ಶಿಕ್ಷಣ ಸಚಿವ ಬಿಎಸ್‌ಪಿ ಮಹೇಶ್ ಕಚೇರಿಯಲ್ಲಿ ಗಾಂಧಿಗೇ ಇಲ್ಲ ಜಾಗ!

ಯಾವುದೇ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಮಹನೀಯರ ಭಾವಚಿತ್ರಗಳಲ್ಲಿ ಗಾಂಧೀಜಿ ಚಿತ್ರವೂ ಪ್ರಧಾನವಾಗಿರುತ್ತದೆ. ಆದರೆ, ರಾಜ್ಯ ಶಿಕ್ಷಣ ಸಚಿವರ ಕಚೇರಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳಿದ್ದರೂ, ಗಾಂಧೀಜಿಗೆ ಜಾಗ ಸಿಕ್ಕಿಲ್ಲ 

ಈಚೆಗೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಬಿಎಸ್ಪಿ ಶಾಸಕ ಎನ್ ಮಹೇಶ್ ಮಂತ್ರಿಯಾಗಿ ಬುದ್ಧ, ಬಸವ, ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು. ಸಾಂವಿಧಾನಿಕವಾಗಿ ದತ್ತವಾದ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನವನ್ನು ಹೆಚ್ಚಿನವರು ದೇವರು, ಮನೆದೇವರುಗಳ ಹೆಸರಿನಲ್ಲಿ ಸ್ವೀಕರಿಸುತ್ತಿದ್ದಾಗ ತನ್ನದೇ ಸೈದ್ಧಾಂತಿಕ ಒಲವು, ನಿಲುವು ಹೊಂದಿದ ಪಕ್ಷದ ಪ್ರತಿನಿಧಿಯಾಗಿ ಮಹೇಶ್ ಆದರ್ಶ ಮಾರ್ಗವನ್ನೇ ಅನುಸರಿಸಿದರು. ಸಮಾರಂಭ ವೀಕ್ಷಿಸಿದ ಗೆಳೆಯರೊಬ್ಬರು, “ಬುದ್ಧ, ಬಸವ, ಅಂಬೇಡ್ಕರ್ ಜೊತೆ ಗಾಂಧಿ ಹೆಸರನ್ನೂ ಮಹೇಶ್ ಸೇರಿಸಿದ್ದಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು’’ ಎಂದು ಹೇಳಿದರು. ಅದಕ್ಕೆ,“ಅಯ್ಯೋ, ತಪ್ಪಿಯೂ ಅವರು ಗಾಂಧಿ ಹೆಸರೆತ್ತುವುದಿಲ್ಲ,’’ಎಂದು ಮತ್ತೊಬ್ಬರು ಹಾವು ಮೆಟ್ಟಿದವರ ರೀತಿ ಪ್ರತಿಕ್ರಿಯಿಸಿದರು. ಇತಿಮಿತಿ ಏನೇ ಇದ್ದರೂ ಅದೊಂದು ಅನುಕರಣೀಯ ನಡೆ ಎನ್ನುವುದು ಅನೇಕರ ಅಭಿಪ್ರಾಯವಾಗಿತ್ತು.

