ಹಲ್ಲೆ ಪ್ರಕರಣ: ಶಾಸಕ ಹ್ಯಾರಿಸ್‌ ಪುತ್ರ ನಲಪಾಡ್‌ಗೆ 4 ತಿಂಗಳ ಬಳಿಕ ಜಾಮೀನು

ಉದ್ಯಮಿ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಪುತ್ರ ನಲಪಾಡ್‌ಗೆ ಹೈಕೋರ್ಟ್‌ ಏಕಸದಸ್ಯ ಪೀಠವು ಷರತ್ತುಬದ್ಧ ಜಾಮೀನು ನೀಡಿದೆ. ಎರಡು ಬಾರಿ ಸೆಷನ್ಸ್‌ ನ್ಯಾಯಾಲಯ, ಒಮ್ಮೆ ಹೈಕೋರ್ಟ್‌ ನಲಪಾಡ್‌ಗೆ ಜಾಮೀನು ನೀಡಲು ನಿರಾಕರಿಸಿದ್ದವು

ಉದ್ಯಮಿ ಪುತ್ರ ವಿದ್ವತ್‌ ಮೇಲಿನ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಸುಮಾರು ನಾಲ್ಕು ತಿಂಗಳಿಂದ ಜೈಲುಪಾಲಾಗಿದ್ದ ಶಾಂತಿನಗರ ಶಾಸಕ ಎನ್‌ ಎ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ಗೆ ಹೈಕೋರ್ಟ್‌ ಏಕಸದಸ್ಯ ಪೀಠವು ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನಲಪಾಡ್‌ ಅವರಿಗೆ ಹಿಂದೆ ಸೆಷನ್ಸ್‌ ಕೋರ್ಟ್‌ ಎರಡು ಬಾರಿ ಹಾಗೂ ಹೈಕೋರ್ಟ್‌ ಒಂದು ಬಾರಿ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದವು. ನ್ಯಾಯಾಲಯದ ಅನುಮತಿ ಇಲ್ಲದೆ ರಾಜ್ಯ ತೊರೆಯಬಾರದು, ಎರಡು ಲಕ್ಷ ರುಪಾಯಿ ಮೌಲ್ಯದ ಬಾಂಡ್‌ ಮತ್ತು ಇಬ್ಬರ ಭದ್ರತೆ ನೀಡುವಂತೆ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ಅವರು ಆದೇಶಿಸಿದ್ದಾರೆ.

ಫೆ.೧೭ರಂದು ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಫರ್ಜಿ ಕೆಫೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ವತ್‌ ಮೇಲೆ ನಲಪಾಡ್‌ ಹಾಗೂ ಆತನ ಆರು ಮಂದಿ ಬೆಂಬಲಿಗರು ದಾಳಿ ನಡೆಸಿದ್ದರು. ಕರ್ನಾಟಕವು ವಿಧಾನಸಭೆ ಚುನಾವಣೆಗೆ ಸನ್ನದ್ಧಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಕರಣ ನಡೆದಿದ್ದರಿಂದ ಈ ಘಟನೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಇದರಿಂದ ಮುಜುಗರಕ್ಕೆ ಒಳಗಾಗಿದ್ದ ಕಾಂಗ್ರೆಸ್‌, ಬೆಂಗಳೂರು ನಗರ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಸ್ಥಾನದಿಂದ ನಲಪಾಡ್‌ ಅವರನ್ನು ವಜಾಗೊಳಿಸಿ, ಪ್ರಕರಣದಿಂದ ಅಂತರ ಕಾಯ್ದುಕೊಂಡಿತ್ತು.

ಪುತ್ರನ ದಾಂಧಲೆ ಪ್ರಕರಣವು ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದರಿಂದ ಶಾಸಕ ಹ್ಯಾರಿಸ್‌ ಅವರು ಸದನದಲ್ಲಿ ಕ್ಷಮೆ ಯಾಚಿಸಿದ್ದರು. ಘಟನೆ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಂತೆ, ಎರಡು ದಿನಗಳ ಬಳಿಕ ನಲಪಾಡ್‌ ಅವರು ಕಬ್ಬನ್‌ ಪೇಟೆ ಪೊಲೀಸರಿಗೆ ಶರಣಾಗಿದ್ದರು. ಆನಂತರ ಸೆಷನ್ಸ್‌ ಕೋರ್ಟ್‌ ಅವರನ್ನು ೧೪ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಮಧ್ಯೆ, ಹ್ಯಾರಿಸ್‌ ಅವರು ಪ್ರಕರಣದ ಸಂಧಾನಕ್ಕೆ ಮುಂದಾಗುವಂತೆ ವಿದ್ವತ್‌ ಕುಟುಂಬದವರನ್ನು ಮಲ್ಯ ಆಸ್ಪತ್ರೆಯಲ್ಲಿ ಮನವಿ ಮಾಡಿದ್ದ ವಿಚಾರವು ಭಾರಿ ವಿವಾದ ಸೃಷ್ಟಿಸಿತ್ತು.

