್ಧವಾರ್ಷಿಕ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ, ಜಿಎಸ್ಟಿ ಜಾರಿ ಮತ್ತು ಖಾಸಗಿವಲಯದ ಹೂಡಿಕೆಯಿಂದಾಗಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ. 2018-19ರಲ್ಲಿ ಆರ್ಥಿಕ ಅಭಿವೃದ್ಧಿಯು ಸೇ.7.4ರಷ್ಟಾಗಲಿದೆ ಎಂದು ಅಂದಾಜಿಸಿದೆ. ಏಷಿಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ವಿಶ್ವ ಬ್ಯಾಂಕ್ 2017-18ರಲ್ಲಿ ಶೇ.7.3ರಷ್ಟು ಆರ್ಥಿಕ ಅಭಿವೃದ್ಧಿ ದಾಖಲಿಸಲಿದೆ ಎಂದು ಅಂದಾಜಿಸಿದ್ದವು. ಆದರೆ, ವಾಸ್ತವಿಕ ಆರ್ಥಿಕ ಅಭಿವೃದ್ಧಿ ಶೇ.6.6ರಷ್ಟಾಗಿದೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More