ಪತ್ರಕರ್ತೆ ಗೌರಿಹತ್ಯೆ| ಕೊಂದಿದ್ದು ನಾನೇ ಎಂಬ ವಾಘ್ಮೋರೆ ತಪ್ಪೊಪ್ಪಿಗೆ ನಿಜವೇ?

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧವಾಗಿ ಎಸ್ಐಟಿ ಪರಶುರಾಮ ವಾಘ್ಮೋರೆ ಎಂಬಾತನನ್ನು ಬಂಧಿಸಿದೆ. ಈ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಗೌರಿ ಹಂತಕ ಸೆರೆ ಎಂದೇ ಬಿಂಬಿತವಾಗುತ್ತಿದೆ. ಆದರೆ, ವಾಸ್ತವದಲ್ಲಿ ವಿಶೇಷ ತನಿಖಾ ತಂಡದ ಮುಖ್ಯಸ್ಥ ಬಿ ಕೆ ಸಿಂಗ್ ಹೇಳುತ್ತಿರುವುದೇ ಬೇರೆ

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧವಾಗಿ ಎಸ್ಐಟಿ (ವಿಶೇಷ ತನಿಖಾ ತಂಡ) ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಿಂದೂ ಪರ ಸಂಘಟನೆಯೊಂದರ ಸಕ್ರಿಯ ಕಾರ್ಯಕರ್ತ ಎನ್ನಲಾಗುತ್ತಿರುವ ಪರಶುರಾಮ ವಾಘ್ಮೋರೆ ಎಂಬಾತನನ್ನು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದೆ. ಈ ಸುದ್ದಿ ಕೆಲವು ದೃಶ್ಯ ಮಾಧ್ಯಮಗಳಿಂದ ಹಿಡಿದು ಹಲವು ಪತ್ರಿಕೆಗಳಲ್ಲಿ ಗೌರಿ ಹಂತಕ ಸೆರೆ ಎಂದೇ ಬಿಂಬಿತವಾಗುತ್ತಿದೆ. ಹಾಗೆಯೇ “ನಾನೇ ಗುಂಡು ಹಾರಿಸಿ ಗೌರಿ ಕೊದ್ದಿದ್ದು” ಎಂದು ವಾಘ್ಮೋರೆ ತಪ್ಪೊಪ್ಪಿಕೊಂಡಿರುವುದಾಗಿ ಪ್ರಸಾರಮಾಡಲಾಗುತ್ತಿದೆ. ಜೊತೆಗೆ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಕೆಲವು ಗೌರಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಹಂತಕರ ಸೆರೆ ಎಂದು ಸ್ಟೇಟಸ್ ಕೂಡ ಹಾಕಿಕೊಳ್ಳುತ್ತಿದ್ದಾರೆ.

ಆದರೆ, ವಾಸ್ತವದಲ್ಲಿ ವಿಶೇಷ ತನಿಖಾ ತಂಡದ ಮುಖ್ಯಸ್ಥ ಬಿ ಕೆ ಸಿಂಗ್ ಅವರು ಹೇಳುತ್ತಿರುವ ಮಾಹಿತಿಗೂ ಹಾಗೂ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಲ್ಲಿ ಪ್ರಕಟಗೊಳ್ಳುತ್ತಿರುವ ಮಾಹಿತಿಗೂ ವ್ಯತ್ಯಾಸ ಇದೆ. ಆರೋಪಿ ಪರಶುರಾಮ ವಾಘ್ಮೋರೆ ಬಂಧನ ಕುರಿತು ಸ್ಪಷ್ಟನೆ ನೀಡಿರುವ ಸಿಂಗ್ ಅವರು, “ಗೌರಿ ಲಂಕೇಶ್ ಅವರ ಕೊಲೆ ಪ್ರಕರಣ ತನಿಖೆ ನಡೆಯುತ್ತಿದೆ. ತನಿಖೆಯ ಭಾಗವಾಗಿ ನಾವು ೬ನೇ ಆರೋಪಿಯನ್ನಾಗಿ ಪರಶುರಾಮ ವಾಘ್ಮೋರೆಯನ್ನು ಬಂಧಿಸಿದ್ದೇವೆ. ಆತನ ವಿಚಾರಣೆ ಇನ್ನೂ ನಡೆಯಬೇಕಿದೆ. ಈಗಲೇ ಇವನೇ ಹಂತಕ ಎಂದು ನಾವು ಹೇಳಲು ಸಾಧ್ಯವಿಲ್ಲ,” ಎಂದಿದ್ದಾರೆ.

