ರೈತರು ನೆಮ್ಮದಿಯಿಂದ ಇರಬೇಕಾದರೆ ಸಂಸತ್‌ನಲ್ಲಿ ಈ 7 ವಿಷಯ ಚರ್ಚೆಯಾಗಲಿ

ದೇಶದ ರೈತರು ಒಂದಲ್ಲ ಒಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕೃಷಿ ಬಿಕ್ಕಟ್ಟು ಬಿಗಡಾಯಿಸಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ವಿಶೇಷ ಅಧಿವೇಶನ ಕರೆದು ಯಾವ ವಿಷಯಗಳನ್ನು ಚರ್ಚಿಸಬಹುದೆಂಬ ಕುರಿತು ಪಿ ಸಾಯಿನಾಥ್ ‘ರೂರಲ್ ಇಂಡಿಯಾ’ ಜಾಲತಾಣಕ್ಕೆ ಬರೆದ ಲೇಖನದ ಭಾವಾನುವಾದ ಇಲ್ಲಿದೆ

ಭಾರತದ ಕೃಷಿ ಬಿಕ್ಕಟ್ಟು ಕೃಷಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಅದೀಗ ಸಮಾಜದ ಬಿಕ್ಕಟ್ಟಾಗಿದೆ. ಭೂಮಿಯ ಮೇಲಿನ ಸಣ್ಣ ಕೃಷಿಕರ ಮತ್ತು ಕೂಲಿಕಾರರ ಅತಿದೊಡ್ಡ ವರ್ಗವೊಂದು ತನ್ನ ಜೀವನಾಧಾರಗಳನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಹೋರಾಟಕ್ಕೆ ಇಳಿಯುವುದರೊಂದಿಗೆ ಪ್ರಾಯಶಃ ಇದು ನಾಗರಿಕತೆಯ ಬಿಕ್ಕಟ್ಟಾಗಿಯೂ ಪರಿವರ್ತನೆಯಾಗಿದೆ. ಕೃಷಿ ಬಿಕ್ಕಟ್ಟು ಈಗ ಕೇವಲ ಭೂಮಿ ಕಳೆದುಕೊಳ್ಳುವುದರ ಅಳೆತೆಗೋಲಷ್ಟೇ ಆಗಿ ಉಳಿದಿಲ್ಲ. ಮಾನವ ಜೀವಗಳ, ಉದ್ಯೋಗಗಳ ಅಥವಾ ಉತ್ಪಾದಕತೆಯ ನಷ್ಟದ ಮಾನದಂಡವಾಗಿಯೂ ಉಳಿದಿಲ್ಲ. ಅದೀಗ ನಮ್ಮ ಮಾನವೀಯತೆಯ ಹಾನಿಯ ಅಳತೆಗೋಲಾಗಿದೆ; ಕಿರಿದಾಗುತ್ತಿರುವ ಮನುಷ್ಯತ್ವ ಗಡಿಗಳ ಅಳತೆಗೋಲಾಗಿದೆ. ಕೆಲವು ‘ಪ್ರಮುಖ ಅರ್ಥಶಾಸ್ತ್ರಜ್ಞರು' ಬಿಕ್ಕಟ್ಟೇ ಇಲ್ಲ ಎಂದು ವಾದಿಸುತ್ತ, ನಮ್ಮ ಸುತ್ತಲೂ ತಾಂಡವಾಡುತ್ತಿರುವ ಸಂಕಷ್ಟವನ್ನು ಗೇಲಿ ಮಾಡುತ್ತಿರುವಾಗಲೇ ಕಳೆದ ೨೦ ವರ್ಷಗಳಲ್ಲಿ ೩,೦೦,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡದ್ದನ್ನು ನೋಡಿದ್ದೇವೆ; ಎಲ್ಲವನ್ನೂ ಕಳೆದುಕೊಂಡು ಬದುಕಿಗಾಗಿ ಬರಿಗೈಲಿ ಹೋರಾಡುತ್ತಿರುವ ರೈತರನ್ನು ನೋಡುತ್ತಿದ್ದೇವೆ.

ಕಳೆದ ಎರಡು ವರ್ಷಗಳಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿಯನ್ನೇ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಇನ್ನೂ ಪ್ರಕಟಿಸಿಲ್ಲ. ಅದಕ್ಕೂ ಹಿಂದಿನ ಕೆಲವು ವರ್ಷಗಳಲ್ಲಿ ಕೆಲವು ಪ್ರಮುಖ ರಾಜ್ಯಗಳು ನೀಡಿದ ಸುಳ್ಳು ಮಾಹಿತಿಯ ಕಾರಣದಿಂದಾಗಿ ಈ ಸಂಸ್ಥೆಯ ಒಟ್ಟಾರೆ ಅಂಕಿಅಂಶಗಳೇ ದೊಡ್ಡ ಪ್ರಮಾಣದಲ್ಲಿ ತಿರುಚಲ್ಪಟ್ಟಿದ್ದವು. ಉದಾಹರಣೆಗೆ, ತಮ್ಮಲ್ಲಿ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಚತ್ತೀಸ್‌ಗಢ, ಪಶ್ಚಿಮ ಬಂಗಾಳ ಮತ್ತು ಇತರ ಪ್ರಮುಖ ರಾಜ್ಯಗಳು ಹೇಳಿಕೊಂಡಿದ್ದವು. ೨೦೧೪ರಲ್ಲಿ ೧೨ ರಾಜ್ಯಗಳು ಮತ್ತು ೬ ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿ ಯಾವ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿಕೊಂಡಿದ್ದವು. ರೈತರ ಆತ್ಮಹತ್ಯೆಯ ಸಂಖ್ಯೆಯನ್ನು ಕಡಿಮೆ ತೋರಿಸುವ ಉದ್ದೇಶದಿಂದ ನಾಚಿಕೆಯಿಲ್ಲದೆ ಕುತಂತ್ರದ ವಿಧಾನಗಳನ್ನು ಬಳಸಿ ೨೦೧೪ ಮತ್ತು ೨೦೧೫ರ ಎನ್ಸಿಆರ್ಬಿ ವರದಿಯನ್ನು ಸಿದ್ಧಪಡಿಸಲಾಯಿತು. ಇಷ್ಟೆಲ್ಲ ಆದರೂ ಆ ಸಂಖ್ಯೆ ಮಾತ್ರ ಏರುತ್ತಲೇ ಇದೆ.

