ಇಂದಿನ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ಇತರ 10 ಸುದ್ದಿಗಳು

ನೀವು ತಪ್ಪಿಸಿಕೊಂಡಿರಬಹುದಾದ ಮತ್ತು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ನೀರವ್ ಮೋದಿ, ಐಸಿಐಸಿಐ ಬ್ಯಾಂಕ್ ಹಗರಣ ಕಾರ್ಪೊರೇಟ್ ಸಚಿವಾಲಯ ತನಿಖೆ

ಗುಜರಾತ್ ವಜ್ರ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 13,700 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಮತ್ತು ಐಸಿಐಸಿಐ ಬ್ಯಾಂಕ್ ಸ್ವಜನ ಪಕ್ಷಪಾತ ಹಾಗೂ ಹಿತಾಸಕ್ತಿ ಸಂಘರ್ಷ ಪ್ರಕರಣಗಳ ಬಗ್ಗೆ ಕಾರ್ಪೊರೇಟ್ ಸಚಿವಾಲಯ ತನಿಖೆ ನಡೆಸಲಿದೆ. ಪ್ರಾಥಮಿಕ ಪರಿಶೀಲನೆ ನಂತರ ನೀರವ್ ಮೋದಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಕಂಪನಿಗಳ ವಿರುದ್ಧ ಗಂಭೀರ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆ (ಎಸ್ಎಫ್ಒಐ) ತನಿಖೆ ನಡೆಸುತ್ತಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವ ಪಿಪಿ ಚೌಧರಿ ಹೇಳಿದ್ದಾರೆ. ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಕಂಪನಿಗೆ ಸಾಲ ನೀಡಿದ ಪ್ರಕರಣದಲ್ಲಿ ನ್ಯುಪವರ್ ರಿನ್ಯುವಬಲ್ ಕಂಪನಿ ಸೇರಿದಂತೆ ಆರು ಕಂಪನಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ನ್ಯು ಪವರ್ ಕಂಪನಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಗೆ ಸೇರಿದೆ. ಈ ಕಂಪನಿ ಮತ್ತು ವಿಡಿಯೋಕಾನ್ ಕಂಪನಿ ಮಾಲೀಕ ವೇಣುಗೋಪಾಲ್ ದೂತ್ ನಡುವೆ ಹಣಕಾಸು ವಹಿವಾಟು ನಡೆದಿದೆ ಎಂಬ ಆರೋಪ ಇದೆ.

ಭಾರತ ಮತ್ತು ಪಾಕಿಸ್ತಾನದಿಂದ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ವಿಶ್ವಸಂಸ್ಥೆ ಆರೋಪ

2016ರಿಂದೀಚಿಗೆ ಭಾರತ ಮತ್ತು ಪಾಕಿಸ್ತಾನ ಭದ್ರತಾ ಪಡೆಗಳಿಂದ ಕಾಶ್ಮೀರದದಲ್ಲಿ ಹಿಂಸಾಚಾರ, ಸಾವು ಸಂಭವಿಸುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆ ಗುರುವಾರ ಆರೋಪಿಸಿದೆ. ಆದರೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪವನ್ನು ತಳ್ಳಿಹಾಕಿದೆ. ಮಾನವ ಹಕ್ಕುಗಳ ಉಲ್ಲಂಘನೆಗಳ ಆರೋಪದಲ್ಲಿ ಅಂತಾರಾಷ್ಟ್ರೀಯ ತನಿಖೆಗೆ ಕರೆ ನೀಡಿದೆ.

ವಿರೋಧ ಪಕ್ಷಗಳಲ್ಲಿ ಪ್ರಧಾನಿ ಸ್ಥಾನಕ್ಕೆ ಹಲವರು ಅರ್ಹರು: ತೇಜಸ್ವಿ ಯಾದವ್

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ವಿರೋಧ ಪಕ್ಷಗಳು ಒಟ್ಟಾಗಿ ಎದುರಸಲಿವೆ. ಹೆಚ್ಚು ಸ್ಥಾನ ಗೆದ್ದು ದೊಡ್ಡಪಕ್ಷವಾಗಿ ಹೊರಹೊಮ್ಮುವ ಪಕ್ಷದ ನಾಯಕರು ಪ್ರಧಾನಮಂತ್ರಿ ಸ್ಥಾನದ ಮೇಲೆ ಕಣ್ಣಿಡುವುದು ಸಹಜ. ಇದನ್ನೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಆದರೆ, ವಿರೋಧ ಪಕ್ಷಗಳಲ್ಲಿ ಹಲವು ಬಲಿಷ್ಠರು ಪ್ರಧಾನಿ ಸ್ಥಾನಕ್ಕೆ ಅರ್ಹರಿದ್ದಾರೆ ಎಂದು ಬಿಹಾರದ ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ.

