ಗ್ರಾಮೀಣ ಭಾರತ ಅಭಿವೃದ್ಧಿಯಾಗುತ್ತಿದೆ ಎಂದರೂ ರೈತರೇಕೆ ಹೀಗಿದ್ದಾರೆ ಗೊತ್ತೇ?

ಕೃಷಿಯೇತರ, ಅರಣ್ಯೀಕರಣ, ಮೀನುಗಾರಿಕೆ, ಹೈನುಗಾರಿಕೆಯ ಆರ್ಥಿಕ ಪ್ರಗತಿಯ ದರ ಶೇ 54.5ರಷ್ಟು. ಆದರೂ ಕೃಷಿಕರು ಏಕೆ ವ್ಯವಸ್ಥೆ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂಬುದಕ್ಕೆ ಕೆಲವು ಕಾರಣಗಳಿವೆ. ಆ ಕಾರಣಗಳೇನು ಎಂಬುದರತ್ತ ಇಣುಕುನೋಟ, ವಿಶ್ಲೇಷಣೆ ಇಲ್ಲಿದೆ

ರಾಷ್ಟ್ರೀಯ ಕಿಸಾನ್ ಮಹಾಸಂಘ ನಡೆಸಿದ ಹತ್ತು ದಿನಗಳ ಮುಷ್ಕರ ಜೂ.10ರಂದು ಕೊನೆಗೊಂಡಿತು. ಭಾರತದ ವಾಯುವ್ಯ ರಾಜ್ಯಗಳಲ್ಲಿ ಈ ಪ್ರತಿಭಟನೆ ನಡೆಯಿತು. ಈ ಹಿಂದೆ ಮಹಾರಾಷ್ಟ್ರದಲ್ಲಿ ರೈತರು ವಿಧಾನಸಭೆಗೆ ಮುತ್ತಿಗೆ ಹಾಕಿ ಕಾಲ್ನಡಿಗೆಯಲ್ಲೇ ಸಾಗಿಬಂದದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ, ದೇಶದ ಒಂದಿಲ್ಲೊಂದು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ರೈತ ಸಮುದಾಯ ಅತೃಪ್ತಿ ಹೊಂದಿದೆ ಎಂಬುದು ಇದರ ಒಟ್ಟು ಸಾರ.

ಆದರೆ, ಸರ್ಕಾರಿ ದಾಖಲೆಗಳ ಪ್ರಕಾರ ಗ್ರಾಮೀಣ ಭಾರತ ನಿಧಾನಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ನೀಡಿರುವ ಅರಣ್ಯೀಕರಣ, ಕೃಷಿ ಹಾಗೂ ಮೀನುಗಾರಿಕೆ ವರದಿಯ ಪ್ರಕಾರ ನಿಧಾನಗತಿಯಲ್ಲಿ ಗ್ರಾಮೀಣಾಭಿವೃದ್ಧಿ ನಡೆಯುತ್ತಿದೆ. ಈ ವರದಿಯಲ್ಲಿ ಗಮನಿಸಬೇಕಾದ ಅಂಶ ಎಂದರೆ, ಇದರಲ್ಲಿ ಕೃಷಿ ಮಾತ್ರವಲ್ಲದೆ ಅರಣ್ಯೀಕರಣ ಹಾಗೂ ಮೀನುಗಾರಿಕೆಯನ್ನು ಕೃಷಿ ಜೊತೆಗೆ ಸೇರಿಸಿ ಅಭಿವೃದ್ಧಿ ವರದಿ ನೀಡಿರುವುದು. ಕೃಷಿಯೊಂದರ ಅಂಕಿ-ಅಂಶಗಳನ್ನೇ ಪ್ರತ್ಯೇಕವಾಗಿ ನೀಡಿದರೆ ಮತ್ತಷ್ಟು ನಿರಾಶೆ ಎದುರಾಗಬಹುದು. 2011-12ರಿಂದ 2016-17ರವರೆಗಿನ ಐದು ವರ್ಷಗಳಲ್ಲಿ ಕೃಷಿ ಅಭಿವೃದ್ಧಿ ಕಂಡಿರುವುದು ಕೇವಲ ಶೇ 5.2ರಷ್ಟು ಮಾತ್ರ. 2017-18ನೇ ಸಾಲಿನ ಅರಣ್ಯೀಕರಣ, ಕೃಷಿ ಹಾಗೂ ಮೀನುಗಾರಿಕೆ ಅಭಿವೃದ್ಧಿ ಕುರಿತ ವರದಿ ಇನ್ನೂ ಲಭ್ಯವಾಗಿಲ್ಲ.