ಆದರೆ,“ಗಾಂಧಿ’’ ಮಹೇಶ್ ಪ್ರಮಾಣವಚನದಲ್ಲಿರಲಿಲ್ಲ ಎನ್ನುವುದು ಅಷ್ಟಕ್ಕೇ ಸೀಮಿತವಾಗಲಿಲ್ಲ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಅವರ ವಿಧಾನಸೌಧದ ಕಚೇರಿಯಲ್ಲಿ ಕೂಡ ಗಾಂಧೀಜಿಯ ಸುಳಿವಿಲ್ಲ. ಅವರ ಕಚೇರಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ಅವರ ಎರಡೆರಡು ಭಾವಚಿತ್ರಗಳು ರಾರಾಜಿಸುತ್ತಿವೆ. ಜೊತೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳೂ ಇವೆ. ಯಾವುದೇ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಇರುವ ಮಹನೀಯರ ಭಾವಚಿತ್ರಗಳಲ್ಲಿ ಗಾಂಧೀಜಿ ಚಿತ್ರ ಪ್ರಧಾನವಾಗಿರುತ್ತದೆ. ೧೯೭೭ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, (ಡಿಪಿಎಆರ್ ೯ ಡಿಎಫ್‌ಇ ೭೭, ದಿನಾಂಕ: ೩೧ ಅಕ್ಟೋಬರ್‌ ೧೯೭೭) ಎಲ್ಲಾ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ ಅತಿಥಿ ಗೃಹಗಳಲ್ಲಿ ಭಾರತದ ರಾಷ್ಟ್ರಪತಿ ಮತ್ತು ಮಹಾತ್ಮಗಾಂಧಿ ಭಾವಚಿತ್ರವನ್ನು ಕಡ್ಡಾಯ ಪ್ರದರ್ಶಿಸಬೇಕು. ಈ ಪಟ್ಟಿಗೆ ನಂತರದ ವರ್ಷಗಳಲ್ಲಿ ಇನ್ನೊಂದಿಷ್ಟು ಮಹನೀಯರ ಚಿತ್ರಗಳ ಸೇರ್ಪಡೆ ಕೂಡ ಆಗಿದೆ. ಅದರಂತೆ, ವಿಧಾನಸೌಧದ ಬಹುತೇಕ ಸಚಿವಾಲಯ ಮತ್ತು ಮಂತ್ರಿಗಳ ಕಚೇರಿಗಳಲ್ಲಿ ಗಾಂಧೀಜಿ ಫೋಟೋ ಕಡ್ಡಾಯವಾಗಿ ಪ್ರದರ್ಶಿಸಲಾಗಿದೆ. ಆದರೆ, ಶಿಕ್ಷಣ ಸಚಿವರ ಕಚೇರಿಯ ಯಾವ ಮೂಲೆಯಲ್ಲೂ ಗಾಂಧೀಜಿಗೆ ಜಾಗ ಸಿಕ್ಕಿಲ್ಲ. ಇಲ್ಲಿ ಮೊದಲಿನಿಂದಲೂ ಗಾಂಧೀಜಿ ಚಿತ್ರ ಇರಲಿಲ್ಲವೇ ಅಥವಾ ಇದ್ದದ್ದಕ್ಕೆ ಮಹೇಶ್ ಆಗಮನ ನಂತರ “ಗೇಟ್‌ ಪಾಸ್‌’ ನೀಡಲಾಗಿದೆಯೇ ಎನ್ನುವುದು ಸ್ಪಷ್ಟವಿಲ್ಲ.

