ಪ್ರಧಾನಿ ಮೋದಿ ಅಪನಗದೀಕರಣ ಯೋಜನೆ ವಿಫಲ ಎನ್ನುತ್ತಿವೆ ಆರ್‌ ಬಿ ಐ ಅಂಕಿ ಅಂಶಗಳು!

ನವೆಂಬರ್ 8ಕ್ಕೆ ಎರಡು ವರ್ಷ ತುಂಬುವ ಅಪನಗದೀಕರಣ ಯೋಜನೆ ದೇಶಕ್ಕೆ ಮಾಡಿದ ಆರ್ಥಿಕ ಅಭಿವೃದ್ಧಿ ನಷ್ಟದ ಮೊತ್ತ ಅಂದಾಜು 4 ಲಕ್ಷ ಕೋಟಿ ರುಪಾಯಿಗಳು. ನಾಲ್ಕು ಲಕ್ಷ ಕೋಟಿ ರುಪಾಯಿಗಳು ಎಂದರೆ ನಮ್ಮ ಕರ್ನಾಟಕ ರಾಜ್ಯದ ಎರಡು ವರ್ಷಗಳ ಬಜೆಟ್‌ಗಾಗುವಷ್ಟು ಬೃಹತ್ ಮೊತ್ತ!

ಪ್ರಧಾನಿ ನರೇಂದ್ರಮೋದಿ ಅವರು ಜಾರಿಗೆ ತಂದ ಅತಿ ಮಹತ್ವದ ಸುಧಾರಣಾ ಕ್ರಮವಾದ ಅಪನಗದೀಕರಣ ವೈಫಲ್ಯಗೊಂಡಿದೆ. ಹಾಗಂತ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿಅಂಶಗಳೇ ಹೇಳುತ್ತಿವೆ. ನಗದು ಪ್ರಮಾಣ ತಗ್ಗಿಸುವ ಮಹಾತ್ವಾಕಾಂಕ್ಷೆಯಿಂದ ಪ್ರಧಾನಿ ನರೇಂದ್ರಮೋದಿ ಅವರು 2016 ನವೆಂಬರ್ 8 ರಂದು 500 ಮತ್ತು 1000 ರುಪಾಯಿ ನೋಟುಗಳ ಚಲಾವಣೆ ರದ್ದು ಮಾಡುವ ಅಪನಗದೀಕರಣ ಯೋಜನೆಯನ್ನು ಘೋಷಿಸಿದರು.

ಪ್ರಧಾನಿ ಮೋದಿ ಅಪನಗದೀಕರಣ ಯೋಜನೆ ಜಾರಿ ಮಾಡಲು ಮುಖ್ಯ ಕಾರಣ ಅವರೇ ಹೇಳಿಕೊಂಡಂತೆ- ಕಪ್ಪು ಹಣ ನಿಗ್ರಹಿಸುವುದು, ನಗದು ವಹಿವಾಟು ತಗ್ಗಿಸುವುದು, ನಕಲಿ ನೋಟುಗಳನ್ನು ನಿಯಂತ್ರಿಸುವುದು ಮತ್ತು ಇಡೀ ದೇಶವನ್ನು ಡಿಜಿಟಲ್ ಆರ್ಥಿಕತೆಯನ್ನಾಗಿ ಪರಿವರ್ತಿಸುವುದಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲಾ ನಾಲ್ಕೂ ಗುರಿಗಳು ವಿಫಲವಾಗಿವೆ.

