ಟ್ವಿಟರ್ ಸ್ಟೇಟ್ | ವ್ಯಂಗ್ಯ, ಹಾಸ್ಯ, ಟೀಕೆಗೆ ತುತ್ತಾದ ಮೋದಿ ಫಿಟ್ನೆಸ್ ವಿಡಿಯೋ

ಫಿಟ್‌ನೆಸ್ ಚಾಲೆಂಜ್‌ ಒಪ್ಪಿಕೊಂಡಿರುವುದನ್ನು ತಿಳಿಸಲು ಪ್ರಧಾನಿ ಮೋದಿಯವರು ವಿವಿಧ ವ್ಯಾಯಾಮಗಳನ್ನು ಮಾಡಿ ವಿಡಿಯೋ ಚಿತ್ರೀಕರಿಸಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಆಧರಿಸಿ ಟ್ವಿಟರ್‌ನಲ್ಲಿ ತರಹೇವಾರಿ ವ್ಯಂಗ್ಯ, ಹಾಸ್ಯ ಮತ್ತು ಟೀಕೆಯ ಚರ್ಚೆಗಳು ನಡೆಯುತ್ತಲೇ ಇವೆ

ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಲ ವಾರಗಳ ಹಿಂದೆ ಭಾರತೀಯ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಫಿಟ್ನೆಸ್ ಚಾಲೆಂಜ್ ಹಾಕಿದ್ದರು. ಇದಕ್ಕೂ ಮೊದಲು, ಈ ಫಿಟ್ನೆಸ್ ಚಾಲೆಂಜ್ ಆಟವನ್ನು ಆರಂಭಿಸಿದ್ದು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋಡ್. ಅವರು ಮೊದಲಿಗೆ ಚಾಲೆಂಜ್ ಅನ್ನು ಟ್ವಿಟರ್‌ನಲ್ಲಿ ಹರಿಯಬಿಟ್ಟಿದ್ದರು. ವಿರಾಟ್ ಕೊಹ್ಲಿಗೆ ಚಾಲೆಂಜ್ ಹಾಕಿದ್ದು ಇದೇ ರಾಥೋಡ್. ನಂತರ ವಿರಾಟ್ ಅವರು ಪ್ರಧಾನಿ ಮೋದಿಗೆ ಚಾಲೆಂಜ್ ಮಾಡಿದರು.

ನಂತರ ಪ್ರಧಾನಿಯವರು ಈ ಆಟದಲ್ಲಿ ಭಾಗವಹಿಸಿ ಕರ್ನಾಟಕದ ಸಿಎಂ ಕುಮಾರಸ್ವಾಮಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದರು. ಮುಖ್ಯಮಂತ್ರಿಯವರು ಇತ್ತೀಚೆಗಷ್ಟೇ ಹೃದಯಶಸ್ತ್ರಚಿಕಿತ್ಸೆಗೆ ಒಳಗಾಗಿ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಚಾಲೆಂಜ್ ಕಂಡ ತಕ್ಷಣ ಮರುಟ್ವೀಟ್ ಹಾಕಿಯೇಬಿಟ್ಟರು; “ನನಗೆ ರಾಜ್ಯದ ಫಿಟ್ನೆಸ್ ಮುಖ್ಯ, ನಿಮ್ಮ ಸಹಕಾರವಿರಲಿ,” ಎನ್ನುವುದು ಕುಮಾರಸ್ವಾಮಿ ಅವರ ಟ್ವೀಟ್ ಸಾರಾಂಶ. ಒಟ್ಟಾರೆ, ಈ ಫಿಟ್ನೆಸ್ ಚಾಲೆಂಜ್ ಆರಂಭವಾದಂದಿನಿಂದಲೇ ಟ್ವಿಟರ್ ಲೋಕದಲ್ಲಿ ಹಲವು ಆಯಾಮಗಳಲ್ಲಿ ಚರ್ಚೆಗಳಾಗಿವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯಾದಿಯಾಗಿ ವಿರೋಧ ಪಕ್ಷಗಳ ಮುಖಂಡರು ಪ್ರಧಾನಿ ಮತ್ತು ಬಿಜೆಪಿಗೆ ಇಂತಹ ಫಿಟ್ನೆಸ್ ಚಾಲೆಂಜ್ ಆಟಗಳಲ್ಲಿ ಕಾಲ ಕಳೆಯುವ ಬದಲಾಗಿ ದೇಶದ ಆರೋಗ್ಯದ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದ್ದರು. ಹಾಗಿದ್ದರೂ ಈಗ ಪ್ರಧಾನಿ ನರೇಂದ್ರ ಮೋದಿಯವರು ವಿರಾಟ್ ಕೊಹ್ಲಿಯವರ ಚಾಲೆಂಜ್‌ಗೆ ಉತ್ತರ ನೀಡಿದ್ದಾರೆ. ಕೆಲವು ವಿಶಿಷ್ಟ ವ್ಯಾಯಾಮಗಳನ್ನು ಮಾಡಿ ವಿಡಿಯೋ ಚಿತ್ರೀಕರಿಸಿ ಟ್ವೀಟ್ ಮಾಡಿದ್ದಾರೆ. ಈ ವ್ಯಾಯಾಮ ಈಗ ಟ್ವಿಟರ್‌ನಲ್ಲಿ ತಮಾಷೆಯ ವಸ್ತುವಾಗಿದೆ.

