ಇನ್ಫಿ ಲಿಸ್ಟಾಗಿ 25 ವರ್ಷ; ಆಗ ₹100 ಹೂಡಿಕೆ ಮೌಲ್ಯ ಈಗ ₹6,80,000!

ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವಕ್ಕೆ ಮಾದರಿಯಾದ ಮತ್ತು ಜಗತ್ತಿಗೆ ಭಾರತವನ್ನು ಪರಿಚಯಿಸಿದ ಇನ್ಫೊಸಿಸ್, ಬಾಂಬೆ ಷೇರುಪೇಟೆಯಲ್ಲಿ ಲಿಸ್ಟಾಗಿ 25 ವರ್ಷ ಸಂದಿದೆ. ಆಗ ಹೂಡಿಕೆ ಮಾಡಿದವರೆಲ್ಲ ಈಗ ಕೋಟ್ಯಾಧಿಪತಿಗಳು. ಇನ್ಫಿಯ ವರ್ಣರಂಜಿತ ಇತಿಹಾಸ, ಭವಿಷ್ಯದತ್ತ ಕಿರುನೋಟವಿದು

25 ವರ್ಷಗಳ ಹಿಂದೆ ಇನ್ಫೊಸಿಸ್ ಕಂಪನಿ ಷೇರು ಲಿಸ್ಟಾಯಿತು. ಇನಿಷಿಯಲ್ ಪಬ್ಲಿಕ್ ಆಫರ್ (ಐಪಿಒ) ಪ್ರತಿ ಷೇರಿಗೆ 95 ರುಪಾಯಿ ನಿಗದಿ ಮಾಡಲಾಗಿತ್ತು. ಒಂದು ವೇಳೆ ಆಗ ನೀವು ಐಪಿಒನಲ್ಲಿ ಇನ್ಫೊಸಿಸ್ ಷೇರು ಖರೀದಿ ಮಾಡಿರುತ್ತೀರಿ ಎಂದುಕೊಳ್ಳಿ. ಒಂದೇ ಒಂದು ಷೇರು ಖರೀದಿಸಿರುತ್ತೀರಿ ಎಂದುಕೊಳ್ಳಿ. ಆಗ ನಿಮ್ಮ 95 ರುಪಾಯಿ ಮೊತ್ತ ಈಗ 6,80,000 ರುಪಾಯಿಗಳಾಗಿರುತ್ತದೆ. ಒಂದು ವೇಳೆ, ನೀವು 9,500 ರುಪಾಯಿ ಹೂಡಿಕೆ ಮಾಡಿ 100 ಷೇರು ಖರೀದಿ ಮಾಡಿಟ್ಟುಕೊಂಡಿರುತ್ತೀರಿ. ಈಗ ನಿಮ್ಮ ಹೂಡಿಕೆಯು 6,80,00,000 ರುಪಾಯಿಗಳಾಗಿರುತ್ತದೆ.

25 ವರ್ಷಗಳ ಹಿಂದಿನ ನಿಮ್ಮ 10,000 ರುಪಾಯಿ ಲೆಕ್ಕಾಚಾರ ಏನೇ ಇರಲಿ. ಅದಕ್ಕೂ ಹಿಂದೆ ಅಂದರೆ, 1981ರಲ್ಲಿ ನಾರಾಯಣ ಮೂರ್ತಿ ಅವರು ತಮ್ಮ ಪತ್ನಿ ಸುಧಾ ಮೂರ್ತಿ ಅವರಿಂದ 10,000 ರುಪಾಯಿ ಪಡೆದು ಇನ್ಫೊಸಿಸ್ ಕಂಪನಿ ಪ್ರಾರಂಭಿಸುತ್ತಾರೆ. 38 ವರ್ಷಗಳ ನಂತರ ನಾರಾಯಣ ಮೂರ್ತಿ ಅವರ 10,000 ರುಪಾಯಿ ಹೂಡಿಕೆಯು ಈಗ ಎಷ್ಟು ಬೃಹತ್ತಾಗಿ ಬೆಳೆದಿದೆ ಗೊತ್ತೇ?

