ಜ. ಲೋಯಾ ಸಾವಿನ ಅನುಮಾನಗಳನ್ನು ಬಲಪಡಿಸಿದ ನಾಗಪುರ ಬಂಗಲೆ ವಾಸ್ತವ್ಯ

ಶೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲೋಯಾ 2014ರಲ್ಲಿ ಸಾವನ್ನಪ್ಪಿದ್ದರು. ಸುಪ್ರೀಂಕೋರ್ಟ್ ಇದೊಂದು ಸಹಜ ಸಾವು ಎಂದು ತೀರ್ಪು ನೀಡಿತ್ತು. ಆದರೆ ಈಗ ಲಭ್ಯವಾಗಿರುವ ದಾಖಲೆಗಳು ಲೋಯಾ ಸಾವು ಕುರಿತ ಅನುಮಾನಗಳಿಗೆ ಪುಷ್ಟಿ ನೀಡುವಂತಿವೆ. ಈ ಕುರಿತು ‘ಕಾರವಾನ್’ ನಿಯತಕಾಲಿಕ ಪ್ರಕಟಿಸಿರುವ ತನಿಖಾ ವರದಿ ಇಲ್ಲಿದೆ

2014ರಲ್ಲಿ ಸಂದೇಹಾಸ್ಪದವಾಗಿ ಸಾವನ್ನಪ್ಪಿದ್ದ ಜಸ್ಟೀಸ್ ಬಿ ಎಚ್ ಲೋಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಹೊಸ ವಿವರ ಪಡೆದುಕೊಳ್ಳಲಾಗಿದ್ದು ಅದರಲ್ಲಿ ಲೋಯಾ ನಾಗಪುರ ಭೇಟಿಯ ಉದ್ದೇಶ, ಅವರಿಗೆ ಕಲ್ಪಿಸಲಾದ ವ್ಯವಸ್ಥೆಯ ವಿವರಗಳಿವೆ ಎಂದು ‘ಕಾರವಾನ್’ ನಿಯತಕಾಲಿಕ ವರದಿ ಮಾಡಿದೆ.

ಈ ಹೊಸ ವಿವರಗಳ ಪ್ರಕಾರ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಮಾಹಿತಿಯಲ್ಲಿ ಮಹತ್ವದ ವಿಚಾರಗಳನ್ನು ಮರೆಮಾಚಿರುವುದು ದೃಢಪಟ್ಟಿದೆ. 2017ರಲ್ಲಿ ಲೋಯಾ ಕುಟುಂಬದ ಸದಸ್ಯರು ಅವರ ಸಾವಿನ ಬಗ್ಗೆ ಸಾರ್ವಜನಿಕವಾಗಿ ಅನುಮಾನ ವ್ಯಕ್ತಪಡಿಸಿದ್ದರು. ಈಗಾಗಲೇ ಸಲ್ಲಿಸಲಾದ ದಾಖಲೆಗಳಲ್ಲಿ ಮಹಾರಾಷ್ಟ್ರ ಗುಪ್ತಚರ ಇಲಾಖೆ ನಡೆಸಿದ ತನಿಖೆ ಈ ವಿವರಗಳನ್ನು ಸೇರಿಸಿಲ್ಲ ಎನ್ನುವುದೂ ಬಹಿರಂಗಗೊಂಡಿದೆ. ಲೋಯಾ ಅವರದು ಸಹಜ ಸಾವು ಎನ್ನುತ್ತಿರುವ ಮಹಾರಾಷ್ಟ್ರ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಆದರೆ ಈ ಮಾಹಿತಿಗಳನ್ನು ಕೋರ್ಟಿಗೆ ಏಕೆ ವಿವರಿಸಿಲ್ಲ ಎಂಬ ಪ್ರಶ್ನೆ ಎದ್ದಿದೆ. ಬಾಂಬೆ ಹೈಕೋರ್ಟಿಗೆ ಸಲ್ಲಿಸಲಾದ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಾಹಿತಿ ಹಕ್ಕಿನಡಿ ಪಡೆದ ವಿವರಗಳನ್ನು ಸೇರಿಸಲಾಗಿದ್ದು ಲೋಯಾ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೋರಲಾಗಿದೆ.

27 ನವೆಂಬರ್ 2014ರಂದು ನಾಗಪುರದ ಕಾನೂನು ಮತ್ತು ನ್ಯಾಯಾಂಗ ಇಲಾಖೆಯು, ಲೋಕೋಪಯೋಗಿ ಇಲಾಖೆಗೆ ‘EST 1114/Q/2014’ ಕ್ರಮಸಂಖ್ಯೆಯ ಪತ್ರ ಬರೆದಿತ್ತು. ಅದರಲ್ಲಿ 2014ರ ನವೆಂಬರ್ 30 ಹಾಗೂ ಡಿಸೆಂಬರ್ 1ರಂದು ಎರಡು ದಿನಗಳ ಕಾಲ ‘ಅತಿಗಣ್ಯ ವ್ಯಕ್ತಿಗಳಿಗೆ ನಗರದ ರವಿ ಭವನದಲ್ಲಿ ಹವಾನಿಯಂತ್ರಿತ ಕೊಠಡಿಯೊಂದನ್ನು ಮೀಸಲಿಡುವಂತೆ ಕೋರಲಾಗಿತ್ತು. (ಡಿಸೆಂಬರ್ 1ರಂದು ಲೋಯಾ ನಾಗಪುರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು). “ ಮುಂಬೈನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಬಿ ಜೆ ಲೋಯಾ, ಗೌರವಾನ್ವಿತ ಶ್ರೀ ವಿನಯ್ ಜೋಶಿ ಅವರು ಮುಂಬೈನಿಂದ ಆಗಮಿಸಲಿದ್ದು ನವೆಂಬರ್ 30ರ ಮುಂಜಾನೆಯಿಂದ ಡಿಸೆಂಬರ್ 1ರ 7ಗಂಟೆವರೆಗೆ ಉಳಿದಿದ್ದರು. ಇವರಿಗಾಗಿ ಎರಡು ಹಾಸಿಗೆಗಳ ಹವಾನಿಯಂತ್ರಿತ ಕೊಠಡಿಯೊಂದನ್ನು ಮೀಸಲಿಡಲಾಗಿತ್ತು” ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಜೊತೆಗೆ ಸಲ್ಲಿಸಲಾದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇತ್ತ ನಾಗಪುರ ವಿಭಾಗದ ಹೆಚ್ಚುವರಿ ಎಂಜಿನಿಯರ್ ಅವರಿಂದಲೂ ಕಟ್ಟಡ ಸಂಖ್ಯೆ 1ರಲ್ಲಿ ಕೊಠಡಿಯೊಂದನ್ನು ಮೀಸಲಿಡುವಂತೆ ರವಿಭವನದ ಬುಕ್ಕಿಂಗ್ ಗುಮಾಸ್ತರಿಗೆ ಸೂಚನೆ ಹೋಗಿತ್ತು.

ಆದರೆ ನಿಗದಿತ ದಿನದಂದು ಲೋಯಾ ಅವರಾಗಲೀ ಜೋಶಿ ಅವರಾಗಲೀ ಉಳಿದುಕೊಂಡಿದ್ದರೆನ್ನುವುದಕ್ಕೆ ಭವನದ ಕೊಠಡಿ ನೋಂದಣಿ ಪುಸ್ತಕಗಳಲ್ಲಿ ದಾಖಲೆಗಳಿಲ್ಲ. ಹೀಗೆ ನೋಂದಣಿ ಪುಸ್ತಕದಲ್ಲಿ ಖಾಲಿ ಬಿಟ್ಟ ಜಾಗದ ಕುರಿತಂತೆ ‘ಕಾರವಾನ್’ ಈ ಹಿಂದೆ ವರದಿ ಪ್ರಕಟಿಸಿತ್ತು. (ಲೋಯಾ ಕುಟುಂಬದ ಪರ ವಾದಿಸುತ್ತಿರುವ ವಕೀಲರು ಈ ಹಿಂದೆ ರವಿ ಭವನದ ನೋಂದಣಿ ಪುಸ್ತಕವನ್ನು ತಿರುಚಲಾಗಿದೆ ಎಂದು ಕೋರ್ಟಿಗೆ ಮನವರಿಕೆ ಮಾಡಿಕೊಟ್ಟಿದ್ದರು.) ಕಟ್ಟಡ ಸಂಖ್ಯೆ 1ರಲ್ಲಿರುವ 2,3 ಹಾಗೂ 5ನೇ ಸಂಖ್ಯೆಯ ಕೊಠಡಿಗಳಲ್ಲಿ ತಂಗಿದ್ದವರ ವಿವರಗಳನ್ನು ದಾಖಲಿಸದೆ ಖಾಲಿ ಬಿಡಲಾಗಿದೆ. ಹಾಗೆ ಖಾಲಿಯಾಗಿ ನಮೂದಿಸಿರುವುದು ವಿಚಿತ್ರವಾಗಿ ತೋರುತ್ತಿದೆ ಎಂದು ನಿಯತಕಾಲಿಕ ಹೇಳಿದೆ.

