ಭಾರತೀಯ ಬ್ಯಾಂಕಿಂಗ್ ಉದ್ಯಮದಲ್ಲಿ ಮಹಿಳೆಯರ ಯುಗ ಅಂತ್ಯವಾಗುತ್ತಾ ಬಂತೆ?

ಭಾರತೀಯ ಬ್ಯಾಂಕಿಂಗ್ ಉದ್ಯಮ ಎಂದರೆ ದಶಕದಿಂದೀಚೆಗೆ ಅರುಂಧತಿ ಭಟ್ಟಾಚಾರ್ಯ, ಚಂದಾ ಕೊಚ್ಚಾರ್, ಶಿಖಾ ಶರ್ಮ, ಉಷಾ ಅನಂತಕೃಷ್ಣನ್ ಹೆಸರು ನೆನಪಾಗುತ್ತಿದೆ. ಆದರೆ ಬ್ಯಾಂಕಿಂಗ್ ಉದ್ಯಮದಲ್ಲಿ ಮಹಿಳಾ ಪ್ರಾಬಲ್ಯ ಕ್ಷೀಣಿಸುತ್ತಿದೆಯೇ? ಇಲ್ಲಾ ಮತ್ತಷ್ಟು ಮಹಿಳೆಯರು ಉದಯಿಸಲಿದ್ದಾರೆ!

ಪುರುಷರ ಪ್ರಾಬಲ್ಯವಿದ್ದ ಬ್ಯಾಂಕಿಂಗ್ ಉದ್ಯಮದಲ್ಲಿ ಮಹಿಳೆಯರ ಪ್ರಾಬಲ್ಯ ಹೆಚ್ಚಿದ್ದು ಅಚ್ಚರಿ. ಕಳೆದೊಂದು ದಶಕದಲ್ಲಿ ಭಾರತೀಯ ಪ್ರಮುಖ ಬ್ಯಾಂಕುಗಳ ಆಡಳಿತ ಮುನ್ನಡೆಸಿದವರು ಮಹಿಳೆಯರೇ.  ದೇಶದ ಅತಿದೊಡ್ಡ ಬ್ಯಾಂಕಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುನ್ನಡೆಸಿದವರು ಅರುಂಧತಿ. ಖಾಸಗಿ ವಲಯ ಅತಿ ದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ಅನ್ನು ದಶಕದಿಂದ ಮುನ್ನಡೆಸಿದವರು ಚಂದಾ ಕೊಚ್ಚಾರ್. ನಾಲ್ಕನೇ ಅತಿದೊಡ್ಡ ಬ್ಯಾಂಕ್ ಆಗಿರುವ ಆಕ್ಸಿಸ್ ಬ್ಯಾಂಕ್ ಅನ್ನು ಕಾರ್ಪೊರೆಟ್ ಬ್ಯಾಂಕಿಂದ ಯಶಸ್ವಿ ರಿಟೇಲ್ ಬ್ಯಾಂಕ್ ಆಗಿ ರೂಪಿಸಿ ಮುನ್ನಡೆಸುತ್ತಿರುವವರು ಶಿಖಾಶರ್ಮ. ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಉಷಾ ಅನಂತಕೃಷ್ಣನ್ ಪಂಜಾಬ್ ನ್ಯಾಷನಲ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಸಿಎಂಡಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀತಿನ ಬೆಳವಣಿಗೆಗಳು ಭಾರತೀಯ ಬ್ಯಾಂಕಿಂಗ್ ಉದ್ಯಮದಲ್ಲಿನ ಮಹಿಳೆಯರ ಪ್ರಾಬಲ್ಯ ತಗ್ಗಿಸಲಿವೆಯೇ ಎಂಬ ಪ್ರಶ್ನೆ ಹುಟ್ಟುಹಾಕಿವೆ. ಮೇಲ್ನೋಟಕ್ಕೆ ಹೌದು ಎಂದು ಉತ್ತರಿಸಬಹುದು.

