1000 ಕೋಟಿ ರೂಪಾಯಿ ವ್ಯವಹಾರ ಮಾಡುವ ಬಿಜೆಪಿಯ ಖಜಾಂಚಿ ಯಾರು?

ಬಿಜೆಪಿಗೆ ನೋಟೀಸು ಜಾರಿ ಮಾಡಿ ಪಕ್ಷದ ನಿಜವಾದ ಖಜಾಂಚಿ ಯಾರು ಎಂಬುದನ್ನು ಬಹಿರಂಗಪಡಿಸುವಂತೆ ಚುನಾವಣೆ ಆಯೋಗವು ಕೇಳಬೇಕಾಗಿತ್ತು ಎಂದು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಷಿಯವರು ‘ದಿ ವೈರ್’ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ

ಹಣಕಾಸು ರಾಜ್ಯ ಸಚಿವ ಪಿಯೂಶ್ ಗೋಯೆಲ್ ಅವರನ್ನು ಪಕ್ಷದ ಖಜಾಂಚಿ ಎಂದು ಘೋಷಿಸಲಾಗಿತ್ತು. ಅವರೇ ಆ ಹುದ್ದೆಯಲ್ಲಿ ಮುಂದುವರೆಯುತ್ತಾರೋ ಅಥವಾ ತಮ್ಮ ಸ್ಥಾನವನ್ನು ತೆರವುಗೊಳಿಸುತ್ತಾರೋ ಎಂಬ ವಿಷಯದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗದಿಂದ ಏನನ್ನೋ ಮುಚ್ಚಿಡುತ್ತಿರುವಂತೆ ಕಾಣುತ್ತಿದೆ.

ಭಾರತೀಯ ಜನತಾ ಪಕ್ಷ ವಿಶ್ವದ ಅತ್ಯಂತ ಶ್ರೀಮಂತ ಪಕ್ಷಗಳಲ್ಲೊಂದಾಗಿದ್ದು ಚುನಾವಣಾ ಆಯೋಗಕ್ಕೆ ಅದು ಸಲ್ಲಿಸಿದ ಇತ್ತೀಚಿನ ಲೆಕ್ಕಪತ್ರ ಮಾಹಿತಿಯ ಪ್ರಕಾರ 2016-17ರಲ್ಲಿ ಅದರ ಘೋಷಿತ ಆದಾಯ 1034 ಕೋಟಿ ರೂಪಾಯಿ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅದರ ಆದಾಯ ಶೇಕಡ 81ರಷ್ಟು ಏರಿಕೆಯಾಗಿರುವುದು ಬಿಜೆಪಿ ಪಾಲಿಗೆ ಸಂತಸದ ಸುದ್ದಿಯೇನೋ ಹೌದು. ಅದಕ್ಕಿಂತಲೂ ಮುಖ್ಯ ವಿಷಯ ಏನೆಂದರೆ, ಉಳಿದೆಲ್ಲಾ ರಾಷ್ಟ್ರೀಯ ಪಕ್ಷಗಳ ಆದಾಯಗಳನ್ನು ಕೂಡಿಸಿದರೂ ಬಿಜೆಪಿಯ ಆದಾಯದ ಅರ್ಧದಷ್ಟೂ ಆಗುವುದಿಲ್ಲ.

2019ರ ಲೋಕಸಭಾ ಚುನಾವಣೆಗಳು ಮುಂದಿರುವ ಇಂತಹ ಬಹುಮುಖ್ಯ ಸನ್ನಿವೇಶದಲ್ಲಿ ಪಕ್ಷವನ್ನು ಆರ್ಥಿಕವಾಗಿ ಸುಭದ್ರಗೊಳಿಸಿ ಅದಕ್ಕೊಂದು ಗಟ್ಟಿಯಾದ ಯುದ್ಧಕವಚವನ್ನು ತೊಡಿಸಿದ ಕೀರ್ತಿ ಬಿಜೆಪಿಯ ಯಾವ ನಾಯಕನಿಗೆ ಸಲ್ಲಬೇಕು?