ಗೌರಿ ಹತ್ಯೆಯಾಗಿ ೯ ತಿಂಗಳು ಕಳೆದಿದೆ. ಈ ಮಧ್ಯೆ ಕೊಲೆಯಾದ ನಂತರದಿಂದ ಈವರೆಗೂ ಗೌರಿ ಹಂತಕ ಸೆರೆ ಎನ್ನುವ ಅನೇಕ ಸುದ್ದಿಗಳನ್ನು ಕೆಲವು ಖಾಸಗಿ ದೃಶ್ಯ ಮಾಧ್ಯಮಗಳು ಪ್ರಸಾರವಾಗುತ್ತಲೇ ಬಂದಿವೆ. ಅಂತ ಸಂದರ್ಭದಲ್ಲಿ ತನಿಖಾ ತಂಡ ಮುಂದೆ ಬಂದು ಆ ಎಲ್ಲ ಪ್ರಸಾರ ಸುದ್ದಿಗಳನ್ನು ಅಲ್ಲಗಳೆದಿದೆ.

ವಾಘ್ಮೋರೆ ಸೇರಿದಂತೆ ಈವರೆಗೂ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಧಿಸಿದಂತೆ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ೨೦೧೮ ಮಾರ್ಚ್ ೯ರಂದು ಮದ್ದೂರು ತಾಲ್ಲೂಕಿನ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಎನ್ನಲಾಗಿರುವ ಕೆ ಟಿ ನವೀನ್ ಕುಮಾರ್ ಅಲಿಯಾಸ ಹೊಟ್ಟೆ ಮಂಜನ ಬಂಧನವಾಗಿತ್ತು. ಇವನ ಬಂಧನವಾದಾಗ ಕೂಡ ಇದೇ ತರಹದ ಸುದ್ದಿಗಳು ಕೆಲವು ಖಾಸಗಿ ಮಾಧ್ಯಮಗಳಲ್ಲಿ ಪ್ರಕಟವಾದವು. ಆಗಲೂ ಕೂಡ ತನಿಖಾ ತಂಡ ಪ್ರಸಾರವಾದ ಮಾಹಿತಿಯನ್ನು ಅಲ್ಲಗಳೆದಿತ್ತು. ನಂತರ ಮೇ. ೩೧ ರಂದು ಮಾಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ಶಿಖಾರಿಪುರ ಮತ್ತು ವಿಜಯಪುರದ ಮನೋಹರ ಯಡವೆಯನ್ನು ತನಿಖಾ ತಂಡ ಬಂಧಿಸುತ್ತದೆ. ಆಗಲೂ ಕೂಡ ಗೌರಿ ಹಂತಕ ಸೆರೆ ಎನ್ನುವ ಸುದ್ದಿಗಳು ಕೆಲವು ಖಾಸಗಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾದವು. ಆ ಮಾಹಿತಿಯನ್ನು ಕೂಡ ತನಿಖಾ ತಂಡದ ಮುಖ್ಯಸ್ಥರು ಅಲ್ಲಗಳೆದಿದ್ದನ್ನು ನೆನೆಯಬಹುದು.