1981ರಲ್ಲಿ 10,000 ರುಪಾಯಿ ಪ್ರಾರಂಭಿಕ ಬಂಡವಾಳ ಹೂಡಿಕೆ ಮಾಡಿ ಸ್ಥಾಪಿಸಿದ ಇನ್ಫೊಸಿಸ್ ಇಂದಿನ ಮಾರುಕಟ್ಟೆ ಬಂಡವಾಳ ಮೌಲ್ಯವು 2,70,547.82 ಕೋಟಿ ರುಪಾಯಿಗಳಾಗಿದೆ. ಇನ್ಫೊಸಿಸ್‌ನ ಮಾರುಕಟ್ಟೆ ಬಂಡವಾಳ ಮೌಲ್ಯವು ನಮ್ಮ ರಾಜ್ಯದ ಸುಮಾರು 16 ತಿಂಗಳ ಬಜೆಟ್ ಗಾತ್ರದಷ್ಟಾಗಿದೆ.

ಇನ್ಫೊಸಿಸ್ ಕಂಪನಿಯು ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ (ಬಿಎಸ್ಇ) ಲಿಸ್ಟಾಗಿ ಈ ಹೊತ್ತಿಗೆ 25 ವರ್ಷ ತುಂಬುತ್ತಿದೆ. 1993ರ ಜೂನ್ 14ರಂದು ಇನ್ಫೊಸಿಸ್ ಲಿಸ್ಟಾದಾಗ ದೇಶದ ಆರ್ಥಿಕ ಪರಿಸ್ಥಿ ಪೂರಕವಾಗಿರಲಿಲ್ಲ. ಮುಂಬಯಿ ಬಾಂಬ್ ಸ್ಟೋಟದಿಂದಾಗಿ ಷೇರುಪೇಟೆ ತೀವ್ರ ಕುಸಿದಿತ್ತು. ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಆಗ ಹೆಚ್ಚಿರಲಿಲ್ಲ. ಇನ್ಫೋಸಿಸ್ ಐಪಿಒಗೆ ನಿರೀಕ್ಷಿತ ಬೇಡಿಕೆಯೂ ಇರಲಿಲ್ಲ. ಅಮೆರಿಕದ ಮಾರ್ಗನ್ ಸ್ಟ್ಯಾನ್ಲಿ ಶೇ.13ರಷ್ಟು ಷೇರುಗಳನ್ನು ಖರೀದಿಸಿತು. ಆದರೆ, ಇನ್ಫೊಸಿಸ್ ಕಂಪನಿಗೆ ಇದ್ದ ಗುಡ್ ವಿಲ್ ನಿಂದಾಗಿ ಕಂಪನಿಯ ಷೇರು 145 ರುಪಾಯಿಗೆ ಲಿಸ್ಟಾಯಿತು. ಆರಂಭಿಕ ಹೂಡಿಕೆಯಲ್ಲೇ ಶೇ.65ರಷ್ಟು ಲಾಭ ಬಂದಿತ್ತು.

ಇನ್ಫೊಸಿಸ್ ತನ್ನ ನೌಕರರಿಗೂ ಷೇರುಗಳನ್ನು ಹಂಚಿಕೆ ಮಾಡಿತು. ಹೂಡಿಕೆದಾರರಿಗೆ ಸತತ ಬೋನಸ್, ಲಾಭಾಂಶಗಳ ಮೂಲಕ ನೂರಾರು ಕೋಟ್ಯಾಧಿಪತಿಗಳನ್ನು ಸೃಷ್ಟಿಸಿತು. ವಾರ್ಷಿಕ ಶೇ.40ರಷ್ಟು ಲಾಭಾಂಶ ತಂದುಕೊಟ್ಟಿರುವ ಏಕೈಕ ಸಂಸ್ಥೆ ಇನ್ಫೊಸಿಸ್.

ನಾರಾಯಣ ಮೂರ್ತಿ ಅವರು ತಮ್ಮ ಪತ್ನಿ ಸುಧಾ ಮೂರ್ತಿ ಅವರಿಂದ ಪಡೆದ 10,000 ರುಪಾಯಿಯಲ್ಲಿ ಪುಣೆಯ ಒಂದೇ ಕೊಠಡಿಯ ಕಚೇರಿಯೊಂದಿಗೆ ಇನ್ಫೊಸಿಸ್ ಕಂಪನಿ ಪ್ರಾರಂಭಿಸಿದರು. ನಂದನ್ ನಿಲೇಕಣಿ, ಎಸ್ ಗೋಪಾಲಕೃಷ್ಣನ್, ಶಿಬುಲಾಲ್, ಕೆ. ದಿನೇಶ್, ಮೋಹನ್ ದಾಸ್ ಪೈ ಹಾಗೂ ಶ್ರೀನಾಥ್ ಬಟ್ನಿ ನಾರಾಯಣ ಮೂರ್ತಿ ಅವರ ತಂಡ ಸೇರಿಕೊಂಡರು.