ಇದೇ ಅವಧಿಯಲ್ಲಿ ಕೃಷಿಯೇತರ, ಅರಣ್ಯೀಕರಣ, ಮೀನುಗಾರಿಕೆ, ಹೈನುಗಾರಿಕೆಯ ಆರ್ಥಿಕ ಪ್ರಗತಿಯ ದರ ಶೇ 54.5ರಷ್ಟು. ಕೃಷಿಕರು ಯಾಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ. ಕೃಷಿಕನ ಸುತ್ತಲೂ ಸಮೃದ್ಧಿ ಇದ್ದರೂ (ಅರಣ್ಯೀಕರಣ, ಮೀನುಗಾರಿಕೆ ಇತ್ಯಾದಿ) ಅದನ್ನು ಆತ ಅನುಭವಿಸಲು ಸಾಧ್ಯವಾಗದೆ ಹೋದಾಗ ಸಹಜವಾಗಿಯೇ ಆತನೊಳಗೆ ಆಕ್ರೋಶ ಮೂಡುತ್ತದೆ. ಹೀಗಾಗಿ ಸರ್ಕಾರಿ ದಾಖಲೆಗಳ ಪ್ರಕಾರ ಗ್ರಾಮೀಣಾಭಿವೃದ್ಧಿಯಾಗುತ್ತಿದ್ದರೂ ಅದರ ಫಲ ಕೃಷಿಕನಿಗೆ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಇದೆ.

ಕಳೆದ ಕೆಲವು ವರ್ಷಗಳಿಂದ ರೈತರು ಬಂಪರ್ ಫಸಲು ಗಳಿಸುತ್ತಿದ್ದರೂ ಅದಕ್ಕೆ ತಕ್ಕ ಬೆಲೆ ಪಡೆಯುವಲ್ಲಿ ವಿಫಲವಾಗುತ್ತಿದ್ದಾರೆ. ಭಾರತದ ಕೃಷಿ ಮಾರುಕಟ್ಟೆ ವ್ಯವಸ್ಥೆ ಇನ್ನೂ ಪುರಾತನ ಅವಸ್ಥೆಯಲ್ಲಿರುವುದು ಇದಕ್ಕೆ ಕಾರಣ. ಸರ್ಕಾರಗಳೇನೋ ಪದೇ ಪದೇ ಭರವಸೆ ನೀಡುತ್ತಿದ್ದರೂ ಈ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ ಎಂಬುದು ದೃಗ್ಗೋಚರ.

‘ಫೈನಾನ್ಷಿಯಲ್ ಎಕ್ಸ್ ಪ್ರೆಸ್’ ನ ಇತ್ತೀಚಿನ ವರದಿ ಪ್ರಕಾರ 2014ರಲ್ಲಿ ಕ್ವಿಂಟಾಲ್ ಈರುಳ್ಳಿಗೆ 1499 ರೂಪಾಯಿಗಳನ್ನು ಪಡೆಯುತ್ತಿದ್ದ ರೈತ ಈ ವರ್ಷ ಕೇವಲ 775 ರೂಪಾಯಿ ಪಡೆದಿದ್ದಾನೆ. ಆಲೂಗಡ್ಡೆ ಕೂಡ ಸತತ ನಾಲ್ಕು ವರ್ಷಗಳಿಂದ ಬೆಲೆ ಕುಸಿತ ಕಾಣುತ್ತಿದೆ.

ದೇಶಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಬೆಳೆಯನ್ನು ಕೃಷಿಕರು ಬೆಳೆಯುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿರುವಂತೆ “ಭಾರತೀಯ ಕೃಷಿಕರು ಅಧಿಕ ಇಳುವರಿ ಪಡೆಯುವ ವಲಯವನ್ನು ಶಾಶ್ವತವಾಗಿ ತಲುಪಿಯಾಗಿದೆ. ಆದರೆ ನಮ್ಮ ನೀತಿ ನಿರೂಪಕರಿಗೆ ಇದು ಅರ್ಥವಾಗುತ್ತಿಲ್ಲ. ಅವರಿನ್ನೂ ಅಗತ್ಯ ವಸ್ತುಗಳ ಕಾಯ್ದೆಯ ಯುಗದಲ್ಲಿಯೇ ಇದ್ದಾರೆ.”