ವಿಷಯ ಇಲ್ಲೇ ಮಬ್ಬಾಗುವುದು. ದೇಶದಲ್ಲಿ ಚುನಾವಣೆಗಳನ್ನು ನಡೆಸುವುದರ ಜೊತೆಗೆ ರಾಜಕೀಯ ಪಕ್ಷಗಳ ಕೆಲಸ ಮತ್ತು ಹಣಕಾಸು ನಿರ್ವಹಣೆಯನ್ನು ನಿಯಂತ್ರಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಭಾರತದ ಚುನಾವಣಾ ಆಯೋಗದ ಪಾತ್ರದ ಬಗ್ಗೆ ಇಲ್ಲೇ ಬಹುದೊಡ್ಡ ಪ್ರಶ್ನೆ ಏಳುವುದು.

ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಿರುವ ಮಾಹಿತಿಯಲ್ಲಿ ಬಿಜೆಪಿ ಪಕ್ಷವು ಇತ್ತೀಚಿನ ಕೆಲವು ವರ್ಷಗಳಲ್ಲಿ ತನ್ನ ಖಜಾಂಚಿ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಉದಾಹರಣೆಗಾಗಿ, ಬಿಜೆಪಿಯ 2016-17ರ ಲೆಕ್ಕಪರಿಶೋಧನಾ ದಾಖಲೆಗಳ ಮೇಲೆ “ಖಜಾಂಚಿಯ ಪರವಾಗಿ” ಎಂದು ನಮೂದಿಸಿ ಅದರ ಮೇಲೆ ಅಸ್ಪಷ್ಟವಾದ ಸಹಿಯೊಂದು ಇದೆಯೇ ಹೊರತು ಖಜಾಂಚಿಯ ಹೆಸರಾಗಲೀ ಅಥವಾ ಅವರ ಸಹಿಯಾಗಲೀ ಇಲ್ಲ. ಈ ಗೌಪ್ಯತೆ ಪಕ್ಷದ ಅಧಿಕೃತ ಅಂತರ್ಜಾಲ ತಾಣದಲ್ಲೂ ಕಂಡುಬರುತ್ತದೆ. ಪಕ್ಷದ ರಾಷ್ಟ್ರೀಯ ಖಜಾಂಚಿ ಎಂಬ ಶೀರ್ಷಿಕೆಯ ಜಾಲತಾಣ ಪುಟವನ್ನು ಖಾಲಿ ಬಿಡಲಾಗಿದೆ.