ಅರುಂಧತಿ ಭಟ್ಟಾಚಾರ್ಯ ಅವರು ನಿವೃತ್ತರಾಗಿದ್ದಾರೆ. ಉಳಿದಂತೆ ಚಂದಾಕೊಚ್ಚಾರ್, ಉಷಾ ಅನಂತಕೃಷ್ಣನ್ ವಿರುದ್ಧ ಸ್ಪಜನ ಪಕ್ಷಪಾತ ಹಿತಾಸಕ್ತಿ  ಸಂಘರ್ಷ ಆರೋಪಗಳನ್ನು ಎದುರಿಸುತ್ತಿದ್ದರೆ, ಶಿಖಾ ಶರ್ಮ ಅವರು ನಿಷ್ಕ್ರಿಯಸಾಲ ಹೆಚ್ಚಳ, ಬ್ಯಾಂಕ್ ಲಾಭ ಪ್ರಮಾಣ ಕುಸಿತವಾಗಿದ್ದು ಅದಕ್ಷರು ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಿದ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷ ಆರೋಪದ ಹಿನ್ನೆಲೆಯಲ್ಲಿ ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿ ಚಂದಾ ಕೊಚ್ಚಾರ್ ವಿರುದ್ಧ ಸ್ವತಂತ್ರ ತನಿಖೆಗೆ ಆದೇಶಿಸಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ತನಿಖೆ ನೇತೃತ್ವ ವಹಿಸಿದ್ದಾರೆ. ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ಸಹ ಚಂದಾ ಕೊಚ್ಚಾರ್ ಅವರ ವಿರುದ್ಧ ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಿದ ಪ್ರಕರಣದಲ್ಲಿ ಮುಕ್ತ ಮಾಹಿತಿ ಹಂಚಿಕೆ ಸಂಹಿತೆ ಉಲ್ಲಂಘಿಸಿದ ಆರೋಪದಡಿ ತನಿಖೆ ನಡೆಸುತ್ತಿದೆ.

ತನಿಖೆ ಪೂರ್ಣಗೊಂಡಿಲ್ಲ. ಆದರೆ, ಅವರು ಸಿಇಒ ಹುದ್ದೆ ತೊರೆಯುವುದು ಅನಿವಾರ್ಯ ಎಂಬಂತಹ ಸ್ಥಿತಿ ಇದೆ. ಸದ್ಯ ಅವರು ಕಡ್ಡಾಯ ರಜೆ ಮೇಲಿದ್ದಾರೆ. ತನಿಖೆ ಮುಗಿಯುವವರೆಗೂ ರಜೆ ವಿಸ್ತರಣೆ ಆಗಲಿದೆ. ಈಗಾಗಲೇ ಅವರ ಉತ್ತರಾಧಿಕಾರಿಯ ಹುಡುಕಾಟವೂ ಪ್ರಾರಂಭವಾಗಿದ್ದು ಐಸಿಐಸಿಐ ಬ್ಯಾಂಕಿನಲ್ಲಿ ಅವರ ವೃತ್ತಿ ಭವಿಷ್ಯ ಮುಸುಕಾಗಿದೆ.

ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿ ದೊಡ್ಡದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 13,700 ಕೋಟಿ ರುಪಾಯಿ ಹಗರಣದ ಆರೋಪ ಪಟ್ಟಿಯಲ್ಲಿ ಆ ಬ್ಯಾಂಕಿನ ಸಿಎಂಡಿ ಆಗಿದ್ದ ಉಷಾ ಅನಂತಕೃಷ್ಣನ್ ಅವರನ್ನು ಹೆಸರಿಸಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ಅಲಹಾಬಾದ್ ಬ್ಯಾಂಕ್ ಮುನ್ನಡೆಸುತ್ತಿದ್ದ ಉಷಾ ಅನಂತಕೃಷ್ಣನ್ ಅವರ ಎಲ್ಲಾ ಅಧಿಕಾರವನ್ನು ಅಲಹಾಬಾದ್ ಬ್ಯಾಂಕ್ ಆಡಳಿತ ಮಂಡಳಿ ಕಿತ್ತುಕೊಂಡಿದೆ. ಅವರು ರಾಜಿನಾಮೆ ನೀಡುವುದೊಂದೇ ಬಾಕಿ ಇದೆ. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ನಡೆಸಿರುವ ಭಾರಿ ಹಗರಣದ ವೇಳೆ ಉಷಾ ಬ್ಯಾಂಕಿನ ಉನ್ನತ ಹುದ್ದೆಯಲ್ಲಿದ್ದರು.

ಆಕ್ಸಿಸ್ ಬ್ಯಾಂಕ್ ಶಿಖಾ ಶರ್ಮ ಅವರನ್ನು ನಾಲ್ಕನೇ ಅವಧಿಗೆ ಸಿಎಂಡಿ ಆಗಿ ಆಯ್ಕೆ ಮಾಡಿತ್ತು. ಕಳೆದೊಂದು ದಶಕಗಳಿಂದ ಬ್ಯಾಂಕ್ ಮುನ್ನಡೆಸುತ್ತಿರುವ ಶಿಖಾ ಅವರನ್ನು ಮತ್ತೊಂದು ಅವಧಿಗೆ ಮುನ್ನಡೆಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆಕ್ಸಿಸ್ ಬ್ಯಾಂಕ್ ಆಡಳಿತ ಮಂಡಳಿಗೆ ಸೂಚಿಸಿತ್ತು. ಶಿಖಾ ಶರ್ಮ ಅವರ ಅವಧಿಯಲ್ಲಿ ಬ್ಯಾಂಕ್ ನಿಷ್ಕ್ರಿಯ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಬ್ಯಾಂಕ್ ಆಸ್ತಿ ಗುಣಮಟ್ಟ ತಗ್ಗಿದೆ ಎಂಬುದು ಆರ್ಬಿಐ ತಕರಾರು. ಆಕ್ಸಿಸ್ ಬ್ಯಾಂಕ್ ಆಡಳಿತ ಮಂಡಳಿ ಶಿಖಾ ಪರವಾಗಿ ನಿಂತರೂ ಖುದ್ದು ಶಿಖಾ ಶರ್ಮಾ ಅವರೇ ತಾವು ವರ್ಷಾಂತ್ಯಕ್ಕೆಹುದ್ದೆ ತೊರೆಯುವುದಾಗಿ ಪ್ರಕಟಿಸಿದ್ದಾರೆ.