ರೈತರ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದಿದ್ದರೂ ಗ್ರಾಮೀಣ ಭಾರತ ಅಭಿವೃದ್ಧಿ ಹೊಂದುತ್ತಿರುವುದು ಹೇಗೆ? ಇದಕ್ಕೆ ಮುಖ್ಯ ಕಾರಣ ರೈತರು ಕೃಷಿಯನ್ನು ಬಿಟ್ಟು ಇತರೆ ವೃತ್ತಿಗಳತ್ತ ಮುಖ ಮಾಡಿರುವುದು. ನೀತಿ ಆಯೋಗದ ವರದಿಯೊಂದು ಹೇಳುವ ಪ್ರಕಾರ, ಕೃಷಿಯಲ್ಲಿ ಆರ್ಥಿಕ ಸುಧಾರಣೆಯಾಗಬೇಕಾದರೆ ಸುಮಾರು 8.4 ಕೋಟಿಯಷ್ಟು ಮಂದಿ ಇದನ್ನು ಅವಲಂಬಿಸುವುದು ತಪ್ಪಬೇಕು. ಇದರಿಂದ ಗ್ರಾಮೀಣಭಾಗದಲ್ಲಿ ಶೇ 25ರಷ್ಟು ಮಾನವ ಸಂಪನ್ಮೂಲ ಸೃಷ್ಟಿಯಾಗುತ್ತದೆ ಎಂಬುದು ಅದರ ಅಭಿಪ್ರಾಯ. ಕೆಲವು ವಿಶ್ಲೇಷಕರು ಕೂಡ ಗ್ರಾಮಗಳು ಪ್ರಗತಿ ಹೊಂದುತ್ತಿರುವಾಗ ಕೃಷಿಕರು ಆಕ್ರೋಶ ವ್ಯಕ್ತಪಡಿಸುವುದು ಏಕೆ ಎಂದು ಪ್ರಶ್ನಿಸುತ್ತಾರೆ!

2017-18ರಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಶೇ 14.7ರಷ್ಟು ಅಧಿಕವಾಗಿದೆ. 2016-17ರಲ್ಲಿ ಈ ವಲಯ ಶೇ.6.6ರಷ್ಟು ಪ್ರಗತಿ ಸಾಧಿಸಿತ್ತು. ದೇಶದಲ್ಲಿ ಮಾರಾಟವಾಗುವ ಪ್ರತಿ ಐದು ದ್ವಿಚಕ್ರ ವಾಹನಗಳಲ್ಲಿ ಎರಡನ್ನು ಗ್ರಾಮೀಣ ಭಾಗದ ಜನ ಖರೀದಿಸುತ್ತಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ ದಿನಬಳಕೆಯ ವಸ್ತುಗಳ ಖರೀದಿ ಪ್ರಮಾಣ 2018ರ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ನಗರ ಭಾಗಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ 1.4ಪಟ್ಟು ಹೆಚ್ಚಿದೆ ಎನ್ನುತ್ತದೆ ನೀಲ್ಸನ್ ವರದಿ. ಕೃಷಿಕರು ಆರಾಮಾಗಿದ್ದಾರೆ ಎನ್ನಲು ಇಂತಹ ದತ್ತಾಂಶಗಳು ಕಾರಣ.

ಇದನ್ನೂ ಓದಿ : ರೈತ ಸಮಾವೇಶ ನಡೆಸಿದ ಬಿಜೆಪಿಗೆ ಹತ್ತು ಪ್ರಶ್ನೆ ಕೇಳಿದ ಕಾಂಗ್ರೆಸ್‌ ನಾಯಕರು

ನೀತಿ ಆಯೋಗದ ವರದಿ ಹೇಳುವಂತೆ, ಭಾರತದ ಗ್ರಾಮೀಣ ಆರ್ಥಿಕತೆಗೆ ಶೇ 64ರಷ್ಟು ಮಾನವ ಸಂಪನ್ಮೂಲವನ್ನು ಹೊಂದಿರುವ ಕೃಷಿಯ ಕೊಡುಗೆ ಶೇ 39ರಷ್ಟು. ಶೇ.36ರಷ್ಟು ಮಾನವ ಸಂಪನ್ಮೂಲ ಕೃಷಿಯೇತರ ಚಟುವಟಿಕೆ ನಡೆಸುತ್ತಿರುವುದರಿಂದ ಶೇ.61ರಷ್ಟು ಗ್ರಾಮೀಣ ಆರ್ಥಿಕತೆ ಪ್ರಗತಿ ಕಾಣುತ್ತಿದೆ ಎಂಬುದು ಇದರರ್ಥ.

ಗ್ರಾಮೀಣ ಪ್ರದೇಶಗಳ ಕೃಷಿಯೇತರ ಚಟುವಟಿಕೆ ಅಭಿವೃದ್ಧಿ ಹೊಂದುತ್ತಿದೆಯೇ ವಿನಾ ಕೃಷಿಯಲ್ಲ. ಇದು ಚಿಂತಿಸಬೇಕಾದ ಸಂಗತಿ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More