ಈ ನಡುವೆ, ರೈತರು ಮತ್ತು ಕೂಲಿಕಾರರ ಪ್ರತಿಭಟನೆಗಳೂ ಹೆಚ್ಚಾಗುತ್ತಿವೆ. ಮಧ್ಯಪ್ರದೇಶದಲ್ಲಿ ರೈತರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮಹಾರಾಷ್ಟ್ರದಲ್ಲಿ ಮಾಡಿದಂತೆ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ರೈತರಿಗೆ ಮೋಸ ಅಥವಾ ಅಪಹಾಸ್ಯ ಮಾಡಲಾಗಿದೆ. ನೋಟಿನ ಅಮಾನ್ಯೀಕರಣದ ಮೂಲಕ ಎಲ್ಲಾ ಕಡೆ ಅವರ ಬದುಕನ್ನೇ ಧ್ವಂಸ ಮಾಡಲಾಗಿದೆ. ನೋವು, ಆಕ್ರೋಶಗಳು ಇಡೀ ಗ್ರಾಮೀಣ ಭಾಗದಾದ್ಯಂತ ಹೆಪ್ಪುಗಟ್ಟತೊಡಗಿವೆ. ಕೇವಲ ರೈತರಲ್ಲಿ ಮಾತ್ರವಲ್ಲ, ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪವನ್ನು ಬದಲಾಯಿಸುವ ಮೂಲಕ ಅದನ್ನು ದುರ್ಬಲಗೊಳಿಸುತ್ತಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಕೂಲಿಕಾರ್ಮಿಕರಲ್ಲು ಕೂಡ. ಮೀನುಗಾರರಲ್ಲಿ, ಕಾಡುವಾಸಿ ಸಮುದಾಯಗಳಲ್ಲಿ, ಶೋಷಿತ ಅಂಗನವಾಡಿ ಕಾರ್ಮಿಕರಲ್ಲೂ ಕೂಡ. ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಖುದ್ದಾಗಿ ನಿಂತು ಸಾಯಿಸುತ್ತಿರುವುದನ್ನು ನೋಡುತ್ತಿರುವ ಬಡ ಪೋಷಕರಲ್ಲೂ ಕೂಡ. ಅಷ್ಟೇ ಅಲ್ಲ, ಸಣ್ಣ ಸರ್ಕಾರಿ ನೌಕರರಲ್ಲಿ ಹಾಗೂ ತಮ್ಮ ಕೆಲಸ ಯಾವಾಗ ಹೋಗುತ್ತೋ ಎಂಬ ಭಯದಲ್ಲಿ ಬದುಕುತ್ತಿರುವ ಸಾರಿಗೆ ಮತ್ತು ಸಾರ್ವಜನಿಕ ವಲಯದ ಕಾರ್ಮಿಕರಲ್ಲೂ ಕೂಡ ಆತಂಕ, ಸಿಟ್ಟು, ನೋವುಗಳು ಹೆಪ್ಟುಗಟ್ಟಿ ಕಟ್ಟೆಯೊಡೆಯುತ್ತಿವೆ.

ಈ ಗ್ರಾಮೀಣ ಬಿಕ್ಕಟ್ಟು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ೨೦೧೩-೧೪ ಮತ್ತು ೨೦೧೫-೧೬ರ ನಡುವೆ ದೇಶದಲ್ಲಿ ಉದ್ಯೋಗಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಿಸಿರುವುದನ್ನು ಅನೇಕ ಅಧ್ಯಯನಗಳು ತೋರಿಸಿವೆ.

ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಹಿಂದೆಂದೂ ಕೇಳಿಕಂಡರಿಯದ ಮಹಾಸಂಕಷ್ಟ-ವಲಸೆಗಳು ಪ್ರಾರಂಭವಾಗಿರುವುದನ್ನು ೨೦೧೧ರ ಜನಗಣತಿಯು ಸೂಚ್ಯವಾಗಿ ತೋರಿಸಿದೆ. ತಮ್ಮ ಜೀವನಾಧಾರಗಳು ಕಣ್ಣೆದುರೇ ನಾಶವಾಗಿದ್ದರಿಂದ ಹತ್ತಾರು ಲಕ್ಷ ಜನರು ತಮ್ಮ ತಮ್ಮ ನೆಲೆಗಳನ್ನು ತೊರೆದು ಇತರ ಹಳ್ಳಿಗಳಿಗೆ, ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ಪಟ್ಟಣಗಳಿಗೆ, ನಗರ ಪ್ರದೇಶಗಳಿಗೆ ಮತ್ತು ಮಹಾನಗರಗಳಿಗೆ ಜೀವನೋಪಾಯದ ಮಾರ್ಗಗಳನ್ನು ಹುಡುಕಿಕೊಂಡು ವಲಸೆಹೋಗಿ ಅಲ್ಲಿಯೂ ಉದ್ಯೋಗ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ೨೦೧೧ರ ಜನಗಣತಿಯ ಪ್ರಕಾರ, ೧೯೯೧ಕ್ಕೆ ಹೋಲಿಸಿದರೆ ಒಂದೂವರೆ ಕೋಟಿ ರೈತರು (ಪ್ರಮುಖ ಉಳುಮೆದಾರರು) ಕಡಿಮೆಯಾಗಿದ್ದಾರೆ. ಒಂದು ಕಾಲದಲ್ಲಿ ಆಹಾರೋತ್ಪಾದಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಅನೇಕ ರೈತರೀಗ ಉಳ್ಳವರ ಮನೆಗಳಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಬಡವರೀಗ ಗ್ರಾಮೀಣ ಮತ್ತು ನಗರ ಪ್ರದೇಶದ ಸಿರಿವಂತರ ಶೋಷಣೆಯಲ್ಲಿ ಬದುಕು ಸವೆಸುತ್ತಿದ್ದಾರೆ.

ಸಂಕಷ್ಟವನ್ನು ಕೇಳಿಸಿಕೊಳ್ಳದಂತೆ ಇರುವುದಕ್ಕೆ ಸರ್ಕಾರ ಆದಷ್ಟೂ ಪ್ರಯತ್ನ ಮಾಡುತ್ತಿದೆ. ಮಾಧ್ಯಮದ ಪರಿಸ್ಥಿತಿ ಕೂಡ ಹಾಗೇ ಇದೆ. ಮಾಧ್ಯಮಗಳು ಈ ವಿಷಯಗಳ ಆಳಕ್ಕಿಳಿಯದೇ ಮೇಲುಮೇಲಷ್ಟೇ ನೋಡುತ್ತಾ ಒಟ್ಟಾರೆ ಕೃಷಿ ಬಿಕ್ಕಟ್ಟನ್ನು ಕೇವಲ ‘ಸಾಲ ಮನ್ನಾ'ಕ್ಕೆ ಇಳಿಸಿಬಿಡುತ್ತಿವೆ. ಬೆಳೆ ಬೆಳೆಯುವುದಕ್ಕೆ ತಗುಲಿದ ವೆಚ್ಚ ಮತ್ತು ಅದರ ಅರ್ಧದಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ಕೊಡಬೇಕು ಎಂದು ರೈತರು ಬಹಳ ದಿನಗಳಿಂದ ಮಾಡುತ್ತಿದ್ದ ಒತ್ತಾಯವನ್ನು ಮಾಧ್ಯಮಗಳು ಅದನ್ನು ಇತ್ತೀಚೆಗೆಷ್ಟೆ ಗುರುತಿಸಿವೆ. ಆದರೆ, ಈ ಬೇಡಿಕೆಯನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವುದನ್ನು ಪ್ರಶ್ನಿಸುವ ದೈರ್ಯವನ್ನು ಈ ಮಾಧ್ಯಮಗಳು ತೋರುತ್ತಿಲ್ಲ. ಸ್ವಾಮಿನಾಥನ್ ಆಯೋಗ ಎಂದೇ ಪರಿಚಿತವಾಗಿರುವ ರೈತರ ಕುರಿತ ರಾಷ್ಟ್ರೀಯ ಆಯೋಗವು 'ಕನಿಷ್ಠ ಬೆಂಬಲ ಬೆಲೆ'ಯಷ್ಟೇ ಪ್ರಮುಖವಾದ ಇತರ ಅನೇಕ ಶಿಫಾರಸುಗಳನ್ನು ಮಾಡಿರುವುದರ ಬಗ್ಗೆ ಚಕಾರವೆತ್ತುವುದಿಲ್ಲ. ಈ ಆಯೋಗದ ಕೆಲವು ವರದಿಗಳಂತೂ ಸಂಸತ್ತಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಯಾವುದೇ ಚರ್ಚೆಯಿಲ್ಲದೇ ಧೂಳು ತಿನ್ನುತ್ತಿವೆ. ರೈತರ ಸಾಲಮನ್ನಾ ಬೇಡಿಕೆಯನ್ನು ಕೆಳಗಣಿಸಿ ನೋಡುವ ಇದೇ ಮಾಧ್ಯಮಗಳು ಬೃಹತ್ ಕಾರ್ಪೋರೆಟ್ ಕಂಪನಿಗಳು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಬ್ಯಾಂಕುಗಳಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಎತ್ತುವಳಿ ಮಾಡಿ ಹತ್ತಾರು ವರ್ಷಗಳಾದರೂ ಅದನ್ನು ಮರುಪಾವತಿಸಿದೇ ಕೈಚೆಲ್ಲಿ ಕುಳಿತಿಕೊಳ್ಳುವ ಮೂಲಕ ಸಾಲ ಕೊಟ್ಟ ಬ್ಯಾಂಕುಗಳನ್ನೇ ಮುಳುಗಿಸುತ್ತಿರುವುದರ ಬಗ್ಗೆ ಮಾತಾಡುವುದಿಲ್ಲ.

