ಇಂದಿನ ಡೈಜೆಸ್ಟ್ | ನೀವು ಓದಲೇಬೇಕಾದ 9 ಪ್ರಮುಖ ಇತರ ಸುದ್ದಿಗಳು

ನೀವು ತಪ್ಪಿಸಿಕೊಂಡಿರಬಹುದಾದ ಮತ್ತು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ   

ಗೌರಿ ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿಯ ಬಂಧನ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಮಂಗಳವಾರ ಎಸ್‌ಐಟಿ ಬಂಧಿಸಿದೆ. ಪರಶುರಾಮ್‌ ವಾಗ್ಮೋರೆ ಬಂಧಿತ ವ್ಯಕ್ತಿ. ಈತನನ್ನು ಎಸ್‌ಐಟಿ ತಂಡ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಮಂಗಳವಾರ ಬಂಧಿಸಲಾಗಿದೆ. ಬಂಧನದ ಬಳಿಕ, 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯ ಹೆಚ್ಚಿನ ವಿಚಾರಣೆಗೆ 14 ದಿನಗಳ ವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಬಂಧಿತ ಆರೋಪಿಯು ಹಿಂದೂತ್ವ ಪರ ಒಲವು ಹೊಂದಿದ್ದು, ಈ ಹಿಂದೆ ಟೈಗರ್‌ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದನೆಂದು ಹೇಳಲಾಗಿದೆ.

ಆರ್‌ಬಿಐ ಪ್ರತಿನಿಧಿ ಬ್ಯಾಂಕ್ ಆಡಳಿತ ಮಂಡಳಿಗೆ ಬೇಡ: ಊರ್ಜಿತ್ ಪಟೇಲ್

ಸಾರ್ವಜನಿಕ ವಲಯದ ಬ್ಯಾಂಕುಗಳ ಆಡಳಿತ ಮಂಡಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿನಿಧಿಗಳು ಇರಬಾರದು ಎಂದು ಗವರ್ನರ್ ಊರ್ಜಿತ್ ಪಟೇಲ್ ಪ್ರತಿಪಾದಿಸಿದ್ದಾರೆ. ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಲು ಆರ್ಬಿಐ ಪ್ರತಿನಿಧಿಗಳನ್ನು ಬ್ಯಾಂಕ್ ಆಡಳಿತದಿಂದ ದೂರ ಇಡುವುದು ಸೂಕ್ತ ಎಂಬುದು ಊರ್ಜಿತ್ ಪಟೇಲ್ ನಿಲವು. ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಮುಂದೆ ವಿವಿಧ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿರುವ ಊರ್ಜಿತ್ ಪಟೇಲ್, ಸಾಲ ನೀಡುವ ನಿರ್ಧಾರ ಕೈಗೊಳ್ಳುವ ಆಡಳಿತ ಮಂಡಳಿಯಿಂದ ಆರ್ಬಿಐ ಪ್ರತಿನಿಧಿ ದೂರ ಇರುವುದು ಸೂಕ್ತ ಎಂದು ತಿಳಿಸಿದ್ದಾರೆ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಗಳ ಕುರಿತಂತೆ ಸಮಿತಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು ಅಧ್ಯಕ್ಷರಾಗಿರುವ ಸಂಸದೀಯ ಹಣಕಾಸು ಸ್ಥಾಯಿ ಸಮಿತಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ವಿವಿಧ ಪಕ್ಷಗಳ ಪ್ರತಿನಿಧಿಗಳಿದ್ದಾರೆ.

ಚೀನಾದಲ್ಲಿ ದಿನಕ್ಕೆ ೫೦,೦೦೦ ಜನರಿಗೆ ಉದ್ಯೋಗ ಸೃಷ್ಟಿ; ಭಾರತದಲ್ಲಿ ೪೫೦ ಮಂದಿಗೆ!

ಮಹಾರಾಷ್ಟ್ರದ ಗುರಗಾಂವ್‌ನಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಸರ್ಕಾರದ ಸಾಧನೆಯನ್ನು ಟೀಕೆ ಮಾಡಿದ್ದಾರೆ. ಚೀನಾದಲ್ಲಿ ದಿನಕ್ಕೆ ೫೦,೦೦೦ ಜನರಿಗೆ ಉದ್ಯೋಗ ಸೃಷ್ಟಿಸಲಾಗುತ್ತಿದೆ, ಆದರೆ ಭಾರತದಲ್ಲಿ ಬಿಜೆಪಿ ಸರ್ಕಾರ ದಿನಕ್ಕೆ ೪೫೦ ಜನರಿಗೆ ಮಾತ್ರ ಉದ್ಯೋಗ ಸೃಷ್ಟಿಸುತ್ತಿದೆ ಎಂದಿದ್ದಾರೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇರುವುದರಿಂದ ಮೋದಿ ಸರ್ಕಾರ ಟೀಕೆಗೆ ಒಳಗಾಗುತ್ತಲೇ ಇದೆ.

