ಭೂಖರೀದಿ ಹೊಂದಾಣಿಕೆ ಸಾಧ್ಯವಾಗದೆ ನೆನೆಗುದಿಗೆ ಬಿದ್ದ ಬುಲೆಟ್ ಟ್ರೈನ್ ಯೋಜನೆ

ಮಹಾರಾಷ್ಟ್ರದ ರೈತರು ಬುಲೆಟ್ ಟ್ರೈನ್ ಯೋಜನೆಗೆ ಭೂಮಿ ಕೊಡಲು ನಿರಾಕರಿಸಿದ್ದಾರೆ. ಎನ್‌ಡಿಎಯ ಮಿತ್ರಪಕ್ಷವಾಗಿರುವ ಶಿವಸೇನೆ ಮತ್ತು ಇತರ ವಿಪಕ್ಷಗಳು ರೈತರ ಪ್ರತಿಭಟನೆಯನ್ನು ಬೆಂಬಲಿಸಿವೆ. ಹೀಗಾಗಿ ಯೋಜನೆ ವಿಳಂಬವಾಗುವ ಸೂಚನೆ ಇದೆ ಎಂಬ ಎನ್‌ಡಿಟಿವಿ ವರದಿಯ ಭಾವಾನುವಾದ

ಪ್ರಧಾನಿ ನರೇಂದ್ರ ಮೋದಿಯವರು ಬಹಳ ಉತ್ಸಾಹದಿಂದ ಜಾರಿಗೆ ತಂದ ಸ್ಮಾರ್ಟ್ ಸಿಟಿ, ಸ್ವಚ್ಛಭಾರತ ಹಾಗೂ ಬುಲೆಟ್ ಟ್ರೈನ್‌ನಂತಹ ಕೆಲವು ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಬುಲೆಟ್ ಟ್ರೈನ್ ಕಾಮಗಾರಿಯ ಶಂಕು ಸ್ಥಾಪನೆಯಾಗುವುದು, ಸ್ಮಾರ್ಟ್ ಸಿಟಿ ಯೋಜನೆ ಅಲ್ಪ ಸ್ವಲ್ಪವಾದರೂ ಪ್ರಗತಿ ಕಾಣುವುದು, ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗಿರುವುದಕ್ಕಾಗಿ ಪುರಾವೆ ಒದಗಿಸುವುದು ಮೋದಿ ಸರ್ಕಾರಕ್ಕೆ ಅತೀ ಅಗತ್ಯವಾಗಿದೆ. ಆದರೆ ಬಿಜೆಪಿ ಸರ್ಕಾರದ ಅತೀ ನಿರೀಕ್ಷಿತ ಬುಲೆಟ್ ಟ್ರೈನ್ ಯೋಜನೆ ಮಾತ್ರ ಕುಂಟುತ್ತಲೇ ಸಾಗಿದೆ. ಕಾಮಗಾರಿ ಆರಂಭವಾಗುವುದು ಬಿಡಿ, ಶಂಕು ಸ್ಥಾಪನೆಗೆ ಸರ್ಕಾರ ನಿರ್ಧರಿಸಿರುವ ಡಿಸೆಂಬರ್‌ನ ಅಂತಿಮ ಗಡುವನ್ನೂ ಮೀರುವ ಸಾಧ್ಯತೆಯಿದೆ. ಬುಲೆಟ್ ಟ್ರೈನ್ ಯೋಜನೆಗಾಗಿ ಜಪಾನ್ ಸರ್ಕಾರದ ಜೊತೆಗೆ ಮೈತ್ರಿ ಮಾಡಿಕೊಂಡ ಬಳಿಕ ಸರ್ಕಾರ ಡಿಸೆಂಬರ್ ಒಳಗೆ ಕಾಮಗಾರಿ ಆರಂಭಿಸುವ ಭರವಸೆಯಲ್ಲಿತ್ತು. ಆದರೆ ಮಹಾರಾಷ್ಟ್ರದಲ್ಲಿ ಭೂಮಿ ಸ್ವಾಧೀನಕ್ಕಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಕೈಗೂಡುವ ಸಾಧ್ಯತೆ ಕಾಣಿಸುತ್ತಿಲ್ಲ.