ಸಂಸತ್ತು ಈ ಕೃಷಿ ಬಿಕ್ಕಟ್ಟು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವುದಕ್ಕಾಗಿಯೇ ಮೂರು ವಾರಗಳ ಅಥವಾ ೨೧ ದಿನಗಳ ವಿಶೇಷ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸುವುದರ ಜೊತೆ ಜೊತೆಗೇ ವಿಶಾಲವಾದ ಪ್ರಜಾತಾಂತ್ರಿಕ ಪ್ರತಿಭಟನೆಯೊಂದನ್ನು ರೂಪಿಸುವುದಕ್ಕೆ ಕಾಲವೀಗ ಕೂಡಿಬಂದಿದೆ ಎನ್ನಿಸುತ್ತದೆ.

ಆ ಅಧಿವೇಶನ ಯಾವ ತತ್ವಗಳ ಮೇಲೆ ಆಧಾರಪಟ್ಟಿರಬೇಕು? ಭಾರತದ ಸಂವಿಧಾನದ ಮೇಲೆ. ಅದರಲ್ಲೂ ವಿಶೇಷವಾಗಿ ರಾಜ್ಯ ನೀತಿ ನಿರ್ದೇಶಕ ತತ್ವಗಳ ಮೇಲೆ. ಸಂವಿಧಾನದ ಈ ಅಧ್ಯಾಯ, "ಆದಾಯ ಅಸಮಾನತೆಗಳನ್ನು ಆದಷ್ಟು ಕಡಿಮೆ ಮಾಡಬೇಕು," ಹಾಗೂ "ಅಂತಸ್ತು, ಸೌಕರ್ಯ, ಅವಕಾಶಗಳಲ್ಲಿರುವ ಅಸಮಾನತೆಗಳನ್ನು ಹೋಗಲಾಡಿಸಬೇಕು," ಎಂದು ಒತ್ತಿ ಹೇಳುತ್ತದೆ. ಈ ತತ್ವಗಳು 'ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಗಳು ರಾಷ್ಟ್ರೀಯ ಬದುಕಿನ ಎಲ್ಲಾ ಸಂಸ್ಥೆಗಳನ್ನು ತುಂಬಿ ವ್ಯಾಪಿಸುವಂತಹ ಸಾಮಾಜಿಕ ವ್ಯವಸ್ಥೆ’ಯನ್ನು ರೂಪಿಸುವುದಕ್ಕೆ ಅಪೇಕ್ಷಿಸುತ್ತವೆ.

ಉದ್ಯೋಗದ ಹಕ್ಕು, ಶಿಕ್ಷಣದ ಹಕ್ಕು, ಸಾಮಾಜಿಕ ಭದ್ರತೆಯ ಹಕ್ಕುಗಳನ್ನು ಎತ್ತಿಹಿಡಿಯುವುದು; ಪೋಷಕಾಂಶ ಮತ್ತು ಸಾರ್ವಜನಿಕ ಆರೋಗ್ಯದ ಮಟ್ಟವನ್ನು ಹೆಚ್ಚಿಸುವುದು; ಉತ್ತಮ ಜೀವನಮಟ್ಟಕ್ಕಾಗಿನ ಹಕ್ಕನ್ನು ಪುರಸ್ಕರಿಸುವುದು; ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು; ಕಾರ್ಯಸ್ಥಳಗಳಲ್ಲಿ ನ್ಯಾಯಯುತ ಮತ್ತು ಮಾನವೀಯ ವಾತಾವರಣವಿರುವಂತೆ ನೋಡಿಕೊಳ್ಳುವುದು - ಇವು ಪ್ರಧಾನ ತತ್ವಗಳಲ್ಲಿರುವ ಕೆಲವು ಅಂಶಗಳು. ಈ ನಿರ್ದೇಶಕ ತತ್ವಗಳು ಮೂಲಭೂತ ಹಕ್ಕುಗಳಷ್ಟೇ ಮುಖ್ಯವಾಗಿವೆ ಎಂದು ಸುಪ್ರೀಂ ಕೋರ್ಟು ಹಲವಾರು ಬಾರಿ ಪುನರುಚ್ಛರಿಸಿದೆ.

ಈ ವಿಶೇಷ ಅಧಿವೇಶನದ ಚರ್ಚಾವಿಷಯಗಳು ಏನಾಗಿರಬೇಕು? ಇಲ್ಲಿ ಕೆಲವನ್ನು ನೀಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅವುಗಳನ್ನು ತಿದ್ದುಪಡಿ ಮಾಡಬಹುದು ಅಥವಾ ಅವುಗಳಿಗೆ ಹೆಚ್ಚುವರಿಯಾಗಿ ಸೇರಿಸಬಹುದು.