ಹಿಂಸಾಚಾರ ತಡೆಗೆ ಅಭಿವೃದ್ಧಿಯೇ ಉತ್ತರ: ಪ್ರಧಾನಿ ನರೇಂದ್ರ ಮೋದಿ

ಚತ್ತೀಸ್‌ಗಢದಲ್ಲಿ ಹೆಚ್ಚುತ್ತಿರುವ ನಕ್ಸಲ್ ಚಟುವಟಿಕೆ ಕುರಿತಂತೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ಹಿಂಸಾಚಾರ ತಡೆಗೆ ಅಭಿವೃದ್ಧಿಯೇ ಉತ್ತರ ಎಂದರು. ಚತ್ತೀಸ್‌ಗಢದಲ್ಲಿ 22 ಸಾವಿರ ಕೋಟಿ ರುಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, “ಯಾವುದೇ ಹಿಂಸಾಚಾರ ಮತ್ತು ಪಿತೂರಿಗಳ ತಡೆಗೆ ಅಭಿವೃದ್ಧಿಯೊಂದೇ ಉತ್ತರವಾಗಬಲ್ಲದು. ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯದವರ ಜೀವನಮಟ್ಟ ಸುಧಾರಣೆ ಮತ್ತು ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ,” ಎಂದರು.

ಯೋಧನನ್ನು ಅಪಹರಿಸಿದ ಉಗ್ರರ ತಂಡ

ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸುತ್ತಿದ್ದರೆ, ಮತ್ತೊಂಡೆಗೆ ಉಗ್ರರು ಭಾರತೀಯ ಯೋಧನೊಬ್ಬನನ್ನು ಅಪಹರಿಸಿದ್ದಾರೆ. ಪುಲ್ವಾಮ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಭದ್ರತಾ ಪಡೆ ಅಪಹೃತನ ಪತ್ತೆಗಾಗಿ ತನಿಖೆ ಕೈಗೊಂಡಿದೆ. ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಉಗ್ರರು ಅಪಹರಿಸಿದ್ದಾರೆ ಎಂದು ಭದ್ರತಾ ಪಡೆಯ ಸಿಬ್ಬಂದಿ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ

ಕಾಶ್ಮೀರದ ಶ್ರೀನಗರದಲ್ಲಿ ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಬುಖಾರಿ ಅವರನ್ನು, ರೆಸಿಡೆನ್ಸಿ ರಸ್ತೆಯ ಪ್ರೆಸ್ ಎನ್ಲೇವ್ ಪ್ರದೇಶದಲ್ಲಿರುವ ಕಚೇರಿ ಮುಂದೆಯೇ ಭಯೋತ್ಪಾದಕರು ಹತ್ಯೆಗೈದಿದ್ದಾರೆ. ಬುಕಾರಿ ಅವರ ಅಂಗರಕ್ಷಕ ಮತ್ತು ವಾಹನ ಚಾಲಕನಿಗೂ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗೆ ಬುಕಾರಿ ಮತ್ತು ಅವರ ಚಾಲಕ ಕೊನೆಯುಸಿರೆಳೆದಿದ್ದರು. ಗಂಭೀರವಾಗಿ ಗಾಯಗೊಂಡಿರುವ ಅಂಗರಕ್ಷಕನಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಸಿಸಿಯಲ್ಲಿ ಸ್ಥಾನ ಉಳಿಸಿಕೊಂಡ ಕನ್ನಡಿಗ ಶ್ರೀನಾಥ್

ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪಂದ್ಯ ರೆಫರಿಗಳ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡ ಏಕಾಂಗಿ ಭಾರತೀಯರೆನಿಸಿದ್ದಾರೆ. ಇನ್ನು, ಸುಂದರಂ ರವಿ ಐಸಿಸಿ ಎಲೈಟ್ ಅಂಪೈರ್‌ಗಳ ಪೈಕಿ ಮುಂದುವರಿದಿದ್ದಾರೆ. ಗುರುವಾರ (ಜೂನ್ ೧೪) ಐಸಿಸಿ ಪ್ರಕಟಿಸಿರುವ ಅಧಿಕೃತ ಎಲೈಟ್ ಪಂದ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಶ್ರೀನಾಥ್ ಮತ್ತು ಸುಂದರಂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಐಸಿಸಿ ಪಂದ್ಯ ರೆಫರಿಗಳ ಪಟ್ಟಿಯಲ್ಲಿ ಶ್ರೀನಾಥ್ ಅಲ್ಲದೆ, ಮಾಜಿ ಟೆಸ್ಟ್ ಕ್ರಿಕೆಟಿಗರಾದ ಡೇವಿಡ್ ಬೂನ್, ಕ್ರಿಸ್ ಬ್ರಾಡ್, ಜೆಫ್ ಕ್ರೌ, ರಂಜನ್ ಮದುಗಲ್ಲೆ, ಆಂಡಿ ಪೇಕ್ರಾಫ್ಟ್ ಹಾಗೂ ರಿಚಿ ರಿಚರ್ಡ್‌ಸನ್ ಸ್ಥಾನ ಗಳಿಸಿದ್ದಾರೆ.