ಮುಂಬೈ ಮತ್ತು ಅಹಮದಾಬಾದ್ ನಡುವೆ ಓಡಬೇಕಾಗಿರುವ ಬುಲೆಟ್ ಟ್ರೈನ್ ಯೋಜನೆ ೧೭ ಶತಕೋಟಿ ಡಾಲರ್ ವೆಚ್ಚದಲ್ಲಿ ಯೋಜಿಸಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಭೂ ಸ್ವಾದೀನ ವಿಚಾರವಾಗಿ ರೈತರು ತೀವ್ರ ವಿರೋಧ ವ್ಯಕ್ತಪಡಿಸಿರುವುದು ಯೋಜನೆಗೆ ಹಿನ್ನಡೆಯಾಗಿದೆ. ಡಿಸೆಂಬರ್ ಒಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಜಪಾನ್‌ಗೆ ಭರವಸೆ ನೀಡುವ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ವಾರಕ್ಕೊಮ್ಮೆ ಮಹಾರಾಷ್ಟ್ರವನ್ನು ಸಂಪರ್ಕಿಸಿ ರೈತರ ಜತೆಗಿನ ಒಪ್ಪಂದದ ಫಲಿತಾಂಶ ಏನಾಗಿದೆ ಎಂದು ವಿಚಾರಿಸಿಕೊಳ್ಳುತ್ತಲೇ ಇದೆ. ಒಟ್ಟಾರೆ ಬುಲೆಟ್ ಟ್ರೈನ್ ಕಾರಿಡಾರ್‌ನ ಐದನೇ ಒಂದು ಭಾಗದ ಭೂ ಸ್ವಾಧೀನ ಮಹಾರಾಷ್ಟ್ರದಲ್ಲಿ ವಿಳಂಬವಾಗಿದೆ. ಉದ್ದೇಶಿತ ಭೂಮಿಯಲ್ಲಿ ಮುಖ್ಯವಾಗಿ ಸಪೋಟಾ ಮತ್ತು ಮಾವಿನಹಣ್ಣು ಬೆಳೆಯಲಾಗುತ್ತದೆ. ಬೆಳೆಗಾರರು ತಮ್ಮ ಭೂಮಿಯನ್ನು ಯೋಜನೆಗೆ ನೀಡಲು ಸಿದ್ಧರಿಲ್ಲ. ಬೆಳೆಗಾರರ ಪ್ರತಿಭಟನೆಗೆ ಸ್ಥಳೀಯ ರಾಜಕಾರಣಿಗಳೂ ಬೆಂಬಲ ನೀಡಿರುವುದು ಈಗ ರಾಜ್ಯ ಬಿಜೆಪಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮಹಾರಾಷ್ಟ್ರದಲ್ಲಿ 108 ಕಿಮೀ (67 ಮೈಲಿ) ಉದ್ದದ ಪ್ರದೇಶದಲ್ಲಿ ಬೆಳೆಗಾರರು ಭೂಮಿ ಕೊಡಲು ನಿರಾಕರಿಸುತ್ತಿದ್ದಾರೆ. ಮಹಾರಾಷ್ಟ್ರದ ಬೆಳೆಗಾರರ ಬಳಿ ಭೂಮಿ ನೀಡದೆ ಇರಲು