ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ಅವರಿಂದ ಚಂದಾ ಕೊಚ್ಚಾರ್ ಆರೋಪಗಳ ತನಿಖೆ

ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಿದ ಪ್ರಕರಣದಲ್ಲಿ ಸಂಘರ್ಷ ಹಿತಾಸಕ್ತಿ ಎದುರಿಸುತ್ತಿರುವ ಸಿಇಒ ಚಂದಾ ಕೊಚ್ಚಾರ್ ವಿರುದ್ಧದ ತನಿಖೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿಎನ್ ಶ್ರೀಕೃಷ್ಣ ನಡೆಸಲಿದ್ದಾರೆ. ಐಸಿಐಸಿಐ ಆಡಳಿತ ಮಂಡಳಿ ಸ್ವತಂತ್ರ ತನಿಖೆ ನಡೆಸಲು ನಿರ್ಧರಿಸಿತ್ತು

ವಿಡಿಯೋಕಾನ್ ಸಂಸ್ಥೆಗೆ 3250 ಕೋಟಿ ರುಪಾಯಿ ಸಾಲ ನೀಡಿದ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ಮತ್ತು ಸಂಘರ್ಷ ಹಿತಾಸಕ್ತಿ ಎದುರಿಸುತ್ತಿರುವ ಸಿಇಒ ಚಂದಾ ಕೊಚ್ಚಾರ್ ವಿರುದ್ಧ ಐಸಿಐಸಿಐ ಆಡಳಿತ ಮಂಡಳಿ ನಡೆಸಲಿರುವ ಸ್ವತಂತ್ರ ತನಿಖೆಯ ನೇತೃತ್ವವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ವಹಿಸಲಿದ್ದಾರೆ.

ಮೇ 30ರಂದು ಸ್ವತಂತ್ರ ತನಿಖೆ ನಡೆಸುವುದಾಗಿ ಐಸಿಐಸಿಐ ಆಡಳಿತ ಮಂಡಳಿ ಪ್ರಕಟಿಸಿತ್ತು. ಚಂದಾ ಕೊಚ್ಚಾರ್ ವಿರುದ್ಧ ಇರುವ ಸಂಘರ್ಷ ಹಿತಾಸಕ್ತಿ, ಸ್ವಜನ ಪಕ್ಷಪಾತ ಮತ್ತು ಕೊಟ್ಟುಕೊಳ್ಳುವಿಕೆ ಮತ್ತಿತರ ಆರೋಪಗಳು ತನಿಖೆಯ ವ್ಯಾಪ್ತಿಗೆ ಒಳಪಡುತ್ತವೆ, ತನಿಖೆಯು ಸಮಗ್ರವಾಗಿರುತ್ತದೆ ಎಂದು ತಿಳಿಸಿತ್ತು.

ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಯು ಸಾಲ ನೀಡಿಕೆಯಲ್ಲಿ ಬ್ಯಾಂಕುಗಳ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆಯೇ? ಸಂಘರ್ಷ ಹಿತಾಸಕ್ತಿ ಮತ್ತು ಸ್ವಜನಪಕ್ಷಪಾತ ನಡೆದಿದೆಯೇ ಹಾಗೂ ಕೊಟ್ಟುಕೊಳ್ಳುವಿಕೆ ನಡೆದಿದೆಯೇ ಎಂಬುದನ್ನು ತನಿಖೆ ನಡೆಸಲಿದೆ.

ಆರಂಭದಲ್ಲಿ ಸ್ವತಂತ್ರ ತನಿಖೆಗೆ ಹಿಂದೇಟು ಹಾಕಿದ್ದ ಐಸಿಐಸಿಐ ಆಡಳಿತ ಮಂಡಳಿಯು ಶಿಳ್ಳೇಗಾರರೊಬ್ಬರ ದೂರು ಆಧರಿಸಿ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೆಂಜ್ ಬೋರ್ಡ್ ಆಪ್ ಇಂಡಿಯಾ (ಸೆಬಿ) ತನಿಖೆ ನಡೆಸಲು ಮುಂದಾದ ನಂತರ ಸ್ವತಂತ್ರ ತನಿಖೆ ನಡೆಸಲು ಒಪ್ಪಿದೆ. ಈಗಾಲೇ ಪ್ರಗತಿಯಲ್ಲಿರುವ ಸೆಬಿ ತನಿಖೆಯಲ್ಲಿ ಚಂದಾ ಕೊಚ್ಚಾರ್ ತಪ್ಪಿತಸ್ಥೆ ಎಂದು ಸಾಬೀತಾದರೆ ಸೆಬಿ ಗರಿಷ್ಠ 25 ಕೋಟಿ ರುಪಾಯಿ ದಂಡ ವಿಧಿಸುವ ಸಾಧ್ಯತೆ ಇದೆ.

