ಇಂದಿನ ಡೈಜೆಸ್ಟ್ | ನೀವು ಓದಲೇಬೇಕಾದ 9 ಪ್ರಮುಖ ಇತರ ಸುದ್ದಿಗಳು

ನೀವು ತಪ್ಪಿಸಿಕೊಂಡಿರಬಹುದಾದ ಮತ್ತು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ    

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಒತ್ತಾಯಿಸಿ ದೆಹಲಿ ಚಲೋ

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಒತ್ತಾಯಿಸಿ ದೆಹಲಿ ಚಲೋ ನಡೆಸಿ, ಪ್ರಧಾನಿ ಮೋದಿಯವರಿಗೆ ಲಿಂಗಾಯತ ಧರ್ಮದ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಲಿಂಗಾಯತ ಧರ್ಮ ವಿಚಾರವಾಗಿ ಮಾಡಿದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್‌ ಕಳುಹಿಸಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಪಟ್ಟದ್ದೇವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಾರ್ತಿ ಚಿದಂಬರಂ ವಿರುದ್ಧ ಚಾರ್ಜ್ ಶೀಟ್

ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯದ ಹೊಸ ಚಾರ್ಜ್‌ಶೀಟ್‌ ಸಲ್ಲಿಸಿದೆ. ಕಾರ್ತಿ ಚಿದಂಬರಂ ಹಾಗೂ ಏರ್‌ಸೆಲ್‌ ನಡುವಣ ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿದ ಆರ್ಥಿಕ ಅಪರಾಧ ಇಲಾಖೆ ಬುಧವಾರ ಸಿಬಿಐನ ವಿಶೇಷ ನ್ಯಾಯಾಧೀಶ ಒ ಪಿ ಶೈನಿ ಅವರಿಗೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ವಿದೇಶಿ ಹೂಡಿಕೆ ಅಭಿವೃದ್ಧಿ ನಿಗಮ, ಎಂಎಸ್‌‌ ಗ್ಲೋಬಲ್‌ ಕಮ್ಯೂನಿಕೇಷನ್‌ ಹೋಲ್ಡಿಂಗ್‌ ಸರ್ವಿಸ್‌‌ ಲಿಮಿಟೆಡ್‌‌ ಏರ್‌ಸೆಲ್‌ನಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಿತ್ತು. ಈ ಅನುಮತಿ ನೀಡುವಲ್ಲಿ ಪಿ ಚಿದಂಬರಂ ಅವರ ಕೈವಾಡವಿತ್ತು ಎಂದು ಈ ಹಿಂದೆ ಇಡಿ ತನ್ನ ತನಿಖಾ ವರದಿಯಲ್ಲಿ ಪ್ರಸ್ತಾಪಿಸಿತ್ತು.

ವಾಜಪೇಯಿ ಆರೋಗ್ಯ ಸುಧಾರಣೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಯಪೇಯಿ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮೂತ್ರಕೋಶ ಹಾಗೂ ಶ್ವಾಸಕೋಶದ ಸೋಂಕುಗಳಿಂದ ಬಳಲುತ್ತಿದ್ದ 93ರ ವಾಜಪೇಯಿ ಜೂನ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ನಿಯಮಿತ ಡಯಲಿಸಿಸ್ ಮಾಡಲಾಗುತ್ತಿದೆ. ಅವರು ಎಲ್ಲಾ ರೀತಿಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ರಕ್ತದೊತ್ತಡ, ಹೃದಯ ಬಡಿತ ಹಾಗೂ ಉಸಿರಾಟ ಸಹಜ ಸ್ಥಿತಿಗೆ ಮರಳಿದ್ದು ಕೆಲದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ ಎಂದು ಏಮ್ಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.