ನೀಲಿ ಧ್ವಜ ಮತ್ತು ಆನೆಯನ್ನು ಚಿಹ್ನೆಯನ್ನಾಗಿ ಹೊಂದಿರುವ ಬಹುಜನ ಸಮಾಜವಾದಿ ಪಕ್ಷವು ಗಾಂಧೀಜಿ ವಿಷಯದಲ್ಲಿ ಯಾವತ್ತೂ ತಾತ್ವಿಕ ತಕರಾರು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದೆ. ೧೯೩೨ರ ಪೂನಾ ಒಪ್ಪಂದ ಅದಕ್ಕೆ ಕಾರಣ. “ದಲಿತ ಸಮುದಾಯದ ವಿಮೋಚನೆಗಾಗಿ ಈ ಸಮುದಾಯಕ್ಕೆ ಪ್ರತ್ಯೇಕ ಮತ ಕ್ಷೇತ್ರ ಬೇಕು. ದಲಿತ ಪ್ರತಿನಿಧಿಯನ್ನು ದಲಿತ ಮತದಾರರಷ್ಟೆ ಆಯ್ಕೆ ಮಾಡುವಂತ ಮೀಸಲು ವ್ಯವಸ್ಥೆ ಜಾರಿಗೆ ಬರಬೇಕು,’’ ಎಂದು ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್‌, ಅದನ್ನು ದುಂಡುಮೇಜಿನ ಪರಿಷತ್ತಿನಲ್ಲಿ ಮಂಡಿಸಿ, ಬ್ರಿಟಿಷ್ ಆಡಳಿತದ ಒಪ್ಪಿಗೆಯನ್ನೂ ಪಡೆದಿದ್ದರು. “ಜಂಟಿ ಮೀಸಲು ಕ್ಷೇತ್ರದಲ್ಲಿ ಸವರ್ಣೀಯ ಹಿಂದೂಗಳ ಮತ ಪಡೆದು ಆಯ್ಕೆಯಾಗುವ ದಲಿತ ಪ್ರತಿನಿಧಿ ಸವರ್ಣೀಯರ ಜೀತದ ರಾಜಕಾರಣ ಮಾಡಬೇಕಾಗುತ್ತದೆ. ದಲಿತ ಸಮುದಾಯದ ಹಿತಾಸಕ್ತಿ ಕಾಪಾಡುವಲ್ಲಿ ಸೋಲುತ್ತಾನೆ,’’ಎನ್ನುವುದು ಅವರ ಪ್ರತಿಪಾದನೆಯಾಗಿತ್ತು. ಆದರೆ, ಈ ಪ್ರಸ್ತಾಪವನ್ನು ಗಾಂಧೀಜಿ ಪ್ರಬಲವಾಗಿ ವಿರೋಧಿಸಿದ್ದರು. “ಪ್ರತ್ಯೇಕ ಮತ ಕ್ಷೇತ್ರ ವ್ಯವಸ್ಥೆಯಾದರೆ ದಲಿತರು ಹಿಂದೂ ಧರ್ಮದಿಂದ ಹೊರ ಹೋಗುವರು. ಹಿಂದೂ ಧರ್ಮ ಇಬ್ಭಾಗವಾಗುತ್ತದೆ,’’ಎಂದು ಆತಂಕಿಸಿದರು. “ದಲಿತರಿಗೆ ಮೀಸಲು ಕ್ಷೇತ್ರಗಳಿರಲಿ. ಆದರೆ,ಎಲ್ಲ ವರ್ಗದ ಮತದಾರರೂ ದಲಿತ ಪ್ರತಿನಿಧಿಗೆ ಮತ ಹಾಕಿ ಆಯ್ಕೆ ಮಾಡಲಿ,’’ ಎಂದು ಪ್ರತಿಪಾದಿಸಿದರು. ಅಂಬೇಡ್ಕರ್‌‌ ತಮ್ಮ ವಾದಕ್ಕೆ ಕಟ್ಟು ಬಿದ್ದಾಗ, ಗಾಂಧೀಜಿ ಆಮರಣ ನಿರಶನದ ಹಠ ತೊಟ್ಟರು. ಆಗ ಅಂಬೇಡ್ಕರ್‌,“ನಿಮ್ಮ ಗಾಂಧೀಜಿಯನ್ನು ಬದುಕಿಸಿಕೊಳ್ಳಲಿಕ್ಕಾಗಿ ನನ್ನ ಜನಾಂಗದ ಹಿತ ಬಲಿಕೊಡುತ್ತೇನೆ,’’ ಎಂದು ತಮ್ಮ ಅಚಲ ನಿಲುವಿನಿಂದ ಹಿಂದೆ ಸರಿದಿದ್ದರು. ಆ “ದ್ರೋಹ’’ ಘಟನೆಯೇ ದಲಿತರ ಇಂದಿನ ಎಲ್ಲ ರಾಜಕೀಯ, ಸಾಮಾಜಿಕ ದುಸ್ಥಿತಿಗೆ ಕಾರಣ ಎಂದು ಬಿಎಸ್ಪಿ ನಂಬಿದೆ. ಈ ಕಾರಣಕ್ಕೆ ಗಾಂಧಿಯನ್ನು ಕಟುವಾಗಿ ದ್ವೇಷಿಸುತ್ತದೆ.