ಏಳು ಜನರ ತಂಡದ ಸತತ ಪರಿಶ್ರಮ, ತಾಂತ್ರಿಕ ಪರಿಣತಿ, ಭವಿಷ್ಯದ ಗುರಿ ಜೊತೆಗೆ ಒಗ್ಗಟ್ಟು ಇನ್ಫೊಸಿಸ್ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗಲು ನೆರವಾಯಿತು. ಇನ್ಫೊಸಿಸ್ ಹಲವು ಪ್ರಥಮಗಳನ್ನು ದಾಖಲಿಸಿದ ಐಟಿ ಕಂಪನಿ. ಭಾರತದ ಪ್ರಥಮ ಮಾಹಿತಿ ತಂತ್ರಜ್ಞಾನ ಸೇವೆ ಆರಂಭಿಸಿದ ಕಂಪನಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸಿದ ಮೊದಲ ಕಂಪನಿ. ಕಾರ್ಪೊರೆಟ್ ಆಡಳಿತವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ, ವಹಿವಾಟನ್ನು ಪೂರ್ಣ ಪಾರದರ್ಶಕವಾಗಿಟ್ಟ, ಕಂಪನಿಯ ಭವಿಷ್ಯದ ವಹಿವಾಟುಗಳ ಮಾರ್ಗಸೂಚಿಯನ್ನು ಮುಂಚಿತವಾಗಿಯೇ ತಿಳಿಸುವುದನ್ನು ಪ್ರಾರಂಭಿಸಿದ ಮೊದಲ ಕಂಪನಿ. 1999ರಲ್ಲಿ ಅಮೆರಿಕ ಷೇರು ವಿನಿಯಮ ಕೇಂದ್ರ ನಾಸ್ಡಾಕ್‌ನಲ್ಲಿ ಲಿಸ್ಟಾಯಿತು. ಅಲ್ಲಿ ಲಿಸ್ಟಾದ ಮೊದಲ ಕಂಪನಿ ಇನ್ಪೊಸಿಸ್.

ಇನ್ಫಿ ಆರಂಭಿಕ ದಿನಗಳು ಅಷ್ಟು ಸಲೀಸಾಗಿರಲಿಲ್ಲ. ಒಂದು ಕಂಪ್ಯೂಟರ್ ಖರೀದಿಸಲು 2 ವರ್ಷ ಹರಸಾಹಸ ಪಡಬೇಕಾಯಿತು. ನಾರಾಯಣ ಮೂರ್ತಿ ಅವರ ಪ್ರಕಾರ, ಕಂಪ್ಯೂಟರ್ ತರಿಸಿಕೊಳ್ಳಲು ಅವರು ಹತ್ತಾರು ಬಾರಿ ದೆಹಲಿಗೆ ಪ್ರಯಾಣ ಮಾಡಬೇಕಾಯಿತು. ವಿದೇಶಕ್ಕೆ ಹೋಗಲು ಅನುಮತಿ ಪಡೆಯುವುದು ಕಷ್ಟವಾಗಿತ್ತು. ಪಿ ವಿ ನರಸಿಂಹರಾವ್ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಜಾರಿಗೆ ತಂದ ಆರ್ಥಿಕ ಉದಾರ ನೀತಿಯು ಆ ವೇಳೆಗೆ ವರದಾನವಾಯಿತು.