ಅಪನಗದೀಕರಣದಿಂದ ಕಪ್ಪು ಹಣ ನಿಯಂತ್ರಣಕ್ಕೆ ಬರುತ್ತದೆ. ರದ್ದು ಮಾಡಿದ ಹಣದ ಪೈಕಿ ಶೇ.25ರಷ್ಟಾದರೂ ಕಪ್ಪು ಹಣವಿದ್ದು ಅದನ್ನು ನಿಗ್ರಹಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಪ್ರಧಾನಿ ಮೋದಿ ಅವರದ್ದಾಗಿತ್ತು. ಅವರ ಲೆಕ್ಕಾಚಾರವೇ ತಪ್ಪು. ನಮ್ಮ ಆರ್ಥಿಕತೆಯಲ್ಲಿರುವ ನಗದು ಹರಿವು ಕಪ್ಪು ಹಣವಾಗಿರುತ್ತದೆ ಎಂಬ ಪ್ರಧಾನಿ ಮೋದಿ ಮತ್ತು ಅವರ ಸಲಹೆಗಾರರ ಅಂದಾಜು ವಿಚಿತ್ರ ಮತ್ತು ಅಪ್ರಬುದ್ಧವಾದುದು.

ಅದನ್ನು ಆ ಹೊತ್ತಿನಲ್ಲಿ ಹೇಳಿದಾಗ ಯಾರೂ ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಮೋದಿ ರದ್ದು ಮಾಡಿದ 500 ಮತ್ತು 1000 ರುಪಾಯಿ ನೋಟುಗಳ ಪೈಕಿ ಶೇ.25ರಷ್ಟು ಕಪ್ಪು ಹಣ ಇರಲೇ ಇಲ್ಲ. ಏಕೆಂದರೆ ರದ್ದು ಮಾಡಿದ 500 ಮತ್ತು 1000 ರುಪಾಯಿಗಳ ಪೈಕಿ 15.28 ಲಕ್ಷ ಕೋಟಿ ರುಪಾಯಿಗಳು ಅಂದರೆ, ರದ್ದಾದ ನೋಟುಗಳ ಒಟ್ಟು ಮೌಲ್ಯದ ಶೇ.98.96 ರಷ್ಟು ಹಣ ವಾಪಾಸು ಬ್ಯಾಂಕುಗಳಿಗೆ ಬಂದಿದೆ. ಉಳಿದ ಶೇ.1.04ರಷ್ಟು ನೋಟುಗಳು ವಿನಿಮಯ ಮಾಡಿಕೊಳ್ಳಲಾಗದ, ಹರಿದು ಹೋಗಿರುವ ಮತ್ತಿತರ ಕಾರಣಗಳಿಂದ ಬ್ಯಾಂಕುಗಳಿಗೆ ವಾಪಾಸು ಬಂದಿಲ್ಲದೇ ಇರಬಹುದು.

ಅಂದರೆ, ಕಪ್ಪುಹಣ ನಿಗ್ರಹಿಸುವ ಮೋದಿ ಅವರ ಪ್ರಯತ್ನ ವಿಫಲವಾಗಿದೆ. ತೀರಾ ಶೋಚನೀಯ ಎಂದರೆ ಇಡೀ ಅಪನಗದೀಕರಣ ಪ್ರಕ್ರಿಯೆ ಬಗ್ಗೆ ಮೋದಿ ಸರ್ಕಾರ ತಪ್ಪಾಗಿ ಅಂದಾಜಿಸಿದ್ದು. ಶೇ.25 ರಷ್ಟು ಕಪ್ಪು ಹಣ ಇದ್ದು, ಅದು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಾಸು ಬರುವುದಿಲ್ಲ ಎಂಬ ಅವರ ತರ್ಕರಹಿತ ಲೆಕ್ಕಚಾರವೇ ನಗೆಪಾಟಲಿಗೀಡಾಗಿದೆ.