ಮತ್ತೊಂದಡೆ ‘ಸರ್ಕಾರಿ ಕೆಲಸದ ನಿಮಿತ್ತ’ ಲೋಯಾ ನಾಗಪುರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ 2014ರ ನವೆಂಬರ್ 30ರಂದು ಸಹೋದ್ಯೋಗಿಯೊಬ್ಬರ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಲೋಯಾ ನಗರಕ್ಕೆ ಆಗಮಿಸಿದ್ದರು ಎಂದು ಮಹಾರಾಷ್ಟ್ರ ಗುಪ್ತಚರ ಇಲಾಖೆ ವರದಿ ಹೇಳುತ್ತಿದ್ದು ಪರಸ್ಪರ ತಾಳೆಯಾಗುತ್ತಿಲ್ಲ. ಪ್ರಸ್ತುತ ಠಾಣೆಯ ಜಿಲ್ಲಾ ಮುಖ್ಯ ನ್ಯಾಯಾಧೀಶರಾಗಿರುವ ವಿನಯ್ ಜೋಶಿಯವರು ಅಧಿಕೃತ ಪ್ರವಾಸ ಕೈಗೊಂಡಿದ್ದ ಬಗ್ಗೆ ಕೂಡ ಗುಪ್ತಚರ ಇಲಾಖೆ ನೀಡಿದ ದಾಖಲೆಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ಪತ್ರದಲ್ಲಿ ಲೋಯಾ ಅವರು ತಮ್ಮ ಸಹೋದ್ಯೋಗಿಗಳಾದ ಜಿಲ್ಲಾ ಮುಖ್ಯ ನ್ಯಾಯಾಧೀಶರ ಸ್ಥಾನಮಾನ ಹೊಂದಿರುವ ನ್ಯಾ. ಜೋಷಿ ಮತ್ತು ನ್ಯಾ. ಮೋದಕ್ ಅವರ ಸಂಗಡ ತಂಗಿದ್ದರು ಎಂದು ಹೇಳಲಾಗಿದೆ. ಗುಪ್ತಚರ ಇಲಾಖೆಗೆ ಬರೆದಿರುವ ಪತ್ರದಲ್ಲಿ ಮೋದಕ್, “ಜೋಷಿ, ಲೋಯಾ ಹಾಗೂ ನಾನು ರವಿಭವನದ ಉತ್ತಮ ಪೀಠೋಪಕರಣಗಳಿರುವ ಎರಡು ಹಾಸಿಗೆಗಳ ಒಂದೇ ಕೊಠಡಿಯಲ್ಲಿ ಉಳಿದುಕೊಂಡಿದ್ದೆವು” ಎಂದಿದ್ದಾರೆ. ಲೋಯಾ ಅವರಿಗೆ ಪ್ರತ್ಯೇಕ ವಸತಿ ಸೌಕರ್ಯಕ್ಕೆ ಅವಕಾಶ ಕಲ್ಪಿಸಿದ್ದರೂ ಅದನ್ನು ಏಕೆ ನಮೂದಿಸಿಲ್ಲ ಎಂಬುದು ಅಸ್ಪಷ್ಟವಾಗಿಯೇ ಉಳಿದಿದೆ.

ಈ ಬಗ್ಗೆ ‘ಕಾರವಾನ್’ ವಿನಯ್ ಜೋಷಿ ಅವರನ್ನು ಸಂಪರ್ಕಿಸಿತಾದರೂ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. “ನಾನೊಂದು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅನುಮತಿಯಿಲ್ಲದೇ ಹಾಗೆ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ. ಬಾಂಬೆ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಒಪ್ಪಿಗೆ ನೀಡಿದರೆ ಮಾತ್ರ ನಿಮ್ಮೊಂದಿಗೆ ಮಾತನಾಡಬಹುದು” ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ, ನಾಗಪುರಕ್ಕೆ ಲೋಯಾ ಹೇಗೆ ಪ್ರವಾಸ ಕೈಗೊಂಡರೆಂಬುದನ್ನು ಮನವರಿಕೆ ಮಾಡಿಕೊಡಲು ವಿಫಲವಾಗಿರುವುದು ಸ್ಪಷ್ಟವಾಗಿದೆ. ಲೋಯಾ ಕುಟುಂಬದ ಸದಸ್ಯರು ನುಡಿದಿರುವ ಸಾಕ್ಷ್ಯದ ಪ್ರಕಾರ ಅಧಿಕೃತ ಪ್ರವಾಸ ನಿಗದಿಯಾಗಿರುವ ಬಗ್ಗೆ ಲೋಯಾ ಅವರಿಗೆ ಅರಿವಿರಲಿಲ್ಲ. ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಲಾತೂರಿನಲ್ಲಿ ಅನಾರೋಗ್ಯದ ಸಂಬಂಧ ಬಳಲುತ್ತಿದ್ದ ಸಂಬಂಧಿಯೊಬ್ಬರನ್ನು ಭೇಟಿಯಾಗಲು ಅವರು ಚಿಂತಿಸಿದ್ದರು ಎಂದು ಹೇಳಲಾಗಿದೆ.

ಅಧಿಕೃತ ಪ್ರವಾಸದ ವಿವರವಿದ್ದ ಪತ್ರ ತಲುಪಿದ ಎರಡು ದಿನಗಳ ಬಳಿಕ ಅಂದರೆ 2014ರ ನವೆಂಬರ್ 29ರಂದು ಲೋಯಾ ನಾಗಪುರಕ್ಕೆ ತೆರಳಿದರು. ಈ ಮೊದಲು ಕಾರವಾನ್ ಜೊತೆ ಮಾತನಾಡಿದ್ದ ಲೋಯಾ ಸಹೋದರಿಯರಲ್ಲಿ ಒಬ್ಬರಾದ ಅನುರಾಧಾ ಬಿಯಾನಿ, “ಮದುವೆಗೆ ಹಾಜರಾಗಬೇಕಿದೆ, ನಾವು ಈಗಾಗಲೇ ಬುಕ್ ಮಾಡಿದ್ದೇವೆ ಎಂದು ಸಹೋದ್ಯೋಗಿಗಳು ಒತ್ತಾಯಿಸಿದ ಬಳಿಕ ಅವರು ನಾಗಪುರಕ್ಕೆ ತೆರಳಲು ಮನಸ್ಸು ಮಾಡಿದರು” ಎಂದಿದ್ದಾರೆ. ಎಲ್ಲರೂ ಸೇರಿ ಒತ್ತಾಯಿಸಿದ್ದರಿಂದ ಅವರು ಹೊರಡಲು ನಿರ್ಧರಿಸಿದರು ಎಂದು ಹೇಳಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ರೂಪದಲ್ಲಿ ದೊರೆತಿರುವ ವಿವರಗಳು ಹೇಳುವಂತೆ, ಲೋಯಾ ಮತ್ತು ಜೋಷಿಯವರ ನಾಗಪುರ ಭೇಟಿಯ ಉದ್ದೇಶ ಮತ್ತು ಅವರಿಗೆ ಕಲ್ಪಿಸಲಾದ ವ್ಯವಸ್ಥೆ, ಉಳಿದ ಸಹೋದ್ಯೋಗಿಗಳಿಗೆ ಕಲ್ಪಿಸಲಾಗಿದ್ದ ವ್ಯವಸ್ಥೆಗಿಂತಲೂ ಭಿನ್ನವಾಗಿತ್ತು. ನ್ಯಾ. ಸ್ವಪ್ನಾ ಜೋಷಿಯವರ ಮಗಳ ಮದುವೆ ನವೆಂಬರ್ 30ರಂದು ನಡೆಯಲಿದ್ದ ಹಿನ್ನೆಲೆಯಲ್ಲಿ 2014ರ ನವೆಂಬರ್ 19ರಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದ ನಾಗಪುರದ ಕಾನೂನು ಮತ್ತು ನ್ಯಾಯಾಂಗ ಇಲಾಖೆ, ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ 8 ಕೊಠಡಿಗಳನ್ನು ಮೀಸಲಿಡುವಂತೆ ಕೋರಿತ್ತು. ಲೋಯಾ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬರೆಯಲಾದ ಪತ್ರವು ಸರ್ಕಾರಿ ಕೆಲಸದ ನಿಮಿತ್ತ ಆಗಮಿಸುತ್ತಿರುವುದಾಗಿ ತಿಳಿಸುತ್ತದೆ. ಸ್ವಪ್ನಾ ಅವರ ಪರವಾಗಿ ಕೊಠಡಿಗೆ ಮನವಿ ಮಾಡಿದ ಪತ್ರವು ಜೋಷಿ ಮತ್ತು ಮೋದಕ್ ಅವರು ತುರ್ತು ಕಾರ್ಯದ ನಿಮಿತ್ತ ನಾಗಪುರಕ್ಕೆ ಬರುತ್ತಿರುವುದಾಗಿ ಹೇಳುತ್ತದೆ. ಸ್ವಪ್ನಾ ಜೋಷಿ ವಸತಿ ವ್ಯವಸ್ಥೆ ಕಲ್ಪಿಸುವಂತೆ ಕೋರಿದ ಎಂಟು ದಿನಗಳ ನಂತರ ಲೋಯಾ ಅವರಿಗೆ ವಸತಿ ಸೌಕರ್ಯಕ್ಕೆ ಮನವಿ ಮಾಡಿದ ಪತ್ರ ಬರುತ್ತದೆ. ಇದು ಲೋಯಾ ಅವರು ಮದುವೆಯ ಅಂಗವಾಗಿ ನಾಗಪುರಕ್ಕೆ ಬಂದವರಲ್ಲ ಎಂಬುದನ್ನು ಸೂಚಿಸುತ್ತದೆ ಎನ್ನುವುದು ನಿಯತಕಾಲಿಕದ ವಾದ.