ಮೆಮೆಗಳು ಮತ್ತು ಜೋಕ್‌ಗಳನ್ನು ತಯಾರಿಸುವವರಿಗೆ ಇದೊಂದು ಉತ್ತಮ ಅವಕಾಶವಾಗಿ ಪರಿಣಮಿಸಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ಆಸನಗಳು ಮತ್ತು ವ್ಯಾಯಾಮಗಳು ವಿವಿಧ ರೀತಿಯ ಫೋಟೋಶಾಪ್ ಮೆಮೆಗಳಿಗೆ ಕಾರಣವಾಗಿದೆ. ಟ್ವಿಟರ್ ಕೂಡ ‘ವಾರದ ಮೆಮೆ’ (ಅಸಲಿ ಚಿತ್ರ/ವಿಡಿಯೋವನ್ನು ವಿವಿಧ ರೀತಿಯ ತಮಾಷೆಯ ನಕಲಿಗಳಾಗಿ ಮರುಸೃಷ್ಟಿಸುವುದು) ಎಂದು ಈ ಸೃಜನಶೀಲತೆಯನ್ನು ಕೊಂಡಾಡಿದೆ. ಬಹಳಷ್ಟು ಮೆಮೆಗಳು ಅನಾಮಧೇಯ ಹ್ಯಾಂಡಲ್‌ಗಳ ಮೂಲಕ ಪ್ರಸಾರವಾಗುತ್ತಿವೆ. ವಾಟ್ಸಾಪ್ ಮತ್ತು ಫೇಸ್ಬುಕ್‌ಗಳಿಂದಲೂ ಟ್ವಿಟರ್‌ಗೆ ಹಲವು ಫೋಟೋಶಾಪ್ ಸೃಜನಶೀಲತೆ ಹರಿದುಬರಲು ಪ್ರಧಾನಿಯವರ ಫಿಟ್ನೆಸ್ ವಿಡಿಯೋ ಪ್ರೇರಣೆಯಾಗಿದೆ.

ಇದನ್ನೂ ಓದಿ : ಸಿಎಂ ಎಚ್‌ಡಿಕೆಗೆ ಫಿಟ್‌ನೆಸ್‌ ಸವಾಲು ಎಸೆದ ಪ್ರಧಾನಿ ಮೋದಿ ನಡೆ ಅಮಾನವೀಯವೆ?