ಈಗ ಪರಶುರಾಮ ವಾಘ್ಮೋರೆ ಬಂಧನದಲ್ಲಿ ಇಂಥಹದ್ದೇ ಸುದ್ದಿಗಳು ಕೆಲವು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ, ಬಂಧಿತರಲ್ಲಿ ಗೌರಿಯನ್ನು ಶೂಟ್ ಮಾಡಿ ಕೊಂದವರು ಇವರೇ ಎಂದು ಎಲ್ಲೂ ಕೂಡ ತನಿಖಾ ತಂಡ ಬಹಿರಂಗ ಪಡಿಸಿಲ್ಲ. ಬಂಧನವಾದ ಆರೋಪಿಗಳ ಹಿನ್ನೆಲೆ ಮೇಲೆ ಸುದ್ದಿಗಳು ಪ್ರಸಾರವಾಗುತ್ತಿವೆ.

ವಾಘ್ಮೋರೆ ಬಂಧನ ಸುತ್ತ

ಪರಶುರಾಮ ವಾಘ್ಮೋರೆ ಶ್ರೀರಾಮಸೇನೆ ಸಂಘಟನೆಯ ಸಕ್ರಿಯ ಕಾರ್ಯಕರ್ತ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರೊಂದಿಗೆ ವಾಘ್ಮೋರೆ ತೆಗೆಸಿಕೊಂಡಿದ್ದ ಎನ್ನಲಾಗುತ್ತಿರುವ ಫೋಟೋ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

೨೦೧೧ ರಲ್ಲಿ ಸಿಂಧಗಿ ತಹಶೀಲ್ದಾರ್ ಕಚೇರಿ ಎದುರು ಪಾಕ್ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ವಾಘ್ಮೋರೆ ಪ್ರಮುಖ ಅರೋಪಿ. ಹಿಂದುತ್ವ ಸಿದ್ಧಾಂತವನ್ನು ಪ್ರಶ್ನಿಸಿದವರ ಮೇಲೆ ದಾಳಿ ಮಾಡಲೆಂದೇ ಉತ್ತರ ಕರ್ನಾಟಕ ಭಾಗದದಲ್ಲಿ ಈ ಹಿಂದೆ ‘ಟೈಗರ್ ಸಂಘಟನೆ’ ಹುಟ್ಟಿಕೊಂಡಿತ್ತು. ಈ ಸಂಘಟನೆಯ ಮುಂದಾಳತ್ವ ವಹಿಸಿದ್ದ ನಾಗರಾಜ ಜಂಬಗಿ ಜೈಲಿನಲ್ಲಿ ಸಹಕೈದಿಗಳಿಂದ ಹಲ್ಲೆಗೀಡಾಗಿ ಸಾವನ್ನಪ್ಪಿದ್ದ. ಈ ಘಟನೆ ನಂತರ ಟೈಗರ್ ಸಂಘಟನೆ ಚಟವಟಿಕೆಗಳು ಹಿನ್ನೆಲೆಗೆ ಸರಿದಿದ್ದವು. ಆದರೆ, ಈಗ ಈ ಸಂಘಟನೆ ತೆರೆಮರೆಯಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದು, ಈ ಸಂಘಟನೆಯೊಂದಿಗೆ ವಾಘ್ಮೋರೆ ಭಾಗಿಯಾಗಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಗೌರಿ ಲಂಕೇಶ್‌ ಹತ್ಯೆಯ ನಂತರ ಬಿತ್ತಲಾದ ಸುದ್ದಿಗಳೆಲ್ಲವೂ ಬರೀ ಸುಳ್ಳಿನ ಕಂತೆ!

ವಾಘ್ಮೋರೆ ತಪ್ಪೊಪ್ಪಿಗೆ ನಿಜವೇ?

ಗೌರಿ ಲಂಕೇಶರನ್ನು ತಾನೇ ಗುಂಡಿಟ್ಟು ಕೊಂದಿದ್ದು ಎಂದು ವಾಘ್ಮೋರೆ ಎಸ್ಐಟಿ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನುವ ಸುದ್ದಿಯನ್ನು ದೃಶ್ಯ ಹಾಗೂ ಕೆಲವು ಪ್ರತಿಕೆಗಳು ಬಿತ್ತರಿಸಿವೆ. ಆದರೆ, ಈ ಕುರಿತು ತನಿಖಾ ತಂಡ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More