ಫೆಡರರ್ ಜೊತೆ ಸೆಣಸುವ ಅವಕಾಶ ತಪ್ಪಿಸಿಕೊಂಡ ಪ್ರಗ್ನೇಶ್

ಎಟಿಪಿ ಮರ್ಸಿಡೆಸ್ ಓಪನ್ ಸ್ಟಟ್‌ಗಾರ್ಟ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಯುವ ಟೆನಿಸಿಗ ಪ್ರಗ್ನೇಶ್ ಗುಣೇಶ್ವರನ್ ನಿರಾಸೆ ಅನುಭವಿಸಿದ್ದಾರೆ. ಗುರುವಾರ (ಜೂನ್ ೧೪) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಸೆಣಸಾಟದಲ್ಲಿ ವಿಶ್ವದ ೨೩ನೇ ಶ್ರೇಯಾಂಕಿತ ಆಟಗಾರ ಡೆನಿಸ್ ಶಪಾವಲೊವ್ ವಿರುದ್ಧ ಮನೋಜ್ಞ ಗೆಲುವು ಸಾಧಿಸಿ ಟೂರ್ನಿಯ ಪ್ರಧಾನ ಘಟ್ಟಕ್ಕೆ ಅರ್ಹತೆ ಪಡೆದಿದ್ದ ಪ್ರಗ್ನೇಶ್, ಇಂದು ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ೬-೭ (೪), ೪-೬ ನೇರ ಸೆಟ್‌ಗಳಲ್ಲಿ ವಿಶ್ವದ ೭೫ನೇ ಶ್ರೇಯಾಂಕಿತ ಆಟಗಾರ ಅರ್ಜೆಂಟೀನಾದ ಗ್ಯುಡೊ ಪೆಲ್ಲಾ ವಿರುದ್ಧ ಸೋಲನುಭವಿಸಿದರು. ಈ ಪಂದ್ಯದಲ್ಲಿ ಗೆದ್ದಿದ್ದರೆ, ರೋಜರ್ ಫೆಡರರ್ ವಿರುದ್ಧ ಮುಂದಿನ ಸುತ್ತಿನಲ್ಲಿ ಸೆಣಸಬಹುದಿತ್ತು. ಆದರೆ, ಆ ಅಪೂರ್ವ ಅವಕಾಶದಿಂದ ಪ್ರಗ್ನೇಶ್ ವಂಚಿತರಾದರು.

ಸಿರಿಯಾ ನಿರಾಶ್ರಿತರಿಗೆ ರಂಜಾನ್ ಆಹಾರ ಒದಗಿಸಿದ ಸಿಖ್ಖರು

ಇಂಗ್ಲೆಂಡ್ ಮೂಲದ ಸಿಖ್ ಎನ್‌ಜಿಒ ಖಾಲ್ಸಾ ಏಯ್ಡ್, ಲೆಬನಾನ್ ಹಾಗೂ ಇರಾಕ್‌ನಲ್ಲಿರುವ ೫,೦೦೦ ಮಂದಿ ಸಿರಿಯಾ ನಿರಾಶ್ರಿತರಿಗೆ ರಂಜಾನ್ ಹಬ್ಬದ ಪ್ರಯುಕ್ತ ಆಹಾರ ಪದಾರ್ಥಗಳನ್ನು ಒದಗಿಸಿದೆ. ಅಲ್ಲದೆ, ಇಫ್ತಾರ್ ಕೂಟಕ್ಕಾಗಿ ಹಣ್ಣು, ತಿನಿಸುಗಳನ್ನು ಒದಗಿಸಿದೆ. ತಮ್ಮ ‘ರಂಜಾನ್ ಕಿಚನ್’ ಮೂಲಕ ಸವಾ ಫಾರ್ ಡೆವಲೆಪ್ಮೆಂಟ್ ಆ್ಯಂಡ್ ಏಯ್ಡ್ ಹಾಗೂ ಖಾಲ್ಸಾ ಏಯ್ಡ್ ಪ್ರತಿದಿನ 5,000ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಹಾರವೊದಗಿಸುತ್ತಿದೆ. ಈ ರಂಜಾನ್ ಕಿಚನ್ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

ಆರೋಗ್ಯದಲ್ಲಿ ಸುಧಾರಣೆಯಾದ ನಂತರ ಭಾರತಕ್ಕೆ ವಾಪಸಾದ ಗೋವಾ ಸಿಎಂ

ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಅಮೆರಿಕದಿಂದ ಇಂದು ಭಾರತಕ್ಕೆ ವಾಪಸಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಪರಿಕ್ಕರ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಅಮೆರಿಕಗೆ ತೆರಳಿದ್ದರು. ಕಳೆದ ತಿಂಗಳು ವಿಡಿಯೋವೊಂದನ್ನು ಕಳುಹಿಸಿದ್ದ ಅವರು, ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದ್ದು, ಶೀಘ್ರದಲ್ಲೇ ತಾಯ್ನಾಡಿಗೆ ಮರಳುವುದಾಗಿ ತಿಳಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More