ಮಹಾರಾಷ್ಟ್ರ ಸರ್ಕಾರದ ಆಯಾಕಟ್ಟಿನ ಸ್ಥಳದಲ್ಲಿರುವ ಯಾರೋ ಒಬ್ಬರು ಲೋಯಾ ನಾಗಪುರಕ್ಕೆ ತೆರಳಿ ಅಲ್ಲಿನ ರವಿ ಭವನದಲ್ಲಿ ನಿಗದಿತ ದಿನಾಂಕಗಳಂದು ಉಳಿಯುವಂತೆ ನೋಡಿಕೊಂಡಿದ್ದರು. ಅದು ಯಾರು ಎಂಬುದು ಸ್ಪಷ್ಟವಾಗಿಲ್ಲ. ಮುಂಬೈ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಲೋಯಾ ರೀತಿಯ ವ್ಯಕ್ತಿಗಳ ಪ್ರವಾಸ ಕುರಿತ ಸೂಚನೆಗಳನ್ನು ರಾಜಧಾನಿಯ ಅಧಿಕಾರಿಗಳಿಂದ ಮಾತ್ರ ಪಡೆಯಬಹುದಾಗಿತ್ತು.

ಮುಂಬೈನ ಅಶೋಕ್ ಪೈ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರಿಂದ ಕಾನೂನು ಮತ್ತು ನ್ಯಾಯಾಂಗ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ನಡುವಿನ ಪತ್ರ ವಿನಿಮಯದ ವಿವರಗಳು ಬಹಿರಂಗಗೊಂಡಿವೆ. ನಾಗಪುರದ ವಕೀಲ ಸತೀಶ್ ಉಕೆ ಇದೇ ವಿವರಗಳನ್ನು ಕೇಳಿದಾಗ ಕಾನೂನು ಮತ್ತು ನ್ಯಾಯಾಂಗ ಇಲಾಖೆ ನೀಡಿದ ಉತ್ತರ ಹೀಗಿತ್ತು:

ಆ ದಾಖಲೆ ಅಷ್ಟೇನೂ ಮುಖ್ಯವಲ್ಲದ ಇತರೆ ಮಾಹಿತಿಗಳ ಅಡಿ ಬರುತ್ತಿತ್ತು ಹೀಗಾಗಿ ಮುಂದಿನ ಪ್ರಕ್ರಿಯೆಗೆ ಅಗತ್ಯ ಬೀಳುವುದಿಲ್ಲ ಎಂದು ಭಾವಿಸಿ ಒಂದು ವರ್ಷದ ಅವಧಿಯ ಬಳಿಕ ಕಡತದಿಂದ ಹೊರಗಿಡಲಾಯಿತು. ಹೀಗಾಗಿ ದಾಖಲೆ ನಾಶವಾಗಿದ್ದು ಲಭ್ಯವಿಲ್ಲ…

ಇದನ್ನೂ ಓದಿ : ಸಂಕಲನ | ಜಡ್ಜ್‌ ಲೋಯಾ ಪ್ರಕರಣದ ಸುತ್ತ ‘ದಿ ಸ್ಟೇಟ್‌’ ಪ್ರಕಟಿಸಿದ ವರದಿಗಳು

ಇದೇ ಅರ್ಜಿಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ ಐ ಎಂ ಭಾರ್ಗವ್, “ದಾಖಲೆ ಒದಗಿಸುವಂತೆ ಸರ್ಕಾರದ ಅಂದಿನ ಉಪ ಕಾರ್ಯದರ್ಶಿಗಳು ಮೌಖಿಕವಾಗಿ ಸೂಚಿಸಿದ್ದರಿಂದ ಅದರ ಬಗ್ಗೆ ಯಾವುದೇ ಪರಾಮರ್ಶೆ ನಡೆಯಲಿಲ್ಲ. ರವಿ ಭವನದಲ್ಲಿ ಈ ಕಚೇರಿಯ ದಾಖಲೆ ಆಧರಿಸಿ ಕೊಠಡಿ ಮೀಸಲಿರಿಸಿಲ್ಲ” ಎಂದು ಹೇಳಿದರು.