1999ರಲ್ಲಿ 100 ಮಿಲಿಯನ್ ಆದಾಯ ಗಳಿಸಿದ ಇನ್ಫಿ, 2002ರಲ್ಲೇ 500 ಮಿಲಿಯನ್ ಡಾಲರ್ ಆದಾಯ ಗಳಿಸಿತು. ಅಲ್ಲಿಯವರೆಗೂ ಸಿಇಒ ಆಗಿದ್ದ ನಾರಾಯಣ ಮೂರ್ತಿ ಅವರು, ನಂದನ್ ನಿಲೇಕಣಿ ಅವರಿಗೆ ಸಿಇಒ ಜವಾಬ್ದಾರಿ ವಹಿಸಿದರು. ತಾವು ಮಹಾಪೋಷಕನ ಗೌರವ ಹುದ್ದೆಯಲ್ಲಿ ಮುಂದುವರಿದರು. 2004ರಲ್ಲಿ 1 ಬಿಲಿಯನ್ ಡಾಲರ್ ವಹಿವಾಟು ದಾಖಲಿಸಿತು. 1981ರಲ್ಲಿ 7 ಜನರೊಂದಿಗೆ ಆರಂಭವಾಗಿದ್ದ ಇನ್ಫೊಸಿಸ್ 2006ರಲ್ಲಿ ಇಪ್ಪತ್ತೈದು ವರ್ಷ ಪೂರೈಸಿದ್ದಾಗ ಉದ್ಯೋಗಿಗಳ ಸಂಖ್ಯೆ 50,000ಕ್ಕೇರಿತ್ತು. ಅದೇ ವರ್ಷ ವಹಿವಾಟು 2 ಬಿಲಿಯನ್ ದಾಟಿತ್ತು. ಮೂರ್ತಿ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಂಪನಿಯಿಂದ ಪೂರ್ಣಪ್ರಮಾಣದಲ್ಲಿ ನಿವೃತ್ತರಾದರು.

2007ರಲ್ಲಿ ಎಸ್ ಗೋಪಾಲಕೃಷ್ಣ ಸಿಇಒ ಹುದ್ದೆ ಅಲಂಕರಿಸಿದರು. 2008ರಲ್ಲಿ ವಹಿವಾಟು 4 ಬಿಲಿಯನ್ ದಾಟಿತು. 2008ರ ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಕಂಪನಿಯ ವಹಿವಾಟಿಗೂ ಹಿನ್ನಡೆಯಾಯಿತು. ಗೋಪಾಲಕೃಷ್ಣ ನಂತರ ಶಿಬುಲಾಲ್ ಸಿಇಒ ಹುದ್ದೆ ಅಲಂಕರಿಸಿದರು. ಕಂಪನಿ ನಿರೀಕ್ಷಿತ ಮಟ್ಟದಲ್ಲಿ ವಹಿವಾಟು ನಡೆಸಲಿಲ್ಲ. ಈ ನಡುವೆ ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸಲು ಪೈಪೋಟಿ ಹೆಚ್ಚಿತು. ಟಿಸಿಎಸ್ ಇನ್ಫೊಸಿಸ್ ಮೀರಿ ಬೆಳಯಲಾರಂಭಿಸಿತು. 2013ರಲ್ಲಿ ನಾರಾಯಣ ಮೂರ್ತಿ ಅವರು ಅಲ್ಪಕಾಲದ ಮಟ್ಟಿಗೆ ಮತ್ತೆ ಇನ್ಫಿ ಆಡಳಿತ ಮಂಡಳಿಗೆ ಮರಳಿದರು. ಮೊದಲ ಬಾರಿಗೆ ಕಂಪನಿಯ ಹೊರಗಿನ ವ್ಯಕ್ತಿಯೊಬ್ಬರನ್ನು ಸಿಇಒ ಆಗಿ ನೇಮಕ ಮಾಡಿತು. ನಾರಾಯಣ ಮೂರ್ತಿ ಅವರು ಆಯ್ಕೆ ಮಾಡಿದ ವಿಶಾಲ್ ಸಿಖ್ಖಾ ಚುಕ್ಕಾಣಿ ಹಿಡಿದರು. ನಾರಾಯಣ ಮೂರ್ತಿ ಕಂಪನಿಯಿಂದ ದೂರ ಸರಿದರು.