ಪಾಲಿ ಉಮ್ರೀಗರ್ ಪ್ರಶಸ್ತಿ ಪಡೆದ ಕೊಹ್ಲಿ

ಕಳೆದೆರಡು (2016-17 ಹಾಗೂ ೨೦೧೭-೧೮) ಸಾಲಿನಲ್ಲಿ ನೀಡಿದ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಪ್ರತಿಷ್ಠಿತ ಪಾಲಿ ಉಮ್ರೀಗರ್ ಪ್ರಶಸ್ತಿಯನ್ನು ಮಂಗಳವಾರ (ಜೂನ್ ೧೨) ಪಡೆದರು. ಬೆಂಗಳೂರಿನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಂತೆಯೇ, ಮಹಿಳಾ ವಿಭಾಗದಲ್ಲಿ ಇತ್ತೀಚೆಗಷ್ಟೇ ಮುಗಿದ ಏಷ್ಯಾ ಟಿ೨೦ ಕಪ್‌ನಲ್ಲಿ ಭಾರತ ವನಿತಾ ತಂಡವನ್ನು ರನ್ನರ್‌ಅಪ್ ಸ್ಥಾನದತ್ತ ಮುನ್ನಡೆಸಿದ ಹರ್ಮನ್‌ಪ್ರೀತ್ ಕೌರ್ ಮತ್ತು ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಕ್ರಮವಾಗಿ ೨೦೧೬-೧೭ ಮತ್ತು ೨೦೧೮ನೇ ಸಾಲಿನಲ್ಲಿ ತೋರಿದ ಅಪ್ರತಿಮ ಪ್ರದರ್ಶನಕ್ಕಾಗಿ ಸಮಾನ ಗೌರವಕ್ಕೆ ಭಾಜನರಾದರು. ಇವರುಗಳಲ್ಲದೆ, ಕಳೆದೆರಡು ಸಾಲಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಕ್ರಿಕೆಟಿಗರುಗಳನ್ನು ಬಿಸಿಸಿಐ ಸನ್ಮಾನಿಸಿತು.

ಫ್ರೆಂಚ್ ಓಪನ್‌ಗೆ ನಡಾಲ್ ಅಲಭ್ಯ?

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಪ್ರತಿಷ್ಠಿತ ಫ್ರೆಂಚ್ ಓಪನ್‌ನಲ್ಲಿ ೧೧ನೇ ಬಾರಿಗೆ ಪ್ರಶಸ್ತಿ ಗೆದ್ದ ವಿಶ್ವದ ನಂ ೧ ಆಟಗಾರ ರಾಫೆಲ್ ನಡಾಲ್ ಮುಂಬರಲಿರುವ ವಿಂಬಲ್ಡನ್ ಟೂರ್ನಿಯಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ಈ ಋತುವಿನ ಗಟ್ಟಿ ಅಂಕಣದ ಟೂರ್ನಿಗಳಲ್ಲಿ ಆಡಿರುವ ನನ್ನ ದೇಹ ಸಾಕಷ್ಟು ಬಳಲಿದ್ದು, ವಿಂಬಲ್ಡನ್ ಹೊತ್ತಿಗೆ ಹೇಗೆ ದೇಹ ಸ್ಪಂದಿಸುತ್ತದೆ ಎಂಬುದರ ಮೇಲೆ ಲಂಡನ್ ಟೂರ್ನಿಯಲ್ಲಿನ ನನ್ನ ಇರುವಿಕೆ ನಿರ್ಧರಿತವಾಗಲಿದೆ,'' ಎಂದು ಹದಿನೇಳು ಗ್ರಾಂಡ್‌ಸ್ಲಾಮ್‌ಗಳ ಒಡೆಯ ನಡಾಲ್ ತಿಳಿಸಿದ್ದಾರೆ. "ಗಾಯದ ಸಮಸ್ಯೆಯಿಂದ ಬಂದ ಬಳಿಕ ನಾನು ಬಹುಪಾಲು ಗಟ್ಟಿ ಅಂಕಣದ ಟೂರ್ನಿಯಲ್ಲಿ ಆಡಿದ್ದೇನೆ. ದೈಹಿಕವಾಗಿ ಪೂರ್ಣ ಪ್ರಮಾಣದ ಕ್ಷಮತೆ ಸಾಧಿಸದ ಹೊರತು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆಡುವುದು ತರವಲ್ಲ,'' ಎಂತಲೂ ೩೨ರ ಹರೆಯದ ನಡಾಲ್ ಅಭಿಪ್ರಾಯಿಸಿದ್ದಾರೆ.