ಇದನ್ನೂ ಓದಿ : ರೈತ ಸಾಗರದೆದುರು ಮಂಡಿಯೂರಿದ ಫಡ್ನವಿಸ್ ನೇತೃತ್ವದ ಮಹಾ ಬಿಜೆಪಿ ಸರ್ಕಾರ

ಮೂರು ದಿನ: ಸ್ವಾಮಿನಾಥನ್ ವರದಿ | ಈ ಆಯೋಗವು ಕೇವಲ ಕನಿಷ್ಠ ಬೆಂಬಲ ಬೆಲೆ ಮಾತ್ರವಲ್ಲದೇ ಅನೇಕ ಮಹತ್ವಪೂರ್ಣ ವಿಷಯಗಳ ಬಗ್ಗೆ ೨೦೦೪ರ ಡಿಸೆಂಬರ್ ಮತ್ತು ೨೦೦೬ರ ಅಕ್ಟೋಬರ್ ನಡುವೆ ಐದು ವರದಿಗಳನ್ನು ಸಲ್ಲಿಸಿದೆ. ಈ ವರದಿಯಗಳಲ್ಲಿನ ಕೆಲವು ಮುಖ್ಯ ವಿಷಯಗಳನ್ನು ಇಲ್ಲಿ ನಮೂದಿಸುವುದಾದರೆ: ಉತ್ಪಾದಕತೆ, ಲಾಭದಾಯಕತೆ, ಊರ್ಜಿತತೆ, ತಂತ್ರಜ್ಞಾನ ಮತ್ತು ತಂತ್ರಜ್ಞಾನ-ಆಯಾಸ, ಒಣಭೂಮಿ ಬೇಸಾಯ, ಬೆಲೆಯಾಘಾತ ಮತ್ತು ಸ್ಥೀರೀಕರಣ ಮುಂತಾದವುಗಳು. ಕೃಷಿ ಸಂಶೋಧನೆ ಮತ್ತ ತಂತ್ರಜ್ಞಾನದ ಖಾಸಗೀಕರಣವನ್ನು ತಡೆಯುವ ಹಾಗೂ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಮಾಡುವ ಅಗತ್ಯವೂ ನಮ್ಮ ಮುಂದಿದೆ.

ಮೂರು ದಿನ: ಜನರ ಅನುಭವಗಳು | ಈ ಬಿಕ್ಕಟ್ಟಿನ ಬಲಿಪಶುಗಳು ಸಂಸತ್ ಸದನದ ಸೆಂಟ್ರಲ್ ಹಾಲ್ನಲ್ಲಿ ನಿಂತು ತಾವು ಅನುಭವಿಸುತ್ತಿರುವ ಬಿಕ್ಕಟ್ಟು ಏನು, ಅದರಿಂದ ತಮಗೆ ಏನೆಲ್ಲಾ ಆಗಿದೆ ಎನ್ನುವುದನ್ನೂ ಒಳಗೊಂಡಂತೆ ತಮ್ಮ ಸಮಸ್ಯೆಗಳನ್ನೆಲ್ಲಾ ದೇಶಕ್ಕೆ ಹೇಳಲಿ. ಅದು ಕೇವಲ ಕೃಷಿಯ ಬಗ್ಗೆ ಮಾತ್ರವಲ್ಲ. ಜೊತೆಗೆ, ವೇಗವಾಗಿ ವ್ಯಾಪಿಸುತ್ತಿರುವ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಖಾಸಗೀಕರಣವು ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೇ ಇಡೀ ದೇಶದ ಬಡವರ ಬದುಕನ್ನು ಹೇಗೆ ಛಿದ್ರಗೊಳಿಸಿದೆ ಎಂಬ ಬಗ್ಗೆಯೂ ಅವರು ಮಾತಾಡಲಿ. ಗ್ರಾಮೀಣ ಕುಟುಂಬಗಳು ಸಾಲತಂದು ಮಾಡುತ್ತಿರುವ ಖರ್ಚುಗಳಲ್ಲಿ ಆರೋಗ್ಯಕ್ಕಾಗಿ ಮಾಡುವ ಖರ್ಚು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊದಲನೆಯ ಅಥವಾ ಎರಡನೇಯ ಅತಿದೊಡ್ಡ ವೆಚ್ಛವಾಗಿದೆ.

ಮೂರು ದಿನ: ಸಾಲ ಬಿಕ್ಕಟ್ಟು | ಲಂಗುಲಗಾಮಿಲ್ಲದೇ ಏರುತ್ತಿರುವ ಸಾಲದ ಹೊರೆ. ಕೋಟಿಗಟ್ಟಲೇ ರೈತರ ಬದುಕನ್ನು ಛಿದ್ರಗೊಳಿಸಿದ್ದಲ್ಲದೇ ಲೆಕ್ಕವಿಲ್ಲದಷ್ಟು ರೈತರ ಆತ್ಮಹತ್ಯೆಗೆ ಕಾರಣವಾಗಿರುವ ಅಂಶವಿದು. ಬಹಳಷ್ಟು ಸಂದರ್ಭದಲ್ಲಿ ಸಾಲದ ಹೊರೆ ಎಂದರೆ ಬಹುತೇಕ ರೈತರು ತಮ್ಮ ಬಹುತೇಕ ಭೂಮಿಯನ್ನು ಅಥವಾ ತಮ್ಮ ಎಲ್ಲಾ ಭೂಮಿಯನ್ನು ಕಳೆದಕೊಳ್ಳುವುದು ಎಂದೇ ಅರ್ಥವಾಗುತ್ತದೆ. ಸಾಂಸ್ಥಿಕ ಸಾಲ ನೀತಿಗಳು ರೈತಸ್ನೇಹಿಯಾಗಿಲ್ಲದಿದ್ದುದರಿಂದ ಹಳ್ಳಿಗಾಡಿನಲ್ಲಿ ಲೇವಾದೇವಿಗಾರ ವ್ಯವಸ್ಥೆ ಹುಟ್ಟಿಕೊಳ್ಳಲು ಕಾರಣವಾಗಿದೆ.