ಅಂಬೇಡ್ಕರ್‌ ಅವರು ಎತ್ತಿದ ಪ್ರಶ್ನೆಗಳು ಮೌಲಿಕವೇ, ಅದರೆ, ಈ ಪ್ರಶ್ನೆಗಳು ಗಾಂಧೀಜಿಯವರಿಗೆ ದಲಿತರೆಡೆಗಿದ್ದ ಕಾಳಜಿ, ಬದ್ಧತೆಯನ್ನಾಗಲಿ ಅವರೊಳಗಿನ ನಿಸ್ಪೃಹ ಮಾನವೀಯತೆ, ಪರಾನುಭೂತಿಗಳನ್ನಾಗಲಿ ಅಲ್ಲಗಳೆಯಲಾರವು. ಈ ದೇಶವನ್ನು ಬೌದ್ಧಿಕವಾಗಿ ರೂಪಿಸಲು ಅಂಬೇಡ್ಕರ್‌ ಅವರ ಪಾತ್ರ ಎಷ್ಟು ಅಗತ್ಯವಾಗಿದೆಯೋ, ಈ ದೇಶದಲ್ಲಿ ಸಾಮಾಜಿಕ ಮೌಲ್ಯ, ಸ್ವಾಸ್ಥ್ಯ ನಳನಳಿಸಲು ಗಾಂಧೀಜಿಯವರು ಅಷ್ಟೇ ಅಗತ್ಯ ಎನ್ನುವುದನ್ನು ಮರೆಯಬಾರದು. ಗಾಂಧೀಜಿಯವರು ಈ ದೇಶದ ಭಾವವಲಯದಲ್ಲಿ ಮಾನವೀಯ ಮೌಲ್ಯಗಳನ್ನು ಪುನರ್‌ ಸ್ಥಾಪಿಸಲು ಯಾವುದೇ ಸಾಧುಸಂತ, ಧರ್ಮಗುರುಗಳು ಮಾಡದೆ ಇದ್ದ ಕೆಲಸವನ್ನು ತಮ್ಮ ಮಾತು-ಕೃತಿಯ ಮೂಲಕ ಮಾಡಿ ತೋರಿಸಿದವರು. ಇತ್ತೀಚಿನ ಶತಮಾನಗಳಲ್ಲಿಯೇ ಮೊದಲ ಬಾರಿಗೆ ಭಾರತೀಯ ಸಮಾಜವು ತನ್ನೊಳಗಿನ ಅಸ್ಪೃಶ್ಯತೆಯ ಕರಾಳತೆಯನ್ನು ಚಿಕಿತ್ಸಕವಾಗಿ ದಿಟ್ಟಿಸಿಕೊಳ್ಳುವಂತೆ ಈ ದೇಶದ ಮನಸ್ಥಿತಿಯನ್ನು ಹದಗೊಳಿಸಿದವರು. ಅಂಬೇಡ್ಕರ್‌‌ ಅವರು ಎತ್ತಿದ ವಾಸ್ತವದ ರಾಜಕೀಯ ಪ್ರಶ್ನೆಗಳಿಗೆ ಗಾಂಧಿಯವರ ಬಳಿ ಉತ್ತರವಿರಲಾರದು. ಆದರೆ, ಅಂತಹ ಪ್ರಶ್ನೆಗಳನ್ನು ದಿಟ್ಟವಾಗಿ, ಆಪ್ತವಾಗಿ ಚರ್ಚಿಸುವಂಥ ಸಮಾಜವನ್ನು ನಿರ್ಮಿಸುವಲ್ಲಿ ಗಾಂಧೀಜಿಯವರ ಕೊಡುಗೆ ಅನನ್ಯ ಎನ್ನುವುದನ್ನು ಮರೆಯಬಾರದು.