ಭಾರ್ಗವ್ ಅವರಿಗೆ ‘ಕಾರವಾನ್’ ಫೋನಾಯಿಸಿದಾಗ ಇಮೇಲ್ ಮೂಲಕವೇ ಉತ್ತರಿಸುವುದಾಗಿ ಹೇಳಿದರು. ಇಮೇಲ್ ಮಾಡಿದಾಗಲೂ ಅವರಿಂದ ಯಾವುದೇ ಉತ್ತರ ದೊರೆಯಲಿಲ್ಲ. ಇಮೇಲ್ ನಲ್ಲಿ ‘ಈ ಕಚೇರಿಯ ದಾಖಲೆ ಆಧರಿಸಿ ಕೊಠಡಿ ಮೀಸಲಿರಿಸಿಲ್ಲ’ ಎಂಬ ಹೇಳಿಕೆ ಕುರಿತು ಹಾಗೂ ಅಂದಿನ ಉಪ ಕಾರ್ಯದರ್ಶಿ ಯಾರೆಂಬುದನ್ನು ತಿಳಿಸುವಂತೆ ಕೋರಲಾಗಿತ್ತು. ಕಚೇರಿಯ ಪತ್ರ ಆಧರಿಸಿ ರವಿ ಭವನದಲ್ಲಿ ಯಾವುದೇ ಕೊಠಡಿ ಮೀಸಲಿರಿಸಿಲ್ಲ ಎಂದು ಇಲಾಖೆ ಏಕೆ ಹೇಳುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ದಾಖಲೆಗಳು ಇಲಾಖೆಗಳ ನಡುವೆ ಸರಣಿ ಪತ್ರವ್ಯವಹಾರ ನಡೆದಿರುವುದನ್ನು ಸ್ಪಷ್ಟಪಡಿಸುತ್ತವೆ. ಲೋಕೋಪಯೋಗಿ ಇಲಾಖೆ ಸಂಖ್ಯೆ 1ರ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಬರೆದಿರುವ ಪತ್ರದ ಪ್ರತಿಯೊಂದನ್ನು ರವಿ ಭವನದ ವ್ಯವಸ್ಥಾಪಕ ಹಾಗೂ ನಾಗಪುರದ ಉಪ ಜಿಲ್ಲಾಧಿಕಾರಿಗಳಿಗೆ ಕೂಡ ರವಾನಿಸಿರುವುದು ಸ್ಪಷ್ಟವಾಗಿದೆ. ಹೆಚ್ಚುವರಿ ಎಂಜಿನಿಯರ್ ಅವರು ರವಿ ಭವನದ ಬುಕ್ಕಿಂಗ್ ಗುಮಾಸ್ತರಿಗೆ ಕೊಠಡಿ ಮೀಸಲಿಡುವಂತೆ ನಿರ್ದೇಶನ ನೀಡುವುದರೊಂದಿಗೆ ಪತ್ರದ ಒಕ್ಕಣೆ ಮುಗಿಯುತ್ತದೆ.