ಚುನಾವಣಾ ಆಯೋಗದ ಮುಂದೆ ಬಿಜೆಪಿ ಮಾಡಿರುವ ಈ ಘೋಷಣೆ ತಪ್ಪಾಗಿದ್ದು ಆಯೋಗವು ಈ ಘೋಷಣೆಯನ್ನು ಸುಮ್ಮನೇ ಒಪ್ಪಿಕೊಳ್ಳುವ ಬದಲು ಪಕ್ಷಕ್ಕೆ ನೋಟೀಸು ಜಾರಿ ಮಾಡಿ ಪಕ್ಷದ ನಿಜವಾದ ಖಜಾಂಚಿ ಯಾರು ಎಂಬುದನ್ನು ಬಹಿರಂಗಪಡಿಸುವಂತೆ ಕೇಳಬೇಕಾಗಿತ್ತು ಎಂದು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಷಿಯವರು ‘ದಿ ವೈರ್’ ಜೊತೆಗಿನ ಮಾತುಕತೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಚುನಾವಣಾ ಆಯೋಗವು 2014ರಲ್ಲಿ ಅಳವಡಿಸಿಕೊಂಡ ಆರ್ಥಿಕ ಪಾರದರ್ಶತೆಗಾಗಿನ ಮಾರ್ಗದರ್ಶಿಗಳ ಪ್ರಕಾರ “ರಾಜಕೀಯ ಪಕ್ಷವೊಂದರ ಖಜಾಂಚಿ ಅಥವಾ ಪಕ್ಷವು ಅಧಿಕಾರ ನೀಡಿದ ವ್ಯಕ್ತಿಯು” ಪಕ್ಷದ ಲೆಕ್ಕಪತ್ರಗಳನ್ನು ನೋಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಇನ್ನೊಬ್ಬ ಮಾಜಿ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಗುರುತನ್ನು ಬಹಿರಂಗಪಡಿಸಬಾರದು ಎಂಬ ಷರತ್ತಿನ ಮೇರೆಗೆ ಹೇಳಿದ್ದಾರೆ. ತನ್ನ ಖಜಾಂಚಿ ಅಥವಾ “ಲೆಕ್ಕಪತ್ರ ನಿರ್ವಹಣೆಯ ಅಧಿಕಾರ ಪಡೆದ ವ್ಯಕ್ತಿ” ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಚುನಾವಣಾ ಆಯೋಗವು ಲೆಕ್ಕಪತ್ರ ಪರಿಶೋಧನೆ ಬಿಜೆಪಿಗೆ ಏಕೆ ಕೇಳಲಿಲ್ಲ ಎಂದು ಕೇಳಿದ್ದಕ್ಕೆ ಅವರು ಲೆಕ್ಕಪತ್ರಗಳನ್ನು ಸಾಮಾನ್ಯವಾಗಿ ಕೆಳಹಂತದ ಅಧಿಕಾರಿಗಳೇ ಪರಿಶೀಲನೆ ನಡೆಸುತ್ತಾರಾದ್ದರಿಂದ ಅದು ಉನ್ನತಾಧಿಕಾರಿಗಳ ಗಮನಕ್ಕೆ ಬಂದಿರುವುದಿಲ್ಲ ಎನ್ನುತ್ತಾರೆ.

ಕುತೂಹಲಕಾರಿ ವಿಷಯ ಏನೆಂದರೆ, ಬಿಜೆಪಿಯು 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರುವ ಮುಂಚೆ ಈಗ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮತ್ತು ರೇಲ್ವೆ ಮಂತ್ರಿಯಾಗಿರುವ ಪಿಯೂಶ್ ಗೋಯೆಲ್ ಅವರು ಬಿಜೆಪಿಯ ಘೋಷಿತ ಖಜಾಂಚಿಯಾಗಿದ್ದರು. 2014ರ ಆಗಸ್ಟ್‍ನಲ್ಲಿ ಅಮಿತ್ ಷಾ ಅವರು ಪಕ್ಷದ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸಿದಾಗ ಖಜಾಂಚಿಯ ಹುದ್ದೆ ಆ ಪಟ್ಟಿಯಲ್ಲಿರಲಿಲ್ಲ. ‘ಕಾಕಾಜಿ’ ಗುರುತಿಸಲಾಗುವ ಮೋದಿಯ ನಿಷ್ಠ ಪರಿಂದು ಭಗತ್ ಅವರನ್ನೇ ಈ ಹುದ್ದೆಗೆ ನೇಮಕ ಮಾಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಒಂದಿಷ್ಟು ಊಹಾಪೋಹಗಳೂ ಎದ್ದಿದ್ದವು. ಆದರೆ, ಹಾಗೆ ಆಗಲಿಲ್ಲ. ಈಗ ಕೇಂದ್ರದಲ್ಲಿ ಸಚಿವರಾಗಿರುವ ಪಿಯೂಶ್ ಗೋಯಲ್ ಅವರು ಪಕ್ಷದ ಖಜಾಂಚಿಯೂ ಆಗಿ ಮುಂದುವರೆಯುವುದು ಸ್ಪಷ್ಟವಾಗಿ ಹಿತಾಸಕ್ತಿಗಳ ಘರ್ಷಣೆಯಾಗುವುದರಿಂದ ಅವರು ಖಜಾಂಚಿ ಹುದ್ದೆಯಿಂದ ಕೆಳಗಿಳಿಯುತ್ತಾರಾ? ಇಳಿದರೆ ಅವರ ಸ್ಥಾನವನ್ನು ಯಾರು ತುಂಬುತ್ತಾರೆ? ಬಿಜೆಪಿ ಈ ಪ್ರಶ್ನೆಗಳಿಗೆ ಮೌನವಾಗಿದೆ.