ಇಷ್ಟಾಗಿಯೂ ಬಿಎಸ್ಪಿ ಗಾಂಧಿಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಪೂನಾ ಒಪ್ಪಂದ ಆಧರಿತ ರಾಜಕೀಯ ಮೀಸಲಿನ ಲಾಭ ಪಡೆಯುವುದನ್ನು ನಿರಾಕರಿಸಲಿಲ್ಲ. ಉತ್ತರ ಪ್ರದೇಶದಲ್ಲಿ ಸಾಂದರ್ಭಿಕ ಅಗತ್ಯಕ್ಕೆ ತಕ್ಕಂತೆ ರಾಜಕೀಯ ತಂತ್ರಗಾರಿಕೆ ರೂಪಿಸಿ, ಅಧಿಕಾರ ಹಿಡಿಯಿತು. ಮೇಲ್ವರ್ಗದ ನಿಯಂತ್ರಣದಲ್ಲಿದೆ ಎನ್ನುವ ಬಿಜೆಪಿ ಜತೆ ಸಖ್ಯ ಸಾಧಿಸಿದ್ದೂ ಆಯಿತು. ಅಷ್ಟೇ ಏಕೆ, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಸೋತು, ನಾಲ್ಕನೆ ಪ್ರಯತ್ನದಲ್ಲಿ ಗೆದ್ದಿರುವ ಮಹೇಶ್ ಎಲ್ಲಾ ವರ್ಗದ ಜನರ ಮತ ಪಡೆದೇ ವಿಧಾನಸಭೆ ಪ್ರವೇಶದ ಕನಸನ್ನು ನನಸಾಗಿಸಿಕೊಂಡರು. ಒಂದೊಮ್ಮೆ, ದಲಿತ ಸಮುದಾಯಕ್ಕೆ ಮಾರಕ ಎಂದು ಭಾವಿಸಲಾಗಿರುವ ಪೂನಾ ಒಪ್ಪಂದವನ್ನು ಅವರು ಈಗಲೂ ಕ್ರಿಯಾತ್ಮಕ ನೆಲೆಯಲ್ಲಿ ವಿರೋಧಿಸುತ್ತಿದ್ದರೆ, ಒಪ್ಪಂದಕ್ಕೆ ಕಾರಣವಾದ ಗಾಂಧಿ ಮೇಲಿನ ದ್ವೇಷವನ್ನು ಮುಂದುವರಿಸುವ ನೈತಿಕ ಅರ್ಹತೆ ಪಡೆದಿರುತ್ತಿದ್ದರು. ಈ ಮಧ್ಯೆ, ಪೂನಾ ಒಪ್ಪಂದದ ಸಾಧಕ-ಬಾಧಕಗಳಾಚೆಗೂ ಅನೇಕ ದಲಿತ ಸಂಘಟನೆಗಳು ಗಾಂಧಿ ಮತ್ತು ಅಂಬೇಡ್ಕರ್‌ ಎನ್ನುವ ಎರಡು ಮಹಾನ್‌ ಸತ್ಯ,ವಿವೇಕಗಳ ಜೊತೆ ಸಮಪಾತಳಿಯಲ್ಲಿ ಅನುಸಂಧಾನ ನಡೆಸಲು ಪ್ರಯತ್ನಿಸುತ್ತಿವೆ.ಇಂಥ ಪ್ರಯತ್ನಕ್ಕೆ ಬಿಎಸ್ಪಿ ಧ್ವನಿಗೂಡಿಸಿದ್ದು ಕಡಿಮೆ.ಇಲ್ಲವೇ ಇಲ್ಲ ಎಂದೂ ಹೇಳಬಹುದು.

ಅದೇನಿದ್ದರೂ, ಮಹೇಶ್ ಮತ್ತು ಅವರ ಪಕ್ಷ ನಂಬಿದ ರಾಜಕೀಯ ಸಿದ್ಧಾಂತವದು. ಆದರೆ, ಅವರೀಗ ಆ ಪಕ್ಷದ ಪ್ರತಿನಿಧಿಯಷ್ಟೆ ಅಲ್ಲ. ನಾಡಿನ ಭವಿಷ್ಯದ ಪ್ರಜೆಗಳನ್ನು ರೂಪಿಸುವಂತ ಶಿಕ್ಷಣ ಇಲಾಖೆಯಂತಹ ಮಹತ್ವದ ಖಾತೆಯ ಹೊಣೆ ವಹಿಸಿಕೊಂಡಿರುವ ಸಚಿವ. ವೈಯಕ್ತಿಕ ರಾಜಕೀಯ ಸಿದ್ಧಾಂತ, ನಂಬಿಕೆಗಳ ಆಚೆಗೆ ನಿರ್ದಿಷ್ಟ ಸರ್ಕಾರಿ ನಿಯಮಗಳನ್ನು,ಶಿಷ್ಟಾಚಾರಗಳನ್ನು ಪಾಲಿಸಬೇಕಾದುದು ಜನಪ್ರತಿನಿಧಿಯಾಗಿ ಅವರ ಕರ್ತವ್ಯ. ಗಾಂಧಿ,ಗಾಂಧಿವಾದ ಪತ್ಯವೊ, ಅಪಥ್ಯ ಬೇರೆ ಮಾತು.೧೯೭೭ರ ಸರ್ಕಾರಿ ಆದೇಶದ ಅನ್ವಯ ತಮ್ಮ ಕಚೇರಿಯಲ್ಲಿ ಗಾಂಧೀಜಿ ಫೋಟೋ ಅಳವಡಿಸಿಕೊಳ್ಳುವುದು ಕಡ್ಡಾಯ. ಶಿಕ್ಷಣ ಸಚಿವರಾಗಿ ಗಾಂಧಿಯನ್ನು “ರಾಷ್ಟ್ರಪಿತ’’ ಎಂದು ಒಪ್ಪಿಕೊಳ್ಳುವುದು ಅನಿವಾರ್ಯ. “ಶೋಷಿತರಿಗೆ ಅಕ್ಷರವೇ ಆಯುಧ,’’ ಎಂದು ಅಂಬೇಡ್ಕರ್‌ ಪ್ರತಿಪಾದಿಸುವುದಕ್ಕೆ ಮೊದಲೇ, “ಬಹುಸಂಖ್ಯಾತರ ಅನಕ್ಷರತೆ ಭಾರತಕ್ಕೆ ಕಳಂಕ. ಅದನ್ನು ತೊಡದು ಹಾಕಬೇಕು,’’ಎಂದು ಗಾಂಧೀಜಿ ಆಶಿಸಿದ್ದನ್ನು ಅಲ್ಲಗಳೆಯಲಾಗದು ಕೂಡ.