‘ಶ್ರೀ ಸಾವಂತ್’ ಅವರನ್ನು ಉದ್ದೇಶಿಸಿ ಹೆಚ್ಚುವರಿ ಎಂಜಿನಿಯರ್ ಪತ್ರ ಬರೆದಿದ್ದಾರೆ. ರವಿ ಭವನದ ನೋಂದಣಿ ಪುಸ್ತಕ ತಿಳಿಸುವಂತೆ ಪ್ರದೀಪ್ ಸಾವಂತ್ ಎಂಬುವವರು ರವಿ ಭವನದ ಗುಮಾಸ್ತರಾಗಿ ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ‘ಕಾರವಾನ್’, ಅವರನ್ನು ಸಂಪರ್ಕಿಸಿದಾಗ ತಾವು 2014ರ ನವೆಂಬರಿನಲ್ಲಿ ಭವನದ ಕೊಠಡಿ ಮೀಸಲಾತಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದುದನ್ನು ದೃಢಪಡಿಸಿದರು. 1983ರಿಂದ 2015ರವರೆಗೆ ರವಿಭವನದಲ್ಲಿ ಸಾವಂತ್ ಸೇವೆ ಸಲ್ಲಿಸಿದ್ದಾರೆ. ಅಂತಹ ಸೂಚನೆಗಳಿರುವ ಪತ್ರಗಳು ತಮಗೆ ಬರುತ್ತಿದ್ದುದು ಸಾಮಾನ್ಯ ಎಂದಿರುವ ಸಾವಂತ್, ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕೊಠಡಿಗಳನ್ನು ಮೀಸಲಿಡಲಾಗುತ್ತಿತ್ತು. ಆಗ ತಮ್ಮ ಮೇಲಾಧಿಕಾರಿಯಾಗಿದ್ದವರು ರವಿ ಭವನದ ವ್ಯವಸ್ಥಾಪಕರಾಗಿದ್ದ ಸಂಜಯ್ ಉಪಾಧ್ಯಾಯ. ಉಪಾಧ್ಯಾಯ ಅವರನ್ನು ‘ಕಾರವಾನ್’ ಸಂಪರ್ಕಿಸಿದಾಗ ತಾವು ಆ ಸಮಯದಲ್ಲಿ ಭವನದ ವ್ಯವಸ್ಥಾಪಕರಾಗಿದ್ದುದನ್ನು ದೃಢಪಡಿಸಿದರು. ಆದರೆ ಪತ್ರ ಕುರಿತು ಪ್ರಶ್ನೆ ಕೇಳಿದಾಗ ಫೋನ್ ಕರೆ ಕತ್ತರಿಸಿದರು. ನಂತರ ಮಾಡಲಾದ ಕರೆಗಳಿಗೂ ಅವರು ಉತ್ತರಿಸಲಿಲ್ಲ; ಅಲ್ಲದೇ ಪತ್ರದ ಇಮೇಜ್ ಲಗತ್ತಿಸಿ ಕಳಿಸಲಾಗಿದ್ದ ವಾಟ್ಸಪ್ ಸಂದೇಶಗಳಿಗೂ ಉತ್ತರ ನೀಡಲಿಲ್ಲ.

ಸಾವಂತ್ ಅವರು “ಪತ್ರದ ಕುರಿತು ನೆನಪಿಲ್ಲ, ತುಂಬಾ ಜನ ನ್ಯಾಯಾಧೀಶರು ಮತ್ತಿತರ ವ್ಯಕ್ತಿಗಳು ಬಂದು ಹೋಗುತ್ತಿರುತ್ತಾರೆ. ಕೊಠಡಿಗೆ ಅತಿಥಿಗಳು ಹೋಗಿ ಬರುವ ಸಮಯ, ಬಂದವರು ಹೋದರೇ ಉಳಿದಿದ್ದಾರೆಯೇ ಎಂಬೆಲ್ಲಾ ವಿವರಗಳು ಸದಾ ನಮಗೆ ಗೊತ್ತಾಗುವುದಿಲ್ಲ. ಜೋಷಿ ಮತ್ತು ಲೋಯಾ ನಿಜಕ್ಕೂ ರವಿ ಭವನಕ್ಕೆ ಬಂದಿದ್ದರೇ ಎಂಬುದು ಕೂಡ ನೆನಪಿಲ್ಲ. ಭವನಕ್ಕೆ ಅತಿಥಿಯಾಗಿ ಬಂದಿದ್ದವರೊಬ್ಬರು ಮೃತಪಟ್ಟರು ಎಂಬ ಸುದ್ದಿ 2014ರಲ್ಲಿ ಗೊತ್ತಾಗಲೇ ಇಲ್ಲ. 2017ರಲ್ಲಿ ಪತ್ರಿಕೆಗಳ ಮೂಲಕವೇ ಸಾವಂತ್ ಅವರಿಗೆ ಲೋಯಾ ಸಾವಿನ ಸುದ್ದಿ ತಿಳಿಯಿತಂತೆ. “ಭವನದಲ್ಲಿದ್ದ ಯಾರೊಬ್ಬರಿಗೂ ಇಂಥ ಘಟನೆ ನಡೆದಿರುವುದು ಆಗ ಗೊತ್ತಿರಲಿಲ್ಲ,” ಎನ್ನುತ್ತಾರೆ ಅವರು.