ಸಾಂಪ್ರದಾಯಿಕ ನಗದು ವ್ಯವಸ್ಥೆಯಲ್ಲೇ ನಿತ್ಯವೂ ವ್ಯವಹರಿಸುವ ಆರ್ಥಿಕತೆ ನಮ್ಮದು. ಬ್ಯಾಂಕುಗಳ ದರ್ಶನ ಪಡೆಯದ ಲಕ್ಷಾಂತರ ಹಳ್ಳಿಗಳಿರುವ ದೇಶ ಭಾರತ. ಇಂಥ ಭಾರತ ದೇಶವನ್ನು ಏಕಾಏಕಿ ನಗದು ರಹಿತ ಆರ್ಥಿಕತೆಯಾಗಿ ರೂಪಿಸುತ್ತೇನೆ ಎಂದರೆ ಅದಕ್ಕಿಂತ ದೊಡ್ಡ ಆರ್ಥಿಕ ಮೌಢ್ಯ ಬೇರೇನಿರಲು ಸಾಧ್ಯ? ನಗದು ರಹಿತ ಅರ್ಥವ್ಯವಸ್ಥೆ ಮಾಡುವ ಮೋದಿ ಅವರ ಲೆಕ್ಕಚಾರ ತಳೆಕೆಳಗಾಗಿದೆ. ಅಪನಗದೀಕರಣ ಪೂರ್ವದಲ್ಲಿ 17.9 ಲಕ್ಷ ಕೋಟಿ ನಗದು ಚಲಾವಣೆಯಲ್ಲಿತ್ತು. ಅಪನಗದೀಕರಣದ ನಂತರ ಇದು 7.8 ಲಕ್ಷ ಕೋಟಿಗೆ ತಗ್ಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 6ರಂದು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಮೇ 25ರವರೆಗೆ ಇದ್ದ ನಗದು 18.5 ಲಕ್ಷ ಕೋಟಿ. ಅಪನಗದೀಕರಣ ನಂತರ ಇದ್ದು 7.8 ಲಕ್ಷ ಕೋಟಿಗೆ ಹೋಲಿಸಿದರೆ 10.7 ಲಕ್ಷ ಕೋಟಿ ಹೆಚ್ಚಳವಾಗಿದೆ. ಅಂದರೆ ಶೇ.137ರಷ್ಟು ನಗದು ಹೆಚ್ಚಳವಾಗಿದೆ. ಒಟ್ಟಾರೆ ಇರುವ ಕರೆನ್ಸಿ 19.3 ಲಕ್ಷ ಕೋಟಿಗೆ ಏರಿದೆ.

ಪ್ರಧಾನಿ ಮೋದಿ ಸರ್ಕಾರ ಡಿಜಿಟಲ್ ವಹಿವಾಟು ಜಾರಿಗೆ ತರುವ ಉಮೇದಿನಲ್ಲಿ ಹಲವು ನೀತಿ ನಿಯಮಗಳನ್ನು ರೂಪಿಸಿದೆ, ಡಿಜಿಟಲ್ ಪಾವತಿಗೆ ಹಲವು ಪ್ರೋತ್ಸಾಹಕರ ಯೋಜನೆಗಳನ್ನು ಪ್ರಕಟಿಸಿದೆ. ಅದರಿಂದಲೂ ಡಿಜಿಟಲ್ ಆರ್ಥಿಕತೆ ರೂಪಿಸುವ ಪ್ರಧಾನಿ ಮೋದಿ ಅವರ ಕನಸು ನನಸಾಗಿಲ್ಲ. ಜನರು ನಗದು ಬಳಸಬಾರದು, ಡಿಜಿಟಲ್ ಪಾವತಿ ಮಾಡಬೇಕು ಎಂಬ ಕಾರಣಕ್ಕೆ ಎಟಿಎಂಗಳಲ್ಲಿ ತಾತ್ಕಾಲಿಕ ನಗದು ಕೊರತೆ ಸೃಷ್ಟಿಸಿದರೂ ಡಿಜಿಟಲ್ ಪಾವತಿ ಪ್ರಮಾಣ ನಿರೀಕ್ಷಿಸಿದಷ್ಟು ಆಗಿಲ್ಲ. ಎಟಿಎಂಗಳಲ್ಲಿ ನಗದು ಕೊರತೆ ಹೆಚ್ಚಾಗಲು ಮೋದಿ ಸರ್ಕಾರದ ಡಿಜಿಟಲ್ ಪಾವತಿ ವ್ಯವಸ್ಥೆ ಉತ್ತೇಜಿಸುವ ಪ್ರಯತ್ನ ಕಾರಣವಲ್ಲ, ಮುದ್ರಣ, ಸಾಗಣೆ ಮತ್ತು ವಿತರಣೆಯಲ್ಲಾದ ಸಮಸ್ಯೆಯಿಂದ ನಗದು ಕೊರತೆ ಉಂಟಾಗಿತ್ತು ಎಂದು ಆರ್‌ ಬಿ ಐ ಸ್ಪಷ್ಟನೆ ನೀಡಿದೆ. ಅದು ಬೇರೆ ವಿಷಯ.