ಆರಂಭದಲ್ಲಿ ಉತ್ತಮ ಕೆಲಸ ಮಾಡಿ ಬ್ಯಾಂಕನ್ನು ಕಟ್ಟಿದ, ಬೆಳಸಿದ ಚಂದಾ ಕೊಚ್ಚಾರ್, ಶಿಖಾ ಶರ್ಮ ಅವರು ಬೇರೆ ಬೇರೆ ಕಾರಣಗಳಿಗಾಗಿ ತಮ್ಮ ಹುದ್ದೆ ತೊರೆಯುತ್ತಿದ್ದಾರೆ. ಉಷಾ ಅವರು ಹುದ್ದೆ ತೊರೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಈ ಮೂವರು ಆರೋಪ ಹೊತ್ತುಕೊಂಡೇ ಹುದ್ದೆ ತೊರೆಯುತ್ತಿದ್ದಾರೆ. ಮತ್ತೆ ಆ ಹುದ್ದೆಗಳಿಗೆ ಏರುವ ಸಾಧ್ಯತೆ ಇಲ್ಲ.

ಎಸ್ಬಿಐ ಸಿಎಂಡಿ ಅರುಂಧತಿ ಭಟ್ಟಾಚಾರ್ಯ ಅವರ ಮೂರು ವರ್ಷದ ಅವಧಿ ಮುಗಿದಾಗ ಅವರ ಸೇವೆಯನ್ನು ವಿಸ್ತರಿಸಲಾಗುತ್ತದೆ ಎಂದೇ ಇಡೀ ಬ್ಯಾಂಕಿಂಗ್ ಉದ್ಯಮ ನಿರೀಕ್ಷಿಸಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಎನ್ಡಿಯ ಸರ್ಕಾರ ಅರುಂಧತಿ ಅವರ ಸೇವೆ ವಿಸ್ತರಿಸಲಿಲ್ಲ. ಆದರೆ, ನಲ್ವತ್ತು ವರ್ಷ ಎಸ್ಬಿಐ ನಲ್ಲಿ ದುಡಿದು  ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಗೇರಿದ ಅರುಂಧತಿ ಅವರು ಬ್ಯಾಂಕ್ ಮುನ್ನಡೆಸುವುದಕ್ಕೊಂದು ಮಾದರಿಯಾಗಿದ್ದರು. ಬ್ಯಾಂಕಿಂಗ್ ಸೇವೆಗೆ ಆಧುನಿಕ ಸ್ಪರ್ಶ ನೀಡಿದ್ದಲ್ಲದೇ, ಜನಸಾಮಾನ್ಯರ ಬ್ಯಾಂಕಾಗಿ ರೂಪಿಸಿದರು. ಸಹವರ್ತಿ ಬ್ಯಾಂಕುಗಳನ್ನು ಯಶಸ್ವಿಯಾಗಿ  ವಿಲೀನಗೊಳಿಸಿದರು. ನಿಷ್ಕ್ರಿಯ ಸಾಲಗಳ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದರು. ಆದರೂ ಅವರ ಸೇವೆ ವಿಸ್ತರಿಸಲಿಲ್ಲ. ಆದರೆ, ಅತ್ಯಂತ ಯಶಸ್ವಿಯಾಗಿ ಯಾವುದೇ ಆರೋಪಗಳಿಲ್ಲದೇ ಅಧಿಕಾರಾವಧಿಯನ್ನು ಮುಗಿಸಿದರು. ಅದೇ ಅರುಂಧತಿ ಅವರ ಹೆಗ್ಗಳಿಕೆ.

