ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಹಾಕಲು ಶಿಕ್ಷಣ ಸಚಿವ ಮಹೇಶ್‌ ಸೂಚನೆ

ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಮಹೇಶ್‌ ಅವರ ಕಚೇರಿಯಲ್ಲಿ ಗಾಂಧೀಜಿ ಭಾವಚಿತ್ರ ಇರಲಿಲ್ಲವೆಂಬ ಸಂಗತಿಯನ್ನು ‘ದಿ ಸ್ಟೇಟ್‌’ ಹೊರಗೆಡವಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಚಿವಾಲಯ ಪ್ರತಿಕ್ರಿಯಿಸಿದ್ದು, ಗಾಂಧಿ ಭಾವಚಿತ್ರ ಹಾಕಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದೆ

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವರ ಕಚೇರಿಯಲ್ಲಿ ಗಾಂಧೀಜಿಯ ಭಾವಚಿತ್ರ ಅಳವಡಿಸಲು ಸಚಿವ ಎನ್ ಮಹೇಶ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ. ವಿಕಾಸಸೌಧದ ನೆಲಮಹಡಿಯಲ್ಲಿ ಹಂಚಿಕೆಯಾಗಿದ್ದ ಕಚೇರಿಯಲ್ಲಿ ಗಾಂಧೀಜಿ ಹೊರತುಪಡಿಸಿ ಬುದ್ಧ, ಬಸವ, ರಾಷ್ಟ್ರಪತಿ ರಾಮನಾಥ್ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳು ಮಾತ್ರ ಇದ್ದವು. ಗಾಂಧೀಜಿಯ ಭಾವಚಿತ್ರ ಇಲ್ಲದಿದ್ದನ್ನು ‘ದಿ ಸ್ಟೇಟ್‌’ ಹೊರಗೆಡವಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಅನೇಕ ಚರ್ಚೆಗಳಿಗೆ ಕಾರಣವಾಗಿತ್ತು.

ಈ ಕುರಿತು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ಸಚಿವ ಮಹೇಶ್‌ ಅವರೊಂದಿಗೆ ಚರ್ಚಿಸಿದ್ದಾರೆ. “ಕೊಠಡಿ ನವೀಕರಣ ಕಾರ್ಯ ನಡೆಯುತ್ತಿದ್ದರಿಂದ ಗಾಂಧೀಜಿಯ ಭಾವಚಿತ್ರವನ್ನು ಹಾಕಿರಲಿಲ್ಲ. ಸರ್ಕಾರದ ಸುತ್ತೋಲೆ ಪ್ರಕಾರ ಗಾಂಧೀಜಿಯ ಭಾವಚಿತ್ರವನ್ನು ಸೂಕ್ತ ಜಾಗದಲ್ಲಿ ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ,” ಎಂದು ಮುಖ್ಯಮಂತ್ರಿಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

೧೯೭೭ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ (ಡಿಪಿಎಆರ್ ೯ ಡಿಎಫ್‌ಇ ೭೭, ದಿನಾಂಕ: ೩೧ ಅಕ್ಟೋಬರ್‌ ೧೯೭೭), ಎಲ್ಲ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ ಅತಿಥಿಗೃಹಗಳಲ್ಲಿ ಭಾರತದ ರಾಷ್ಟ್ರಪತಿ ಮತ್ತು ಮಹಾತ್ಮ ಗಾಂಧಿ ಭಾವಚಿತ್ರವನ್ನು ಕಡ್ಡಾಯ ಪ್ರದರ್ಶಿಸಬೇಕಿತ್ತು. ಈ ಪಟ್ಟಿಗೆ ನಂತರದ ವರ್ಷಗಳಲ್ಲಿ ಇನ್ನೊಂದಿಷ್ಟು ಮಹನೀಯರ ಚಿತ್ರಗಳ ಸೇರ್ಪಡೆ ಕೂಡ ಆಗಿತ್ತು. ಅದರಂತೆ, ವಿಕಾಸಸೌಧದ ಬಹುತೇಕ ಸಚಿವಾಲಯ ಮತ್ತು ಮಂತ್ರಿಗಳ ಕಚೇರಿಗಳಲ್ಲಿ ಗಾಂಧೀಜಿ ಫೋಟೋ ಕಡ್ಡಾಯವಾಗಿ ಪ್ರದರ್ಶಿಸಲಾಗಿದೆ. ಆದರೆ, ಶಿಕ್ಷಣ ಸಚಿವರ ಕಚೇರಿಯಲ್ಲಿ ಗಾಂಧಿ ಚಿತ್ರಕ್ಕೆ ಜಾಗ ಸಿಕ್ಕಿರಲಿಲ್ಲ.

ದಲಿತರ ಮೇಲಿನ ಬಹುತೇಕ ದೌರ್ಜನ್ಯಗಳಿಗೆ ಕ್ಷುಲ್ಲಕ ಕಾರಣಗಳೇ ನೆಪ!
ವಿದೇಶಗಳಲ್ಲಿ ಮಿಂಚಿದರೆ ದೇಶದ ಜನಸಾಮಾನ್ಯರ ಅಸಮಾಧಾನ ತಗ್ಗುವುದೇ? | ಭಾಗ 2
ರೈತರು ನೆಮ್ಮದಿಯಿಂದ ಇರಬೇಕಾದರೆ ಸಂಸತ್‌ನಲ್ಲಿ ಈ 7 ವಿಷಯ ಚರ್ಚೆಯಾಗಲಿ
Editor’s Pick More