ಸಮ್ಮಿಶ್ರ ಸರ್ಕಾರ ಸುಭದ್ರಗೊಳಿಸಲು ಮೂರು ಸೂತ್ರ ಹೊಸೆದ ಸಮನ್ವಯ ಸಮಿತಿ

ಜೆಡಿಎಸ್‌-ಸಮ್ಮಿಶ್ರ ಸರ್ಕಾರವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಕ್ಕೆ ಹಾದಿ ತೋರುವ, ಅತೃಪ್ತರನ್ನು ತಣಿಸುವ ತಂತ್ರಗಳು ಈ ನಿರ್ಧಾರಗಳ ಹಿಂದೆ ಅಡಗಿದಂತಿದೆ

ಕಾಂಗ್ರೆಸ್‌-ಜೆಡಿಎಸ್ ಒಳಗೊಂಡ ಸಮ್ಮಿಶ್ರ‌ ಸರ್ಕಾರ ಮಾಡುವ ಘೋಷಣೆ ಹೊರಬಿದ್ದ ಒಂದು ತಿಂಗಳ ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿಯ ಮೊದಲ ಸಭೆ ಕುಮಾರಕೃಪಾ ಅತಿಥಿಗೃಹದಲ್ಲಿ ಗುರುವಾರ ನಡೆದಿದೆ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ ಪರಮೇಶ್ವರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌, ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ನಡೆದಿರುವ ಚಟುವಟಿಕೆಗಳು, ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಹೇಳಿರುವ ಸಾಲಮನ್ನಾ ಪ್ರಸ್ತಾವದ ಬಗ್ಗೆಯೂ ಚರ್ಚೆಯಾಗಿದೆ. "ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಚಟುವಟಿಕೆಗಳಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ತಕ್ಷಣ ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ,” ಎಂದು ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

"ಸುಮಾರು ಒಂದೂವರೆ ತಾಸು ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ,” ಎಂದು ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. "ಉಭಯ ಪಕ್ಷಗಳ ಪ್ರಣಾಳಿಕೆ ಅನುಷ್ಠಾನಕ್ಕೆ ಸಮಿತಿ ರಚಿಸಲಾಗುತ್ತದೆ. ಸಮಿತಿಯಲ್ಲಿ ಕಾಂಗ್ರೆಸ್‌ನ ಮೂವರು‌ ಹಾಗೂ ಜೆಡಿಎಸ್‌ನ ಇಬ್ಬರು ಸದಸ್ಯರು ಇರಲಿದ್ದಾರೆ. ಈ ಸಮಿತಿಯು ೧೦ ದಿನಗಳಲ್ಲಿ ಕರಡು ಸಿದ್ಧಪಡಿಸಿ ಸಮನ್ವಯ ಸಮಿತಿ ಮುಂದೆ ಮಂಡಸಲಿದೆ. ಪ್ರಣಾಳಿಕೆ ಅನುಷ್ಠಾನ ಸಮಿತಿಯಲ್ಲಿರುವ ಸದಸ್ಯರ ಹೆಸರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಇದಕ್ಕೆ ಅಧ್ಯಕ್ಷರು ಇರುವುದಿಲ್ಲ. ಎರಡನೆಯದಾಗಿ, ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಎಲ್ಲ ಜನಪ್ರಿಯ ಯೋಜನೆಗಳು ಮುಂದುವರಿಯಲಿದ್ದು, ಏಪ್ರಿಲ್‌ನಲ್ಲಿ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಜಾರಿಗೆ ಬರಲಿವೆ. ಮೂರನೆಯದಾಗಿ, ಒಂದು ವಾರದೊಳಗೆ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷ ಮತ್ತು ನಿರ್ದೇಶಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ೩೦ ಶಾಸಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜೆಡಿಎಸ್‌ ರೈತರ ೫೩ ಸಾವಿರ ಕೋಟಿ ಸಾಲಮನ್ನಾ, ರಾಜ್ಯದ ನೀರಾವರಿ ಯೋಜನೆಗಳಿಗೆ ಐದು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರುಪಾಯಿ ಬಿಡುಗಡೆ, ಸರ್ಕಾರದ ಯಾವುದೇ ಕಾರ್ಯಕ್ರಮ ಫಲಾನುಭವಿಗಳಾಗದ, ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ೮ ಸಾವಿರ ರುಪಾಯಿ ಮಾಸಾಶನ. ೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ೬ ಸಾವಿರ ರುಪಾಯಿ ಮಾಸಾಶನ, ಕಳೆದ ೧೦ ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರುವ ಕೃಷಿಯೇತರ ಮೂಲಗಳಿಂದ ತಿಂಗಳಿಗೆ ಕನಿಷ್ಠ ಐದು ಸಾವಿರ ರುಪಾಯಿಗಳಿಗಿಂತಲೂ ಕಡಿಮೆ ಆದಾಯ ಗಳಿಸುತ್ತಿರುವ ೨೪ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕುಟುಂಬ ವೆಚ್ಚ ನಿರ್ವಹಣೆ ಮಾಡಲು ಮಾಸಿಕ ೨ ಸಾವಿರ ರುಪಾಯಿ ನೀಡುವುದು, ಇಸ್ರೇಲ್‌ ಮಾದರಿ ಕೃಷಿ ಯೋಜನೆ ಜಾರಿ ಸೇರಿದಂತೆ ಹಲವು ಯೋಜನೆಗಳನ್ನು ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಇನ್ನು, ಕಾಂಗ್ರೆಸ್‌ ನೀರಾವರಿಗೆ ೧.೨೫ ಕೋಟಿ ರುಪಾಯಿ ನೀಡುವುದು, ಒಂದು ಕೋಟಿ ಉದ್ಯೋಗ ಸೃಷ್ಟಿ, ೧೮-೨೩ ವಯೋಮಾನದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಮಾರ್ಟ್‌ಫೋನ್‌ ನೀಡುವುದು ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ. ಸಮ್ಮಿಶ್ರ ಸರ್ಕಾರ ರಚಿಸಿರುವುದರಿಂದ ಉಭಯ ಪಕ್ಷಗಳ ಪ್ರಣಾಳಿಕೆ ಜಾರಿಗೊಳಿಸುವಷ್ಟ ಹಣ ರಾಜ್ಯದ ಬೊಕ್ಕಸದಲ್ಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಕಾರ್ಯಕ್ರಮ ಅನುಷ್ಠಾನಕ್ಕೆ ಉಭಯ ಪಕ್ಷಗಳು ನಿರ್ಧರಿಸಿವೆ. ಇದರ ಭಾಗವಾಗಿ ಪ್ರಣಾಳಿಕೆ ಅನುಷ್ಠಾನ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಹಿಂದಿನ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಮುಂದುವರಿಸುವುದು ಕಾಂಗ್ರೆಸ್‌ಗೆ ಅತ್ಯಂತ ಅವಶ್ಯವಾಗಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಅವುಗಳ ಮುಂದುವರಿಕೆ ಮಾಡುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ. ಹಿಂದಿನ ಜನಪ್ರಿಯ ಕಾರ್ಯಕ್ರಮಗಳ ಮುಂದುವರಿಕೆಯ ಜೊತೆಗೆ ಸಾಲಮನ್ನಾ, ನೀರಾವರಿ ಯೋಜನೆಗಳಿಗೆ ಅಪಾರ ಪ್ರಮಾಣದ ಅನುದಾನ ಹಂಚಿಕೆ ಮಾಡುವುದು ಸವಾಲಿನ ಕೆಲಸವಾಗಲಿದೆ. ಏಪ್ರಿಲ್‌ನಲ್ಲಿ ೨.೦೯ ಸಾವಿರ ಕೋಟಿ ರುಪಾಯಿ ಬಜೆಟ್‌ ಅನ್ನು ಸಿದ್ದರಾಮಯ್ಯ ಅವರು ಮಂಡಿಸಿದ್ದರು. ಇದರ ಪ್ರಕಾರ, ಯೋಜನೇತರ ವೆಚ್ಚಗಳಿಗೆ ಬಜೆಟ್‌ ಅರ್ಧಭಾಗ ವೆಚ್ಚವಾಗಲಿದೆ. ಉಳಿದ ಹಣದಲ್ಲಿ ಸರ್ಕಾರ ನಿಭಾಯಿಸಬೇಕು. ಈಗ ಉಭಯ ಪಕ್ಷಗಳು ಭರಪೂರ ಭರವಸೆಗಳನ್ನು ನೀಡಿರುವುದರಿಂದ ಅವುಗಳನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ.