ಈ ವಿಷಯದಲ್ಲಿ ಸರ್ಕಾರಿ ಆದೇಶವನ್ನು ಸಚಿವರ ಕಚೇರಿ ಉಲ್ಲಂಘಿಸಿದೆ ಎನ್ನುವುದರಾಚೆಗೆ ಅವರ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಲ್ಲವೆನ್ನುವುದು ದೊಡ್ಡ ಸುದ್ದಿಯಲ್ಲ,ನಿಜ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌ ಅವರಂತ ಮಹಾನ್‌ ಚೇತನಗಳ ವಿಚಾರಗಳನ್ನು ವಿಸ್ತರಿಸದೆ, ಗೋಡೆಯಲ್ಲಿ ತೂಗಿ ಹಾಕುವ ಫೋಟೋಗೆ ಅವರ ಆದರ್ಶ, ಆಶಯಗಳನ್ನು ಸೀಮಿತಗೊಳಿಸುವುದು, ಫೋಟೋ ಇಲ್ಲದ ಮಾತ್ರಕ್ಕೆ ಅನರ್ಥ ಸಂಭವಿಸುತ್ತದೆಂದು ಭಾವಿಸುವುದು ಅರ್ಥಹೀನ. ಆದರೆ, ಮಹೇಶ್ ಮತ್ತು ಅವರ ಪಕ್ಷದ “ಗಾಂಧಿ ಧ್ವೇಷ’’ ಫೋಟೋ ತೆರವಿನ ವಿಷಯಕಷ್ಟೆ ಸೀಮಿತವಾದಂತಿಲ್ಲ. ಹೀಗೇ ಬಿಟ್ಟರೆ, ಗಾಂಧಿಯನ್ನು “ಇಲ್ಲ’’ವಾಗಿಸುವ ನಿಟ್ಟಿನಲ್ಲಿ ಅವರು ಇನ್ನಷ್ಟು ಮುಂದುವರಿಯಬಹುದೆನ್ನುವ ಆತಂಕ, ಊಹೆಗಳು ಇವೆ. ಈ ಪೈಕಿ ಕೆಲವು ಹೀಗಿವೆ:

- ಗಾಂಧಿಯನ್ನು ಕಚೇರಿಯಿಂದಷ್ಟೆ ಅಲ್ಲ, ಅಧಿಕಾರ ವ್ಯಾಪ್ತಿಯ ಸಚಿವಾಲಯ, ಪ್ರಾಥಮಿಕ- ಪ್ರೌಢ ಶಿಕ್ಷಣ ಇಲಾಖೆ ಕಚೇರಿ,ಶಾಲಾ ಕಾಲೇಜು ಮತ್ತು ಪಠ್ಯದಿಂದಲೂ “ಹೊರ’’ದಬ್ಬಲು ಮುಂದಾಗಬಹುದೇ?

- ಈಗ ಹೇಗೂ ಇರಲಿ. ಮುಂಬರುವ ಗಾಂಧಿ ಜಯಂತಿ ದಿನ ಶಿಕ್ಷಣ ಮಂತ್ರಿಯಾಗಿ ಅವರು ಮಕ್ಕಳಿಗೆ ಗಾಂಧೀಜಿ ಕುರಿತ ಯಾವ ಸತ್ಯ ಹೇಳಬಹುದು? ಪಠ್ಯದಲ್ಲಿರುವ ಒಪ್ಪಿತ ಸತ್ಯವನ್ನು ಹೇಳುತ್ತಾರಾ ಅಥವಾ “ದಲಿತ ದ್ರೋಹಿ ಗಾಂಧಿ’’ ಕುರಿತು ಮಕ್ಕಳಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಾರಾ?