ಇಂತಹ ಮುಖ್ಯವಾದ ಲೆಕ್ಕಪತ್ರ ದಾಖಲೆಗೆ ಸಹಿ ಮಾಡುವ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಯ ಹೆಸರು ಮತ್ತು ಸಹಿ ಸ್ಪಷ್ಟವಾಗಿ ಇರಬೇಕಾಗುತ್ತದೆ, ಇಲ್ಲದಿದ್ದರೆ ಚುನಾವಣಾ ಆಯೋಗವೇ ಆ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಹಚ್ಚಬೇಕಾಗುತ್ತದೆ ಎಂದು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ‘ದಿ ವೈರ್’ಗೆ ಹೇಳಿದರು.

ಇನ್ನೊಬ್ಬ ಮುಖ್ಯ ಚುನಾವಣಾ ಆಯುಕ್ತರಾದ ಟಿ. ಎಸ್. ಕೃಷ್ಣಮೂರ್ತಿಯವರು ಪ್ರಸ್ತುತ ಬಿಜೆಪಿ ಖಜಾಂಚಿ ವಿವಾದದ ಬಗ್ಗೆ ತಾನೇನೂ ಹೇಳುವುದಕ್ಕೆ ಇಷ್ಟಪಡುವುದಿಲ್ಲ ಎಂದು ಹೇಳುತ್ತಲೇ, “ನನ್ನ ಅನುಭವದಲ್ಲಿ ಹೇಳುವುದಾದರೆ, ಪಕ್ಷವೊಂದು ತನ್ನ ಸಂವಿಧಾನದಲ್ಲಿ” ತನ್ನ ಹಣಕಾಸು ಲೆಕ್ಕಪತ್ರ ಘೋಷಣೆಗಳನ್ನು “ಯಾರು ಮಾಡುತ್ತಾರೆ ಎಂದು ಹೇಳಿರುತ್ತದೆಯೋ ಅದರ ಮೇಲೆ ಇದೆಲ್ಲಾ ನಿಂತಿರುತ್ತದೆ ಎಂದು ಮಾತ್ರ ಹೇಳಬಲ್ಲೆ” ಎನ್ನುತ್ತಾರೆ.

ಈ ದೃಷ್ಟಿಯಿಂದ ನೋಡುವುದಾದರೆ, ಬಿಜೆಪಿಯ ಸಂವಿಧಾನದ ಪ್ರಕಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅದರ ರಾಷ್ಟ್ರೀಯ ಖಜಾಂಚಿಯನ್ನು ನೇಮಕ ಮಾಡುತ್ತಾರೆ. ಪಕ್ಷದ ಆದಾಯ ಮತ್ತು ವೆಚ್ಛಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುವುದು ಹಾಗೂ ಅವುಗಳನ್ನು ಲೆಕ್ಕಪರಿಶೋಧನೆ ಮಾಡಿಸುವುದು ಖಜಾಂಚಿಯ ಜವಾಬ್ದಾರಿಯಾಗಿರುತ್ತದೆ ಎಂದೂ ಅದರ ಸಂವಿಧಾನವು ಹೇಳುತ್ತದೆ. ಅಲ್ಲದೇ, ಪಕ್ಷಕ್ಕಾಗಿ ದೇಣಿಗೆ ಸಂಗ್ರಹಿಸುವಾಗ ದೇಣಿಗೆ ಪಡೆದು ಮುದ್ರಿತ ರಶೀದಿಗಳನ್ನು ನೀಡಬೇಕು ಹಾಗೂ “[ಪಡೆದ ಹಣಕ್ಕೆ ಪ್ರತಿಯಾಗಿ ನೀಡಿದ] ಪ್ರತಿಯೊಂದು ರಶೀದಿ [ಕೇಂದ್ರ ಅಥವಾ ರಾಜ್ಯ ಮಟ್ಟದಲ್ಲಿ] ಸಂಬಂಧಪಟ್ಟ ಖಜಾಂಚಿಯ ನಕಲುಸಹಿಯನ್ನು ಒಳಗೊಂಡಿರಬೇಕು” ಎಂದೂ ಅದರ ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ.