ಈಗ ಸದ್ಯಕ್ಕೆ ಐಸಿಐಸಿಐ ಸಿಒಒ ಆಗಿ ಸಂದೀಪ್ ಭಕ್ಷಿ ಅವರನ್ನು ನೇಮಕ ಮಾಡಲಾಗಿದೆ. ಅವರೇ ಐಸಿಐಸಿಐ ಬ್ಯಾಂಕ್ ಚುಕ್ಕಾಣಿ ಹಿಡಿಯಬಹುದು. ಎಸ್ಬಿಐ ಗೆ ರಜ್ನಿಶ್ ಕುಮಾರ್ ಸಿಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಖ್ಯಸ್ಥರಾಗಿ ಸುನಿಲ್ ಮೆಹ್ತಾ ನೇಮಕವಾಗಿದ್ದಾರೆ. ಅಲಹಾಬಾದ್ ಬ್ಯಾಂಕ್ ಗೆ ಮುಖ್ಯಸ್ಥರನ್ನು ನೇಮಕ ಮಾಡಬೇಕಿದೆ. ಅಂದರೆ, ಈ ಮಹಿಳೆಯರು ನಿರ್ವಹಿಸಿದ ಹುದ್ದೆಗಳಿಗೆ ಪುರುಷರು ನೇಮಕಗೊಂಡಿದ್ದಾರೆ. ಆ ಮೂಲಕ ಬ್ಯಾಂಕಿಂಗ್ ಉದ್ಯಮದ ಉನ್ನತ ಸ್ಥಾನಗಳಲ್ಲಿ ಮಹಿಳೆಯರ ಪ್ರಾಬಲ್ಯ ಕುಸಿದಂತಾಗಿದೆ.

ಇದನ್ನೂ ಓದಿ : ಐಸಿಐಸಿಐ ಸಿಇಒ ಚಂದಾ, ಆಕ್ಸಿಸ್ ಎಂಡಿ ಶಿಖಾ ವಿಚಾರಣೆಗೆ ಮುಂದಾದ ಎಸ್ಎಫ್ಐಒ

ಆದರೆ, ಇಲ್ಲಿಗೆ ಮಹಿಳಾ ಪ್ರಾಬಲ್ಯ ಮುಗಿಯಿತು ಎಂದು ಭಾವಿಸಬೇಕಿಲ್ಲ. ಮುಂಬರುವ ದಿನಗಳಲ್ಲಿ ಮಹಿಳೆಯರು ಮತ್ತೆ ಉನ್ನತ ಹುದ್ದೆಗಳಿಗೆ ಏರಬಹುದು. ಈಗಲೂ ಅಂತಹ ಸಾಮರ್ಥ್ಯ ಇರುವ ನಾಲ್ವರು ಮಹಿಳೆಯರು ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದಾರೆ. ಮುಂದೊಂದು ದಿನ ಅವರು ಉನ್ನತ ಹುದ್ದೆಗೇರಲಿದ್ದಾರೆ.

ಶಾಂತಿ ಏಕಾಂಬರಮ್ ಅವರು ಕೋಟಕ್ ಮಹಿಂದ್ರಾ ಬ್ಯಾಂಕ್ ನ ಕನ್ಸುಮರ್ ಬ್ಯಾಂಕ್ ವಿಭಾಗದ ಅಧ್ಯಕ್ಷರಾಗಿದ್ದಾರೆ. ಮಂದೊಂದು ದಿನ ಇಡೀ ಬ್ಯಾಂಕ್ ಚುಕ್ಕಾಣಿ ಹಿಡಿಯಬಹುದು. ನೈನಾ ಲಾಪ್ ಕಿದ್ವಾಯಿ ಎಚ್ಎಸ್ಬಿಸಿ ಇಂಡಿಯಾ ಗ್ರೂಪ್ ಜನರಲ್ ಮ್ಯಾನೇಜರ್ ಮತ್ತು ಕಂಟ್ರಿ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫಿಕ್ಕಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ನೈನಾ ಮಾರ್ಗನ್ ಸ್ಟ್ಯಾನ್ಲಿ ಮತ್ತು ಸ್ಟ್ಯಾಂಡರ್ಡ್ ಅಂಡ್ ಚಾರ್ಟರ್ಡ್ ಬ್ಯಾಂಕ್ ನಲ್ಲೂ ಉನ್ನತ ಹುದ್ದೆ ನಿಭಾಯಿಸಿದ್ದವರು. ಕಲ್ಪನಾ ಮೊರ್ಪಾರಿಯಾ ಅವರು ಅಮೆರಿಕಾದ ಅತಿದೊಡ್ಡ ಬ್ಯಾಂಕ್ ಆಗಿರುವ ಜೆಪಿ ಮಾರ್ಗನ್ ನ ಭಾರತದ ಶಾಖೆಯನ್ನು ಮುನ್ನಡೆಸುತ್ತಿದ್ದಾರೆ. ಕಾಕು ನಕಾಟೆ ಅವರು ಬ್ಯಾಂಕ್ ಆಫ್ ಅಮೆರಿಕಾ ಮೆರಿಲ್ ಲಿಂಚ್ ಭಾರತದ ಶಾಖೆಯನ್ನು ಮುಖ್ಯಸ್ಥೆಯಾಗಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More