ಜೂನ್ 7ರಂದು ಉಕೆ ಮತ್ತು ಪೈ “ಸೇವೆಯಲ್ಲಿದ್ದ ನ್ಯಾಯಾಧೀಶರೊಬ್ಬರು ಮೃತಪಟ್ಟಿದ್ದು ಈ ಸಂಬಂಧ ಲೋಯಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕು,” ಎಂದು ಕೋರಿ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ನಿಯತಕಾಲಿಕಕ್ಕೆ ಉತ್ತರಿಸಿದ ಪೈ “ಲೋಯಾ ನಿಜಕ್ಕೂ ಅಧಿಕೃತ ಕಾರ್ಯದ ಮೇಲೆ ನಾಗಪುರಕ್ಕೆ ತೆರಳಿದ್ದರೆ ಅಥವಾ ಖಾಸಗಿ ಕಾರ್ಯಕ್ರಮವಾದ ತಮ್ಮ ಸಹೋದ್ಯೋಗಿಯ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರೆ ಎಂಬುದು ಗೊಂದಲ ಹುಟ್ಟಿಸಿದೆ. ಕೊನೆಗೂ ಇದು ಸ್ಪಷ್ಟವಾಗಿಲ್ಲ,” ಎಂದಿದ್ದಾರೆ.

ಲೋಯಾ ಅವರದು ಸಹಜ ಸಾವು ಎಂದು ಮಹಾರಾಷ್ಟ್ರದ ಗುಪ್ತಚರ ಇಲಾಖೆ ಸುಪ್ರೀಂಕೋರ್ಟಿಗೆ ಸಲ್ಲಿಸಿದ ವಿವರ ನಂಬಲರ್ಹವೇ ಎಂಬುದನ್ನು ಪ್ರಶ್ನಿಸುವಂತಿವೆ ಹೊಸದಾಗಿ ಲಭಿಸಿರುವ ದಾಖಲೆಗಳು. ಅಲ್ಲದೆ ಈ ದಾಖಲೆಗಳಿಂದಾಗಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ:

  • ಲೋಯಾ ಅವರ ನಾಗಪುರದ ಅಧಿಕೃತ ಪ್ರವಾಸಕ್ಕೆ ಅನುಮತಿ ನೀಡಿದ್ದು ಮತ್ತು ರವಿ ಭವನದಲ್ಲಿ ಅವರಿಗಾಗಿ ಕೊಠಡಿ ಕಾಯ್ದಿರಿಸಿದ್ದು ಯಾರು?
  • ಲೋಯಾ ಅವರಿಗೆ ಪ್ರವಾಸದ ಬಗ್ಗೆ ಗೊತ್ತಿತ್ತೆ?
  • ಪೊಲೀಸರು ತನಿಖೆ ಆರಂಭಿಸಿದ ಬಳಿಕವೂ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ನಾಶವಾಗಿರುವುದೇಕೆ?
  • ಭವನದ ನೋಂದಣಿ ಪುಸ್ತಕದಲ್ಲಿ ಲೋಯಾ ವಾಸ್ತವ್ಯ ಹೂಡಿದ್ದರ ಬಗ್ಗೆ ಯಾಕೆ ದಾಖಲೆಗಳಿಲ್ಲ?
  • ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ವಕೀಲರು ನಾಗಪುರಕ್ಕೆ ಲೋಯಾ ತೆರಳುವ ಕೇವಲ ಎರಡು ದಿನಗಳ ಮೊದಲು ಅವರ ವಾಸ್ತವ್ಯ ಕುರಿತು ನೋಂದಾಯಿಸಿರುವುದರ ಬಗ್ಗೆ ಸುಪ್ರೀಂಕೋರ್ಟಿಗೆ ಮನವಿ ಮಾಡಿಕೊಡಲು ವಿಫಲವಾಗಿರುವುದೇಕೆ? ಅಥವಾ ಅವರು ಅಧಿಕೃತ ಪ್ರವಾಸ ಕೈಗೊಂಡಿದ್ದರೆ ಇಲ್ಲವೇ ಎಂಬುದರ ವಿವರಗಳು ಯಾಕೆ ಇಲ್ಲ?
  • ಮಹಾರಾಷ್ಟ್ರದ ಗುಪ್ತಚರ ಇಲಾಖೆ ಪ್ರಕರಣದ ಕುರಿತು ಸಮಗ್ರ ತನಿಖೆ ಕೈಗೆತ್ತಿಕೊಂಡಾಗ ಈ ವಿವರಗಳನ್ನು, ದಾಖಲೆಗಳನ್ನು ಮುಚ್ಚಿಟ್ಟಿದ್ದು ಏಕೆ?
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More