ವಾಜಪೇಯಿ ಆರೋಗ್ಯ ವಿಚಾರಿಸಿದ ದೇವೇಗೌಡ, ಮನಮೋಹನ್‌ ಸಿಂಗ್‌

ದೆಹಲಿಯ ಏಮ್ಸ್‌ನಲ್ಲಿ ದಾಖಲಾಗಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಮಂಗಳವಾರ ಮಾಜಿ ಪ್ರಧಾನಿಗಳಾದ ಎಚ್‌ ಡಿ ದೇವೇಗೌಡ ಹಾಗೂ ಮನಮೋಹನ್‌ ಸಿಂಗ್ ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ವಾಜಪೇಯಿ ಅವರು ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಆನಂತರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಏಮ್ಸ್‌ಗೆ ಭೇಟಿ ನೀಡಿದ್ದರು.

ಏರ್‌ಟೆಲ್ ಎಕ್ಸಿಸ್ ಹಗರಣ: ಮಾರನ್ ಸಹೋದರರರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ತಮ್ಮ ಮನೆಗೆ ಅತಿ ವೇಗದ 764 ಡೇಟಾ ಲೈನ್‌ಗಳ ಸಂಪರ್ಕ ಕಲ್ಪಿಸಿ ಅವುಗಳನ್ನು ಖಾಸಗಿ ಟಿವಿ ಚಾನೆಲ್‌ಗಾಗಿ ದುರ್ಬಳಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಮತ್ತು ಅವರ ಸಹೋದರ, ಸನ್‌ ಟಿವಿ ನೆಟ್‌ವರ್ಕ್‌ ಲಿಮಿಟೆಡ್‌ನ ನಿರ್ವಹಣಾ ನಿರ್ದೇಶಕ (ಎಂಡಿ) ಕಲಾನಿಧಿ ಮಾರನ್ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಸಂಬಂಧ, ಮಾರನ್ ಸಹೋದರರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಐದು ದಿನದಲ್ಲಿ 10 ಕೋಟಿ ರುಪಾಯಿ ಗಳಿಸಿದ ‘ಕಾಲ’

ವಿವಾದ, ಕುತೂಹಲಗಳಿಂದಾಗಿ ‘ಕಾಲ’ ಚಿತ್ರದ ಸುದ್ದಿಯಲ್ಲಿತ್ತು. ಕಳೆದ ವಾರ ಬಿಡುಗಡೆ ಕಂಡ ರಜನಿಕಾಂತ್‌ ನಟನೆಯ 'ಕಾಲ' ಚಿತ್ರ ಮೊದಲೆರಡು ದಿನ ಉತ್ತಮ ಪ್ರದರ್ಶನ ಕಂಡರೂ ಗಳಿಸಿದ್ದು ಕಡಿಮೆ. ಆದರೆ, ೫ನೇ ದಿನದ ಹೊತ್ತಿಗೆ ಚೆನ್ನೈವೊಂದರಲ್ಲೇ ೭ ಕೋಟಿ ರು. ಗಳಿಸುವ ಮೂಲಕ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಲಾರಂಭಿಸಿದೆ. ವಿದೇಶದಲ್ಲೂ ಪ್ರದರ್ಶನ ಕಂಡಿರುವ ಚಿತ್ರ, ಆಸ್ಟ್ರೇಲಿಯಾದಲ್ಲಿ ವಾರಾಂತ್ಯದಲ್ಲಿ ೨ ಕೋಟಿ ಗಳಿಸಿದೆ. ‘ಪದ್ಮಾವತ್‌’ ಚಿತ್ರದ ನಂತರ ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರವೆಂಬ ಹೆಗ್ಗಳಿಕೆ ಕಾಲನಿಗೆ ಸಂದಿದೆ.

ಒಂದು ಮನೆಯಲ್ಲಿ ಇಬ್ಬರು ಮಕ್ಕಳಿರಬೇಕು: ಗೋವಾ ರಾಜ್ಯಪಾಲೆ

ಒಂದು ಮನೆಯಲ್ಲಿ ಒಂದೇ ಮಗು ಸಾಲದು, ಇಬ್ಬರು ಮಕ್ಕಳಿರಬೇಕು ಎಂದು ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. ಬೆಳಗಾವಿಯ ಜವಹರಲಾಲ್‌ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಮಾತನಾಡಿದ ಅವರು, "ಇಬ್ಬರು ಮಕ್ಕಳಿದ್ದರೆ ಹಂಚಿಕೊಂಡು ತಿನ್ನುವುದನ್ನು ಕಲಿಯುತ್ತವೆ,” ಎಂದು ಪ್ರತಿಪಾದಿಸಿದ್ದಾರೆ. "ಜೀವನದಲ್ಲಿ ಪ್ರೀತಿಯಷ್ಟೇ ಇರಬೇಕಾಗಿಲ್ಲ; ದ್ವೇಷವೂ ಬೇಕಾಗುತ್ತದೆ. ಮಹಿಳೆಯರು ವಿವಾಹ ವಿಚ್ಛೇದನ ಪಡೆದುಕೊಳ್ಳಬಾರದು,” ಎಂದೂ ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More