ಮೂರು ದಿನ: ದೇಶದ ಮಹಾ ಜಲಸಮಸ್ಯೆ | ಇದು ಬರಗಾಲಕ್ಕಿಂತ ಮಿಗಿಲಾದುದು. ಈಗಿರುವ ಸರ್ಕಾರ "ಯೋಗ್ಯ ಬೆಲೆನಿಗದಿ" ಹೆಸರಿನಲ್ಲಿ ನೀರಿನ ಖಾಸಗೀಕರಣ ಮಾಡುವುದಕ್ಕೆ ಕಟಿಬದ್ಧವಾಗಿ ನಿಂತಿರುವಂತೆ ಕಾಣುತ್ತದೆ. ಕುಡಿಯುವ ನೀರಿನ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಪ್ರತಿಷ್ಠಾಪಿಸುವ ಹಾಗೂ ಜೀವರಕ್ಷಕ ಸಂಪನ್ಮೂಲವನ್ನು ಯಾವುದೇ ಕ್ಷೇತ್ರದಲ್ಲಿ ಖಾಸಗೀಕರಣ ಮಾಡುವುದನ್ನು ನಿಷೇಧಿಸುವ ಅವಶ್ಯಕತೆ ಇದೆ. ನೀರಿನ ಮೇಲೆ ಸಾಮಾಜಿಕ ನಿಯಂತ್ರಣವಿರುವಂತೆ ಹಾಗೂ ನೀರು ಎಲ್ಲರಿಗೂ ಸರಿಸಮನಾಗಿ, ಅದರಲ್ಲೂ ವಿಶೇಷವಾಗಿ ಭೂರಹಿತರಿಗೆ ಸಿಗುವಂತೆ ನೋಡಿಕೊಳ್ಳುವುದು.

ಮೂರು ದಿನ: ಮಹಿಳಾ ರೈತರ ಹಕ್ಕುಗಳು | ಹೊಲಗದ್ದೆಗಳಲ್ಲಿ ಅತಿಹೆಚ್ಚು ಕೆಲಸ ಮಾಡುವವರ ಮಾಲಿಕತ್ವದ ಹಕ್ಕನ್ನೂ ಒಳಗೊಂಡಂತೆ ಅವರ ಎಲ್ಲಾ ಹಕ್ಕು ಹಾಗೂ ಸಮಸ್ಯೆಗಳ ಕಡೆ ಗಮನ ಕೊಡದೇ ಕೃಷಿ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ರಾಜ್ಯಸಭೆಯಲ್ಲಿ ಪ್ರೊ. ಸ್ವಾಮಿನಾಥನ್ ಅವರು ಮಹಿಳಾ ರೈತರ ಹಕ್ಕುಗಳ ಮಸೂದೆ - ೨೦೧೧ ಅನ್ನು ಮಂಡಿಸಿದ್ದರು (೨೦೧೩ರಲ್ಲಿ ರದ್ದಾಯಿತು). ಅದೇ ಈಗ ಈ ಚರ್ಚೆಯ ಆರಂಭಿಕ ಬಿಂದುವಾಗಬಹುದು.

ಮೂರು ದಿನ: ಭೂ-ಒಡೆಯರ ಮತ್ತು ಭೂರಹಿತ ಕೂಲಿಕಾರ್ಮಿಕರ ಹಕ್ಕುಗಳು | ಮಹಿಳೆ ಮತ್ತು ಪುರುಷರಿಬ್ಬರನ್ನೂ ಒಳಗೊಂಡಂತೆ ಭೂ-ಒಡೆಯರ ಮತ್ತು ಭೂರಹಿತ ಕೂಲಿಕಾರ್ಮಿಕರ ಹಕ್ಕುಗಳು. ಸಂಕಷ್ಟ ಪ್ರೇರಿತ ವಲಸೆ ಅಂಕೆಯಿಲ್ಲದಂತೆ ಏರುತ್ತಿರುವ ಈ ಸಂದರ್ಭದಲ್ಲಿ ಈ ಬಿಕ್ಕಟ್ಟು ಕೇವಲ ಕೃಷಿ ಬಿಕ್ಕಟ್ಟಾಗಿ ಮಾತ್ರ ಉಳಿದಿಲ್ಲ. ಕೃಷಿಯಲ್ಲಿ ಮಾಡಿದ ಯಾವುದೇ ಸಾರ್ವಜನಿಕ ಹೂಡಿಕೆಯು ಅವರ ಅಗತ್ಯ, ಹಕ್ಕು ಮತ್ತು ದೃಷ್ಟಿಕೋನಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಮೂರು ದಿನ: ಕೃಷಿ ಕುರಿತು ಚರ್ಚೆ | ಮುಂದಿನ ೨೦ ವರ್ಷಗಳಲ್ಲಿ ನಾವು ಯಾವ ರೀತಿಯ ಕೃಷಿಯನ್ನು ಅನುಸರಿಸಬೇಕು? ಕಾರ್ಪೊರೇಟ್ ಕಂಪನಿಗಳು ಬಯಸುವ ಕೃಷಿಯೇ? ಅಥವಾ ಕೃಷಿಯನ್ನೇ ಬದುಕಿನ ಆಧಾರವನ್ನಾಗಿಸಿಕೊಂಡಿರುವ ಸಮುದಾಯಗಳು ಮತ್ತು ಕುಟುಂಬಗಳು ಬಯಸುವ ಕೃಷಿಯೆ? ಕೃಷಿಯಲ್ಲಿ ಇನ್ನಿತರ ರೀತಿಯ ಒಡೆತನ ಮತ್ತು ನಿಯಂತ್ರಣಗಳಿದ್ದು ಅವುಗಳ ಮೇಲೂ ಗಮನ ಕೇಂದ್ರೀಕರಿಸುವ ಅವಶ್ಯಕತೆಯಿದೆ. ಉದಾರಹಣೆಗೆ ಕೇರಳದ ಕುಡುಂಬಶ್ರೀ ಚಳವಳಿಯು ಬಹಳ ಉತ್ಸಾಹದಿಂದ ನಡೆಸುತ್ತಿರುವ ಸಂಘ ಕೃಷಿ ವಿಧಾನ. ಇದರ ಜೊತೆಗೆ, ಅರ್ಧಂಬರ್ಧ ಆಗಿ ನಿಂತಿರುವ ಭೂಸುಧಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳಬೇಕು.