-ಸರ್ಕಾರದ ಆದೇಶ ಇದ್ದರೂ, ಸೈದ್ಧಾಂತಿಕ ಕಾರಣಕ್ಕೆ ಗಾಂಧಿ ಫೋಟೋ ಅಳವಡಿಸಿಲ್ಲ ಎನ್ನುವುದಾದರೆ ಗಾಂಧಿಗಿಂತ ನರೇಂದ್ರ ಮೋದಿ,ಗಾಂಧಿವಾದಕ್ಕಿಂತ ಮೋದಿವಾದ ಮಹೇಶ್ ಗೆ ಹೆಚ್ಚು ಆಪ್ತವಾಯಿತೇ?

-ಗಾಂಧಿಯನ್ನು ಪ್ರಖರವಾಗಿ ವಿರೋಧಿಸುವ ಸಂಘ ಪರಿವಾರವೇ ಈಗೀಗ ಔಪಚಾರಿಕವಾಗಿಯಾದರೂ ಅವರ ಹೆಸರು ಪ್ರಸ್ತಾಪಿಸುತ್ತಿದೆ. ಮಹೇಶ್ ನಿಲುವು ಆರ್ ಎಸ್ಎಸ್‌ ಗಿಂತ ಪ್ರಖರವೆ?

- ಗೆಲುವು ಮತ್ತು ಅಧಿಕಾರಕ್ಕಾಗಿ ಉತ್ತರ ಪ್ರದೇಶ, ಕರ್ನಾಟಕದಲ್ಲಿ ಮೇಲ್ವರ್ಗದ ಜನ, ಪಕ್ಷಗಳ ಜೊತೆ “ಮೈತ್ರಿ’’ ಮಾಡಿಕೊಂಡಿರುವ,ಮುಂದಿನ ಚುನಾವಣೆಯಲ್ಲಿಯೂ “ಎಲ್ಲಾ ವಾದ’’ಗಳನ್ನಾಧರಿಸುವ ಪಕ್ಷಗಳ ಜೊತೆ ಕೂಡಿ ನಡೆಯಲು ನಿರ್ಧರಿಸಿರುವ ಮಾಯಾ ಪಕ್ಷಕ್ಕೆ ಗಾಂಧೀಜಿ ಯಾಕೆ ಅಪಥ್ಯ?

ಇದನ್ನೂ ಓದಿ : ಬಿಎಸ್‌ಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲು ಕಾರಣವೇನಿರಬಹುದು?

ನಿಜ, ಒಂದು ಫೋಟೋವನ್ನು ಸಚಿವರ ಕಚೇರಿಯಿಂದ ಆಚೆಗೆ ಹಾಕಿದ ಮಾತ್ರಕ್ಕೆ ಇಷ್ಟೆಲ್ಲ ಆತಂಕ, ಊಹೆ, ಪ್ರಶ್ನೆಗಳನ್ನು ಮಾಡಬೇಕಿಲ್ಲ. ಯಾವುದೇ ಜಾತಿ, ಸಮುದಾಯದ ಐಕಾನ್‌ ಎನಿಸಿಕೊಂಡವರ ಫೋಟೋ, ಪ್ರತಿಮೆಗಳು ತುಸು ಕದಲಿದರೂ ಅತ್ಯುಗ್ರ ಪ್ರತಿಭಟನೆಗಳಾಗುವ ಈ ದೇಶದಲ್ಲಿ, ನೈತಿಕ ಪ್ರಜ್ಞೆಯನ್ನು ಸದಾ ಬಡಿದೆಬ್ಬಿಸುವ, ಮೌಲ್ಯಗಳನ್ನು ಕಾಯ್ದಿಟ್ಟಿರುವ ಗಾಂಧಿ ವಿಷಯದಲ್ಲಿ ಏನೇ ಅಪಚಾರ ಘಟಿಸಿದರೂ ಯಾರನ್ನೂ ಕಾಡುವುದಿಲ್ಲ. ಪ್ರತಿಭಟನೆಗಳಂತೂ ಆಗುವುದೇ ಇಲ್ಲ.ಯಾಕೆಂದರೆ, ಗಾಂಧಿ ಹೆಸರೆತ್ತಿದರೆ ಮತಗಳು ಹುಟ್ಟುವುದಿಲ್ಲ. ಜಾತಿ ಕೂಟ ಕಟ್ಟಲಾಗುವುದಿಲ್ಲ. ಆ ಹೆಸರನ್ನು ನೆಚ್ಚಿದರೆ ದುಡ್ಡೂ ಹುಟ್ಟುವುದಿಲ್ಲ. ಅಷ್ಟೇ ಏಕೆ, ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಫೋಟೋ ಅಳವಡಿಕೆ ಕಡ್ಡಾಯ ಆಗಿದ್ದಕ್ಕೆ ದಾಖಲೆಗಳಿವೆಯೇ ಎಂದು ವಿಧಾನಸೌಧದ ಶಿಷ್ಟಾಚಾರ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಆರಂಭದಲ್ಲಿ, “ತುಂಬಾ ಹಿಂದೆ ಆಗಿರುವ ಆದೇಶವದು. ಈಗ ಸಿಗುವುದು ಕಷ್ಟ,’’ ಎಂದರು. ಮಹನೀಯರ ಫೋಟೋ ಅಳವಡಿಕೆ ಕಡ್ಡಾಯ ಸಂಬಂಧ ಆಯಾ ಇಲಾಖೆಗಳಲ್ಲಿ ಆದೇಶ ಆಗಿರುತ್ತದಂತೆ. “ಗಾಂಧಿ ಯಾವ ಇಲಾಖೆಯಡಿ ಬರ್ತಾರೆ ಸರ್,’’ಎಂದು ಪ್ರಶ್ನಿಸಿದ ಸಿಬ್ಬಂದಿಯೊಬ್ಬರು,ತಮ್ಮ ಪ್ರಶ್ನೆಗೆ ತಾವೇ ನಕ್ಕರು. ಕೊನೆಗೆ, ಎಲ್ಲೆಡೆಯ ಕಡತಗಳನ್ನು ಸೋಸಿ ದಶಕಗಳ ಹಿಂದೆ ಆಗಿರುವ ಆದೇಶದ ಪ್ರತಿಯನ್ನು ತೆಗೆದು ಕೊಟ್ಟರು.