ನಕಲಿ ನೋಟುಗಳ ಹಾವಳಿ ತಗ್ಗಿಸುವುದು ಪ್ರಧಾನಿ ಮೋದಿ ಅವರ ಮತ್ತೊಂದು ಗುರಿಯಾಗಿತ್ತು. ಪ್ರಧಾನಿ ಮೋದಿ ಸರ್ಕಾರ 500 ಮತ್ತು 1000 ರುಪಾಯಿ ನೋಟುಗಳನ್ನು ರದ್ದು ಮಾಡಿ 2000 ಮುಖ ಬೆಲೆ ನೋಟು ಮುದ್ರಿಸಿತು. ಇದರಿಂದ ಅಪನಗದೀಕರಣದ ವೇಳೆ ಮರುಪಾವತಿ ಕೆಲಸ ಸಲೀಸಾಗಿತ್ತು. ಆದರೆ, ಚಿಲ್ಲರೆ ಕೊರತೆಯಿಂದಾಗಿ ಬಡಪಾಯಿ ಜನರು ಸಂಕಷ್ಟಕ್ಕೀಡಾದರು. ಮೋದಿ ಅವರು ಕಡಮೆ ನೋಟುಗಳಲ್ಲಿ ಹೆಚ್ಚು ಮೊತ್ತವನ್ನು ಸಂಗ್ರಹಿಸಲು ನೆರವು ನೀಡಿದರು. ಆದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಚಿಲ್ಲರೆಯಿಲ್ಲದೇ ವ್ಯಾಪಾರ ಸ್ಥಗಿತಗೊಂಡು ನಷ್ಟಕ್ಕೀಡಾದರು. ಆದರೆ, 2000 ಮುಖಬೆಲೆಯ ನಕಲಿ ನೋಟುಗಳ ಹಾವಳಿ ಹೆಚ್ಚಾಯ್ತು. 4 500 ನೋಟು ಮುದ್ರಿಸುವ ಬದಲು 2000ದ ಒಂದು ನೋಟು ಮುದ್ರಿಸಿದರೆ ಸಾಕಲ್ಲವೇ? ನಕಲಿ ನೋಟು ಮುದ್ರಿಸುವವರಿಗೂ ಮೋದಿ ಸರ್ಕಾರ ಪರೋಕ್ಷವಾಗಿ ನೆರವು ನೀಡಿತೇನೋ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿದೆ.

ಮೋದಿ ಅವರ ಡಿಜಿಟಲ್ ಆರ್ಥಿಕತೆ ವಿಫಲವಾಗಿದೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಸುರಕ್ಷತಾ ಲೋಪ ನಿವಾರಿಸಿಕೊಳ್ಳುವ ಮುನ್ನವೇ ಡಿಜಿಟಲ್ ವಹಿವಾಟು ಉತ್ತೇಜಿಸಿದ್ದಾರೆ. ಆದರೆ, ಬ್ಯಾಂಕಿಂಗ್ ವಂಚನೆಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿಲ್ಲ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ 75,000 ಕೋಟಿ ರುಪಾಯಿ ಮೊತ್ತದ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ನಡೆದಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಸಂಸದೀಯ ಸ್ಥಾಯಿ ಸಮಿತಿ ಮುಂದೆ ನೀಡಿರುವ ಅಂಕಿ ಅಂಶಗಳು ಇವು.