ಇಲ್ಲಿ ಏಳುವ ಪ್ರಮುಖ ಪ್ರಶ್ನೆ ಎಂದರೆ, 2014ರಿಂದ ಇಲ್ಲಿಯ ತನಕ ಬಿಜೆಪಿಯು ರಾಷ್ಟ್ರಮಟ್ಟದಲ್ಲಿ ಸಂಗ್ರಹಿಸಿದ ನೂರಾರು ಕೋಟಿ ರೂಪಾಯಿ ದೇಣಿಗೆಗೆ ಪ್ರತಿಯಾಗಿ ನೀಡಲಾದ ರಶೀದಿಗಳ ಮೇಲೆ ಯಾರ ನಕಲುಸಹಿ ಸಹಿ ಇದೆ ಎಂಬುದು.

ಪಕ್ಷದ ಹಣಕಾಸು ಲೆಕ್ಕಪತ್ರ ನಿರ್ವಹಣೆಯಲ್ಲಿ ಗೋಯೆಲ್ ಅವರು ಸ್ವಲ್ಪ ಮಟ್ಟಿಗಾದರೂ ಭಾಗಿಯಾಗಿದದರೆ, ಇದು ಮೋದಿ ಸರ್ಕಾರದ ಅತ್ಯುನ್ನತ ಹಂತದಲ್ಲಿನ ಹಿತಾಸಕ್ತಿಯ ಸಂಘರ್ಷದ ಮೊದಲ ಪ್ರಕರಣವೇನೂ ಆಗುತ್ತಿರಲಿಲ್ಲ. ಗೋಯೆಲ್, ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್, ವಾಣಿಜ್ಯ ಸಚಿವ ಸುರೇಶ್ ಪ್ರಭು, ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ – ಎಲ್ಲರೂ ಕೂಡ ಇಂಡಿಯಾ ಫೌಂಡೇಶನ್ ಸಂಸ್ಥೆಯ ನಿರ್ದೇಶಕರಾಗಿ ಮುಂದುವರೆಯುತ್ತಿದ್ದಾರೆ. ಈ ಸಂಸ್ಥೆಯು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಮಗ ಶೌರ್ಯ ದೋವಲ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ನಡೆಸುತ್ತಿರುವ ಸಂಸ್ಥೆಯಾಗಿದ್ದು ಬಹುರಾಷ್ಟ್ರೀಯ ಕಂಪನಿಗಳನ್ನೂ ಒಳಗೊಂಡಂತೆ ಅನೇಕ ಕಾರ್ಪೊರೇಟ್ ಪ್ರಾಯೋಜಕರನ್ನು ಆಕರ್ಷಿಸಿದೆ.

ದೇಣಿಗೆ ಸಂಗ್ರಹಿಸುವಾಗ ಪ್ರಮುಖವಾಗಿ ಖಜಾಂಚಿಗಳು ಮೈಕೈ ಹೊಲಸು ಮಾಡಿಕೊಳ್ಳುತ್ತಾರಾದ್ದರಿಂದ ರಾಜಕೀಯ ಪಕ್ಷಗಳು ಅವರನ್ನು ಸರ್ಕಾರಿ ಹುದ್ದೆಗಳಿಂದ ದೂರವಿಡುವ ಮೂಲಕ ಹಿತಾಸಕ್ತಿಯ ಸಂಘರ್ಷದ ಆಪಾದನೆಗಳೂ ಬರದಂತೆ ನೋಡಿಕೊಳ್ಳುತ್ತವೆ. ಮೋತಿಲಾಲ್ ವೋರಾ ಅವರು ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದು ಅವರೇ ಹಣಕಾಸು ಲೆಕ್ಕಪತ್ರಗಳ ದಾಖಲೆಗಳ ಮೇಲೆ ಸಹಿಮಾಡುತ್ತಾರೆ. ಅವರು ಎಂದೂ ಮನಮೋಹನ್ ಸಿಂಗ್ ನೇತೃತ್ವ ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿರಲಿಲ್ಲ.

ರಾಜನಾಥ್ ಸಿಂಗ್ ಅವರು 2014ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ನಂತರ ಅವರ ಅಪೂರ್ಣ ಅವಧಿಯನ್ನು ಪೂರ್ಣಗೊಳಿಸುವುದಕ್ಕಾಗಿ ಅಮಿತ್ ಷಾ ಬಿಜೆಪಿಯ ಅಧ್ಯಕ್ಷರಾದ ಮೇಲೆ ಖಜಾಂಚಿಯ ಸುತ್ತ ಈ ಗೌಪ್ಯತೆಯ ಹುತ್ತ ಹುಟ್ಟಿಕೊಂಡಿದೆ. 2016ರ ಜನವರಿಯಲ್ಲಿ ಅಮಿತ್ ಷಾ ಮತ್ತೆ ಮೂರು ವರ್ಷಗಳ ಪೂರ್ಣಾವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಪಕ್ಷದ ಸಂವಿಧಾನದ ಪ್ರಕಾರ ಅವರು ಮತ್ತೆ ಮೂರು ವರ್ಷಗಳ ಪೂರ್ಣಾವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಬಹುದು.

ಒಂದು ಲೆಕ್ಕಾಚಾರದ ಪ್ರಕಾರ ಗೋಯೆಲ್ ಜೊತೆ ಅಮಿತ್ ಷಾ ಅವರು ಪಕ್ಷಕ್ಕೆ ಹಣಕಾಸು ದೇಣಿಗೆ ಸಂಗ್ರಹಿಸುವ ಪ್ರಧಾನ ಮೂಲವಾಗಿದ್ದು ಅವರೇ ಹಣಕಾಸು ಲೆಕ್ಕಪತ್ರವನ್ನು ನೋಡಿಕೊಳ್ಳುವ ಖಜಾಂಚಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ತಾನೊಂದು ಪಾರದರ್ಶಕ ಪಕ್ಷ ಎಂದು ಬಿಜೆಪಿ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಪಾರದರ್ಶಕ ರಾಜಕೀಯ ಪಕ್ಷವು ತನ್ನ ಖಜಾಂಚಿಯ ಬಗೆಗಿನ ವಿವರಗಳನ್ನೂ ಒಳಗೊಂಡಂತೆ ಎಲ್ಲ ಮಾಹಿತಿಯನ್ನು ಸಾರ್ವಜನಿಕ ಸ್ವಾಮ್ಯದಲ್ಲಿಡಬೇಕು. ಆದರೆ, ಮೋದಿ ಮತ್ತು ಷಾ ಅವರೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೋದಿಮಯ ಪಕ್ಷವೊಂದರಲ್ಲಿ ಪಕ್ಷದ ಒಳಗಾಗಲೀ ಅಥವಾ ಚುನಾವಣಾ ಆಯೋಗವನ್ನೂ ಒಳಗೊಂಡಂತೆ ಹೊರಗಾಗಲೀ ಯಾರೊಬ್ಬರೂ ಈ ಪ್ರಶ್ನೆಗಳನ್ನು ಕೇಳುವ ದೈರ್ಯತೋರುವುದಿಲ್ಲ.

“ನಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ ನಮಗೆ ಬಹಳ ಹೆಮ್ಮೆಯಿರುತ್ತಿತ್ತು. ಆದರೂ ಷಾ ಅವರನ್ನು ನೇಮಕ ಮಾಡಲಾಯಿತು... ನಾನೊಬ್ಬ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ದೇನೆ. ಆದರೆ, ಬಿಜೆಪಿಯ ನಿವಾದ ಖಜಾಂಚಿ ಯಾರು ಎಂಬುದು ನನಗೂ ಗೊತ್ತಿಲ್ಲ. ಗೋಯೆಲ್ ನಂತರದಲ್ಲಿ ಆ ಸ್ಥಾನಕ್ಕೆ ಯಾರು ಬಂದಿದ್ದಾರೆ ಅಥವಾ ಅವರೇ ಮುಂದುವರೆಯುತ್ತಿದ್ದಾರೆಯೇ ಎಂಬುದು ಬಹಳ ನಿಗೂಢವಾಗಿದೆ. ನನ್ನ ಕಾರ್ಪೊರೇಟ್ ಸಂಪರ್ಕಗಳ ಮೂಲಕ ನನಗೆ ಬಂದಿರುವ ಮಾಹಿತಿ ಪ್ರಕಾರ ಗೋಯೆಲ್ ಮತ್ತು ಷಾ ಅವರೇ ಪಕ್ಷಕ್ಕಾಗಿ ದುಡ್ಡು ಎತ್ತುವ ಪ್ರಧಾನ ಮೂಲ,” ಎಂದು ಕೇಂದ್ರದ ಹಿರಿಯ ಕ್ಯಾಬಿನೆಟ್ ಮಂತ್ರಿಯೊಬ್ಬರು ‘ದಿ ವೈರ್’ಗೆ ಹೇಳಿದರು.

ಇದನ್ನೂ ಓದಿ : ವಿವಿಪ್ಯಾಟ್ ವೈಫಲ್ಯ; ಚುನಾವಣಾ ಆಯೋಗದ ಕಾರಣ ಒಪ್ಪದ ಮಾಜಿ ಅಧಿಕಾರಿಗಳು!

ಮೋದಿಯವರು ತಮ್ಮ ಗುಜರಾತ್ ದಿನಗಳ ಒಡನಾಡಿ ಎ.ಕೆ. ಜ್ಯೋತಿಯವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ ಮೇಲೆ ಚುನಾವಣಾ ಆಯೋಗವು ಪಕ್ಷಪಾತಿಯಾಗಿದೆ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದ್ದರೂ ಅದೇ ಆಯೋಗವು ಬಿಜೆಪಿಗೆ ಕಠಿಣ ಪ್ರಶ್ನೆಗಳನ್ನು ಕೇಳಬೇಕು ಎಂದು ಸಂವಿಧಾನ ತಜ್ಞರು ಹೇಳುತ್ತಾರೆ.

ಜ್ಯೋತಿಯವರು ಚುನಾವಣಾ ಆಯುಕ್ತರಾಗಿ ತಮ್ಮ ಅಧಿಕಾರದ ಕೊನೆಯ ದಿನದಂದು ಆಮ್ ಆದ್ಮಿ ಪಕ್ಷದ ಶಾಸಕರನ್ನು ಅನರ್ಹಗೊಳಿಸಿದ ಮೇಲೆ ಹಾಗೂ ಮತದಾನ ಯಂತ್ರಗಳ ಮೇಲೆ ಪದೇ ಪದೇ ಅನುಮಾನಗಳು ಮೂಡಿದ ಮೇಲೆ ಚುನಾವಣಾ ಆಯೋಗವು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ನಿಮ್ಮ ಖಜಾಂಚಿ ಯಾರು ಎಂಬುದನ್ನು ತಿಳಿಸಿ ಎಂದು ಚುನಾವಣಾ ಆಯೋಗವು ಬಿಜೆಪಿಗೆ ಕೇಳದಿರುವುದು ಮೋದಿ ಸರ್ಕಾರದಲ್ಲಿ ಅದು ಕುಸಿದುಬಿದ್ದಿರುವುದರ ಸಂಕೇತವಾಗಿದ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More