ಕೆಲವರು ಪ್ರಧಾನಿ ನರೇಂದ್ರ ಮೋದಿಯವರು ಈ ಫಿಟ್ನೆಸ್ ಚಾಲೆಂಜ್ ಅನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಮತ್ತು ತಮ್ಮ ಪ್ರಚಾರ ತಂತ್ರದ ಭಾಗವಾಗಿ ಬಳಸಿಕೊಂಡಿದ್ದಾರೆ ಎನ್ನುವುದನ್ನೂ ಟ್ವಿಟರ್‌ನಲ್ಲಿ ಬೆಟ್ಟು ಮಾಡಿದ್ದಾರೆ. ಭಕ್ತ್ ಟಾಕ್ ಎನ್ನುವ ಟ್ವಿಟರ್ ಹ್ಯಾಂಡಲ್ ನರೇಂದ್ರ ಮೋದಿಯವರು ಒಂದು ಬಾರಿಯಲ್ಲ, ಹಲವು ರಿಟೇಕ್‌ಗಳನ್ನು ತೆಗೆದುಕೊಂಡು ಈ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಸಾಕ್ಷ್ಯವನ್ನು ತೋರಿಸಿದ್ದಾರೆ. ಟಿಆರ್‌ಪಿಗಾಗಿ ಪ್ರಧಾನಿ ಯಾವ ಮಟ್ಟಿಗೂ ಹೋಗಬಹುದು ಎಂದು ಆ ಹ್ಯಾಂಡಲ್ ಹೇಳಿದೆ. ಕಾಂಗ್ರೆಸ್ ಪರ ಟ್ವೀಟ್ ಮಾಡುವ ಗೌರವ ಪಾಂಡಿ ಅವರು, ಪ್ರಧಾನಿಯವರು ವೃತ್ತಿಪರ ಕ್ಯಾಮೆರಾಗಳನ್ನು ಬಳಸಿದ್ದಾರೆ ಎಂದು ಗುರುತಿಸಿದ್ದಾರೆ. “ಸಿನಿಮಾ ತಾರೆಯರು, ಸಚಿವರು ಮತ್ತು ಎಲ್ಲರೂ ವೃತ್ತಿಪರವಲ್ಲದ ಮೊಬೈಲ್‌ನಲ್ಲಿ ಶೂಟ್ ಮಾಡಿದ ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವ್ಯಾಯಾಮವನ್ನು ತೋರಿಸಲು ವೃತ್ತಿಪರ ಕ್ಯಾಮೆರಾಮ್ಯಾನ್‌ಗಳ ದಂಡನ್ನೇ ಕರೆದಿದ್ದಾರೆ. ವೃತ್ತಿಪರವಾಗಿ ವಿಡಿಯೋ ಶೂಟ್ ಮಾಡಿಸಿದ್ದಾರೆ. ಹೀಗಿರುವಾಗ, ಅವರು ಪ್ರಚಾರದ ಬಿಲ್‌ಗಳು ೪೩ ಶತಕೋಟಿ ರು. ತಲುಪುವುದು ಹೇಗೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಎಲ್ಲವೂ ತೆರಿಗೆದಾರರ ಹಣ. ನಮ್ಮ ದೇಶದ ಪ್ರಧಾನಿ ಕ್ಯಾಮೆರಾಗಾಗಿ, ಕ್ಯಾಮೆರಾದಿಂದ, ಕ್ಯಾಮೆರಾಗೋಸ್ಕರ ಇರುವವರು,” ಎಂದು ಗೌರವ್ ಟ್ವೀಟ್ ಮಾಡಿದ್ದಾರೆ. ಕೆಲವರು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಉದ್ಯಾನವನವನ್ನು ಹೇಗೆ ವಿಶಿಷ್ಟವಾಗಿ ನವೀಕರಿಸಿಕೊಂಡಿದ್ದಾರೆ ಎನ್ನುವುದನ್ನೂ ಗುರುತಿಸಿದ್ದಾರೆ.