ಮೇಲಿನ ಎಲ್ಲ ಚರ್ಚೆಗಳು ನಿಜಾರ್ಥದಲ್ಲಿ ಅರ್ಥಪೂರ್ಣವಾಗಿರಬೇಕೆಂದರೆ -ಇದು ಬಹಳ ಮುಖ್ಯವಾದದ್ದು- ಪ್ರತಿಯೊಬ್ಬರೂ ಆದಿವಾಸಿ ಮತ್ತು ದಲಿತ ಸಮುದಾಯಗಳಿಗೆ ಸೇರಿದ ರೈತರ ಹಾಗೂ ಕೂಲಿಕಾರರ ಹಕ್ಕುಗಳ ಬಗ್ಗೆ ವಿಶೇಷ ಗಮನ ಕೊಡಬೇಕು.

ಯಾವ ರಾಜಕೀಯ ಪಕ್ಷವೂ ಇಂತಹ ಒಂದು ವಿಶೇಷ ಅಧಿವೇಶನವನ್ನು ಬಹಿರಂಗವಾಗಿ ವಿರೋಧಿಸುವುದಿಲ್ಲವಾದರೂ ಅಂತಹದ್ದೊಂದು ಅಧಿವೇಶನ ನಡೆಯುವಂತೆ ನೋಡಿಕೊಳ್ಳುವವರು ಯಾರು? ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ಜನರೆ ಅದನ್ನು ಮಾಡಬೇಕಾಗುತ್ತದೆ.

ಇದೇ ಬೇಡಿಕೆಗಳನ್ನಿಟ್ಟುಕೊಂಡು ಈ ವರ್ಷದ ಮಾರ್ಚ್‌ನಲ್ಲಿ ೪೦,೦೦೦ ರೈತರು ಮತ್ತು ಕೂಲಿಕಾರರು ನಾಸಿಕ್‌ನಿಂದ ಮುಂಬೈಗೆ ಕಾಲ್ನಡಿಗೆ ಜಾಥಾ ಮಾಡಿದರು. ಮುಂಬೈಯಲ್ಲಿನ ದುರಹಂಕಾರಿ ಸರ್ಕಾರ ಅವರನ್ನು 'ನಗರದ ನಕ್ಸಲರು' ಎಂದು ಕರೆದು, ಅವರ ಜೊತೆ ತಾನು ಮಾತುಕತೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಅವರ ಹೋರಾಟವನ್ನೇ ಕೆಳಗಣಿಸಲು ಪ್ರಯತ್ನಿಸಿತು. ಆದರೆ, ರಾಜ್ಯದ ಶಾಸನಸಭೆಯನ್ನು ಸುತ್ತುವರೆರಿಯುವುದಕ್ಕಾಗಿ ಕೆಲವೇ ಗಂಟೆಗಳಲ್ಲಿ ಮುಂಬೈಗೆ ಹರಿದುಬಂದ ಜನಸಾಗರವನ್ನು ನೋಡಿ ದಂಗಾದ ಸರ್ಕಾರ ರೈತರೆದುರು ಬಗ್ಗಲೇಬೇಕಾಯಿತು. ಈ ಗ್ರಾಮೀಣ ಬಡವರೇ ತಮ್ಮ ಸರ್ಕಾರವನ್ನು ಮಣಿಸಿದರು.

ಅತ್ಯಂತ ಶಿಸ್ತಿನಿಂದ ಕೂಡಿದ ಅವರ ಜಾಥಾ ಮುಂಬೈ ನಗರವನ್ನು ದಂಗುಬಡಿಸಿತು. ನಗರದ ಕಾರ್ಮಿಕ ವರ್ಗ ಮಾತ್ರವಲ್ಲದೆ ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಜನರೂ ಸ್ವಯಂಪ್ರೇರಿತವಾಗಿ ಈ ಬಡ ರೈತರ ನೆರವಿಗೆ ಸಹಾನುಭೂತಿಯಿಂದ ಧಾವಿಸಿದರು.