ಇದರ ಮಧ್ಯೆ, ಮಾ.೨ರಂದು ನಲಪಾಡ್‌ಗೆ ಸೆಷನ್ಸ್‌ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ನಲಪಾಡ್‌, ಅಲ್ಲಿಯೂ ಜಾಮೀನು ಸಿಗದೆ ಜೈಲಿನಲ್ಲೇ ಉಳಿಯುವಂತಾಗಿತ್ತು. ವಿದ್ವತ್‌ ಮೇಲೆ ನಲಪಾಡ್‌ ನಡೆಸಿರುವ ದಾಳಿಯು ಕ್ರೌರ್ಯದಿಂದ ಕೂಡಿದೆ ಎಂದು ಹೈಕೋರ್ಟ್‌ ಏಕಸದಸ್ಯ ಪೀಠವು ಮಾ.೧೪ರಂದು ಜಾಮೀನು ಅರ್ಜಿ ವಜಾಗೊಳಿಸಿತ್ತು. ಆದರೆ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಹ್ಯಾರಿಸ್‌ ಮುಂದಾಗಿರಲಿಲ್ಲ.

ಇದನ್ನೂ ಓದಿ : ಎನ್‌ ಎ ಹ್ಯಾರಿಸ್‌ ಮನದ ಮಾತು | ಪುತ್ರನ ಪ್ರಕರಣದಿಂದ ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆ ಇಲ್ಲ

ಇದೆಲ್ಲದ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮೇ ೧ರಂದು ೬೦೦ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರ ಬೆನ್ನಿಗೆ, ಮತ್ತೊಮ್ಮೆ ಜಾಮೀನು ಕೋರಿ ನಲಪಾಡ್‌ ಪರ ವಕೀಲರು ಮೇ ೧೬ರಂದು ಸೆಷನ್ಸ್‌ ಕೋರ್ಟ್‌ ಕದ ತಟ್ಟಿದ್ದರು. ಇದನ್ನು ವಿರೋಧಿಸಿದ್ದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಂ ಎಸ್‌ ಶ್ಯಾಮಸುಂದರ್‌ ಅವರು, ೩೯೬ ಪುಟಗಳ ಆಕ್ಷೇಪಣೆ ಸಲ್ಲಿಸಿದ್ದರು. ನಲಪಾಡ್‌ ಪರ ವಕೀಲ ಉಸ್ಮಾನ್‌ ಮತ್ತು ಶ್ಯಾಮಸುಂದರ್‌ ಅವರ ವಾದ-ಪ್ರತಿವಾದ ಆಲಿಸಿದ್ದ ಸೆಷನ್ಸ್‌ ಕೋರ್ಟ್‌, ಮೇ ೩೦ರಂದು ಮತ್ತೊಮ್ಮೆ ನಲಪಾಡ್‌ಗೆ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮತ್ತೊಮ್ಮೆ ಹೈಕೋರ್ಟ್‌ ಮೆಟ್ಟಿಲೇರಿದ್ದ ನಲಪಾಡ್ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ‘ದಿ ಸ್ಟೇಟ್‌’ಗೆ ವಿಶೇಷ ಸಂದರ್ಶನ ನೀಡಿದ್ದ ಹ್ಯಾರಿಸ್‌ ಅವರು, "ಯಾವ ತಂದೆಗೂ ಈ ಸ್ಥಿತಿ ಬರಬಾರದು. ನಲಪಾಡ್‌ ತಪ್ಪನ್ನು ನಾನು ಸಮರ್ಥಿಸುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲೇ ಕ್ಷಮೆ ಕೋರಿದ್ದೇನೆ. ಇನ್ನೇನು ಮಾಡಲು ಸಾಧ್ಯ?" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More