ವಿಡಿಯೋಕಾನ್ ಸಂಸ್ಥೆಗೆ 3250 ಕೋಟಿ ರುಪಾಯಿ ಸಾಲ ನೀಡಿದ ಪ್ರಕರಣದಲ್ಲಿ ಕೊಟ್ಟುಕೊಳ್ಳುವಿಕೆ ನಡೆದಿದೆ ಎಂಬ ಆರೋಪವೂ ಇದೆ. ವೇಣುಗೋಪಾಲ್ ದೂತ್ ಅವರು ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಅವರ ನ್ಯುಪವರ್ ಕಂಪನಿಗೆ 67 ಕೋಟಿ ರುಪಾಯಿ ಸಾಲ ನೀಡಿ, ನಂತರ ಷೇರು ಖರೀದಿಸಿದ್ದು, ವಿವಿಧ ವಹಿವಾಟುಗಳ ನಂತರ ಆ ಷೇರುಗಳನ್ನು ದೀಪಕ್ ಕೊಚ್ಚಾರ್ ನಿರ್ವಹಿಸುತ್ತಿದ್ದ ಟ್ರಸ್ಟ್‌ಗೆ ಕೇವಲ 9 ಲಕ್ಷ ರುಪಾಯಿಗೆ ವಾಪಸು ಮಾರಾಟ ಮಾಡಿದ್ದರು. ಅದಾದ ನಂತರ ವಿಡಿಯೋಕಾನ್ ಸಂಸ್ಥೆಯು ಪಡೆದಿದ್ದ 3250 ಕೋಟಿ ರುಪಾಯಿ ಪೈಕಿ 2850 ಕೋಟಿ ರುಪಾಯಿಗಳನ್ನು ಐಸಿಐಸಿಐ ಬ್ಯಾಂಕ್ ನಿಷ್ಕ್ರಿಯ ಸಾಲ ಎಂದು ಘೋಷಿಸಿತ್ತು.

ಇಡೀ ವಹಿವಾಟಿನಲ್ಲಿ ಸ್ವಜನ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷ ಇರುವ ಬಗ್ಗೆ ವಿವಿಧ ವಲಯದಿಂದ ಆರೋಪಗಳು ಕೇಳಿ ಬಂದಿದ್ದವು. ಈ ನಡುವೆ ಶಿಳ್ಳೆಗಾರರೊಬ್ಬರು ನೀಡಿದ ದೂರನ್ನು ಆಧರಿಸಿ ಸೆಬಿ ತನಿಖೆ ನಡೆಸುತ್ತಿದೆ. ಬೃಹತ್ ಪ್ರಮಾಣದ ಸಾಲ ನೀಡಿದಾಗ ಮತ್ತು ನೀಡಿದ ಸಾಲ ನಿಷ್ಕ್ರಿಯ ಸಾಲ ಎಂದು ಘೋಷಿಸಿದಾಗ ಅದಕ್ಕೆ ಪೂರಕವಾಗಿ ನಡೆದಿರುವ ಎಲ್ಲಾ ವಹಿವಾಟುಗಳನ್ನು ನ್ಯಾಯೋಚಿತ ಮಾಹಿತಿ ಹಂಚಿಕೆ ನಿಯಮದಡಿ ಸೆಬಿ ಗಮನಕ್ಕೆ ತರಬೇಕಿತ್ತು. ಆದರೆ, ಚಂದಾ ಕೊಚ್ಚಾರ್ ಮತ್ತು ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿ ಸೆಬಿ ಗಮನಕ್ಕೆ ತಂದಿಲ್ಲದ ಆರೋಪ ಎದುರಿಸುತ್ತಿವೆ.