2015-16, 2016-17, 2017-18 ವಿತ್ತೀಯ ವರ್ಷಗಳಲ್ಲಿ 15,673 ವಂಚನೆ ಪ್ರಕರಣಗಳು ನಡೆದಿದ್ದು 74,993 ಕೋಟಿ ರುಪಾಯಿ ಬ್ಯಾಂಕುಗಳಿಗೆ ನಷ್ಟವಾಗಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ಮುಂದೆ ಅಂಕಿಅಂಶಗಳನ್ನು ಖುದ್ದು ಆರ್‌ ಬಿ ಐ ಗವರ್ನರ್ ಊರ್ಜಿತ್ ಪಟೇಲ್ ಮಂಡಿಸಿದ್ದಾರೆ. ಗುಜರಾತಿನವರೇ ಆದ, ವಜ್ರ ವ್ಯಾಪಾರಿ ನೀರವ್ ಮೋದಿ, ಅವರ ಸಂಬಂಧಿ ಮೆಹೆಲು ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,700 ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಹಾರಿ ಹೋಗಿದ್ದಾರೆ. ಪ್ರಕರಣ ಬೆಳಕಿಗೆ ಬರುವ ಮುನ್ನವೇ ಈ ಇಬ್ಬರು ದೇಶಬಿಟ್ಟು ಹೋಗಲು ಅವಕಾಶ ಮಾಡಿಕೊಟ್ಟ ಆರೋಪವನ್ನು ಮೋದಿ ಸರ್ಕಾರ ಎದುರಿಸುತ್ತಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಪ್ರತಿಗಂಟೆಗೆ 11 ಮಂದಿ ಗ್ರಾಹಕರು ಬ್ಯಾಂಕುಗಳಿಂದಲೇ ವಂಚನೆಯಾಗುತ್ತಿದೆ ಎಂದು ದೂರುತ್ತಿದ್ದಾರೆ. 2018 ಮಾರ್ಚ್ 31ರವರೆಗೆ 1 ಲಕ್ಷಕ್ಕೂ ಮೀರಿದ ದೂರುಗಳು ಬಂದಿವೆ. ಈ ಪೈಕಿ ಶೇ.35- 38ರಷ್ಟು ಬ್ಯಾಂಕುಗಳು ಮಾಡುವ ಲೋಪದಿಂದಾದ ವಂಚನೆಗಳಾದರೆ, ಶೇ.20ರಷ್ಟು ಎಟಿಎಂಗಳಲ್ಲಾಗುತ್ತಿರುವ ವಂಚನೆ ದೂರುಗಳಾಗಿವೆ.

ಪ್ರಧಾನಿ ನರೇಂದ್ರಮೋದಿ ಜಾರಿ ಮಾಡಿದ ಅಪನಗದೀಕರಣ ಯೋಜನೆ ಸಂಪೂರ್ಣ ವಿಫಲ ಎಂಬುದನ್ನು ಆರ್‌ ಬಿ ಐ ಅಂಕಿಅಂಶಗಳೇ ಹೇಳಿವೆ. ಆದರೆ, ಅಪನಗದೀಕರಣದಿಂದಾಗಿ ಭಾರತ ಆರ್ಥಿಕವಾಗಿ ಅನುಭವಿಸಿದ ನಷ್ಟವನ್ನು ಇದುವರೆಗೆ ಅಳತೆ ಮಾಡಿಲ್ಲ. ಮೋದಿ ಅವರ ಯೋಜನೆಯಿಂದ ಇಡೀ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಜನರು ಸಂಕಷ್ಟದಿಂದ ದಿಕ್ಕೆಟ್ಟಿದ್ದರೆಂಬುದು ಜಗತ್ತಿಗೆ ಗೊತ್ತು. ಅದರ ಪರಿಣಾಮ, ಜಾಗತಿಕವಾಗಿ ತ್ವರಿತ ಅಭಿವೃದ್ಧಿ ಹೊಂದುತ್ತಿದ್ದ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದಿದ್ದ ಭಾರತದ ಜಿಡಿಪಿಯು ಶೇ.5.6ಕ್ಕೆ ಕುಸಿಯಿತು.