ಅಟಲ್ ಪಿಂಚಣಿ ಯೋಜನೆ ಮಿತಿ ದುಪ್ಪಟ್ಟು ಏರಿಕೆ ಪರಿಶೀಲನೆ

ಅಟಲ್ ಪಿಂಚಣಿ ಯೋಜನೆಯಡಿ ಈಗ ಇರುವ ಮಿತಿಯನ್ನು ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ಚಿಂತಿಸಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್ಆರ್ಡಿಎ) ಈ ಸಂಬಂಧ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಈಗ ಹಾಲಿ ಇರುವ 5000 ಪಿಂಚಣಿ ಮೊತ್ತವನ್ನು 10000ಕ್ಕೆ ಏರಿಸಬೇಕು ಎಂಬುದು ಪಿಎಫ್ಆರ್ಡಿಎ ಪ್ರಸ್ತಾಪ. ಪ್ರಸ್ತುತ 1000- 5000 ರುಪಾಯಿ ವರೆಗೆ ಐದು ಹಂತಗಳಲ್ಲಿ ಪಿಂಚಣಿ ನೀಡಲಾಗುತ್ತಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರುತ್ತಿರುವುದರಿಂದ 5000 ಮಿತಿ ಹೇರಿದರೆ  60 ವರ್ಷದ ವ್ಯಕ್ತಿಗಳಿಗೆ ಅನನುಕೂಲವಾಗುತ್ತದೆ ಎಂಬ ಅಹವಾಲುಗಳ ಹಿನ್ನೆಲೆಯಲ್ಲಿ ಮಿತಿ ಏರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಕೇಂದ್ರ ಸರ್ಕಾರ ಪ್ರಸ್ತಾಪವನ್ನು ಆಮೂಲಾಗ್ರವಾಗಿ ಪರಿಶೀಲಿಸುತ್ತಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ಮದ್ನೇಶ್ ಕುಮಾರ್ ಮಿಶ್ರ ಹೇಳಿದ್ದಾರೆ.

ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ ರೆಹಮಾನ್‌ ಬಯೋಗ್ರಫಿ

ಭಾರತದ ಖ್ಯಾತ ಸಂಗೀತ ಸಂಯೋಜಕ ಎ ಆರ್ ರೆಹಮಾನ್‌ ಜೀವನ, ಸಂಗೀತ, ಸಾಧನೆಯನ್ನೊಳಗೊಂಡ ಪುಸ್ತಕ ಸಿದ್ಧವಾಗುತ್ತಿದೆ. ‘ನೋಟ್ಸ್‌ ಆಫ್‌ ಎ ಡ್ರೀಮ್‌: ದಿ ಆಥರೈಸ್ಡ್‌ ಬಯೋಗ್ರಫಿ ಆಫ್‌ ಎ ಆರ್ ರೆಹಮಾನ್‌’ ಶೀರ್ಷಿಕೆಯ ಕೃತಿಯನ್ನು ಚೆನ್ನೈ ಮೂಲದ 24ರ ಹರೆಯದ ಕೃಷ್ಣ ತ್ರಿಲೋಕ್‌ ರಚಿಸಿದ್ದಾರೆ. ‘ಸ್ಲಂಡಾಗ್ ಮಿಲಿಯನೇರ್‌’ ಸಿನಿಮಾ ನಿರ್ದೇಶಕ ಡ್ಯಾನಿ ಬಾಯ್ಲ್‌ ಮುನ್ನುಡಿ ಬರೆದಿದ್ದು, ಪೆಂಗ್ವಿನ್ ರ್ಯಾಂಡಮ್‌ ಹೌಸ್ ಇಂಡಿಯಾ ಪುಸ್ತಕ ಪ್ರಕಟಿಸುತ್ತಿದೆ. ಆಗಸ್ಟ್‌ ತಿಂಗಳಲ್ಲಿ ಕೃತಿ ಬಿಡುಗಡೆಯಾಗಲಿದೆ.