ಇದನ್ನೂ ಓದಿ : ಖಾತೆ ಹಂಚಿಕೆಯೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್‌-ಜೆಡಿಎಸ್ ನಾಯಕರು

ಇನ್ನು, ಉಭಯ ಪಕ್ಷಗಳಲ್ಲಿ ಉದ್ಭವವಾಗಿರುವ ಸಚಿವಾಕಾಂಕ್ಷಿಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಮಂಡಳಿಗಳು, ನಿಗಮಗಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ಈ ಹಿಂದೆಯೇ ಒಟ್ಟಾರೆ ನಿಗಮ ಮತ್ತು ಮಂಡಳಿಗಳಲ್ಲಿ ೨/೩ ಭಾಗ ಕಾಂಗ್ರೆಸ್‌ಗೆ, ೧/೩ ಭಾಗ ಜೆಡಿಎಸ್‌ಗೆ ಹಂಚಿಕೆಯಾಗಿದೆ. ಮೊದಲ ಹಂತದಲ್ಲಿ ೩೦ ಶಾಸಕರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಮೂಲಕ, ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಕಂಟಕವನ್ನು ತಕ್ಕಮಟ್ಟಕ್ಕೆ ಶಮನ ಮಾಡುವ ಯತ್ನಕ್ಕೆ ಸಮನ್ವಯ ಸಮಿತಿ ಮುಂದಾಗಿದೆ.

ಉಳಿದಂತೆ ಬಾಕಿ ಇರುವ ಕಾಂಗ್ರೆಸ್‌ನ ೬ ಮತ್ತು ಜೆಡಿಎಸ್‌ನ ಒಂದು ಸಚಿವ ಸ್ಥಾನ ಹಂಚಿಕೆಯ ಸಂಬಂಧ ಚರ್ಚೆಯಾಗಿದ್ದರೂ ಅದನ್ನು ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಬಹಿರಂಗಗೊಳಿಸಲು ನಿರಾಕರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕವು ಕಗ್ಗಂಟಾಗಿ ಪರಿಣಮಿಸುವ ಸಾಧ್ಯತೆ ಇದೆ. ಕೆಲವು ಜಿಲ್ಲೆಗಳಲ್ಲಿ ಇಬ್ಬರು ಶಾಸಕರು ಸಚಿವರಾಗಿರುವುದಿರಂದ ಇದು ಮತ್ತಷ್ಟು ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ಈ ಸಂಬಂಧ ಕುಮಾರಸ್ವಾಮಿ ಮತ್ತು ಪರಮೇಶ್ವರ ನಿರ್ಧರಿಸುತ್ತಾರೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More