ಇದನ್ನೂ ಓದಿ : ಅಪನಗದೀಕರಣ ಅನಪೇಕ್ಷಿತ ನೀತಿ ಎನ್ನುತ್ತಾರೆ ರಘುರಾಮ್ ರಾಜನ್, ಕೌಶಿಕ್ ಬಸು

ಸರಾಸರಿ ವಾರ್ಷಿಕ ಶೇ.7.7ರಷ್ಟಿದ್ದ ಜಿಡಿಪಿ ಶೇ.5.6ಕ್ಕೆ ಕುಸಿಯಿತೆಂದರೆ ಅದೇನು ಕಡಮೆಯಲ್ಲ. ಶೇ.1ರಷ್ಟು ಜಿಡಿಪಿ ಕುಸಿತ ಎಂದರೆ ವಾರ್ಷಿಕ 1 ಲಕ್ಷ ಕೋಟಿ ರೂ., ಮೌಲ್ಯದಷ್ಟು ಅಭಿವೃದ್ಧಿ ನಷ್ಟ. ಜಿಡಿಪಿ ಶೇ.5.6ಕ್ಕೆ ಕುಸಿದಿತ್ತು. ಪ್ರಸಕ್ತ ವಾರ್ಷಿಕ ಜಿಡಿಪಿ ಶೇ.6.7ರಷ್ಟೆಂದು ಅಂದಾಜಿಸಲಾಗಿದೆ. ಒಟ್ಟಾರೆ ಶೇ.2ರಷ್ಟು ಜಿಡಿಪಿ ಕುಸಿತ ಎಂದು ಅಂದಾಜಿಸಿದರೂ ನವೆಂಬರ್ 8ಕ್ಕೆ ಎರಡು ವರ್ಷ ತುಂಬುವ ಅಪನಗದೀಕರಣವು ದೇಶಕ್ಕೆ ಮಾಡಿದ ಆರ್ಥಿಕ ಅಭಿವೃದ್ಧಿ ನಷ್ಟದ ಮೊತ್ತವು 4 ಲಕ್ಷ ಕೋಟಿ ರುಪಾಯಿಗಳು. ಇದು ನಮ್ಮ ಕರ್ನಾಟಕ ರಾಜ್ಯದ ಎರಡು ವರ್ಷಗಳ ವಾರ್ಷಿಕ ಬಜೆಟ್ ನಷ್ಟು ಬೃಹತ್ ಮೊತ್ತಕ್ಕೆ ಸಮ!

ಮೋದಿ ಅವರ ಅಪನಗದೀಕರಣವನ್ನು ಕೇವಲ ನಗದು ಕೊರತೆ, ಜನರ ಸಂಕಷ್ಟಕ್ಕೆ ಸೀಮಿತಗೊಳಿಸಿ ಅದರ ವೈಫಲ್ಯ ಅಳೆಯಬಾರದು. ಅಪನಗದೀಕರಣವು ದೇಶದ ಆರ್ಥಿಕತೆಗೆ ಮಾಡಿರುವ ಭಾರಿ ನಷ್ಟದ ಪ್ರಮಾಣವನ್ನು ಗಮನಕ್ಕೆ ತೆಗೆದುಕೊಂಡು ಮೋದಿ ಅವರ ವೈಫಲ್ಯತೆ ಅಳೆಯಬೇಕು! ಆಗ ಮಾತ್ರವೇ ಅಪನಗದೀಕರಣ ಮೋದಿ ಸರ್ಕಾರದ ಅತಿ ದೊಡ್ಡ ದುಸ್ಸಾಹಸ ಮತ್ತು ಭಾರಿ ನಷ್ಟದ ವಿಫಲ ಯೋಜನೆ ಎಂಬುದು ಸ್ಪಷ್ಟವಾಗುತ್ತದೆ!

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More