ನರೇಂದ್ರ ಮೋದಿಯವರು ಬಂಡೆಗೆ ಬೆನ್ನು ಮಾಡಿ ಮಲಗಿದ ರೂಪದಲ್ಲಿ ನೀಡಿರುವ ಆಸನವನ್ನು ಉದ್ದೇಶಿಸಿ ಕೆಲವರು ಕಟುವಾಗಿ ಟೀಕಿಸಿದ್ದಾರೆ. ದೇಶದ ಅರ್ಥವ್ಯವಸ್ಥೆಯೂ ಹೀಗೆಯೇ ಬಾಗಿದೆ ಎಂದು ವಿಶ್ಲೇಷಿಸಿದ್ದಾರೆ. “ನೋಟು ಅಮಾನ್ಯೀಕರಣ ಮತ್ತು ಗಬ್ಬರ್ ಸಿಂಗ್ ಟ್ಯಾಕ್ಸ್‌ನಂತಹ ಜಿಎಸ್‌ಟಿ ತೆರಿಗೆ ಕಾರ್ಯಕ್ರಮಗಳನ್ನು ಭಾರತದ ಮೇಲೆ ಹೇರಿ ಅರ್ಥವ್ಯವಸ್ಥೆಯನ್ನು ತೆವಳುವಂತೆ ಮಾಡಿದ ಪ್ರಧಾನಿ ಈಗ ಫಿಟ್ನೆಸ್ ಚಾಲೆಂಜ್‌ನಲ್ಲಿ ಭಾಗವಹಿಸಿ ಎಲ್ಲದಕ್ಕೂ ಕ್ಷಮೆ ಯಾಚಿಸುತ್ತಿದ್ದಾರೆ. ಆದರೆ, ತೈಲ ಬೆಲೆ ಏಕೆ ಏರಿದೆ ಮತ್ತು ರುಪಾಯಿ ಮೌಲ್ಯ ಏಕೆ ಇಳಿಯುತ್ತಲೇ ಇದೆ ಮತ್ತು ಬಿಜೆಪಿ ಭರವಸೆ ನೀಡಿದ ೨ ಕೋಟಿ ಉದ್ಯೋಗಗಳು ಎಲ್ಲಿ ಎಂದು ದೇಶದ ಜನ ತಿಳಿಯಲು ಬಯಸಿದ್ದಾರೆ,” ಎಂದು ಸಾಂಸ್ಕೃತಿಕ ಕಾರ್ಯಕರ್ತ ಸುಮನ್ ಸೇನ್‌ ಗುಪ್ತಾ ಅವರು ಟ್ವೀಟ್ ಮಾಡಿದ್ದಾರೆ. ಕೆಲವರು, ನರೇಂದ್ರ ಮೋದಿಯವರು ಹೀಗೆ ಬಾಗಿದ ಭಂಗಿಯಲ್ಲಿ ಇನ್ನಷ್ಟು ಹೊತ್ತು ಇದ್ದರೆ ತನ್ನಷ್ಟಕ್ಕೇ ದೇಶದಲ್ಲಿ ಅಚ್ಛೇ ದಿನ್ ಬರಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಬಹಳಷ್ಟು ಮಂದಿ ಬಿಜೆಪಿ ದೇಶಕ್ಕೆ ನೀಡಿದ ಎರಡು ಲಕ್ಷ ಉದ್ಯೋಗಗಳ ಭರವಸೆಯ ಸವಾಲನ್ನು ಪ್ರಧಾನಿ ನರೇಂದ್ರ ಮೋದಿ ಯಾವಾಗ ಈಡೇರಿಸಲಿದ್ದಾರೆ ಎಂದು ತಿಳಿಯಲು ಬಯಸಿದ್ದಾರೆ. “೨೦೧೪ರಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಯಾವಾಗ ಈಡೇರಿಸಲಿದ್ದಾರೆ ಎಂದು ಯಾರೂ ಸವಾಲು ಹಾಕಿಲ್ಲವೇ?” ಎಂದು ರುಚಿರಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More