ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ಪ್ರಮುಖ ಸುದ್ದಿಗಳು  

ಇಂದಿನ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ  

ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆಯ ಫಲಿತಾಂಶ ಇಂದು

ಜಯನಗರ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಕಣವಾಗಿದ್ದು, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಶಾಸಕ ಬಿ.ಎನ್.ವಿಜಯಕುಮಾರ್ ಅವರು ಅಕಾಲಿಕ ನಿಧನದಿಂದಾಗಿ ಚುನಾವಣೆ ಮುಂದೂಡಲ್ಪಟ್ಟಿತ್ತು. ಅನುಕಂಪದ ಲಾಭ ಪಡೆಯಲು ವಿಜಯಕುಮಾರ್ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷ ಮಾಜಿ ಸಚಿವ ರಾಮಲಿಂಗಾರೆಡ್ಡಿಯವರ ಪುತ್ರಿ ಸೌಮ್ಯಾ ರೆಡ್ಡಿಯವರನ್ನು ಸ್ಪರ್ಧೆಗಿಳಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣ ರೆಡ್ಡಿಯವರು ಸ್ಪರ್ಧಿಸಿದ್ದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದರು.

‘ಆಯುಷ್ಮಾನ್‌ ಭಾರತ’: ಇಂದು 10 ರಾಜ್ಯಗಳಿಂದ ಒಪ್ಪಂದಕ್ಕೆ ಸಹಿ

ಕೇಂದ್ರದ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಭಾರತ ಆರೋಗ್ಯ ವಿಮಾ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹತ್ತಕ್ಕೂ ಹೆಚ್ಚು ರಾಜ್ಯಗಳ ಜತೆಗೆ ಇಂದು ಒಪ್ಪಂದ ಮಾಡಿಕೊಳ್ಳಲಿದೆ. ಪ್ರತಿ ಕುಟುಂಬಕ್ಕೆ ₹5 ಲಕ್ಷ ಆರೋಗ್ಯ ವಿಮೆ ಒದಗಿಸುವ ಯೋಜನೆ ಇದಾಗಿದ್ದು. 10 ಕೋಟಿಗೂ ಹೆಚ್ಚು ಕುಟುಂಬಗಳು ಇದರ ವ್ಯಾಪ್ತಿಗೆ ಬರಲಿವೆ. 13 ರಾಜ್ಯಗಳು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. .ಕರ್ನಾಟಕ ಈವರೆಗೆ ಈ ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ. ಇಲ್ಲಿನ ನೂತನ ಸರ್ಕಾರ ಜೂನ್‌ ತಿಂಗಳ ಕೊನೆಯೊಳಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಇಂದು ಸಂಸತ್‌ನಲ್ಲಿ ಕೇಂದ್ರದ ಮಂತ್ರಿ ಪರಿಷತ್‌ ಸಭೆ

ಬಿಜೆಪಿ ಸರ್ಕಾರದ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇಂದ್ರ ಮಂತ್ರಿ ಪರಿಷತ್ ಸಭೆ ಕರೆದಿದ್ದಾರೆ. ಸಂಸತ್‌ ಭವನದಲ್ಲಿ ಸಭೆ ನಡೆಯಲಿದ್ದು ಈ ಮಹತ್ವದ ಸಭೆಯಲ್ಲಿ ಭಾಗವಹಿಸುವಂತೆ ಎಲ್ಲ ಸಚಿವರೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ, ನವೋದ್ಯಮ ನಿಧಿ ಯೋಜನೆ, ಪ್ರಧಾನಮಂತ್ರಿ ಜನೌಷಧಿ ಯೋಜನೆ, ಆಯುಷ್ಮಾನ್‌ ಭಾರತ, ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಪ್ರಮುಖ ಜಾರಿಗೊಳ್ಳಲಿರುವ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನಿಧಾನಗತಿಯಲ್ಲಿ ನಿಷ್ಕ್ರಿಯ ಸಾಲ ವಸೂಲಿ

ನಿಷ್ಕ್ರಿಯ ಸಾಲ ವಸೂಲಿ ಮಾಡುವ ಸಲುವಾಗಿ ಒಂದು ವರ್ಷದ ಹಿಂದೆ ಆರ್ ಬಿ ಐ ಜಾರಿಗೆ ತಂದ ಸಾಲ ವಿಲೇವಾರಿ ಯೋಜನೆ ನಿಧಾನ ಗತಿಯಲ್ಲಿ ಸಾಗಿದೆ. 12 ಪ್ರಮುಖ ಸಾಲಗಾರರು ಹೊಂದಿರುವ 3 ಲಕ್ಷ ಕೋಟಿ ರೂಪಾಯಿ ವಸೂಲಿ ಮಾಡಲು ತ್ವರಿತ ಸಾಲ ವಿಲೇವಾರಿ ಯೋಜನೆ ಜಾರಿಗೆ ಬಂದಿತು. ಇದುವರೆಗೆ ಕೇವಲ 30000 ಕೋಟಿ ರುಪಾಯಿ ವಿಲೇವಾರಿ ಆಗಿದ್ದು, ಒಂದು ವರ್ಷದ ಸಾಧನೆ ಕೇವಲ ಶೇ.10ರಷ್ಟು ಮಾತ್ರ. 12 ಸಾಲಗಾರರ ಪೈಕಿ ಒಬ್ಬ ಸಾಲಗಾರನಿಂದ ವಸೂಲಿ ಮಾಡಲು ಸಾಧ್ಯ ವಾಗಿದೆ. ಈ ನಡುವೆ ವಸೂಲಾಗದ ಒಟ್ಟು ಸಾಲದ ಪ್ರಮಾಣಕ್ಕೆ ಮತ್ತಷ್ಟು ಸೇರ್ಪಡೆಯಾಗಿ 10 ಲಕ್ಷ ಕೋಟಿ ದಾಟಿದೆ. ಆರ್ಬಿಐ ತ್ವರಿತ ವಸೂಲಿಗೆ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲಕಾರಿ

ಇಂದು ದೆಹಲಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ ಕಾಂಗ್ರೆಸ್ ನಾಯಕರು

ಕಾಂಗ್ರೆಸ್‌ ಪಕ್ಷ ಇಂದು ಇಫ್ತಾರ್‌ ಕೂಟ ಏರ್ಪಡಿಸಲು ತೀರ್ಮಾನಿಸಿದೆ. ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇಫ್ತಾರ್‌ ಕೂಟ ಆಯೋಜಿಸುತ್ತಿರುವುದು ಇದೇ ಮೊದಲು. ದಿಲ್ಲಿಯ ತಾಜ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಇಫ್ತಾರ್‌ ಕೂಟ ನಡೆಯಲಿದೆ,ಎಂದು ಎಐಸಿಸಿ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ನದೀಮ್‌ ಜಾವೇದ್‌ ಮಾಹಿತಿ ನೀಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More