ಜಯನಗರದಲ್ಲಿ ಕಾಂಗ್ರೆಸ್‌ನ ಸೌಮ್ಯರೆಡ್ಡಿಗೆ ಜಯ; ಬಿಜೆಪಿ ಅಧಿಪತ್ಯಕ್ಕೆ ತೆರೆ

ಬಿಜೆಪಿಯ ಬಿ ಎನ್‌ ವಿಜಯಕುಮಾರ್‌ ನಿಧನದಿಂದ ಮುಂದೂಡಲ್ಪಟ್ಟಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ೨,೮೮೯ ಮತಗಳಿಂದ ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಠೇವಣಿ ಕಳೆದುಕೊಂಡಿದ್ದಾರೆ

ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸೌಮ್ಯರೆಡ್ಡಿ ೨,೮೮೯ ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ಖಾತ್ರಿಯಾಗುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಕಾಂಗ್ರೆಸ್‌ ಗೆಲುವಿನೊಂದಿಗೆ ಜಯನಗರದಲ್ಲಿ ಬಿಜೆಪಿಯ ಅಧಿಪತ್ಯ ಕಂಡಿದೆ. ಬಿಜೆಪಿ ಅಭ್ಯರ್ಥಿ ಬಿ ಎನ್‌ ವಿಜಯಕುಮಾರ್‌ ನಿಧನದಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು. ಅನುಕಂಪದ ಲಾಭ ಪಡೆಯಲು ಬಿಜೆಪಿಯು ವಿಜಯಕುಮಾರ್‌ ಅವರ ಸಹೋದರ ಬಿ ಎನ್‌ ಪ್ರಹ್ಲಾದ್‌ ಅವರನ್ನು ಕಣಕ್ಕಿಳಿಸಿತ್ತು.

ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ೫೪, ೪೫೭ ಮತ ಪಡೆದಿದ್ದು, ಬಿಜೆಪಿ ಪ್ರಹ್ಲಾದ್‌ ೫೧,೫೬೮ ಮತ ಪಡೆದಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾ ರೆಡ್ಡಿ ಅವರು ೧,೮೬೧ ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿದ್ದ ರವಿ ಕೃಷ್ಣಾ ರೆಡ್ಡಿ ಅವರಿಗೆ ಅಲ್ಲಿನ ಮತದಾರರು ಬೆಂಬಲ ಸೂಚಿಸಿಲ್ಲ.

ಇದನ್ನೂ ಓದಿ : ಬಿಜೆಪಿ-ಕಾಂಗ್ರೆಸ್‌-ರವಿ ಜಿದ್ದಾಜಿದ್ದಿಯಲ್ಲಿ ‘ಜಯ’ನಗರ ಯಾರ ಪಾಲಿಗೆ?

ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ ಅವರ ಪುತ್ರಿಯಾದ ಸೌಮ್ಯ ರೆಡ್ಡಿ ಅವರು ಮೊದಲ ಪ್ರಯತ್ನದಲ್ಲೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿರುವ ಅವರು, ‘ರಾಮಲಿಂಗಾ ರೆಡ್ಡಿ ಅವರಿಗೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು’ ಎಂದು ಹೇಳಿದ್ದಾರೆ.

೨೦೦೮ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ನಂತರ ಬಿಜೆಪಿಯ ಬಿ ಎನ್‌ ವಿಜಯಕುಮಾರ್‌ ಆಯ್ಕೆಯಾಗಿದ್ದರು. ಈ ಫಲಿತಾಂಶದೊಂದಿಗೆ ೨೨೪ ಸ್ಥಾನ ಬಲದ ವಿಧಾನಸಭೆಯಲ್ಲಿ ಜಯನಗರ ಕ್ಷೇತ್ರದಲ್ಲಿನ ಗೆಲುವಿನೊಂದಿಗೆ ಕಾಂಗ್ರೆಸ್‌ ತನ್ನ ಬಲವನ್ನು ೭೯ಕ್ಕೆ ಏರಿಸಿಕೊಂಡಿದೆ. ಬಿಜೆಪಿ ೧೦೪ ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿದೆ. ಜೆಡಿಎಸ್‌ ೩೭ ಶಾಸಕರ ಬಲ ಹೊಂದಿದೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More