ಯಾವುದೇ ದಾಖಲೆ ಇದ್ದರೂ, ನೈತಿಕ ಪ್ರಶ್ನೆಗಳು ಕಾಡಿದರೂ ಗಾಂಧೀಜಿ ವಿಷಯದಲ್ಲಿ ಏನೇ ಘಟಿಸಿದರೂ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವ ಖಾತ್ರಿಯ ಹೊರತಾಗಿಯೂ “ದಿ ಸ್ಟೇಟ್’’ ತನಗೆ ಕಂಡದ್ದನ್ನು ಕಂಡಂತೆ ಹೇಳಿದೆ. ಮುಂದಿನದ್ದು ಶಿಕ್ಷಣ ಸಚಿವ ಮಹೇಶ್ ಗೆ ಬಿಟ್ಟ ವಿಷಯ. ಮೊನ್ನೆ ಮೊನ್ನೆ ಗಾಂಧಿ ಭವನಕ್ಕೆ ಹೋಗಿ, ಸನ್ಮಾನ ಸ್ವೀಕರಿಸಿ ಬಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಬಿಟ್ಟ ವಿಷಯ. ಕಾಲ,ಸಂದರ್ಭಕ್ಕೆ ತಕ್ಕಂತೆ ಗಾಂಧಿಯನ್ನು ಬಳಸಿಕೊಳ್ಳುವ “ಮಿತ್ರ ಪಕ್ಷ’’ ಕಾಂಗ್ರೆಸ್ ನ ವಿವೇಚನೆಗೆ ಸಂಬಂಧಿಸಿದ ಸಂಗತಿ. ಗಾಂಧಿ ವಿಚಾರಗಳನ್ನು ನಿತ್ಯ ನಡುಬೀದಿಯಲ್ಲಿ ಕೊಲ್ಲುತ್ತಿರುವ ವರ್ತಮಾನದಲ್ಲಿ ಯಕಶ್ಚಿತ್ ಭಾವಚಿತ್ರವನ್ನು “ಹೊರ’’ ಹಾಕಿದ ವಿಷಯ ಯಾರಿಗಾದರೂ, ಯಾವ ಕಾರಣಕ್ಕೆ ಗಹನ ಸಂಗತಿ ಎನ್ನಿಸಬೇಕು? ಕಡತ ಸೇರಿರುವ ಅನಾದಿ ಕಾಲದ ಆದೇಶಗಳನ್ನೆಲ್ಲ ಪಾಲಿಸಬೇಕೆನ್ನುವ ನಿಯಮವೆಲ್ಲಿದೆ?

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More