ಮುಂದಿನ ಫಿಫಾ ವಿಶ್ವಕಪ್ ಗೆ ತ್ರಿವಳಿ ಆತಿಥ್ಯ

ಇಪ್ಪತ್ತೆರಡನೇ ಫಿಫಾ ವಿಶ್ವಕಪ್ ಪಂದ್ಯಾವಳಿಗೆ ಮೂರು ರಾಷ್ಟ್ರಗಳು ಆತಿಥ್ಯ ಹೊತ್ತಿವೆ. ಅಮೆರಿಕ, ಮೆಕ್ಸಿಕೋ ಹಾಗೂ ಕೆನಡಾ ಮುಂದಿನ ವಿಶ್ವಕಪ್ ಆತಿಥ್ಯದ ಹಕ್ಕನ್ನು ಪಡೆದವು. ರಷ್ಯಾದಲ್ಲಿ ಶುರುವಾಗುತ್ತಿರುವ ಇಪ್ಪತ್ತನೇ ಆವೃತ್ತಿಯ ಫಿಫಾ ಕಪ್‌ ಮುನ್ನಾ ದಿನವಾದ ಬುಧವಾರ (ಜೂನ್ ೧೨) ಮುಂದಿನ 2026ರ ವಿಶ್ವಕಪ್ ಆತಿಥ್ಯದ ಪ್ರಕ್ರಿಯೆಗಳನ್ನು ಪೂರೈಸಲಾಯಿತು. ಅಂದಹಾಗೆ ಈ ಆವೃತ್ತಿಯಿಂದ 48 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸದ್ಯ 32 ತಂಡಗಳಷ್ಟೇ ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಾ ಬರುತ್ತಿವೆ. ಮಾಸ್ಕೋ ಎಕ್ಸ್ ಪೋ ಸೆಂಟರ್ ನಲ್ಲಿ ನಡೆದ ಫಿಫಾ ಕಾಂಗ್ರೆಸ್ ಸಮ್ಮುಖದಲ್ಲಿ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳ ನೇತೃತ್ವದಲ್ಲಿ ಟೂರ್ನಿ ನಡೆಸಲು ಸಮ್ಮತಿಸಲಾಯಿತು. ಅಂತೆಯೇ ಟೂರ್ನಿಯ ಬಹುಪಾಲು ಪಂದ್ಯಗಳು ಅಮೆರಿಕದಲ್ಲೇ ಜರುಗಲಿವೆ. ೧೯೭೪ರಲ್ಲಿ ಅಮೆರಿಕ ಮೊದಲ ಬಾರಿಗೆ ಆತಿಥ್ಯದ ಹೊಣೆ ಹೊತ್ತಿತ್ತು. ಇನ್ನು ಮೆಕ್ಸಿಕೋ ೧೯೭೦ ಹಾಗೂ ೧೯೮೦ ರಲ್ಲಿ ಆತಿಥ್ಯ ಹೊತ್ತಿದ್ದರೆ ಕೆನಡಾ ಮೊದಲ ಬಾರಿಗೆ ವಿಶ್ಚಕಪ್ ಆತಿಥ್ಯವನ್ನು ಹೊತ್ತುಕೊಳ್ಳುತ್ತಿರುವುದು ವಿಶೇಷ.

ಕ್ಯಾನ್ಸರ್ ಚಿಕಿತ್ಸೆಗೆ ಮುಂದಾದ ರಿಚರ್ಡ್

ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ನ್ಯೂಜಿಲೆಂಡ್ ನ ಮಾಜಿ ಕ್ರಿಕೆಟಿಗ ರಿಚರ್ಡ್‌ ಹ್ಯಾಡ್ಲಿ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಚಿಕಿತ್ಸೆಗೆ ಒಳಗಾಗಲಿದ್ದಾರೆ. ಕರುಳಿನ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಹ್ಯಾಡ್ಲಿ, ಈ ಹಿಂದೆ ಚಿಕಿತ್ಸೆ ಪಡೆದಿದ್ದರಾದರೂ ಪೂರ್ಣ ಗುಣಮುಖರಾಗಿಲ್ಲ. ೬೬ ರ ಹರೆಯದ ವಿಶ್ವ ಕಂಡ ಸರ್ವಶ್ರೇಷ್ಠ ವೇಗದ ಬೌಲರ್ ಗಳಲ್ಲಿ ಒಬ್ಬರು. ೪೦೦ ವಿಕೆಟ್ ಪಡೆದ ಮೊದಲ ಬೌಲರ್ ಕೂಡಾ. ೧೯೯೯ ರಲ್ಲಿ ನಿವೃತ್ತಿ ಹೊತ್ತಿಗೆ ಹ್ಯಾಡ್ಲಿ ಕೇವಲ ೮೬ ಟೆಸ್ಟ್ ಪಂದ್ಯಗಳಲ್ಲಿ೨೨.೨೯ರ ಸರಾಸರಿಯಲ್ಲಿ ೪೩೧ ವಿಕೆಟ್ ಗಳಿಸಿದ್ದರು. ಈ ಪೈಕಿ ೧೯೮೫ ರ ಬ್ರಿಸ್ಬೇನ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ೫೨ ರನ್ ಗಳಿಗೆ ೯ ವಿಕೆಟ್ ಕೂಡಾ ಸೇರಿದೆ. ಅಂದಹಾಗೆ, ಇದು ಅವರ ವೃತ್ತಿಬದುಕಿನ ಉತ್ಕೃಷ್ಟ ಸಾಧನೆ.