ನಾವು ಇದನ್ನು ಇಪ್ಪತ್ತೈದು ಪಟ್ಟು ಹೆಚ್ಚು ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಮಾಡಬೇಕಿದೆ. ದೆಹಲಿಯೆಡೆಗೆ ದಮನಿತರ ನಡಿಗೆ. ಇದು ಕೇವಲ ರೈತರು ಮತ್ತು ಕೂಲಿಕಾರರ ಜಾಥವಾಗದೇ ಈ ಬಿಕ್ಕಟ್ಟಿನಿಂದ ಬದುಕನ್ನು ಕಳೆದುಕೊಂಡಿರುವ ಎಲ್ಲರ ಜಾಥವಾಗಬೇಕು. ಈ ಬಿಕ್ಕಟ್ಟಿನಿಂದ ನೇರವಾಗಿ ಬಾಧೆಗೊಳಗಾಗದಿದ್ದರೂ ಈ ಜನರ ಸಂಕಷ್ಟವನ್ನು ನೋಡಿ ಮನಸ್ಸು ಮಿಡಿಯುವ ಪ್ರತಿಯೊಬ್ಬರ ಜಾಥವಾಗಬೇಕು. ನ್ಯಾಯ ಮತ್ತು ಪ್ರಜಾತಂತ್ರಕ್ಕಾಗಿ ಹೋರಾಡುವವರ ಜಾಥವಾಗಬೇಕು. ದೇಶದ ಮೂಲೆಮೂಲೆಗಳಿಂದ ಪ್ರಾರಂಭವಾಗಿ ರಾಷ್ಟ್ರದ ರಾಜಧಾನಿಯಲ್ಲಿ ಕೂಡುವ ಜಾಥವಾಗಬೇಕು. ಇದು ಕೆಂಪು ಕೋಟೆಯ ಮೆರವಣಿಗೆಯಲ್ಲ; ಜಂತರ್ ಮಂತರ್ ಪ್ರತಿಭಟನೆಯಲ್ಲ; ಈ ಜನಸಾಗರ ಸಂಸತ್ತನ್ನು ಸುತ್ತುವರೆದು ಸಂಸತ್ತು ತಮ್ಮ ಸಮಸ್ಯೆಗಳನ್ನು ಕೇಳಿಸಿಕೊಳ್ಳುವಂತೆ, ತಮ್ಮ ಸಲಹೆಗಳನ್ನು ಪರಿಗಣಿಸುವಂತೆ ಹಾಗೂ ಅದಕ್ಕನುಗುಣವಾಗಿ ಕೆಲಸ ಮಾಡುವಂತೆ ಮಾಡಬೇಕು. ಹೌದು, ಅವರು ದೆಹಲಿಯನ್ನು ಆಕ್ರಮಿಸಬೇಕು.

ಇದು ಆಗಬೇಕೆಂದರೆ ಹಲವು ತಿಂಗಳುಗಳ ಪೂರ್ವತಯಾರಿ ನಡೆಯಬೇಕಾಗುತ್ತದೆ; ಅದನ್ನು ನಿರ್ವಹಿಸುವುದಕ್ಕೆ ದೊಡ್ಡ ಮಟ್ಟದಲ್ಲಿ ವ್ಯವಸ್ಥೆ ಮಾಡಬೇಕಾಗುತ್ತದೆ. ಸಾಧ್ಯವಾದಷ್ಟು ಎಲ್ಲಾ ರೈತ, ಕೂಲಿಕಾರ ಮತ್ತು ಇತರ ಸಂಘಟನೆಗಳನ್ನು ಒಗ್ಗೂಡಿಸಿ ವಿಶಾಲ ಐಕ್ಯಹೋರಾಟ ವೇದಿಕೆಯೊಂದನ್ನು ರೂಪಿಸಿ ಅದೇ ಇದನ್ನೆಲ್ಲಾ ಮಾಡಬೇಕಾಗುತ್ತದೆ. ಇದಕ್ಕೆ ಆಳುವವರಿಂದ ಮತ್ತು ಅವರ ಮಾಧ್ಯಮಗಳಿಂದ ಬಹಳ ತೊಂದರೆಗಳು ಎದುರಾಗುತ್ತವೆ; ಪ್ರತೀ ಹಂತದಲ್ಲೂ ಈ ಪ್ರಯತ್ನವನ್ನು ವಿಫಲಗೊಳಿಸುವುದಕ್ಕೆ ಪ್ರಯತ್ನಗಳು ನಡೆಯುತ್ತವೆ.

ಆದರೂ ಮಾಡಬಹುದು. ಬಡವರನ್ನು ಕೆಳ-ಅಂದಾಜು ಮಾಡಬೇಡಿ. ಪ್ರಜಾತಂತ್ರವನ್ನು ಜೀವಂತವಾಗಿಟ್ಟಿದ್ದು ಈ ಬಡಜನರೇ ಹೊರತು ಪ್ರಜಾತಂತ್ರದ ಬಗ್ಗೆ ಬಡಬಡಾಯಿಸುವ ವರ್ಗವಲ್ಲ. ಹತ್ತು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಒಂದೆಡೆ ಸೇರಿ ತಮ್ಮಿಂದ ಆಯ್ಕೆಯಾದ ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಪ್ರಜಾತಾಂತ್ರಿಕ ಪ್ರತಿರೋಧದ ಅತ್ಯುನ್ನತ ರೂಪವಾಗಿರುತ್ತದೆ. ಭಗತ್ ಸಿಂಗ್ ಬದುಕಿದ್ದರೆ ಪ್ರಾಯಶಃ ಅವರ ಬಗ್ಗೆ ಹೀಗೆ ಹೇಳುತ್ತಿದ್ದರೋ ಏನೋ: ಅವರು ಕಿವುಡರೂ ಕೇಳಿಸಿಕೊಳ್ಳುವಂತೆ, ಕುರುಡರೂ ನೋಡುವಂತೆ ಮತ್ತು ಮೂಗರೂ ಮಾತಾಡುವಂತೆ ಮಾಡಬಲ್ಲರು.

ಲೇಖಕರು ಖ್ಯಾತ ಪತ್ರಕರ್ತರು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More