ವಿಶಾಲ್ ಸಿಖ್ಖಾ ಇನ್ಫಿ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದರು. ಆದರೆ, ಪನಾಯ ಕಂಪನಿ ಖರೀದಿಯಲ್ಲಿ ಕಾರ್ಪೊರೆಟ್ ಆಡಳಿತದ ಶಿಷ್ಟಾಚಾರ ಪಾಲಿಸಿಲ್ಲ ಮತ್ತು ಹಿತಾಸಕ್ತಿ ಸಂಘರ್ಷ ಇತ್ತು ಎಂಬ ಕಾರಣಕ್ಕೆ ನಾರಾಯಣ ಮೂರ್ತಿ ಅವರೇ ತನಿಖೆಗೆ ಆಗ್ರಹಿಸಿದರು. ನಂತರದ ಬೆಳವಣಿಗೆ ಇನ್ಫೋಸಿಸ್ ಕಂಪನಿ ಪಾಲಿಗೆ ಸಂಕಷ್ಟದ ಕಾಲ. ವಿಶಾಲ್ ಸಿಖ್ಖಾ ಅವರನ್ನು ಸಿಇಒ ಹುದ್ದೆಯಿಂದ ತೆಗೆಯಲಾಯಿತು. ನಂದನ್ ನಿಲೇಕಣಿ ಮರಳಿದರು. 2018ರ ಆರಂಭದಲ್ಲಿ ಸಲೀಲ್ ಪರೇಖ್ ಸಿಇಒ ಹುದ್ದೆ ಅಲಂಕರಿಸಿದರು. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಇನ್ಫೊಸಿಸ್ ಹೂಡಿಕೆದಾರರಿಗೆ ಲಾಭ ತಂದುಕೊಡುತ್ತಲೇ ಇದೆ.

ಇದನ್ನೂ ಓದಿ : ಇನ್ಫೋಸಿಸ್ ನೂತನ ಸಾರಥಿಗೆ ನಾರಾಯಣ ಮೂರ್ತಿಯವರೇ ದೊಡ್ಡ ಸವಾಲು?

ಈಗಲೂ ಸುರಕ್ಷಿತ ಹೂಡಿಕೆ ಎಂದರೆ ಇನ್ಫೊಸಿಸ್ ಷೇರು ಖರೀದಿಸುವುದಾಗಿದೆ. ಸಾಂಸ್ಥಿಕ ಹೂಡಿಕೆದಾರರು, ಮ್ಯೂಚುವಲ್ ಫಂಡ್ ಹೌಸ್‌ಗಳು, ವಿದೇಶಿ ಹೂಡಿಕೆದಾರರು ಇನ್ಫೋಸಿಸ್ ಮೇಲೆ ಹೂಡಿಕೆ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ.

ಮಾಹಿತಿ ತಂತ್ರಜ್ಞಾನವು ನಮ್ಮ ಬದುಕನ್ನು ಆವರಿಸಿಕೊಂಡಂತೆ ಇನ್ಫೊಸಿಸ್ ಹೊಸ ಹೊಸ ಆವಿಷ್ಕಾರಗಳೊಂದಿಗೆ ತನ್ನ ಸೇವಾವ್ಯಾಪ್ತಿ ವಿಸ್ತರಿಸುತ್ತಲೇ ಇದೆ. ಇನ್ಫೊಸಿಸ್ ಎರಡೂವರೆ ದಶಕಗಳ ಕಂಪನಿ ಹೇಗೋ ಹಾಗೆಯೇ ಮುಂದಿನ ಎರಡೂವರೆ ದಶಕಗಳ ಕಂಪನಿಯೂ ಹೌದು. ಕಂಪನಿಯಲ್ಲೀಗ 2 ಲಕ್ಷ ಉದ್ಯೋಗಿಗಳಿದ್ದಾರೆ. ಮಾರುಕಟ್ಟೆ ಬಂಡವಾಳ 40 ಬಿಲಿಯನ್ ಡಾಲರ್‌ಗೆ ಏರಿದೆ. 100 ಬಿಲಿಯನ್ ಡಾಲರ್ ಕಂಪನಿಯಾಗುವ ನಿಟ್ಟಿನಲ್ಲಿ ಇನ್ಫೊಸಿಸ್ ದಿಟ್ಟ ಹೆಜ್ಜೆ ಇಡುತ್ತಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಇನ್ಫಿ ಬೃಹತ್ತಾಗಿ ಬೆಳೆದಿದೆ, ಮತ್ತಷ್ಟು ಬೃಹತ್ತಾಗಿ ಬೆಳೆಯಲಿದೆ. ಆ ಕಾರಣಕ್ಕಾಗಿಯೇ ಇನ್ಫೊಸಿಸ್ ಹೂಡಿಕೆದಾರರ ಪಾಲಿಗೆ ಕಾಮಧೇನು ಎನಿಸಿಕೊಂಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More