ತ್ರಿಪುರದಲ್ಲಿ ಭಾರಿ ಮಳೆ; ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ಇಲ್ಲ

ತ್ರಿಪುರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳು ಸೂರು ಕಳೆದುಕೊಂಡಿದ್ದಾರೆ. ಬುಧವಾರ ಬೆಳಿಗ್ಗೆಯೂ ಮುಂದುವರೆದ ಮಳೆಯಿಂದ ಕೆಲವು ಮನೆಗಳು ಜಲಾವೃತಗೊಂಡಿವೆ. ಜನರ ಸುರಕ್ಷತೆಯಿಂದಾಗಿ 500 ಕ್ಕೂ ಹೆಚ್ಚು ಕುಟುಂಬಗಳನ್ನು ಪಶ್ಚಿಮ ತ್ರಿಪುರಾದ ಸದರ್ ಉಪವಿಭಾಗದ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇರಾನ್ ಹಿಜಾಬ್ ಕಾನೂನು; ಚೆಸ್ ಟೂರ್ನಿಯಿಂದ ಹೊರಬಂದ ಸೌಮ್ಯ ಸ್ವಾಮಿನಾಥನ್

ಭಾರತದ ಗ್ರ್ಯಾಂಡ್ ಮಾಸ್ಟರ್ ಸೌಮ್ಯ ಸ್ವಾಮಿನಾಥನ್ ಅವರು ಇರಾನ್ ದೇಶದಲ್ಲಿ ಕಡ್ಡಾಯವಿರುವ ಹಿಜಾಬ್‌ ಧರಿಸಲು ನಿರಾಕರಿಸಿ ಏಷ್ಯಾ ಚೆಸ್ ಚಾಂಪಿಯನ್‌ಶಿಪ್‌ಯಿಂದ ಹೊರನಡೆದಿದ್ದಾರೆ. ಇರಾನ್ ನಡುವೆ ಹಮಾದಾನ್‌ನಲ್ಲಿ ಅಗಸ್ಟ್‌ನಲ್ಲಿ ನಡೆಯಬೇಕಿದ್ದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇರಾನ್‌ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಬುರ್ಖಾ ಹಾಗೂ ಹಿಜಾಬ್ ಧರಿಸುವುದು ಕಡ್ಡಾಯ, ಅಂತೆಯೇ ಸ್ಟೋರ್ಟ್ಸ್ ಟೂರ್ನಿಗಳಲ್ಲೂ ನಿಷಿದ್ದ.

ಪಾಕ್‌-ಭಾರತ ಗಡಿಯಲ್ಲಿ ಗುಂಡಿನ ಚಕಮಕಿ; ನಾಲ್ವರು ಭಾರತೀಯ ಯೋಧರು ಹುತಾತ್ಮ

ಪಾಕಿಸ್ತಾನ ಯೋಧರು ಪಾಕ್‌ ಮತ್ತು ಭಾರತದ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮಂಗಳವಾರ ರಾತ್ರಿ ನಡೆದ ಸೇನಾ ಪಡೆಗಳ ಸಂಘರ್ಷದಿಂದ ಐವರು ಯೋಧರು ಗಾಯಗೊಂಡಿದ್ದಾರೆ. ಒಬ್ಬ ಸಹಾಯಕ ಕಮಾಂಡೆಂಟ್ ಹಾಗೂ ಮೂವರು ಯೋಧರು ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ‌

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More