ಶಹಜಹಾನ್‌ ಬಚ್ಚು ಹತ್ಯೆ| ಬಾಂಗ್ಲಾದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮತ್ತೆ ದಾಳಿ

ಬಾಂಗ್ಲಾದೇಶದ ಮುಕ್ತ ಚಿಂತಕ ಶಹಜಹಾನ್ ಬಚ್ಚು ಅವರಿಗೆ ಈ ಮೊದಲು ಬೆದರಿಕೆ ಕರೆಗಳು ಬಂದಿದ್ದವು. ಜೂ 11ರಂದು ಕಚ್ಚಾ ಬಾಂಬ್ ಸ್ಫೋಟಿಸಿದ ಅಪರಿಚಿತರ ಗುಂಪೊಂದು ಅವರನ್ನು ಅಂಗಡಿಯಿಂದ ಹೊರಗೆಳೆದು ಗುಂಡಿಟ್ಟು ಕೊಂದಿತು. ಈ ಬಗ್ಗೆ ‘ದಿ ವೈರ್’ ಪ್ರಕಟಿಸಿರುವ ವರದಿ ಇಲ್ಲಿದೆ 

ಕೆಲವು ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಆನ್ ಲೈನ್ ಕಾರ್ಯಕರ್ತರು, ಬ್ಲಾಗರ್ ಗಳ ಮೇಲೆ ದಾಳಿ ನಡೆಯುತ್ತಿದ್ದು ಜೂ 11ರಂದು ನಡೆದ ಸಣ್ಣ ಹಿಂಸಾಚಾರವೊಂದರ ಬಳಿಕ ಅಲ್ಲಿನ ಎಡಪಂಥೀಯ ಪ್ರಕಾಶಕ ಶಹಜಹಾನ್ ಬಚ್ಚು (60) ಅವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಕಾವ್ಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಪ್ರಕಟಿಸುತ್ತಿದ್ದ ಪ್ರಕಾಶನ ಸಂಸ್ಥೆ ‘ಬಿಶಾಖ ಪ್ರೊಕಾಶೊನಿ’ಯ ಮಾಲೀಕರಾಗಿದ್ದ ಬಚ್ಚು ಅಲ್ಲಿನ ವಾರಪತ್ರಿಕೆ ಅಮಾದೆರ್ ಬಿಕ್ರಾಂಪುರದ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ಅವರ ಪ್ರಕಾಶನ ಸಂಸ್ಥೆ ಢಾಕಾದ ಬಾಂಗ್ಲಾಬಜಾರ್ ಪ್ರದೇಶದಲ್ಲಿದೆ.

‘ಢಾಕಾ ಟ್ರಿಬ್ಯೂನ್’ ವರದಿ ಪ್ರಕಾರ ಇಫ್ತಾರ್ ಅಂಗವಾಗಿ ತಮ್ಮ ಪೂರ್ವಿಕರ ಗ್ರಾಮವಾದ ಕಾಕಾಲ್ಡಿಗೆ ತೆರಳಿದ್ದರು. ಅಲ್ಲಿನ ಔಷಧ ಅಂಗಡಿಯೊಂದರಲ್ಲಿ ಗೆಳೆಯರನ್ನು ಮಾತನಾಡಿಸುತ್ತಿದ್ದರು. “ಈ ವೇಳೆ ಅಲ್ಲಿಗೆ ಬಂದ ಅಪರಿಚಿತರ ಗುಂಪೊಂದು ಕಚ್ಛಾ ಬಾಂಬ್ ಒಂದನ್ನು ಸ್ಫೋಟಿಸಿ ಗೊಂದಲ ಸೃಷ್ಟಿಸಿತು. ಬಳಿಕ ಅಂಗಡಿಯಿಂದ ಬಚ್ಚು ಅವರನ್ನು ಹೊರಗೆಳೆದ ಗುಂಪು ಗುಂಡಿಟ್ಟು ಹತ್ಯೆ ಮಾಡಿತು,” ಎಂದು ಹಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಯಾವ ಗುಂಪು ಕೂಡ ಇದುವರೆಗೆ ಹತ್ಯೆಯ ಹೊಣೆ ಹೊತ್ತಿಲ್ಲ. ಆದರೆ ಇಲ್ಲಿನ ಭಯೋತ್ಪಾದನಾ ನಿಗ್ರಹದಳ ಶಂಕಿಸಿರುವ ಪ್ರಕಾರ ಇಸ್ಲಾಂ ಉಗ್ರವಾದಿಗಳಿಂದಲೇ ಬಚ್ಚು ಹತ್ಯೆಗೀಡಾಗಿದ್ದಾರೆ. ಮುಕ್ತ ಚಿಂತಕರೆಂದು ಗುರುತಿಸಿಕೊಂಡಿದ್ದ ಸದಾ ಸೃಜನಶೀಲತೆ ಹಾಗೂ ಆರೋಗ್ಯಕರ ವಾಗ್ವಾದಕ್ಕೆ ಹೆಸರಾಗಿದ್ದ ಬಚ್ಚು ಅವರಿಗೆ ಈ ಮೊದಲು ಕೂಡ ಬೆದರಿಕೆ ಕರೆಗಳು ಬಂದಿದ್ದವು. ಹಂತಕರನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕು ಎಂದು ಅಂತರರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಐಎಫ್ ಜೆ) ಆಗ್ರಹಿಸಿದೆ.