ತಮ್ಮದೇ ಆದ ಕಾರಣಗಳಿವೆ. “ನಾನು ಈ ತೋಟವನ್ನು ಬೆಳೆಸಲು ಮೂರು ದಶಕಗಳ ಕಾಲ ಕೆಲಸ ಮಾಡಿದ್ದೇನೆ. ಈಗ ಈ ಭೂಮಿಯನ್ನು ಸರ್ಕಾರಕ್ಕೆ ಕೊಡಬೇಕೆಂದು ಕೇಳುತ್ತಿದ್ದಾರೆ. ನಾನು ಇಲ್ಲಿ ಬಹಳ ಕಠಿಣ ಶ್ರಮ ಹಾಕಿ ತೋಟ ಸಿದ್ಧಪಡಿಸಿದ್ದೇನೆ. ನನ್ನ ಮಕ್ಕಳಿಗಾಗಿ ಇದನ್ನು ಬೆಳೆಸಿದ್ದೇನೆ. ಸರ್ಕಾರಕ್ಕೆ ಕೊಡಲು ಸಾಧ್ಯವಿಲ್ಲ” ಎಂದು ಪಾಲ್ಘಾಟ್ ಪಟ್ಟಣದ ೬೨ ವರ್ಷ ಪ್ರಾಯದ ಸಪೋಟಾ ಬೆಳೆಗಾರ ದಶರಥ ಪೂರವ್ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ತಮ್ಮ ಇಬ್ಬರು ನಿರುದ್ಯೋಗಿ ಗಂಡು ಮಕ್ಕಳಿಗೆ ಸರ್ಕಾರಿ ನೌಕರಿಯನ್ನು ಕೊಟ್ಟರೆ ಮಾತ್ರ ತನ್ನ ತೋಟವನ್ನು ಸರ್ಕಾರಕ್ಕೆ ಮಾರುವುದಾಗಿ ಪೂರವ್ ಹೇಳುತ್ತಾರೆ.

ಇದನ್ನೂ ಓದಿ : ಹೈಪರ್ ಲೂಪ್ ಬಂದರೆ ಬೆಂಗಳೂರ್ - ಚೆನ್ನೈ ನಡುವಿನ ಪ್ರಯಾಣ ಬರೀ 20 ನಿಮಿಷ

ಲಕ್ಷಾಂತರ ರೈತರು ಇನ್ನೂ ಸಣ್ಣ ಹಿಡುವಳಿದಾರರಾಗಿರುವ ಭಾರತದಲ್ಲಿ ಭೂ ಸ್ವಾಧೀನದ ವಿರುದ್ಧ ಪ್ರತಿಭಟನೆ ಸಾಮಾನ್ಯವಾಗಿರುತ್ತದೆ. ಜಗತ್ತಿನ ಅತೀ ದೊಡ್ಡ ತೈಲ ಉತ್ಪಾದಕ ಸೌದಿ ಅರಮ್ಕೋ ಸಂಸ್ಥೆಯೂ ಇರುವ ಸಮೂಹ ಸಂಸ್ಥೆಗಳ (ಕನ್ಸಾರ್ಟಿಯಂ) ನೇತೃತ್ವದಲ್ಲಿ ರು. ೪೪ ಶತಕೋಟಿ ವೆಚ್ಚದ ರಿಫೈನರಿಯನ್ನೂ ಮಹಾರಾಷ್ಟ್ರದಲ್ಲಿಯೇ ಯೋಜಿಸಲಾಗಿದ್ದು, ಭೂ ಸ್ವಾಧೀನವಾಗದೆ ವಿಳಂಬವಾಗುತ್ತಿದೆ. "ಭಾರತದಲ್ಲಿ ಯಾವುದೇ ಯೋಜನೆಗೂ ಭೂ ಸ್ವಾಧೀನ ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ, ಇಲ್ಲಿಯೂ ನಾವು ಜನರ ಪ್ರತಿರೋಧದಿಂದಾಗಿ ಸಮಸ್ಯೆ ಎದುರಿಸುತ್ತಿದ್ದೇವೆ” ಎಂದು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪ್ ಲಿಮಿಟೆಡ್ ವಕ್ತಾರ ಧನಂಜಯ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ವಿಳಂಬವಾದಲ್ಲಿ ಜಪಾನ್‌ನಿಂದ ಸಿಗಲಿರುವ ಮೃದುಸಾಲದ ಹಂಚಿಕೆಯನ್ನೂ ನಿಧಾನಗೊಳಿಸಲಿದೆ. ಏಕೆಂದರೆ, ಮುಂದಿನ ತಿಂಗಳು ಜಪಾನ್‌ನ ಸರ್ಕಾರಿ ಸಂಸ್ಥೆಯಾಗಿರುವ ಜಪಾನ್ ಇಂಟರ್‌ ನ್ಯಾಷನಲ್‌ ಕಾರ್ಪೋರೇಶನ್ ಏಜೆನ್ಸಿಯು (ಜೆಐಸಿಎ) ಭಾರತೀಯ ರೈಲ್ವೆಯ ಇಬ್ಬರು ಹಿರಿಯ ಅಧಿಕಾರಿಗಳ ಜೊತೆಗೆ ಈ ಯೋಜನೆಯ ಸಮೀಕ್ಷೆ ನಡೆಸುವ ಸಮಯಕ್ಕೆ ಭೂಮಿ ಸ್ವಾಧೀನ ಕೆಲಸ ಪೂರ್ಣಗೊಂಡಿರಬೇಕಿದೆ. “ಭಾರತ ಸರ್ಕಾರವು ಸ್ಥಳೀಯರಿಗೆ ಸೂಕ್ತ ಪುನರ್ವಸತಿ ಯೋಜನೆಗಳನ್ನು ರೂಪಿಸಬೇಕು ಮತ್ತು ಅದನ್ನು ಸಾರ್ವಜನಿಕರ ಮುಂದೆ ಇಡಬೇಕಾಗುತ್ತದೆ. ಆಗ ಮಾತ್ರವೇ ಬುಲೆಟ್ ಟ್ರೈನ್ ಯೋಜನೆಯ ಮುಖ್ಯ ಭಾಗವನ್ನೂ ಸೇರಿದ ಸಾಲದ ಒಪ್ಪಂದ ಊರ್ಜಿತವಾಗುತ್ತದೆ” ಎಂದು ಜೆಐಸಿಎಯ ವಕ್ತಾರರು ಹೇಳಿದ್ದಾರೆ. “ಪರಿಸರ ಮತ್ತು ಸಾಮಾಜಿಕ ಪರಿಗಣನೆಗಳಿಗೆ ಸಂಬಂಧಿಸಿದ ಜೆಐಸಿಎ ಮಾರ್ಗದರ್ಶಿಗಳಿಗೆ ತಕ್ಕಂತೆ ಭಾರತವು ಅತೀ ಸೂಕ್ತ ಮತ್ತು ಜಾಗರೂಕವಾಗಿ ಕ್ರಮ ಕೈಗೊಳ್ಳುತ್ತಿರುವ ಕಾರಣದಿಂದ ಒಪ್ಪಂದಕ್ಕೆ ಸಹಿ ಹಾಕಲು ಸಮಯ ಹಿಡಿಯುವ ಸಾಧ್ಯತೆಯಿದೆ” ಎಂದೂ ಅವರು ಹೇಳಿದ್ದಾರೆ.