ಆರಂಭದಲ್ಲಿ ಚಂದಾ ಕೊಚ್ಚಾರ್ ಅವರನ್ನು ಸಮರ್ಥಿಸಿಕೊಂಡಿದ್ದ ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿಯು ಶಿಳ್ಳೆಗಾರರ ದೂರು ಆಧರಿಸಿ ತನಿಖೆ ಆರಂಭಿಸಿದ ನಂತರ ಐಸಿಐಸಿಐ ಬ್ಯಾಂಕ್ ಸ್ವಂತಂತ್ರ ತನಿಖೆಗೆ ಮುಂದಾಗಿದೆ. ಈ ನಡುವೆ ಚಂದಾ ಕೊಚ್ಚಾರ್ ಅವರು ರಜೆ ಮೇಲೆ ತೆರಳಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿ ಸೂಚನೆ ಮೇರೆಗೆ ಚಂದಾ ರಜೆ ಮೇಲೆ ತೆರಳಿದ್ದಾರೆ ಎಂಬ ವದಂತಿಗಳನ್ನು ಬ್ಯಾಂಕ್ ತಳ್ಳಿಹಾಕಿದೆ. ಚಂದಾ ಪೂರ್ವನಿರ್ಧರಿತ ರಜೆ ಮೇಲೆ ತೆರಳಿದ್ದಾರೆಂದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ : ಹಿತಾಸಕ್ತಿ ಸಂಘರ್ಷ ಆರೋಪ ಹೊತ್ತ ಚಂದಾ ವಿರುದ್ಧ ತನಿಖೆಗೆ ಮುಂದಾದ ಐಸಿಐಸಿಐ

ಸೆಬಿಯು ಐಸಿಐಸಿಐ ಬ್ಯಾಂಕ್ ಗೆ ನೀಡಿರುವ ನೋಟಿಸ್ ನಲ್ಲಿರುವ ಅಂಶಗಳನ್ನು ಗಮನಿಸಿದರೆ ಚಂದಾ ಕೊಚ್ಚಾರ್ ಅವರಿಗೆ ದಂಡ ವಿಧಿಸಬಹುದೇ ಹೊರತು ತಮ್ಮ ಹುದ್ದೆಗೆ ರಾಜಿನಾಮೆ ನೀಡುವಂತೆ ಸೂಚಿಸುವುದು ಸಾಧ್ಯವಿಲ್ಲ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆಂದು ಮಿಂಟ್ ವರದಿ ಮಾಡಿದೆ. ಈ ಪ್ರಕರಣದ ಬಗ್ಗೆ ಈಗಾಗಲೇ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಚಂದಾ ಕೊಚ್ಚಾರ್, ದೀಪಕ್ ಕೊಚ್ಚಾರ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿದೆ.

ಈ ನಡುವೆ, ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿಯು ಚಂದಾ ಕೊಚ್ಚಾರ್ ಅವರ ಉತ್ತರಾಧಿಕಾರಿ ಹುಡುಕಾಟ ಪ್ರಾರಂಭಿಸಿದೆ. ಎರಡು ವಾರಗಳ ಹಿಂದೆ ಒಂದು ಸುತ್ತಿನ ಸಭೆ ನಡೆದಿದೆ. ಆಯ್ಕೆ ಸಮಿತಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದ ನಂತರ ಅದನ್ನು ಆಡಳಿತ ಮಂಡಳಿ ಮುಂದಿಡುತ್ತದೆ. ಆಡಳಿತ ಮಂಡಳಿ ಒಪ್ಪಿದ ನಂತರ ಆ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಆರ್ಬಿಐ ಅನುಮೋದಿಸಿದ ನಂತರ ಆಡಳಿತ ಮಂಡಳಿ ಅಂತಿಮ ಆಯ್ಕೆ ಮಾಡಲಿದೆ. ಚಂದಾ ಕೊಚ್ಚಾರ್ ಅವರ ಆಡಳಿತ ಅವಧಿ 2019 ಮಾರ್ಚ್ ಮುಗಿಯಲಿದೆ. ಅಲ್ಲಿಗೆ ಚಂದಾ ಕೊಚ್ಚಾರ್ ಸಿಇಒ ಮತ್ತು ಎಂಡಿ ಆಗಿ ಹತ್ತು ವರ್ಷ ಸೇವೆ ಸಲ್ಲಿಸಿದಂತಾಗುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More