“ಶಹಜಹಾನ್ ಬಚ್ಚು ಅವರನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ದುಃಖದ ವಿಚಾರ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತೆ ಹತ್ತಾರು ಜನಗಳ ಮಧ್ಯೆಯೇ ಈ ಹತ್ಯೆ ನಡೆದಿದೆ. ಅಲ್ಲದೆ ಪತ್ರಕರ್ತರು, ಲೇಖಕರಿಗೆ ಬಾಂಗ್ಲಾದೇಶದಲ್ಲಿ ರಕ್ಷಣೆ ಇಲ್ಲ ಎಂಬುದನ್ನು ಸೂಚಿಸುತ್ತದೆ,” ಎಂದು ಐಎಫ್ ಜೆ ಪ್ರಧಾನ ಕಾರ್ಯದರ್ಶಿ ಆಂಥೋನಿ ಬೆಲ್ಲಂಗೆರ್ ಆತಂಕ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದಿಗ್ಭ್ರಮೆ ಮೂಡಿಸಿದ ಹಲವು ಹತ್ಯೆಗಳ ಸಾಲಿಗೆ ಬಚ್ಚು ಕಗ್ಗೊಲೆ ಕೂಡ ಸೇರಿಕೊಂಡಿದೆ. 2015ರಿಂದಲೂ ಅಲ್ಲಿ ಇಂತಹ ಘಟನೆಗಳು ವರದಿಯಾಗುತ್ತಿವೆ. ಢಾಕಾದ ಪುಸ್ತಕ ಮೇಳಕ್ಕೆ ತಮ್ಮ ಪತ್ನಿಯೊಂದಿಗೆ ತೆರಳುತ್ತಿದ್ದ ನಿರೀಶ್ವರವಾದಿ ಲೇಖಕ, ಬ್ಲಾಗರ್ ಅವಿಜೋತ್ ರಾಯ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅದೇ ವರ್ಷ ಅಕ್ಟೋಬರ್ ನಲ್ಲಿ ರಾಯ್ ಪುಸ್ತಕಗಳ ಪ್ರಕಾಶಕ ಫೈಸಲ್ ಆರ್ ದೀಪನ್ ಅವರನ್ನು ಮಧ್ಯ ಢಾಕಾದ ಕಚೇರಿಯಲ್ಲಿ ಕೊಲೆ ಮಾಡಲಾಗಿತ್ತು. ದೀಪನ್ ಹತ್ಯೆಯ ದಿನವೇ ಪ್ರಕಾಶಕ ಅಹಮದ್ ರಹೀಂ ತುತುಲ್ ರನ್ನು ತಮ್ಮ ಶುದ್ಧೋಸ್ವರ ಪ್ರಕಾಶನ ಸಂಸ್ಥೆಯ ಕಚೇರಿಯಲ್ಲಿ ಹಲ್ಲೆ ಮಾಡಲಾಗಿತ್ತು. ಘಟನೆಯಲ್ಲಿ ಅವರು ಸೇರಿದಂತೆ ಇಬ್ಬರು ಲೇಖಕರು ತೀವ್ರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ : ರಾಹುಲ್ ಗಾಂಧಿ ಹತ್ಯೆ ಪ್ರಯತ್ನ ನಡೆದಿದ್ದರೆ ಸೂತ್ರಧಾರಿಗಳ ಪತ್ತೆಯಾಗಲಿ

ಮರುವರ್ಷ ಅಂದರೆ 2016ರ ಏಪ್ರಿಲ್ ನಲ್ಲಿ 28 ವರ್ಷದ ನಾಜಿಮುದ್ದೀನ್ ಸಮದ್ ಅವರನ್ನು ಸುತ್ರಾಪುರ ಪ್ರದೇಶದ ಜನನಿಬಿಡ ಸ್ಥಳದಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿ ಪೈಶಾಚಿಕವಾಗಿ ಹತ್ಯೆ ಮಾಡಲಾಗಿತ್ತು.

ಬರಹಗಾರರ ಅಂತರರಾಷ್ಟ್ರೀಯ ಸಂಘಟನೆ ‘ಪೆನ್’ ಸಹಯೋಗದ ‘ಅಪಾಯದಲ್ಲಿರುವ ಮುಕ್ತ ಅಭಿವ್ಯಕ್ತಿ’ ಯೋಜನಾ ನಿರ್ದೇಶಕ ಕೆರಿನ್ ಡಿ ಕಾರ್ಲೇಕರ್, “ಬಚ್ಚು ಅವರ ಹತ್ಯೆ ಆಘಾತಕಾರಿ ಸುದ್ದಿಯಾಗಿದ್ದು, ಬಾಂಗ್ಲಾದೇಶದಲ್ಲಿ ಭಿನ್ನಬಗೆಯ ಅಭಿಪ್ರಾಯಗಳನ್ನು ಹೊಂದಿರುವವರ ಮೇಲೆ ನಡೆಯುತ್ತಿರುವ ದಾಳಿಯ ಸ್ಪಷ್ಟ ಸೂಚನೆ” ಎಂದು ಖಂಡಿಸಿದ್ದಾರೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More