ಜಪಾನಿನ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಟೋಕಿಯೋದಲ್ಲಿ ಈ ತಿಂಗಳು ಸಾರಿಗೆ ಸಚಿವಾಲಯದ ಜೊತೆಗೆ ಚರ್ಚಿಸಲಿದ್ದಾರೆ. ಸರ್ಕಾರವು ಯೋಜನೆ ಪೂರ್ಣಗೊಳ್ಳುವ ಗುರಿಯನ್ನು ಭಾರತ ೭೫ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುವ ಸಂದರ್ಭದಲ್ಲಿ 2022ಕ್ಕೆ ಹಿಂದೂಡಲು ಯೋಜಿಸಿದೆ. ಬುಲೆಟ್ ಟ್ರೈನ್ ಯೋಜನೆಯ ಒಡಂಬಡಿಕೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಗಮನಿಸಿಕೊಳ್ಳುತ್ತಿರುವ ಜಪಾನ್ ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಭೂಸ್ವಾಧೀನವನ್ನು ಯಾವುದೇ ತಕರಾರಿಲ್ಲದೆ ಪೂರ್ಣಗೊಳಿಸುವ ಭರವಸೆಯನ್ನು ಭಾರತೀಯ ಅಧಿಕಾರಿಗಳು ಜಪಾನ್ಗೆ ನೀಡಿದ್ದಾರೆ. “ಯೋಜನೆಯನ್ನು 2023ಕ್ಕೆ ಮುಗಿಸುವ ನಮ್ಮ ಗುರಿಯನ್ನು ಸಾಧಿಸಲು ಭಾರತ ಸರ್ಕಾರದ ಜೊತೆಗೆ ಸಹಯೋಗದಲ್ಲಿ ಮುಂದುವರಿಯಲಿದ್ದೇವೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಜಪಾನ್ ೫೦ ವರ್ಷಗಳಿಗೆ ಸಾಲ ಕೊಡುವ ಮೂಲಕ ಭಾರತದ ಬುಲೆಟ್ ಟ್ರೈನ್ ಯೋಜನೆಗೆ ಬಹುತೇಕ ಅನುದಾನವನ್ನು ನೀಡುತ್ತಿದೆ. ಜಪಾನ್ ಸಂಸ್ಥೆಗಳಾದ ನಿಪ್ಪೋನ್ ಸ್ಟೀಲ್ ಮತ್ತು ಸಮಿಟೊಮೊ ಮೆಟಲ್ ಕಾರ್ಪ್, ಜೆಇಇ ಹೋಲ್ಡಿಂಗ್ಸ್, ಕವಾಸಕಿ ಹೆವಿ ಇಂಡಸ್ಟ್ರೀಸ್, ಮಿಟ್ಸುಬಿಶಿ ಹೆವಿ ಇಂಡಸ್ಟ್ರೀಸ್, ತೊಶಿಬಾ ಕಾರ್ಪ್ ಮತ್ತು ಹಿಟಾಚಿ ಮೊದಲಾದವು ರೈಲ್ವೇ ಹಳಿಗಳಿಗೆ ಬೇಕಾಗಿರುವ ಮೂಲವಸ್ತುಗಳ ಕನಿಷ್ಠ ಶೇ. ೭೦ರಷ್ಟನ್ನು ಸರಬರಾಜು ಮಾಡಲಿವೆ.

ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಆಶಯದ ನಿಟ್ಟಿನಲ್ಲಿ ನೋಡಿದಲ್ಲಿ ಇದು ಬಹಳ ಪ್ರಮುಖ ಯೋಜನೆಯಾಗಿದೆ. ನೂರಾರು ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಭಾರತದ ಅರ್ಥ ವ್ಯವಸ್ಥೆಯ ಪ್ರಗತಿಗೆ ಉತ್ಪಾದನಾ ಕ್ಷೇತ್ರದ ಬೆಳವಣಿಗೆಯ ಗುರಿಯನ್ನು ಈ ರೈಲ್ವೇ ಯೋಜನೆಯ ಮೂಲಕ ಸರ್ಕಾರ ಹೊಂದಿದೆ. ಹೀಗಾಗಿ ಪುನರ್ವಸತಿಗಾಗಿ ರೈಲ್ವೇ ಇಲಾಖೆಯೇ ಶಾಲೆಗಳು ಮತ್ತು ಸಮುದಾಯ ಭವನಗಳನ್ನು ನಿರ್ಮಿಸಲು ಇಟ್ಟಿರುವ ತನ್ನದೇ ಕಲ್ಯಾಣ ಯೋಜನೆಗಳ ಅನುದಾನವನ್ನು ಬಳಸಿಕೊಂಡು ಯೋಜನೆಯ ಯಶಸ್ಸಿಗೆ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಮೋದಿ ಸರ್ಕಾರ ಮಾರುಕಟ್ಟೆ ಮೌಲ್ಯಕ್ಕೆ ಶೇ. ೨೫ರಷ್ಟು ಪ್ರೀಮಿಯಂ ದರದಲ್ಲಿ ಭೂಖರೀದಿಗೆ ಪ್ರಯತ್ನಿಸುತ್ತಿದೆ. ಅಲ್ಲದೆ ರೈತರಿಗೆ ಐದು ಲಕ್ಷ ರೂಪಾಯಿಗಳ ಪುನರ್ವಸತಿ ಅಥವಾ ಶೇ. ೫೦ರಷ್ಟು ಭೂಮಿ ಮೌಲ್ಯದಲ್ಲಿ ಯಾವುದು ಅಧಿಕವೋ ಅದನ್ನು ನೀಡಲು ನಿರ್ಧರಿಸಿದೆ. ಆದರೆ ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಾಲ್ಘಾಟ್‌ನ ಸ್ಥಳೀಯ ವಿರೋಧ ಪಕ್ಷಗಳು ಬೆಳೆಗಾರರ ಪರವಾಗಿ ನಿಂತಿದ್ದಾರೆ. ಬುಲೆಟ್ ಟ್ರೈನ್ ಅನಗತ್ಯ ಖರ್ಚು, ಇದಕ್ಕೆ ಬದಲಾಗಿ ದೇಶದ ರೈಲ್ವೇ ಮೂಲ ಸೌಕರ್ಯವನ್ನು ಸುಧಾರಿಸುವುದಕ್ಕೆ ಹೆಚ್ಚು ಗಮನಕೊಡಬೇಕು ಎನ್ನುವ ವಾದವನ್ನು ವಿರೋಧ ಪಕ್ಷಗಳು ಮುಂದಿಡುತ್ತಿದೆ. ಈ ನಡುವೆ ರೈತರು ಉಪವಾಸ ಸತ್ಯಾಗ್ರಹಕ್ಕೆ ಇಳಿಯುವ ಬೆದರಿಕೆಯನ್ನು ಹಾಕಿದ್ದಾರೆ. ಕಳೆದ ವಾರ ರೈತರು ಮತ್ತು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಇತ್ತೀಚೆಗೆ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪ್ ಲಿಮಿಟೆಡ್ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲೂ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಹೈಸ್ಪೀಡ್ ರೈಲ್ವೇ ಕಳೆದೊಂದು ತಿಂಗಳಲ್ಲಿ ಇದು ಎರಡನೇ ಬಾರಿ ಸಾರ್ವಜನಿಕ ಅಹವಾಲು ಸಭೆ ನಡೆಸಲು ಪ್ರಯತ್ನ ನಡೆಸಿತ್ತು. ಕಳೆದ ತಿಂಗಳು ನಡೆಸಿದ ಸಭೆಯನ್ನೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅರ್ಧದಲ್ಲೇ ನಿಲ್ಲಿಸಬೇಕಾಗಿ ಬಂದಿತ್ತು. ಬಿಜೆಪಿಯ ಸಹಯೋಗಿ ಪಕ್ಷವೇ ಆಗಿರುವ ಶಿವಸೇನೆಯೇ ಈ ವಿಚಾರದಲ್ಲಿ ಬೆಳೆಗಾರರ ಪರವಾಗಿ ನಿಂತಿದೆ. “ಮುಂದಿನ ವಾರಗಳಲ್ಲಿ ನಾವು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಿದ್ದೇವೆ” ಎಂದು ಶಿವಸೇನೆ ವಕ್ತಾರ ನೀಲಂ ಗೋರ್ಹೆ ಹೇಳಿದ್ದಾರೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More